ಅಂತರಾಷ್ಟ್ರೀಯ ಹುಲಿ ದಿನ – ಜುಲೈ 29

ಅಂತರಾಷ್ಟ್ರೀಯ ಹುಲಿ ದಿನ – ಜುಲೈ 29

ಹುಲಿಗಳು ಮೂಲತಃ ಬೆಕ್ಕಿನ ವಂಶವಾದ ಪೆಲಿಡೇ ಕುಟುಂಬಕ್ಕೆ ಸೇರಿದ್ದು. ಬೆಕ್ಕಿನ ವಂಶದ ಜೀವಿಗಳು 70 ಮಿಲಿಯನ್ನು ವರ್ಷಗಳ ಹಿಂದೆ ಏಷಿಯಾ ಖಂಡದಲ್ಲಿ ಜನ್ಮ ತಾಳಿವೆ ಎಂದು ಸಂಶೋದನೆ ಹೇಳುತ್ತದೆ.

ಪ್ರಸ್ತುತ ಜಗತ್ತಿನಲ್ಲಿ 37 ಬೆಕ್ಕಿನ ಜಾತಿಯ ಪ್ರಾಣಿಗಳನ್ನು ನೋಡಬಹುದು , ಭಾರತದಲ್ಲಿ 15 ಜಾತಿಗಳಿಗೆ. ಇವುಗಳಲ್ಲಿ ಅನೇಕ ಉಪ ಪ್ರಭೇದಗಳು ಇವೆ. ಸಣ್ಣ ಬೆಕ್ಕುಗಳನ್ನು “ಫೆಲಿನಿ” (Felini) ಹಾಗು ದೊಡ್ಡ ಬೆಕ್ಕುಗಳನ್ನು “ಪ್ಯಾಂಥರಿಣಿ” (Pantherini) ಎಂದು ಎಂದು ಗುಂಪುಗಳಲ್ಲಿ ವಿಂಗಡಿಸಲಾಗಿದೆ.ಗರ್ಜನೆ ಮಾಡುವ ಹುಲಿ, ಸಿಂಹ, ಚಿರತೆ, ಜಾಗ್ವಾರ್ ಗಳು ದೊಡ್ಡ ಬೆಕ್ಕುಗಳಲ್ಲಿ ಸೇರಿದರೆ , ಹಿಮ ಚಿರತೆ, ದೊಡ್ಡ ಬೆಕ್ಕಾದರೂ ಸಣ್ಣ ಬೆಕ್ಕಿನ ಲಕ್ಷಣಗಳು ಇವೆ ಇದು ಗುಟುರು ಹಾಕದೆ ಮನೆ ಬೆಕ್ಕಿನಂತೆ ಗುರುಗುಡುತ್ತದೆ.

ಆಸ್ಟ್ರೇಲಿಯಾ ಮಡಗಾಸ್ಕರ್ ವೆಸ್ಟ್ ಇಂಡೀಸ್ ಹಾಗು ಕೆಲವು ದ್ವೀಪಗಳಲ್ಲಿ ಕಾಡು ಬೆಕ್ಕಿನ ಜಾತಿಯ ಯಾವುದೇ ಜೀವಿಗಳು ಇಲ್ಲ! “ಪ್ಯಾಂಥರ ಟೈಗ್ರಿಸ್” (Panthera Tigris) ವೈಜ್ಞಾನಿಕವಾಗಿ ಕರೆಯಲ್ಪಡುವ ಹುಲಿಗಳು ಏಷಿಯಾ ಖಂಡಕ್ಕೆ ಮಾತ್ರ ಸೀಮಿತವಾಗಿವೆ. ಬೆಕ್ಕಿನ ಬಳಗದ ಪ್ರಾಣಿಗಳಲ್ಲಿ ಹುಲಿಯೇ ದೊಡ್ಡದು. ಪ್ರಸ್ತುತ ಜಗತ್ತಿನಲ್ಲಿ ಹುಲಿಯ 6 ಪ್ರಭೇದಗಳು ಇದ್ದು, ಉಳಿದ 3 ಪ್ರಬೇಧಗಳು ಅಳಿದು(extinct) ಹೋಗಿವೆ.ಜವಾ ಹುಲಿ, ಬಾಲಿ ಹುಲಿ, ಕ್ಯಾಸ್ಪಿಯನ್ ಹುಲಿ ಇವು ಅಳಿದು ಹೋಗಿವೆ. ಅತ್ಯಂತ ಶೀತ ವಲಯವಾದ ಸೈಬೀರಿಯಾದಲ್ಲೂ ಸಹ ಹುಲಿಗಳು ಇವೆ. ನಮ್ಮ ದೇಶದ ಹುಲಿಗೆ ಬಂಗಾಳದ ಹುಲಿ ಅಥವಾ ರಾಯಲ್ ಬೆಂಗಾಲ್ ಟೈಗರ್ ಎನ್ನುತ್ತಾರೆ, ಸೈಬೀರಿಯಾ ಹುಲಿ ಗಾತ್ರದಲ್ಲಿ ದೊಡ್ಡದಿದ್ದರೆ, ಬಾಲಿ ಹುಲಿ ಎಲ್ಲಕ್ಕೂ ಚಿಕ್ಕ ಗಾತ್ರ ಹೊಂದಿತ್ತು.

ಸಾಮಾನ್ಯವಾಗಿ ಹುಲಿ ನಿಶಾಚರಿ, ಇದರ ಕಣ್ಣಿನ ರೆಟಿನಾದ ಮೇಲೆ ಬಿದ್ದ ಅತಿ ಕಡಿಮೆ ಬೆಳಕು ಸಹ ಹೆಚ್ಚು ದೃಷ್ಠಿ ಸ್ಪಷ್ಟತೆ ನೀಡಬಲ್ಲದು.ಬೆಳಕಿನ ಪ್ರಕಾಶಮಾನಕ್ಕೆ ತಕ್ಕಂತೆ ಹುಲಿಯ ಕಣ್ಣಿನ ಕನೀನಿಕೆಗಳು (iris) ಹಿಗ್ಗುವ ಕುಗ್ಗುವ ಸಾಮರ್ಥ್ಯ ಹೊಂದಿದ್ದು, ಅತಿ ಕತ್ತಲೆಯಲ್ಲೂ ಸಹ ಹೆಚ್ಚು ಸ್ಪಷ್ಟವಾದ ದೃಷ್ಟಿ ಹೊಂದಿದೆ.ಹುಲಿಯ ಉಗುರುಗಳು ನಡೆಯುವಾಗ ಒಳಸೇರಿಕೊಂಡಿರುತ್ತವೆ, ಹಾಗಾಗಿ ಕೆಸರಲ್ಲಿ ನಡೆದರೂ ಉಗುರು ಗುರುತು ಮೂಡುವುದಿಲ್ಲ. ಹುಲಿಯ ಜೊಲ್ಲು ನಂಜು ನಿರೋಧಕವಾಗಿದ್ದು ಮೈಮೇಲಿನ ಗಾಯಗಳನ್ನು ನೆಕ್ಕಿ ವಾಸಿ ಮಾಡಿಕೊಳ್ಳಬಲ್ಲವು.

ಬೆಕ್ಕಿನ ಕುಟುಂಬದ ಎಲ್ಲಾ ಜೀವಿಗಳಿಗೆ ಮಾಂಸವನ್ನು ಹರಿಯುವ Carnassial ಹಲ್ಲುಗಳು ಇದ್ದು, ಈ ಹಲ್ಲುಗಳು ಮಾಂಸಾಹಾರಿಗಳ ಕುರುಹುಗಳಾಗಿವೆ. ಹುಲಿ ಸಂಚರಿಸುವಾಗ ಸಾಮಾನ್ಯವಾಗಿ ಸವೆದ ಕಾಲುದಾರಿಗಳನ್ನೇ ಆರಿಸಿಕೊಳ್ಳುತ್ತದೆ, ಇದಕ್ಕೆ ಕಾರಣ ಅದು ಮೆತ್ತನೆಯ ಪಾದಗಳನ್ನು ಹೊಂದಿರುವುದು. ಹುಲಿ ನಿಖರ ಬೇಟೆಗಾರನೇನು ಅಲ್ಲ, ಅನೇಕ ಸಲ ಪ್ರಯತ್ನಿಸಿ ಕೆಲವು ಸಲ ಮಾತ್ರ ಯಶಸ್ವಿಯಾಗುತ್ತದೆ. ಕಾಡಲ್ಲಿ ಹುಲಿ 10-12 ವರ್ಷ ಬದುಕಿದರೆ, ಬಂಧನದಲ್ಲಿ 20 ವರ್ಷಕ್ಕಿಂತ ಹೆಚ್ಚು ಕಾಲ ಬದುಕಿದ ದಾಖಲೆಗಳಿವೆ. ಹುಲಿ ತನಗಿಂತ ಗಾತ್ರದಲ್ಲಿ ದೊಡ್ಡದಾದ ಕಾಟಿಗಳನ್ನು ಸಹ ಬೇಟೆಯಾಡಬಲ್ಲದು.

ಹುಲಿ ಸಿಂಹಗಳು ಲೈಂಗಿಕವಾಗಿ ಕೂಡುವುದಿಲ್ಲ ಆದರೆ ಮೃಗಾಲಯದಲ್ಲಿ ಸಿಂಹ ಹುಲಿಗಳನ್ನು ಕೂಡಿಸಿ ಸಂಕರ ತಳಿಗಳನ್ನು ಪಡೆಯುತ್ತಾರೆ, ಗಂಡು ಹುಲಿ ಹೆಣ್ಣು ಸಿಂಹಕ್ಕಾದ ಸಂತತಿಗೆ Tigon ಎಂದು ಗಂಡು ಸಿಂಹ ಹೆಣ್ಣು ಹುಲಿಗಾದ ಸಂತತಿಗೆ Liger ಎನ್ನುತ್ತಾರೆ. ಈ ಸಂತತಿಗಳಿಗೆ ಮುಂದೆ ಮರಿಗಳು ಹುಟ್ಟುವುದಿಲ್ಲ (ಬಂಜೆ). ಹುಲಿಗಳ ಮೈಮೇಲಿನ ಪಟ್ಟೆಗಳು ಪ್ರತಿ ಹುಲಿಗೂ ವಿಭಿನ್ನವಾಗಿದ್ದು, ಈ ಪಟ್ಟೆಗಳಿಂದ ಹುಲಿಗಳನ್ನು ಪ್ರತ್ಯೇಕವಾಗಿ ಗುರುತಿಸಬಹುದು. ಹುಲಿ ನರಭಕ್ಷಕವಲ್ಲ, ಗಾಯಗಳಾದಾಗ,ಇಲ್ಲವೆ ವಯಸ್ಸಾದಾಗ ಸುಲಬದ ಬೇಟೆಗೆ ಹೊಂಚು ಹಾಕುತ್ತವೆ.

ಸ್ವಾತಂತ್ರ ಪೂರ್ವದಲ್ಲಿ ಲಕ್ಷಕ್ಕೂ ಅಧಿಕ ಹುಲಿಗಳನ್ನು ಹೊಂದಿದ್ದ ನಮ್ಮ ದೇಶದಲ್ಲಿ ಅನಂತರ ನಡೆದ ಅಮಾನುಷ ಹತ್ಯೆಗಳು ಹುಲಿಗಳನ್ನು ಒಂದೆರಡು ಸಾವಿರ ಸಂಖ್ಯೆಗೆ ಇಳಿಸಿ ಈಗ ನಮ್ಮ ರಾಷ್ಟ್ರೀಯ ಪ್ರಾಣಿಯನ್ನು ಅಪಾಯದಂಚಿಗೆ (Endangered) ತಂದು ನಿಲ್ಲಿಸಿವೆ. ಆದರೂ ವಿಶ್ವದಲ್ಲಿ ಅತೀ ಹೆಚ್ಚು ಹುಲಿಗಳನ್ನ ನಮ್ಮ ದೇಶ ಹೊಂದಿರುವುದು ಸ್ವಲ್ಪ ಸಮಾಧಾನಕರ ವಿಷಯ ಎನಿಸಿದೆ. ಆವಾಸ ನಾಶ,ಹುಲಿಗಳ ಕಳ್ಳಬೇಟೆ, ಬಲಿ ಪ್ರಾಣಿಗಳ ಬೇಟೆ, ವಿಷಪ್ರಾಶನ ಇವು ಹುಲಿಗಳ ಸಂತತಿ ಕ್ಷೀಣಿಸಲು ಕಾರಣವಾಗಿವೆ.

ಸಂತಸದ ಹಾಗು ಸಮಾಧಾನಕರ ವಿಷಯವೆಂದರೆ ಕೇಂದ್ರ ಸರ್ಕಾರ ಪ್ರಕಟಿಸಿರುವ 2022 ರ ಹುಲಿಗಳ ಗಣತಿಯಲ್ಲಿ 3167 ಹುಲಿಗಳು ಕಾಣಿಸಿಕೊಂಡಿರುವುದು. 2018 ರಲ್ಲಿ 2967 ಹುಲಿಗಳು ದಾಖಲಾಗಿದ್ದವು ಈಗ ಅವುಗಳ ಸಂಖ್ಯೆ ಏರಿಕೆಯಾಗಿರುವುದು ವಿಶೇಷ ಹಾಗು ಸಂತಸದ ವಿಷಯ.

ನಾಗರಾಜ್ ಬೆಳ್ಳೂರು
Nisarga Conservation Trust

Related post

1 Comment

  • 👌🙏

Leave a Reply

Your email address will not be published. Required fields are marked *