ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 22

ಹಿಂದಿನ ಸಂಚಿಕೆಯಿಂದ…

ಚತುರಾನನ- ‘ಸರಿ. ಅದಾದ ಮೇಲೆ ಹಿಂದಿನ ದಿನ ರಾತ್ರಿ ತಾವು ತಮ್ಮ ಪರಿಚಯ ಹೇಳಿಕೊಂಡಿದ್ದಿದ್ದರೆ!…

ಚಿತ್ರಕ- ಯಾರ ಮುಂದೆ ಪರಿಚಯ ಹೇಳಿಕೊಳ್ಳಬೇಕಾಗಿತ್ತು? ರಾತಿ ವೇಳೆ ಊರೊಳಗೆ ಗಸ್ತು ತಿರುಗುವ ಭಟರ ಮುಂದೆ? ತೋರಣದ್ವಾರದ ಕಾವಲುಗಾರರ ಮುಂದೆ?’

ಚತುರಾನನು ಚಿತ್ರಕನನ್ನು ಒಂದು ಬಾರಿ ನೋಡಿ ನಿಟ್ಟುಸಿರು ಬಿಟ್ಟನು.

‘ಹೋಗಲಿ ಬಿಡಿ. ಏನೇನು ಆಗಬೇಕಾಗಿತ್ತೊ ಎಲ್ಲವೂ ಆಗಿ ಹೋಯಿತು- ನಿರ್ವಾಣ ದೀಪೇ ಕಿಮು ತೈಲದಾನಮ್? (ಆರಿ ಹೋಗಿರುವ ದೀಪಕ್ಕೆ ಎಣ್ಣೆ ಹಾಕಿದರೆ ಪ್ರಯೋಜನವೇನು?) ಈಗ ನಿಮ್ಮ ವಿಶ್ರಾಂತಿಯ ಕಡೆಗೆ ಗಮನ ಕೊಡಬೇಕಾಗಿದೆ. ಅದಕ್ಕೆ ಮೊದಲು ನೀವು ರಾಜರ ಕಡೆಯಿಂದ ತಂದಿರುವ ಸಂದೇಶ ಎಲ್ಲಿ?’ ಎಂದು ಕೇಳಿದನು.

ಚಿತ್ರಕ- ಬಹುಶಃ ಅದು ನನ್ನ ಚೀಲದಲ್ಲಿ ಇದ್ದಿತೋ ಏನೋ! ರಾತ್ರಿಗಸ್ತಿನ ಭಟರು ಅದನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆಯೋ ಏನೋ!’

ರಾತ್ರಿ ಗಸ್ತಿನ ಭಟರು ಸಭೆಯ ಹಿಂಭಾಗದಲ್ಲಿ ಹಾಜರಿದ್ದರು. ಅವರು ಇಂಥ ಅಕ್ರಮ ಕಾರ್ಯವನ್ನು ತಾವು ಮಾಡಿಲ್ಲವೆಂದು ತಲೆ ಅಲ್ಲಾಡಿಸಿದರು. ಚಿತ್ರಕನು ತನ್ನ ಸೊಂಟದಲ್ಲಿ ಕಟ್ಟಿಕೊಂಡಿದ್ದ ಚೀಲವನ್ನು ತೆಗೆದು ನೋಡಿದಾಗ ಅದರಲ್ಲಿ ಪತ್ರವಿತ್ತು. ಅವನು ಬಹಳ ಎಚ್ಚರಿಕೆಯಿಂದ ಸುರುಳಿ ಸುತ್ತಿದ್ದ ಪತ್ರವನ್ನು ಹೊರ ತೆಗೆದು ಸ್ವಲ್ಪ ಹಿಂದು ಮುಂದು ನೋಡಿದನು. ‘ಏನು ಮಾಡುವುದು. ಇದು ರಾಜರ ಪತ್ರ ರಾಜರ ಕೈಗೇ ಕೊಡುವುದು ನೀತಿ ನಿಯಮ’ ಎಂದನು.

ಮಂತ್ರಿಯು ‘ನೀವು ಹೇಳಿದುದು ಸರಿಯೇ. ಆದರೆ ಮಹಾರಾಜರು ಈಗ ರಾಜಧಾನಿಯಲ್ಲಿಲ್ಲ. ರಾಜಕುಮಾರಿಯೇ ಅವರ ಪ್ರತಿನಿಧಿ. ನೀವು ಪತ್ರವನ್ನು ರಾಜದುಹಿತೆಯ ಕೈಗೆ ಕೊಡಬಹುದು’ ಎಂದನು.

ಚಿತ್ರಕನು ಎರಡು ಹೆಜ್ಜೆ ಮುಂದೆ ಹೋಗಿ ಕೈ ಮುಗಿದು ರಾಜಕುಮಾರಿಯ ಕೈಗೆ ಪತ್ರವನ್ನು ಕೊಟ್ಟನು.

ಪತ್ರವನ್ನು ಪಡೆದ ರಟ್ಟಾ ಕ್ಷಣಕಾಲ ಯೋಚಿಸಿ, ನಕ್ಕು, ಪತ್ರದ ಸುರುಳಿಯನ್ನು ಮಂತ್ರಿಯ ಕೈಗೆ ಕೊಟ್ಟಳು. ‘ನೀತಿ ನಿಯಮಗಳ ಪಾಲನೆಯೇನೋ ಆಯಿತು. ಇನ್ನು ಅದರ ಕಾರ್ಯವನ್ನು ಮಂತ್ರಿಗಳು ಮಾಡಲಿ’ ಎಂಬುದೇ ಆ ನಗುವಿನ ಅರ್ಥ ಇರಬಹುದು.

ಪತ್ರವನ್ನು ತೆಗೆದುಕೊಂಡ ಚತುರಾನನನಿಗೆ ಆಶ್ಚರ್ಯವಾಯಿತು. ಅವನು ‘ಇದೇನು! ಪತ್ರದ ಸುರಳಿಯ ಮೇಲಿನ ಅರಗಿನ ಮುದ್ರೆ ಒಡೆದಿದೆಯಲ್ಲ!’ ಎಂದು ಅನುಮಾನ ವ್ಯಕ್ತಪಡಿಸಿ ಚಿತ್ರಕನ ಕಡೆ ನೋಡಿದನು.

ಚಿತ್ರಕನು ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸದೆ ಆಶ್ಚರ್ಯ ವ್ಯಕ್ತಪಡಿಸುವ ಧ್ವನಿಯಲ್ಲಿ ‘ಹಾಗೇನು! ನಿನ್ನೆ ರಾತ್ರಿ ತಮ್ಮ ರಾತ್ರಿಗಸ್ತಿನ ಭಟರು ನಮ್ಮ ಜೊತೆ ಸ್ವಲ್ಪ ಕುಸ್ತಿ ಮಾಡಿದರಲ್ಲವೆ. ಆಗ ಅರಗಿನ ಮುದ್ರೆ ಒಡೆದಿರಬಹುದು’ಎಂದನು.

ಅದು ಆಗಿದ್ದರೂ ಆಗಿರಬಹುದು. ಆದರೆ ಮಂತ್ರಿಯ ಸಂಶಯ ದೂರವಾಗಲಿಲ್ಲ. ಮಂತ್ರಿ ಆ ಭಟರ ಕಡೆ ನೋಡಿದನು. ಅವರು ತಮ್ಮ ತಲೆ ತಗ್ಗಿಸಿ ‘ಮಲ್ಲಯುದ್ಧ’ ನಡೆದುದು ನಿಜವೆಂದು ಒಪ್ಪಿಕೊಂಡರು.

ಚಿತ್ರಕನು ಒಳಗೊಳಗೇ ನಕ್ಕು ‘ನಮ್ಮ ದೂತ ಕಾರ್ಯವು ಇಲ್ಲಿಗೆ ಮುಗಿಯಿತು. ಇನ್ನು ನನಗೆ ಅಪ್ಪಣೆಕೊಟ್ಟರೆ ನಾನು ಹೊರಡುತ್ತೇನೆ’ ಎಂದನು.

ಚತುರಾನನನು ‘ಇದೇನು ಎಂಥ ಮಾತು! ನೀವು ಮಗಧದ ರಾಜದೂತರು. ಇಷ್ಟು ದೂರ ಬಂದಿದ್ದೀರಿ. ಈಗಲೇ ಹಿಂದಿರುಗಬೇಕೆಂದಿದ್ದೀರಿ. ಒಳ್ಳೆಯ ಮಾತಾಡಿದಿರಿ! ನಿಮ್ಮ ಜೊತೆಯವರು ಯಾರೂ ಇಲ್ಲವೆ?’ ಎಂದು ಕೇಳಿದನು.

ಚಿತ್ರಕನು ನಿಟ್ಟುಸಿರು ಬಿಟ್ಟು ‘ಪ್ರಯಾಣ ಹೊರಟಾಗ ನಾವು ಮೂವರಿದ್ದೆವು. ದಾರಿಯಲ್ಲಿ ನಾನಾ ದುರ್ಘಟನೆಗಳ ಕಾರಣದಿಂದ ಇಬ್ಬರನ್ನೂ ಕಳೆದುಕೊಳ್ಳ ಬೇಕಾಯಿತು. ಇದರ ಜೊತೆಗೆ ಕುದುರೆಯೂ ಹೋಯಿತು. ಈ ಪ್ರದೇಶದಲ್ಲಿ ದಾರಿ ಬಹಳ ದುರ್ಗಮವಾದುದು ಹಾಗೂ ಅಪಾಯಕರವಾದುದು- ಹೋಗಲಿಬಿಡಿ. ಆ ವಿಷಯ ಹಾಗಿರಲಿ. ಈಗ ನನಗೆ ಅಪ್ಪಣೆಯೆ?’ ಎಂದು ಹೇಳಿ ರಟ್ಟಾಳ ಕಡೆ ತಿರುಗಿ ನೋಡಿದನು.

ರಟ್ಟಾ ಏನನ್ನಾದರೂ ಹೇಳುವುದಕ್ಕೆ ಮೊದಲೆ ಮಂತ್ರಿಯು ‘ಆದರೆ ಈಗಲೇ ತಮ್ಮ ದೌತ್ಯ ಮುಗಿದಿಲ್ಲ. ಹೀಗಿರುವಾಗ ತಾವು ಹೇಗೆ ಹೋಗುತ್ತೀರಿ? ಪತ್ರದ ಉತ್ತರ- ಎಂದು ಚಿತ್ರಕನಿಗೆ ಹೇಳಿದನು.

ಚಿತ್ರಕನು ದೃಢವಾದ ಧ್ವನಿಯಲ್ಲಿ ‘ತಮ್ಮ ಉತ್ತರದ ಬಗೆಗೆ ನನಗೆ ರಾಜರಿಂದ ಯಾವ ಅಪ್ಪಣೆಯೂ ಆಗಿಲ್ಲ. ನಾನು ಶ್ರೀಮನ್ ಮಹಾರಾಜರ ಪತ್ರವನ್ನು ತಮಗೆ ಒಪ್ಪಿಸಿದ್ದೇನೆ. ಅಲ್ಲಿಗೆ ನನ್ನ ಜವಾಬ್ದಾರಿ ಮುಗಿಯಿತು’ ಎಂದು ಹೇಳಿ ಅನುಮತಿಗಾಗಿ ಮತ್ತೆ ರಟ್ಟಾಳ ಕಡೆ ನೋಡಿದನು.

ಮುಂದುವರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *