ಅಟೆನ್ಷನ್ ಸೀಕಿಂಗ್‌

ಅಟೆನ್ಷನ್ ಸೀಕಿಂಗ್‌

ಎಲ್ಲೆಲ್ಲೂ ಜನ, ನೂಕು ನುಗ್ಗಲು. ಕಿವುಡುಗಚ್ಚುವ ಕರತಾಡನ. ಕ್ಲಿಕ್‌-ಕ್ಲಿಕ್‌ ಕ್ಯಾಮೆರಾದ ಫ್ಲಾಷ್‌ನಲ್ಲಿ ಅವನ ಮುಖ
ಮತ್ತಷ್ಟು ಹೊಳೆಯುತ್ತಿತ್ತು. ಇಂಥ ಒಂದು ದಿನಕ್ಕಾಗಿಯೇ ಕಾದಂತಿತ್ತು ಇಪ್ಪತ್ತೆಂಟರ ವಯಸ್ಸಿನ ಪ್ರಣವ್‌ಗೆ. ಅವನ
ಆಟೋಗ್ರಾಫ್‌ಗಾಗಿ ಯುವತಿಯರ ದಂಡೇ ಮುಗಿಬಿದ್ದಿತ್ತು. ತನ್ನ ಯಶಸ್ಸಿಗೆ ತಾನೇ ತಲೆದೂಗಿದ. ಬರಹ ಲೋಕದ
ಒಡೆಯನಾಗಿದ್ದ. ಅವನ ರೋಮಾನ್ಸ್‌ ಕಥೆ-ನಾವೆಲ್‌ಗಳಿಗಾಗಿ ಯುವಜನತೆ ಕಾತುರತೆಯಿಂದ ಕಾಯುತ್ತಿದ್ದರು.
ಹುಡುಗಿಯರ ಹುಚ್ಚು ಅತಿರೇಕವಾಗಿ ಅವನ ರೂಮಿನ ತುಂಬಾ ರಕ್ತಾಕ್ಷರದ ಪ್ರೇಮಪತ್ರಗಳು ಹಾರಾಡುತ್ತಿದ್ದವು.
ಅವುಗಳನ್ನೆಲ್ಲಾ ತನ್ನೆದೆಯ ಮೇಲೆ ಹಾಕಿಕೊಂಡು ಅಮಲಿನಲ್ಲಿರುತ್ತಿದ್ದ. ಐ ಲವ್‌ ಯು.., ಪ್ಲೀಸ್‌ ಮ್ಯಾರಿ ಮೀ… ಎಂಬೆಲ್ಲಾ ಅಕ್ಷರಗಳು ಅವನ ಎದೆಗಂಟದಿದ್ದರೂ ತನಗಾಗಿ ಇವರೆಲ್ಲಾ ಹುಚ್ಚೆದ್ದಿದ್ದಾರಲ್ಲ ಎಂಬ ಒಂದು ಭಾವನೆಯೇ ಅವನನ್ನು ಮತ್ತೇರಿಸುತ್ತಿತ್ತು.

ಚಿಕ್ಕಂದಿನಿಂದಲೂ ಪ್ರಣವ್‌ಗೆ ಅಟೆನ್ಷನ್ ಸೀಕಿಂಗ್‌ ಗುಣವಿದ್ದಿತು. ಅದಕ್ಕೆ ಕಾರಣ ಹತ್ತಾರು. ತಂದೆ ಸಿಕ್ಕಾಪಟ್ಟೆ
ವರ್ಕೋಹಾಲಿಕ್‌. ತಂದೆ-ತಾಯಿಯ ಮಧ್ಯೆ ಭಿನ್ನಾಭಿಪ್ರಾಯ ಬಂದು ಇಬ್ಬರೂ ಡೈವೋರ್ಸ್‌ ಆಗಿದ್ದರು. ಒಟ್ಟಿಗೆ ಸಂಸಾರ ನಡೆಸಲೂ ಕಷ್ಟವಾಗಿ, ಒಂಟಿ ಬಾಳು ಅಸಹನೀಯವಾಗಿ ಮಗನನ್ನೂ ನೋಡಿಕೊಳ್ಳಲಾರದೆ ಅವನ ತಾಯಿ ಖಿನ್ನತೆಗೊಳಗಾಗಿದ್ದಳು. ಹಾಗಾಗಿ 5 ವರ್ಷದ ಪ್ರಣವ್‌ ನ ಸಂಪೂರ್ಣ ಬದುಕು ಬೋರ್ಡಿಂಗ್‌ ಸ್ಕೂಲು, ನಂತರ ಹಾಸ್ಟೆಲ್ಲಲ್ಲೇ ಕಳೆದುಹೋಯಿತು. ಅಪ್ಪ ಅಮ್ಮನ ಪ್ರೀತಿ ಇಲ್ಲದ ನತದೃಷ್ಟ ಪ್ರಣವ್‌ಗೆ ಒಂಟಿತನದಿಂದಾಗಿ ಸೆಂಟರ್‌ ಆಫ್‌ ಅಟ್ರಾಕ್ಷನ್‌ಗಾಗಿ ಹಾತೊರೆಯುತ್ತಿದ್ದ.

ಐಟಿ ಫರ್ಮ್‌ ನಲ್ಲಿ ಒಳ್ಳೆಯ ಉದ್ಯೋಗ, ಕೈ ತುಂಬಾ ಸಂಬಳ. ಆದರೆ ಅದೇ ಯಾಂತ್ರಿಕ ಬದುಕಿನಿಂದ ಬೇಸತ್ತಿದ್ದ
ಪ್ರಣವ್‌. ಇವನು ಕೆಲಸ ಮಾಡುವ ಫರ್ಮ್‌ನಲ್ಲಿ ಎರಡನೇ ದರ್ಜೆ ಕೆಲಸದಲ್ಲಿದ್ದ ಮಧುಕರನಿಗೆ ತುರ್ತಾಗಿ ಹಣದ
ಅವಶ್ಯಕತೆ ಬೇಕಾಯಿತು. ಅವನು ಶಾಲೆ, ಕಾಲೇಜಿನಲ್ಲಿ ಓದುವಾಗ ಕಥೆ-ಕವನ ಅಂತೆಲ್ಲಾ ಬರೆದು ಬಹುಮಾನ
ಗಳಿಸುತ್ತಿದ್ದ. ಆದರೆ ಅದು ಅವನಿಗೆ ಬದುಕು ಕಟ್ಟಿಕೊಟ್ಟಿರಲಿಲ್ಲ. ಮಧುಕರನ ತಾಯಿ ಕ್ಯಾನ್ಸರ್‌ನಿಂದ ನರಳುತ್ತಿದ್ದು
ಚಿಕಿತ್ಸೆಗಾಗಿ ಸಾಕಷ್ಟು ಹಣ ಬೇಕಾಗಿತ್ತು. ಮಧುಕರನ ಹಿನ್ನೆಲೆ ಹಾಗೂ ಅವನ ಇಂದಿನ ಸ್ಥಿತಿ ಪ್ರಣವ್‌ಗೆ ಹೇಗೋ
ಗೊತ್ತಾಗಿತ್ತು. ದಿಕ್ಕೇ ತೋಚದಾಗಿದ್ದ ಮಧುಕರನಿಗೆ ಆಪದ್ಭಾಂದವನಾಗಿದ್ದು ಪ್ರಣವ್‌.

“ನಿನ್ನ ತಾಯಿ ನನ್ನ ತಾಯಿಯಿದ್ದಂತೆ, ಯೋಚಿಸಬೇಡ. ಅವರ ಚಿಕಿತ್ಸೆಗೆ ಪ್ರತೀ ತಿಂಗಳೂ ನಾನೇ ಹಣ ಕೊಡುತ್ತೇನೆ”
ಎಂದ ಪ್ರಣವ್‌.

ಕಣ್ಣುಂಬಿಕೊಂಡ ಮಧುಕರ, “ಸರ್‌, ನಿಮ್ಮ ಸಹಾಯವನ್ನು ನಾ ಎಂದಿಗೂ ಮರೆಯಲಾರೆ, ನಿಮ್ಮ ಹಣವನ್ನು ನಿಧಾನಕ್ಕೆ ತೀರಿಸುತ್ತೇನೆ” ಎನ್ನುತ್ತಾ ಪ್ರಣವ್‌ನ ಕಾಲಿಗೆರಗಿದ.

“ನೋ… ನೋ… ಹಣ ಹಿಂತಿರುಗಿಸುವುದೆಲ್ಲ ಏನೂ ಬೇಡ. ನನಗಾಗಿ ನೀನು ಕಥೆಗಳನ್ನು ಬರೆದುಕೊಡಬೇಕು. ಆದರೆ
ಅವೆಲ್ಲಾ ನೀನೇ ಬರೆದದ್ದು ಎಂದು ಎಲ್ಲೂ ಬಾಯಿ ಬಿಡುವ ಹಾಗಿಲ್ಲ”

ಮಧುಕರ ಏನೂ ಅರ್ಥವಾಗದವನಂತೆ ಪಿಳಿಪಿಳಿ ನೋಡಿದ.

“ಹೌದು, ನಿನ್ನ ಕಥೆಗಳೆಲ್ಲ ನನ್ನವು, ನನ್ನ ಹಣ ನಿನಗೆ” ಎನ್ನುತ್ತಾ ಕಣ್ಣು ಹೊಡೆದು ಮೀಸೆಯಡಿಯಲ್ಲೇ ನಕ್ಕ ಪ್ರಣವ್‌.

ಅವ್ವ ಪುಸ್ತಕಾಲಯ ಹಾಗು ಸಾಹಿತ್ಯಮೈತ್ರಿ ಆಯೋಜಿಸಿದ್ದ ನ್ಯಾನೋ ಕಥಾ ಸ್ಪರ್ಧೆಗೆ ಬಂದ ಕಥೆ

ಧಾರಿಣಿ ಮಾಯಾ

Related post

Leave a Reply

Your email address will not be published. Required fields are marked *