ಬಾಳಿದು ಋಣಾನುಬಂಧಗಳ ಸಂತೆ…

ಬಾಳಿದು ಋಣಾನುಬಂಧಗಳ ಸಂತೆ…

ಎನಿತು ಜನ್ಮದಲಿ ಎನಿತು ಜೀವರಿಗೆ,
ಎನಿತು ನಾವು ಋಣಿಯೊ
ತಿಳಿದು ನೋಡಿದರೆ ಬಾಳು ಎಂಬುದಿದು,
ಋಣದ ರತ್ನಗಣಿಯೊ ||

ಎನ್ನುವ ಜಿ. ಎಸ್. ಶಿವರುದ್ರಪ್ಪ ಅವರ ಮಾತಿನಂತೆ ಈ ಬದುಕು ಅನೇಕ ಋಣಾನುಬಂಧಗಳ ಸಂತೆ. ಹುಟ್ಟಿನಿಂದ ಸಾಯುವವರೆಗೆ ಈ ಬದುಕಿನ ಹಾದಿಯಲ್ಲಿ ಸಾಕಷ್ಟು ಜನ ಹಾಯ್ದು ಹೋಗುತ್ತಾರೆ. ಕೆಲವರು ಪರಿಚಿತರಾದರೆ, ಮತ್ತೆ ಕೆಲವರು ಅಪರಿಚಿತರಾಗೆ ಉಳಿಯುತ್ತಾರೆ. ಋಣ ಎನ್ನುವುದು ಕೆಲವೊಮ್ಮೆ ಹೊರೆಯು ಹೌದು, ಕೆಲವೊಮ್ಮೆ ವರವೂ ಹೌದು. ಯಾರದೋ ಏಕಾಂಗಿತನಕೆ ಜೊತೆಯಾಗುವ ಬೀದಿ ದೀಪ, ಕಣ್ಣೀರ ಬಿಸುಪಿಗೆ ಸಾಂತ್ವನ ನೀಡುವ ತಂಗಾಳಿ, ಬೆಳಿಗ್ಗೆಯೇ ಪೇಪರ್ ಹಾಕುವ ಹುಡುಗ ಬೀರಿ ಹೋಗುವ ಸ್ವಚ್ಛ ನಗು, ಬಸ್ಸಿನಲ್ಲಿ ಸೀಟು ಬಿಟ್ಟು ಕೊಟ್ಟಾಗ ಹಿರಿಯರೊಬ್ಬರು ಹರಸಿ ನಮಗೊಂದು ಸಾರ್ಥಕತೆಯ ಭಾವ ಕೊಟ್ಟು ಹೋಗುವಾಗ ಮೂಡುವ ಮಂದಹಾಸ… ಹೀಗೆ ಕೆಲವೊಂದು ಅರಿವಿಲ್ಲದೆಯೇ ಬೆಸೆಯುವ ಚೆಂದದ ಬಂಧಗಳು.

ಇನ್ನೂ ಒಂದೇ ಮನೆಯೊಳಗಿದ್ದು ಕೂಡ ಎಂದಿಗೂ ಮನದ ಬಾಗಿಲು ತಟ್ಟದಂತ ಬಂಧಗಳೂ ಇರುತ್ತವೆ. ಅವಕ್ಕೆ ಬಂಧ ಎನ್ನುವುದಕ್ಕಿಂತ ಬಂಧನ ಎಂದರೆ ಸೂಕ್ತವೇನೋ..! ಮನೆಯ ಗೋಡೆಗಿಂತ ಮನಗಳ ನಡುವಿನ ಗೋಡೆಯೇ ಹೆಚ್ಚು ಗಟ್ಟಿ..! ಎಷ್ಟೇ ಕಾಳಜಿ, ಪ್ರೀತಿ, ಅನುಬಂಧದ ಮಳೆ ಸುರಿಸಿದರು ಅದು ಸುಲಭವಾಗಿ ಬೀಳುವುದಿಲ್ಲ. ಕಾರಣವೇನಿರಬಹುದು !?.

ನನಗಿಷ್ಟವಾಗದ ಕೆಲಸ ಅವರು ಮಾಡಲು ಹೇಳಿದಾಗ, ನನಗೆ ಹಿಡಿಸದವರೊಂದಿಗೆ ಅವರು ಮಾತಿಗಿಳಿದಾಗ, ನನಗಿಷ್ಟವಾಗುವ ಸಂಗತಿಗಳನ್ನು ಅವರು ತಿರಸ್ಕರಿಸುವಾಗ..! ಹೀಗೆ ಹುಡುಕಿದರೆ ಮನಸ್ತಾಪ, ಬೇಸರಗಳಿಗೆ ಅನೇಕ ಕಾರಣಗಳು ಹುಟ್ಟಿಕೊಳ್ಳುತ್ತವೆ. ಆದರೆ ಈ ಸಣ್ಣ ಸಣ್ಣ ಬಿರುಕುಗಳೇ ಒಂದು ದೊಡ್ಡ ಬಂಧವನ್ನು ಮುಳುಗಿಸಿಬಿಡುವುದಂತೂ ಸತ್ಯ. ಯಾವುದು ಅಥವಾ ಯಾರು ಶಾಶ್ವತವಾಗಿ ಉಳಿಯುತ್ತಾರೆ ಇಲ್ಲಿ..? ಬಿಟ್ಟು ಹೋಗಲು, ಅಥವಾ ಮುಖ ಮುರಿದುಕೊಂಡು ದೂರಾಗಲು ಹೆಚ್ಚು ಸಮಯ ಬೇಕಾಗಿಲ್ಲ ನಿಜ. ಆದರೆ ಅದೇ ಬಂಧಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು, ಧೀರ್ಘಕಾಲದ ಒಂದಷ್ಟು ಡೆಡಿಕೇಶನ್ ಬೇಕೇ ಬೇಕು. ಇಲ್ಲವೆಂದರೆ ಕೊನೆಗೊಮ್ಮೆ ಹಿಂತಿರುಗಿ ನಮ್ಮ ಬದುಕನ್ನು ನೋಡಿದಾಗ ಪಶ್ಚತ್ತಾಪಗಳನ್ನು ಬಿಟ್ಟು ಬೇರೇನೂ ಉಳಿದಿರುವುದಿಲ್ಲ..!

ಪ್ರತಿಯೊಬ್ಬರಿಗು ವೈಯಕ್ತಿಕ ಸ್ಪೇಸ್ ಅನ್ನುವುದು ಇರುತ್ತದೆ. ಸರ್ವಾಧಿಕಾರಿ ಧೋರಣೆ ಬಿಟ್ಟು, ಅವರವರ ಕಂಫರ್ಟ್ ಝೋನ್ ಅವರಿಗಿರಲಿ. ನಮ್ಮ ಮಿತಿಯಲ್ಲಿ ನಾವಿದ್ದು ಬಂಧವನ್ನು ಸುಂದರಗೊಳಿಸಿಕೊಳ್ಳೋಣ ಎಂಬ ಮನಸ್ಥಿತಿ ಬಂದರೆ ಎಲ್ಲವೂ ಚೆನ್ನ ಅನಿಸುತ್ತದೆ.

ಏನೇನೂ ಇಲ್ಲದವ ಕಲ್ಲು ಮುಳ್ಳಿನ ಹಾದಿಯಲ್ಲಿ, ಮತ್ತೊಬ್ಬ ಡಾಂಬರು ಹಾಕಿದ ರಸ್ತೆಯಲ್ಲಿ, ಸ್ವಲ್ಪ ಉಳ್ಳವನಾದರೆ ನೈಸ್ ರೋಡಿನಲ್ಲಿಯೋ ಓಡಾಡಬಹುದು.. ಆದರೆ ಆಯಸ್ಸು ತೀರಿದಮೇಲೆ ಎಲ್ಲರೂ ಹಿಡಿಯುವುದು ಮಸಣದ ಹಾದಿಯನ್ನೇ ಅಥವಾ ಸೇರುವುದು ಮಣ್ಣನ್ನೇ ಅಲ್ಲವೇ !? ಇದು ಅರಿವಿದ್ದಮೇಲೂ ಯಾಕೆ ನಾವು ಅತೀ ಸರಳ ವಿಷಯಕ್ಕೂ ಬದುಕನ್ನು ಜಟಿಲಗೊಳಿಸಿಕೊಳ್ಳುತ್ತೇವೆ ಎನ್ನುವುದೇ ಅರಿವಾಗದ ಸಂಗತಿಯಾಗಿದೆ.

ಎಲ್ಲರೂ ಒಂದು ದಿನ, ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗುವೆವು ಅಂದಮೇಲೆ, ಸಾಗುವ ಈ ಹಾದಿಯಲ್ಲಿ ಸಿಗುವ ಸಣ್ಣ ಸಣ್ಣ ಖುಷಿಗಳನ್ನು ಆಸ್ವಾದಿಸುತ್ತ, ಸಿಕ್ಕವರಿಗೊಂದು ಹೂ ಅರಳಿದಂತೆ ಮುಗುಳುನಗೆ ಅರಳಿಸಿ, ಚೆಂದದ ಬಂಧದ ಸೌರಭ ಸೂಸಿ ಹೋಗುವಾಗ ಬದುಕು ಹೆಚ್ಚು ಆಪ್ತವಾಗುವುದರಲ್ಲಿ ಸಂದೇಹವಿಲ್ಲ. ರಾಗದ್ವೇಷಗಳಿಲ್ಲದ ಬದುಕಿಗೊಂದು ಧನ್ಯವಾದ ಹೇಳಿ ಋಣಮುಕ್ತರಾಗಿಯೇ ಹೊರಡೋಣ ಎಲ್ಲರೂ.. ಅಲ್ಲವೇ..?

ಪಲ್ಲವಿ ಚೆನ್ನಬಸಪ್ಪ

Related post