ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 23

ಹಿಂದಿನ ಸಂಚಿಕೆಯಿಂದ….

ರಟ್ಟಾ ಏನನ್ನಾದರೂ ಹೇಳುವುದಕ್ಕೆ ಮೊದಲೆ ಮಂತ್ರಿಯು ‘ಆದರೆ ಈಗಲೇ ತಮ್ಮ ದೌತ್ಯ ಮುಗಿದಿಲ್ಲ. ಹೀಗಿರುವಾಗ ತಾವು ಹೇಗೆ ಹೋಗುತ್ತೀರಿ? ಪತ್ರದ ಉತ್ತರ- ಎಂದು ಚಿತ್ರಕನಿಗೆ ಹೇಳಿದನು.

ಚಿತ್ರಕನು ದೃಢವಾದ ಧ್ವನಿಯಲ್ಲಿ ‘ತಮ್ಮ ಉತ್ತರದ ಬಗೆಗೆ ನನಗೆ ರಾಜರಿಂದ ಯಾವ ಅಪ್ಪಣೆಯೂ ಆಗಿಲ್ಲ. ನಾನು ಶ್ರೀಮನ್ ಮಹಾರಾಜರ ಪತ್ರವನ್ನು ತಮಗೆ ಒಪ್ಪಿಸಿದ್ದೇನೆ. ಅಲ್ಲಿಗೆ ನನ್ನ ಜವಾಬ್ದಾರಿ ಮುಗಿಯಿತು’ ಎಂದು ಹೇಳಿ ಅನುಮತಿಗಾಗಿ ಮತ್ತೆ ರಟ್ಟಾಳ ಕಡೆ ನೋಡಿದನು.

ಈಗ ರಟ್ಟಾ ಮಾತನಾಡಿದಳು. ಆಕೆ ಸಮಾಧಾನಕರವಾದ ದನಿಯಲ್ಲಿ‘ದೂತ ಮಹಾಶಯರೆ, ವಿಟಂಕ ರಾಜ್ಯಕ್ಕೆ ಬಂದು ತಾವು ಸ್ವಲ್ಪ ತೊಂದರೆಯನ್ನು ಅನುಭವಿಸಬೇಕಾಯಿತು. ಈ ತೊಂದರೆಯು ಅನಿಚ್ಛೆಯಿಂದ ಆದುದಾದರೂ ತಮಗೆ ನೋವಾಗಿದೆ. ಆದರೆ ಅತಿಥಿಗಳಿಗೆ ತೊಂದರೆ ಕೊಡುವುದು ವಿಟಂಕ ದೇಶದ ಸ್ವಭಾವವಲ್ಲ. ತಾವು ಕೆಲವು ದಿನ ರಾಜಾತಿಥ್ಯ ಸ್ವೀಕರಿಸಿದರೆ ನಮಗೆ ಸಮಾಧಾನ; ತೃಪ್ತಿ’ ಎಂದಳು.

ಚಿತ್ರಕನು ಇಲ್ಲಿಯವರೆಗೂ ಹೇಗಾದರೂ ಮಾಡಿ ತಪ್ಪಿಸಿಕೊಂಡು ಪಲಾಯನ ಮಾಡಲು ಅವಕಾಶ ಹುಡುಕುತ್ತಿದ್ದನು. ವಿಟಂಕ ರಾಜ್ಯವು ಅವನಿಗೆ ನಿರಾಪದವಾಗಿರಲಿಲ್ಲ. ‘ಕೂಟ ಬುದ್ಧಿಯ ಮಂತ್ರಿಗೆ ಅವನ ದೌತ್ಯದಲ್ಲಿ ಸಂಪೂರ್ಣವಾದ ನಂಬಿಕೆ ಇಲ್ಲ. ಅದೂ ಅಲ್ಲದೆ ಶಶಿಶೇಖರನು ಯಾವುದೇ ಗಳಿಗೆಯಲ್ಲಿ ಹಾಜರಾಗಬಹುದು. ಹೀಗಿರುವಾಗ ಆದಷ್ಟು ಬೇಗ ರಾಜ್ಯವನ್ನು ಬಿಟ್ಟು ಹೋಗುವುದು ಒಳ್ಳೆಯದು, ಎಂದು ಮನಸ್ಸಿನಲ್ಲಿಯೇ ಗುಣಾಕಾರ ಹಾಕುತ್ತಿದ್ದನು. ಅದೇ ಉದ್ದೇಶದಿಂದ ಅವನು ಏನೆಲ್ಲಾ ಪ್ರಯತ್ನ ಮಾಡುತ್ತಿದ್ದನು.

ಆದರೆ ಈಗ ರಾಜಕುಮಾರಿ ರಟ್ಟಾಳ ಮಾತು ಕೇಳಿ ಇದ್ದಕ್ಕಿದ್ದಂತೆ ಅವನಲ್ಲಿ ಪರಿವರ್ತನೆ ಉಂಟಾಯಿತು. ಕುಮಾರಿ ರಟ್ಟಾಳ ಅನುಪಮ ಸೌಂದರ್ಯದಲ್ಲಿ ಮತ್ತು ಆಕೆಯ ಪ್ರಶಾಂತ ಹಾಗೂ ಗಂಭೀರ ವಾಚನ ಭಂಗಿಯಲ್ಲಿ ಅದಾವ ಸಮ್ಮೋಹನ ಶಕ್ತಿ ಇದ್ದಿತೋ ಚಿತ್ರಕನ ಮನಸ್ಸಿನಿಂದ ಪಲಾಯನ ಮಾಡಬೇಕೆಂಬ ಬಯಕೆ ಮಾಯವಾಗಿ, ತನ್ನ ಪೌರುಷವನ್ನು ಪ್ರದರ್ಶಿಸಬೇಕೆಂಬ ಹಠವು ಜಾಗೃತವಾಯಿತು. ‘ವಿಪತ್ತಿಗೆ ಹೆದರಿ ಏಕೆ ಪಲಾಯನ ಮಾಡಬೇಕು? ಚಂಚಲವಾದ ಭಾಗ್ಯದೇವತೆ ನನ್ನನ್ನು ಯಾವ ದಾರಿಯಲ್ಲಿ ಕರೆದೊಯ್ಯುವಳೋ ನೋಡಿಯೇ ಬಿಡೋಣ! ಜೀವನದ ಎಲ್ಲ ಮಾರ್ಗಗಳ ಕೊನೆ ಎಂದರೆ
ಸಾವೇ ಅಲ್ಲವೆ! ಹಾಗಾದರೆ ಹೇಡಿಯ ಹಾಗೆ ಏಕೆ ಓಡಿ ಹೋಗಬೇಕು?’ ಎಂದು ಚಿತ್ರಕನು ಮನಸ್ಸಿನಲ್ಲಿಯೇ ಗುಣಾಕಾರ ಹಾಕಿದನು.

‘ದೇವ ದುಹಿತೆಯ ಅಪ್ಪಣೆಯಂತೆ’ ಎಂದು ಕೈಜೋಡಿಸಿ, ತಲೆಬಾಗಿ ನಮಸ್ಕರಿಸುತ್ತ ಚಿತ್ರಕನು ಹೇಳಿದನು.

ರಟ್ಟಾಳ ಮುಖದ ಪ್ರಸನ್ನತೆಯು ಮತ್ತಷ್ಟು ಹೆಚ್ಚಾಯಿತು. ಆಕೆಯು ಮಂತ್ರಿಯನ್ನು ಸಂಬೋಧಿಸಿ ‘ಆರ್ಯ ಚತುರಭಟ್ಟ ಮಹಾಶಯರೆ, ದೂತ ಮಹಾಶಯರ ವಾಸ್ತವ್ಯದ ಬಗ್ಗೆ ಏರ್ಪಾಟು ಮಾಡೋಣವಾಗಲಿ’ ಎಂದು ಹೇಳಿದಳು.

ಮಹಾಸಚಿವ ಚತುರಭಟ್ಟನು ಈಗ ಪೇಚಿಗೆ ಸಿಕ್ಕಿಕೊಂಡನು. ಕಳೆದ ಇಪ್ಪತ್ತೈದು ವರ್ಷಗಳಿಂದ ವಿಟಂಕ ರಾಜ್ಯಕ್ಕೆ ಪರರಾಷ್ಟ್ರದ ಯಾವ ದೂತನೂ ಬಂದಿರಲಿಲ್ಲ. ಆದ್ದರಿಂದಲೇ ರಾಜಧಾನಿಯಲ್ಲಿ ದೂತಾವಾಸದ ಯಾವ ಖಾಯಂ ವ್ಯವಸ್ಥೆ ಮಾಡಿರಲಿಲ್ಲ. ಯಾವಾಗಲಾದರೂ ಮಿತ್ರರಾಜ್ಯದಿಂದ ರಾಜಕೀಯ ಅತಿಥಿಗಳು ಬಂದರೆ ಅರಮನೆಯಲ್ಲಿಯೇ ಯಾವುದಾದರೂ ಒಂದು ಭವನದಲ್ಲಿ ಅವರು ಇಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಆದರೆ ಈ ದೂತನಿಗೆ ಎಲ್ಲಿ ವ್ಯವಸ್ಥೆ ಮಾಡುವುದು! ಮಗಧದ ದೂತನನ್ನು ಗೌರವಭಾವದಿಂದ ನೋಡಿಕೊಳ್ಳಬೇಕು.

ನಗರದ ಪಾಂಥಶಾಲೆ (ಪ್ರಯಾಣಿಕ ವಸತಿಗೃಹ)ಯಲ್ಲಿ ವ್ಯವಸ್ಥೆ ಮಾಡೋಣವೆಂದರೆ ಅದು ಉಚಿತವೆನಿಸಲಾರದು… ಸ್ಕಂದಗುಪ್ತನ ಪತ್ರದಲ್ಲಿ ಏನಿದೆಯೋ ಇನ್ನೂ ನೋಡಲಾಗಲಿಲ್ಲ. ಇಷ್ಟು ದಿನಗಳ ನಂತರ ಮಗಧವು ವಿಟಂಕ ರಾಜ್ಯದ ಮೇಲೆ ಏಕೆ ಚಕ್ರಾಧಿಪತ್ಯದ ಅಧಿಕಾರ ಚಲಾಯಿಸುತ್ತಿದೆ ಯಲ್ಲಾ!… ಅದಿರಲಿ. ಅದರ ಬಗೆಗೆ ಆಮೇಲೆ ಯೋಚಿಸೋಣ. ಈಗ ದೂತನಿಗೆ ಇರಲು ಎಲ್ಲಿ ವ್ಯವಸ್ಥೆ ಕಲ್ಪಿಸುವುದು?… ಈ ದೂತನ ವಿಚಾರದಲ್ಲಿ ಏಕೋ ನಂಬಿಕೆ ಬರುತ್ತಿಲ್ಲ. ಏನೋ ದೋಷವಿರುವಂತಿದೆ. ದೂತನು ಇಲ್ಲಿಂದ ಹೊರಡಲು
ಏಕೆ ಆತುರಪಡುತ್ತಿದ್ದಾನೆ? ಇವನು ನಮ್ಮ ಕಣ್ಣಿನ ಎದುರಿಗೇ ಇರುವಂತೆ ನೋಡಿಕೊಳ್ಳಬೇಕು.

ಕಣ್ಣುಗಳನ್ನು ಅರ್ಧಮುಚ್ಚಿಕೊಂಡು ಚತುರಭಟ್ಟನು ಚಿಂತಿಸಿದನು. ಅನಂತರ ತಗ್ಗಿದ ದನಿಯಲ್ಲಿ ಕಂಚುಕಿಯ ಜೊತೆ ಒಂದು ಗಳಿಗೆ ಮಾತನಾಡಿದನು. ಈಗ ಸ್ವಲ್ಪ ಸಮಾಧಾನವಾಯಿತು. ಚತುರಾನನ ಭಟ್ಟನು ‘ಮಗಧದ ರಾಜದೂತನಿಗೆ ಯಥೋಚಿತ ಗೌರವದೊಂದಿಗೆ ಒಂದು ಸ್ಥಳವನ್ನು ಗೊತ್ತು ಮಾಡಬೇಕು. ಅರಮನೆಯ ಮಧ್ಯದಲ್ಲಿಯೇ ಅವರು ಇರುವರು. ಮಹಾರಾಜರ ಆಪ್ತ ಸಚಿವರಾದ ಹರ್ಷಮಹಾಶಯರು ಮಹಾರಾಜರ ಜೊತೆಯಲ್ಲಿ ಚಷ್ಟನ ದುರ್ಗಕ್ಕೆ ಹೋಗಿದ್ದಾರೆ. ಅವರು ವಾಸಿಸುತ್ತಿದ್ದ ಭವನ ಖಾಲಿ ಇದೆ. ದೂತ ಮಹಾಶಯರು ಅಲ್ಲಿಯೇ ಇರುವಂತೆ ವ್ಯವಸ್ಥೆ ಮಾಡಿಕೊಡುವುದು’ ಎಂದು ಕಂಚುಕಿಗೆ ಹೇಳಿದರು.

ಈ ವ್ಯವಸ್ಥೆಯಿಂದ ಎಲ್ಲರೂ ಸಂತುಷ್ಟರಾದರು. ಅರಮನೆಯಲ್ಲಿಯೇ ಜಾಗಮಾಡಿಕೊಟ್ಟು ಮಗಧದ ದೂತನಿಗೆ ಗೌರವ ತೋರಿಸಿದ ಹಾಗಾಯಿತು. ಹಾಗೆಯೇ ಆಪ್ತ ಸಚಿವನ ಭವನ ಬಿಟ್ಟುಕೊಟ್ಟು ಅಧಿಕ ಗೌರವ ತೋರಿಸಿದಂತೆಯೂ ಆಗಲಿಲ್ಲ. ಚತುರಭಟ್ಟನ ಚಿಂತೆ ದೂರವಾಯಿತು. ದೂತ ಅರಮನೆಯ ಪ್ರಕಾರದೊಳಗೇ ಇರುವುದರಿಂದ, ಅವನು ಏನು ಮಾಡಿದರೂ ಪಲಾಯನ ಮಾಡಲು ಸಾಧ್ಯವಾಗುವುದಿಲ್ಲ.

ಕಂಚುಕಿಯ ಕಡೆ ತಿರುಗಿ ಮಹಾ ಸಚಿವನು ‘ಲಕ್ಷ್ಮಣ, ದೂತ ಶ್ರೇಷ್ಠರ ಸೇವೆಯ ಭಾರ ನಿನ್ನ ಮೇಲೆ ಹೊರಿಸುತ್ತಿದ್ದೇನೆ. ಇನ್ನು ಅವರನ್ನು ವಿಶ್ರಾಂತಿ ಗೃಹಕ್ಕೆ ಕರೆದುಕೊಂಡು ಹೋಗು’ ಎಂದು ಅಪ್ಪಣೆ ಮಾಡಿ, ಅರ್ಥಪೂರ್ಣ ದೃಷ್ಟಿಯಿಂದ ಅವನ ಕಡೆ ನೋಡಿದನು.

ಲಕ್ಷ್ಮಣ ಕಂಚುಕಿಯು ಚತುರ ಭಟ್ಟನ ಮನೋಗತ ಅಭಿಪ್ರಾಯವನ್ನು ಗ್ರಹಿಸಿದನು. ಅವನು ಚಿತ್ರಕನ ಹತ್ತಿರ ಹೋಗಿ ಗೌರವ ಪೂರ್ವಕವಾಗಿ ಆತನನ್ನು ವಿಶ್ರಾಂತಿ ಗೃಹಕ್ಕೆ ಕರೆದೊಯ್ದುನು.

ಚಿತ್ರಕನು ರಾಜಕುಮಾರಿಗೆ ಕೈ ಜೋಡಿಸಿ ನಮಸ್ಕರಿಸಿ ಕಂಚುಕಿಯನ್ನು ಹಿಂಬಾಲಿಸುವಷ್ಟರಲ್ಲಿ, ಏನೋ ನೆನಪಾಗಿ, ಸ್ವಲ್ಪ ಹಿಂದಿರುಗಿ ಬಂದು,‘ದೇವದುಹಿತೆಯವರಲ್ಲಿ ಒಂದು ವಿಷಯ ತಿಳಿಸಬೇಕಾಗಿದೆ. ನಾನು ಹಿಂದಿನ ದಿನ ರಾತ್ರಿ ಅಂಧಕೂಪದಲ್ಲಿ ಬಂದಿಯಾಗಿದ್ದಾಗ, ಅಲ್ಲಿ ಒಬ್ಬ ಮಹಿಳೆ ಬಂದಿಯಾಗಿರುವುದು ಕಂಡು ಬಂತು’ ಎಂದು ಹೇಳಿದನು.

ರಟ್ಟಾ ಕಣ್ಣುಗಳನ್ನು ಅರಳಿಸಿ ನೋಡುತ್ತ ‘ಏನು ಮಹಿಳೆಯೇ?’ ಎಂದು ಆಶ್ಚರ್ಯ ವ್ಯಕ್ತಪಡಿಸಿದಳು.

‘ಹೌದು. ಆ ಬಂದಿಯ ಹೆಸರು ಪೃಥಾ’.

ಸುಗೋಪಾ ರಟ್ಟಾಳ ಕಾಲಿನ ಹತ್ತಿರ ಕುಳಿತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಳು. ಆಕೆ ಇದನ್ನು ಕೇಳಿ ಬೆಚ್ಚಿಬಿದ್ದು, ‘ಪೃಥಾ!?’ ಎಂದು ಕೂಗಿಕೊಂಡಳು.

ಚಿತ್ರಕನು ‘ಹತಭಾಗ್ಯೆ, ಇಪ್ಪತ್ತೈದು ವರ್ಷಗಳಿಂದ ಆ ಕತ್ತಲೆಕೋಣೆಯಲ್ಲಿ ಸೆರೆಯಾಗಿದ್ದಾಳೆ. ಹೂಣರ ದಾಳಿ ನಡೆದಾಗ ಪೃಥೆಯು ಹಿಂದಿನ ರಾಜಕುಮಾರನ ದಾದಿಯಾಗಿದ್ದಳಂತೆ- ಒಬ್ಬ ಹೂಣ ಸೈನಿಕ ಅವಳನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಸೆರೆಯಲ್ಲಿಟ್ಟನಂತೆ-’

ಹೆದೆಯು ಕಿತ್ತ ಬಿಲ್ಲಿನ ಹಾಗೆ ಮೇಲೆ ನೆಗೆದು ಸುಗೋಪ ಕಿಟ್ಟನೆ ಕೀರಿ ‘ನಮ್ಮ ತಾಯಿ! ನಮ್ಮ ತಾಯಿ!’ ಎಂದು ಅಳುತ್ತ ನೆಲದ ಮೇಲೆ ಕುಸಿದುಬಿದ್ದಳು.

ಮುಂದುವರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *