ಪರಿಚ್ಛೇದ – 7
–ಬಿಡುಗಡೆ–
ಕಳ್ಳನನ್ನು ಹಿಡಿದ ಉತ್ಸಾಹದಿಂದ ಸುಗೋಪಾಳಿಗೆ ರಾತ್ರಿ ನಿದ್ದೆ ಹತ್ತಲಿಲ್ಲ ಬೆಳಗಾದುದೇ ತಡ ಅವಳು ಅರಮನೆಗೆ ಬಂದಳು.
ರಾಜಕುಮಾರಿ ರಟ್ಟಾ ಇನ್ನೂ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. ಮಲಗುವ ಕೋಣೆಯ ಬಾಗಿಲಲ್ಲಿ ಯವನ ಸ್ತ್ರೀಯರ ಪಹರೆ. ಸುಗೋಪಾ ಆ ಪಹರೆಯವರ ನಿಷೇಧವನ್ನು ಉಪೇಕ್ಷಿಸಿ, ರಾಜಕುಮಾರಿಯ ಶಯನಗೃಹದೊಳಕ್ಕೆ ಪ್ರವೇಶಿಸಿ ‘ಸಖಿ! ಏಳು, ಏಳು. ಕುದುರೆಯ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಎಂದು ಒಂದೇ ಸಮನೆ ಕೂಗಿ ಅವಳನ್ನು ಎಬ್ಬಿಸಿದಳು.
ರಾಜಕುಮಾರಿಯ ಕಣ್ಣುಗಳು ತೆರೆದವು. ಅವಳು ನಿದ್ದೆಗಣ್ಣಿನಲ್ಲಿ ‘ಏ ದೆವ್ವ ! ತೊಲಗು, ದೂರ ಹೋಗು. ಎಂಥ ಸುಂದರವಾದ ಕನಸು ಕಾಣುತ್ತಿದ್ದೆ. ಎಲ್ಲಾ ಹಾಳು ಮಾಡಿ ಬಿಟ್ಟೆ’ ಎಂದು ಗದರಿಸಿದಳು.
ಸುಗೋಪಾ ಮಂಚದ ಪಕ್ಕದಲ್ಲಿ ಕುಳಿತು ‘ಓ ಹೋ! ಎಂಥ ಕನಸು ಕಂಡೆ? ಮುಂಜಾನೆಯ ಕನಸು ನಿಜವಾಗುವುದಂತೆ. ಹೇಳು ಹೇಳು ಕೇಳೋಣ’ ಎಂದಳು.
ರಟ್ಟಾ ಹೇಳುತ್ತಾ ಹೋದಳು- ‘ಕಮಲದ ಸರೋವರದಲ್ಲಿ ಒಂದು ಆನೆ ಕ್ರೀಡಿಸುತ್ತಿತ್ತು. ನಾನು ದಡದಲ್ಲಿ ನಿಂತು ನೋಡುತ್ತಿದ್ದೆ. ಸ್ವಲ್ಪ ಹೊತ್ತಾದ ಮೇಲೆ ಆನೆ ನನ್ನನ್ನು ನೋಡಿತು. ಆಗ ಅದು ಸರೋವರದ ನಡುವೆ ಅರಳಿದ್ದ ಒಂದು ಕೆಂದಾವರೆಯನ್ನು ತನ್ನ ಸೊಂಡಿಲಿನಲ್ಲಿ ಹಿಡಿದುಕೊಂಡು ನಾನಿದ್ದ ಕಡೆಗೆ ನಡೆದು ಬಂದಿತು. ನಾನು ಅಂಜಲಿಬದ್ಧಳಾಗಿ ಅದರ ಕಡೆಗೆ ಕೈ ಚಾಚಿದೆನು. ಆನೆ ಸರೋವರದ ದಡದವರೆಗೂ ಬಂದು ಕಮಲವನ್ನು ನನ್ನ ಕೈಗೆ ಕೊಡುವುದರಲ್ಲಿತ್ತು. ಅಷ್ಟರಲ್ಲಿ ನೀನು ನಿದ್ದೆ ಕೆಡಿಸಿಬಿಟ್ಟಿ.’
ಸುಗೋಪಾ- ‘ಒಳ್ಳೆಯ ಕನಸು. ಗ್ರಹಗತಿಯನ್ನು ಅರಿಯುವ ಜೋಯಿಸರ ಬಳಿ ಇದರ ಅರ್ಥವನ್ನು ಕೇಳಿ ತಿಳಿದರಾಯಿತು. ಈಗ ಏಳು. ಕಳ್ಳನನ್ನು ನೋಡುವುದಿಲ್ಲವೆ?’
ಆಲಸ್ಯವನ್ನು ಹೋಗಲಾಡಿಸಿಕೊಳ್ಳಲೆಂಬಂತೆ ಒಂದು ಬಾರಿ ಮೈಮುರಿದು ರಟ್ಟಾ ಮೇಲೆದ್ದಳು. ಕಳ್ಳನನ್ನು ನೋಡಲು ಕುತೂಹಲವಿರದ ಮನಷ್ಯರು ಅಪರೂಪ ಅವರು ರಾಜಕುಮಾರಿಯಾದರೇನು! ಹೂವಾಡಿಗನ ಹೆಂಡತಿಯಾದರೇನು! ಆದರೂ ಪರಿಹಾಸಕ್ಕಾಗಿ ರಟ್ಟಾ ಸುಗೋಪಳನ್ನು ಕುರಿತು ‘ನಿನ್ನ ಕಳ್ಳನನ್ನು ನೀನು ನೋಡಿದೆ ತಾನೆ! ನಾನು ನೋಡಿ ಏನು ಮಾಡಬೇಕು?’ ಎಂದಳು.
ಸುಗೋಪಾ- ‘ಧನ್ಯವಾದಗಳು! ಕಳ್ಳ ನಿನ್ನ ಕುದುರೆಯನ್ನು ಕದ್ದ. ಹೀಗಿರುವಾಗ ಅವನು ನನ್ನ ಕಳ್ಳ ಹೇಗಾದ?’
ರಟ್ಟಾ- ‘ನೀನು ಕಳ್ಳನ ಚಿಂತೆಯಲ್ಲಿಯೇ ರಾತ್ರಿಯೆಲ್ಲ ನಿದ್ದೆ ಹೋಗಲಿಲ್ಲ. ಬೆಳಗಿನ ಏಳುಗಂಟೆಗೇ ಬಂದು ನಮ್ಮ ನಿದ್ದೆಯನ್ನೂ ಕೆಡಿಸಿದೆ. ಆದ್ದರಿಂದ ನಿಶ್ಚಯವಾಗಿಯೂ ಅವನು ನಿನ್ನ ಕಳ್ಳನೇ.’
ಮುಗುಳು ನಗೆ ನಗುತ್ತ ರಟ್ಟಾ ಸ್ನಾನ ಗೃಹದ ಕಡೆಗೆ ಹೊರಟಳು. ಸುಗೋಪಾ ಕೂಡ ತಮಾಷೆಯ ಮಾತುಗಳನ್ನಾಡುತ್ತ, ರಾತ್ರಿ ಕಳ್ಳನನ್ನು ಹಿಡಿದ ಕತೆಯನ್ನು ತಿಳಿಸುತ್ತ ರಟ್ಟಾಳ ಜೊತೆಗೇ ಹೋದಳು.
ಸುರ್ಯೋದಯವಾದ ಎರಡು ಗಂಟೆಯ ನಂತರ ರಾಜರ ಸಭಾಗೃಹಕ್ಕೆ ಕೆಲವೇ ವ್ಯಕ್ತಿಗಳು ಬಂದಿದ್ದರು. ರಾಜರ ಅನುಪಸ್ಥಿತಿಯಲ್ಲಿ ರಾಜಸಭೆಯಲ್ಲಿ ಕಾರ್ಯಕಲಾಪಗಳು ನಡೆಯುತ್ತಿರಲಿಲ್ಲ. ಮಂತ್ರಿಗಳು ತಮ್ಮ ತಮ್ಮ ಮನೆಗಳಲ್ಲಿ ಇದ್ದುಕೊಂಡೇ ರಾಜಕಾರ್ಯ ನಡೆಸುತ್ತಿದ್ದರು. ಆದ್ದರಿಂದ ರಾಜಸಭೆ ಶೂನ್ಯವಾಗಿರುತ್ತಿತ್ತು. ಆದರೆ ಈ ದಿನ ಕೋಟೆಯ ಮೇಲ್ವಿಚಾರಕನು ಬೆಳಗ್ಗೆಯೇ ಬಂದು ಹಾಜರಾಗಿದ್ದನು. ಅವನ ಜೊತೆಯಲ್ಲಿ ಶಸ್ತ್ರಧಾರಿಗಳಾದ ಹಲವು ಅನುಚರರಿದ್ದರು. ಅವರಲ್ಲದೆ ಅರಮನೆಗೆ ಸೇರಿದ ಕೆಲವು ದ್ವಾರಪಾಲಕರು,
ಪಹರೆದಾರರು ಇದ್ದರು. ಅಂತಃಪುರದ ಕಂಚುಕಿಯೂ ಕಳ್ಳನ ವಿಷಯ ತಿಳಿದು ಬಂದು ಸೇರಿದ್ದನು. ಮಂತ್ರಿಗಳಿಗೆ ಕಳ್ಳನನ್ನು ಹಿಡಿದಿರುವ ಸುದ್ದಿ ತಿಳಿಯದೆ ಇರುವುದರಿಂದಲೋ ಏನೋ ಅವರಾರೂ ಇನ್ನೂ ಬಂದಿರಲಿಲ್ಲ.
ರಾಜಕುಮಾರಿ ರಟ್ಟಾ ಗೆಳತಿ ಸುಗೋಪಾ ಜೊತೆಯಲ್ಲಿ ಸಭೆಗೆ ಬಂದಳು. ರಟ್ಟಾ ಹಸಿರು ಬಣ್ಣದ ರೇಷ್ಮೆ ಸೀರೆ ಉಟ್ಟು, ಗರಿಕೆ ಹಸಿರು ಬಣ್ಣದ ಕುಪ್ಪಸ ತೊಟ್ಟಿದ್ದಳು. ಬಿಳಿಯ ಕುರುವಕ ಹೂವಿನ ಮೊಗ್ಗನ್ನು ತಲೆಯಲ್ಲಿ ಮುಡಿದಿದ್ದಳು. ಅವಳು ಸಭೆಗೆ ಬಂದವಳೇ ಸಿಂಹಾಸನದ ಪಾದಪೀಠದ ಮೇಲೆ ಕುಳಿತಳು. ಸುಗೋಪಾ ಅವಳ ಕಾಲಿನ ಹತ್ತಿರ ಕುಳಿತಳು.
ಅಭಿವಾದನವೆಲ್ಲ ಮುಗಿದ ಮೇಲೆ ರಟ್ಟಾ ಸುತ್ತಲೂ ನೋಡಿ ‘ಕಳ್ಳಎಲ್ಲಿ?’ ಎಂದು ಕೇಳಿದಳು.
ಕೊತ್ವಾಲನ ಇಂಗಿತದಂತೆ ಆತನ ಅನುಚರರಿಬ್ಬರು ಹೊರ ನಡೆದರು.
ಸ್ವಲ್ಪ ಸಮಯದ ನಂತರ ಕೈಗಳನ್ನು ಕಟ್ಟಿ ಹಾಕಿದ ಕಳ್ಳನನ್ನು ಕರೆದುಕೊಂಡು
ಹಿಂದಿರುಗಿದರು. ರಾತ್ರಿ ವೇಳೆ ಗಸ್ತು ತಿರುಗುವ ಭಟರು, ಮತ್ತು ಕೋಟೆ ಬಾಗಿಲ ಕಾವಲುಗಾರರು ಅವರ ಹಿಂದೆ ಬಂದರು. ಕಳ್ಳನನ್ನು ಸಿಂಹಾಸನದ ಮುಂಭಾಗದಲ್ಲಿ ನಿಲ್ಲಿಸಿದ್ದಾಯಿತು.
ರಟ್ಟಾ ಕಳ್ಳನನ್ನು ದುರುಗುಟ್ಟಿಕೊಂಡು ನೋಡಿದಳು. ಸುಗೋಪಾ ಅವಳ ಕಿವಿಯ ಹತ್ತಿರ ಕೈಯಿಟ್ಟು ಮೆಲುದನಿಯಲ್ಲಿ ‘ಗುರುತು ಸಿಕ್ಕಿತೇ’ ಎಂದು ಪ್ರಶ್ನಿಸಿದಳು. ‘ಹೌದು, ಗುರುತು ಸಿಕ್ಕಿತು. ನಿನ್ನೆ ಜಲಸತ್ರದ ಬಳಿ ಈ ವ್ಯಕ್ತಿಯೇ ನಮ್ಮ ಕುದುರೆಯನ್ನು ಕದ್ದು ಪಲಾಯನ ಮಾಡಿದ್ದು.’ ಕಳ್ಳನನ್ನು ಕುರಿತು ‘ಏ ಕುದುರೆ ಕಳ್ಳ, ನೀನು ಹೇಳುವುದು ಏನಾದರೂ ಇದೆಯೇ?’ ಎಂದು ಪ್ರಶ್ನಿಸಿದಳು.
ಚಿತ್ರಕನು ಇಲ್ಲಿಯವರೆಗೂ ಸಮಾಧಾನ ಚಿತ್ತದಿಂದ ನಿಂತು ರಾಜಕನ್ಯೆಯ ಕಡೆ ನೋಡುತ್ತಿದ್ದನು. ರಾತ್ರಿ ಕತ್ತಲೆಕೋಣೆಯಲ್ಲಿ ವಾಸ ಮಾಡಿದ ಕಾರಣದಿಂದ ಅವನ ಬಟ್ಟೆ ಬರೆ ಸ್ವಲ್ಪ ಅಸ್ತವ್ಯಸ್ತವಾಗಿ ಮಲಿನವಾಗಿತ್ತು. ಆದರೂ ಅವನ ಹಾವಭಾವವನ್ನು ನೋಡಿದವರಿಗೆ ಅವನನ್ನು ಕಳ್ಳನೆಂದು ಹೇಳಲು ಮನಸ್ಸು ಬರುತ್ತಿರಲಿಲ್ಲ. ಅಕಾರಣವಾಗಿ ತೊಂದರೆ ಸಿಕ್ಕಿ ಅಪಮಾನಕ್ಕೆ ಈಡಾಗಿ ತನ್ನ ಗಾಂಭೀರ್ಯವನ್ನು ಕಳೆದುಕೊಂಡಿರುವ ಹಾಗೆ ಅವನ ಮುಖಭಾವ ಕಾಣುತ್ತಿತ್ತು. ಅವನು ಒಂದು ಬಾರಿ ಶಾಂತ, ಆದರೆ ಅಪ್ರಸನ್ನ ನೇತ್ರಗಳಿಂದ ಸುತ್ತಲೂ ನೋಡಿ, ‘ನನ್ನನ್ನು ಎಲ್ಲಿಗೆ ಕರೆದುಕೊಂಡು ಬರಲಾಗಿದೆ ಎಂಬುದನ್ನು
ತಿಳಿಯಬಹುದೆ?’ ಎಂದು ಕೇಳಿದನು.
ಕೊತ್ವಾಲನು ಕಳ್ಳನ ಭಾವಭಂಗಿಯನ್ನು ನೋಡಿ ಕೋಪಗೊಂಡು ಕಠೋರವಾದ ಧ್ವನಿಯಲ್ಲಿ ‘ನಿನ್ನನ್ನು ರಾಜಸಭೆಗೆ ಕರೆತರಲಾಗಿದೆ. ನೀನು ರಾಜಕನ್ಯೆಯ ಕುದುರೆಯನ್ನು ಕದ್ದಿರುವೆ. ಅದಕ್ಕಾಗಿ ನಿನಗೆ ಶಿಕ್ಷೆಯಾಗುತ್ತದೆ. ಈಗ ನೀನು ರಾಜಕುಮಾರಿಯ ಮಾತಿಗೆ ಉತ್ತರಕೊಡು. ನೀನು ಹೇಳುವುದು ಏನಾದರೂ ಇದೆಯೆ?’ ಎಂದು ಹೇಳಿದನು.
ಚಿತ್ರಕನೂ ಅಷ್ಟೇ ಗಂಭೀರವಾಗಿ ದೈರ್ಯದಿಂದ ‘ಇದೆ. ಈಕೆಯು ದಂಡಾಧಿಕಾರಿಯೆ? ಇದೇನು ನ್ಯಾಯಾಲಯವೇ?’ ಎಂದು ಕೇಳಿದನು.
ಕೊತ್ವಾಲನು- ‘ಇಲ್ಲ. ನಿನ್ನ ವಿಚಾರಣೆ ಯಥಾ ಕಾಲದಲ್ಲಿ ಮಾಡಲಾಗುವುದು. ಈಗ ಪ್ರಶ್ನೆಗೆ ಉತ್ತರ ಕೊಡು. ಏತಕ್ಕಾಗಿ ಕುದುರೆಯನ್ನು ಕದ್ದೊಯ್ದೆ?’ ಎಂದು ಕೇಳಿದನು.
ಚಿತ್ರಕ ಕ್ಷಣಕಾಲ ಸ್ಥಿರದೃಷ್ಟಿಯಿಂದ ರಟ್ಟಾಳೆ ಕಡೆ ನೋಡಿ, ಗಂಭೀರವಾದ ಧ್ವನಿಯಲ್ಲಿ ‘ನಾನು ಕುದುರೆಯನ್ನು ಕದಿಯಲಿಲ್ಲ. ರಾಜ ಕಾರ್ಯಕ್ಕಾಗಿ ಸ್ವಲ್ಪಕಾಲ ಅದನ್ನು ಕರೆದುಕೊಂಡು ಹೋಗಬೇಕಾಯಿತು. ಅದರ ಋಣ ನನ್ನ ಮೇಲಿದೆ’ ಅಷ್ಟೆ’ ಎಂದು ಹೇಳಿದನು.
ಸಭೆಯಲ್ಲಿದ್ದವರೆಲ್ಲ ಸ್ತಂಭೀಭೂತರಾದರು. ಕಳ್ಳ ಏನು ಹೇಳುತ್ತಿದ್ದಾನೆ! ಕೊತ್ವಾಲನ ಕಣ್ಣು ಕೆಂಪಗಾಯಿತು. ಕಳ್ಳನಿಗೆ ಇಷ್ಟೊಂದು ದಾಷ್ಟ್ರ್ಯ! ರಟ್ಟಾಳ ಕಣ್ಣಗಳೂ ಕೂಡ ವಿನ್ಮಯ ಹಾಗೂ ಕೋಪದಿಂದ ಕಿಡಿಕಾರಿದವು. ಆಕೆಯು ಸ್ವಲ್ಪ ತೀಕ್ಷ್ಣಧ್ವನಿಯಲ್ಲಿ ‘ನೀನು ವಿದೇಶಿ ಎಂದು ಕಾಣುತ್ತದೆ. ನಿನ್ನ ಪರಿಚಯವೇನು? ಎಂದು ಕೇಳಿದಳು.
ಚಿತ್ರಕ ರಾಜಕುಮಾರಿಯು ರೋಷಾವಿಷ್ಟ ದೃಷ್ಟಿಯಿಂದ ನೋಡುತ್ತಿದ್ದರೂ ಅವಳ ಮುಂದೆ ಸ್ವಲ್ಪವೂ ತಲೆಬಾಗದೆ ಅಕಂಪಿತ ಧ್ವನಿಯಲ್ಲಿ ‘ನಾನು ಮಗಧದ ದೂತ, ಪರಮ ಭಟ್ಟಾರಕ ಪರಮೇಶ್ವರ ಶ್ರೀಮನ್ ಮಹಾರಾಜ ಸ್ಕಂದಗುಪ್ತರ ಸಂದೇಶವಾಹಕ’ ಎಂದು ಹೇಳಿದನು.
ಸಭೆಯಲ್ಲಿದ್ದ ಯಾರ ಬಾಯಿಂದಲೂ ಯಾವ ಮಾತೂ ಹೊರಡಲಿಲ್ಲ. ಎಲ್ಲರೂ ಪಿಳಿ ಪಿಳಿ ಕಣ್ಣು ಬಿಡುತ್ತ ಅತ್ತ ಇತ್ತ ನೋಡಹತ್ತಿದರು. ಮಗಧದ ದೂತ! ಸ್ಕಂದಗುಪ್ತನ ವಾರ್ತಾವಾಹಕ! ಸ್ಕಂದಗುಪ್ತನ ಹೆಸರು ಕೇಳುತ್ತಲೇ ಎದೆ ನಡುಗದಿರುವ ಮನುಷ್ಯನು ಆಗ ಆರ್ಯಾವರ್ತದಲ್ಲಿ ಇರಲಿಲ್ಲವೆಂದೇ ಹೇಳಬೇಕು. ಅಂಥ ಸ್ಕಂದಗುಪ್ತನ ದೂತನನ್ನು ಕಳ್ಳನೆಂದು ಭಾವಿಸಿ ಬಂಧಿಸಿದ್ದಾಗಿದೆ!
ಕೊತ್ವಾಲನು ಕಿಂ ಕರ್ತವ್ಯ ವಿಮೂಢನಾಗಿ ಕ್ಷಣಕಾಲ ನಿಂತು ಬಿಟ್ಟನು. ರಾಜಕುಮಾರಿ ರಟ್ಟಾಳ ಕಣ್ಗಳಿಗೆ ಕತ್ತಲು ಕವಿದ ಹಾಗಾಯಿತು. ಸುಗೋಪಾಳ ಮುಖ ಒಣಗಿತು. ಎಲ್ಲರೂ ಚಿತ್ರದ ಬೊಂಬೆಗಳಂತೆ ನಿಶ್ಚಲರಾದರು.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)
ಚಿತ್ರಸಂಗ್ರಹ: ಮಂಜುಳಾ ಸುದೀಪ್