ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 5

ಪರಿಚ್ಛೇದ-3

–ಮಗಧದ ದೂತ–

ಮಹಾಕವಿ ಕಾಳಿದಾಸನು ‘ರಘುವಿನ ದಿಗ್ವಿಜಯ’ದ ನೆಪದಲ್ಲಿ ಅಮಿತ ವಿಕ್ರಮ ಮಗಧೇಶ್ವರನ ವಿಜಯಗಾಥೆಯನ್ನು ವರ್ಣಿಸಿರುವನಲ್ಲವೆ? ಅದು ಸಮುದ್ರಗುಪ್ತನನ್ನು ಕುರಿತದ್ದು. ಒಂದು ದೃಷ್ಟಿಯಲ್ಲಿ ಸಮುದ್ರಗುಪ್ತನು
ಅಲೆಗ್ಜಾಂಡರನಿಗಿಂತಲೂ ಅತಿಶಯನಾದವನೆನ್ನಬಹುದು. ಅಲೆಗ್ಜಾಂಡರನ ಸಾಮ್ರಾಜ್ಯವು ಅವನ ಮರಣಾನಂತರವೇ ಛಿನ್ನಭಿನ್ನವಾಗಿ ಒಡೆದು ಹೋಯಿತು. ಆದರೆ ಸಮುದ್ರಗುಪ್ತನು ತನ್ನ ಸಮುದ್ರಮೇಖಲಾವಲಯಿತವಾದ ವಿಶಾಲ
ಸಾಮ್ರಾಜ್ಯವನ್ನು ತನ್ನ ನಂತರ ಮೂರು ತಲೆಮಾರುಗಳವರೆಗೂ ನಿರುಪದ್ರವದಿಂದ ಅನುಭವಿಸುವಷ್ಟು ಸುಭದ್ರಗೊಳಿಸಿದ್ದನು. ಆದ್ದರಿಂದಲೇ ನೂರು ವರ್ಷಕ್ಕೆ ಮುಂಚೆ ಆ ಬಂಧನ ಸಡಿಲವಾಗಲಿಲ್ಲ. ಗುಪ್ತಸಾಮ್ರಾಜ್ಯದ ಸುಭದ್ರವಾದ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡುದು – ಸಮುದ್ರಗುಪ್ತನ ಮೊಮ್ಮಗನಾದ ಕುಮಾರಗುಪ್ತನ ಕಾಲದಲ್ಲಿ.

ಆಗಲೂ ಸಾಮ್ರಾಜ್ಯವೇನೋ ‘ಕಪಿಶಾ’ದಿಂದ ಪ್ರಾಗ್ಜೋತಿಷ’ದವರೆಗೂ ಹಬ್ಬಿತ್ತು. ಹೊರಗಿನ ನೋಟಕ್ಕೆ ಸುಭದ್ರವಾಗಿದ್ದಂತೆ ತೋರುತ್ತಿದ್ದರೂ ‘ಗಜಮುಕ್ತ ಕಪಿತ್ಥ’ದಂತೆ
ಅಂತಃಶೂನ್ಯವಾಗಿತ್ತು. ಒಂದು ಕಾಲಕ್ಕೆ ವಿರಾಟ್ ಭೂ ಖಂಡವನ್ನೆಲ್ಲ ರಕ್ಷಿಸಿದ ಪ್ರಬಲ ಜೀವನ ಶಕ್ತಿ, ಅಂದು ಮುಪ್ಪಿನ ಪ್ರಭಾವದಿಂದ ಶಿಥಿಲವಾಗಿ ಹೋಗಿತ್ತು. ಕುಮಾರಗುಪ್ತನ ದೀರ್ಘಕಾಲದ ಆಳ್ವಿಕೆಯ ಕೊನೆಗಾಲದಲ್ಲಿ ಗುಪ್ತ
ಸಾಮ್ರಾಜ್ಯದ ವಾಯುವ್ಯ ಪ್ರಾಂತದಲ್ಲಿ ಪ್ರಚಂಡ ಬಿರುಗಾಳಿಯ ಹಾಗೆ ಹೂಣರು ಆಕ್ರಮಣ ಮಾಡಿದರು. ಮೊದಲೇ ಶಿಥಿಲವಾಗಿದ್ದ ಸಾಮ್ರಾಜ್ಯವು ಈ ದಾಳಿಯಿಂದ ತತ್ತರಿಸಿ ಹೋಯಿತು. ಕುಮಾರಗುಪ್ತನು ವೀರನಲ್ಲ; ಭೋಗಲಾಲಸೆಗಳಲ್ಲಿ ಮುಳುಗಿದ್ದವನು. ಆದರೆ, ಅವನ ಔರಸ ಪುತ್ರನಾದ ಸ್ಕಂದಗುಪ್ತನು ಮಹಾಪರಾಕ್ರಮ ಶಾಲಿ. ತರುಣ ಸ್ಕಂದಗುಪ್ತನು ಯುವರಾಜ ಭಟ್ಟಾರಕ ಪದವಿಯನ್ನು ಅಲಂಕರಿಸಿದ ಕೂಡಲೆ ಚಂಚಲೆಯಾದ ಸಾಮ್ರಾಜ್ಯ ಲಕ್ಷ್ಮಿಯನ್ನು ಮತ್ತೆ ಸ್ಥಿರವಾಗಿ ನೆಲೆಗೊಳಿಸಲು ಅವನು ಮೂರು ರಾತ್ರಿಗಳನ್ನು ನೆಲದ ಮೇಲೆ ಮಲಗಿ, ವ್ರತ ಮಾಡಿ, ಯುದ್ಧ ಯಾತ್ರೆಯನ್ನು ಕೈಕೊಂಡನು. ಆ ದಿನ ಮೊದಲುಗೊಂಡು ಅವನು ತನ್ನ ಜೀವನ ಪರ್ಯಂತ ಯುದ್ಧ ಭೂಮಿಯಲ್ಲಿಯೋ, ಸೇನಾ ಶಿಬಿರದಲ್ಲಿಯೋ ಇದ್ದುಕೊಂಡು ರಾಷ್ಟ್ರದ ಏಳಿಗೆಗಾಗಿ ಶ್ರಮಿಸಿದನು. ಇದೇ ಆ ಭಾಗ್ಯಹೀನ ಯುವರಾಜನ ಪೂರ್ಣ ಇತಿಹಾಸವೆನ್ನಬಹುದು.

ಯುವರಾಜ ಸ್ಕಂದನು ಪಂಚನದ ಪ್ರದೇಶದಲ್ಲಿ ಹೂಣರ ಮಹಾಸೈನ್ಯವನ್ನು ಎದುರಿಸಿದನು. ಹಿಂಸ್ರ ಹಾಗೂ ಬರ್ಬರ ಹೂಣರು ಪ್ರಾಣಪಣವಿಟ್ಟು ಹೋರಾಡಿದರು. ಆದರೆ ಅಸಾಮಾನ್ಯ ರಣಪಂಡಿತನಾದ ಸ್ಕಂದನ ಮುಂದೆ ಅವರ ಆಟ ನಡೆಯಲಿಲ್ಲ. ಹೂಣರನ್ನು ಸಂಪೂರ್ಣವಾಗಿ ಅಡಗಿಸುವುದು ಸ್ಕಂದಗುಪ್ತನಿಗೂ ಅಸಾಧ್ಯವಾಯಿತು. ಇದಕ್ಕೆ ಕಾರಣ ಪಂಚನದ ಪ್ರದೇಶದ
ಭೌಗೋಳಿಕ ಮೇಲ್ಮೈ ಲಕ್ಷಣ. ಆ ಪ್ರದೇಶವು ನದ ನದಿಗಳಿಂದಲೂ, ಪರ್ವತ ಪ್ರದೇಶದಿಂದಲೂ ಕೂಡಿದ್ದಿತು. ಚಕ್ರವರ್ತಿ ಗುಪ್ತ ಸಮ್ರಾಟನ ಅಧೀನದಲ್ಲಿ ಪ್ರಾಯಃ ಐವತ್ತು ಸಣ್ಣ ಪುಟ್ಟ ಸಾಮಂತ ರಾಜ್ಯಗಳು ಈ ಪ್ರದೇಶದಲ್ಲಿದ್ದವು. ಹೂಣರ ದಾಳಿಯಿಂದ ಈ ಸಾಮಂತ ರಾಜ್ಯಗಳಿಗೂ ಧಕ್ಕೆಯೊದಗಿತು. ನದಿಯಲ್ಲಿ ಹುಚ್ಚು ಹೊಳೆ ಬಂದಾಗ ಕಸಕಡ್ಡಿಗಳ ಜೊತೆಗೆ ಆಳವಾಗಿ ಬೇರು ಬಿಟ್ಟು ಹೆಮ್ಮೆರಗಳೂ ಕೊಚ್ಚಿ ಹೋಗುವುದು ಸಹಜವಲ್ಲವೆ! ಪರಾಜಿತರಾದ ಹೂಣರು ಕೆಲವರು ದೇಶ ಬಿಟ್ಟು ಓಡಿ ಹೋದರು. ಇನ್ನೂ ಕೆಲವರು ದುರ್ಗಮವಾದ ಪರ್ವತ ಪ್ರದೇಶಗಳಲ್ಲಿ ರಕ್ಷಣೆ ಪಡೆದು ಇಲ್ಲಿಯೇ ನೆಲಸಿದರು.

ಹಳೆಯ ರೋಗವು ತೀವ್ರವಾದ ಔಷಧದಿಂದಲೂ ಪೂರ್ಣವಾಗಿ ಗುಣವಾಗದೆ ಶರೀರದ ಯಾವುದೋ ಒಂದು ಆಯಕಟ್ಟಿನ ಸ್ಥಳದಲ್ಲಿ ಆಶ್ರಯ ಪಡೆಯುವ ಹಾಗೆ, ಈ ಹೂಣರೂ ಕೂಡ ದುರ್ಗಮವಾದ ಪರ್ವತ ಪ್ರದೇಶಗಳ ಗಿರಿ ಕಂದರಗಳಲ್ಲಿ ಆಶ್ರಯ ಪಡೆದರು. ಸ್ಕಂದನು ಇನ್ನೂ ಕೆಲವು ದಿನಗಳು ಅಲ್ಲಿಯೇ ಇದ್ದು ಆಕ್ರಮಣ ನಡೆಸಿದ್ದರೆ ಹೂಣರನ್ನು ಸಂಪೂರ್ಣವಾಗಿ ಹೊಡೆದು ಓಡಿಸಬಹುದಾಗಿತ್ತು. ಆದರೆ ಗುಪ್ತ ಸಾಮ್ರಾಜ್ಯದ ಬೇರೆ ಪ್ರಾಂತದಲ್ಲಿ ಗುರುತರವಾದ ಅಶಾಂತಿ ತಲೆದೋರಿದ ಕಾರಣ ಅವನು ಆ ಕಡೆಗೆ ತೆರಳಬೇಕಾಯಿತು. ಪಂಚನದ ಪ್ರದೇಶವು ಪರಕೀಯರ ಪಿಡುಗಿನಿಂದ ಪಾರಾದರೂ, ಅತ್ಯಾಚಾರಕ್ಕೆ ಗುರಿಯಾದ ನಾರಿಯಂತೆ ಅದು ತನ್ನ ಮೊದಲಿನ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದೇ ಸಮಯದಲ್ಲಿ ‘ವಿಟಂಕ’ ಎಂಬ ಹೆಸರಿನ ಒಂದು ಸಣ್ಣ ಪರ್ವತ ಪ್ರಾಂತವು ಕೆಲ ಹೂಣರ ಕೈವಶವಾಯಿತು. ಈ ಹೂಣರ ನಾಯಕನಾದ ‘ರಟ್ಟ’ ಎಂಬುವನು ಆ ರಾಜ್ಯದ ಉನ್ನತ ವಂಶದ ಸುಂದರಿಯಾದ ಧಾರಾದೇವಿ ಎಂಬ ಕನ್ನೆಯನ್ನು ವಿವಾಹವಾಗಿ ನೂತನ ರಾಜವಂಶವನ್ನು ಸ್ಥಾಪಿಸಿದನು.

ಯುದ್ಧದ ಜ್ವಾಲೆ ನಂದಿ ಹೋದ ಮೇಲೆ ಸೋತವರು- ಗೆದ್ದವರುಗಳ ನಡುವೆ ಇದ್ದ ದ್ವೇಷ ಭಾವನೆಯು ಬರುಬರುತ್ತಾ ಗಣನೀಯವಾಗಿ ಮಾಯವಾಗುತ್ತದೆ. ಉಗ್ರ ಸ್ವಭಾವದ ಹೂಣರಲ್ಲಿಯೂ ಇಲ್ಲಿಯ ವಾತಾವರಣದ ಪ್ರಭಾವದಿಂದ ಶಾಂತ ಸ್ವಭಾವ ನೆಲೆಗೊಂಡಿತು. ಮಹಾರಾಜ ರಟ್ಟನು ಸಂಪೂರ್ಣವಾಗಿ ಬದಲಾಯಿಸಿ ಬಿಟ್ಟನು. ಧಾರಾದೇವಿಯ ಕೋಮಲ ಹಾಗೂ ಸಹನಶೀಲ ಹೃದಯದಲ್ಲಿ ಅದೆಂಥ ಅಪರಿಮಿತ ಶಕ್ತಿ ಅಡಗಿತ್ತೋ ನಾಕಾಣೆ! ಆಕೆಯು ಆ ಕಟುಕ ಹೂಣನನ್ನೂ ಕೂಡ ಸಂಪೂರ್ಣವಾಗಿ ತನ್ನ ವಶಮಾಡಿಕೊಂಡಳು. ರಟ್ಟ ಮಹಾರಾಜನು ಬರುಬರುತ್ತಾ ಬುದ್ಧನ ವಾಣಿಗೆ ಮರುಳಾಗಿ ಬೌದ್ಧನಾದನು. ಅವನು ತನ್ನ ಹೆಸರಿನ ನಂತರ ‘ಧರ್ಮಾದಿತ್ಯ’ ಎಂಬ ಬಿರುದನ್ನು ಸೇರಿಸಿಕೊಂಡನು. ಹೂಣರ ದಾಳಿಗೆ ಸಿಕ್ಕಿ ಹಾಳಾಗಿದ್ದ ಕಪೋತ ಕೂಟದ ಚೈತ್ಯಾಲಯವು ಜೀರ್ಣೋದ್ಧಾರ ಮಾಡಲ್ಪಟ್ಟಿತು.

ರಟ್ಟ ಧರ್ಮಾದಿತ್ಯನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಧಾರಾದೇವಿಯು ಒಂದು ಹೆಣ್ಣು ಮಗುವಿಗೆ ಜನ್ಮವಿತ್ತು, ತನ್ನ ಇಹಲೋಕ ವ್ಯಾಪಾರವನ್ನು ಮುಗಿಸಿದಳು. ರಟ್ಟ ರಾಜನು ಮಾತ್ರ ಮತ್ತೆ ಮದುವೆಯಾಗಲಿಲ್ಲ. ತನ್ನ ಆ ಹೆಣ್ಣು ಮಗುವಿಗೆ ‘ರಟ್ಟಾ ಯಶೋಧರಾ’ ಎಂದು ನಾಮಕರಣ ಮಾಡಿದನು.

ಹೂಣರ ದಾಳಿ ನಡೆದು ಇಪ್ಪತ್ತೈದು ವರ್ಷಗಳು ಸಂದಿವೆ. ಅತ್ತ ತಂದೆಯ ಮರಣಾನಂತರ ಸ್ಕಂದಗುಪ್ತ ಚಕ್ರವರ್ತಿ ಪಟ್ಟವೇರಿದ್ದಾನೆ. ಚಕ್ರಾಧಿಪತ್ಯದ ನಾಲ್ಕೂ ದಿಕ್ಕುಗಳಲ್ಲಿ ಕ್ರಾಂತಿ ಹಾಗೂ ಅಶಾಂತಿಯು ವ್ಯಾಪಿಸಿದೆ. ಮಗಧದ ಸುತ್ತಮುತ್ತ ಮಾತ್ರ ಸ್ವಲ್ಪ ಶಾಂತಿ ನೆಲೆಸಿತ್ತು. ರಾಜ್ಯದದ ಒಳಗೆ ಪುಷ್ಯಮಿತ್ರನ ಕಡೆಯವರು ಪಿತೂರಿ ಮಾಡುತ್ತಿದ್ದರು. ಈ ಎಲ್ಲ ಪಿಡುಗುಗಳನ್ನು ಹತ್ತಿಕ್ಕಲು ಸ್ಕಂದಗುಪ್ತನು ತನ್ನ ಆಯಾಸವನ್ನೂ ಲೆಕ್ಕಿಸದೆ ನಿದ್ರಾಹಾರಗಳನ್ನು ತ್ಯಜಿಸಿ, ಯುದ್ಧ ಮಾಡುತ್ತಿದ್ದನು. ಅವನ ಸೈನ್ಯವೂ ಕೂಡ ವಿದ್ರೋಹಿಗಳನ್ನು ಸದೆಬಡಿಯುತ್ತಿದ್ದಿತು.

ಆಸೇತು ಹಿಮಾಲಯ ಪರ್ಯಂತ ಸ್ಕಂದನಿಗೂ ಅವನ ಸೈನ್ಯಕ್ಕೂ ಇದೇ ಕೆಲಸವಾಯಿತು. ವರ್ಷ ಕಳೆದರೂ ರಾಜಧಾನಿಗೆ ಹಿಂದಿರುಗಿ ಬರಲಾಗಲಿಲ್ಲ. ಮಂತ್ರಿಗಳು ಪಾಟಲಿಪುತ್ರದಲ್ಲಿದ್ದುಕೊಂಡು ಯಥಾಶಕ್ತಿ ರಾಜ್ಯಭಾರ ನಡೆಸುತ್ತಿದ್ದರು.

ಮುಂದುವರೆಯುವುದು…

ಎನ್. ಶಿವರಾಮಯ್ಯ (ನೇನಂಶಿ)
ತುಮಕೂರು

ಚಿತ್ರಗಳು : ಮಂಜುಳಾ ಸುದೀಪ್

Related post

Leave a Reply

Your email address will not be published. Required fields are marked *