ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 3

ಅದೃಷ್ಟದ ಆಟ – 3

ಪರಿಚ್ಛೇದ – 2

ಅಶ್ವ ಚೋರ

ಸುಗೋಪಾ ತಲೆಯೆತ್ತಿ ನೋಡಿ ಚಕಿತಳಾದಳು. ಒಬ್ಬ ಯುವಕ ದೇವದಾರು ಮರದ ನೆರಳಿನಲ್ಲಿ ಬಂದು ನಿಂತಿದ್ದಾನೆ. ಇವರ ಬಳಿಗೆ ಅವನು ಯಾವಾಗ ಸದ್ದಿಲ್ಲದೆ ಬಂದು ನಿಂತಿದ್ದನೋ ಯಾರಿಗೂ ತಿಳಿಯದು.
ಸುಗೋಪಾ– ಯಾರು ನೀವು?
ಆಗಂತುಕ– ಒಬ್ಬ ಪಥಿಕ, ಜಲಸತ್ರದ ಒಡತಿಯು ನೀವೇನೋ? ಕುಡಿಯಲು ನೀರು ಬೇಕಾಗಿತ್ತು.
ಸುಗೋಪಾ ಪಥಿಕನನ್ನು ಅಡಿಯಿಂದ ಮುಡಿಯವರೆಗೆ ನೋಡಿದಳು. ಉಡಿಗೆ- ತೊಡಿಗೆಗಳನ್ನು ನೋಡಿದರೆ ಅವನು ಆಗಂತುಕನೆಂಬುದಕ್ಕೆ ಸಂಶಯ ಬರುವುದಿಲ್ಲ. ಸೀಸಕ- ಕವಚಗಳನ್ನು ಧರಿಸಿದ್ದಾನೆ. ಸೊಂಟದಲ್ಲಿ ಚರ್ಮದ ಒರೆಯ ಕತ್ತಿ; ಚರ್ಮದ ಬಾರಿನಿಂದ ಕಾಲುಗಳನ್ನು ಬಿಗಿದು ಕಟ್ಟಿರುವ ಪಾದರಕ್ಷೆ. ದೇಹದಲ್ಲಿ ಎಲ್ಲಿಯೂ ಮಾಂಸಖಂಡಗಳ ಬಾಹುಳ್ಯವಿಲ್ಲ. ಎತ್ತರಕ್ಕೆ ತಕ್ಕ ಹಾಗೆ ಶರೀರದಾಧ್ರ್ಯವಿಲ್ಲ. ಸ್ವಲ್ಪ ಕೃಶ ಶರೀರ- ಒಟ್ಟಿನಲ್ಲಿ ಅವನು ನೀಳವಾಗಿದ್ದರೂ ಬಗ್ಗಿಸಲು ಯೋಗ್ಯವಾದ ಎದೆಯಿರದ ಕೋದಂಡದಂತೆ ಕಾಣುತ್ತಿದ್ದನು. ಸಮಯಬಂದರೆ ಕ್ಷಿಪ್ರದಲ್ಲಿಯೇ ಹೆದೆಯೊಡನೆ ಸೇರಿದರೆ ಸಾಕು ಪ್ರಾಣಘಾತುಕ ಸ್ವರೂಪವನ್ನು ತಳೆಯಬಲ್ಲುದಲ್ಲವೆ- ಆ ಧನುರ್ದಂಡ! ಆಗಂತುಕನ ವಯಸ್ಸು ನಿಶ್ಚಯವಾಗಿ ಹೇಳಲಾಗುವುದಿಲ್ಲ. ಆದರೂ ಮೂವತ್ತಕ್ಕೆ ಮೀರಿರಲಾರದು. ತೀಕ್ಷ್ಣವಾದ ನಯನಗಳು. ಭ್ರಮರದಂತೆ ಕಪ್ಪಾದ ಕಣ್ಣಿನ ದೃಷ್ಟಿಯಲ್ಲಿ ಒಂದು ಬಗೆಯ ಚಚ್ಚರ ಪ್ರಚ್ಛನ್ನವಾಗಿ ಕಾಣಬರುತ್ತಿತ್ತು. ಬಾಹುಬಲ ಮತ್ತು ಕುಟಿಲ ಬುದ್ಧಿಯ ಬೆಂಬಲದಿಂದ ಬದುಕುವ ಜೀವಿಗೆ ಈ ಬಗೆಯ ಸತರ್ಕ- ದೃಷ್ಟಿ ಸ್ವಭಾವಸಿದ್ಧವಾದುದು.

ಆದ್ದರಿಂದ ಆಗಂತುಕನು ಒಬ್ಬ ಯುದ್ಧ ಜೀವಿಯಾಗಿರಬಹುದು. ಅವನ ಬಾಹುಗಳ ಮೇಲಿರುವ ಸಣ್ಣಪುಟ್ಟ ಗಾಯಗಳು ಈ ಊಹೆಗೆ ಸಾಕ್ಷಿಯಾಗಿವೆ. ಭಿನ್ನ ಭಿನ್ನವಾದ ಲೋಹ ಜಾಲದ ನಡುವೆ ಎದೆಯ ಮೇಲೂ ಕೆಲವು ಗೆರೆಗಳು ಕಾಣಿಸುತ್ತಿವೆ – ಗೌರವರ್ಣದ ವಕ್ಷಸ್ಥಲದ ಮೇಲೆ ಕಾಡಿಗೆಯಿಂದ ಚಿತ್ರಿಸಿದ ರೇಖೆಗಳೋ ಎಂಬಂತೆ. ಆದರೆ ಹುಬ್ಬುಗಳ ನಡುವೆ ಹಣೆಯಲ್ಲಿ ತಿಲಕವನ್ನು ಹೋಲುವ ದುಂಡಾದ ಒಂದು ಕೆಂಪು ಬಣ್ಣದ ಚಿಹ್ನೆ ಇದೆ. ಅದು ಗಾಯದಿಂದಾದುದೋ ಅಥವಾ ಮಚ್ಚೆಯೋ ಹೇಳಲಾಗುವುದಿಲ್ಲ. ಆಗಂತುಕನನ್ನು ಚೆನ್ನಾಗಿ ದೃಷ್ಟಿಸಿ ನೋಡಿ ಸುಗೋಪಾ ನೀರು ತರಲು ಕಟ್ಟಡದ ಒಳಕ್ಕೆ ಹೋದಳು. ಅಪರಿಚಿತನು ನಿಧಾನವಾಗಿ ಮುಂದುವರಿದು, ಅವಳು ಹಿಂದೆ ಕುಳಿತಿದ್ದ ಕಲ್ಲಿನ ಮೇಲೆ ಕುಳಿತನು. ಬಹಳ ಬಳಲಿದ್ದನೆಂಬುದು
ಅವನು ಕುಳಿತುಕೊಂಡ ರೀತಿಯಿಂದಲೇ ಊಹಿಸಬಹುದಾಗಿತ್ತು. ಮೋಂಗ್ ಇಲ್ಲಿಯವರೆಗೂ ಕುತೂಹಲದಿಂದ ಹೊಸಬನನ್ನು
ನೋಡುತ್ತಿದ್ದನು. ಈಗ ಬಾಯಿಬಿಟ್ಟನು- ‘ನಿನ್ನನ್ನು ನೋಡಿದರೆ ವಿದೇಶಿ ಎಂದು ಕಾಣುತ್ತದೆ. ನಿಮ್ಮ ದೇಶ ಯಾವುದು?’
ಅಪರಿಚಿತನು ಉತ್ತರ ಕೊಡಲಿಲ್ಲ. ಕೈಯನ್ನು ಮಾತ್ರ ಒಂದು ದಿಕ್ಕಿಗೆ ತೋರಿಸಿದನು- ಗಾಂಧಾರದಿಂದ ಪುಂಡವರ್ಧನದವರೆಗಿನ ಪ್ರದೇಶದಲ್ಲಿಯಾವುದಾದರೂ ಒಂದು ದೇಶದವನೆಂದು ಸೂಚಿಸುವವನಂತೆ.

ಮೋಂಗ್- ನೀನು ಯುದ್ಧಜೀವಿ…?
ವಿದೇಶೀಯನು ಮೋಂಗನ ಕಡೆ ಸತರ್ಕ-ದೃಷ್ಟಿಯಿಂದ ಒಂದು ಬಾರಿಚೆನ್ನಾಗಿ ನೋಡಿ ಸಮ್ಮತಿ ಸೂಚಕವಾಗಿ ತನ್ನ ತಲೆಯನ್ನು ಆಡಿಸಿದನು. ಮೋಂಗನ ಭೇಕ ಧ್ವನಿಯ ವ್ಯಂಗ್ಯ-ಹಾಸ್ಯ ಮತ್ತೊಮ್ಮೆ ಹೊಮ್ಮಿತು- ‘ಪಾಪ, ಭಾಗ್ಯದೇವತೆ ನಿನ್ನ ಮೇಲೆ ಪ್ರಸನ್ನಳಾಗಿಲ್ಲವೆಂದು ಕಾಣುತ್ತದೆ. ಆಯುಧಗಳ ಗಾಯವನ್ನು ಬಿಟ್ಟರೆ ಯುದ್ಧದ ವ್ಯವಸಾಯದಲ್ಲಿ ಇನ್ನಾವ ಫಲವನ್ನೂ ಪಡೆದ ಹಾಗಿಲ್ಲ,… ಇರಲಿ… ಯಾವ ರಾಜ್ಯದ ಸೇನೆಯಲ್ಲಿಯೋ ಕೆಲಸಕ್ಕಿರುವುದು?’ ವಿದೇಶೀಯನು ಆಗಲೂ ಉತ್ತರ ಕೊಡಲಿಲ್ಲ. ಅನ್ಯಮನಸ್ಕನಾದವನಂತೆ ಊಧ್ರ್ವದತ್ತ ನೋಡುತ್ತ ಇದ್ದು ಬಿಟ್ಟನು. ಮೋಂಗನ ಕುತೂಹಲ ಕ್ಷಣಕ್ಷಣಕ್ಕೂ ಹೆಚ್ಚುತ್ತಿತ್ತು. ಆದ್ದರಿಂದ ಗಂಭೀರವಾಗಿ ಸ್ವಲ್ಪ ಗತ್ತಿನಿಂದಲೇ ‘ಯುವಕ, ನೀನು ಈ ರಾಜ್ಯಕ್ಕೆ ಹೊಸಬನೆಂದು ಕಾಣುತ್ತದೆ. ಇಲ್ಲಿ ಹೂಣರ ಆಧಿಪತ್ಯವಿದೆ ಎಂದು ನಿನಗೆ ತಿಳಿದಿರಲಾರದು. ಮಹಾಪರಾಕ್ರಮಿಯಾದ ಹೂಣ ಕೇಸರಿರಟ್ಟ ಧರ್ಮಾದಿತ್ಯರು ಈ ವಿಟಂಕ ರಾಜ್ಯದ ಅಧೀಶ್ವರರು. ನಾನೂ ಕೂಡ ಹೂಣನೆ! ಹೂಣರು ವಿಜಾತೀಯ ಸ್ಪರ್ಧೆಯನ್ನು ಸಹಿಸಲಾರರು… ನಿನ್ನ ಹೆಸರು?’ ಎಂದು ಪ್ರಶ್ನಿಸಿದನು. ಯುವಕನು ತನ್ನ ಕುಡಿಮೀಸೆಯ ನಡುವೆ ಕಿರುನಗೆಯನ್ನು ಬೀರಿ ‘ನನ್ನ ಹೆಸರು ಚಿತ್ರಕ’ ಎಂದನು.
‘ಚಿತ್ರಕ! ಓಹೋ, ಚಿರತೆ!’ ಮೋಂಗನ ಕಣ್ಣುಗಳು ಉಜ್ವಲವಾದುವು. ‘ನಿನ್ನ ಹೆಸರು ಸಾರ್ಥಕವಾಗಿದೆ. ಮೈಯಲ್ಲೆಲ್ಲ ಗಾಯದ ಕಲೆಗಳಿರುವುದರಿಂದ ನಿಮ್ಮ ತಾಯಿ ತಂದೆ ನಿನ್ನನ್ನು ಚಿರತೆಯೆಂದೇ ಭಾವಿಸಿರುವುದರಲ್ಲಿ ತಪ್ಪೇನಿಲ್ಲ. ಇಂತಹ ಹೆಸರು ಹೂಣರಲ್ಲಿ ಮಾತ್ರ ಇತ್ತು-ಸಿಂಹ, ಸೂಕರ, ನಾಗ, ವೃಷರೂಪು ಆಕೃತಿ ಪ್ರಕೃತಿಗಳನ್ನು ನೋಡಿ ಹೆಸರುಗಳನ್ನು ಇಡುತ್ತಿದ್ದರು. ಈಗ
ಅವೆಲ್ಲ ಎಲ್ಲಿಯೋ ಹೋದವು!’ ವಿಷಾದದಿಂದ ನಿಟ್ಟುಸಿರು ಬಿಟ್ಟು ನುಡಿದ ‘ನೀನು ಇನ್ನೂ ಚಿಕ್ಕವನು. ಆದರೂ ಅನೇಕ ಯುದ್ಧಗಳನ್ನು ಮಾಡಿರಬೇಕು. ಅನೇಕ ನಗರಗಳನ್ನು ಲೂಟಿ ಮಾಡಿರಬಹುದು. ಈ ವಿಟಂಕ ರಾಜ್ಯದಲ್ಲಿ ಒಂದು ದಿನ ನಾವು… ಆದರೆ ಈ ಪ್ರದೇಶದಲ್ಲಿ ಇನ್ನು ಯುದ್ಧಗಳಾಗುವ ಸಂಭವವಿಲ್ಲ. ಕುರಿಗಳು ಯಾರೊಡನೆ ಯುದ್ಧ ಮಾಡಿಯಾವು? ಇಪ್ಪತ್ತೈದು
ವರ್ಷಗಳ ಹಿಂದೆ ಒಂದು ದಿನ… ಇತ್ತು!’

ಯುವಕ- “ಕಪೋತ ಕೂಟ ಇಲ್ಲಿಂದ ಎಷ್ಟು ದೂರ?”
ಮೋಂಗ್- “ನೀನು ಕಪೋತಕೂಟಕ್ಕೆ ಹೋಗಬೇಕೊ? ಬಹಳ ದೂರವೇನೂ ಇಲ್ಲ. ಎರಡು ಗಂಟೆಯ ದಾರಿ. ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಹೊರಟರೂ ಸಂಜೆಯ ವೇಳೆಗೆ ಮುನ್ನವೇ ರಾಜಧಾನಿ ತಲುಪಬಹುದು. ನಿನ್ನ ಬಳಿ ಕುದುರೆ ಇರುವಂತೆ ಕಾಣುವುದಿಲ್ಲ. ಹೂಣ ಸೈನಿಕರು ಮಾತ್ರ ಕುದುರೆಯಿಲ್ಲದೆ ಒಂದು ಹೆಜ್ಜೆಯನ್ನೂ ಮುಂದೆ ಇಡಲಾರರು. ಒಂಟೆಯ ಕೂದಲಿನ ಶಿಬಿರ ಮತ್ತು ಕುದುರೆಯ ಬೆನ್ನು- ಇವೇ ಹೂಣರ ವಾಸಸ್ಥಾನ. ಇಪ್ಪತ್ತೈದು ವರ್ಷಗಳ ಹಿಂದೆ ನಾವು ಹನ್ನೆರಡು ಸಾವಿರ ಕುದುರೆ ಸವಾರರು…!’


ಸುಗೋಪಾ ಮಣ್ಣಿನ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಹೊರಬಂದಳು. ಮೋಂಗನ ಕತೆಗೆ ಸಂಪೂರ್ಣವಾಗಿ ಅಡ್ಡಿ ಬಂದಿತು. ಪಥಿಕ ನಿಜವಾಗಿಯೂ ಬಹಳ ಬಾಯಾರಿದ್ದನು. ಜಗ್ಗನೆದ್ದು ಕೈಗಳನ್ನು ತೊಳೆದು, ಬೊಗಸೆಯೊಡ್ಡಿ, ಹೊಟ್ಟೆ ತುಂಬುವಷ್ಟು ನೀರನ್ನು ಕುಡಿದನು. ಸುಗೋಪಾ ಪಥಿಕನ ಬೊಗಸೆಗೆ ನೀರೆರೆಯುತ್ತಾ ಮೋಂಗನ ಕಡೆಗೆ ತಿರುಗಿ ‘ಮೋಂಗ್, ಇನ್ನು ಹೊರಡು ತಡ ಮಾಡಬೇಡ. ಹಲ್ಲುಜ್ಜುವ ಕಡ್ಡಿ ತರುವುದು ತಡವಾದರೆ ನಿನ್ನ ನಾಗಸೇನೆ ಕಡ್ಡಿಯನ್ನು ಕಚ್ಚುವುದಕ್ಕೆ ಬದಲಾಗಿ, ನಿನ್ನ ಬುರುಡೆಯನ್ನೇ ಕಚ್ಚಿ ಬಿಟ್ಟಾಳು’ ಎಂದು ನುಡಿದಳು. ಮೇಲೆ ನೋಡುತ್ತಾನೆ, ಮೋಂಗ್. ಸೂರ್ಯದೇವನಾಗಲೇ ಮಧ್ಯ
ಗಗನವನ್ನೂ ಬಿಟ್ಟು ಪಶ್ಚಿಮಕ್ಕೆ ಸ್ವಲ್ಪ ವಾಲಿದ್ದಾನೆ. ಮೋಂಗ್ ಮೇಲೆದ್ದು ನಿಂತನು. ಕಾಡಿನಲ್ಲಿ ಹಲ್ಲುಜ್ಜುವ ಕಡ್ಡಿಯನ್ನು ಹುಡುಕಲು ಸ್ವಲ್ಪ ಸಮಯ ಹಿಡಿಯುತ್ತದೆ. ಅದರ ಮೇಲೆ ಮನೆಗೆ ಹಿಂದಿರುಗುವ ದಾರಿಯೂ ಕಡಿಮೆಯೇನಿಲ್ಲ. ಮುದಿವಯಸ್ಸಿನಲ್ಲಿ ವೇಗವಾಗಿ ನಡೆಯುವ ಶಕ್ತಿಯೂ ಇಲ್ಲ. ನಾಗಸೇನೆಯ ಬಳಿಗೆ ಹೋಗುವಷ್ಟರಲ್ಲಿ ಇಳಿ ಹೊತ್ತಾದರೂ ಆಗಬಹುದು. ಅದು ಮೋಂಗನಿಗೆ ಸುಖಕರವಲ್ಲ. ಪಾಪ! ಯುದ್ಧವಿಗ್ರಹವಾದ ಅವನಿಗೆ ಸಂಸಾರದ ಸೂಕ್ಷ್ಮತೆಗಳೆಲ್ಲ ಹೇಗೆ ಅರ್ಥವಾಗಬೇಕು! ಇಪ್ಪತ್ತೈದು ವರ್ಷಗಳ ಹಿಂದಿನ ವೀರಗಾಥೆಯನ್ನು ಆಗಂತುಕನಿಗೆ ತಿಳಿಸಬೇಕೆಂಬ ಹಂಬಲ ಮೋಂಗನಿಗೆ, ಆದರೆ ಅದು ಪೂರ್ತಿ ಆಗಲಿಲ್ಲ. ವಿಧಿಯಿಲ್ಲದೆ ಏಳಬೇಕಾಯಿತು. ಯಾರೊಡನೆಯೂ ಏನೂ ಮಾತನಾಡದೆ ಅಸ್ಪಷ್ಟ ದನಿಯಲ್ಲಿ ‘ಕತ್ತಿಯ ಅಲಗು, ಕುದುರೆಯ ಹಿಂಗಾಲು, ವನಿತೆಯರ ಕುಡಿನೋಟ’ ಎಂಬ ತನ್ನ ಚಿರಪರಿಚಿತ ಗಾದೆಯನ್ನು ಮೆಲುಕು ಹಾಕುತ್ತ ಕಾಡಿನೊಳಕ್ಕೆ ಹೊರಟು ಹೋದನು.

ಮುಂದುವರೆಯುವುದು…

ಎನ್. ಶಿವರಾಮಯ್ಯ (ನೇನಂಶಿ)
ತುಮಕೂರು

ಚಿತ್ರಗಳು : ಮಂಜುಳಾ

Related post

Leave a Reply

Your email address will not be published. Required fields are marked *