ಅದೃಷ್ಟದ ಆಟ -2
ಮಹಾರಾಜರು ಬೌದ್ಧ ಧರ್ಮ ಸ್ವೀಕರಿಸಿದ್ದಾರೆ ಎಂದು ಸುಗೋಪ ಹೇಳಿದ್ದು ಕೇಳಿ ಮೊಂಗ್
ಮೋಂಗ್– (ಕುಳಿತಿದ್ದ ಸ್ಥಳದಿಂದ ಮೇಲೆದ್ದು, ಚಪ್ಪಾಳೆ ತಟ್ಟುತ್ತ) “ಅದನ್ನೇ ನಾನು ಹೇಳುತ್ತಿರುವುದು. ಆದರೆ ಏಕೆ ಹೀಗಾಯಿತು? ಹನ್ನೆರಡು ಸಾವಿರ ರಕ್ತಪಿಪಾಸು ಮರುಭೂಮಿಯ ಸಿಂಹಗಳು ಇಪ್ಪತ್ತೈದು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದವು. ಅವು ಇನ್ನೆಲ್ಲಿ? ಈಗ ಅವು ಶುದ್ಧ ಕುರಿಗಳು!”
ಸುಗೋಪಾ– (ತುಟಿಗಳ ಮೇಲೆ ಕಿರುನಗೆ ತಂದು) “ಮೋಂಗ್, ಹಾಗಾದರೆ ನೀನೂ ಕೂಡ, ಕುರಿಯೇ ತಾನೇ?”
ಮೋಂಗ್ ಆ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳದೆಯೇ ಮರಕ್ಕೆ ಒರಗಿ ಕುಳಿತನು. ತನ್ನ ಕಿರುಗಣ್ಣುಗಳಿಂದ ಸುಗೋಪಾಳ ಮುಖವನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದನು. ಅನಂತರ ತನ್ನಷ್ಟಕ್ಕೆ ತಾನು ಏನೋ ಗೊಣಗಿಕೊಂಡನು- ‘ಕತ್ತಿ ಅಲಗು, ಕುದುರೆಯ ಹಿಂಗಾಲು ಮತ್ತು ವನಿತೆಯರ ಕುಡಿನೋಟ, ಈ ಮೂರೂ ಪುರುಷರ ವಿನಾಶಕ್ಕೆ ಮೂಲ. ಹೂಣರು ಬಾಲ್ಯದಿಂದಲೂ ಮೊದಲೆರಡರ ವಿನಾಶಕ್ಕೆ ಗುರಿಯಾಗದೆ ಉಳಿದುಕೊಂಡು ಬಂದರು. ಆದರೆ ಈ ಮೂರನೆಯದು ಅವರನ್ನು ಸರ್ವನಾಶ ಮಾಡಿತು. ನಾವು ಮರುಭೂಮಿಯ ಮಡಿಲಲ್ಲಿ ಚೆನ್ನಾಗಿಯೇ ಇದ್ದೆವು. ನಮ್ಮ ನಾರಿಯರು ರೂಪಸಿಯರಲ್ಲದಿದ್ದರೂ ಗಟ್ಟಿಗರು. ಅವರು ಕುದುರೆ ಒಂಟೆಗಳ ಜೊತೆಗೆ ನಮಗೆ ಸಹಾಯಕರಾಗಿರುತ್ತಿದ್ದರು. ದುರ್ದಮವಾದ ಹೂಣ ಶಿಶುಗಳಿಗೆ ಜನ್ಮವೀಯುತ್ತಿದ್ದರು- ಇಲ್ಲಿಯ ಮಾಟಗಾತಿಯರ ಹಾಗೆ ಪುರುಷರನ್ನು ಕುರಿಯ ಮರಿಗಳನ್ನಾಗಿ ಪರಿವರ್ತಿಸುವವರಲ್ಲ.
ಗಾದೆಯ ಮಾತು ಸುಳ್ಳಲ್ಲ- ‘ಕತ್ತಿಯ ಅಲಗು, ಕುದುರೆಯ ಹಿಂಗಾಲುಮತ್ತು ವನಿತೆಯರ ಕುಡಿನೋಟ…’ ಮೋಂಗ್ ಅತ್ಯಂತ ಕ್ಷುಬ್ಧನಾಗಿ ಸುಗೋಪಾಳ ಸುಂದರ ಮುಖದತ್ತ ದಿಟ್ಟಿಸಿ ನೋಡಿ, ಒಣಗಿದ ತೆಂಗಿನ ಬುರುಡೆಯಂತಿದ್ದ ತನ್ನ ತಲೆಯನ್ನು ತೂಗಿದನು.
ಸುಗೋಪಾ– (ಮುಗುಳ್ನಗೆ ಬೀರಿ) ಮೋಂಗ್, ನಿಮ್ಮ ನಾಗಸೇನೆಯ ಕುಡಿನೋಟ… ಇನ್ನೂ ಹಾಗೆಯೇ… ಮೊನಚಾಗಿಯೇ ಇದೆಯಲ್ಲವೆ?
ಮೋಂಗ್– (ಸುಗೋಪಾಳ ಪರಿಹಾಸವನ್ನು ತನ್ನ ಕೈಗಳಿಂದ ನಿವಾರಿಸುತ್ತ) ಒಬ್ಬ ಪುರುಷನ ಕಾರಣದಿಂದ ಒಂದು ಜಾತಿಯೇ ನಿರ್ವೀರ್ಯವಾಗಿ ಹೋಯಿತು. ಅಯ್ಯೋ, ನನ್ನ ಕೈಲಾಗುವುದಿಲ್ಲ. ಮುದುಕನಾಗಿ ಹೋದೆ. ಯೌವನ ಹಾಗೂ ಮದಿರೆಯ ಮಾದಕತೆ ಬಹಳ ಕಾಲವಿರುವುದಿಲ್ಲ. ಹೌದು, ಅವರೆಲ್ಲ ಹೂಣರ ಮಕ್ಕಳೇನೋ ಹೌದು, ಆದರೂ ಅವರು ಹೂಣರಾಗಿಲ್ಲವಲ್ಲ!ಮರುಭೂಮಿಯ ಸಿಂಹಗಳ ಹೊಟ್ಟೆಯಲ್ಲಿ ಬರಿಯ ಕುರಿಗಳು ಜನ್ಮ ತಾಳಿವೆ! ಮುದುಕನಿಗೆ ಕುರಿಯ ಉಪಮೆಯ ಗೀಳು ಹಿಡಿದಿತ್ತು. ಮತ್ತೆ ಮತ್ತೆ ಉತ್ತೇಜಿತನಾಗುತ್ತಿರುವುದನ್ನು ಕಂಡ ಸುಗೋಪಾ ‘ಅದಕ್ಕಾಗಿ ಮರುಗಿದರೆ ಏನು ಫಲ? ಇಲ್ಲಿನ ನಾರಿಯರು ನಿಮ್ಮ ಮುದ್ದು ಮೋರೆಯನ್ನು ನೋಡಿ ಮರುಳಾಗಿ ನಿಮ್ಮನ್ನು ಮದುವೆಯಾಗಲಿಲ್ಲ. ನೀವೇ ಅವರನ್ನು ಬಲಾತ್ಕಾರವಾಗಿ
ವಿವಾಹವಾಗಿದ್ದೀರಿ. ಈಗ ಅಳುವುದರಿಂದ ಏನು ಪ್ರಯೋಜನ. ಹೋಗಲಿ, ನಿಮಗೆ ಇದರಿಂದ ಪ್ರಯೋಜನವಾಗಲಿಲ್ಲವೆಂದೂ ಹೇಳುವುದಕ್ಕಾಗುವುದಿಲ್ಲವಲ್ಲಾ! ನಿಮ್ಮ ಮುಂದಿನ ಪೀಳಿಗೆ, ಇನ್ನೇನೂ ಆಗದಿದ್ದರೂ, ನಿಮಗಿಂತಲೂ ಸುಲಕ್ಷಣವಾಗಿರುತ್ತಾರೆ. ಅವರಿಗೆ ಕುಲವಿಲ್ಲದಿದ್ದರೂ, ಶೀಲವಾದರೂ ಇರುತ್ತದೆಯಲ್ಲಾ! ಎಂದಳು.
‘ಶೀಲ!’ ಮೋಂಗನ ಸ್ವರ ಕ್ರೋಧದಿಂದ ಮತ್ತಷ್ಟು ತೀಕ್ಷ್ಣವಾಯಿತು. ‘ಶೀಲದಿಂದ ಏನು ಪ್ರಯೋಜನ? ಶಿಷ್ಟಾಚಾರದ ಮೂಲಕ ಶತ್ರುಗಳ ಮುಂಡಗಳನ್ನು ತುಂಡರಿಸಿ ತರಲು ಸಾಧ್ಯವೆ? ಚಾಟಿ ಹೊಡೆಯುವುದನ್ನು ಬಿಟ್ಟು ಸೌಜನ್ಯ ತೋರಿದರೆ ಕುದುರೆಯು ವೇಗವಾಗಿ ಓಡುವುದೆ? ನಾವು ರಾಜಧಾನಿಯನ್ನು ವಶಪಡಿಸಿಕೊಳ್ಳುವಾಗ ಶಿಷ್ಟಮಾರ್ಗವನ್ನು ಕೈಕೊಂಡೆವೆ? ಗಿಡುಗನ ಹಾಗೆ ಕಪೋತಕೂಟದ ಮೇಲೆ ನಾವು ಎರಗಿದಾಗ ನಗರದ
ಚರಂಡಿಗಳಲ್ಲಿ ರಕ್ತದ ಕೋಡಿಯೇ ಹರಿಯಿತು! ಅರಮನೆಯ ರಕ್ಷಕರು ನಮ್ಮನ್ನು ತಡೆಯಲು ಪ್ರಯತ್ನಿಸಿದರು. ಹ..ಹ್ಹ..ಹ್ಹಾ!!’ ಮೋಂಗ್ ಇನ್ನೂ ಒಂದು ಸಲ ಗಟ್ಟಿಯಾಗಿ ನಕ್ಕನು… ‘ಅರಮನೆಯ ವಿಜಯವನ್ನು ನೆನೆಸಿಕೊಂಡರೆ ಈಗಲೂ ನನ್ನ ನೆತ್ತರು ಕುಣಿದಾಡುತ್ತದೆ.’
ಸುಗೋಪಾ– “ರಕ್ತ ಪಿಪಾಸು ಹೂಣ! ಹಾಗಾದರೆ ಆ ಕತೆಯನ್ನೇ ಹೇಳು ನಾನೇನೂ ಅಡ್ಡಿ ಮಾಡುವುದಿಲ್ಲ.
” ದೂರದಲ್ಲಿರುವ ಬೇಟೆಯ ಬಳಿಗೆ ಹೋಗಲು ಶಕ್ತಿ ಸಾಲದ ಮುದಿಹುಲಿಯು ಕುಳಿತಲ್ಲಿಂದಲೇ ಸುಮ್ಮನೆ ನೋಡುವಂತೆ, ಮೋಂಗ್ ಶೂನ್ಯದತ್ತ ದೃಷ್ಟಿ ಹರಿಸಿ, ಹಿಂದಿನ ಘಟನೆಗಳನ್ನು ಚಪ್ಪರಿಸುತ್ತ ನುಡಿದನು- ‘ಆದಿನ ಎರಡೂ ಕೈಗಳಿಂದ ಚಿನ್ನವನ್ನೂ ದೋಚಿದೆವು. ನೆಲಮಾಳಿಗೆಯಲ್ಲಿ ಬಂಗಾರದ ದೀನಾರಗಳು ರಾಶಿ ರಾಶಿಯಾಗಿದ್ದವು- ಎಂಟು ಜನ ರಕ್ಷಕರು ದ್ವಾರಗಳಲ್ಲಿ ‘ಪಹರೆ’
ಇದ್ದರು. ತುಷ್ ಫಾಣ್ ನೇ ಮೊದಲು ಗುಪ್ತಕೋಶಾಗಾರವನ್ನು ಪತ್ತೆ ಹಚ್ಚಿದವನು. ನಾವು ಮೂವತ್ತು ಜನ ಹೂಣರು ಹೋಗಿ ರಕ್ಷಕರನ್ನು ಹೊಡೆದು ಉರುಳಿಸಿದೆವು. ನಂತರ ಎಲ್ಲರೂ ಸೇರಿ ಆ ದೀನಾರ ರಾಶಿಯನ್ನು… ಅಷ್ಟು ಚಿನ್ನವನ್ನು ನಾವು ಮತ್ತೆಲ್ಲಿಯೂ ಎಂದೂ ಕಂಡಿರಲಿಲ್ಲ. ತುಷ್ ಫಾಣ್ ನಮ್ಮ ನಾಯಕ. ಚಿನ್ನದ ಹೆಚ್ಚು ಭಾಗ ಅವನಿಗೆ ಸೇರಿತು. ಮುತ್ತಿಗೆ ಮುಕ್ತಾಯವಾದ ಮೇಲೆ ಆ ಚಿನ್ನವನ್ನು ನಮ್ಮ ರಾಜರಿಗೆ ಕಾಣಿಕೆಯಾಗಿ ಕೊಟ್ಟು ತುಷ್ ಫಾಣ್ ನು ‘ಚಷ್ಟನ ದುರ್ಗ’ದ ಅಧಿಪತಿಯಾಗಿ ಕುಳಿತನು-’
ಸುಗೋಪಾ– “ಅದೆಲ್ಲಾ ನನಗೂ ಗೊತ್ತು. ಮುಂದೆ ಏನಾಯಿತು?”
ಮೋಂಗ್– (ಮುಂದುವರಿದು) “ರತ್ನಾಗಾರದಿಂದ ಮೇಲೆ ಬಂದು ನಾವು ಅಂತಃಪುರದ ದಿಕ್ಕಿಗೆ ನುಗ್ಗಿದೆವು. ನಮಗಿಂತ ಮೊದಲೆ ಅನೇಕ ಹೂಣರು ಅಲ್ಲಿಗೆ ಬಂದು ಸೇರಿದ್ದರು. ನಾಲ್ಕು ದಿಕ್ಕುಗಳಿಂದಲೂ ಸ್ತ್ರೀಯರ ಚೀತ್ಕಾರ, ಆಕ್ರಂದನ ಹಾಗೂ ಆರ್ತನಾದ ಕೇಳಿ ಬರುತ್ತಿತ್ತು. ನಾವು ಅಂತಃಪುರದ ಒಳ ಅಂಗಳಕ್ಕೆ ಹೋಗಿ ನೋಡಿದ್ದೇನು?… ಅಲ್ಲಿ ಒಂದು ಆಶ್ಚರ್ಯಕರವಾದ ಆಟ ನಡೆಯುತ್ತಿತ್ತು! ಆರೇಳು ಮಂದಿ ಹೂಣ ಸೈನಿಕರು ಒಂದು ಮಗುವಿನ ದೇಹವನ್ನು ಬಿಚ್ಚುಗತ್ತಿಗಳ ಮೇಲಿಂದ ಮೇಲೆಯೇ
ಎಸೆದಾಡುತ್ತ ಆಟವಾಡುತ್ತಿದ್ದರು. ಅದು ರಾಜಕುಮಾರನ ದೇಹ- ವಯಸ್ಸು ಒಂದು ವರ್ಷವಿರಬಹುದು. ಅದು ಮಾಂಸದ ಮುದ್ದೆಯ ಹಾಗೆ ಕಾಣುತ್ತಿತ್ತು. ಒಬ್ಬ ತನ್ನ ಕತ್ತಿಯ ಮೊನೆಯಿಂದ ಮೇಲೆತ್ತಿ ಇನ್ನೊಬ್ಬ ಸೈನಿಕನ ಕಡೆಗೆ ಎಸೆಯುತ್ತಿದ್ದ. ಅವನು ಅದನ್ನು ತನ್ನ ಕತ್ತಿಯಿಂದಲೇ ಆತುಕೊಳ್ಳುತ್ತಿದ್ದ ನೆಲಕ್ಕೆ ಬೀಳಗೊಡುತ್ತಿರಲಿಲ್ಲ. ಅಲಗಿನಿಂದ ಶರೀರವೆಲ್ಲ ಖಂಡ ತುಂಡವಾಗಿ ಬಿದ್ದು ಹೋಗುವುದೆಂಬ ಭಯದಿಂದ ಕತ್ತಿಯ ಪಕ್ಕದಿಂದ ಆ ಮಗುವನ್ನು ಹಿಡಿದುಕೊಳ್ಳುತ್ತಿದ್ದರು. ಆದರೂ ಮಗುವಿನ ಸರ್ವಾಂಗವೂ ಕ್ಷತವಿಕ್ಷಕರಾಗಿ ರಕ್ತ ಸುರಿಯುತ್ತಿತ್ತು. “ನಾನೂ ಆಟದಲ್ಲಿ ಭಾಗವಹಿಸಿದೆ. ನಡುನಡುವೆ ವಿಕಟಾಟ್ಟಹಾಸ ಎಡೆ
ತಡೆಯಿಲ್ಲದೆ ಸಾಗಿತ್ತು. ಓರ್ವ ಯುವತಿ ಬಾಗಿಲಲ್ಲಿ ಇಣುಕಿ ನೋಡಿ ಕಿರಿಚುತ್ತ ಓಡಿದಳು. ನಮ್ಮಲ್ಲಿಯ ಒಬ್ಬಿಬ್ಬರು ‘ಆಟ’ ಬಿಟ್ಟು ಅವಳನ್ನು ಹಿಂಬಾಲಿಸಿದರು. “ಅಷ್ಟರಲ್ಲಿಯೇ ಯಾವನೋ ಒಬ್ಬನು ಬಂದು, ರಾಜ ಕೈಸೆರೆ ಸಿಕ್ಕಿದ್ದಾನೆಂದು ಸುದ್ದಿಮುಟ್ಟಿಸಿದನು. ರಕ್ತ ಪಿಪಾಸುಗಳಾದ ಹೂಣರು ಆ ಮಗುವನ್ನು ಅಲ್ಲಿಯೇ ಬಿಟ್ಟು ಹೊರಟು ಹೋದರು. ಆದರೆ ನಾನು ಮಾತ್ರ ಅವರ ಜೊತೆಯಲ್ಲಿ ಹೋಗಲಿಲ್ಲ. ಕೇವಲ ಹತ್ಯೆ ಹಾಗೂ ಲೂಟಿಗಳಿಂದ ಹೂಣರು ತೃಪ್ತರಾಗುವವರಲ್ಲ. ಬಿಚ್ಚುಗತ್ತಿಯನ್ನು ಕೈಯಲ್ಲಿ ಹಿಡಿದು ಅಂತಃಪುರದೊಳಕ್ಕೆ ಹೋದೆ”. ಇಷ್ಟು ಹೊತ್ತು ಕತೆ ಹೇಳುತ್ತ ಹೇಳುತ್ತ ಮೋಂಗನ ಕಣ್ಣುಗಳು ಹಿಂಸ್ರ ಉಲ್ಲಾಸದಿಂದ ಜ್ವಲಿಸುತ್ತಿದ್ದವು. ಆದರೆ ಈಗ ಏಕೋ ಏನೋ ಅವನ ಕಣ್ಣುಗಳ ಕಾಂತಿ ಮಲಿನವಾಯಿತು. ಅವನು ಸ್ವಲ್ಪ ಹೊತ್ತು ಸ್ತಬ್ಧವಾಗಿದ್ದು, ವಿಷಣ್ಣನಾಗಿ ಕತೆಯನ್ನು ಮುಂದುವರಿಸಿದರು. “ಆ ಅಂತಃಪುರದ ಒಂದು ಕೋಣೆಯಲ್ಲಿಯೇ ನಾಗಸೇನೆಯ ಪ್ರಥಮ
ದರ್ಶನವಾದದ್ದು, ಮಂಚದ ಕೆಳಗೆ ಅವಳು ಅವಿತುಕೊಂಡಿದ್ದಳು. ಅವಳನ್ನು ಹಿಡಿದು ಈಚೆಗೆ ಎಳೆಯಬೇಕಾಯಿತು. ಕೈಕಡಗದಿಂದ ಅವಳು ನನ್ನ ಕಪಾಳಕ್ಕೆ ಬಲವಾಗಿ ಹೊಡೆದಳು. ನಾನು ಕತ್ತಿ ಬೀಸಿ ಹೆದರಿಸಿ ಅವಳನ್ನು ಹಿಡಿದೆ. ಅವಳು ನನ್ನ ಎದೆಯ ಮೇಲೆ ಬಲವಾಗಿ ಕಚ್ಚಿದಳು. ಕಚ್ಚಿದ ಗುರುತು ಈಗಲೂ ನನ್ನ ಎದೆಯ ಮೇಲೆ ಇದೆ. ಅದೇ ಸಮಯಕ್ಕೆ…”. ಸುಗೋಪಾ ಕೈಗಳಲ್ಲಿ ಕೆನ್ನೆಯನ್ನಿಟ್ಟು ಮೌನವಾಗಿ ಕೇಳುತ್ತಿದ್ದಳು. ಈ ನೃಶಂಸ- ಕತೆ ಅವಳನ್ನು ವಿಚಲಿತಗೊಳಿಸಲಿಲ್ಲ. ಯಾವಳ ಜನ್ಮವು ದೇಶ ವ್ಯಾಪ್ತಿಯಾದ ವಿಪ್ಲವದ ನಡುವೆ ಆಗಿದ್ದಿತೋ, ಅಮಾನುಷ ಹಾಗೂ ನಿಷ್ಠುರತೆಯ ಅನೇಕ ಚಿತ್ರಗಳು ಯಾವಳ ಶೈಶವ- ಸ್ಮೃತಿಯ ಮೂಲ ಕಾರಣವೋ, ಯಾವಳ ತಾಯಿಯೂ ಪರಿಜನರೂ ಆ ರಕ್ತಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರೋ ಅಂತಹ
ಸುಗೋಪಾಳನ್ನು ಮೋಂಗನ ಕತೆ ವಿಚಲಿತಗೊಳಿಸಲಿಲ್ಲ. ಹೂಣರು ಅರಮನೆಯನ್ನು ವಶಪಡಿಸಿಕೊಂಡ ಕತೆ ಅವಳಿಗೆ ಗೊತ್ತಿರಲಿಲ್ಲ. ಆದುದರಿಂದ ಅವಳು ಮನಸ್ಸಿಟ್ಟು ಆಲಿಸುತ್ತಿದ್ದಳು. ಸ್ವಲ್ಪ ಕಾಲ ನೀರವವಾಗಿ ಕಳೆದ ಮೇಲೆ, ಮುಖವೆತ್ತಿ ಅವಳು ‘ಆ ಮಗು ಏನಾಯಿತು?’ ಎಂದು ಕೇಳಿದಳು.
“ಮಗುವೇ..?’ ಮೋಂಗ್ ನೆನಪಿನ ನೀರಿನಲ್ಲಿ ಮುಳುಗು ಹಾಕುತ್ತ ಹೇಳಿದ ‘ಮಗು.. ಆ ಅಂಗಳದಲ್ಲಿ ರಕ್ತದ ಕೆಸರಿನಲ್ಲಿ ಬಿದ್ದಿತ್ತು. ಆ ಮೇಲೆ? ಹುಂ, ಸರಿ. ನೆನಪಿಗೆ ಬಂತು. ಚು-ಫಾಂಗ್! ಹುಚ್ಚು ಚು-ಫಾಂಗ್! ನಾನು ಅಂತಃಪುರದಿಂದ ನಾಗಸೇನೆಯನ್ನು ಕರೆದುಕೊಂಡು ಹೊರಗೆ ಬರುವಷ್ಟರಲ್ಲಿ, ನಮ್ಮ ಹುಚ್ಚು, ಚು-ಫಾಂಗ್ ಮಗುವನ್ನು ತನ್ನ ಜೋಳಿಗೆಯೊಳಕ್ಕೆ ತುರುಕುತ್ತಿದ್ದ.
ಕೇಳಿನೋಡಿದೆ ‘ಇದನ್ನು ತೆಗೆದುಕೊಂಡು ಹೋಗಿ ಏನು ಮಾಡುವೆ? ಭಲ್ಲೆಗೆ ಸಿಕ್ಕಿಸಿ ಬೇಯಿಸಿ ತಿನ್ನುವೆಯಾ?’ ಚು-ಫಾಂಗ್ ತನ್ನ ಮುರಿದ ಹಲ್ಲನ್ನು ಹೊರಗಡೆ ತೋರಿಸುತ್ತ ನಕ್ಕನು.” ಮೋಂಗ್ ಮತ್ತೊಮ್ಮೆ ಚಿಂತಾ ಮಗ್ನನಾದನು. “ಆಶ್ಚರ್ಯ, ಚು-ಫಾಂಗನನ್ನು ಅಂದಿನಿಂದ ನೋಡಲಾಗಲಿಲ್ಲ. ಬಹುಶಃ ಸತ್ತು ಹೋಗಿರಬೇಕು. ಹೂಣರ ಆಯಸ್ಸು ಮತ್ತು ಮರೀಚಿಕೆಯ ಮಾಯೆ
ಯಾವ ಕ್ಷಣದಲ್ಲಿ ಮುಗಿಯುವುದೆಂಬುದು ಯಾರಿಗೂ ತಿಳಿಯದು. ಚು-ಫಾಂಗ್ ಹುಚ್ಚನೇನೋ ನಿಜ. ಆದರೆ ಅನೇಕ ಯಂತ್ರ ಮಂತ್ರಗಳನ್ನು ಬಲ್ಲವನು. ಗಿಡಮೂಲಿಕೆ ಹಾಗೂ ಹಸುರುಗಳ ಸಹಾಯದಿಂದ ಆಯುಧಗಳಿಂದಾದ ಗಾಯವನ್ನು ಕೂಡ ಗುಣಪಡಿಸಬಲ್ಲ..’ ಎಂದು ಹೇಳಿದನು.
ಸುಗೋಪಾ– “ಮತ್ತೆ ಆ ಯುವತಿ? ಅವಳೇನಾದಳು?”
ಮೋಂಗ್– “ಯಾರು? ನಾಗಸೇನೆಯೇ?”
ಸುಗೋಪಾ– “ಅಲ್ಲ, ನಾಗಸೇನೆಯ ವಿಷಯ ನನಗೆ ಗೊತ್ತಿದೆ. ಈಗ ನಾಗಸೇನೆಯು ನಾಗಿನಿಯಾಗಿ ನಿನ್ನ ಕುತ್ತಿಗೆಯಲ್ಲಿ ಸುತ್ತಿಕೊಂಡಿದ್ದಾಳೆ. ನಾನು ಕೇಳಿದ್ದು ಇನ್ನೊಬ್ಬ ಯುವತಿಯ ವಿಷಯ. ನೀವು ಮಗುವಿನೊಡನೆ ಕತ್ತಿಯಿಂದ ಆಡುತ್ತಿದ್ದಾಗ, ಇಣುಕಿ ನೋಡಿ, ಕಿಟ್ಟೆಂದು ಚೀರಿ ಓಡಿ ಹೋದಳಲ್ಲ. ಅವಳ ವಿಷಯ…”
ಮೋಂಗ್– (ತಾತ್ಸಾರ ಭಾವನೆಯಿಂದ) “ಏನಾದಳೋ ಯಾರಿಗೆ ಗೊತ್ತು? ಇಬ್ಬರು ಮೂವರು ಅವಳನ್ನು ಹಿಡಿಯಲು ಓಡಿದರು… ಆ ಮೇಲೆ ಏನು ನಡೆಯಿತೋ ತಿಳಿಯದು. ಅರಮನೆಯಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಪರಿಚಾರಿಕೆ ಯರಿದ್ದರು. ದಾರಿಯಲ್ಲಿ ಸಿಕ್ಕಿದವರನ್ನೆಲ್ಲ ಹೂಣರು ಮುಗಿಸಿಬಿಟ್ಟರು. ಇನ್ನು ಕೆಲವು ಯುವತಿಯರು ಆತ್ಮಹತ್ಯೆ ಮಾಡಿಕೊಂಡರು.”
ಸುಗೋಪಾ– (ನಿಟ್ಟುಸಿರು ಬಿಟ್ಟು) “ಆ ಯುವತಿಯೇ ನಮ್ಮ ತಾಯಿ ಇರಬೇಕು! ಅವಳು ರಾಜಕುಮಾರನ ದಾದಿಯಾಗಿದ್ದಳು. ನಾವಿಬ್ಬರೂ ಒಬ್ಬಳ ಸ್ತನ್ಯವನ್ನೇ ಪಾನ ಮಾಡುತ್ತಿದ್ದೆವು.”
ಮೋಂಗ್ ಆಶ್ಚರ್ಯವನ್ನೇನೂ ವ್ಯಕ್ತಪಡಿಸಲಿಲ್ಲ. ಶಾಂತವಾಗಿ ಸುಗೋಪಾಳ ಕಡೆ ನೋಡಿದನು; ‘ಇದ್ದರೂ ಇರಬಹುದು. ಅವಳ ವಯಸ್ಸು ಕೂಡ ನಿನ್ನಷ್ಟೇ ಇದ್ದಿತು’ ಎಂದನು.
ಸುಗೋಪಾ– (ನೆಲ ನೋಡುತ್ತ) “ನಮ್ಮ ತಾಯಿಗೆ ಏನು ಗತಿ ಬಂದಿತೋ, ತಿಳಿಯದು. ಅವಳು ಅರಮನೆಯಿಂದ ಮನೆಗೆ ಹಿಂದಿರುಗಿ ಬರಲಿಲ್ಲ. ಬಹುಶಃ ಆತ್ಮಹತ್ಯೆ ಮಾಡಿಕೊಂಡಿರಬಹುದು.” ಇನ್ನು ಮುಂದೆ ಅವರ ಮಾತುಕತೆಗೆ ಒಂದು ಅಡ್ಡಿ ಬಂದಿತ್ತು.
ಮುಂದುವರೆಯುವುದು…
ಎನ್. ಶಿವರಾಮಯ್ಯ (ನೇನಂಶಿ)
ತುಮಕೂರು