“ಅಜ್ಜ ನೆಟ್ಟ ಹಲಸಿನ ಮರ” – ಕೃತಿ ವಿಮರ್ಶೆ – ಅನಂತ್ ಕುಣಿಗಲ್

ಲೇಖಕರ ಪರಿಚಯ: ಸತೀಶ್ ಶೆಟ್ಟಿ ವಕ್ವಾಡಿಯವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ಬೆಂಗಳೂರು ಖಾಸಗಿ ಕಂಪನಿಯೊಂದರಲ್ಲಿ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿರುವ ಇವರು ಕಾಲೇಜು ದೆಸೆಯಿಂದಲೇ ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಂಡವರು. ಸಣ್ಣಕಥೆ ಮತ್ತು ಕ್ರೀಡಾ ಲೇಖನಗಳು ಇವರ ಇಷ್ಟದ ಪ್ರಕಾರಗಳು.

ಸತೀಶ್ ಶೆಟ್ಟಿ ವಕ್ವಾಡಿ

ಇವರ ಅನೇಕ ಕಥೆ ಮತ್ತು ಕ್ರೀಡಾ ಲೇಖನ ಹಾಗು ಅಂಕಣಗಳು ಮಂಗಳೂರು ಆಕಾಶವಾಣಿ ಹಾಗು ಕನ್ನಡ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಕಾರ್ಯಕ್ರಮ ನಿರೂಪಣೆಯ ಇವರ ಇನ್ನೊಂದು ಇಷ್ಟದ ಕ್ಷೇತ್ರ. “ಅಜ್ಜ ನೆಟ್ಟ ಹಲಸಿನ ಮರ” ಸತೀಶ್ ಶೆಟ್ಟಿ ವಕ್ವಾಡಿಯವರ ಮೊದಲ ಪ್ರಕಟಿತ ಕೃತಿ.

ಈಗಾಗಲೇ ಎರಡು ಮುದ್ರಣ ಕಂಡಿರುವ ಲೇಖಕ ಸತೀಶ್ ಶೆಟ್ಟಿ ವಕ್ವಾಡಿ ಅವರ ಚೊಚ್ಚಲ ಕಥಾಸಂಕಲನ ‘ಅಜ್ಜ ನೆಟ್ಟ ಹಲಸಿನಮರ’ ಕೃತಿಯು ಎರಡೆರಡು ಬಾರಿ ಓದಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಅಷ್ಟು ಸ್ವಾರಸ್ಯ ತುಂಬಿದ ಕಥೆಗಳ ಗುಚ್ಚ ಇದಾಗಿದೆ. ಕಥೆಗಳಲ್ಲಿನ ಹೊಸತನದ ನಿರೂಪಣಾ ಶೈಲಿ ಓದುಗರಲ್ಲಿ ಬೆರಗು ಮೂಡಿಸುತ್ತದೆ.

ಒಟ್ಟು ಹತ್ತು ಕಥೆಗಳಿದ್ದು, ಎಲ್ಲಾ ಕಥೆಗಳು ಸಂಬಂಧಗಳ ಸುತ್ತಲೇ ಗಿರಕಿಹೊಡೆಯುವುದರಿಂದ ಸರಣಿ ಕಥೆಗಳಾಗಿಯೂ ಓದಬಹುದು. ಸಂಕಲನ ಮುಗಿದ ಮೇಲೂ ನರಸಿಂಹ, ಪ್ರತಾಪ, ಸುರೇಶ, ಭಟ್ರು, ನವೀನ ಎಲ್ಲರೂ ನಮ್ಮೊಳಗೆ ಜೀವಂತವಾಗಿ ಉಳಿಯುತ್ತಾರೆ. ಕಾರಣ ಲೇಖಕರ ಪ್ರಾದೇಶಿಕತೆಯ ಸೊಗಡು ಇಲ್ಲಿ ಭಿತ್ತರಿಸಿದೆ. ಲೇಖಕರು ಕರಾವಳಿ, ಕುಂದಾಪುರ ಮೂಲದವರಾಗಿದ್ದು, ಇಲ್ಲಿನ ಕಥೆಗಳೆಲ್ಲ ಅಲ್ಲಿಂದಲೇ ಜನ್ಮ ತಾಳಿವೆ.

ಎಲ್ಲ ಕಥೆಗಳಲ್ಲೂ ಸಾಮಾನ್ಯವಾಗಿ ಕಂಡುಬರುವ ಮಳೆ, ಬಿಸಿಲು, ಕಾರ್ಮೋಡಗಳು ಭಾವಜೀವಿಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯ ಪಡೆದಿವೆ. ಕಥೆಗಳ ಆರಂಭದಿನದ ಹಿಡಿದು ಅಂತ್ಯದವರೆಗೂ ಈ ಅಂಶಗಳು ಯಥೇಚ್ಚವಾಗಿಯೇ ಕಾಣಸಿಗುತ್ತವೆ. ತಮ್ಮದೇ ಭಾಷೆಯಲ್ಲಿ, ಸರಳ ನಿರೂಪಣೆಯ ಮೂಲಕ ಇಲ್ಲಿನ ಕತೆಗಳು ಗಮನಸೆಳೆಯುತ್ತವೆ.

ಮೊದಲನೆ ಕಥೆಯಲ್ಲಿ ಅಜ್ಜ ನೆಟ್ಟ ಹಲಸಿನ ಮರವನ್ನು ತಮ್ಮ ವಂಶದ ಗುರುತಿಗಾಗಿ, ತನ್ನ ತಾತನ ನೆನಪಿಗಾಗಿ ಉಳಿಸಿಕೊಳ್ಳಬೇಕಾದ ಭಾವತೀವ್ರತೆ ಒಂದೆಡೆಯಾದರೆ, ಸರ್ಕಾರ ಹಿಂಪಡೆಯದ ಆದೇಶ ಒಂದು ಕಡೆ. ನಾವು, ನಮ್ಮ ಸಮಾಜ ಮುಂದುವರೆದಂತೆ, ತಂತ್ರಜ್ಞಾನದ ಬಳಸುವಿಕೆ ಹೆಚ್ಚಾದಂತೆ, ಜನಸಂಖ್ಯಾ ದಟ್ಟಣೆಯಿಂದಾಗಿ ನಮ್ಮೊಳಗಿನ ಭಾವಕ್ಕೂ ನಾವು ಸ್ಪಂದಿಸದಂತ ಸ್ಥಿತಿಗೆ ತಲುಪಿರುವುದು ಈ ಕಥೆಯ ಮೂಲಕ ಸ್ಪಷ್ಟವಾಗಿ ನಿರೂಪಿತವಾಗುತ್ತದೆ.

ನಮ್ಮ ಸ್ವಾರ್ಥಕ್ಕಾಗಿ, ನಮ್ಮ ಸಂಕಟ ಅರಿಯದ ದೇವರಿಗೂ ಕೆಲವೊಮ್ಮೆ ಮೋಸ ಮಾಡಬೇಕಾಗಿ ಬರುತ್ತದೆ. ಎಲ್ಲದಕೂ ಕಾರಣನಾದ ದೇವರು ನಾವು ಮಾಡುವ ಕೆಟ್ಟ ಕೆಲಸಗಳಿಗೂ ಕಾರಣನಾಗಿರುತ್ತಾನೆ ಅಲ್ಲವೇ?? ನಮ್ಮ ಶ್ರೇಯಸ್ಸು, ನಾವು ಮಾಡುವ ಒಳ್ಳೆಯ ಕೆಲಸಗಳು ದೇವರ ದಯೆ ಎನ್ನುವುದಾದರೆ, ನಾವು ಮಾಡುವ ಅನುಚಿತ ಕೆಲಸಗಳೂ ಕೂಡ ದೇವರ ಕೆಲಸ ಅಲ್ಲವೇ?? ನಿಜಕ್ಕೂ ದೇವರ ಕೆಲಸ ಕಥೆಯ ತಾತ್ವಿಕತೆ ನನ್ನನ್ನು ಬಹುವಾಗಿ ಸೆಳೆಯಿತು.

ನೇಣುಗಂಬ ಕಥೆಯಲ್ಲಿ, ಅಪರಾಧಿಯಲ್ಲದ ಮನಸ್ಸಿನ ಒಳ ಮಾತುಗಳು ನಮ್ಮಲ್ಲರಿಗೂ ಇದ್ದಿದ್ದೇ.. ನಾವು ತಪ್ಪು ಮಾಡಿಲ್ಲವಾದರೂ.. ನಮ್ಮ ನಿರಪರಾಧವನ್ನು ಸಾಭೀತುಪಡಿಸಿಕೊಳ್ಳುವಲ್ಲಿ ಅನೇಕ ಬಾರಿ ಸೋತಿರುತ್ತೇವೆ. ಕಾರಣ ಸಮಯ, ಸಂದರ್ಭಗಳು ನಮ್ಮ ಕಡೆಗೆ ಇರುವುದಿಲ್ಲ. ಅಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಮ್ಮೊಳಗಿನ ನಾವುಗಳು ಏನೇನು ಮಾತಾಡಿಕೊಳ್ಳುತ್ತೇವೆಂದು ಈ ಕಥೆ ವಿವರವಾಗಿ ತಿಳಿಸುತ್ತದೆ.

ಬಹಳ ಚಿಕ್ಕ ಕಥೆ, ನನ್ನನ್ನು ಹೆಚ್ಚು ಕಾಡಿದ ಕಥೆ ‘ಶಾಪ’.
“ತಿನ್ನಲು ತುತ್ತು ಇಲ್ಲದವರು ಸಿಕ್ಕ ತುತ್ತನ್ನು ಬಿಸಾಡುವುದರಿಂದ ಅವರಿಗೆ ದೇವರು ಶಾಪ ಕೊಡುತ್ತಾನೆ. ಅದೇ ದೇವರನ್ನು ಪೂಜಿಸುವವರು ತುತ್ತನ್ನು ವ್ಯರ್ಥ ಮಾಡಿದರೂ ಅವರಿಗೆ ದೇವರು ಶಾಪ ಕೊಡುವುದಿಲ್ಲ. ಯಾಕೆಂದರೆ ಅವರಿಗೆ ಶಾಪ ಕೊಟ್ಟರೆ ದೇವರನ್ನು ಪೂಜೆ ಮಾಡುವವರ್ಯಾರು? ಎಂಬ ಭಯ ದೇವರಿಗೂ ಇದ್ದದ್ದೇ..”
ಎಂಥಾ ಮಾತು ನೋಡಿ ಇದು? ಮುಗ್ಧ ಮನಸ್ಸುಗಳ ಮಾತುಕತೆಯಲ್ಲಿ ಮೂಡಿಬಂದ ಈ ಮಾತು ಇಡೀ ಕಥೆಯ ತಿರುವು.

ಹೇಳಬೇಕಾದ್ದನ್ನೆಲ್ಲ ಗಾಳಿ, ಮಳೆ, ಬಿಸಿಲು, ದೇವರುಗಳ ಮೂಲಕ ಹೇಳಿ, ಲೇಖಕರು ತಮ್ಮ ಆಶಯಗಳಿಗೆ ಧಕ್ಕೆ ಬಾರದಂತೆ ಪ್ರತೀ ಕಥೆಯನ್ನು ಹೆಣೆದಿದ್ದಾರೆ. ಎಲ್ಲ ಕಥೆಯ ಅಂತ್ಯ ನನಗೆ ಬಹಳ ಮೆಚ್ಚುಗೆಯಾಯಿತು. ಅಂತ್ಯ ಎನಿಸಿಕೊಳ್ಳದ  ಓದುಗನ ಮನಸ್ಸನ್ನು ಕದಲಿಸುವ ಈ ಅಂತ್ಯಗಳು ನಿಜಕ್ಕೂ ಕಥೆಯ ಆರಂಭವಾಗಿ ಪರಿಣಮಿಸುತ್ತವೆ. ಒಟ್ಟಾರೆ ಇತ್ತೀಚೆಗೆ ಓದಿದ ಸಂಕಲನಗಳಲ್ಲಿ ಒತ್ತು ಕೊಟ್ಟು ಓದಿದ ಸಂಕಲನ ‘ಅಜ್ಜ ನೆಟ್ಟ ಹಲಸಿನಮರ’. ಈ ಕೃತಿ ಇನ್ನಷ್ಟು ಮರುಮುದ್ರಣ ಕಾಣಲಿ. ಸ್ವಲ್ಪ ಅಕ್ಷರ ದೋಷಗಳ ಕಡೆ ಇನ್ನೂ ಗಮನಹರಿಸಬೇಕಾಗಿದೆ. ಪದೇ ಪದೇ ಬಳಕೆಯಾಗುವ ರೂಪಕಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕಾಗಿದೆ.

ಲೇಖಕರ ಮುಂದಿನ ಕೃತಿಗಳಿಗೆ ಶುಭವಾಗಲಿ…

ಅನಂತ ಕುಣಿಗಲ್

ರಂಗಕಲಾವಿದ & ಬರಹಗಾರ

Related post

1 Comment

  • ನಿಮ್ಮ ವಿಮರ್ಶೆ 👌👌👌. ಮತೊಮ್ಮೆ ಕಥಾ ಹಂದರ ಹೊಕ್ಕಿ ಬಂದಂತೆ 🎉🎉

Leave a Reply

Your email address will not be published. Required fields are marked *