ಪ್ರತ್ಯಗಾತ್ಮ ಚಿಂತನ (ನೇನಂಶಿ) – 8

ಉದ್ಯೋಗಶೀಲನ ಪುರುಷಸಿಂಹನ ಬಳಿಗೆ
ಆದ್ಯಾದಿ ಲಕ್ಷ್ಮೀಯರು ತಾವಾಗಿ ಬಹರು,
ಸಾಧ್ಯವಾಗಿಸು ಸಿದ್ಧಿ ಪುರುಷ ಪ್ರಯತ್ನದಲಿ
ಸದ್ಯಫಲವದರಿಂದೆ- || ಪ್ರತ್ಯಗಾತ್ಮ ||

ಭೂಪತಿ ಭಗೀರಥನು ಘೋರ ತಪವಾಚರಿಸಿ
ಆ ಪಿತರ ಸದ್ಗತಿಗೆ ಗಂಗೆಯನು ತಂದ,
ಪಾಪ ! ಪಿತೃಋಣ ನೀಗಿ ಲೋಕ ಹಿತವನು ಗೈದ
ಭೂಪ ಪ್ರಜೆಗುಪಕಾರಿ! – || ಪ್ರತ್ಯಗಾತ್ಮ ||

ಅತ್ಯುಗ್ರ ಸಂಶಯವು ನಿನ್ನ ತಲೆ ಕೆಡಿಸಿರಲು
ಪ್ರತ್ಯುಪಾಯವ ಹುಡುಕು; ಒಡನೆ ದುಡುಕದಿರು
ಪ್ರತ್ಯಕ್ಷವಾದರೂ ನೆರೆ ವಿಚಾರಿಸಿದಾಗ
ಸತ್ಯ ಸಾಕ್ಷಾತ್ಕಾರ- || ಪ್ರತ್ಯಗಾತ್ಮ ||

ರಮಣೀಯಕ ವಸ್ತು ಎಲ್ಲಿದ್ದರೇನಂತೆ
ಭೂಮಿಯೊಳೊ ವ್ಯೋಮದೊಳೊ ಫಲ ಪುಷ್ಪದೊಳಗೊ
ಭೂಮಾನುಭೂತಿಯಿಂ ಸೃಷ್ಠಿ ಸೊಬಗನು ಕಾಣು
ಸಾಮಾನ್ಯವೆನ್ನದಿರು- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ’

ವಾಚನ – ಗೌರಿ ದತ್ತ ಏನ್ ಜಿ

Related post

1 Comment

  • ಕವಿಯ ಸಹೃದಯಕ್ಕೆ ಸಂದ ಗೌರವ ಈ ಚಿಂತನ ಮಂಥನ

    ಉತ್ತಮವಾಗಿ ಮೂಡಿದೆ

    ಅಭಿನಂದನೆಗಳು ಗೌರಿ

    VGR

Leave a Reply

Your email address will not be published. Required fields are marked *