ಕಳೆದ ಸಂಚಿಕೆಯಿಂದ…
ಶಶಿಶೇಖರನು ಎರಡು ಮನಸ್ಸು ಮಾಡದೆ ಮತ್ತೆ ಆಟಕ್ಕೆ ಕುಳಿತನು. ಆದರೆ ಭಾಗ್ಯದೇವಿಯು ಅವನ ಮೇಲೆ ಮುನಿಸಿಕೊಂಡಿದ್ದಳು. ಹಾಗಾಗಿ ಅವನು ಸೋತು ಸರ್ವಸ್ವವನ್ನೂ ಕಳೆದುಕೊಂಡನು. ಬೇಸರಗೊಂಡು ಹತಾಶನಾಗಿ ದಾಳಗಳನ್ನು ದೂರ ಎಸೆದು, ಎದ್ದು ನಿಂತನು.
ಚಿತ್ರಕನು ಆ ದಾಳಗಳನ್ನು ಎತ್ತಿಕೊಂಡು ‘ಈ ದಾಳಗಳು ಈಗ ನನ್ನವು.ನೀನು ಸರ್ವಸ್ವವನ್ನೂ ಸೋತಿರುವೆ ಎಂಬುದು ನೆನಪಿರಲಿ’ ಎಂದು ಹೇಳಿದನು.
ಶಶಿಶೇಖರನು ಉನ್ಮತ್ತನಂತೆ ಗಟ್ಟಿಯಾಗಿ ಕಿರಿಚುತ್ತಾ ‘ನೀನು ಕಿತವ, ದರೋಡೆಕೋರ! ಮೋಸದಿಂದ ನನ್ನ ಸರ್ವಸ್ವನ್ನೂ ಲೂಟಿ ಹೊಡೆದಿರುವೆ’ ಎಂದು ದೂರಿದನು.
ಚಿತ್ರಕನ ಕಣ್ಣುಗಳು ಕತ್ತಿಯ ಅಲಗಿನಂತೆ ತೀಕ್ಷ್ಣವಾದವು. ‘ಇನ್ನೇನು ಬೇಕಾದರೂ ಹೇಳು. ಆದರೆ ‘ಕಿತವ’ ಎಂಬ ಶಬ್ದ ಮತ್ತೆ ಬಾಯಿಂದ ಬಂದೀತು ಜೋಕೆ. ಮತ್ತೊಂದು ಸಲ ಎಚ್ಚರಿಸುತ್ತಿದ್ದೇನೆ’ ಎಂದನು.
ಉನ್ಮತ್ತನಾದ ಶಶಿಶೇಖರನು ‘ಕಿತವ! ಕಿತವ! ಕಿತವ! ಸಾವಿರ ಸಲ ಹೇಳುತ್ತೇನೆ. ನನ್ನ ಕೈಯಲ್ಲಿ ಒಂದು ಕತ್ತಿ ಇದ್ದಿದ್ದರೇ….’ ಎಂದು ಗರ್ಜಿಸಿದನು.
ಚಿತ್ರಕನ ಮೂಗಿನ ಹೊಳ್ಳೆಗಳು ಸ್ಫುರಿಸಿದುವು. ಅವನು ಶಶಿಶೇಖರನ ಕತ್ತಿಯನ್ನು ಅವನ ಕಡೆಗೆ ಎಸೆಯುತ್ತ ‘ಇದೇ ಅಲ್ಲವೆ ನಿನ್ನ ಕತ್ತಿ. ಏನು ಮಾಡುತ್ತೀಯೆ? ಯುದ್ಧವೆ?’ ಎಂದನು.
ಶಶಿಶೇಖರನು ಕತ್ತಿ ತೆಗೆದುಕೊಂಡನು. ಅವನಿಗೂ ಕತ್ತಿ ವರಸೆ ಸ್ವಲ್ಪ ಗೊತ್ತಿತ್ತು. ಆದರೆ ಈಗಿನ ಮಾನಸಿಕ ಸ್ಥಿತಿಯಲ್ಲಿ ಅದೂ ಕೂಡ ಮರೆತು ಹೋದ ಹಾಗೆ ಆಗಿತ್ತು. ಕತ್ತಿಯನ್ನು ಮೇಲೆತ್ತಿ ಚಿತ್ರಕನ ಮೇಲೆ ಎರಗಿದನು.
ಒಂದೆರಡು ಬಾರಿ ಇಬ್ಬರ ಕತ್ತಿಗಳು ಖಣಗುಟ್ಟಿದುವು. ಕೊನೆಗೆ ಶಶಿಶೇಖರನ ಕತ್ತಿ ಎಗರಿ ದೂರ ಹೋಗಿ ಬಿದ್ದಿತು. ‘ಸರ್ವಸ್ವವನ್ನೂ ತೆಗೆದುಕೊಳ್ಳುವುದು ಬೇಡವೆಂದು ಇದ್ದೆ. ನಿನ್ನ ಮೇಲೆದಯೆ ತೋರಿಸಬೇಕೆಂದೂ ಇದ್ದೆ. ಆದರೆ ನೀನು ಅಪಾತ್ರ. ಎಲ್ಲಿ, ಆ ಚೀಲವನ್ನುಇಲ್ಲಿ ಕೊಡು’ ಎಂದು ಚಿತ್ರಕನು ಕೈಚಾಚಿದನು.
ಅಳು ಮೋರೆ ಹಾಕಿಕೊಂಡು ಶಶಿಶೇಖರನು ಮೂತಿ ಊದಿಸಿಕೊಂಡು ಚೀಲವನ್ನು ಚಿತ್ರಕನ ಕಡೆ ಎಸೆದನು.
‘ಈಗ ನಿನ್ನ ರುಮಾಲು, ವಸ್ತ್ರ ಹಾಗೂ ನಿಲವಂಗಿಯನ್ನು ಬಿಚ್ಚಿಕೊಡು’
ಶಶಿಶೇಖರನು ಕಿಂಕರ್ತವ್ಯ ವಿಮೂಢನಾದನು. ನಂತರ ಅವನು ‘ಹಾಗಾದರೆ ನಾನು ಬತ್ತಲೆ ಇರಬೇಕೆ?’ ಎಂದು ಕೇಳಿದನು.
ಚಿತ್ರಕ ನಕ್ಕು ‘ಅದು ನಿನ್ನ ಹಣೆಯ ಬರಹ ನನ್ನ ವಸ್ತುವನ್ನು ನಾನು ತೆಗೆದುಕೊಳ್ಳುತ್ತೇನೆ’ ಎಂದನು.
‘ನೀನು ಕಳ್ಳ, ನೀಚ, ದರೋಡೆಕೋರ’
‘ಬೇಗ ಕೊಡು, ಇಲ್ಲದಿದ್ದರೆ ನಾನೇ ಕೈ ಹಾಕಿ ಕಸಿದುಕೊಳ್ಳಬೇಕಾಗುತ್ತದೆ’.
ಹತಭಾಗ್ಯನಾದ ಶಶಿಶೇಖರನು ಆಗ ನಿರುಪಾಯನಾಗಿ ಮಧೂಕವೃಕ್ಷದ ಮರೆಗೆ ಹೋದನು. ವಸ್ತ್ರಾದಿಗಳನ್ನು ಕಳಚಿ ಚಿತ್ರಕನ ಕಡೆಗೆ ಎಸೆದನು. ನಿಷ್ಪಲ ಕ್ರೋಧದಿಂದ ಬಿಸಿಯಾದ ಕಣ್ಣೀರು ಅವನ ಒತ್ತಾದ ಮೀಸೆಯನ್ನು ಒದ್ದೆ ಮಾಡಿತು.
ತನ್ನೆಲ್ಲಾ ಸಂಪತ್ತನ್ನು ತೆಗೆದುಕೊಂಡು ಚಿತ್ರಕನು ಕುದುರೆಯ ಮೇಲೆ ಹತ್ತಿ ಕುಳಿತನು. ಶಶಿಶೇಖರನ ಕುದುರೆಯ ಬೆನ್ನ ಮೇಲೆ ಕತ್ತಿಯ ಒರೆಯಿಂದ ಜೋರಾಗಿ ಹೊಡೆದನು. ಅದು ಕುಂಟುತ್ತ ಕುಂಟುತ್ತ ಪಲಾಯನ ಮಾಡಿತು. ಚಿತ್ರಕನು ಆಗ ಮರದ ಬುಡದ ಕಡೆ ನೋಡುತ್ತ, ‘ಅಯ್ಯಾ ದೂತ, ಇಷ್ಟಾದರೂ ನಿನಗೆ ಸ್ವಲ್ಪ ದಯೆ ತೋರಿಸುತ್ತೇನೆ. ನಿನ್ನ ಕತ್ತಿಯನ್ನು ಎಸೆದು ಹೋಗುತ್ತಿದ್ದೇನೆ.
ಕಾಡಿನಲ್ಲಿ ಮುಂಗುಸಿಯೋ ಮೊಲವೋ ತೊಂದರೆ ಕೊಟ್ಟಾಗ ಆತ್ಮ ರಕ್ಷಣೆಗೆ ಇದು ಬೇಕಾಗುತ್ತದೆ’ ಎಂದು ಹೇಳಿದರು.
ಬಿಸಿಲು ತಗ್ಗುತ್ತಿದೆ. ರವಿ ಕಿರಣಗಳು ಮರಗಳ ನೆತ್ತಿಯನ್ನು ಸ್ಪರ್ಶಿಸುತ್ತಿವೆ. ದಿಕ್ಕನ್ನು ನಿರ್ಣಯಿಸಿಕೊಂಡು ಚಿತ್ರಕನು ಸೂರ್ಯನನ್ನು ದಕ್ಷಿಣಕ್ಕೆ ಇಟ್ಟುಕೊಂಡು ಕುದುರೆಯನ್ನು ವೇಗವಾಗಿ ಓಡಿಸಿದನು.
ಶಶಿಶೇಖರನು ಕಾಡಿನ ಮಧ್ಯದಲ್ಲಿಯೇ ಉಳಿದು ಬಿಟ್ಟನು. ಅವನು ಈಗಿನ ದುರವಸ್ಥೆಯನ್ನು ಪಾಠಕರ ಮುಂದಿಡುವುದು ಉಚಿತವೆನಿಸಲಾರದು.
ಕೋಟೆಯಿಂದ ಸುತ್ತುವರೆದ ಕಪೋತಕೂಟದ ಉತ್ತರ ದಿಕ್ಕಿನ ಹೆಬ್ಬಾಗಿಲ ಬಳಿ ಚಿತ್ರಕನು ಬಂದಾಗ ಸಂಜೆಗತ್ತಲು ದಟ್ಟವಾಗುತ್ತಿತ್ತು. ತೋರಣ ದ್ವಾರದ ಸ್ವಲ್ಪ ದೂರದಲ್ಲಿ ಕಾಡು ಕೊನೆಗೊಳ್ಳುತ್ತಿತ್ತು. ಅಲ್ಲಿಗೆ ಬಂದ ಚಿತ್ರಕನು ಕುದುರೆಯನ್ನು ಬಿಟ್ಟು ಇಳಿದನು. ಅನಂತರ ಶಶಿಶೇಖರನ ವಸ್ತ್ರಾದಿಗಳನ್ನು ಧರಿಸಿ, ಸೀಸಕದ ಮೇಲೆ ರುಮಾಲನ್ನು ಸುತ್ತಿಕೊಂಡು ಸ್ವಚ್ಛಂದವಾಗಿ ಹೆಜ್ಜೆ ಹಾಕುತ್ತ ನಗರ ಪ್ರವೇಶ ಮಾಡಿದನು.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)
ಚಿತ್ರಗಳು: ಮಂಜುಳಾ ಸುದೀಪ್