ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 8

ಆ ನಂತರ ಅವರಿಬ್ಬರೂ ಕುದುರೆಗಳನ್ನು ಮೇಯಲು ಬಿಟ್ಟು, ಮರದ ಕೆಳಗೆ ಹುಲ್ಲಿನ ಮೇಲೆ ಕುಳಿತು ಆಡಲು ಪ್ರಾರಂಭಿಸಿದರು. ಸ್ವಲ್ಪ ಕಾಲದಲ್ಲಿಯೇ ಅವರಿಬ್ಬರಲ್ಲಿ ಜೂಜಿನ ಮತ್ತು ತಲೆಗೇರಿತು. ಹಸಿವು ಬಾಯಾರಿಕೆಗಳ ಕಡೆ ಗಮನವೇ ಇಲ್ಲ. ಆಟ ಕೊನೆಗೊಂಡಾಗ ಶಶಿಶೇಖರನು ಸೋತು ತನ್ನ ಕುದುರೆಯನ್ನು ಎದುರಾಳಿಗೆ ಒಪ್ಪಿಸಬೇಕಾಯಿತು. ಚಿತ್ತ ಕ್ಷೋಭೆಯಿಂದ ಮೀಸೆಯ ಮೇಲೆ ಕೈಯಾಡಿಸುತ್ತ ಶಶಿಶೇಖರನು ‘ನೀನು ಆಟದಲ್ಲಿ ಬಹಳ ಚೂಟಿ. ಅದೃಷ್ಟ ಬಲದಿಂದ ನೀನು ನನ್ನನ್ನು
ಸೋಲಿಸಿದ್ದೀಯೆ ಮತ್ತೆ ಆಡುವೆಯೇನು?’ ಎಂದನು.
ಚಿತ್ರಕ- ‘ಖಂಡಿತವಾಗಿ. ‘ಇಗೋ ಈ ಬಾರಿ ಪಣವಾಗಿ ಈ ನನ್ನ ಕತ್ತಿ’ ಎಂದು ಹೇಳಿ ತನ್ನ
ಕತ್ತಿಯನ್ನು ತೆಗೆದು ಮುಂದೆ ಇಟ್ಟನು.
ಚಿತ್ರಕ- ‘ಸರಿ, ನಾನು ಎರಡು ಕುದುರೆಗಳನ್ನೂ ಪಣವಾಗಿಡುತ್ತೇನೆ!
ಶಶಿಶೇಖರ ರುಷ್ಟನಾಗಿ ಆಡಲು ಕುಳಿತನು. ಆದರೆ ಈ ಬಾರಿಯೂ ಭಾಗ್ಯಲಕ್ಷ್ಮಿಯು ಅವನಿಗೆ ಒಲಿಯಲಿಲ್ಲ. ಚಿತ್ರಕನು ಕತ್ತಿಯನ್ನು ತೆಗೆದುಕೊಂಡು ‘ಮತ್ತೆ ಆಡುವೆಯಾ?’ ಎಂದು ಕೇಳಿದನು.

ಸೋತವರಲ್ಲಿ ಮತ್ತೆ ಮತ್ತೆ ಆಡುವ ಹುಚ್ಚು ಹೆಚ್ಚುತ್ತಾ ಹೋಗುತ್ತದೆ. ಕೃಪಣನಾದರೂ ದುಃಸಾಹಸಕ್ಕೆ ಕೈ ಹಾಕುತ್ತಾನೆ. ಶಶಿಶೇಖರನು ಕಣ್ಣುಗಳನ್ನು ಕೆಂಪಾಗಿ ಮಾಡಿಕೊಂಡು ದುರುಗುಟ್ಟಿ ನೋಡುತ್ತ ‘ಆಡಿಯೇ ಆಡುತ್ತೇನೆ. ನೀನು ಎರಡು ಬಾರಿಯೂ ಗೆದ್ದಿರಬಹುದು. ಆದರೆ, ಪ್ರತಿ ಸಲವೂ ನೀನು ಗೆಲ್ಲುತ್ತೀಯೇನು?’ ಎಂದನು.
‘ಸರಿ. ನಾನು ಎರಡು ಕುದುರೆಗಳನ್ನೂ ಈ ಕತ್ತಿಯನ್ನೂ ಪಣಕ್ಕೆ ಇಡುತ್ತೇನೆ. ನಿನ್ನ ಪಣ ಯಾವುದು?’‘ನನ್ನ ಪಣ…’ ಶಶಿಶೇಖರನ ತಲೆ ತಿರುಗಿದ ಹಾಗಾಯಿತು. ಅವನ ಮೆದುಳಿನಲ್ಲಿ ಸುಬುದ್ಧಿಯ ಸಂಚಾರವಾಯಿತು. ಕುದುರೆ ಹಾಗೂ ಕತ್ತಿಯನ್ನು ಕಳೆದುಕೊಂಡದ್ದಾಯಿತು. ಇದೇ ರೀತಿ ಎಲ್ಲವನ್ನೂ ಕಳೆದುಕೊಂಡರೆ! ಏನು
ಗತಿ? ಅವನು ಹಿಂದೇಟು ಹಾಕುವುದನ್ನು ಕಂಡ ಚಿತ್ರಕನು ವ್ಯಂಗ್ಯವಾಗಿ
‘ಏನು ಭಯವೇ?’ ಎಂದು ಪ್ರಶ್ನಿಸಿದನು.
ಸುಬುದ್ಧಿಯೆಲ್ಲಾ ಕೊಚ್ಚಿಕೊಂಡು ಹೋಯಿತು. ಶಶಿಶೇಖರನು ಕ್ರುದ್ಧನಾಗಿ
‘ಭಯ, ಯಾವ ಮೂರ್ಖ ಹಾಗೆ ಹೇಳುತ್ತಾನೆ? ನಾನು ನನ್ನಲ್ಲಿರುವಷ್ಟನ್ನು ಪಣವಿಟ್ಟು ಆಡಲು ಸಿದ್ಧನಿದ್ದೇನೆ. ನೀನು ಆಡುವೆಯಾ?’ ಎಂದು ಕೇಳಿದನು.
‘ಅಡ್ಡಿ ಇಲ್ಲ. ಆದರೆ ಸದ್ಯಕ್ಕೆ ಈ ಉಂಗುರ ಪಣವಿಡಲು ಸಾಧ್ಯವೆ?

ಶಶಿಶೇಖರನು ತನ್ನ ಬೆರಳಿನಲ್ಲಿರುವ ಉಂಗುರದ ಕಡೆ ನೋಡಿಕೊಂಡನು. ಮಗಧದ ರಾಜಮುದ್ರಾಂಕಿತ ಮುದ್ರೆಯುಂಗುರ, ಇದೇ ವಿಟಂಕ ರಾಜ್ಯದಲ್ಲಿ ಇವನಿಗೆ ಪ್ರವೇಶಪತ್ರ ಇದ್ದ ಹಾಗೆ. ಆದರೆ ಶಶಿಶೇಖರನಿಗೆ ಇದಾವುದರ ಪರಿವೆಯೂ ಇಲ್ಲ. ಹಿತಾಹಿತ ಜ್ಞಾನ ಶೂನ್ಯನಾಗಿದ್ದಾನೆ. ಅವನು ಉಂಗುರವನ್ನು ತೆಗೆದು ನೆಲದ ಮೇಲಿಟ್ಟು ‘ಇದೋ, ಅದೇ ಉಂಗುರ ಇಡುತ್ತಿದ್ದೇನೆ. ಬಾ ಈಸಲ ಆಡು’ ಎಂದು ಹೇಳಿದನು. ಮತ್ತೆ ಆಟ ಆರಂಭ- ಆದರೆ ಆಟದ ಪರಿಣಾಮವೇನು ಬೇರೆ ಆಗಲಿಲ್ಲ. ಆಟದ ಕೊನೆಯಲ್ಲಿ ಚಿತ್ರಕ ಉಂಗುರವನ್ನು ಹಿಂದೆ ಮುಂದೆ ತಿರುಗಿಸಿ ನೋಡಿ ತನ್ನ ತೋರುಬೆರಳಿನಲ್ಲಿ ಧರಿಸಿಕೊಂಂಡು ‘ದೂತ ಮಹಾಶಯ, ಇನ್ನು
ನಾನು ಹೊರಡುತ್ತೇನೆ. ಈ ದಿನ ಬೆಳಗಿನಿಂದಲೂ ಹೊಟ್ಟೆಗೆ ಏನೂ ತಿಂದಿಲ್ಲ. ಹಸಿವಿನಿಂದ ಕಂಗೆಟ್ಟು ಹೋಗಿದ್ದೇನೆ. ಅಲ್ಲದೆ ನಾನೂ ಇಲ್ಲಿಂದ ಬಹಳ ದೂರ ಹೋಗಬೇಕಾಗಿದೆ’ ಎಂದು ಹೇಳಿದನು. ಶಶಿಶೇಖರ ತಾಳ್ಮೆಗೆಟ್ಟಿದ್ದನು. ಒಮ್ಮೆಲೇ ಮೇಲೆದ್ದು ‘ನೀನೊಬ್ಬ ಕಿತವ!
ಮೋಸಗಾರ! ಕೈ ಚಳಕ ತೋರಿಸಿ ನನ್ನ ಪಣಗಳನ್ನೆಲ್ಲಾ ಗೆದ್ದಿದ್ದೀಯೆ’ ಎಂದು ಗರ್ಜಿಸಿದನು.

ಚಿತ್ರಕನೂ ಕೂಡ ಮಿಂಚಿನಂತೆ ಮೇಲೆದ್ದು ನಿಂತನು ‘ಕಿತವ’ ಎಂಬುದು ಪಗಡೆ ಆಟದಲ್ಲಿ ಅತ್ಯಂತ ನಿಕೃಷ್ಟವಾದ ಪದ. ಅವನ ಹಣೆಯಲ್ಲಿದ್ದ ‘ತಿಲಕ ಚಿಹ್ನೆ’ ಅಗ್ನಿಯಂತೆ ಉರಿಯತೊಡಗಿತು. ಆದರೆ ಮರುಕ್ಷಣವೇ ಕೋಪ ಮರೆಯಾಯಿತು. ಶಶಿಶೇಖರನ ಕೋಮಲ ಶರೀರದ ಉಗ್ರ ರೂಪವನ್ನು ನೋಡಿ ಚಿತ್ರಕನಿಗೆ ಮುಳ್ಳುಗಳನ್ನು ನಿಮಿರಿಸಿಕೊಂಡು ಬುಸುಗುಟ್ಟುತ್ತಿರುವ ಮುಳ್ಳು ಹಂದಿಯ ನೆನಪು ಬಂದಿತು. ಆದರೂ ಸಾವರಿಸಿಕೊಂಡು ಶಶಿಶೇಖರನ ಕಡೆ ನೋಡುತ್ತ ಗಟ್ಟಿಯಾಗಿ ನಕ್ಕು ‘ದಾಳಗಳು ನಿನ್ನವು. ನಾನು ಕೈ ಚಳಕ ಮಾಡುವುದು ಹೇಗೆ ಸಾಧ್ಯ’ ಎಂದನು.

ವಾಸ್ತವದ ಸಂಗತಿಯೂ ಹಾಗೆಯೇ ಇತ್ತು. ಸ್ವಂತ ದಾಳ ಹೊಂದಿರುವವನು ಅದರ ಮಧ್ಯೆ ಯಾವುದಾದರೂ ಲೋಹವನ್ನು ಸೇರಿಸಿ ಮೋಸ ಮಾಡಬಹುದು. ಶಕುನಿ ಹಾಗೂ ಪುಷ್ಕರ ಅದನ್ನೇ ಮಾಡಿದ್ದರು. ಆದರೆ ಶಶಿಶೇಖರನಿಗೆ ಅವೆಲ್ಲವನ್ನು ತಿಳಿದುಕೊಳ್ಳುವ ಮನಸ್ಥಿತಿಯೂ ಇರಲಿಲ್ಲ. ಅವನು ‘ನೀನು ಪಕ್ಕಾ ಕಿತವ! ಪಕ್ಕಾ ಮೋಸಗಾರ! ಮೋಸಗಾರನಿಗೆ ಅಸಾಧ್ಯವಾದುದು ಯಾವುದೂ ಇಲ್ಲ’ ಎಂದು ಕಿರಿಚಾಡಿದನು.

ಚಿತ್ರಕ- ‘ಆ ಶಬ್ದವನ್ನು ಮತ್ತೆ ಬಳಸಬೇಡ. ಅನಾಹುತವಾದೀತು. ಹುಷಾರ್! ಭಾಗ್ಯಲಕ್ಷ್ಮಿಯು ನಿನಗೆ ವಿಮುಖಳಾಗಿದ್ದುದರಿಂದ ನೀನು ಸೋತೆ. ಇಲ್ಲಿ ಕೇಳು. ನಿನಗೆ ಇನ್ನೂ ಒಂದು ಅವಕಾಶ ಕೊಡುತ್ತೇನೆ. ನೀನು ನಿನ್ನ ಸರ್ವಸ್ವವನ್ನೂ ಪಣವಿಟ್ಟು ಆಡುವೆಯಾದರೆ ನೋಡು. ಬಾ ನಿನ್ನ ಸರ್ವಸ್ವವನ್ನೂ ಪಣವಿಡು. ನಾನೂ ನನ್ನಲ್ಲಿರುವ ಸರ್ವಸ್ವವನ್ನೂ ಪಣಕ್ಕೆ ಇಡುವೆ. ನೀನು
ಗೆದ್ದರೆ ನೀನು ಈವರೆಗೆ ಸೋತಿರುವ ಸಮಸ್ತವೂ ಮತ್ತೆ ನಿನ್ನದಾಗುತ್ತವೆ. ನನ್ನ ಕುದುರೆಯನ್ನೂ ನೀನು ಪಡೆಯುವೆ. ಒಪ್ಪಿಗೆಯೇ?’

ಶಶಿಶೇಖರನು ಕ್ಷಣ ಕಾಲ ಯೋಚಿಸಿದನು. ಅವನ ಸರ್ವಸ್ವವೂ ಕೈಬಿಟ್ಟು ಹೋಗಿದೆ. ಚೀಲವೊಂದು ಉಳಿದಿದೆ. ಅದರಲ್ಲಿ ಕೆಲವು ಚಿನ್ನ ಬೆಳ್ಳಿಯ ನಾಣ್ಯಗಳು ಇರುವುದು ನಿಜ. ಆದರೆ ಈ ನಿರ್ಜನ ಅರಣ್ಯದಲ್ಲಿ ಅವುಗಳಿಂದ ಪ್ರಯೋಜನವೇನು? ಕುದುರೆಯು ಮತ್ತೆ ದೊರೆತರೆ ಯಾವುದಾದರೂ ಹಳ್ಳಿಯನ್ನಾದರೂ ತಲುಪಬಹುದು. ಇಲ್ಲದಿದ್ದರೆ ಈ ಕಾಡಿನಲ್ಲಿಯೇ ರಾತ್ರಿ ಕಳೆಯುವುದು ಸುನಿಶ್ಚಿತ. ಕಾಡಿನಲ್ಲಿ ಹುಲಿ-ಚಿರತೆಗಳಿವೆ-! ಮುಂಬರುವ ರಾತ್ರಿಯನ್ನು ನೆನೆದ ಕೂಡಲೆ ಭಯದಿಂದ ನಡುಗಿ ಹೋದನು. ಇದು ಬೇಟೆಗಾಗಿ ಮೀಸಲಿಟ್ಟು ವನವೆಂದು ಅವನಿಗೆ ಗೊತ್ತಿಲ್ಲ.

ಮುಂದುವರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

ಚಿತ್ರ: ಮಂಜುಳಾ ಸುದೀಪ್

Related post

Leave a Reply

Your email address will not be published. Required fields are marked *