ಅತಿಕ್ರಿಯಾಶೀಲ ಮೂತ್ರಕೋಶ
ಅತಿಕ್ರಿಯಾಶೀಲ ಮೂತ್ರಕೋಶ (Overactive urinary bladder) ಎಂಬುದು ಹಲವಾರು ರೋಗಲಕ್ಷಣಗಳ ಸಮೂಹ ಬೇನೆಯಾಗಿದ್ದು, ಒಬ್ಬ ವ್ಯಕ್ತಿ ಎಷ್ಟು ಸಲ ಮೂತ್ರ ಮಾಡುವನು ಮತ್ತು ಮೂತ್ರ ವಿಸರ್ಜನೆಯ ಆತುರತೆ (urgency) ಆತನಿಗೆ ಎಷ್ಟಿರುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣಗಳು, ಹೊಟ್ಟೆಯ ಮೇಲೆ ಬಿದ್ದ ಪೆಟ್ಟಿಂದ ಹಿಡಿದು, ಸೋಂಕು, ನರಗಳ ಹಾನಿ, ಕೆಲವು ಔಷಧಿ ಮತ್ತು ದ್ರವಗಳು. ನಡವಳಿಕೆಯ ಬದಲಾವಣೆಯಿಂದ ಆರಂಭಿಸಿ, ಔಷಧೋಪಚಾರ ಹಾಗು ನರಗಳ ಉತ್ತೇಜಕಗಳು ಮುಂತಾದವು ಈ ರೋಗದ ಚಿಕಿತ್ಸೆಗಳು.
ಅತಿಕ್ರಿಯಾಶೀಲ ಮೂತ್ರಕೋಶ ಅಥವಾ (ಅತಿ ಚಟುವಟಿಕೆಯ ಮೂತ್ರಕೋಶ) ಕೆಲವು ಸೋಂಕುಗಳ ಒಕ್ಕೂಟವಾಗಿದ್ದು, ಇದರಿಂದ ಒಬ್ಬ ವ್ಯಕ್ತಿಯು ಅತಿಯಾಗಿ ಆಗಾಗ್ಗೆ ಮೂತ್ರ ಮಾಡುವುದಲ್ಲದೆ, ತಡೆಯಲಾರದ ಮೂತ್ರದ ಒತ್ತಡ, ಮತ್ತು ಹತೋಟಿ ಇಲ್ಲದೆ ಮೂತ್ರ ಸೋರಿಕೆಯಾಗುವುದು ಹಾಗೂ ರಾತ್ರಿಯ ಹೊತ್ತು ಹೆಚ್ಚಾಗಿ ಮೂತ್ರಕ್ಕೆ ಏಳುವುದು ಮುಂತಾದ ಬಾಧೆ ಪಡಬೇಕಾಗಬಹುದು.
ಅತಿಕ್ರಿಯಾಶೀಲ ಮೂತ್ರಕೋಶದ ತೊಂದರೆ 65 ವರ್ಷ ಮತ್ತು ಅದಕ್ಕೂ ಹೆಚ್ಚು ವಯಸ್ಸಿನವರಲ್ಲಿ ಅಧಿಕ. ಆದರೆ ಮಹಿಳೆಯರಲ್ಲಿ ಸ್ವಲ್ಪ ಕಿರಿಯ, ಅಂದರೆ 45ರ ಆಸುಪಾಸಿನಲ್ಲೆ ಕಾಣಬಹುದು. ಅನೇಕರು ಮುಜುಗರದಿಂದ ಈ ಸಮಸ್ಯೆ ಹೇಳಿಕೊಳ್ಳದೆ ಇರಬಹುದು. ಹಾಗಾಗಿ ಒಟ್ಟಾರೆ ಎಷ್ಟು ಜನ ಈ ತೊಂದರೆಯಿಂದ ಜಗತ್ತಿನಲ್ಲಿ ಬಳಲುತ್ತಿದ್ದಾರೆ ಎಂಬುದರ ನಿಖರತೆ ಇಲ್ಲದಿರಬಹುದು. ಅಮೆರಿಕದಲ್ಲಿ ಶೇಕಡ 30 ರಷ್ಟು ಪುರಷರು ಹಾಗು ಶೇಕಡ 40 ರಷ್ಟು ಮಹಿಳೆಯರು ಸೇರಿ, ಮುನ್ನೂರು ಲಕ್ಷದ ಆಸುಪಾಸಿನಷ್ಟು ಜನ ಈ ಬಾಧೆ ಅನುಭವಿಸುವರು ಎಂದು ಅಂದಾಜು ಮಾಡಲಾಗಿದೆ. ಅತಿಕ್ರಿಯಾಶೀಲ ಮೂತ್ರಕೋಶದ ತೊಂದರೆ ಇರುವವರು ಸಾಮಾನ್ಯವಾಗಿ ಹೆಚ್ಚು ಮಾನಸಿಕ ಒತ್ತಡಕ್ಕೆ ತುತ್ತಾಗಿ, ಅವರ ಜೀವನದ ಗುಣಮಟ್ಟಕ್ಕೆ ಧಕ್ಕೆಯಾಗಬಹುದು.
ಈ ರೋಗದ ಚಿಕಿತ್ಸೆ ಪಡೆಯದಿದ್ದರೆ, ವ್ಯಕ್ತಿಯ ರೋಗಲಕ್ಷಣಗಳು ಉಲ್ಬಣವಾಗಿ, ಮೂತ್ರ ಮಾಡುವಾಗ ಹತೋಟೆಯಲ್ಲಿಡಲು ಸಹಾಯ ಮಾಡುವ ಮೂತ್ರಕೋಶದ ಸ್ನಾಯುಗಳು ದುರ್ಬಲಗೊಂಡು, ಶ್ರೋಣಿ ನೆಲದ ಅಂಗಣ/ವಸ್ತಿಕುಹರ (pelvic floor) ತೆಳ್ಳಗಾಗಬಹುದು.
ರೋಗಲಕ್ಷಣಗಳು ಮತ್ತು ಕಾರಣಗಳು: ಅತಿಕ್ರಿಯಾಶೀಲ ಮೂತ್ರಕೋಶ ಎಂಬುದು ರೋಗಲಕ್ಷಣಗಳ ಒಂದು ಸಮೂಹವನ್ನು ಸೂಚಿಸುತ್ತದೆ. ಅವುಗಳಲ್ಲಿ ಮುಖ್ಯವಾಗಿ
ಮೂತ್ರದ ಆತುರ: ಇದೊಂದು ತಡೆಯಲಾರದ ಮತ್ತು ಹಠಾತ್ತಾಗಿ ಬರುವ ಮೂತ್ರವಿಸರ್ಜನೆಯ ಅಗತ್ಯತೆ. ಇಂಥ ಆತುರತೆ ಬಂದದ್ದೆ ಆದರೆ ಬಾತ್ ರೂಮಿನತ್ತ ಅತಿ ಕಡಿಮೆ ಸಮಯದಲ್ಲಿ ಓಡಬೇಕಾಗಬಹುದು….. ಆಗಾಗ್ಗೆ ಮೂತ್ರ ಮಾಡುವುದು: ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ಮಾಡುತ್ತಿರುವುದು….. ವ್ಯಕ್ತಿಯ ಹತೋಟಿಯಿಲ್ಲದ ಒತ್ತಡದಿಂದ, ತಡೆಯಲಾಗದೆ ಬರುವ ಮೂತ್ರ ಮತ್ತು ನಿಗ್ರಹ ಇಲ್ಲದೆ ಮೂತ್ರ ಜಿನುಗುವುದು. …. ರಾತ್ರಿಯ ಹೊತ್ತು ಆಗಾಗ್ಗೆ ಮೂತ್ರ ಮಾಡಲು ಬಾತ್ ರೂಮಿಗೆ ಓಡುವುದು.
ಪ್ರಮುಖ ಕಾರಣಗಳು: ನಮ್ಮ ಮೂತ್ರಕೋಶದ ಸುತ್ತ ಇರುವ ಸ್ನಾಯುವಿನ ಹೆಸರು ಡೆಟ್ರೂಸರ್ ಮಸಲ್ (detrusor muscle) ಎಂದು. ಈ ಮಾಂಸಖಂಡದ ಮುಖ್ಯ ಕಾರ್ಯವೆಂದರೆ ಮೂತ್ರ ವಿಸರ್ಜನೆಯ ಸಮಯದಲ್ಲಿ ಸಂಕುಚಿತಗೊಂಡು (contract/ಕುಗ್ಗುವುದು) ಮೂತ್ರವನ್ನು ಹೊರನೂಕುವುದು ಮತ್ತು ಉಳಿದಂತೆ ಮೂತ್ರದ ಸಂಗ್ರಹಣೆ ಸಮಯದಲ್ಲಿ ಸಡಿಲಗೊಂಡು (relax) ಹಿಗ್ಗುವುದು. ಈ ಸ್ನಾಯುವಿಗೆ ಹಾನಿಯಾದಾಗ ಅತಿಕ್ರಿಯಾಶೀಲ ಮೂತ್ರಕೋಶದ ಸಂಭವ ಹೆಚ್ಚು. ಈ ಹಾನಿಗೆ ಕಾರಣ ಗರ್ಭಾವಸ್ಥೆ ಮತ್ತು ಹೆರಿಗೆಯ ಸಮಯಗಳಲ್ಲಿ ವಸ್ತಿಕುಹರದ (pelvic floor) ಮಾಂಸಖಂಡಗಳು ದುರ್ಬಲಗೊಂಡು ಮೂತ್ರಕೋಶವು ಜೋಲುಬಿದ್ದು ತನ್ನ ಜಾಗದಿಂದ ಸರಿಯಬಹುದು.
ನರದ ಹಾನಿ: ಕೆಲವು ಬಾರಿ ನಮ್ಮ ಶರೀರವು ಮೆದುಳಿಗೆ ಮತ್ತು ಮೂತ್ರಕೋಶಕ್ಕೆ ತಪ್ಪು ಸೂಚನೆ ರವಾನಿಸಿ, ಹೊತ್ತಲ್ಲದ ಹೊತ್ತಲ್ಲಿ ಮೂತ್ರ ಮಾಡುವ ಹಾಗೆ ಮಾಡಬಹುದು. ಕೆಲವು ವ್ಯಾಧಿಗಳಿಂದ ಹಾಗು ಪೆಟ್ಟು ಬೀಳುವುದರಿಂದ ಇಂಥ ನರದ ಹಾನಿ ಆಗಬಹುದು — ಪೆಲ್ವೀಸ್ ಅಥವ ಬೆನ್ನಿನ ಶಸ್ತ್ರಚಿಕಿತ್ಸೆಯಿಂದ, ಪಾರ್ಕಿನ್ಸನ್ ರೋಗ, ಪಾರ್ಶ್ವವಾಯು, ವಿಕಿರಣ ಚಿಕಿತ್ಸೆ, ಬೆನ್ನುಮೂಳೆಯ ಬಿಲ್ಲೆಯ ಜರುಗುವಿಕೆ (herniated disc) ಮುಂತಾದ ವ್ಯಾಧಿಗಳಿಂದ.
ಕೆಲವು ಔಷಧಿಗಳು, ಕ್ಯಾಫೀನ್ ಮತ್ತು ಮದ್ಯ, ಇವಿಷ್ಟೂ ನರಗಳನ್ನು ಚುರುಕಿಲ್ಲದ ಹಾಗೆ ಮಾಡಿ, ಮೆದುಳಿನ ಸೂಚನೆಗಳಿಗೆ ತಡೆಯಾಗುವುದರಿಂದ, ಮೂತ್ರಕೋಶ ಉಕ್ಕಿ ಹರಿಯುವಂತಾಗಬಹುದು. ಅತಿಮೂತ್ರಕ್ಕೆ ಕಾರಣವಾಗುವ ಔಷಧಗಳಿಂದ ಮತ್ತು ಕ್ಯಾಫೀನ್ ಸೇವನೆಯಿಂದ ಮೂತ್ರಕೋಶ ಬೇಗಬೇಗ ತುಂಬಿ ಜಿನುಗಬಹುದು.
ಸೋಂಕು: ಮೂತ್ರನಾಳದ ಸೋಂಕಿಂದ ಮೂತ್ರಕೋಶದ ನರಗಳು ಕೆರಳಿ, ಮೂತ್ರಕೋಶವನ್ನು ಹಿಂಡಿ, ಎಚ್ಚರಿಸದೆ ಮೂತ್ರವಾಗಬಹುದು.
ಹೆಚ್ಚು ತೂಕ: ಅತಿಯಾದ ತೂಕ ಮೂತ್ರಕೋಶದ ಮೇಲೆ ಹೆಚ್ಚು ಒತ್ತಡ ಹೇರಿ, ಮೂತ್ರದ ಜಿನುಗುವಿಕೆ ಆಗಬಹುದು.ರಜೋನಿವೃತ್ತಿ/ಮುಟ್ಟು ನಿಲ್ಲುವಿಕೆ: ಮಹಿಳೆಯರಲ್ಲಿ ಮುಟ್ಟು ನಿಂತಾಗ ಉಂಟಾಗುವ ಹಾರ್ಮೋನುಗಳ ಬದಲಾವಣೆಯಿಂದ ಮೂತ್ರದ ಆತುರ ಮತ್ತು ಸೋರುವಿಕೆ ಆಗಬಹುದು.
ರೋಗನಿರ್ಣಯ: ಮೂತ್ರನಾಳ ವ್ಯವಸ್ಥೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯ ರೋಗಗಳ ತಜ್ಞರನ್ನು ಯೂರಾಲಜಿಸ್ಟ್ ಎನ್ನುವರು. ಅತಿಕ್ರಿಯಾಶೀಲ ಮೂತ್ರಕೋಶದ ಬಾಧೆಯಿಂದ ನರಳುವವರು ಇಂಥ ಯೂರಾಲಜಿಸ್ಟ್ ವೈದ್ಯರನ್ನು ಕಾಣಬೇಕಾಗುತ್ತದೆ. ಆ ತಜ್ಞರು ಅಂಥ ವ್ಯಕ್ತಿಯ ರೋಗಲಕ್ಷಣಗಳನ್ನು ಪರಿಶೀಲಿಸಿದ ನಂತರ ಆತನ ಪೆಲ್ವಿಸ್ ಮತ್ತು ಗುದನಾಳದ (rectum) ದೈಹಿಕ ಪರೀಕ್ಷೆ ಸಹ ನಡೆಸಿ, ಕೆಲವು ಪ್ರಶ್ನೆಗಳನ್ನು ಕೇಳಬಹುದು. ವ್ಯಕ್ತಿಯು ಎಷ್ಟು ಸಮಯದಿಂದ ಈ ರೋಗಲಕ್ಷಣಗಳಿಂದ ಬಳಲುತ್ತಿರುವುದು, ಕುಟುಂಬದಲ್ಲಿ ಅತಿಕ್ರಿಯಾಶೀಲ ಮೂತ್ರಕೋಶದ ತೊಂದರೆ ಇರುವ ಇತಿಹಾಸ ಏನಾದರೂ ಇದೆಯ, ಮೆಡಿಕಲ್ ಸ್ಟೋರ್ ಮಾತ್ರೆಗಳ ಸೇವನೆ ಇದ್ದರೆ ಅವು ಯಾವುವು, ದೈನಂದಿನ ಊಟದ ವೇಳೆಯ ಬಗ್ಗೆ, ಎಂಥ ದ್ರವಗಳನ್ನು ಮತ್ತು ಯಾವಯಾವ ಹೊತ್ತಿನಲ್ಲಿ ಸೇವಿಸುವ ರೂಢಿ ಇತ್ಯಾದಿ ಪ್ರಶ್ನೆಗಳನ್ನು ಕೇಳಬಹುದು.
ಇಷ್ಟೆಲ್ಲ ಆದ ನಂತರ ಕೆಲವು ಪರೀಕ್ಷೆಗಳ ಅಗತ್ಯ ಬೀಳಬಹುದು:… ಮೂತ್ರದ ಪರೀಕ್ಷೆ … ರೋಗಿಯ ಮೂತ್ರವನ್ನು ವೈದ್ಯರು ಮೊದಲು ಹೇಗಿದೆ ಎಂದು ನೋಡಬಹುದು; ನಂತರ ರಾಸಾಯನಿಕ ಹಾಗು ಸೂಕ್ಷ್ಮದರ್ಶಕ ಪರೀಕ್ಷೆ – ಅದರಲ್ಲಿ ಇರಬಹುದಾದ ಕೆಂಪು, ಬಿಳಿ ರಕ್ತಕಣ ಮತ್ತು ಸೂಕ್ಷ್ಮಾಣುಜೀವಿಗಳು (bacteria) ಏನಾದರೂ ಇದ್ದರೆ ಆ ವ್ಯಕ್ತಿಯ ಮೂತ್ರ ಸೋಂಕು ಇದ್ದು, ಅದರಿಂದಾಗಿ ಆತನಿಗೆ ಈ ಥರ ರೋಗ.
ಯೂರೋಡೈನಮಿಕ್ ಪರೀಕ್ಷೆ … ಒಬ್ಬ ವ್ಯಕ್ತಿಯು ಮೂತ್ರ ಮಾಡಿದ ನಂತರ ಇನ್ನೂ ಎಷ್ಟು ಮೂತ್ರ ಆತನ ಕೋಶದಲ್ಲಿ ಉಳಿದಿದೆ; ಎಷ್ಟು ಮೂತ್ರ ಹೊರಹಾಕಲಾಗಿದೆ; ಎಷ್ಟು ವೇಗದಲ್ಲಿ ವ್ಯಕ್ತಿಯ ಮೂತ್ರ ಹರಿದು ಹೋಗುತ್ತದೆ; ಮತ್ತು ಆತನ ಮೂತ್ರಕೋಶ ಮತ್ತೆ ಎಷ್ಟು ಒತ್ತಡದಿಂದ ತುಂಬಿಕೊಳ್ಳುವುದು ಇತ್ಯಾದಿ.
ಅಲ್ಟ್ರಾಸೌಂಡ್ … ಈ ಪರೀಕ್ಷೆಯು ವ್ಯಕ್ತಿಯ ಮೂತ್ರಕೋಶದ ಸಂಪೂರ್ಣ ವಿವರ ತಿಳಿಸುವ ಸ್ಕ್ಯಾನ್.
ಕಂಪ್ಯೂಟೆಡ್ ಟೋಮೋಗ್ರಫಿ ಸ್ಕ್ಯಾನ್ … ಇದು ಮೂತ್ರಕೋಶದ 3D ಚಿತ್ರವನ್ನು ಒದಗಿಸುವುದು.
ಸಿಸ್ಟೋಸ್ಕೋಪಿ … ವೈದ್ಯರು ಒಂದು ವಿಶೇಷ ಉಪಕರಣವನ್ನು (ಸಿಸ್ಟೋಸ್ಕೋಪ್) ವ್ಯಕ್ತಿಯ ಮೂತ್ರನಾಳದ ಮೂಲಕ ತೂರಿಸಿ ಮೂತ್ರಕೋಶದ ಒಳಾಂಗಣವನ್ನು ಪರೀಕ್ಷಿಸುತ್ತಾರೆ. ಅದಕ್ಕಾಗಿ ನೋವು ಅರಿವಾಗದಂಥ ಒಂದು ವಿಶೇಷ ಜೆಲ್ (ಅರೆ ಘನರೂಪದ ದ್ರಾವಣ) ಉಪಯೋಗಿಸುತ್ತಾರೆ.
ಚಿಕಿತ್ಸೆ: ಇನ್ನು ಚಿಕಿತ್ಸೆ ಎಂದರೆ, ವ್ಯಕ್ತಿಯ ನಡವಳಿಕೆಗಳ ಬದಲಾವಣೆ, ಔಷಧೋಪಚಾರ ಮತ್ತು ನರ ಉತ್ತೇಜಕ ಚಿಕಿತ್ಸೆ ಮುಂತಾಗಿ. ಒಬ್ಬ ವ್ಯಕ್ತಿ ಏನು ಮತ್ತು ಎಷ್ಟು ಕುಡಿಯುತ್ತಾನೆ; ಎಷ್ಟು ಬಾರಿ, ಏನೇನು ತಿನ್ನುವನು, ಎಷ್ಟು ಸಲ ಮೂತ್ರದ ಆತುರ ಆಗುವುದು ಹಾಗು ಎಷ್ಟೆಷ್ಟು ಮಾಡುವುದು; ಜಿನುಗಿದಂತೆ ಆದರೆ ಎಷ್ಟಾಗುವುದು; ಕೆಮ್ಮಿದಾಗ; ಸೀನು ಬಂದಾಗ; ಅಥವ ನಕ್ಕಾಗ ಮೂತ್ರ ಬರುವುದು ಮುಂತಾದುದರ ಬಗ್ಗೆ ವೈದ್ಯರು ಬರೆದಿಡಲು ತಿಳಿಸಬಹುದು.
ಕೆಲವು ಆಹಾರ ಪದಾರ್ಥಗಳನ್ನು ಮತ್ತು ದ್ರವ ರೂಪದ ಸೇವನೆಯನ್ನು ಕಡಿಮೆ ಮಾಡಲು ಅಥವ ತಿನ್ನುವುದನ್ನೆ ನಿಲ್ಲಿಸಲು ಹೇಳಬಹುದು — ಯಾವ ಪದಾರ್ಥಗಳು ಮೂತ್ರಕೋಶದ ಮೇಲೆ ಪ್ರಭಾವ ಆಗುವುದೋ ಅಂಥವು; ಮದ್ಯ, ಕಾಫಿ ಮತ್ತು ಟೀ, ಕೆಲವು ಹಣ್ಣು ಮತ್ತು ಜ್ಯೂಸ್, ಚಾಕೊಲೇಟ್, ಕ್ಯಾಫೀನ್ ಇರುವ ಪಾನೀಯಗಳು, ಮಸಾಲೆ ಉಳ್ಳ ಮತ್ತು ಕೃತಕವಾಗಿ ಸಿಹಿ ತುಂಬಿದ ಪದಾರ್ಥ ಅಥವ ಪಾನೀಯ, ಟೊಮೇಟೊ ಮತ್ತು ಟೊಮೇಟೊಯುಕ್ತವಾದವು ಮುಂತಾಗಿ.
ಮಲಬದ್ಧತೆ ಸಹ ಮೂತ್ರಕೋಶದ ಮೇಲೆ ಒತ್ತಡ ಹೇರಬಹುದು. ಆದ್ದರಿಂದ, ನಾರಿನ ಅಂಶ ಹೆಚ್ಚು ಇರುವ ಆಹಾರ ಸೇವನೆ, ಹೆಚ್ಚು ಹೆಚ್ಚು ನೀರು ಕುಡಿಯುವುದು, ನಿಯಮಿತ ವ್ಯಾಯಾಮಗಳಿಂದ ಮಲಬದ್ಧತೆಯ ತೊಂದರೆ ನಿವಾರಿಸಿಕೊಂಡು, ಮೂತ್ರಕೋಶದ ಆರೋಗ್ಯ ಕಾಪಾಡುವುದು; ಹಾಗೆಯೆ ಸ್ಥೂಲ ಕಾಯ ಸಹ ಮೂತ್ರಕೋಶದ ಮೇಲಿನ ಒತ್ತಡ ಹೆಚ್ಚಿಸಬಹುದಾದ್ದರಿಂದ, ಆರೋಗ್ಯಕರ ತೂಕ ಕಾಪಾಡುವುದು; ಮೂತ್ರದ ಜಿನುಗಿಗೆ ಕೆಮ್ಮು ಕೂಡ ಕಾರಣ ಆಗಬಹುದಾದ್ದರಿಂದ ಬೀಡಿ, ಸಿಗರೇಟಿನ ಚಟ ಬಿಡಬೇಕು.
ಇಷ್ಟೆಲ್ಲ ಆದ ನಂತರ ಮೂತ್ರಕೋಶದ ತರಬೇತಿಗೆ ಪ್ರಯತ್ನ ಮಾಡಬೇಕು — ಆತುರ ತಡೆದುಕೊಳ್ಳುವುದು, ಹಾಗೆಯೆ ಆಗಾಗ ಮೂತ್ರಕ್ಕೆ ಹೋಗುವುದನ್ನು ಸಹ ಕಡಿತ ಮಾಡುವುದು ಮತ್ತು ನಿಗದಿತ ಸಮಯಗಳಲ್ಲಿ ಮಾತ್ರ ಮೂತ್ರ ಮಾಡುವ ಅಭ್ಯಾಸಕ್ಕೆ ತೊಡಗುವುದು ಇತ್ಯಾದಿ. ಹಾಗೆಯೆ, ಎಷ್ಟೆಷ್ಟು ಗಂಟೆಗೆ ಒಂದೊಂದು ಸಲ ಮೂತ್ರ ಮಾಡುವುದು ಎಂದು ಗೊತ್ತುಪಡಿಸಿಕೊಂಡು, ತದನಂತರ ಪ್ರತಿ ಸಲ ಸ್ವಲ್ಪ ಸ್ವಲ್ಪ ಸಮಯ ತಡ ಮಾಡಿ ಹೋಗುವ ಅಭ್ಯಾಸ ರೂಢಿಮಾಡಿ, ಮತ್ತೆ ಮತ್ತೆ ವೇಳೆಯನ್ನು ಇನ್ನಷ್ಟು ಮುಂದೂಡುವುದು; ಮತ್ತು ಮೂತ್ರ ಬಂದಾಗ ಆಳವಾದ ಉಸಿರೆಳೆದು ಮತ್ತೆ ಬಿಡುವಂಥ ಮನಸ್ಸಿಗೆ ವಿಶ್ರಾಂತಿ ಕೊಡುವಂಥ ಅಭ್ಯಾಸಗಳನ್ನು ಆರಂಭ ಮಾಡುವುದು. ಒಮ್ಮೆ ಈ ರೀತಿಯ ಹೊಸ ವೇಳಾಪಟ್ಟಿಗೆ ಒಗ್ಗಿದ ಮೇಲೆ ಅದನ್ನು ಅಳವಡಿಸಿಕೊಳ್ಳುವುದು. ಮೂತ್ರದ ಅವಸರ ತಡೆಯುವ ಕೆಲವು ತಂತ್ರಗಳನ್ನು ಅಭ್ಯಾಸ ಮಾಡುವುದು: ಮೂತ್ರಕೋಶದ ಸರಹದ್ದಿನ ಎಲ್ಲ ಸ್ನಾಯುಗಳನ್ನೂ ಬಲವಾಗಿ ಹಿಂಡಿದ ಹಾಗೆ ಅನೇಕ ಸಲ ಮಾಡುವುದಲ್ಲದೆ, ತಕ್ಷಣ ಸಡಿಲಗೊಳಿಸಬಾರದು; ವ್ಯಕ್ತಿ ಮಾಡುತ್ತಿದ್ದ ಕೆಲಸ ನಿಲ್ಲಿಸಿ ಸುಮ್ಮನೆ ಮಿಸುಕಾಡದೆ ಕೂತುಬಿಡುವುದು; ಇಡೀ ದೇಹವನ್ನು ಸಡಿಲಗೊಳಿಸಿ ಆಳವಾಗಿ ಉಸಿರಾಡುವುದು; ಮೂತ್ರದ ಆತುರ ತದೇಕಚಿತ್ತದಿಂದ ತಡೆಹಿಡಿಯುವುದು – ಅದು ಇಲ್ಲವಾಗುವವರೆಗೆ. ಬಹಳ ಮುಖ್ಯವಾಗಿ ತಾಳ್ಮೆ ಬೇಕು, ಎಕೆಂದರೆ ಈ ರೀತಿ ಮೂತ್ರಕೋಶದ ತರಬೇತಿಗೆ ಒಂದೆರಡು ತಿಂಗಳೇ ಬೇಕಾಗಬಹುದು. ಇದಲ್ಲದೆ, ನರಪ್ರಚೋದಕ ಪ್ರಕ್ರಿಯೆಯಿಂದ ವೈದ್ಯರು ಚಿಕಿತ್ಸೆ ಮಾಡಬುದು. ಅಂತಿಮವಾಗಿ ಈ ರೋಗ ತಡೆಗಟ್ಟುವ ಬಗೆಗೆ; ಆರೋಗ್ಯಕರ ತೂಕದ ನಿರ್ವಹಣೆ; ಪ್ರತಿ ದಿನ ಸಾಕಷ್ಟು ಪಾನೀಯ ಸೇವನೆ — ಅತಿಯಾದರೂ ರೋಗ ಹೆಚ್ಚಬಹುದು ಮತ್ತು ಕಡಿಮೆ ಆದರೆ ಮೂತ್ರಕೋಶದ ಒಳಪದರ ಕೆರಳಿಸಿ ಮೂತ್ರದ ಆತುರಗಳೂ ಅಧಿಕ ಆಗಬಹುದು; ದಿನಂಪ್ರತಿ ವ್ಯಾಯಾಮ ಅತಿ ಮುಖ್ಯ ಮತ್ತು ಕ್ಯಾಫೀನ್ ಇರುವ ಪಾನೀಯ ಹಾಗು ಮದ್ಯದ ಬಳಕೆ ಮಿತವಾಗಿದ್ದರೆ ಉತ್ತಮ.