ಬಯಲು ಆಲಯದ ಶ್ರೀ ಸೌತಡ್ಕ ಮಹಾಗಣಪತಿ
ಸೌತಡ್ಕ ಏನಪ್ಪಾ ಈ ಹೆಸರು ಒಂಥರಾ ವಿಚಿತ್ರವಾಗಿದೆಯಲ್ಲಾ ಎಂದು ಎಣಿಸಬಹುದಾದರೂ ಹೆಸರೇ ಹೇಳುವಂತೆ ಇದು ಸೌತೆಯ ಬಯಲು (ಅಡ್ಕ) ಎಂದು ಹೇಳಬಹುದು. ಸಾಮಾನ್ಯವಾಗಿ ಎಲ್ಲಾ ದೇವರುಗಳು ದೇವಸ್ಥಾನದ ಒಳಗಡೆ ಪ್ರತಿಷ್ಠಾಪನೆಗೊಂಡು ಪೂಜಿಸಲ್ಪಟ್ಟರೆ ಇಲ್ಲಿನ ಗಣಪ ಬಯಲು ಆಲಯದಲ್ಲಿ ಪ್ರತಿಷ್ಠಾಪನೆ ಕೊಂಡಿದ್ದಾನೆ.
ಹೌದು ಈ ವಿಶಿಷ್ಟವಾದ ಬಯಲು ಆಲಯದ ಗಣಪತಿ ಇರುವುದು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿಯ ಸೌತಡ್ಕ ಎಂಬ ಗ್ರಾಮದಲ್ಲಿ. ಇದೊಂದು ಹಿಂದುಗಳ ಪವಿತ್ರ ಕ್ಷೇತ್ರವಾಗಿದ್ದು ಕೊಕ್ಕಡದಿಂದ ಸುಮಾರು ಮೂರು ಕಿ.ಮೀ ದೂರದಲ್ಲಿ ಈ ದೇವಸ್ಥಾನವು ನೆಲೆಗೊಂಡಿದೆ. ಇಲ್ಲಿ ಪೂಜಿಸಲ್ಪಡುವ ದೇವರು ಶ್ರೀ ಮಹಾಗಣಪತಿಯಾಗಿದ್ದು, ಗಣಪ ಗರ್ಭಗುಡಿಯೊಳಗಿರುವ ಬದಲು ಬಯಲು ಆಲಯದಲ್ಲಿ ನೆಲೆ ನಿಂತಿರುವುದು ಇಲ್ಲಿನ ವಿಶೇಷತೆಗಳಲ್ಲೊಂದು.
ಈ ದೇವಸ್ಥಾನದ ಸುತ್ತಲೂ ದಟ್ಟ ಅರಣ್ಯ ತುಂಬಿದ್ದು ಹಚ್ಚ ಹಸುರಿನ ಮಧ್ಯೆ ಈ ಮಹಾಗಣಪತಿಯನ್ನು ನೋಡುವುದೇ ಭಕ್ತರಿಗೆ ವಿಭಿನ್ನವಾದ ಅನುಭವವನ್ನು ನೀಡುತ್ತದೆ. ಈ ದೇವಸ್ಥಾನದ ಗಣಪತಿಯ ಸುತ್ತಲೂ ಭಕ್ತರು ನಿಂತು ದೇವರಿಗೆ ಅರ್ಚನೆಯನ್ನು ಹಾಗೂ ದೇವರಿಗೆ ಪ್ರಾರ್ಥನೆಯನ್ನು ನೆರವೇರಿಸಬಹುದಾಗಿದ್ದು, ಈ ದೇವಸ್ಥಾನವು ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಮಾರು 35 ಕಿ.ಮೀ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸುಮಾರು 16 ಕಿ.ಮೀ ದೂರದಲ್ಲಿದೆ. ಈ ದೇವಾಲಯದ ಪ್ರಾಂಗಣದ ಒಳಗೆ ಕಾಲಿಟ್ಟೊಡನೆ ಎಲ್ಲೆಡೆ ರಾಶಿ ರಾಶಿ ಕಂಚಿನ ಗಂಟೆಗಳನ್ನು ನೇತು ಹಾಕಿರುವುದನ್ನು ಕಾಣಬಹುದಾಗಿದ್ದು, ಈ ಗಂಟೆಗಳನ್ನು ಭಕ್ತರು ಹರಕೆ ರೂಪದಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಸಿದ ನಂತರ ಖುಷಿಯಿಂದ ಸಮರ್ಪಿಸಿದ್ದಾಗಿರುತ್ತದೆ. ಈ ದೇವಾಲಯವು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿದ್ದು, ಈ ದೇವಸ್ಥಾನದ ಸುತ್ತಲೂ ಮಂಗಗಳು ಅಧಿಕ ಸಂಖ್ಯೆಯಲ್ಲಿ ಕಾಣಸಿಗುತ್ತವೆ.
ಈ ದೇವಾಲಯದಲ್ಲಿ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಮಹಾಪೂಜೆಯನ್ನು ಹಾಗೂ ಮಹಾ ರಂಗಪೂಜೆಯನ್ನು ನೆರವೇರಿಸಲಾಗುವುದರೊಂದಿಗೆ ಇಲ್ಲಿ ಪ್ರತಿನಿತ್ಯ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆಯ ಕೈಂಕರ್ಯವನ್ನು ನೆರವೇರಿಸಲಾಗುತ್ತದೆ. ಈ ದೇವಾಲಯವು ಪಟ್ರಮೆ ಗ್ರಾಮದಿಂದ 6 ಕಿ.ಮೀ ದೂರದಲ್ಲಿದ್ದು, ನೇತ್ರಾವತಿ ನದಿಯ ತಟಕ್ಕೆ ಸಮೀಪದಲ್ಲೇ ಇದೆ ಎನ್ನಬಹುದು. ಈ ದೇವಸ್ಥಾನ ಬೆಳ್ತಂಗಡಿ ತಾಲೂಕಿನ ಪಾಲಿಗೆ ಅತ್ಯಂತ ವಿಶಿಷ್ಟವಾದ ದೇವಸ್ಥಾನವೆಂದೇ ಹೆಸರ ಹೆಸರುವಾಸಿಯಾಗಿದ್ದು, ಇಲ್ಲಿಗೆ ಭೇಟಿ ನೀಡಿದರೆ ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಮಿಂದೆದ್ದಂತೆ ಭಾಸವಾಗುತ್ತದೆ.
ಈ ದೇವಸ್ಥಾನವನ್ನು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರವೆಂದು ಕರೆಯಲಾಗುತ್ತಿದ್ದು, ಈ ದೇವಾಲಯವು ಧರ್ಮಸ್ಥಳ-ಸುಬ್ರಹ್ಮಣ್ಯ-ಬೆಂಗಳೂರು ರಸ್ತೆಯಲ್ಲಿ ಕೊಕ್ಕಡ ಎಂಬ ಪಟ್ಟಣದ ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಭಕ್ತಾದಿಗಳು ಅತ್ಯಂತ ಸುಲಭವಾಗಿ ಈ ದೇವಸ್ಥಾನವನ್ನು ತಲುಪಬಹುದಾಗಿದೆ. ಕೊಕ್ಕಡ ಪಟ್ಟಣಕ್ಕೆ ತಲುಪುತ್ತಿದ್ದಂತೆ ರಸ್ತೆಯ ಬಲ ಭಾಗದಲ್ಲಿ ದೊಡ್ಡದೊಂದು ಪ್ರವೇಶದ್ವಾರವಿದ್ದು, ಭಕ್ತಾದಿಗಳನ್ನು ಸೌತಡ್ಕ ಮಹಾಗಣಪತಿ ಕ್ಷೇತ್ರ ಕೈ ಬೀಸಿ ಕರೆಯುತ್ತದೆ. ಈ ದೇವಸ್ಥಾನ ಪ್ರಕೃತಿಯ ಮಡಿಲಲ್ಲಿ ಇರುವುದರಿಂದ ಇಲ್ಲಿ ಮಂಗಗಳಿಗೆ ಮತ್ತು ಇಲ್ಲಿರುವ ಗೋ ಶಾಲೆಯ ಗೋವುಗಳಿಗೆ ಆಹಾರವನ್ನು ನೀಡುತ್ತಾ ತಮ್ಮ ಮನಸ್ಸಿನ ಬೇಸರವನ್ನು ಮರೆತು ಹಾಯಾಗಿ ಸಮಯವನ್ನು ಕಳೆಯಬಹುದು. ದೇವಸ್ಥಾನದ ಪಕ್ಕದಲ್ಲಿ ಗೋ ಶಾಲೆಯಿದ್ದು, ಪೂಜೆಗೆ ಅವಶ್ಯಕವಿರುವ ವಿವಿಧ ರೀತಿಯ ಪರಿಕರಗಳನ್ನು ಇಲ್ಲಿನ ವಿವಿಧ ಅಂಗಡಿಗಳಲ್ಲಿ ಖರೀದಿಸಬಹುದಾಗಿದೆ. ಈ ಆಲಯದಲ್ಲಿ ಪೂಜೆಯನ್ನು ಹಾಗೂ ಸೇವೆಯನ್ನು ಮಾಡಿಸಬೇಕಾದರೆ ದೇವಾಲಯದ ಪಕ್ಕದಲ್ಲಿರುವ ಸೇವಾರ್ಥ ರಶೀದಿ ಕೌಂಟರ್ ಮೂಲಕ ವಿವಿಧ ಸೇವಾ ರಶೀದಿಯನ್ನು ಪಡೆದುಕೊಂಡು ತಮ್ಮ ಸೇವೆಯನ್ನು ಯಾವ ಸಮಯದಲ್ಲಾದರೂ ನೆರವೇರಿಸಬಹುದಾಗಿದೆ.
ಇಲ್ಲಿನ ಗಣಪತಿಯ ಮೂರ್ತಿಯನ್ನು ಕರಿಯ ಕಲ್ಲಿನಿಂದ ಕೆತ್ತಲಾಗಿದ್ದು ಭಕ್ತಾದಿಗಳ ಕಣ್ಮನವನ್ನು ಸೆಳೆಯುತ್ತದೆ. ಈ ಗಣಪತಿಯ ವಿಗ್ರಹವನ್ನು ಬ್ರಹತ್ ಗಾತ್ರದ ಮರದ ಕೆಳಗಡೆ ವೈಭವಯುತವಾಗಿ ಕಾಣುವಂತೆ ಸ್ಥಾಪಿಸಲಾಗಿದ್ದು, ಈ ವಿಗ್ರಹದ ಸುತ್ತಲೂ ಬೃಹತ್ ಗಾತ್ರದ ಕಮಾನುಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಭಕ್ತಾದಿಗಳು ಹರಕೆ ರೂಪದಲ್ಲಿ ಸಲ್ಲಿಸಿದ ಕಂಚಿನ ಗಂಟೆಗಳನ್ನು ಕಟ್ಟಲಾಗಿದ್ದು, ಈ ಗಂಟೆಗಳನ್ನು ಪೂಜೆ ಸಂದರ್ಭದಲ್ಲಿ ಭಕ್ತಾದಿಗಳು ಮೊಳಗಿಸುತ್ತಾ ವಿಭಿನ್ನವಾದ ನಾದವನ್ನು ಹೊರ ಹೊಮ್ಮಿಸುತ್ತಾರೆ. ಈ ವಿಭಿನ್ನ ಗಾತ್ರದ ಗಂಟೆಗಳನ್ನು ನೋಡುತ್ತಾ ಅವುಗಳನ್ನು ಬಾರಿಸುವುದು ಮಕ್ಕಳಿಗೆ ಒಂದು ರೀತಿಯ ಹಬ್ಬವನ್ನು ತರಿಸುತ್ತದೆ. ಇಲ್ಲಿನ ಪ್ರಾದೇಶಿಕ ಭಾಷೆಯು ತುಳು ಆಗಿದ್ದು, ತುಳುವಿನಲ್ಲಿ ‘ಸೌತೆ’ ಎಂದರೆ ‘ಸೌತೆಕಾಯಿ’ ಹಾಗೂ ‘ಅಡ್ಕ’ ಎಂದರೆ ‘ಕ್ಷೇತ್ರ’ ಅಥವಾ ‘ಭೂಮಿ’ ಅಥವಾ ‘ಸ್ಥಳ’ ಎಂದರ್ಥ. ಪುರಾಣದ ಪ್ರಕಾರ ಈ ಪ್ರದೇಶದಲ್ಲಿ ಗೋವುಗಳನ್ನು ಮೇಯಿಸುತ್ತಿದ್ದ ಹುಡುಗರು ಈ ಪ್ರದೇಶದಲ್ಲಿ ಹೇರಳವಾಗಿ ಸೌತೆಯನ್ನು ಬೆಳೆಯುತ್ತಿದ್ದು ಇಲ್ಲೇ ಗಣಪತಿಯ ಕಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣಪತಿಗೆ ನಿರಂತರವಾಗಿ ಸೌತೆಕಾಯಿಯನ್ನು ನೈವೇದ್ಯವಾಗಿ ಗಣಪನಿಗೆ ಸಮರ್ಪಿಸುತ್ತಿದ್ದರು. ನಂತರದಲ್ಲಿ ಇದೇ ದೇವಸ್ಥಾನ ಸೌತಡ್ಕ ಮಹಾಗಣಪತಿ ದೇವಸ್ಥಾನವೆಂದು ಪ್ರಸಿದ್ಧಿಗೊಂಡಿತೆಂದು ಸ್ಥಳ ಪುರಾಣ ತಿಳಿಸುತ್ತದೆ.ಇನ್ನೊಂದು ಮೂಲದ ಪ್ರಕಾರ ಈ ದೇವಸ್ಥಾನವನ್ನು ಅತ್ಯಂತ ಶ್ರೀಮಂತ ಕುಟುಂಬವು ನಿರ್ವಹಿಸುತ್ತಿದ್ದು ಶತ್ರುಗಳ ನಿರಂತರ ದಾಳಿಗೆ ತುತ್ತಾಯಿತೆಂದು ಇಲ್ಲಿನ ಇತಿಹಾಸದಿಂದ ತಿಳಿದುಬರುತ್ತದೆ. ಹೀಗೆ ದಾಳಿಗೆ ಒಳಗಾದ ದೇವಸ್ಥಾನದಲ್ಲಿ ಉಳಿದ ಗಣಪತಿಯ ಮೂರ್ತಿಯನ್ನು ದನಗಾಹಿ ಯುವಕರು ತಾವು ಸೌತೆಕಾಯಿ ಬೆಳೆಯುತ್ತಿದ್ದ ಸ್ಥಳದಲ್ಲಿ ತಂದು ಪ್ರತಿಷ್ಠಾಪಿಸಿ ಮೂರ್ತಿಗೆ ನಿರಂತರವಾಗಿ ಪೂಜೆಯ ಮೂಲಕ ಸೌತೆಕಾಯಿಯನ್ನು ನೈವೇದ್ಯವಾಗಿ ನೀಡುತ್ತಿದ್ದು, ನಂತರದಲ್ಲಿ ಈ ಸ್ಥಳ ‘ಸೌತಡ್ಕ’ ಎಂದು ನಾಮಾಂಕಿತಗೊಂಡಿತೆಂದು ತಿಳಿದು ಬರುತ್ತದೆ.
ಕಾಲಾನುಕ್ರಮದಲ್ಲಿ ಇಲ್ಲಿನ ಭಕ್ತರ ಸಮೂಹವು ಮಹಾಗಣಪತಿಗೆ ಅಂದವಾದ ದೇವಾಲಯವನ್ನು ನಿರ್ಮಿಸುವ ನಿರ್ಧಾರವನ್ನು ಕೈಗೊಂಡಾಗ ಗಣಪತಿಯು ಕನಸಿನಲ್ಲಿ ಬಂದು ತನಗೆ ದೇವಾಲಯವನ್ನು ನಿರ್ಮಿಸುವುದೇನೂ ಬೇಡ, ನಾನು ಬಯಲಿನ ಆಲಯದಲ್ಲೇ ಇರಲು ಬಯಸುತ್ತೇನೆ. ಹಾಗೇನಾದರೂ ನನಗೆ ದೇವಾಲಯವನ್ನು ನಿರ್ಮಿಸುವುದೇ ಆದರೆ ಒಂದು ರಾತ್ರಿ ಒಂದು ಹಗಲು ಮುಗಿಯುವುದರೊಳಗಾಗಿ ನನ್ನ ದೇವಸ್ಥಾನದ ಗರ್ಭಗುಡಿಯ ಕಳಶವು ಕಾಶಿ ವಿಶ್ವನಾಥನ ಸನ್ನಿಧಿಗೆ ಕಾಣುವಂತೆ ನಿರ್ಮಿಸಬೇಕೆಂದು ಕಟ್ಟಪ್ಪಣೆಯನ್ನು ಮಾಡುತ್ತಾನೆ, ಆ ಪ್ರಕಾರ ಇಲ್ಲಿ ಗರ್ಭಗುಡಿಯನ್ನು ನಿರ್ಮಿಸಲಿಲ್ಲವೆಂದು ಇಲ್ಲಿನ ಹಿರಿಯರು ತಿಳಿಸುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿ ನೀಡುವ ಮಾಹಿತಿಯ ಪ್ರಕಾರ ಇಲ್ಲಿನ ಗಣಪತಿಗೆ ಅತಿ ಪ್ರಿಯವಾದ ನೈವೇದ್ಯವೆಂದರೆ ಅವಲಕ್ಕಿ ಪಂಚಕಜ್ಜಾಯ. ಅವಲಕ್ಕಿ, ಬೆಲ್ಲ, ತೆಂಗಿನಕಾಯಿ, ಜೇನುತುಪ್ಪ, ಬಾಳೆಹಣ್ಣು ಮತ್ತು ಕಬ್ಬು ಇವುಗಳೆಲ್ಲವನ್ನು ಸೇರಿಸಿ ಮಾಡಿದ ಮಿಶ್ರಣವನ್ನು ಅವಲಕ್ಕಿ ಪಂಚಕಜ್ಜಾಯವೆಂದು ಕರೆಯಲಾಗುತ್ತದೆ.ಇಲ್ಲಿನ ಮಹಾಗಣಪತಿಗೆ ಯಾವುದೇ ರೀತಿಯ ಮೇಲ್ಛಾವಣಿಯ ವ್ಯವಸ್ಥೆ ಇಲ್ಲದಿದ್ದು ಹೇರಳವಾಗಿ ಮಳೆ ಬೀಳುವ ಸಂದರ್ಭದಲ್ಲಿ ಹಾಗೂ ಮಳೆಗಾಲದಲ್ಲಿ ಇಲ್ಲಿನ ಗಣಪತಿಗೆ ಅರ್ಚಕರು ಛತ್ರಿಯನ್ನು ಹಿಡಿದುಕೊಂಡೇ ಅರ್ಚನೆಯನ್ನು ಹಾಗೂ ಪೂಜೆಯನ್ನು ನೆರವೇರಿಸುತ್ತಾರೆ. ಪೂಜೆಯ ಸಂದರ್ಭದಲ್ಲಿ ಭಕ್ತಾದಿಗಳು ಛತ್ರಿಯ ಸಹಕಾರದಲ್ಲಿ ದೇವರ ದರ್ಶನವನ್ನು ಪಡೆಯುವುದೇ ಇಲ್ಲಿನ ವಿಶೇಷತೆಗಳಲ್ಲೊಂದು.
ಈ ದೇವಾಲಯದಲ್ಲಿ ಗಣಪತಿಯ ಮೂರ್ತಿಯ ಮುಂಭಾಗದಲ್ಲಿ ಉದ್ದಕ್ಕೆ ಜೋಡಿಸಲಾದ ಮರದ ಉದ್ದನೆಯ ಪೀಠದ ಸಾಲಿನಲ್ಲಿ ಬಾಳೆ ಎಲೆಯಲ್ಲಿ ಅವಲಕ್ಕಿ ಪಂಚಕಜ್ಜಾಯ ಹಾಕಿ ಅದರಲ್ಲಿ ಅರ್ಧ ತೆಂಗಿನಕಾಯಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ಅತ್ಯಂತ ವಿಶಿಷ್ಟವಾಗಿ ಸಾಮೂಹಿಕ ರಂಗಪೂಜೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ರಾತ್ರಿ ಹೊತ್ತಿನಲ್ಲಿ ಇಲ್ಲಿನ ದೀಪಗಳ ಬೆಳಕನ್ನು ಹಾಗೂ ಈ ನಂದಾದೀಪದ ಬೆಳಕಿನಲ್ಲಿ ಮಹಾಗಣಪತಿಯನ್ನು ನೋಡುವುದೇ ಇನ್ನಷ್ಟು ವಿಶಿಷ್ಟ ಅನುಭವನ್ನು ನೀಡುತ್ತದೆ. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ದೇವಾಲಯಗಳು ಒಂದಲ್ಲ ಒಂದು ರೀತಿಯಲ್ಲಿ ಭಕ್ತಾದಿಗಳನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸುವುದರೊಂದಿಗೆ ಅತ್ಯಂತ ವಿಶಿಷ್ಟವಾದ ಪ್ರೇಕ್ಷಣೀಯ ಹಾಗೂ ಭಕ್ತಿಯ ತಾಣಗಳಾಗಿ ಗೋಚರಿಸುತ್ತವೆ. ಇಂತಹ ವಿಶಿಷ್ಟ ಸ್ಥಳಗಳನ್ನು ಭಕ್ತಾದಿಗಳು ಉತ್ತಮ ರೀತಿಯಲ್ಲಿ ಸ್ವಚ್ಛವಾಗಿ ಇಟ್ಟುಕೊಳ್ಳುವ ಮನೋಧರ್ಮವನ್ನು ತೋರಬೇಕಾಗಿದೆ. ಇಲ್ಲಿನ ಮೂಲಭೂತ ಅವಶ್ಯಕತೆಗಳು ಬಹಳಷ್ಟಿದ್ದು ಪ್ರವಾಸೋದ್ಯಮ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ಇಲ್ಲಿ ಇನ್ನಷ್ಟು ಹೆಚ್ಚಿನ ವ್ಯವಸ್ಥೆಗಳನ್ನು ಅಳವಡಿಸಿ ಪ್ರೇಕ್ಷಕರು ಹಾಗೂ ಭಕ್ತಾದಿಗಳನ್ನು ಸೆಳೆಯುವಂತೆ ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ತರುವಂತೆಯೂ ಮಾಡಬಹುದು.
ಸಂತೋಷ್ ರಾವ್ ಪೆರ್ಮುಡ