ಹಿಂದಿನ ಸಂಚಿಕೆಯಿಂದ….
ಅಶ್ವಚೋರ ಚಿತ್ರಕನು ಕಾಡಿನ ಮಧ್ಯೆ ಮರೆಯಾದನಲ್ಲವೆ! ಆ ಕಾಡು ಸಣ್ಣ ಪುಟ್ಟದಲ್ಲ. ಸುಮಾರು ಆರು ಹರದಾರಿಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ಅದು ವ್ಯಾಪಿಸಿತ್ತು. ಮುಗಿಲೆತ್ತರ ಬೆಳೆದ ದಟ್ಟವಾದ ಕಾಡು. ಭೂಮಿ ಎಲ್ಲ ಕಡೆಯೂ ಸಮತಲವಾಗಿಲ್ಲ. ಅಲಲ್ಲಿ ಒರಟು ಕಲ್ಲುಗಳಿಂದ ಕೂಡಿದ ಹಳ್ಳ ದಿಣ್ಣೆಗಳು, ಕೆಲವು ಕಡೆ ಮರಗಳಿಂದ ಸುತ್ತವರಿದಿರುವ ಹುಲ್ಲಿನ ವಿಶಾಲವಾದ ಬಯಲು; ಕೆಲವು ಕಡೆ ಬಂಜರು ಪ್ರದೇಶದಲ್ಲಿ ಬೆಳೆದ ಮುಳ್ಳಿನ ಗಿಡಗಳು; ಕೆಲವು ಕಡೆ ಕಿರಿದಾಗಿ ಹರಿಯುತ್ತಿರುವ ತೊರೆಗಳು. ಇದು ಜಿಂಕೆ, ಹಂದಿ, ಮೊಲ, ನವಿಲು ಮುಂತಾದ ನಾನಾ ವಿಧದ ಜೀವಿಗಳಿಗೆ ಆವಾಸಸ್ಥಾನ. ಪ್ರಧಾನ ನಗರದ ಹೊರಭಾಗದಲ್ಲಿ ರಾಜರುಗಳು ಬೇಟೆ ಆಡುವುದಕ್ಕೋಸ್ಕರವೇ ಇಂಥ ಕ್ರೀಡಾಕಾನನಗಳನ್ನು ಕಾಪಾಡಿಕೊಂಡು ಬರುವ ಪರಿಪಾಠವಿತ್ತು.
ಈ ಕಾಡಿನ ಮಧ್ಯಭಾಗದಲ್ಲಿ ಸುಮಾರು ಮೂರು ಹರದಾರಿಗಳಷ್ಟು ದೂರವನ್ನು ಶರವೇಗದಿಂದ ಕುದುರೆಯನ್ನು ಓಡಿಸಿಕೊಂಡು ಬಂದ ಚಿತ್ರಕನು ಲಗಾಮು ಎಳೆದು ವೇಗವನ್ನು ತಗ್ಗಿಸಿದನು. ಬಹು ದಿನಗಳಿಂದ ಚಿತ್ರಕನು ಕುದುರೆಯನ್ನು ಏರಿರಲಿಲ್ಲ. ಕುದುರೆಯ ಮೇಲೆ ಕುಳಿತು ಗಾಳಿಯನ್ನು ಸೀಳಿಕೊಂಡು ಹೋಗುವಾಗ ಚಿತ್ರಕನಿಗೆ ಹರ್ಷೋನ್ಮಾದ ಉಂಟಾಯಿತು. ಅವನು ತಲೆ ಎತ್ತಿ ಹುಚ್ಚನಂತೆ ಎತ್ತರದ ದನಿಯಲ್ಲಿ ವಿಕಟಾಟ್ಟಹಾಸಗೈದನು. ಮರುಕ್ಷಣವೇ ಮೌನ ತಾಳಿದನು. ದೂರದಿಂದ ಯಾವುದೋ ಮಾನವ
ಧ್ವನಿ ಕೇಳಿದಂತಾಯಿತು. ಕುದುರೆಯು ಆಗ ಮರಗಳಿಲ್ಲದ ಬಯಲಿನಲ್ಲಿ ಹೋಗಿ ನಿಂತಿತು. ಚಕಿತನಾದ ಚಿತ್ರಕನು ನಾಲ್ಕೂ ದಿಕ್ಕುಗಳನ್ನು ಕುತೂಹಲದಿಂದ ನೋಡಿದನು. ಬಯಲಿನ ಕೊನೆಯ ಭಾಗದಲ್ಲಿ ಮಧೂಕ ವೃಕ್ಷದ ಕೆಳಗೆ ಒಬ್ಬ ವ್ಯಕ್ತಿ ನಿಂತಿದ್ದಾನೆ. ಅವನ ಬಳಿ ಒಂದು ಕುದುರೆಯೂ ಇದೆ.
ಇಲ್ಲಿಯವರೆಗೂ ಈ ಕಾಡಿನಲ್ಲಿ ಯಾವ ಮಾನವ ಪ್ರಾಣಿಯನ್ನೂ ಚಿತ್ರಕ ಕಂಡಿರಲಿಲ್ಲ. ಸಂದೇಹ ದೃಷ್ಟಿಯಿಂದ ಆ ವ್ಯಕ್ತಿಯನ್ನು ನಿರೀಕ್ಷಿಸಿದನು. ದೂರದಿಂದ ಅವನನ್ನು ಚೆನ್ನಾಗಿ ನೋಡಲಾಗಲಿಲ್ಲ. ಆದರೂ ವೇಷಭೂಷಗಳಿಂದ ಅವನೊಬ್ಬ ತೊಂದರೆಗೆ ಒಳಗಾದವನೆಂದು ಊಹಿಸಬಹುದಾಗಿತ್ತು. ‘ಚಿತ್ರಕನು ಕಣ್ಣುಗಳ ಮೇಲೆ ಕೈ ಮರೆಮಾಡಿಕೊಂಡು ಸೂಕ್ಷ್ಮವಾಗಿ ಅವಲೋಕಿಸಿದನು.
ಅವನು ಯಾರೇ ಆಗಿರಲಿ, ಅವನು ಏಕಾಕಿ. ಅಕ್ಕಪಕ್ಕ ಯಾರೂ ಇಲ್ಲ. ಆದರೂ ಚಿತ್ರಕನ ಸ್ಥಿತಿ ಡೋಲಾಯಮಾನವಾಗಿತ್ತು. ಓಡಿ ಹೋಗಲೇ!’ ಎಂದು ಯೋಚಿಸಿದನು. ಆದರೆ ಈ ವ್ಯಕ್ತಿಯ ಬಳಿಯೂ ಕುದುರೆ ಇದೆ. ಓಡಿ ಹೋದರೆ ಹಿಂಬಾಲಿಸಿಯಾನು! ಇಂಥ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ತೋಚದೆ ಕ್ಷಣಕಾಲ, ‘ನ ಯಯೌ… ನ ತಸ್ಥೌ’ ಎಂಬ ಹಾಗೆ ಇರಲೂ ಆಗದೆ ಹೋಗಲೂ ಆಗದೆ ಸ್ಥಂಭೀಭೂತನಾಗಿದ್ದನು. ಅಷ್ಟು ಹೊತ್ತಿಗೆ ಆ ವ್ಯಕ್ತಿ. ಕುದುರೆಯ ಲಗಾಮು ಹಿಡಿದುಕೊಂಡು ಮರದ ಬುಡದ ಕಡೆಯಿಂದ ಹೊರಬಂದನು. ಕುದುರೆಯು ಕುಂಟುತ್ತ, ಮೂರು ಕಾಲಿನ ಮೇಲೆ ಭಾರ ಹಾಕುತ್ತ ಬರುತ್ತಿರುವುದನ್ನು ಚಿತ್ರಕ ನೋಡಿದನು. ಪರಿಸ್ಥಿತಿಯನ್ನು ತಿಳಿದ ಮೇಲೆ ಚಿತ್ರಕ ಆಗಂತುಕ ವ್ಯಕ್ತಿಯ ಕಡೆಗೆ ಹೊರಟನು. ಆ ಹೊಸಬನು ಚಿತ್ರಕನ ಬರುವಿಕೆಯನ್ನು ಕಂಡು ಅಲ್ಲಿಯೆ ನಿಂತನು. ಮಧೂಕ ವೃಕ್ಷದ ಬಳಿ ಅವರಿಬ್ಬರೂ ಮುಖಾಮುಖಿಯಾಗಿ ಪರಸ್ಪರ ಕ್ಷಣಕಾಲ ದೃಷ್ಟಿಸಿ ನೋಡಿದರು.
ಆಗಂತುಕ ಮೈಕೈ ತುಂಬಿಕೊಂಡ ಸುಕುಮಾರ ಶರೀರದವನು. ದುಂಡು ಮುಖ. ವಿಶಾಲವಾದ ಕಣ್ಣುಗಳು, ಬಲವಾದ ಮೀಸೆ ಮುಖಕ್ಕೆ ಮೆರುಗು ಕೊಡುತ್ತಿದ್ದರೂ ಅದನ್ನು ಸಿಂಗರಿಸಿಕೊಳ್ಳದಿರುವುದರಿಂದ ಸಾಕಷ್ಟು ತೊಂದರೆಗೆ ಒಳಗಾಗಿದ್ದಾನೆಂದು ಊಹಿಸಬಹುದಾಗಿತ್ತು. ತಲೆಗೆ ಕೆಂಪುಬಣ್ಣದ ರುಮಾಲು. ಹಳದಿ ಬಣ್ಣದ ನಿಲುವಂಗಿ, ಮೇಲೊಂದು ಉತ್ತರೀಯ. ಅದನ್ನು ಹೆಗಲ ಮೇಲಿಂದ ಇಳಿಯಬಿಟ್ಟು ಗಂಟು ಹಾಕಿದ್ದಾನೆ. ಸೊಂಟಪಟ್ಟಿಯಲ್ಲಿ ಒಂದು ದೊಡ್ಡ ಕತ್ತಿ ನೇತಾಡುತ್ತಿದೆ. ಚಿತ್ರಕ ಇದನ್ನೆಲ್ಲಾ ಗಮನವಿಟ್ಟು ನೋಡಿದ. ಆಗಂತುಕನೂ ಚಿತ್ರಕನನ್ನೂ ಸೂಕ್ಷ್ಮರಾಗಿ ನಿರೀಕ್ಷಿಸುತ್ತಿದ್ದಾನೆ. ‘ಬೆಲೆ ಬಾಳುವ ವಸ್ತುಗಳಿಂದ ಸಿಂಗರಿಸಿರುವ ಒಳ್ಳೆಯ ಜಾತಿಯ ಕುದುರೆ, ಆದರೆ ಅದರ ಮೇಲೆ ಕುಳಿತವನು ನಿರ್ಗತಿಕ ವೇಷದ ಸೈನಿಕ. ಅಶ್ವ ಹಾಗೂ ಅಶ್ವಾರೋಹಿಯ ವೇಷಭೂಷಣ ಸಂಪೂರ್ಣವಾಗಿ ವಿರುದ್ಧವಾದುದು. ಕುದುರೆಯು ಯಾರದೋ ಧನಿಕನದಾಗಿದ್ದು ಈ ಆರೋಹಿಯು ಅದನ್ನು ಕದ್ದಿರಬಹುದು’ ಎಂದು ಆಗಂತುಕನು ಊಹಿಸಿದನು.
ಆಗಂತುಕ- ಮಹಾಶಯ, ನಿನ್ನ ಈ ವನ ಪ್ರದೇಶದಲ್ಲಿ ಎಲ್ಲಿಯಾದರೂ ಗ್ರಾಮಗಳಿವೆಯೆ?
ತನ್ನಂತೆಯೇ ಈ ಆಗಂತುಕನೂ ಈ ಪ್ರದೇಶಕ್ಕೆ ಹೊಸಬನೆಂದು ಚಿತ್ರಕನಿಗೆ ಮನವರಿಕೆಯಾಯಿತು. ‘ನೀನು ಎಲ್ಲಿಂದ ಬರುತ್ತಿದ್ದೀಯೆ?’ ಎಂದು ಅವನನ್ನು ಪ್ರಶ್ನಿಸಿದನು.
ಆಗಂತುಕನಿಗೆ ಸ್ವಲ್ಪ ಕೋಪ ಬಂದಿತು. ಈ ಯಃಕಶ್ಚಿತ್ ಸೇವಕ ತನ್ನನ್ನು ಸಮಾನ ಸ್ಕಂದನಂತೆ ಮಾತನಾಡಿಸುತ್ತಾನಲ್ಲ! ಈ ದೇಶದ ಜನಗಳು ಶುದ್ಧ ಗಮಾರರು. ಗೌರವಾನ್ವಿತ ವ್ಯಕ್ತಿಗಳನ್ನು ಕೂಡ ಗುರುತಿಸಲಾರರು. ಆ ವ್ಯಕ್ತಿ ಮೀಸೆಯನ್ನು ಹುರಿ ಮಾಡುತ್ತ ‘ನಾನು ಎಲ್ಲಿಂದ ಬರುತ್ತಿದ್ದೇನೆ ಎಂಬುದು ನಿನಗೆ ಸಂಬಂಧಿಸಿದ್ದಲ್ಲ. ಈ ಕಾಡಿನ ಪ್ರದೇಶಕ್ಕೆ ಬಂದಾಗಿನಿಂದಲೂ ಬೆಟ್ಟಗುಡ್ಡಗಳಲ್ಲಿ ಕಾಡುಗಳಲ್ಲಿ ಅಲೆಯುತ್ತಿದ್ದೇನೆ. ಇಲ್ಲಿನ ಜನರು ಎಷ್ಟು ಅಸಭ್ಯರೆಂದರೆ, ಇವರು ಮಾಗಧಿಯನ್ನಾಗಲಿ, ಅವಹಟ್ಟ ಭಾಷೆಯನ್ನಾಗಲಿ ಅರ್ಥ ಮಾಡಿಕೊಳ್ಳಲಾರರು. ಏಳು ದಿನಗಳಿಂದ ಅಲ್ಲಿ ಇಲ್ಲಿ ಅಲೆಯುವುದೇ ಆಗಿದೆ. ಇನ್ನೂ ರಾಜಧಾನಿ ಕಪೋತಕೂಟವನ್ನು ತಲುಪಲಾಗಲಿಲ್ಲ. ನಿನ್ನೆ ರಾತ್ರಿ ಒಂದು ಗ್ರಾಮದ ಗೃಹಸ್ಥನೊಬ್ಬನ ಮನೆಯಲ್ಲಿ ಉಳಿದುಕೊಂಡಿದ್ದೆ. ಬೆಳಗ್ಗೆ ಎದ್ದು ಹೊರಟಾಗ ಯಾವನೋ ಒಬ್ಬ ಕುಲಗೆಟ್ಟವನು ಕಪೋತಕೂಟಕ್ಕೆ ಇದೇ ನೇರವಾದ ಮಾರ್ಗ ಎಂದು ಹೇಳಿ, ತೋರಿಸಿ, ಹೊರಟು ಹೋದನು. ಅಲ್ಲಿಂದ ಹೊರಟವನು ಐದು ಬೆಟ್ಟಗಳನ್ನು ದಾಟಿ ಬಂದಿದ್ದೇನೆ. ಆದರೂ ಇನ್ನೂ ಕಪೋತಕೂಟ ಕಣ್ಣಿಗೆ ಕಾಣಿಸುತ್ತಿಲ್ಲ. ಅದರ ಮೇಲೆ ‘ಗಂಡಸ್ಯೋಪರಿ ಸ್ಫೋಟಕಂ’ ಎನ್ನುವ ಹಾಗೆ ಈ ವನ ಪ್ರದೇಶಕ್ಕೆ ಬಂದಾಗ ಕುದುರೆಯು ಒಂದು ಹಳ್ಳಕ್ಕೆ ಕಾಲಿಟ್ಟು, ಕಾಲು ಮುರಿದುಕೊಂಡಿತು. ಹೊಟ್ಟೆಗೆ ಅನ್ನವಿಲ್ಲ. ಗುರುತರವಾದ ‘ರಾಜಕಾರ್ಯವಿಲ್ಲದಿದ್ದರೆ ಈ ಅಮಂಗಳವಾದ ಪ್ರದೇಶದಿಂದ ವಾಪಸ್ಸು ಹೊರಟು ಹೋಗುತ್ತಿದ್ದೆ’ ಎಂದನು.
ಚಿತ್ರಕ- ಓಹೋ? ನೀನು ರಾಜಕಾರ್ಯದ ನಿಮಿತ್ತ ಕಪೋತಕೂಟಕ್ಕೆ ಹೋಗಬೇಕೊ?
ಆಗಂತುಕ (ಗಾಂಭೀರವಾಗಿ) ಹೌದು, ಗುರುತರವಾದ ರಾಜಕಾರ್ಯದ ನಿಮಿತ್ತ, ನನ್ನ ಹೆಸರು ಶಶಿಶೇಖರ ಶರ್ಮಾ. ಮಗಧದ ರಾಜ ವಯಸ್ಯ. ನಮ್ಮ ಆ ಮಾತು ಹಾಗಿರಲಿ. ಕಪೋತಕೂಟ ಇಲ್ಲಿಂದ ಬಹಳ ದೂರವೇನು? ಈ ಶಶಿಶೇಖರ ಶರ್ಮಾ ಬೇರೆ ಯಾರೂ ಅಲ್ಲ, ವಿದೂಷಕ ಪಿಪ್ಪಲ ಮಿಶ್ರನ ಹೆಂಡತಿಯ ಅಣ್ಣನ ಮಗ ಎಂಬುದು ಪಾಠಕರಿಗೆ ತಿಳಿದಿರಬಹುದು ಅವನ ಪ್ರಶ್ನೆಗೆ ಉತ್ತರವಾಗಿ ಚಿತ್ರಕನು ‘ಕಪೋತಕೂಟ ಬಹಳ ದೂರವಿದೆ. ಈ ದಿನ ರಾತ್ರಿ ಹೊತ್ತಿಗೆ ನೀನು ಅಲ್ಲಿಗೆ ತಲುಪಲಾರೆ. ಕುದುರೆ ಇದ್ದರೆ ಬೇಗ ತಲುಪಬಹುದು ಎಂದು ಹೇಳಿದನು. ಮಗಧದ ದೂತನು ಚಿತ್ರಕನ ಬಳಿ ಇದ್ದ ಕುದುರೆಯ ಕಡೆ ಆಸೆ ಗಣ್ಣಿನಿಂದ ನೋಡಿ ‘ಈ ಕುದುರೆ ನಿನ್ನದೇನು?’ ಎಂದು ಪ್ರಶ್ನಿಸಿದನು. “ಹೌದು” ಶಶಿ ಶೇಖರನಿಗೆ ಸಂಪೂರ್ಣವಾಗಿ ನಂಬಿಕೆ ಬರಲಿಲ್ಲ. ನಂಬಿಕೆ ಬರದಿದ್ದರೂ ಏನೂ ಪ್ರಯೋಜನವಿಲ್ಲವಲ್ಲಾ! ಕಡೆಗೆ ಅವನು ಉತ್ಸಾಹದ ಧ್ವನಿಯಲ್ಲಿ ‘ಈ ಕುದುರೆಯನ್ನು ಕ್ರಯಕ್ಕೆ ಕೊಡುವೆಯಾ?’ ಎಂದು ಕೇಳಿದನು. ಚಿತ್ರಕ (ತಿರಸ್ಕಾರದ ನೋಟ ನೋಡುತ್ತ) ಎಷ್ಟು ಕೊಡುವೆ? ಶಶಿಶೇಖರನು ಕುದುರೆಯ ಕಡೆ ಒಮ್ಮೆ ದೃಷ್ಟಿ ಹರಿಸಿ, ಮೀಸೆಯ ಮೇಲೆ
ಬೆರಳುಗಳನ್ನಾಡಿಸುತ್ತ ಸ್ವಲ್ಪ ಹೊತ್ತು ವಿಚಾರ ಮಾಡಿ, ಸುಸಜ್ಜಿತವಾಗಿ (ಜೀನು ಸಹಿತವಾದ) ಕುದುರೆಗೆ ಐದು ಕಾರ್ಷಾಪಣ ಕೊಡುತ್ತೇನೆ’ ಎಂದನು.
ಚಿತ್ರಕನು ಒಳಗೊಳಗೇ ಗುಣಾಕಾರ ಹಾಕಿದನು. ಒಬ್ಬರ ವಸ್ತುವನ್ನು ಇನ್ನೊಬ್ಬರಿಗೆ ಮಾರಿ ಐದು ಕಾರ್ಷಾಪಣ ಗಳಿಸುವುದಾದರೆ ದಡ್ಡತನವೇನಲ್ಲ. ಅಪಹರಿಸಿರುವ ಕುದುರೆಯನ್ನು ತನ್ನ ಬಳಿ ಇಟ್ಟುಕೊಳ್ಳುವುದೆಂದರೆ ಆಪತ್ತನ್ನು ಆಹ್ವಾನಿಸಿದಂತೆ. ಸಿಕ್ಕಿಕೊಳ್ಳುವ ಭಯ ಇದ್ದೇ ಇರುತ್ತದೆ. ಆದರೆ ರಾಜದೂತನ ಪ್ರಯೋಜನದ ಗುರುತ್ವವೋ ಬಹಳ ಬೆಲೆಬಾಳುವಂಥದು. ಪ್ರಯೋಜನದ ಅನುಪಾತವನ್ನನುಸರಿಸಿ ಮಾರಾಟವಾಗುವ ವಸ್ತುವಿನ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗುವ ಸಂಭವವಿರುತ್ತದೆ ಎಂದು ಭಾವಿಸಿ, ಚಿತ್ರಕನು ತಿರಸ್ಕಾರದ ನಗುವನ್ನು ನಕ್ಕು ‘ಐದು ಕಾರ್ಷಾಪಣ! ಈ ಕುದುರೆಗೆ ಹಾಕಿರುವ ಜೀನಿನ ಬೆಲೆಯೇ ಐದು ದೀನಾರಗಳು. ನಿಮ್ಮ ಮಗಧ ದೇಶದಲ್ಲಿ ಪ್ರಾಯಃ ನೀವು ಕತ್ತೆಗಳ ಮೇಲೆ ಸವಾರಿ ಮಾಡುತ್ತೀರೆಂದು ಕಾಣುತ್ತದೆ. ಆದ್ದರಿಂದಲೇ ಕುದುರೆಗ¼ ಬೆಲೆ ನಿಮಗೆ ತಿಳಿಯದು’ ಎಂದು ಹೇಳಿ ಕುದುರೆಯನ್ನು ತನ್ನತ್ತ ತಿರುಗಿಸಿಕೊಂಡು ಹೊರಡಲನುವಾದನು. ಶಶಿಶೇಖರನು ಮನಸ್ಸಿನಲ್ಲಿ ಬಹಳ ಕೋಪಗೊಂಡನು. ಆದರೆ ಆ ಕಡೆ ಅಶ್ವಾರೋಹಿಯಯು ಹೊರಟು ಹೋಗುತ್ತಿದ್ದಾನೆ. ಅವನು ಕೋಪವನ್ನುನುಂಗಿಕೊಂಡು ‘ಅಯ್ಯಾ ಮಹಾಶಯ! ಇಲ್ಲಿ ಸ್ವಲ್ಪ ಕೇಳು, ಹೋಗಬೇಡ. ಇಲ್ಲಿ ಕೇಳು. ನೀನು ನಮ್ಮ ಅಸಹಾಯ ಸ್ಥಿತಿಯನ್ನು ನೋಡಿ ಅನುಚಿತವಾದ ಬೆಲೆ ಹೇಳುತ್ತಿರುವೆ. ಪಾಟಲಿಪುತ್ರದಲ್ಲಿ ಈ ರೀತಿ ಮಾಡಿದ್ದರೆ ನಿನಗೆ ಇನ್ನೂರು ಪಣ ದಂಡ ತೆರಬೇಕಾಗುತ್ತಿತ್ತು. ಆದರೆ ಈ ಅಸಭ್ಯ ವನ್ಯ ದೇಶದಲ್ಲಿ-, ಹೋಗಲಿ ಬಿಡು ಆ ವಿಷಯ ಬೇಡ, ಐದು ದೀನಾರಗಳನ್ನೇ ಕೊಡುತ್ತೇನೆ’
ಎಂದು ಕೂಗಿ ಹೇಳಿದನು.
ಚಿತ್ರಕ (ತಿರುಗಿ) ಐದು ದೀನಾರುಗಳು ಜೀನಿನ ಮೌಲ್ಯ. ಕುದುರೆಯನ್ನು ಬೆಲೆ ಕೊಡದೆ (ಬಿಟ್ಟಿ) ಗಿಟ್ಟಿಸುವ ಆಸೆಯೇ?
ಶಶಿಶೇಖರನು ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡನು. ಅವನು ದುಡ್ಡಿನ ವಿಷಯ ದಲ್ಲಿ ಬಹಳ ಹಿಡಿತದ ಸ್ವಭಾವದವನು. ಕಾರಣವಿಲ್ಲದೆ ಅವನು ಒಂದು ಚಿಕ್ಕಾಸನ್ನೂ ಖರ್ಚು ಮಾಡುವ ಸ್ವಭಾವದವನಲ್ಲ. ಆದರೆ ಈ ಧನ ಪಿಶಾಚಿ ರಾಕ್ಷಸನು ಸಮಯ ನೋಡಿ ಅವನ ರಕ್ತ ಹೀರಲು ಮುಂದಾಗಿದ್ದಾನೆ. ಅವನು ಅಸ್ಥಿರನಾಗಿ ‘ಈಗ ಮತ್ತೆ ಕುದುರೆಯ ಬೆಲೆ! ಐದು ದೀನಾರುಗಳು ಸಾಕಾಗುವುದಿಲ್ಲವೆ? ಇದೇನು ದರೋಡೆಕೋರರ ರಾಜ್ಯವೆ?’ ಎಂದನು.
ಚಿತ್ರಕ (ನಕ್ಕು) ‘ಹಾಗೆಂದೇ ತಿಳಿದುಕೊ. ಯೋಚಿಸಿ ನೋಡು. ಕುದುರೆಗಾಗಿ ಇನ್ನೂ ಐದು ದೀನಾರುಗಳನ್ನು ಕೊಡುವುದಾದರೆ ನೋಡು. ಇಲ್ಲವಾದರೆ ನಾನು ಹೊರಟಿ’ ಎಂದು ಹೇಳಿ ಹೊರಡಲನುವಾದನು.
ಆಗ ಶಶಿಶೇಖರನು ದೀನಸ್ವರದಲ್ಲಿ ‘ನಾನು… ನಾನು ಆರು ದೀನಾರಗಳನ್ನೇ ಕೊಡುತ್ತೇನೆ. ಇದರ ಜೊತೆಗೆ ಈ ಕುದುರೆಯನ್ನು ಕೊಡುತ್ತೇನೆ. ಇದಕ್ಕೆ ಬದಲಾಗಿ ನೀನು ನಿನ್ನ ಕುದುರೆಯನ್ನು ನನಗೆ ಕೊಡು. ಇದಕ್ಕಿಂತ ಹೆಚ್ಚಿಗೆ ನಾನು ಇನ್ನೇನೂ ಕೊಡಲಾರೆ’ ಎಂದು ಅಂಗಲಾಚಿ ಬೇಡಿಕೊಂಡನು. ‘ನಿನ್ನ ಕುದುರೆನ್ನು ತೆಗೆದುಕೊಂಡು ನಾನೇನು ಮಾಡಲಿ. ಸತ್ತ ಕತ್ತೆಗೆ ಬೆಲೆ ಇದೆಯೆ?’
‘ಸತ್ತ ಕತ್ತೆಯೇ? ಇದಕ್ಕೆ ಸ್ವಲ್ಪ ಮಾತ್ರ ಪೆಟ್ಟು ಬಿದ್ದಿದೆ. ಒಂದೆರಡು ದಿನಗಳಲ್ಲಿ ಎಲ್ಲಾ ಸರಿ ಹೋಗುತ್ತದೆ. ಆಗ ಇದನ್ನೂ ಭಾರಿ ಬೆಲೆಗೆ ಮಾರಬಹುದು.ಮಗಧದ ದೂತನು ಇನ್ನು ಹೆಚ್ಚು ಕೊಡಲಾರನೆಂದು ಚಿತ್ರಕನಿಗೆ ಮನದಟ್ಟಾಯಿತು. ಅವನ ಕುದುರೆಯೂ ಸಂಪೂರ್ಣವಾಗಿ ಪ್ರಯೋಜನಕ್ಕೆ ಬಾರದುದೇನೂ ಅಲ್ಲ. ಕಾಲಿನ ಪೆಟ್ಟಿಗೆ ಸ್ವಲ್ಪ ಶುಶ್ರೂಷೆ ಮಾಡಿದರೆ ಮೊದಲಿನಂತಾಗುವುದರಲ್ಲಿ ಸಂಶಯವಿಲ್ಲ. ಚಿತ್ರಕನಿಗೂ ತನ್ನದೆನ್ನುವ ಒಂದು ಕುದುರೆ ಬೇಕಾಗಿತ್ತು. ಏಕೆಂದರೆ ಯೋಧನಿಗೆ ಕುದುರೆಯೇ ಸಂಪತ್ತಲ್ಲವೆ! ಅವನು ಒಪ್ಪಿಗೆ ಕೊಟ್ಟನು. ಆಗ ಶಶಿಶೇಖರನು ಸೊಂಟಕ್ಕೆ ಬಿಗಿದಿದ್ದ ಉತ್ತರೀಯದ ಗಂಟನ್ನು ಬಿಚ್ಚಿ, ಅದರೊಳಗಿಂದ ಒಂದು ಚೀಲ ಹೊರ ತೆಗೆದನು. ಅದು ತುಂಬಿತ್ತು. ಶಶಿಶೇಖರನದು ಸಂಗ್ರಹ ಬುದ್ಧಿ. ವಿದೇಶಯಾತ್ರೆಗೆ ಪೂರ್ವದಲ್ಲಿಯೇ ತನಗೆ ಬೇಕಾದ ವಸ್ತುಗಳನ್ನೆಲ್ಲ ಅದರಲ್ಲಿ ತುಂಬಿದ್ದನು. ರಾಜಕೋಶದಿಂದ ದೊರೆತ ಬೆಳ್ಳಿ ಬಂಗಾರದ ನಾಣ್ಯಗಳಂತೂ ಇದ್ದೇ ಇತ್ತು. ಜೊತೆಗೆ ಬಾಚಣಿಗೆ, ಅಲಂಕರಿಸಿಕೊಳ್ಳಲು ಬೇಕಾದ ಚಂದನ ತಿಲಕ, ಕಡ್ಡಿ, ಮುಖ ಶುದ್ಧಿಗಾಗಿ ಏಲಕ್ಕಿ, ಲವಂಗ, ಅಳಲೆಕಾಯಿ ಹಾಗೂ ಇನ್ನೂ ಏನೇನೋ ಅದರೊಳಗೆ ಇದ್ದವು. ಓರೆಗಣ್ಣಿನಿಂದ ಚಿತ್ರಕನ ಕಡೆ ನೋಡುತ್ತ ಚೀಲದ ಬಾಯಿಯನ್ನು ತೆರೆಯುತ್ತಿದ್ದ. ಚೀಲದಿಂದ ದೀನಾರಗಳನ್ನು ತೆಗೆಯುವಾಗ ಶಲಾಕೆಯಂಥ ವಸ್ತುವೊಂದು ಕೆಳಗೆ ಬಿತ್ತು. ಚಿತ್ರಕ ಅದರ ಕಡೆಗೇ ನೋಡುತ್ತಿದ್ದ. ಕೂಡಲೆ ಕುದುರೆಯ ಮೇಲಿಂದ ಸರ್ರನೆ ಇಳಿದು, ಬಾಗಿ ಅದನ್ನು ಬಾಚಿಕೊಂಡನು. ನೋಡಿದರೆ ಅದು ಆನೆಯ ದಂತದ ಪಗಡೆಯ ದಾಳ. ದ್ಯೂತಕ್ರೀಡೆಯ ಚಟ ಜಾಗ್ರತವಾಯಿತು. ಉತ್ಸಾಹ ಭರಿತನಾಗಿ “ದೂತ ಮಹಾಶಯ, ತಮ್ಮ ಚೀಲದಿಂದ ಪಗಡೆ ಆಟದ ದಾಳ ಬಿದ್ದುದ್ದನ್ನು ಕಂಡೆ” ಎಂದನು.
ಶಶಿಶೇಖರನು ಸ್ವಲ್ಪವೂ ವಿಚಲಿತನಾಗದೆ ‘ಅಕ್ಷ ಕ್ರೀಡೆ ಅರವತ್ತನಾಲ್ಕು ಕಲೆಗಳಲ್ಲಿ ಒಂದು. ಪಾಟಲಿಪುತ್ರದ ಸಜ್ಜನ ನಾಗರಿಕರು ಮಾತ್ರವೇ ಪಗಡೆ ಆಟ ಆಡುವವರು. ಸ್ವಯಂ ಪರಮ ಭಟ್ಟಾರಕ…’ ಎಂದು ಹೇಳುತ್ತ ಅರ್ಧ ದಲ್ಲಿಯೇ ನಿಲ್ಲಿಸಿದನು.
ಚಿತ್ರಕ- ‘ನೀನು ನನ್ನ ಜೊತೆಗೆ ಪಗಡೆ ಆಡುವೆಯಾ? ಕುದುರೆಯ ಪಣವಿಟ್ಟು ಆಡು. ಒಂದು ವೇಳೆ ನೀನು ಗೆದ್ದರೆ ನಮ್ಮ ಕುದುರೆ ನಿನ್ನದಾಗುವುದು. ನಾನು ಗೆದ್ದರೆ ನಿನ್ನ ಈ ಕುಂಟ ಕುದುರೆಯನ್ನು ನಾನು ಪಡೆಯುತ್ತೇನೆ.
ಒಂದು ಕ್ಷಣ ಕಾಲ ಶಶಿಶೇಖರನು ಯೋಚಿಸಿ ನೋಡಿದ. ಸೋತರೂ ಏನೂ ನಷ್ಟವಿಲ್ಲ. ಗೆದ್ದರೆ ವಿಶೇಷ ಲಾಭ. ಅದೂ ಅಲ್ಲದೆ ಆರು ಸುವರ್ಣ ದೀನಾರ ನನಗೇ ಉಳಿಯುವುದು. ‘ಆಗಲಿ ನಾನು ಸಿದ್ಧ. ನಾನು ವರ್ಣಶ್ರೇಷ್ಠನಾಗಿದ್ದರೂ ದ್ವಂದ್ವಯುದ್ಧಕ್ಕಾಗಲಿ ದ್ಯೂತಕ್ರೀಡೆಗಾಗಲಿ ಯಾರಾದರೂ ಕರೆದರೆ ಹಿಂದೆಗೆಯುವುದಿಲ್ಲ’ ಎಂದನು.
ಆ ನಂತರ ಅವರಿಬ್ಬರೂ ಕುದುರೆಗಳನ್ನು ಮೇಯಲು ಬಿಟ್ಟು, ಮರದ ಕೆಳಗೆ ಹುಲ್ಲಿನ ಮೇಲೆ ಕುಳಿತು ಆಡಲು ಪ್ರಾರಂಭಿಸಿದರು.
ಎನ್. ಶಿವರಾಮಯ್ಯ (ನೇನಂಶಿ)
ಚಿತ್ರಗಳು: ಮಂಜುಳಾ ಸುದೀಪ್