ಹಿಂದಿನ ಸಂಚಿಕೆಯಿಂದ…
ಸಾಮ್ರಾಜ್ಯ ವ್ಯಾಪಿಯಾದ ಈ ವಿಶೃಂಖಲತೆಯ ನಡುವೆ ರಾಜ್ಯಭಾರ ಚೆನ್ನಾಗಿ ನಡೆಯುತ್ತಿತ್ತೆಂದು ಹೇಳಲಾಗುವುದಿಲ್ಲ. ಭೂಕಂಪದಿಂದ ಮನೆಯೇ ಬಿದ್ದು ಹೋಗುತ್ತಿರುವಾಗ, ಆ ಮನೆಯ ಒಂದು ಮೂಲೆಯಲ್ಲಿ ಸಣ್ಣದಾಗಿ ಉರಿಯುತ್ತಿರುವ ಬೆಂಕಿಯನ್ನು ಯಾರೂ ಗಮನಿಸುವುದಿಲ್ಲ. ಹಾಗೆಯೇ ದೇಶದ ಯಾವುದೋ ಮೂಲೆಯಲ್ಲಿರುವ ಒಂದು ಸಣ್ಣ ‘ವಿಟಂಕ’ ರಾಜ್ಯದ ಕಥೆಯನ್ನು ಪಾಟಲಿಪುತ್ರದ ಎಲ್ಲರೂ ಮರತೇ ಬಿಟ್ಟರು. ಇಪ್ಪತ್ತೈದು ವರ್ಷಗಳ ನಡುವೆ ಯಾರೂ ಅದನ್ನು ಹುಡುಕುವ ಗೋಜಿಗೆ ಹೋಗಲಿಲ್ಲ.
ರಾಜ್ಯದ ಹಿಂದಿನ ಗ್ರಂಥಪಾಲ ಮರಣಾನಂತರ ಅವನ ಜಾಗಕ್ಕೆ ಹೊಸಬನ ನೇಮಕವಾಯಿತು. ಹೊಸಬನಾದ ಕಾರಣ ಅವನು ಒಂದು ದಿನ ಸರ್ಕಾರಿ ಕಾಗದ ಪತ್ರಗಳನ್ನು ಒಂದೊಂದಾಗಿ ತೆಗೆದು ಕೊಡವಿ ಪರಿಶೀಲಿಸುತ್ತಿರುವಾಗ ವಿಟಂಕ ರಾಜ್ಯದ ಹೆಸರು ಕಣ್ಣಿಗೆ ಬಿತ್ತು. ಇಪ್ಪತ್ತೈದು ವರ್ಷಗಳಿಂದಲೂ ಈ ರಾಜ್ಯದಿಂದ ಕಪ್ಪಕಾಣಿಕೆಗಳು ಸಂದಾಯವಾದ ಬಗ್ಗೆ ಉಲ್ಲೇಖವಿರಲಿಲ್ಲ. ಹಾಗಾದರೆ ರಾಜ್ಯವೆಲ್ಲಿ ಹೋಯಿತು?
ಇನ್ನೂ ಹಲವಾರು ಕಾಗದ ಪತ್ರಗಳನ್ನು ಚೆನ್ನಾಗಿ ಪರಿಶೀಲಿಸಿದ ನಂತರ ವಿಷಯ ಖಚಿತವಾಯಿತು. ಗಾಬರಿಗೊಂಡ ಗ್ರಂಥಪಾಲನು ಈ ವಿಷಯವನ್ನು ಮಹಾಮಂತ್ರಿಯ ಗಮನಕ್ಕೆ ತಂದನು.
ಸ್ಕಂದಗುಪ್ತನು ಆಗ ಪಾಟಲೀಪುತ್ರದಲ್ಲಿಯೇ ಇದ್ದನು. ದೂರದ ಕೇರಳದಲ್ಲಿ ಯುದ್ಧದಲ್ಲಿ ತೊಡಗಿದ್ದಾಗ ಗುರುತರವಾದ ಒಂದು ವದಂತಿಯನ್ನು ಕೇಳಿ ತ್ವರಿತರಾಗಿ ಪಾಟಲಿಪುತ್ರಕ್ಕೆ ಹಿಂದಿರುಗಿ ಬಂದಿದ್ದನು. ಮತ್ತೆ ಹೂಣರ ಆಗಮನವೆ? ‘ಲಕ್ಷ ಲಕ್ಷ ಸಂಖ್ಯೆಯಲ್ಲಿ ಶ್ವೇತ ಹೂಣರು ವಕ್ಷು ನದಿಯನ್ನು ದಾಟಿ ದಕ್ಷಿಣಾ ಮುಖವಾಗಿ ಪಯಣ ಬೆಳೆಸಿದ್ದಾರೆ’ ಎಂದು ಇಬ್ಬರು ಚೀಣೀ ಸಂನ್ಯಾಸಿಗಳು ಈ ಸಂದೇಶವನ್ನು ಹೊತ್ತು ಕಪಿಶಾಕ್ಕೆ ಬಂದಿದ್ದಾರೆ. ಅಲ್ಲಿಂದ ರಾಜದೂತರು ಕುದುರೆ ಹತ್ತಿ ಹಗಲೂ ರಾತ್ರಿ ಪ್ರಯಾಣ ಮಾಡಿ ಸ್ಕಂದನ
ಬಳಿಗೆ ಬಂದು ಸುದ್ದಿ ಮುಟ್ಟಿಸಿದ್ದರು. ಕೇರಳ ಯುದ್ಧದ ಭಾರವನ್ನು ಅನುಭವಿ ಸೇನಾಪತಿಗಳಿಗೆ ಒಪ್ಪಿಸಿ ಮಹಾರಾಜನು ರಾಜಧಾನಿಗೆ ಹಿಂದಿರುಗಿದ್ದನು.
ಮಹಾಮಂತ್ರಿಯು ವಿಟಂಕ ರಾಜ್ಯದ ಸುದ್ದಿಯೊಂದಿಗೆ ರಾಜನ ಸಮೀಪಕ್ಕೆ ಬಂದು ‘ಪ್ರಭು, ಒಂದು ದೊಡ್ಡ ತಪ್ಪು ನಡೆದು ಹೋಗಿದೆ. ವಿಟಂಕ ಎಂಬ ಹೆಸರಿನ ಪಂಚನದ ಪ್ರದೇಶದ ಒಂದು ರಾಜ್ಯವು ನಮ್ಮ ಲೆಕ್ಕದಲ್ಲಿ ಬಿಟ್ಟು ಹೋಗಿದೆ. ಹೂಣರು ಆ ಪ್ರದೇಶದಲ್ಲಿ ಅಧಿಕಾರ ಸ್ಥಾಪಿಸಿಕೊಂಡು ನೆಲೆಸಿರಬೇಕೆಂದು ಕಾಣುತ್ತದೆ. ಇಪ್ಪತ್ತೈದು ವರ್ಷಗಳಿಂದಲೂ ಅವರಿಂದ ಕಪ್ಪ ಕಾಣಿಕೆಗಳು ಸಂದಾಯವಾಗಿಲ್ಲ’
ಸ್ಕಂದಗುಪ್ತನು ಆಗ ವಿಶ್ರಾಂತಿಭವನದ ಒಂದು ಕೊಠಡಿಯಲ್ಲಿ ಏಕಾಕಿಯಾಗಿಮಣಿ ಖಚಿತವಾದ ನೆಲಗಟ್ಟಿನ ಮೇಲೆ ಕುಳಿತಿದ್ದಾನೆ. ಅವನ ಮುಂದೆ ಪಗಡೆಯ ಹಾಸು ಇದೆ. ಒಬ್ಬನೇ ದಾಳ ಉರುಳಿಸುತ್ತಿದ್ದಾನೆ. ಮಂತ್ರಿಯ ಮಾತುಗಳನ್ನು ಕೇಳಿ ಸ್ವಪ್ನಾತುರ ದೃಷ್ಟಿಯಿಂದ ಅವನನ್ನು ನೋಡುತ್ತಾನೆ. ರಾಜನಿಗೆ ಆಗ ಸುಮಾರು ಐವತ್ತು ವರ್ಷ ವಯಸ್ಸಾಗಿರಬಹುದು. ಆದರೆ ಬಲಿಷ್ಠವಾದ ದೇಹದಲ್ಲಿ ಎಲ್ಲಿಯೂ ಮುಪ್ಪಿನ ಚಿಹ್ನೆಗಳು ಕಾಣುತ್ತಿರಲಿಲ್ಲ. ಕೋಮಲವಾದ ಎರಡು ಕಣ್ಣುಗಳು ಯುವತಿಯರ ಹಾಗೆ ಕನಸನ್ನೇ ಕಾಣುತ್ತಿದ್ದವು. ಅವನ ಸುದೃಢವಾದ ದೇಹ ಹಾಗೂ ಲಾವಣ್ಯಪೂರ್ಣ ಮುಖ ಮಂಡಲವನ್ನು ನೋಡಿದರೆ ಅವನೊಬ್ಬ ಪರಾಕ್ರಮಶಾಲಿಯಾದ ವೀರನೆಂದು ಹೇಳುವುದಕ್ಕಾಗುತ್ತಿರಲಿಲ್ಲ. ಕವಿಯೋ ಭಾವುಕನೋ ಆಗಿರಬೇಕೆಂಬ ಭ್ರಮೆ ಉಂಟಾಗುತ್ತಿತ್ತು.
ಸ್ಕಂದನು ಎರಡು ಕೈಗಳಲ್ಲಿ ದಾಳಗಳನ್ನು ಉಜ್ಜುತ್ತ ಶೂನ್ಯದತ್ತ ನೋಡುತ್ತ ತನ್ನಲ್ಲಿಯೇ ಮಾತನಾಡಿಕೊಳ್ಳುತ್ತಿದ್ದನು. ‘ಈ ಬಾರಿ ಹೂಣರನ್ನು ಹೊರದೂಡಲಾಗುವುದಿಲ್ಲ’ ಎಂದು ಪಗಡೆ ಹೇಳುತ್ತದೆ. ಮೂರು ಬಾರಿ ದಾಳ ಉರುಳಿಸಿದ್ದೇನೆ. ಮೂರು ಬಾರಿಯೂ ಪಗಡೆ ಇದೇ ಮಾತನ್ನು ನುಡಿಯುತ್ತಿದೆ. ಗುಪ್ತ ಸಾಮ್ರಾಜ್ಯ ಶಿಥಿಲವಾಗುತ್ತಿದೆ. ಇನ್ನು ತಡವಿಲ್ಲದೆ ಭಗ್ನವಾಗುತ್ತದೆ. ಅನಂತರ ವಾಸ್ತವ ಸ್ಥಿತಿಗೆ ಮರಳಿ, ಚಕಿತನಾಗಿ ಎದುರಿಗಿದ್ದ ಮಹಾಮಂತ್ರಿಯ ಕಡೆ ನೋಡಿ, ‘ಮಹಾಮಂತ್ರಿಗಳೇ, ಆಸನ ಸ್ವೀಕರಿಸಿ…” ಎಂದನು.
ಮಹಾಮಂತ್ರಿ ಪೃಥ್ವೀಸೇನನು ರಾಜನ ಮುಂದಿರುವ ಆಸನದಲ್ಲಿ ಕುಳಿತನು ಎಂಬತ್ತು ವರ್ಷಕ್ಕೂ ಮೀರಿದ ವಯೋವೃದ್ಧ. ಬಿದಿರು ಕಡ್ಡಿಯ ಹಾಗೆ ನೇರ ಹಾಗೂ ಗಂಟುಗಳುಳ್ಳ ಕೃಶ ಶರೀರ. ಈತನೇ ಈ ಬೃಹತ್ ರಾಜ್ಯದ ಮಹಾ ಸಚಿವ ಹಾಗೂ ಮಹಾದಂಡನಾಯಕ, ಸ್ಕಂದನ ತಂದೆ ಕುಮಾರಗುಪ್ತನ ಕಾಲದಿಂದಲೂ ಅನನ್ಯಪರತೆಯಿಂದ ರಾಜ್ಯದ ಸೇವೆ ಸಲ್ಲಿಸುತ್ತ ಬಂದಿರುವವನು ‘ಕವಿ ಕಾಳಿದಾಸನು ಒಂದಿನ ನನಗೆ ಹೇಳಿದ್ದು ನೆನಪಿಗೆ ಬರುತ್ತಿದೆ. ಪಗಡೆಯ ಭವಿಷ್ಯವಾಣಿ, ಯಾರು ನಂಬುತ್ತಾರೆಯೋ ಅವರು ಮೂರ್ಖರು. ಅಯ್ಯೋ ಕಾಳಿದಾಸ!” ಪೃಥ್ವೀಸೇನನು ನಿಟ್ಟುಸಿರು ಬಿಡುತ್ತ ನೀರಸ ಧ್ವನಿಯಲ್ಲಿ ತನಗೆ ತಾನೇ ಹೇಳಿಕೊಂಡನು. ನಂತರ ರಾಜನನ್ನು ಕುರಿತು ‘ಈಗ ಈ ವಿಟಂಕ ರಾಜ್ಯದ ಬಗೆಗೆ ಏನು ಮಾಡೋಣ?’
ಸ್ವಲ್ಪ ನಕ್ಕು ಸ್ಕಂದನು ಹೀಗೆ ಹೇಳಿದನು- ‘ರಾಜ್ಯ ಕಳೆದುಕೊಂಡದ್ದಾಗಿದೆ. ಆಶ್ಚರ್ಯವೇನೂ ಇಲ್ಲ. ಕೇರಳ ಯುದ್ಧದಲ್ಲಿ ನಮ್ಮ ಉಂಗುರದೊಳಗಿನ ನೀಲಕಾಂತ ಮಣಿಯು ಯಾವಾಗಲೋ ಕಳಚಿ ಬಿದ್ದುಹೋಗಿದೆ. ಯಾವಾಗ ಹೋಯಿತೋ ನನಗೆ ತಿಳಿಯದು. ಈಗಲೇ ನನಗೆ ಗೊತ್ತಾಗಿದ್ದು, ಇಲ್ಲಿ ನೋಡಿ’ ಎಂದು ಹೇಳಿ ಉಂಗುರವನ್ನು ತೋರಿಸುತ್ತಾನೆ.
ಅನಂತರ ರಾಜನು ಮಂತ್ರಿಯೊಡನೆ ಬಹಳ ಹೊತ್ತು ರಾಜಕಾರ್ಯ ಕುರಿತು ಸಮಾಲೋಚನೆ ನಡೆಸಿದನು. ವಿಟಂಕ ರಾಜ್ಯದ ಬಗೆಗೂ ಸ್ವಲ್ಪ ಮಟ್ಟಿಗೆ ವಿಚಾರ ಮಾಡಲಾಯಿತು. ಈಗ ಮತ್ತೆ ಬಂದಿರುವ ಹೂಣರನ್ನು ತಡೆಗಟ್ಟಲು ಚತುರಂಗ ಸೇನೆಯೊಡನೆ ಪುರುಷಪುರಕ್ಕೆ ಹೋಗಬೇಕು. ಇದರ ಜೊತೆಗೆ ಪಂಚನದ ಪ್ರದೇಶದಲ್ಲಿ ಎಷ್ಟು ಜನ ಸಾಮಂತ ರಾಜರಿದ್ದಾರೆಯೋ ಅವರೆಲ್ಲರ ಬಳಿಗೆ ತಡ ಮಾಡದೆ ದೂತರನ್ನು ಕಳುಹಿಸಬೇಕು; ಈ ಎಲ್ಲ ಸಾಮಂತರಾಜರೂ ಒಟ್ಟಾಗಿ ಹೂಣರ ವಿರುದ್ಧ ವ್ಯೂಹ ರಚನೆ ಮಾಡಿ, ಸ್ವರಾಜ್ಯ ರಕ್ಷಣೆಗಾಗಿ ಸಿದ್ಧರಾಗಿರಬೇಕೆಂದು ಅವರಿಗೆ ಸೂಚಿಸಬೇಕು; ವಿಟಂಕ ರಾಜ್ಯಕ್ಕೂ ಮಗಧದ ದೂತ ಹೋಗಬೇಕು; ಅಲ್ಲಿರುವ ಹೂಣರಾಜನಿಗೆ ಮಗಧದ ಅಧೀನತೆಯನ್ನು ಒಪ್ಪಿಕೊಳ್ಳುವಂತೆ ಆದೇಶ ಪತ್ರವನ್ನು ಕಳುಹಿಸಿ ಕೊಡಬೇಕು; ಹೂಣನು ಇದಕ್ಕೆ ಸಮ್ಮತಿಸದಿದ್ದರೆ ಸ್ಕಂದಗುಪ್ತನು ಅಲ್ಲಿಗೆ ತೆರಳಿ ತಕ್ಕ ವ್ಯವಸ್ಥೆ ಮಾಡಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು.
ಮಹಾಮಂತ್ರಿಯು ರಾಜನ ಸನ್ನಿಧಾನದಿಂದ ಬೀಳ್ಕೊಂಡು ಹೊರಟು ಹೋದ ಮೇಲೆ, ಸ್ವಲ್ಪ ಸಮಯ ಬಿಟ್ಟು ವಿದೂಷಕ ಪಿಪ್ಪಲೀ ಮಿಶ್ರ ಬಂದು ಕಾಣಿಸಿಕೊಂಡನು. ಅತಿಸ್ಥೂಲಕಾಯನಾದ ಬ್ರಾಹ್ಮಣ ಕೈಯಲ್ಲಿ ಒಂದು ದೊಡ್ಡದಾದ ಕುಂಬಳಕಾಯಿ, ರಾಜನು ಇದನ್ನು ನೋಡಿ, ‘ಪಿಪ್ಪಲ, ಇದೇನು! ಕುಂಬಳಕಾಯಿ! ಏತಕ್ಕೆ?’ ಎಂದನು. ವಿದೂಷಕನು ಕುಂಬಳಕಾಯಿಯನ್ನು ಮಹಾರಾಜನ ಪಾದದ ಬಳಿ ಇಟ್ಟು ಮಂತ್ರಿಯು ಕುಳಿತು ಬಿಟ್ಟು ಹೋಗಿದ್ದ ಪೀಠದಲ್ಲಿ ಕುಳಿತು ಏದುತ್ತಾ ಏದುತ್ತಾ ‘ಮಹಾರಾಜ, ಬರಿಯ ಕೈಯಲ್ಲಿ ರಾಜನ ಬಳಿಗೆ ಬರಬಾರದು. ಇದೇ ಶಿಷ್ಟಾಚಾರವಲ್ಲವೆ?’
ರಾಜ ‘ಸರಿ ಹೋಯಿತು. ನಿನ್ನ ಬುದ್ಧಿ ಹಾಗೂ ನಿನ್ನ ಶರೀರ ಎರಡೂಕೂಡ ಕುಂಬಳಕಾಯಿಯ ಹಾಗೆಯೇ. ಈ ಕುಂಬಳಕಾಯಿ ನಿನಗೆ ಎಲ್ಲಿಸಿಕ್ಕಿತು?’
ವಿದೂಷಕ- ‘ಮನೆಯ ಹಿತ್ತಲಿನಲ್ಲಿ ಬಿಟ್ಟಿತ್ತು. ನನ್ನ ಹೆಂಡತಿಯನ್ನುಚೆನ್ನಾಗಿ ಪುಸಲಾಯಿಸಿ ಸ್ನೇಹಿತನಿಗಾಗಿ ತಂದಿದ್ದೇನೆ’.
ರಾಜ- ‘ನಿನ್ನ ಹೆಂಡತಿಯನ್ನು ಏನೆಂದು ಪುಸಲಾಯಿಸಿದೆ?’
ವಿದೂಷಕ- ‘ವಯಸ್ಯ, ನನ್ನ ಹೆಂಡತಿಗೆ ಕುಂಬಳಕಾಯಿಯ ಹಾಗೆ ನಿಷ್ಪ್ರಯೋಜಕನಾದ ಅಣ್ಣನ ಮಗನೊಬ್ಬನಿದ್ದಾನೆ. ಅವನಿಗೆ ದೇಶ ತಿರುಗುವುದೆಂದರೆ ಬಹಳ ಇಷ್ಟ. ಈಗ ರಾಜನು ಅವನನ್ನು ಯಾವುದಾದರೂ ದೂರ ದೇಶಕ್ಕೆ ದೂತನ ಹಾಗೆ ಕಳುಹಿಸಿಕೊಡುವುದಾದರೆ ಅವನ ಇಚ್ಛೆ ಪೂರೈಸಿದಂತಾಗುತ್ತದೆ. ರಾಜರ ಬಳಿ ಮಾತನಾಡಿ ಅವನಿಗೆ ತಕ್ಕ ವ್ಯವಸ್ಥೆ ಮಾಡಿಸಿಕೊಡುವುದಾಗಿ ನನ್ನ ಹೆಂಡತಿಯನ್ನು ಪುಸಲಾಯಿಸಿ ಈ ಕುಂಬಳಕಾಯಿಯನ್ನು ಗಿಟ್ಟಿಸಿಕೊಂಡು ತಂದಿದ್ದೇನೆ.
ರಾಜ- (ನಗುತ್ತ) ‘ಧನ್ಯ ಪಿಪ್ಪಲ, ನಿನ್ನ ವಯಸ್ಯ ಪ್ರೀತಿ ಅನುಪಮವಾದದು. ಹಾಗೆಯೇ ಆಗಲಿ, ನಿನ್ನ ಹೆಂಡತಿಯ ಅಣ್ಣನ ಮಗನನ್ನು ದೇಶಾಟನೆಗೆ ಕಳುಹಿಸಿಕೊಡುತ್ತೇನೆ. ಈಗ ಈ ಕುಂಬಳಕಾಯಿಯನ್ನು ಅಡಿಗೆ ಶಾಲೆಗೆ
ಕಳುಹಿಸಿಕೊಡು’.
ಕುಂಬಳಕಾಯಿಯನ್ನು ಸಾಗ ಹಾಕಿದ ಮೇಲೆ ರಾಜನು ವಿದೂಷಕನನ್ನು ಕುರಿತು ಪಿಪ್ಪಲ, ಬಾ ಪಗಡೆ ಆಟ ಆಡೋಣ ಇನ್ನೂ ಒಂದು ಸಲ ಭಾಗ್ಯ ಪರೀಕ್ಷೆ ಮಾಡಿ ನೋಡುತ್ತೇನೆ. ಒಂದು ವೇಳೆ ನೀನು ನನ್ನನ್ನು ಸೋಲಿಸಿದರೆ ‘ನಿಯತಿಯ ವಿಧಾನ ಅಲಂಘನೀಯವೆಂದು’ ತಿಳಿಯುತ್ತೇನೆ ಎಂದು ಹೇಳಿದನು.
ಪಿಪ್ಪಲೀಪುತ್ರ- ‘ವಯಸ್ಯ, ಆಟದಲ್ಲಿ ನಿನ್ನನ್ನು ಸೋಲಿಸುತ್ತೇನೆಯೋ ಇಲ್ಲವೋ, ಅದು ಹಾಗಿರಲಿ. ಆದರೆ ನಿಯತಿಯ ವಿಧಾನ ಮಾತ್ರ ಎಂದೆಂದಿಗೂ ಅಲಂಘನೀಯವೇ ಸರಿ. ಕಾರಣ ನಿಯತಿ ಎಂಬುದು ಸ್ತ್ರೀಲಿಂಗ ಶಬ್ಧ. ‘ನೋಡೋಣ’ ಎಂದು ಹೇಳಿ ಸ್ಕಂದನು ದಾಳ ಉರುಳಿಬಿಟ್ಟನು.
(ಇದು ನಮ್ಮ ಕಥೆ ಪ್ರಾರಂಭವಾಗುವುದಕ್ಕೆ ಸುಮಾರು ಮೂರು ತಿಂಗಳ ಹಿಂದೆ ನಡೆದ ಘಟನೆ)
ಮುಂದುವರೆಯುವುದು…
ಎನ್. ಶಿವರಾಮಯ್ಯ (ನೇನಂಶಿ)
ತುಮಕೂರು
ಚಿತ್ರಗಳು : ಮಂಜುಳಾ ಸುದೀಪ್