“ಅಕ್ಷರ ಸಿಂಗಾರೋತ್ಸವ” ವರ್ಣಮಾಲೆಯ ಕಲಾಕೃತಿಗಳು

“ಅಕ್ಷರ ಸಿಂಗಾರೋತ್ಸವ” ವರ್ಣಮಾಲೆಯ ಕಲಾಕೃತಿಗಳು

ಪ್ರದರ್ಶನ : ಅಕ್ಷರ ಸಿಂಗಾರೋತ್ಸವ
ಸ್ಥಳ : ಆರ್ಟ್ ಗ್ಯಾಲರಿ, ಯುವಪಥ ರಸ್ತೆ,
ಜಯನಗರ ಬೆಂಗಳೂರು
ದಿನಾಂಕ : ನವೆಂಬರ್ 30 ರ ವರೆಗೂ

ಕನ್ನಡವನ್ನು ಪ್ರೀತಿಸಲು ಸಾವಿರ ಕಾರಣಗಳಿವೆ!
ಅದರಲ್ಲೊಂದು ಪ್ರಮುಖವಾದದ್ದು ಸುಂದರ ಬರವಣಿಗೆ! ಕನ್ನಡದಷ್ಟು ಸುಂದರವಾಗಿ ಬರೆಯಲು ಬೇರೆ ಬಾಷೆಯೇ ಇಲ್ಲವೇನೋ ಅನ್ನುವಷ್ಟು ಅಭಿಮಾನ!

ಬೆಂಗಳೂರಿನ ಜಯನಗರದ ಯುವಪಥ ರಸ್ತೆಯಲ್ಲಿರುವ ಆರ್ಟ್ ಗ್ಯಾಲರಿಯಲ್ಲಿ “ಅಕ್ಷರ ಸಿಂಗಾರೋತ್ಸವ” ದ ಪ್ರದರ್ಶನ ನೆಡೆಯುತ್ತಿದೆ. ಕನ್ನಡ ನಾಡು ನುಡಿ, ಇತಿಹಾಸ,ಪರಂಪರೆ, ಕಾವ್ಯ , ಸಾಹಿತ್ಯದೊಂದಿಗೆ ಕನ್ನಡ ಅಕ್ಷರಮಾಲೆಯನ್ನೇ ಕಲಾಕೃತಿಗಳಾಗಿ ಬಿಂಬಿಸುವ ದಾಖಲಿಸುವ ಮತ್ತು ಕನ್ನಡ ಮನಸ್ಸನ್ನು ಸೆಳೆಯುವ ಪ್ರಯತ್ನ ನೆಡೆದಿದೆ. ಇಲ್ಲಿನ ಪ್ರದರ್ಶನದಲ್ಲಿ ಅಕ್ಷರಗಳು ವಿವಿಧ ಕೋನಗಳಲ್ಲಿ ಕನ್ನಡದ ಮಹನೀಯರ ಸಾಲುಗಳನ್ನು ಹೊತ್ತು ನಲಿದಾಡುವುದನ್ನು ನೋಡುವುದೇ ಒಂದು ಹಬ್ಬ. ನಮ್ಮ ಡಿ. ವಿ. ಜಿ. ಯವರ ಕಗ್ಗದ ಸಾಲುಗಳು, ಸರ್ವಜ್ಞನ ವಚನದ ಸಾಲುಗಳು, ತೇಜಸ್ವಿ ಕೋಟ್ಸ್ ಗಳು ಇನ್ನೂ ಮುಂತಾದ ಮಹನೀಯರ ಸಾಲುಗಳು ಚಿತ್ರಕಲೆಯಲ್ಲಿ ಮೂಡಿಬಂದಿರುವುದು ಒಂದು ವಿಶಿಷ್ಟವಾದ ಕಲೆ ಮತ್ತು ವಿಭಿನ್ನ ಪ್ರದರ್ಶನ.

ಇಲ್ಲಿನ ಪ್ರದರ್ಶನದಲ್ಲಿ ಐವರು ಲಿಪಿಕಾರರ ಕೈಚಳಕ ನೋಡುಗರನ್ನು ಸೆಳೆಯುತ್ತಿದೆ. ಲಿಪಿಕಾರರಲ್ಲಿ ಒಬ್ಬರಾದ ಸುರೇಶ್ ವಾಘ್ಮೋರೆಯ ಪರಿಕಲ್ಪನೆಯಲ್ಲಿ ಆಯೋಜಿಸಲ್ಪಟ್ಟಿರುವ ಈ ಪ್ರದರ್ಶನವು ನವೆಂಬರ್ 30 ರವರೆಗೂ ನೋಡುಗರಿಗೆ ಲಭ್ಯವಿದೆ. ಸುರೇಶ ವಾಘ್ಮೋರೆ ಯವರ ಜೊತೆ ಯುವ ಕಲಾವಿದರಾದ ಶ್ರೀ ಅನಿಮಿಶ ನಾಗನೂರು, ಶ್ರೀ ಜಿ. ಹರಿಕುಮಾರ್, ಶ್ರೀ ಮೋಹನ ಕುಮಾರ ಈರಪ್ಪ, ಮತ್ತು ಶ್ರೀ ಟಿ.ಬಿ. ಕೋಡಿಹಳ್ಳಿ ಈ ಪ್ರದರ್ಶನಕ್ಕೆ ಕೈ ಜೋಡಿಸಿದ್ದು ಎಲ್ಲರ ಕಲಾಕೃತಿಗಳು ನೋಡಲು ಲಭ್ಯವಿದೆ.

ಸುರೇಶ್ ವಾಘ್ಮೋರೆ 2019 ರಲ್ಲಿ ಸಿಂಗಾಪುರಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿ ಭಾರತದ ಎಲ್ಲಾ ಭಾಷೆಗಳ ಪ್ರದರ್ಶನ ನೆಡೆದಿತ್ತು ಆಗ ಸುರೇಶ ರವರು ತಾವು ಸಹ ಭಾಗವಹಿಸಿ ಡಿ. ವಿ. ಜಿ. ಯವರ ಕಗ್ಗದ ಸಾಲುಗಳನ್ನು ಕ್ಯಾಲಿಗ್ರಫಿ ಮೂಲಕ ಪ್ರದರ್ಶಿಸಿದ್ದರು ಮತ್ತು ಅಲ್ಲಿ ಭಾಗವಹಿಸಿದ್ದ ಹಲವು ಅಂತರರಾಷ್ಟ್ರೀಯ ಲಿಪಿಕಾರರ ಸಂಪರ್ಕ ಬೆಳೆದು ಇವರ ಪ್ರದರ್ಶನಕ್ಕೆ ಅವರುಗಳಿಂದ ಮೆಚ್ಚುಗೆ ಗಳಿಸಿದ್ದರು. ಅದರ ಸ್ಪೂರ್ತಿಯಾಗಿ ತಮ್ಮ ಜೊತೆ ಇನ್ನೂ ನಾಲ್ವರು ಲಿಪಿಕಾರರ ಸಹಕಾರದಿಂದ ಈ ಅಕ್ಷರ ಸಿಂಗರೋತ್ಸವದ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಪ್ರದರ್ಶನದ ಒಳ ಹೊಕ್ಕರೆ ಅಕ್ಷರ ಪ್ರಪಂಚದಲ್ಲಿ ಕಳೆದು ಹೋಗುವಿರಿ! ಸುಂದರ ಕ್ಯಾಲಿಗ್ರಪಿ ನಿಮ್ಮನ್ನು ಕಾಡದೆ ಬಿಡದು! ಒಂದೊಂದೂ ವಿಭಿನ್ನ, ವಿಚಿತ್ರ-ಚಿತ್ರ, ಸುಂದರ! ಇಷ್ಟೊಂದು ಸುಂದರವಾಗಿ ಬರೆಯುವ ಸಾಧ್ಯತೆಯೇ ನಿಮ್ಮನ್ನು ಮೂಕರನ್ನಾಗಿಸುತ್ತೆ.

ಕನ್ನಡ ಲಿಪಿಗಳ ಮೂಲಕ ಕನ್ನಡದ ಮಹನೀಯರ ಸಾಲುಗಳನ್ನು ಹೊತ್ತು ಕಲಾಕೃತಿಗಳ ಮೂಲಕ ನಲಿದಾಡುತ್ತಿರುವ ಲಿಪಿಗಳ ಈ ವಿಭಿನ್ನ ಪ್ರದರ್ಶನವು ಯಶಸ್ವಿಯಾಗಲಿ ಎಂದು ಹಾರೈಸುವ….

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *