ಅಂದು ಆ ರಾತ್ರಿ ಅಜ್ಜಿ ಹೋದದ್ದು ಎಲ್ಲಿಗೆ!?

ಅಂದು ಆ ರಾತ್ರಿ ಅಜ್ಜಿ ಹೋದದ್ದು ಎಲ್ಲಿಗೆ!?

ರಾತ್ರಿಗಳು ಮನುಷ್ಯನನ್ನೂ ಭಯದಲ್ಲಿ ಕಾಡುವುದು ಸಹಜ. ಕೆಲವರಿಗೆ ರಾತ್ರಿಗಳು ಹಗಲಿಗಿಂತ ಪ್ರಿಯ. ಆದರೆ ಆಗಬಾರದಂತಹ ಕೆಲವೊಂದು ಘಟನೆಗಳು ಇಂತಹ ರಾತ್ರಿಗಳಲ್ಲಿಯೇ ಆಗಿ ಹೋಗಿರುತ್ತೆ!

ಕನಸುಗಳು ಕನವರಿಸಿದಂತೆ ಬಂದು ಕೆಲ ಸಮಯವಿದ್ದು ತೇಲಿ ಹೋಗಿರುತ್ತದೆ. ರೆಕ್ಕೆಗಳೇ ಇಲ್ಲದ ಕನಸುಗಳು ಹಾಗೆಯೇ ಹಾರಿ ಹೋಗಿರುತ್ತವೆ. ಎಚ್ಚರಿಕೆ ಆಗುವ ಮುನ್ನವೇ ಗೊತ್ತೇ ಆಗದ ಹಾಗೆ!

ಹೀಗೆ ಕನಸಲ್ಲಿ ಕಂಡಂತೆ ಘಟಸುವ ಕೆಲವು ಘಟನೆಗಳು ನನ್ನ ನಿಜ ಜೀವನದಲ್ಲೂ ಬಂದು ಹೋಗುತ್ತವೆ….

ಅದು ಕನಸು ಎಂದರೆ ಕನಸಲ್ಲ. ನಿಜವೆಂದರೂ ಅದು ಸ್ಪಷ್ಟವಾಗಿಲ್ಲ. ಮಸಕು ಮಸಕಾಗಿಯೇ ಇವೆ. ಈಗಿನ ಡಿಜಿಟಲ್ ಇಮೇಜ್ಗಳಷ್ಟು ಕ್ಲ್ಯಾರಿಟಿಯಿಲ್ಲದ ಚಿತ್ರಪಟಗಳು, ಆನಿಮೇಷನ್ ಚಿತ್ರಗಳು. ಆಗಾಗ ಮನದಾಳದಲ್ಲಿ ಓಡುತ್ತಿರುತ್ತದೆ. ಅದನ್ನು ಹಿಡಿದಿಡಲೂ ಆಗದು. ಕಾಪಿ-ಪೇಸ್ಟ್ ಮಾಡಲು ಬಾರದು. ಆದರೆ ಅದರ ಅನುಭವ ಮಾತ್ರ ನಿರಂತರ.

ಹೀಗೆ ನನ್ನ ಮನಸ್ಸನ್ನು ಸದಾ ಕಾಡುವ ಅಜ್ಜಿಯು ಇದ್ದದ್ದೂ ನಿಜ. ನನ್ನನ್ನು ಸಾಕಿದ್ದು ನಿಜ. ಮುದ್ದು ಮಾಡಿ ಸಲುಹಿದ್ದು ನಿಜ. ಆದರೆ ಎಲ್ಲವು ಚದುರಿದ ವಿಡಿಯೋ ಕ್ಲಿಪ್ಗಳಂತೆ! ಸರಿಯಾದ ಕ್ರಮವಿಲ್ಲ. ಸ್ಪಷ್ಟತೆಯಿಲ್ಲ.

ಹಾಗಲ್ಲದೇ ಇದು ಮೂಕ ಚಿತ್ರ ಕೂಡ. ಮಾತುಗಳಿದ್ದರೂ ಮ್ಯೂಟ್ ಆಗಿವೆ. ಧ್ವನಿಗಳು ಧ್ವನಿಸದು! ಮೂಕ ವೇದನೆ!

ನನ್ನಜ್ಜಿ ‘ವೆಂಕಟಲಕ್ಷ್ಮಮ್ಮ’. ಆಕೆಯ ಅಣ್ಣಂದಿರಿಗೆ ‘ವೆಂಕಟಲಕ್ಷ್ಮೀ’ ಮತ್ತೆ ಕೆಲವರಿಗೂ, ತನ್ನ ಮಕ್ಕಳಿಗೂ ಅಕ್ಕ’! ತಮ್ಮಂದಿರು ಕರೆದಅಕ್ಕ’ ಮನೆ-ಮಂದಿಗೂ, ಮಕ್ಕಳಿಗೂ ರೂಢಿಯಾಗಿತ್ತು. ಆದರೆ ನನಗೂ ನನ್ನ ಅಣ್ಣಂದಿರಿಗೂ ಅಜ್ಜಿ! ನಮ್ಮಪ್ಪನ ಅಮ್ಮ ಅಲ್ವಾ?

ಈ ಅಜ್ಜಿ ಅಂತಿಂತಹವಳಲ್ಲ. ಛಲಗಾತಿ. ಬಯಲಿಗೆ ಬೀಳುತ್ತಿದ್ದ ಜೀವನವನ್ನು ಕಟ್ಟಿ ಹಿಡಿದು ಜಗ್ಗಿ ಕಿಷ್ಕಿಂದೆಯಂತಿದ್ದ ಪುಟ್ಟ ಮನೆಯನ್ನು ವಿಸ್ತರಿಸಿದಾಕೆ. ಕರಿ ಹೆಂಚಿನ ಕಾಲದಲ್ಲಿ ಕೆಂಪು ಹೆಂಚನ್ನು ಹೊದಿಸಿ ಬಂಗಲೆಯನ್ನು ಸೃಷ್ಟಿಸಿದಾಕೆ. ಮಹಡಿ ಮನೆ ಮಾಡುವ ಉದ್ದೇಶದಿಂದ ಎತ್ತರ ಗೋಡೆಗಳ ಸೂರೊಂದನ್ನು ಕಟ್ಟಿದಾಕೆ. ಎತ್ತರದ ಗೋಡೆಯ ಕಾರಣೀಭೂತಳಾದಳೂ ತಗ್ಗಿ ನಡೆದು `ರಾಮನಾಮ’ ಬಲದಲ್ಲೇ ಜೀವನವನ್ನು ನಡೆಸಿದಾಕೆ ಈ ನನ್ನಜ್ಜಿ.

ಅಂಜೀಕಿನ್ಯಾತಕಯ್ಯ, ಸಜ್ಜನರಿಗೆ ಭಯವೂ ಇನ್ಯಾತಕಯ್ಯಾ…’ ಎಂದು ಹನುಮನ ನೆನೆದು ಜೀವನ ನೂಕಿದ ಅಜ್ಜಿ ಇವರು!

ನಾನಾಯ್ತು ನನ್ನಜ್ಜಿಯ ಸೆರಗಾಯ್ತು. ಸೆರಗು ಹಿಡಿದು ನಡೆವ ನನ್ನ ನಾನೇ ಕಲ್ಪಿಸಿಕೊಂಡರೆ ರಾಮನ ಹಿಂದಿನ ಕಪಿಯಂತೆ!

ಬೆಳಗಿನ ವಾಕಿಂಗ್, ಜಾಗಿಂಗ್ಗಳ ಬಗ್ಗೆ ಗೊತ್ತಿಲ್ಲದ ಅಜ್ಜಿಯು ಬೆಳಗಾದೊಡನೆ ಬಿಸಿ ಬಿಸಿ ಕಾಫೀ ಹೀರಿ ತನ್ನ ಅಣ್ಣ-ತಮ್ಮ-ತಂಗಿಯರಿದ್ದ `ವಠಾರ’ ಕಡೆಗೆ ಸರ್ಕೀಟ್ ಹೊರಡುತ್ತಿದ್ದರು. ಆ ಪೆರೇಡ್ನಲ್ಲಿ ನಾನೂ ಭಾಗಿಯೆಂದು ಹೇಳುವ ಅವಶ್ಯಕತೆಯಿಲ್ಲ.
ಸೀರೆ ಉಟ್ಟ ಅಜ್ಜಿಯ ಹಿಂದೆ ಆ ಸೀರೆಯ ಸೆರಗೂ ಹೋಗಲೇ ಬೇಕಲ್ಲ!

ಈ `ವೆಂಟಕಲಕ್ಷ್ಮೀ’ ಅವರಿಗೆ ಸಂದ ಅರ್ಧ ಕಾಫಿಯಲ್ಲಿ ನನ್ನ ಪಾಲು ಇರಲೇ ಬೇಕು. ಗಸಿಯಲ್ಲೂ ಅದೇನೋ ಸ್ವಾದ! ತಿಂಡಿ-ತೀರ್ಥಗಳಿಲ್ಲದಿದ್ದರೂ ಕರಿ-ಬಿಳಿ-ಕಷಾಯಗಳಂತಹ ಕಾಫಿಗಳಿಗೇನು ಬರವಿರಲಿಲ್ಲ. ಸಕ್ಕರೆ ಕಾಫಿಯೂ, ಬೆಲ್ಲದ ಕಾಫಿಯೂ ಆಗಾಗ ಖಡಕ್ ಟೀ ಭಾಗ್ಯವೂ ದಕ್ಕುತ್ತಿತ್ತು. ಆದರೆ ಎಲ್ಲವೂ ತಳ ಸೇರಿದ ಮೇಲೆಯೇ!
ಹಕ್ಕಿ ತನ್ನ ಮರಿಗಳಿಗೆ ಕೊಡುವ ಗುಟುಕಂತೆ ಇಲ್ಲಿ ಮಿಕ್ಕ ಎರಡು ಗುಟುಕು ವಿಥ್ ಅಜ್ಜಿ ಪ್ರೀತಿ ನನ್ನ ಪಾಲು!

ಗಸಗಸೆ ಪಾಯಸದ ಪ್ರಸಂಗ!

ಕೆಲವು ವಾರಗಳಿಗೊಮ್ಮೆ ತಡರಾತ್ರಿಯಲ್ಲಿ ಸುಮಾರು ಹತ್ತೂ-ಹತ್ತೂವರೆ ಸಮಯದಲ್ಲಿ ಬಾಯಿ ಸುಡುವಷ್ಟು ಬಿಸಿಯಾದ ಗಸಗಸೆ ಪಾಯಸದ ಸಮಾರಾಧನೆ. ದೊಡ್ಡ ಬಟ್ಟಲಲ್ಲಿ ಮಾಡಿದ ಪಾಯಸ ಅಡುಗೆ ಕೋಣೆಯಿಂದ ಮನೆಯ ಹಾಲ್ಗೆ ರವಾನೆಯಾಗುವುದು. ಹಾಲ್ನಲ್ಲೋ ಆಗಲೇ ಮಲಗಲು ಚಾಪೆ-ಜಮಖಾನಗಳು-ಹೊದಿಕೆಗಳೊಂದಿಗೆ ರೆಡಿಯಾಗಿರುತ್ತಿತ್ತು.

ಮಲಗುವ ತರಾತುರಿಯಲ್ಲಿರುವವರಿಗೆ ಮತ್ತಷ್ಟು ಮತ್ತು ಬರುವಂತಹ ಪಾಯಸದ ಸಮಾರಾಧನೆ. ಸವೆದಷ್ಟೂ ಸವಿಯ ಬಲ್ಲವನೇ ಬಲ್ಲ. ಆ ರುಚಿಯ!

ಮನೆ ಮಂದಿಗೆಲ್ಲ ಹಂಚಲು ಲೋಟಗಳ ಸರದಿ ಸಾಲು! ಪಾಯಸ ಮಾಡುವ ಸುಳಿವು ಸಿಕ್ಕಿದ್ದಲ್ಲಿ ಆ ರಾತ್ರಿ ನಾನು ಮಾತ್ರ ಬೇಗ ಮಲಗುತ್ತಿರಲಿಲ್ಲ. ಆದರೆ ನನ್ನಣ್ಣನೋ ಶಿಸ್ತಿನ ಸಿಪಾಯಿ! ರಣರಂಗದಲ್ಲಿ ಅಲ್ಲ!

ಊಟ ಬೀಳಲಿ-ಬಿಡಲಿ ರಾತ್ರಿ ಒಂಭತ್ತಕ್ಕೆ ಸರಿಯಾಗಿ ಹಾಸಿಗೆ ಹಿಡಿದು ಮಲಗುವುದಲ್ಲಿ ಕಟ್ಟುನಿಟ್ಟು! ಆದರೆ ಪಾಯಸ ಮಾಡಿದ ರಾತ್ರಿ ಮಲಗಿದ್ದ ಅಣ್ಣನನ್ನೂ ನನ್ನಜ್ಜಿಯೇ ಎಬ್ಬಿಸಿ ನಿದ್ದೆ ಮಂಪರಲ್ಲೂ ಪಾಯಸ ಕುಡಿಸಿ ಮಲಗಿಸುವುದು ಅತಿಯಾದ ಪ್ರೀತಿ, ವಾಡಿಕೆ!

ಆದರೆ ಬೆಳಗಾದ ಮೇಲೆ ಪಾಯಸದ ಪಾತ್ರೆಯನ್ನು ನೋಡಿ ತನಗೆ ಪಾಯಸ ಕೊಡಲಿಲ್ಲವೆಂದೂ ಪಾಯಸ ಮೆತ್ತಿದ ಮೂತಿಯನ್ನು ಮುಂದೆ ಮಾಡಿಕೊಂಡು, ಮುನಿಸಿಕೊಂಡು ಕೂರುವುದು ಮಾಮಾಲು. ಪಾಪ ಮಗುವಿಗೆ ಬೇಜಾರು ಮಾಡಬಾರದೆಂದು ಮತ್ತೆ ಪುಟ್ಟ ಪಾತ್ರೆಯಲ್ಲಿ ಪಾಯಸ ರೆಡಿ!

ಜೀವನ ನಡೆಸಲು, ಮನೆ ಕಟ್ಟಲು, ಮನೆತನದ ಗೌರವ ಕಾಪಾಡಲು ಸಾಲ ಸೋಲ ಮಾಡಿ, ಅದನ್ನು ತೀರಿಸಲು ಹುರಿಗಾಳನ್ನು ಮಾಡಿ, ಮಾರಿಸಿದಳೀಕೆ! ತಾನಷ್ಟೇ ಅಲ್ಲದೇ ತನ್ನ ಮನೆಯವರನ್ನೂ ತನ್ನ ಕಾಯಕದಲ್ಲಿ ತೊಡಗಿಸಿಕೊಂಡು ದುಡಿದು ದಣಿಯಬೇಕು. ಧಣಿಯಾಗಲು ದುಡಿಮೆಯ ಕಷ್ಟ ತಿಳಿಯಬೇಕು. ಕಾಸಿನ ಕಿಮ್ಮತ್ತು ತಿಳಿಯಬೇಕು ಎಂದು ಮಾತಾಡದೇ ಮಾಡಿ ತೋರಿಸಿಕೊಟ್ಟಾಕೆ!

ಯಾವ ಗೂಗಲ್ ಮ್ಯಾಪೂ ಇಲ್ಲದ ಕಾಲದಲ್ಲೂ ಎಲ್ಲಿಗಾದರೂ ಹೋಗಿ ಬರುತ್ತೇನೆ. ಬಾಯಿ ಇಲ್ವೇ? ಕೇಳಿ ಹೋದರೆ ಎಲ್ಲಿಗಾದರೂ ಹೋಗಬಹುದೆಂಬ ಆತ್ಮವಿಶ್ವಾಸ ಹೊಂದಿದ್ದಾಕೆ. ಓದಿದ್ದು ಏನೂ ಇಲ್ಲ. ಕನ್ನಡವಲ್ಲದೇ ತೆಲುಗು, ಹಿಂದಿಗಳಲ್ಲಿಯೇಟುಸ್ಸು ಪುಸ್ಸು ಎಂದು ಮ್ಯಾನೇಜ್ ಮಾಡುತ್ತಿದ್ದಾಕೆ.

ಈಕೆ `ಶೋಲೆ’ಯಂತಹ ಹಿಂದಿ ಚಿತ್ರವನ್ನು ಎರೆಡೆರಡು ಬಾರಿ ನೋಡಿದ್ದೂ ಇದೆ. ಅಜ್ಜಿ ಎಂದರೆ ಮೂಲೆಯಲ್ಲಿ ಕೂತು ಕುಟಾಣಿಯಲ್ಲಿ ಅಡಿಕೆ ಕುಟ್ಟುವ ಅಡುಗೂಲಜ್ಜಿ ಅಲ್ಲ ಈ ನಮ್ಮಜ್ಜಿ! ವೀರ ವನಿತೆ ಓಬವ್ವನಂತೆ ಪತಿಯ ಕರ್ತವ್ಯವನ್ನೂ, ಮರ್ಯಾದೆಯನ್ನೂ ಕಾಯಲು ತನ್ನ ಕಾಯವನ್ನೇ ಮುಡುಪಿಟ್ಟವಳು ಈ ನಮ್ಮಜ್ಜಿ!

ಬೆಳಗಾಗೆದ್ದು ಮುಖ ತೊಳೆದು ಶ್ರೀ ಬ್ರಹ್ಮಚೈತನ್ಯ ಮಹಾರಾಜರಿಗೆ ಕಾಕಡಾರತಿಯ ಬೆಳಗಿ ರಾಮನಾಮ ಜಪ, ಹಾಡಿನಾರತಿಯ ಸಮರ್ಪಣೆಯನ್ನು ಮಾಡುತ್ತಿದ್ದರಲ್ಲದೇ ರಾಮನಾಮವ ಹಾಡಿ ಹೊಗಳುವ ದಾಸವರೇಣ್ಯರು ಶನಿವಾರಗಳಂದು ಬಂದರೆ ತಿಂಡಿ-ಕಾಫಿ ಕೊಟ್ಟು ಸತ್ಕರಿಸುವ ಪರಿಪಾಠವು ಇತ್ತು. ಗೋಂದಾವಳಿಗೇ ಹೋಗಿ ಮಹಾರಾಜರ ಪುಣ್ಯ ಪಾದಗಳಿದ್ದ ಜಾಗವನ್ನು ಸ್ಪರ್ಶಿಸಿ ಬಂದಿದ್ದರು. ಸತ್ಸಂಗದ ಸಜ್ಜನಿಕೆಯನ್ನು ರೂಢಿಸಿಕೊಂಡಿದ್ದ ಹಿರಿಯ ಜೀವ!

ನಾನೂ-ನನ್ನಣ್ಣ ನೈನ್ತ್ ಓದುತ್ತಿದ್ದಾಗ ನಾವಿದ್ದ, ಎನ್ಎಚ್-4 ನಲ್ಲಿದ್ದ ಚಿಕ್ಕನಹಳ್ಳಿಗೆ ಬಂದಿದ್ದರು. ನಮ್ಮಪ್ಪ ಕನ್ನಡ ಶಿಕ್ಷಕರಾಗಿದ್ದ ಕಾರಣ ಮೇನ್ ರೋಡ್ನ ಪಕ್ಕದಲ್ಲಿದ್ದ ಶಾಲೆಯ ಆವರಣದಲ್ಲೇ ಕ್ವಾರ್ಟಸ್ ಕೊಟ್ಟಿದ್ದರು.

ನಮ್ಮಮ್ಮ ಬಾಣಂತನಕ್ಕೆ ತವರಿಗೆ ಹೋಗಿದ್ದ ಕಾರಣ ನನ್ನಪ್ಪ-ನನ್ನಣ್ಣ ಹಾಗೂ ನನಗೆ ಟೈಮ್ಗೆ ಸರಿಯಾಗಿ ಒಂದಿಷ್ಟನ್ನು ಬೇಯ್ಸಿ ಹಾಕಲು ನಮ್ಮಲ್ಲಿಗೆ ಬಂದಿದ್ದಳು ಈ ಅಜ್ಜಿ. ರಾತ್ರಿ 9-30ಕ್ಕೆ ತುಮಕೂರಿನಿಂದ ನಾವಿದ್ದ ಚಿಕ್ಕನಹಳ್ಳಿಗೆ ಬರುತ್ತಿದ್ದ ಗೌರ್ನಮೆಂಟ್ ಬಸ್ನಲ್ಲಿ ಒಬ್ಬಳೇ ಧೈರ್ಯ ಮಾಡಿ ಬಂದಿದ್ದಳು. ಆಗ ಕತ್ತಲ್ಲಲ್ಲಿಯೇ ತಡವರಿಸುತ್ತಾ ಹೈವೇಯಲ್ಲಿ ಹರಿದಾಡುತ್ತಿದ್ದ ಲಾರಿಗಳ ಹೆಡ್ ಲೈಟ್ಗಳ ಬೆಳಕಲ್ಲಿ ಹೇಗೋ, ಏನೋ ಮನೆ ಸೇರಿದ್ದಳು. `ಗವ್’ ಎನ್ನುವ ಕತ್ತಲಲ್ಲಿ ಬ್ಯಾಗೂ ಹಿಡಿದು ಬರುತ್ತಾ ನನ್ನನ್ನೇ ಕೂಗಿ ಕರೆದಿದ್ದಳು!

ಅಜ್ಜಿಯ ಕೈಯಿನ ರುಚಿಯಾದ ಅಡುಗೆ ನಮ್ಮನ್ನು ಮತ್ತಷ್ಟು ಹುರಿದುಂಬಿಸಿತ್ತು. ಓದು-ಬರಹಗಳಿಗಿಂತ ಅಜ್ಜಿಯ ಪ್ರೀತಿ ಮಾತು, ತಮಾಷೆಗಳೇ ಹೆಚ್ಚು ಮುದ ಕೊಡುತ್ತಿತ್ತು. ಅಜ್ಜಿಯೊಂದಿಗೆ ಇದ್ದವರಿಗಷ್ಟೆ ಆ `ಸುಖ’ ತಿಳಿಯುತ್ತದೆ. ನಿಷ್ಕಲ್ಮಷ ಭಾವ-ಜೀವಿಗಳೆಂದರೆ ಅಜ್ಜಿ-ತಾತ!

ಹೀಗಿದ್ದ ಅಜ್ಜಿಯ ನೋಡಲು ಚಿಕ್ಕಪ್ಪ, ಅಜ್ಜಿಯ ಎರಡನೇ ಮಗ ಬಂದರು.
ಅಂದು ಭಾನುವಾರ, ಡಿಸೆಂಬರ್ 10. ವೈಕುಂಠ ಏಕಾದಶಿ. ಮಗನ ಆಗಮನವು ಅತಿ ಹೆಚ್ಚು ಖುಷಿಯನ್ನು ಕೊಟ್ಟಿತ್ತು. ಅಗಾಗ ಬರುತ್ತಿದ್ದ ಸಣ್ಣ ಎದೆ ನೋವೂ ಅಂದು ದೂರವಾಗಿತ್ತು. ಚಿಕ್ಕಪ್ಪ ಹೋಗಬೇಕಾಗಿದ್ದು ಕೂಡ ಮುಂದೂಡಲ್ಪಟ್ಟಿತ್ತು. ಮಾರನೆಯ ದಿನ ತುಮಕೂರಿಗೆ ಹೋಗಿ ಅಲ್ಲೇ ಚೆಕಪ್ ಮಾಡಿಸಿದರಾಯ್ತು ಎಂದೂ ನಿರ್ಧರಿಸಿಯಾಗಿತ್ತು. ಖುಷಿಯಲ್ಲಿ ಬಗೆ ಬಗೆಯ ತಿಂಡಿ, ಅಡುಗೆಗಳ ಔತಣವೇ ಏರ್ಪಟಿತ್ತು.

ಪ್ರತಿ ಏಕಾದಶಿಯಲ್ಲೂ ಒಂದ್ಹೊತ್ತು ಊಟ-ಒಂದೊಪ್ಪತ್ತು ತಿಂಡಿ ಎನ್ನುತ್ತಾ ಅದನ್ನೇ ಪಾಲಿಸಿಕೊಂಡು ಬಂದಿದ್ದ ಅಜ್ಜಿ ಅಂದು ವಿಶೇಷ ವೈಕುಂಠ ಏಕಾದಶಿಯನ್ನೂ ಮರೆತಿದ್ದರು.

ಅಂದು ರಾತ್ರಿ ಎಲ್ಲರ ಊಟವಾದ ನಂತರ ಎಂದಿನಂತೆ ಅಡುಗೆ ಮನೆಯನ್ನು ಶುದ್ಧಿಗೊಳಿಸಿ. ಇದ್ದಿಲು ಒಲೆಯನ್ನೂ ಸಾರಿಸಿ, ಪಾತ್ರೆಪಗಡಗಳನ್ನು ತೊಳೆದು ದಬ್ಹಾಕಿ, ಕೇರಂ ಆಡುತ್ತಿದ್ದ ನಮ್ಮೊಂದಿಗೂ ಕೂತು ಸಾಕಷ್ಟು ಮಾತಾಡಿದರು. ತಡರಾತ್ರಿಯಲ್ಲಿ ಎಲ್ಲರೂ ಮಲಗಿದೆವು. ನಾನು ನನ್ನಜ್ಜಿಯ ಸೆರಗು ಹಿಡಿದು ಮಲಗಿದೆ.

ನನ್ನ ಮತ್ತು ನನ್ನಣ್ಣನ ಮಧ್ಯೆ ಮಲಗಿದ್ದ ಅಜ್ಜಿ ಮಧ್ಯರಾತ್ರಿಯಲ್ಲಿ ಯಾವಾಗಲೋ ಎದ್ದು ಮತ್ತೊಂದು ಜಾಗದಲ್ಲಿ ಮಲಗಿದ್ದಾಳಷ್ಟೇ, ಇಹಲೋಕದ ವ್ಯಾಪಾರ ಮುಗಿಸಿದ್ದಾಳೆ. ಪ್ರತಿದಿನ ಬೆಳಗ್ಗೆ 6ರ ಒಳಗೆ ಏಳುತ್ತಿದ್ದವಳು ಅಂದು ಏಳಾದರೂ ಏಳಲಿಲ್ಲವೆಂದಾಗ ಗಾಬರಿಗೊಂಡು ನೋಡಿದಾಗಲೇ ತಿಳಿದದ್ದು ಅಜ್ಜಿ ಇನ್ನಿಲ್ಲವೆಂದು!

ಅಂದು ಹಾಗೆ ಕತ್ತಲು ದಾರಿಯಲ್ಲಿ ಬಂದಳಲ್ಲಾ? ಮತ್ತೆ ಹಿಂದೆ ಹೋಗಲಿಲ್ಲ! ವೈಕುಂಠ ಏಕಾದಶಿಯ ರಾತ್ರಿ ನೇರ ಸ್ವರ್ಗವಾಸಿಯಾಗಿದ್ದಳು. ಇದ್ದಾಗ ಕಷ್ಟಗಳನ್ನೇ ಇಷ್ಟಪಟ್ಟು ಅನುಭವಿಸಿದ ಅಜ್ಜಿಯು ಒಮ್ಮೆಗೆ ಸ್ವರ್ಗಕ್ಕೆ ರಹದಾರಿ ಪಡೆದಿದ್ದಳು.

ಅಜ್ಜಿಯ ಸೆರಗು ನನ್ನಿಂದ ಬೇರಾಗಿತ್ತು.
ನನ್ನ ಕೈ ಖಾಲಿಯಾಗಿತ್ತು. ಅಜ್ಜಿಯು ನೆನಪಷ್ಟೇ ಆದಳು. ಈ ದಿನಕ್ಕೆ ಸರಿಯಾಗಿ ನಲವತ್ತು ವರ್ಷಗಳ ಹಿಂದೆ ನಡೆದ ಈ ‘ಇಲ್ಲ’ವಾದ ಕ್ರಿಯೆ ಈಗಲೂ ಸ್ಮೃತಿ ಪಟಲದಲ್ಲಿ ಅಚ್ಚಾಗಿದೆ. ಆದರೆ ಪ್ರಿಂಟ್ ಮಾಡಿಸಲು, ವಾಟ್ಸಾಪ್ ಹಾಗೂ ಫೇಸ್ಬುಕ್ಗಳಲ್ಲಿ ಶೇರ್ ಮಾಡಲು ಆಗದು!

ಅಂದು ಆ ರಾತ್ರಿ ನನ್ನಜ್ಜಿಗೆ ಏನಾಯ್ತು? ವೈಕುಂಠಕ್ಕೆ ಕರೆದೊಯ್ಯಲು ಯಾರು ಬಂದಿದ್ದರು? ಶ್ರೀಮನ್ನಾರಣನೇ? ತಾನು ನಂಬಿದ್ದ ಬ್ರಹ್ಮಚೈತನ್ಯರ ಚೈತನ್ಯವೇ? ಇಲ್ಲಾ ರಾಮ-ಹನುಮರೇ? ಯಾರು ಬಂದಿದ್ದರು?

ನನ್ನಜ್ಜಿಯ ಶರೀರ ಇಲ್ಲವಾಗಿ ನಲವತ್ತೊಂದು ವರ್ಷಗಳು ಸಂದಿವೆ. ಆಕೆಯ ನೆನಪು ಇನ್ನೂ ಕಾಡುತ್ತಲೇ ಇದೆ.

ತುಂಕೂರ್ ಸಂಕೇತ್

ಶೀರ್ಷಿಕೆ ಚಿತ್ರ ಕೃಪೆ : watercolor academy

Related post

Leave a Reply

Your email address will not be published. Required fields are marked *