ಹಿಂದಿನ ಸಂಚಿಕೆಯಿಂದ….
ಚಿತ್ರದ ಬೊಂಬೆಗಳ ಹಾಗೆ ಇನ್ನೂ ಎಷ್ಟು ಹೊತ್ತು ಇರುತ್ತಿದ್ದರೋ ಏನೋ, ಆದರೆ ಅಷ್ಟರಲ್ಲಿ ದೈವಯೋಗದಿಂದ ರಾಜ್ಯದ ಪ್ರಧಾನಮಂತ್ರಿ ಚತುರಾನನ ಭಟ್ಟ ಕಾಣಿಸಿಕೊಂಡನು. ಚತುರಾನನ ವರ್ಣಾಶ್ರಮದಲ್ಲಿ ಬ್ರಾಹ್ಮಣ. ಚತುರ; ಸ್ಥಿರಬುದ್ಧಿಯ ವ್ಯಕ್ತಿ. ಆ ಕಾಲದಲ್ಲಿ ಭಾರತಭೂಮಿಯಲ್ಲಿ ಅನೇಕ ಸಣ್ಣಪುಟ್ಟ ರಾಜ್ಯಗಳಲ್ಲಿ ಬಹುಜಾತೀಯ ಹಾಗೂ ಬಹುಧರ್ಮೀಯ ರಾಜರುಗಳು ರಾಜ್ಯವಾಳುತ್ತಿದ್ದರು. ಉತ್ತರದಲ್ಲಿ ಶಕರೂ ಹೂಣರೂ ಇದ್ದರು. ದಕ್ಷಿಣದಲ್ಲಿ ದ್ರಾವಿಡರೂ ಗುರ್ಜರರೂ ಇದ್ದರು. ಮಂತ್ರಿಯ ಕಾರ್ಯನಿರ್ವಹಿಸುತ್ತಿದ್ದವರು ಮಾತ್ರ ಬಡಕಲು ಶರೀರದ, ಯಜ್ಞೋಪವೀತಧಾರಿಗಳಾದ ಬ್ರಾಹ್ಮಣರೇ ಆಗಿದ್ದರೆಂಬುದು ಒಂದು ಆಶ್ಚರ್ಯದ ಸಂಗತಿ.
ಪ್ರಧಾನಿ ಚತುರಾನನ ಭಟ್ಟ ಸಭೆಯನ್ನು ಪ್ರವೇಶಿಸಿ, ಕಂಚುಕಿಯ ಬಳಿ ಹೋಗಿ ಸಂಕ್ಷೇಪವಾಗಿ ನಾಲ್ಕಾರು ಪ್ರಶ್ನೆಗಳನ್ನು ಕೇಳಿ, ವಿಷಯ ತಿಳಿದುಕೊಂಡು ಸಭೆಯ ಮಧ್ಯಭಾಗದಲ್ಲಿ ಹೋಗಿ ನಿಂತನು.
ಮೊದಲು ರಾಜಕುಮಾರಿಗೆ ಕೈಗಳನ್ನು ಮೇಲಕ್ಕೆತ್ತಿ ಆಶೀರ್ವಾದ ಪೂರ್ವಕವಾಗಿ ಸ್ವಸ್ತಿವಾಚನ ಮಾಡಿದನು. ಅನಂತರ ಬಂದಿಯ ಕಡೆಗೆ ತಿರುಗಿದನು. ಪ್ರಧಾನಿಯ ಕಣ್ಣುನೋಟ, ಬಲು ಚುರುಕು. ಚಿತ್ರಕನನ್ನು ಆಪಾದಮಸ್ತಕವಾಗಿ ಒಂದು ಕ್ಷಣಕಾಲ ನೋಡಿ ‘ಕೈಗಳ ಕಟ್ಟುಗಳನ್ನು ಬಿಚ್ಚಿರಿ’ ಎಂದು ಆಜ್ಞೆ ಮಾಡಿದನು.
ಇದುವರೆಗೂ ಏನು ಮಾಡಬೇಕೆಂದು ತೋಚದೆ ಎಲ್ಲರೂ ಸುಮ್ಮನಿದ್ದರು. ಪ್ರಧಾನಿಯ ಆಜ್ಞೆಯಿಂದ ಅವರಿಗೆ ಹೊಸ ಚೈತನ್ಯ ಬಂದ ಹಾಗಾಯಿತು. ಕೊತ್ವಾಲನು ತಾನೇ ಮುಂದೆ ಬಂದು ಚಿತ್ರಕನ ಕೈಗಳಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದನು.
ಚತುರಾನನ ಭಟ್ಟನು ಆಗ ನಗು ಮುಖದಿಂದ ಮಧುರವಾದ ಧ್ವನಿಯಲ್ಲಿ ಚಿತ್ರಕನನ್ನು ಸಂಬೋಧಿಸಿ ‘ತಾವು ಮಗಧದ ರಾಜದೂತರೋ?’ ಎಂದು ಕೇಳಿದನು.
ಚಿತ್ರಕನು ಈ ಸೂಕ್ಷ್ಮ ದೃಷ್ಟಿಯ ಮೃದುಭಾಷಿಯಾದ ಪ್ರೌಢನನ್ನು ನೋಡಿ ಮನಸ್ಸಿನಲ್ಲಿಯೇ ಸ್ವಲ್ಪ ಎಚ್ಚರಿಕೆ ವಹಿಸಿ ‘ಹೌದು. ತಾವು?’ ಎಂದನು.
ಚತುರಾನನ- ‘ನಾನು ಈ ರಾಜ್ಯದ ಮಂತ್ರಿ… ಮಹಾಶಯರ ಹೆಸರು? ತಮ್ಮ ಅಭಿಜ್ಞಾನ?’
ಮುದ್ರೆಯುಂಗುರವನ್ನು ತನ್ನ ಬೆರಳಿನಿಂದ ಹೊರತೆಗೆಯುವಾಗ ಚಿತ್ರಕನಿಗೆ ಥಟ್ಟನೆ ಚಿಂತೆ ಮೂಡಿತು. ‘ರಾಜರ ಪತ್ರದಲ್ಲಿ ಎಲ್ಲಿಯಾದರೂ ದೂತನ ಹೆಸರಿದೆಯೋ ಏನೋ? ನನಗೆ ನೆನಪಿರುವಂತೆ- ಇಲ್ಲ. ಇರಲಿ’ ಎಂದು ನಿಶ್ಚಯಿಸಿ ‘ನನ್ನ ಹೆಸರು ಚಿತ್ರಕ ವರ್ಮಾ’ ಎಂದನು.
ಚತುರಾನನಿಗೆ ಸ್ವಲ್ಪ ಅಸಮಾಧಾನವಾಯಿತು. ‘ತಾವು ಕ್ಷತ್ರಿಯರು?’ ದೌತ್ಯ ಕಾರ್ಯದಲ್ಲಿ ಸಾಮಾನ್ಯವಾಗಿ ಬ್ರಾಹ್ಮಣರನ್ನು ಕಳುಹಿಸುವುದು ಪದ್ಧತಿ.
ಚಿತ್ರಕ- ‘ಹೌದು, ಇದೋ ನೋಡಿ ಇದು ನಮ್ಮ ಅಭಿಜ್ಞಾನದ ಮುದ್ರೆ!
ಅಭಿಜ್ಞಾನವನ್ನು ನೋಡಿ ಚತುರಾನನಿಗೆ ಆನಂದವಾಯಿತು. ಚಿತ್ರಕನಿಗೆ ಹಸ್ತಲಾಘವವನ್ನು ಕೊಟ್ಟು, ‘ದೂತ ಮಹಾಶಯ, ನಿಮಗೆ ಸ್ವಾಗತ’ ಎಂದು ಆತ್ಮೀಯತೆಯಿಂದ ಬರಮಾಡಿಕೊಂಡು ‘ಎರಡೂ ಕಡೆಯವರಿಂದ ಕೆಲವು ತಪ್ಪುಗಳು ನಡೆದು ಹೋಗಿವೆ. ತಾವು ಒಂದು ಮಾತನ್ನೂ ಹೇಳದೆ ಕುದುರೆಯನ್ನು ಕರೆದುಕೊಂಡು ಹೋದಿರಿ- ರಾಜಕುಮಾರಿಯ ಕುದರೆ’.
ಚಿತ್ರಕನು ಮುಗುಳು ನಗೆ ನಗುತ್ತ ರಟ್ಟಾಳ ಕಡೆ ಕಣ್ಣುಗಳನ್ನು ತಿರುಗಿಸಿ ‘ಅದು ರಾಜಕುಮಾರಿಯ ಕುದುರೆ ಎಂದು ನನಗೆ ಅನುಮಾನ ಬರಲಿಲ್ಲ’ ಎಂದನು.
ಆ ವಾಕ್ಯದಲ್ಲಿ ಎಷ್ಟು ಬುದ್ಧಿವಂತಿಕೆ ಹಾಗೂ ಎಷ್ಟು ತಾನು ಮಾಡಿದುದು ಸರಿ ಎಂಬ ಸಮರ್ಥನೆ ಇದ್ದಿತೆಂದು ಸರಿಯಾಗಿ ಗ್ರಹಿಸಲು ಸಾಧ್ಯವಾಗಲಿಲ್ಲ. ಆದರೆ ರಟ್ಟಾ ಚಿತ್ರಕನ ಕಡೆಯಿಂದ ತನ್ನ ದೃಷ್ಟಿಯನ್ನು ಬೇರೆಡೆಗೆ ಹರಿಸಿ ಮನಸ್ಸಿನಲ್ಲಿಯೇ ಈ ದೂತ ಒಳ್ಳೆಯ ವಾಕ್ಪಟು ಎಂಬುದರಲ್ಲಿ ಸಂದೇಹವಿಲ್ಲ. ಅವನು ಸ್ವಲ್ಪವೇ ಹೇಳಿದರೂ ಅದರಿಂದ ಹೆಚ್ಚು ಅರ್ಥ ಹೊರಹೊಮ್ಮುತ್ತದೆ’ ಎಂದು ಯೋಚಿಸಿದಳು.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)