ಅಕ್ಷರಗಳ ಮಾಲೆ – ನಮ್ಮೂರಿನ ಶಾಲೆ

ಅಕ್ಷರಗಳ ಮಾಲೆ – ನಮ್ಮೂರಿನ ಶಾಲೆ

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಕುವೆಂಪುರವರ ನುಡಿಯಂತೆ, ಭಕ್ತರಿಗೆ ದೇವಾಲಯವಾದರೆ ಪ್ರತಿ ವಿದ್ಯಾರ್ಥಿಗಳ ಪಾಲಿಗೆ ಶಾಲೆಯೇ ದೇವಾಲಯವಿದ್ದಂತೆ. ನಾವು ಜ್ಞಾನವನ್ನು ಪಡೆಯುವ ಸ್ಥಳವನ್ನು ಶಾಲೆ ಎಂದು ಕರೆಯಲಾಗುತ್ತದೆ. ಶಾಲೆಗೆ ದೇವಾಲಯದ ಸಾದೃಶ್ಯವನ್ನು ನೀಡಲಾಗಿದೆ. ನಮ್ಮ ಜೀವನದ ಪ್ರಮುಖ ಭಾಗವೆಂದರೆ ನಮ್ಮ ಬಾಲ್ಯ ಮತ್ತು ನಮ್ಮ ಬಾಲ್ಯವು ಶಾಲೆಯ ನೆನಪುಗಳಿಂದ ತುಂಬಿರುತ್ತದೆ.

ಶಾಲೆ ಎಂದರೆ ಶಿಸ್ತು, ಶಿಕ್ಷಣ, ಶಿಕ್ಷಕರು, ಗೆಳತಿಯರು, ಗೆಳೆಯರು ಮುಂತಾದ ಚಿತ್ರಣ ಕಣ್ಮುಂದೆ ಬರುತ್ತದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಯ ಪಾತ್ರ ಅತ್ಯಂತ ದೊಡ್ಡದು. ಶಾಲೆಯು ಪ್ರತಿ ವಿದ್ಯಾರ್ಥಿಯ ಬದುಕನ್ನು ರೂಪಿಸುವ ಸುಂದರವಾದ ಸ್ಥಳವಾಗಿದೆ. ಇಲ್ಲಿ ಯಾವುದೇ ರೀತಿಯ ತಾರತಮ್ಯದ ಭಾವ ಕಂಡುಬಾರದು. ಪ್ರತಿ ಮಗು ತನ್ನ ಮನೆಯಲ್ಲಿ ಜನ್ಮ ನೀಡಿದ ಹೆತ್ತವರನ್ನು ದೇವರಾಗಿ ಕಂಡರೆ, ಶಾಲೆಯಲ್ಲಿ ತನಗೆ ಜೀವನಕ್ಕೆ ಬೇಕಾದ ಅಮೂಲ್ಯವಾದ ಜ್ಞಾನ ಸಂಪತ್ತು ನೀಡುವ ಗುರುಗಳನ್ನು ದೇವರಾಗಿ ಕಾಣುವುದು. ಪ್ರಸ್ತುತ ದಿನಮಾನಗಳಲ್ಲಿ ಶಾಲೆಗಳು ಬಹಳ ಅಭಿವೃದ್ಧಿಯಾಗಿ ವಿದ್ಯಾರ್ಥಿಗಳಿಗೆ ಆಕರ್ಷಣೀಯ ತಾಣಗಳಾಗಿವೆ.

ಮಾನವನಾಗಿ ಹುಟ್ಟಿದ ನಾವು ಮನುಷ್ಯತ್ವದಿಂದ ಬದುಕುವ ಮೌಲ್ಯ ಶಿಕ್ಷಣವನ್ನು ನೀಡುವ ಕೇಂದ್ರವೇ ಶಾಲೆ. ವಿದ್ಯಾ ಮಾತೆ ಸರಸ್ವತಿಯ ನೆಲೆಬೀಡು ನಮ್ಮೂರ ಶಾಲೆ. ಪ್ರತಿ ವಿಷಯ ಕಲಿಸಲು ಒಂದೊಂದು ವಿಷಯಕ್ಕೆ ಒಬ್ಬ ಅತ್ಯುತ್ತಮ ವಿಷಯ ಪಂಡಿತರು ಇರುವ ಶಿಕ್ಷಕರು. ದೈಹಿಕವಾಗಿ ಸದೃಡರಾಗಲು ಸುಂದರವಾದ ಶಾಲಾ ಮೈದಾನ. ಮನಸ್ಸಿನ ಶಾಂತಿಗಾಗಿ ಪ್ರಾರ್ಥನಾ ಸ್ಥಳ. ಗುಪ್ತವಾಗಿ ಅಡಗಿರುವ ಕಲೆಯನ್ನು ವ್ಯಕ್ತಪಡಿಸಲು ಕಲಾಮಂದಿರದ ಭವ್ಯವೇದಿಕೆ. ಮನಶ್ಯಾಂತಿಯ ಜೊತೆಗೆ ಏಕಾಗ್ರತೆಯಿಂದ ಅಧ್ಯಯನಶೀಲರಾಗಲು ಸುಂದರ ಸ್ವಚ್ಛವಾದ ಪರಿಸರ. ಕಲಿಕೆಗೆ ಸ್ಪೂರ್ತಿ ತುಂಬಲು ಬಹಳ ಅಂದವಾದ ಕೈಬರಹದ ಗೋಡೆಗಳು. ಇವೆಲ್ಲವನ್ನೂ ನೋಡಿದಾಗ ಶಾಲೆ ಬಿಟ್ಟು ಮನೆಗೆ ಹೋಗಲು ತುಂಬಾ ಬೇಸರವಾಗುತ್ತದೆ.

ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ದೇವಸ್ಥಾನದ ಮೆಟ್ಟಿಲು ಹತ್ತುವನೋ ಇಲ್ಲವೋ ಗೊತ್ತಿಲ್ಲ, ಆದರೆ ಶಾಲೆಯ ಮೆಟ್ಟಿಲು ಮಾತ್ರ ಹತ್ತಲೇಬೇಕು. ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಮಾರ್ಗವನ್ನು ತಿಳಿಸುವ ಶಕ್ತಿ ಕೇಂದ್ರವೇ ಶಾಲೆ. ಬಿಳಿ ಹಾಳೆಯಂತಿರುವ ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ವರ್ಣಮಯ ಮಾಡಿ ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ಜ್ಞಾನದ ಆಗರವೇ ಶಾಲೆ. ಈ ಭೂಮಿಯ ಮೇಲಿರುವ ಎಲ್ಲ ಉನ್ನತ ಮಟ್ಟದ ವೃತ್ತಿಯಲ್ಲಿರುವ ವ್ಯಕ್ತಿಗಳನ್ನು ನಿರ್ಮಾಣ ಮಾಡಿದ ಜ್ಞಾನ ದೇಗುಲವೇ ಶಾಲೆ. ಪ್ರತಿ ಊರಿನಲ್ಲಿ ಏನಿರದಿದ್ದರೂ ನಡೆಯಬಹುದು ಆದರೆ ಶಾಲೆ ಇರದಿದ್ದರೆ ಅಲ್ಲಿರುವ ಜನರ ಬದುಕು ಕಷ್ಟಕರವಾಗುವುದು. ಆ ಊರು ಅನಕ್ಷರತೆಯಿಂದ ಬಳಲುವುದು. ಶೈಕ್ಷಣಿಕವಾಗಿ ಯಾವ ಮಗು ಕೂಡ ಹಿಂದೆ ಬೀಳಬಾರದು ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಪಾಲಕರು ಕೂಡ ತಮ್ಮ ಮಕ್ಕಳನ್ನು ತಮ್ಮೂರಿನ ಶಾಲೆಗೆ ನಿತ್ಯ ಕಳಿಸಿ ಅವರ ಬದುಕನ್ನು ರೂಪಿಸುವ ಕೆಲಸ ಮಾಡಲೇಬೇಕು. ಅಂದಾಗ ಮಾತ್ರ ನಾವು ಸಾಕ್ಷರತಾ ರಾಷ್ಟ್ರ ನಿರ್ಮಾಣ ಮಾಡುವುದರಲ್ಲಿ ಸಫಲರಾಗುತ್ತೇವೆ. ನಮ್ಮೂರಿನ ಶಾಲೆಯನ್ನು ಪ್ರೀತಿಸೋಣ ಅಲ್ಲಿರುವ ಗುರು- ಗುರುಮಾತೆಯರನ್ನು ಗೌರವಿಸೋಣ.

ಶಾಲೆ ಎಂದರೆ ಒಂದು ಸುಂದರ ದೇವಸ್ಥಾನ, ಅಲ್ಲಿರುವ ಗುರುಗಳೇ ದೇವರುಗಳು ಅಲ್ಲಿ ವಿದ್ಯೆ ಕಲಿಯುವ ಮಕ್ಕಳೇ ಧನ್ಯರು. ಅಕ್ಷರ ಕಲಿತು ಮುಂದೆ ದೊಡ್ಡ ಅಧಿಕಾರಿಯಾಗಿ ಮರಳಿ ಶಾಲೆಯ ಕಡೆಗೆ ಬಂದು ಕಲಿತ ಶಾಲೆಯು ನಮಗೆ ಅನ್ನ ಅಕ್ಷರ ನೀಡಿದೆ. ಆ ಶಾಲೆಗಾಗಿ ನಾವು ಏನನ್ನಾದರೂ ಕೊಡೋಣ ಎಂಬ ಸಮಾಜಮುಖಿ ಭಾವನೆ ನಮ್ಮೆಲ್ಲರಲ್ಲೂ ಮೂಡಲಿ. ಶಾಲಾ ಅಭಿವೃದ್ಧಿಗೆ ನಮ್ಮದು ಒಂದು ಅಳಿಲು ಸೇವೆ ಸದಾ ಇರಲಿ. ಕಲಿತ ಶಾಲೆಯನ್ನು ಹಾಗೂ ಅಕ್ಷರ ನೀಡಿದ ಗುರುಗಳನ್ನು ಎಂದೆಂದಿಗೂ ಮರೆಯಬಾರದು . ನಮ್ಮ ಶಾಲೆಯ ಮೇಲೆ ನಮಗೆ ಅಭಿಮಾನವಿರಲಿ.

ಶಾಲೆಯು ವಿದ್ಯೆಧಾರೆಯೆರೆವ ದೇವಾಲಯ. ತಾಯಿ ನುಡಿಯ ಜೊತೆಗೆ ಇತರ ನುಡಿಗಳಿಗೆ ನಮನ ಈ ನುಡಿಗಳ ಮುಖಾಂತರ ಗಣಿತ, ವಿಜ್ಞಾನ, ಇತಿಹಾಸಗಳ ನಮನ ಅಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಮ್ಮದೇ ದರ್ಬಾರು. ವಿಷಯಗಳ ಜೊತೆಗೆ ಶಿಕ್ಷಕರೇ ಇವುಗಳಿಗೆ ಗುರು ಇದು ಬರೀ ಶಾಲೆಯಲ್ಲ ಸಂಬಂಧಗಳ ನೆಲೆ ಜೊತೆಗೆ ಕೊಂಡೊಯ್ಯುವೆವು ಶಿಕ್ಷಕರಿಂದ ಪಡೆದ ಸ್ಪೂರ್ತಿಯ ಸೆಲೆ ಒಟ್ಟಿನಲ್ಲಿ ಇದು ನನ್ನ ಹೆಮ್ಮೆಯ ಶಾಲೆ.

ಶ್ರೀ ಮುತ್ತು. ಯ. ವಡ್ಡರ
ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಮಳಗಾವಿ
ಬಾಗಲಕೋಟೆ
9845568484

Related post

Leave a Reply

Your email address will not be published. Required fields are marked *