ಅಂಗವಿಕಲತೆಯನ್ನು ವರವಾಗಿಸಿಕೊಂಡ -ಮಾನಸಿ ಜೋಶಿ

ಅಂಗವಿಕಲತೆಯನ್ನು ವರವಾಗಿಸಿಕೊಂಡ -ಮಾನಸಿ ಜೋಶಿ

ಹೆಣ್ಣಿನ ಮುಖದ ಮೇಲೆ ಒಂದೆರಡು ಮೊಡವೆಗಳು ಬಿದ್ದರೆ ಏನೋ ಅನಾಹುತವೇ ನಡೆದಿದೆ ಎನ್ನುವಂತೆ ಆಡುವ ಸಮಾಜದಲ್ಲಿ ಯಾವನೋ ಒಬ್ಬ ಲಾರಿ ಡ್ರೈವರ್ ಮಾಡಿದ ಆಚಾತುರ್ಯದಿಂದ ಆಕ್ಸಿಡೆಂಟ್ ನಲ್ಲಿ ತನ್ನ ಕಾಲನ್ನೇ ಕಳೆದುಕೊಂಡ ಮಾನಸಿ ಗಿರೀಶ್ಚಂದ್ರ ಜೋಶಿ ಸಮಾಜದಲ್ಲಿನ ಹೆಜ್ಜೆ ಹೆಜ್ಜೆಗೂ ಮೂದಲಿಕೆ, ಅಪಹಾಸ್ಯ, ತಿರಸ್ಕಾರದ ಮಾತುಗಳಿಂದ ಬೇಸತ್ತು ತಮ್ಮ ಬದುಕನ್ನು ಕೊನೆಗಣಿಸಿಕೊಳ್ಳಲು ನಿರ್ಧರಿಸಿದ್ದರು.

ಅಪ್ಪನಂತೆ ತಾನೂ ವಿಜ್ಞಾನಿ ಆಗಬೇಕೆಂಬ ಬಾಲ್ಯದ ಕನಸನ್ನು ನನಸು ಮಾಡುವ ಇಂಜಿನಿಯರಿಂಗ್ ಮುಗಿಸಿ ಕ್ಯಾಂಪಸ್ ಇಂಟರ್ವ್ಯೂನಲ್ಲಿಯೇ ಹಲವಾರು ಕಂಪನಿಗಳ ಆಫರ್‌ಗಳು ಬಂದಿದ್ದರಿಂದ ಕೆಲಸಕ್ಕೂ ಸೇರಿದ್ದರು. ಇನ್ನೇನು ಬದುಕು ಎಲ್ಲಾ ಅಡೆತಡೆಗಳನ್ನು ದಾಟಿ ಮುನ್ನುಗ್ಗಲಿದೆ ಎನ್ನುವಷ್ಟರಲ್ಲಿ ಅಚಾತುರ್ಯ ಒಂದು ನೆಡೆದೇ ಹೋಯಿತು. 2ನೇ ತಾರೀಖು ಡಿಸೆಂಬರ್ 2011 ರಂದು ಎಂದಿನಂತೆ ಖುಷಿಯಲ್ಲಿ, ಕಛೇರಿಗೆ ತೆರಳುವ ದಾರಿಯಲ್ಲಿ ಇವರ ಬೈಕಿಗೆ ಲಾರಿಯೊಂದು ಗುದ್ದಿದ ರಭಸಕ್ಕೆ ಇವರ ಕೈ ಮುರಿದು, ಎಡಗಾಲ ಮೇಲೇ ಲಾರಿಯ ಚಕ್ರ ಹತ್ತಿ ಕಾಲನ್ನು ಸಂಪೂರ್ಣ ನುಜ್ಜುಗುಜ್ಜಾಗಿಸಿ, ಇಡೀ ದೇಹವನ್ನೇ ಮುದ್ದೆಯಾಗಿಸಿತ್ತು. ಅದೆಷ್ಟೇ ಹರಸಾಹಸ ಪಟ್ಟರೂ ಜಜ್ಜಿಹೋಗಿದ್ದ ಕಾಲಿನ ಗಾಯ ಗ್ಯಾಂಗ್ರೀನ್ ರೂಪ ತಳೆದಿದ್ದರಿಂದ ಡಾಕ್ಟರ್‌ಗಾಗಲೀ ಮನೆಯವರಿಗಾಗಲೀ ಆ ಕಾಲು ಕತ್ತರಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿರಲಿಲ್ಲ. 45 ದಿನಗಳ ಕಾಲ ಮುಂಬೈನ ವಾಶಿಯ ಎಂ.ಜಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದರು.

ಕಾಲು ಹೋಗಿದ್ದರಿಂದ ಇವರು ಬೇಸರಿಸಿಕೊಳ್ಳಲಿಲ್ಲ. ಅದೂ ವಯಸ್ಸಿಗೆ ಬಂದ ಹೆಣ್ಣೊಬ್ಬಳಿಗೆ? ಇಲ್ಲ ನಾನು ಸಾಯಬಾರದು, ಬದುಕಬೇಕು, ಚುಚ್ಚು ಮಾತುಗಳನ್ನು ಆಡುವ ಸಮಾಜದ ಮುಂದೆ ಸವಾಲಾಗಿ ತಾನು ಬೆಳೆದು ನಿಲ್ಲಬೇಕು ಎಂದು ನಿರ್ಧರಿಸಿ ಆ ಕ್ಷಣದಲ್ಲಿ ಮೈ ಕೊಡವಿ ತನ್ನೆಲ್ಲಾ ಕೊರತೆಗಳನ್ನೂ ಮೀರಿ ಏನಾದರೂ ಸಾಧಿಸಬೇಕು ಎಂದುಕೊಂಡಿದ್ದಾಗಲೇ ಇವರ ಕಣ್ಣೆದುರು ಬಂದಿದ್ದು ಬಾಲ್ಯದಿಂದಲೂ ನೆಚ್ಚಿಕೊಂಡಿದ್ದ ಬ್ಯಾಡ್ಮಿಂಟನ್ ಆಟ. ಶಾಲಾ ಕಾಲೇಜು ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಶಸ್ತಿಗಳನ್ನು ಬಾಚಿಕೊಂಡ ಅನುಭವ ಇವರ ಬೆನ್ನಿಗೆ ಇತ್ತು. ಇದೇ ಮಾನಸಿಗೆ ಸ್ಪೂರ್ತಿಯಾಗಿತ್ತು. ಕಳೆದುಕೊಂಡ ಕಾಲಿಗೆ ಕೃತಕ ಕಾಲು ಜೋಡಿಸಿಕೊಂಡು ಅಭ್ಯಾಸಕ್ಕೆ ಇಳಿದಿದ್ದ ಗಟ್ಟಿಗಿತ್ತಿ ಈಕೆ. ಆತ್ಮಸ್ಥೈರ್ಯದ ವೃದ್ಧಿಗಾಗಿ ಯೋಗ ಮತ್ತು ಧ್ಯಾನದ ಮೊರೆ ಹೋದರು ಮಾನಸಿ. ಆಕೆಯ ಮನಸ್ಸಿನ ಒಳಗೆ ಅದೆಷ್ಟು ಆಕ್ರೋಶ ಮತ್ತು ನೋವು ಮಡುಗಟ್ಟಿತ್ತು ಎಂದರೆ ಅಪಘಾತವಾದ ಒಂದು ವರ್ಷದ ಒಳಗೇ ಕೃತಕ ಕಾಲು ಅಳವಡಿಸಿಕೊಂಡು ಮುಂದಿನ ಕೇವಲ ಒಂದು ವರ್ಷದಲ್ಲಿ ಸರಾಗವಾಗಿ ನಡೆಯುವುದನ್ನು ಅಭ್ಯಾಸ ಮಾಡಿಕೊಂಡದ್ದು ಮಾತ್ರವಲ್ಲದೇ ಸರಾಗವಾಗಿ ಬ್ಯಾಡ್‌ಮಿಟನ್ ಆಟವನ್ನು ಆಡುವುದನ್ನೂ ಸಿದ್ಧಿಸಿಕೊಂಡು ಬಿಟ್ಟಿದ್ದಳು.

2013ರಲ್ಲಿ ಒಂದಿಷ್ಟು ಪಂದ್ಯಗಳನ್ನು ಆಡುತ್ತಾ ಸಾಧನೆಯ ಒಂದೊಂದೇ ಮೆಟ್ಟಿಲೇರುತ್ತಾ ಸಾಗಿ 2014ರ ಆಗಸ್ಟ್ ತಿಂಗಳಲ್ಲಿ ಮುಂದಿನ ಏಷ್ಯನ್ ಗೇಮ್ಸ್ನಲ್ಲಿ ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸೋ ಆಟಗಾರ್ತಿಯ ಆಯ್ಕೆ ಪ್ರಕ್ರಿಯೆಯಲ್ಲಿ ಅವಕಾಶ ಲಭಿಸಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾದರೂ ಅದೇ ಆಕೆಯ ಬದುಕಿನಲ್ಲಿ ಟರ್ನಿಂಗ್ ಪಾಯಿಂಟ್ ಆಗಿಬಿಟ್ಟಿತು. ಅದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ನ್ಯಾಶನಲ್ ಲೆವೆಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದದ್ದಷ್ಟೇ ಅಲ್ಲ ಅರ್ಜುನ ಅವಾರ್ಡ್ ವಿಜೇತೆಯಾಗಿದ್ದ ಪಾರುಲ್ ಪರ್ಮಾರ್ ಎದುರಾಳಿಯಾಗಿ ಆಕೆಯ ಸರಿಸಮವಾಗಿ ಸೆಣಸುವ ಮೂಲಕ ತನ್ನ ತಾಕತ್ತನ್ನು ಪ್ರದರ್ಶಿಸಿದ್ದಳು.

ಮಾನಸಿ ಗಿರೀಶ್ಚಂದ್ರ ಜೋಶಿ ಗುಜರಾತ್‌ನ ರಾಜ್‌ಕೋಟ್‌ನಲ್ಲಿ 11 ಜೂನ್ 1989ರಲ್ಲಿ ಜನಿಸಿದ್ದು, ಇವರೊಬ್ಬ ಭಾರತೀಯ ಪ್ಯಾರಾ-ಬ್ಯಾಡ್ಮಿಂಟನ್ ಆಟಗಾರ್ತಿ. ಅವರು 2015ರಲ್ಲಿ ತಮ್ಮ ವೃತ್ತಿಪರ ಕ್ರೀಡಾ ಪ್ರಯಾಣವನ್ನು ಆರಂಭಿಸಿ, 2020ರಲ್ಲಿ ಅವರು Sಐ3 ವಿಭಾಗದಲ್ಲಿ ಮಹಿಳಾ ಸಿಂಗಲ್ಸ್ನಲ್ಲಿ ವಿಶ್ವದ ನಂ 2 ಆಟಗಾರ್ತಿ ಆಗಿದ್ದಾಳೆ. ಮಾನಸಿಯನ್ನು ಮುಂದಿನ ಪೀಳಿಗೆಯ ನಾಯಕರಾಗಿ 2020ರ ಅಕ್ಟೋಬರ್ ನಲ್ಲಿ ಟೈಮ್ ನಿಯತಕಾಲಿಕೆಯಿಂದ ಪಟ್ಟಿ ಮಾಡಲಾಗಿದೆ. ಇವರು ವಿಶ್ವದ ಮೊದಲ ಪ್ಯಾರಾ-ಅಥ್ಲೀಟ್ ಮತ್ತು ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ವಿಕಲಾಂಗ ಕ್ರೀಡಾಪಟು. 2020ರಲ್ಲಿ ವಿಶ್ವದಾದ್ಯಂತ 100 ಸ್ಪೂರ್ತಿದಾಯಕ ಮತ್ತು ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರಾಗಿ ಬಿಬಿಸಿಯಿಂದ ಮಾನಸಿ ಗುರುತಿಸಿಕೊಂಡಿದ್ದಾರೆ ಮತ್ತು ಪಿ.ವಿ ಸಿಂಧು, ಮೇರಿ ಕೋಮ್, ವಿನೇಶ್ ಫೋಗಟ್ ಮತ್ತು ಡ್ಯೂಟಿ ಚಂದ್ ಅವರೊಂದಿಗೆ 2020ರ ವರ್ಷದ ಬಿಬಿಸಿ ಭಾರತೀಯ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರು ಏಷ್ಯನ್ ಪ್ಯಾರಾ ಗೇಮ್ಸ್ 2014ಗೆ ಆಯ್ಕೆಯಾಗಿ ಸ್ಪೇನ್‌ನಲ್ಲಿ ತನ್ನ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದರು. 2015ರಲ್ಲಿ, ಮಾನಸಿ ತನ್ನ ಪಾಲುದಾರರೊಂದಿಗೆ ಇಂಗ್ಲೆಂಡಿನ ಸ್ಟೋಕ್ ಮ್ಯಾಂಡೆವಿಲ್ಲೆಯಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನ ಮಿಶ್ರ ಡಬಲ್ಸ್ನಲ್ಲಿ ಬೆಳ್ಳಿಪದಕ ಗೆದ್ದಳು. 2018ರಲ್ಲಿ, ಅವಳು ಪುಲ್ಲೇಲ ಗೋಪಿಚಂದ್ ಅವರಿಂದ ತರಬೇತಿ ಪಡೆದುಕೊಳ್ಳಲು ಅವರ ಹೈದರಾಬಾದಿನ ಬ್ಯಾಡ್ಮಿಂಟನ್ ಅಕಾಡೆಮಿಗೆ ಸೇರಿಕೊಂಡಳು. ಸೆಪ್ಟೆಂಬರ್ 2015ರಲ್ಲಿ ಮಾನಸಿ ಮಿಶ್ರ ಡಬಲ್ಸ್ನಲ್ಲಿ ಬೆಳ್ಳಿ ಪದಕವನ್ನು ಇಂಗ್ಲೆಂಡ್‌ನ ಸ್ಟೋಕ್ ಮ್ಯಾಂಡೆವಿಲ್ಲೆಯಲ್ಲಿ ನಡೆದ ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದರು. ಅಕ್ಟೋಬರ್ 2018ರಲ್ಲಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್ ಪ್ಯಾರಾಗೇಮ್ಸ್ನಲ್ಲಿ ತನ್ನ ದೇಶಕ್ಕೆ ಕಂಚಿನ ಪದಕವನ್ನು ಗೆದ್ದರು. ಆಗಸ್ಟ್ 2019ರಲ್ಲಿ ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ 2019ರಲ್ಲಿ ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ಚಿನ್ನದ ಪದಕ ಗೆದ್ದರು.

ದೊರೆತ ಪ್ರಶಸ್ತಿ ಮತ್ತು ಪುರಸ್ಕಾರಗಳು

ಇವರಿಗೆ ೨೦೧೭ರಲ್ಲಿ ಮಹಾರಾಷ್ಟ್ರ ರಾಜ್ಯ ಏಕಲವ್ಯ ಖೇಲ್ ಕ್ರೀಡಾ ಪುರಸ್ಕಾರ, 2019ರಲ್ಲಿ ಅಂಗವೈಕಲ್ಯ ಹೊಂದಿರುವ ಅತ್ಯುತ್ತಮ ಕ್ರೀಡಾಪಟುಗಳ ರಾಸ್ಟ್ರೀಯ ಪ್ರಶಸ್ತಿ (ಮಹಿಳೆ), 2019ರಲ್ಲಿ ಇ.ಎಸ್.ಪಿ.ಎನ್ ಇಂಡಿಯಾ ಅವಾರ್ಡ್ಸ್ನಲ್ಲಿ ವರ್ಷದ ಸಮರ್ಥ ಕ್ರೀಡಾಪಟು ಪ್ರಶಸ್ತಿ, 2019ರಲ್ಲಿ ವರ್ಷದ ಅತ್ಯುತ್ತಮ ಪ್ಯಾರಾ-ಅಥ್ಲೀಟ್‌ಗಾಗಿ ಟೈಮ್ಸ್ ಆಫ್ ಇಂಡಿಯಾ ಕ್ರೀಡಾ ಪ್ರಶಸ್ತಿ, 2019ರಲ್ಲಿ ಏಸಸ್ 2020 ವರ್ಷದ ಮಹಿಳಾ ಮಹಿಳೆ (ಪ್ಯಾರಾ-ಸ್ಪೋರ್ಟ್ಸ್), 2019ರಲ್ಲಿ ವರ್ಷದ ಬಿ.ಬಿ.ಸಿ ಭಾರತೀಯ ಮಹಿಳಾ ಆಟಗಾರ್ತಿ, ೨೦೨೦ರಲ್ಲಿ ಮುಂದಿನ ಪೀಳಿಗೆಯ ನಾಯಕಿ, 2020ರಲ್ಲಿ ಬಿ.ಬಿ.ಸಿ 100 ಮಂದಿ ಸಾಧಕ ಮಹಿಳೆಯರ ಪೈಕಿ ಒಬ್ಬರು, 2020ರಲ್ಲಿ ಫೋರ್ಬ್ಸ್ ಇಂಡಿಯಾ, 2020ರ ಸ್ವಯಂ ನಿರ್ಮಿತ ಮಹಿಳೆಯರು ಇವೇ ಮೊದಲಾದ ಪ್ರಶಸ್ತಿಗಳು ದೊರೆತಿವೆ.

ಪ್ರಮುಖ ಪಂದ್ಯಾವಳಿಗಳು

ಮಿಶ್ರ ಡಬಲ್ಸ್ನಲ್ಲಿ 2015ರಲ್ಲಿ ಪದಕ, 2016ರ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್ ಮತ್ತು ಡಬಲ್ಸ್ನಲ್ಲಿ ಕಂಚು, 2017 ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್ನಲ್ಲಿ ಕಂಚು, 2018ರಲ್ಲಿ ಥೈಲ್ಯಾಂಡ್‌ನ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಷನಲ್ ಮಹಿಳಾ ಸಿಂಗಲ್ಸ್ನಲ್ಲಿ ಕಂಚು, 2018ರ ಏಷ್ಯನ್ ಪ್ಯಾರಾ ಗೇಮ್ಸ್ನ ಮಹಿಳಾ ಸಿಂಗಲ್ಸ್ನಲ್ಲಿ ಕಂಚು, 2019ರಲ್ಲಿ ಬಾಸೆಲ್ ಮತ್ತು ಸ್ವಿಜರ್ಲ್ಯಾಂಡ್‌ನಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ಮಹಿಳೆಯರ ಸಿಂಗಲ್ಸ್ನಲ್ಲಿ ಚಿನ್ನವನ್ನು ಗಳಿಸಿದ್ದಾರೆ.

ಜೆಸ್ಸಿಕಾ ಕಾಕ್ಸ್, ನಿಕ್ ವುಜಿಸಿಕ್ ಮತ್ತು ಮಾನಸಿ ಜೋಶಿ ಮುಂತಾದ ವಿಶೇಷ ಚೇತನರ ಸಾಧನೆಗಳನ್ನು ಗಮನಿಸಿದಾಗ ಸಾಧನೆಯನ್ನು ಮಾಡಲು ಅಗತ್ಯವಿರುವುದು ಕೇವಲ ದೇಹದ ಅಂಗಾಂಗಳು ಮಾತ್ರ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಸಾಧನೆಗೆ ಅತ್ಯಂತ ಅಗತ್ಯವಾಗಿ ಬೇಕಿರುವುದು ಸಾದನೆ ಮಾಡಬೇಕು ಎನ್ನುವ ಅದಮ್ಯವಾದ ಹಂಬಲ, ಕಠಿಣ ಪರಿಶ್ರಮ, ಬದ್ಧತೆ ಮತ್ತು ಆಸಕ್ತಿ ಎನ್ನುವುದು ತಿಳಿದು ಬರುತ್ತದೆ. ಆದ್ದರಿಂದ ಇಂತಹ ಸಾಧಕರನ್ನು ನೋಡಿದಾಗ ಅಂಗವೈಕಲ್ಯತೆ ಖಂಡಿತವಾಗಿಯೂ ಶಾಪವಲ್ಲ ಬದಲಾಗಿ ಒಂದು ರೀತಿಯಲ್ಲಿ ವರ ಎಂದೂ ಹೇಳಬಹುದು. ತಮ್ಮಲ್ಲಿದ್ದ ಒಂದು ಕೊರತೆಯೇ ಇವರು ಜಾಗತಿಕ ಮಟ್ಟದಲ್ಲಿ ವಿಶೇಷ ಸಾಧಕರಾಗಲು ಪ್ರೇರಣೆ ಆಯಿತು ಎಂದರೂ ತಪ್ಪಾಗದು. ಸಾಧನೆಯ ಹಸಿವು ಜಾಸ್ತಿಯಾಗುತ್ತಾ ಹೋದಾಗ ಸಾಧನೆಗೆ ಅಗತ್ಯವಿರುವ ಹಲವು ದಾರಿಗಳೂ ಕಾಣಿಸುತ್ತಾ ಹೋಗುತ್ತದೆ.

ಸಂತೋಷ್ ರಾವ್ ಪೆರ್ಮುಡ

ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ

ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198

ದೂ: 9742884160

Related post

1 Comment

  • 🙏

Leave a Reply

Your email address will not be published. Required fields are marked *