ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು

ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು

‘ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳು ಈ ಭೂಮಿಯ ಭೂಷಣಗಳು ಎಂದೇ ವ್ಯಾಖ್ಯಾನಿಸಬಹುದು.

‘ಅಂಟಾರ್ಟಿಕಾ’ ಭೂಮಿಯ ದಕ್ಷಿಣ ದೃವದ ಸುತ್ತ ಹೆಪ್ಪುಗಟ್ಟಿದ ಸಮುದ್ರದಿಂದ ಸುತ್ತುವರೆದ ಒಂದು ಭೂಖಂಡ (Around South Pole). ಆದರೇ ಆರ್ಕ್ಟಿಕ್ ಭೂಮಿಯ ಉತ್ತರ ದೃವದಲ್ಲಿನ ಹೆಪ್ಪುಗಟ್ಟಿದ ಸಮುದ್ರ. ಅದು ಭೂಖಂಡ ಅಲ್ಲ (Around North Pole Arctic Ocean).

ಈ ಎರಡೂ ಪ್ರದೇಶಗಳಿಗೆ ಸೂರ್ಯನ ಕಿರಣಗಳು ಓರೆಯಾಗಿ ತಲುಪುವುದರಿಂದ ತೀರಾ ಕಡಿಮೆ ಉಷ್ಣಾಂಶದಿಂದಾಗಿ ಇಲ್ಲಿನ ಪ್ರದೇಶಗಳು ಹೆಪ್ಪುಗಟ್ಟಿದ ಹಿಮದಿಂದ ಕೂಡಿ ಬೆಳ್ಳಗೆ ಬೆಳ್ಳಿಯಂತಿರುತ್ತವೆ. ಈ ಎರಡೂ ಪ್ರದೇಶಗಳಲ್ಲಿ ಲಕ್ಷಾಂತರ ಚದರ ಕಿಲೋಮೀಟರ್ ವ್ಯಾಪಿಸಿರುವ ಮೈಲುಗಟ್ಟಲೆ ಆಳದ ಹಿಮಗಡ್ಡೆಗಳು ಸೂರ್ಯನಿಂದ ಬರುವ ಶಾಖವನ್ನ ಪ್ರತಿಪಲಿಸಿ ಮರಳಿ ಆಕಾಶಕ್ಕೆ ಹಿಮ್ಮಟ್ಟಿಸುತ್ತಾ ಭೂಮಿಯ ಶಾಖವನ್ನ ನಿಯಂತ್ರಿಸುತ್ತವೆ. ಹಾಗಾಗಿ ಇವನ್ನ ಈ ಭೂಮಿಯ ನೈಸರ್ಗಿಕ ರೆಪ್ರಿಜರೇಟರ್ ಎಂತಲೇ ಕರೆಯುತ್ತಾರೆ ಆದ್ದರಿಂದ ಅಂಟಾರ್ಟಿಕಾ ಮತ್ತು ಆರ್ಕ್ಟಿಕ್ ಈ ಎರಡೂ ಪ್ರದೇಶಗಳು ನಮ್ಮ ಭೂಮಿಯ ರಕ್ಷಾಕವಚಗಳು.

ಇಲ್ಲಿನ ಹೆಪ್ಪುಗಟ್ಟುವ ಚಳಿಗೆ ಪೈಪೋಟಿ ಒಡ್ಡುವಂತೆ ಅನೇಕಾನೇಕ ವೈವಿಧ್ಯಮಯ ಜೀವವಿಶಿಷ್ಟಗಳು ಈ ಪ್ರದೇಶಗಳಲ್ಲಿವೆ. ಎರಡೂ ಕೂಡ ಶೀತಲ ಪ್ರದೇಶಗಳಾದರೂ ಅಂಟಾರ್ಟಿಕಾದಲ್ಲಿ ಕಂಡುಬರುವ ಕೆಲವು ಜೀವ ಪ್ರಭೇದಗಳು ಆರ್ಕ್ಟಿಕ್ ನಲ್ಲಿ ಕಂಡುಬರುವುದಿಲ್ಲ. ಆರ್ಕ್ಟಿಕ್ ನಲ್ಲಿ ಕಂಡುಬರುವ ಜೀವಪ್ರಭೇದಗಳು ಅಂಟಾರ್ಟಿಕಾದಲ್ಲಿ ಕಾಣಸಿಗುವುದಿಲ್ಲ.

ಆರ್ಕ್ಟಿಕ್ ನ ಹಿಮಕರಡಿಗಳು ಅಂಟಾರ್ಟಿಕಾ ದಲ್ಲಿ ವಾಸಿಸುವುದಿಲ್ಲ. ಅಂತೆಯೇ ಅಂಟಾರ್ಟಿಕಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬರುವ ಪೆಂಗ್ವಿನ್‌‌ ಗಳು ಆರ್ಕ್ಟಿಕ್ ನಲ್ಲಿ ಕಂಡುಬರುವುದಿಲ್ಲ. ಹಿಮಕರಡಿ ಸೇರಿದಂತೆ ಬೆಲೂಗಾ, ನಾರ್ವಲ್ ತಿಮಿಂಗಿಲಗಳು, ವಾಲ್ರೂಸ್ ಇತ್ಯಾದಿಗಳ ಆವಾಸಸ್ಥಾನ ಆರ್ಕ್ಟಿಕ್. ಇವು ಅಂಟಾರ್ಟಿಕಾದಲ್ಲಿ ಕಂಡುಬರುವುದಿಲ್ಲ …

ಪೆಂಗ್ವಿನ್

ಅಂಟಾರ್ಟಿಕಾದಲ್ಲಿನ ಪೆಂಗ್ವಿನ್‌‌ಗಳು ಅಲ್ಲಿನ ಚಳಿಯಿಂದ ರಕ್ಷಿಸಿಕೊಳ್ಳಲು 2 ಇಂಚಿನಷ್ಟು ಕೊಬ್ಬು ಶೇಖರಣೆಯಾದ ದಪ್ಪನೆಯ ಚರ್ಮದ ಮೇಲೆ ವಾಟರಪ್ರೂಪ್ ಗರಿಗಳನ್ನ ಹೊಂದಿರುತ್ತವೆ. ಒಂದು ಸ್ಕ್ವೇರ್ ಇಂಚಿಗೆ ಸರಿಸುಮಾರು 100 ಗರಿಗಳನ್ನ ಹೊಂದಿರುತ್ತವೆ. ದಪ್ಪನೆಯ ಚರ್ಮದ ಕೆಳಗಿರುವ ‘ಪ್ರೀನ್’ ಗಂಥಿಗಳಿಂದ (Preen Gland) ಈ ಗರಿಗಳಿಗೆ ಗಟ್ಟಿಯಾದ ಮೇಣದಂಥ ತೈಲ ಸರಬರಾಜು ಆಗುವುದರಿಂದ ಈ ಗರಿಗಳಿಗೆ ಸಮುದ್ರದ ನೀರು ಅಂಟಿಕೊಳ್ಳುವುದಿಲ್ಲ. ಇವುಗಳ ಶರೀರದ ತುಂಬ ಗರಿಗಳು ಒತ್ತೊತ್ತಾಗಿ ವಿಸ್ತರಿಸಿರುವುದರಿಂದಾಗಿ ಮಧ್ಯದಲ್ಲಿ ಪ್ರವೇಶಿಸುವ ಗಾಳಿ ಶರೀರದ ಉಷ್ಣತೆಯಿಂದ ಬೆಚ್ಚಗಾಗಿರುತ್ತೆ. ಹೀಗಾಗಿ ಅವು ಅಲ್ಲಿನ ಚಳಿಯನ್ನ ಆರಾಮವಾಗಿ ತಾಳಿಕೊಳ್ಳಬಲ್ಲವು . ಕೊಬ್ಬುಭರಿತ ಚರ್ಮವನ್ನ ಬ್ಲಬರ್ (Blubber) ಎಂದು ಕರೆಯುತ್ತಾರೆ.

ಪೆಂಗ್ವಿನ್‌‌ ಗಳು ಮೊಟ್ಟೆ ಇಟ್ಟು ಮರಿ ಮಾಡುವ ಬಿಸಿರಕ್ತದ ಪಕ್ಷಿಗಳು. ಆದರೆ ಇವುಗಳಿಗೆ ರೆಕ್ಕೆಗಳ ಬದಲಾಗಿ ಅಗಲವಾದ ತೆವಳುಗಾಲು (ಮುಂಗಾಲು- Flippers) ಹೊಂದಿರುವುದರಿಂದಾಗಿ ನೀರಿನಲ್ಲಿ ಈಜಲು ಹೊಂದಿಕೊಂಡಿವೆ. ಅದು ಪೆಂಗ್ವಿನ್‌‌ ಗಳ ನೀರಿನಲ್ಲಿನ ಹಾರಾಟ. ದೇಹದಲ್ಲಿ ಗಟ್ಟಿಯಾದ ಸಾಂದ್ರತೆಯಿಂದ ಕೂಡಿದ ಮೂಳೆಗಳು ನೀರಿನ ಆಳಕ್ಕೆ ಡೈವ್ ಹೊಡೆದು ವೇಗವಾಗಿ ಈಜುವಾಗ ಬಾಯಾನ್ಸಿ (Buoyancy) ಕಾಪಾಡಿಕೊಳ್ಳಲು ಸಹಕಾರಿಯಾಗುತ್ತವೆ.

ವರ್ಷಕ್ಕೆ ಒಂದು ಸರ್ತಿ ತಮ್ಮ ಗರಿಗಳನ್ನ ಕಳಚಿಕೊಂಡು ಹೊಸ ಗರಿಗಳನ್ನ ಹೊಂದುತ್ತವೆ. ಈ ಪ್ರಕ್ರಿಯೆಯನ್ನ ‘ಮೊಲ್ಟಿಂಗ್’ ಅಂತ ಕರಿಯುತಾರೆ. 14 ರಿಂದ 21 ದಿನಗಳ ವರೆಗೆ ನಡೆಯುವ ಈ ಪ್ರಕ್ರಿಯೆಯ ಸಮಯದಲ್ಲಿ ಪೆಂಗ್ವಿನ್‌‌ಗಳು ತೀರಾ ನಿಸ್ಸಾಹಯಕವಾಗಿರುತ್ತವೆ. ಈ ಅವಧಿಯಲ್ಲಿ ಇವು ಭೇಟೆಯಾಡುಲು ನೀರಿನಾಳಕ್ಕೆ ಇಳಿಯುವುದಿಲ್ಲ, ಹಾಗಾಗಿ ಈ ಪ್ರಕ್ರಿಯೆ ಆರಂಭಗೊಳ್ಳುವ ಮುಂಚೆಯೇ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸಿ ಶರೀರದಲ್ಲಿ ಕೊಬ್ಬು ಶೇಖರಣೆ ಮಾಡಿಕೊಳ್ಳುತ್ತವೆ.

18 ಪ್ರಭೇದಗಳ ಪೆಂಗ್ವಿನ್‌‌ಗಳು ಅಂಟಾರ್ಟಿಕಾದಲ್ಲೊಂದೇ ಕಂಡುಬರುವುದಿಲ್ಲ. ಕೆಲವೊಂದು ಅಂಟಾರ್ಟಿಕಾದ ಸುತ್ತಮುತ್ತಲಿನ ಪ್ರದೇಶಗಳಾದ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸೌತ್ ಆಫ್ರಿಕಾಗಳಲ್ಲೂ ಕಂಡುಬರುತ್ತವೆ. ತಮ್ಮ ಜೀವಿತಾವಧಿಯ ಹೆಚ್ಚಿನ ಸಮಯವನ್ನ ಸಮುದ್ರದಲ್ಲಿಯೇ ಕಳೆಯವ ಪೆಂಗ್ವಿನ್‌‌ಗಳು ನೀರಿನಾಳದಲ್ಲೂ ಆರಾಮವಾಗಿ ವೀಕ್ಷಿಸಬಲ್ಲವು. ಇವುಗಳ ಕಣ್ಣಿನ ಗುಡ್ಡೆಗಳ ಮೇಲೆ ಮೂರನೆಯ ರಕ್ಷಾಕವಚವಿದ್ದು ಅದು ಕಣ್ಣುಗಳಿಗೆ ಗಾಗಲ್ ನಂತೆ ( Goggle) ಕೆಲಸ ಮಾಡುತ್ತದೆ (Nictitating membrane or third eyelid).

ಅಂಟಾರ್ಟಿಕಾದಲ್ಲಿ ಹಿಮಪಾತ ಹೆಚ್ಚಾದಾಗ, ಪೆಂಗ್ವಿನ್ ತಮ್ಮ ಮೊಟ್ಟೆಗಳಿಗೆ ಕಾವು ಕೊಡುವಾಗ ಎಚ್ಚರಿಕೆಯಿಂದ ಮೊಟ್ಟೆ ಹೆಚ್ಚುಕಾಲ ನೆಲಕ್ಕೆ ತಾಕದಂತೆ ಜಾಗೂರಕತೆಯಿಂದ ಯಾವಾಗಲೂ ತನ್ನ ಮುಂಗಾಲ ಮೇಲಿರಿಸಿಕೊಳ್ಳುತ್ತವೆ. ಒಂದರ ನಂತರ ಇನ್ನೊಂದರಂತೆ ಗಂಡು ಮತ್ತು ಹೆಣ್ಣು ಸರದಿ ಪ್ರಕಾರ ಮೊಟ್ಟೆಯನ್ನ ಪಾದದ ಮೇಲೆ ಇರಿಸಿಕೊಳ್ಳುತ್ತವೆ. ಹಿಮಪಾತದ ಸಮಯದಲ್ಲಿ ಮೊಟ್ಟೆ ನೆಲದ ಮೇಲಿರಿಸಿದರೆ ಹೆಪ್ಪುಗಟ್ಟುವ ಅಂಟಾರ್ಟಿಕಾ ಚಳಿಗೆ ಮೊಟ್ಟೆಯಲ್ಲಿನ ಬ್ರೂಣ ಬದುಕುವುದಿಲ್ಲ.

ತೈಲ ಸಾಗಾಣಿಕೆಯ ಹಡುಗುಗಳಿಂದಾಗುವ ತೈಲಸೋರಿಕೆ, ಪ್ಲಾಸ್ಟಿಕ್ ತಾಜ್ಯ, ಸಾಗರದಲ್ಲಿನ ವಿಪರೀತ ಮೀನುಗಾರಿಕೆ, ಗ್ಲೋಬಲ್ ವಾರ್ಮಿಂಗ್ ನಿಂದಾಗಿ ಈ ಪೆಂಗ್ವಿನ್‌‌ಗಳು ವಿನಾಶದ ಅಂಚಿನಲ್ಲಿವೆ. ಪೆಂಗ್ವಿನ್‌‌ಗಳು ಸಮುದ್ರದ ಆಹಾರ ಸರಪಳಿಯ ಮದ್ಯಮ ಸ್ತರದಲ್ಲಿರುವ ಜೀವಿಗಳು. ಇವುಗಳ ವಿನಾಶದಿಂದ ಮಧ್ಯಮ ಸ್ತರದ ಆಹಾರ ಸರಪಳಿ ತುಂಡಾದರೇ ಸಾಗರದಲ್ಲಿನ ಜೀವಿಗಳ ಜೀವನದಲ್ಲಿ ಭಾರಿ ಏರುಪೇರಾಗಲಿದೆ.

ಮೃತ್ಯುಂಜಯ ನ.ರಾ

Related post

Leave a Reply

Your email address will not be published. Required fields are marked *