ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 24

ಪರಿಚ್ಚೇದ – 8
–ಅರಮನೆಯಲ್ಲಿ–

ಅರಮನೆಯ ಪ್ರಾಕಾರದ ನಡುವೆ ಅನೇಕ ಪ್ರಾಸಾದಗಳಿವೆ. ಅವುಗಳಲ್ಲಿ ಸಭಾ ಗೃಹ, ಕೋಶಾಗಾರ, ಮಂತ್ರಣಾಭವನ ಮುಖ್ಯವಾದವುಗಳು. ರಾಜಕುಮಾರಿ ವಾಸವಾಗಿರುವ ಭವನವೇ ಅಂತಃಪುರ. ಅದರ ಪಕ್ಕದಲ್ಲಿಯೇ ರಾಜರಿಗಾಗಿರವ ಬೇರೊಂದು ಭವನ. ಈ ಎರಡೂ ಪ್ರಾಸಾದಗಳ ನಡುವೆ ವಿಶಾಲವಾದ ಅಂಗಳ. ಈ ಎರಡೂ ಪ್ರಾಸಾದಗಳು ಮೂರು ಅಂತಸ್ತುಗಳ ಕಟ್ಟಡಗಳು.

ರಾಜ ಪ್ರಾಸಾದದ ಕೆಳಗಿನ ಅಂತಸ್ತಿನಲ್ಲಿ ಅನೇಕ ಕೊಠಡಿಗಳಿರುವ ಕಟ್ಟಡದಲ್ಲಿ ಆಪ್ತ ಸಚಿವ ಹರ್ಷನು ವಾಸವಾಗಿದ್ದನು. ರಾಜವೈಭವಕ್ಕೆ ಹೋಲಿಸಿದರೆ ಇದು ಸ್ವಲ್ಪ ಕಡಿಮೆ ದರ್ಜೆಯದಾಗಿದ್ದರೂ ಸಾಧಾರಣ ಮನುಷ್ಯರ ದೃಷ್ಟಿಯಲ್ಲಿ ಭವ್ಯ ಬಂಗಲೆ ಎನ್ನಬಹುದು. ಕಂಚುಕಿ ಲಕ್ಷ್ಮಣನು ಚಿತ್ರಕನನ್ನು ಇದೇ ಕಟ್ಟಡಕ್ಕೆ ಕರೆದುಕೊಂಡು ಬಂದನು.

ರಾಜ ಪ್ರಾಸಾದದ ಕೆಳಗಿನ ಅಂತಸ್ತಿನಲ್ಲಿ ಅನೇಕ ಕೊಠಡಿಗಳಿರುವ ಕಟ್ಟಡದಲ್ಲಿ ಆಪ್ತ ಸಚಿವ ಹರ್ಷನು ವಾಸವಾಗಿದ್ದನು. ರಾಜವೈಭವಕ್ಕೆ ಹೋಲಿಸಿದರೆ ಇದು ಸ್ವಲ್ಪ ಕಡಿಮೆ ದರ್ಜೆಯದಾಗಿದ್ದರೂ, ಸಾಧಾರಣ ಮನುಷ್ಯರ ದೃಷ್ಟಿಯಲ್ಲಿ ಭವ್ಯವಾದ ಬಂಗಲೆ ಎನ್ನಬಹುದು. ಕಂಚುಕಿ ಲಕ್ಷ್ಮಣನು ಚಿತ್ರಕನನ್ನು ಇದೇ ಕಟ್ಟಡಕ್ಕೆ ಕರೆದುಕೊಂಡು ಬಂದನು.

ಚಿತ್ರಕನು ಸಂತೋಷದಿಂದ ಅಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ಕಂಚುಕಿಯ ಇಂಗಿತದ ಮೇರೆಗೆ ಒಬ್ಬ ದೈತ್ಯಾಕಾರದ ಸಂವಾಹಕ (ಮಾಲೀಸು ಮಾಡುವವ) ಬಂದು ಅವನನ್ನು ಹಿಡಿದು ಬಟ್ಟೆ ಬರೆ ಕಳಚಿ ಅಂಗಾಂಗಗಳಿಗೆ ಎಣ್ಣೆ ಹಚಿ ಮಾಲೀಸು ಮಾಡಲು ಪ್ರಾರಂಭಿಸಿದನು. ಇದು ರಾಜಕೀಯ ವ್ಯಕ್ತಿಗಳಿಗೆ ಮಾಡುವ ಗೌರವದ ಉಪಚಾರ.

ಅನಂತರ ಚಿತ್ರಕನು ತಣ್ಣೀರಿನಲ್ಲಿ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿದನು. ಶ್ರೀಗಂಧದ ಲೇಪನ ಮಾಡಿಕೊಂಡು ಊಟಕ್ಕೆ ಕುಳಿತನು. ಬಗೆಬಗೆಯ ಭಕ್ಷ್ಯ ಭೋಜ್ಯಗಳ ವ್ಯವಸ್ಥೆ. ಅದರ ಮೇಲೆ ಕಂಚುಕಿಯ ಸವಿನಯ ಉಪಚಾರ. ಅವನು ಕಂಠಪೂರ್ತಿಯಾಗಿ ಭೋಜನ ಮಾಡಿದನು.

ಭೋಜನಾನಂತರ ಶರತ್ಕಾಲದ ಮೋಡದಂತೆ ಶುಭ್ರವಾದ ಹಾಸಿಗೆಯ ಮೇಲೆ ಶಯನ, ಇಬ್ಬರು ನಾಪಿತರು ಬಂದು ಅವನ ಕೈಕಾಲುಗಳನ್ನು ಮೃದುವಾಗಿ ಒತ್ತಲು ಪ್ರಾರಂಭಿಸಿದರು. ಚಿತ್ರಕನು ಆರಾಮವಾಗಿ ಕೈಕಾಲುಗಳನ್ನು ಚಾಚಿ ಸುಖಭೋಗವನ್ನು ಅನುಭವಿಸುತ್ತ, ಪುರುಷಭಾಗ್ಯದ ವಿಚಿತ್ರ ಭುಜಂಗ ಗತಿಯನ್ನು ಚಿಂತಿಸುತ್ತ ನಿದ್ದೆ ಹೋದನು.

ಅತ್ತ ಸಚಿವ ಚತುರಾನನ ಭಟ್ಟನು ಮಗಧದ ಪತ್ರವನ್ನು ಓದಲು ಪ್ರಾರಂಭಿಸಿದನು. ಅವನ ಅನುಮಾನ ಸುಳ್ಳಾಗಲಿಲ್ಲ. ರಾಷ್ಟ್ರನೀತಿಯ ಶಿಷ್ಟಾಚಾರವನ್ನು ಉಲ್ಲಂಘಿಸದೆ, ಸಾಧ್ಯವಾದಷ್ಟು ಮಟ್ಟಿಗೆ ಸಂಪ್ರದಾಯವನ್ನು ಅನುಸರಿಸಿ ಬರೆದ ಪತ್ರದಲ್ಲಿ ವಿಟಂಕರಾಜ್ಯಕ್ಕೆ ನಿರ್ದೇಶನ ನೀಡಲಾಗಿತ್ತು. ‘ವಿಟಂಕ ರಾಜನು ಈ ಕೂಡಲೆ ಮಗಧದ ಸಾರ್ವಭೌಮತ್ವವನ್ನು ಸ್ವೀಕರಿಸಿ,
ಬಾಕಿ ಇರುವ ರಾಜಸ್ವವನ್ನು ತಂದೊಪ್ಪಿಸಬೇಕು. ಇಲ್ಲದಿದ್ದರೆ ಹೂಣ- ಹರಿಣ ಕೇಸರಿ ಸಮ್ರಾಟ್ ಸ್ಕಂದಗುಪ್ತರು ಸ್ವತಃ ಸೈನ್ಯ ಸಮೇತ ಗಾಂಧಾರದ ಕಡೆಗೆ ಪ್ರಯಾಣ ಬೆಳೆಸಬೇಕಾಗುತ್ತದೆ.’ ಇತ್ಯಾದಿ.

ಚತುರಾನನ ಭಟ್ಟನು ಪತ್ರವನ್ನು ಓದಿ, ಗಂಭೀರವಾಗಿ ಚಿಂತಿಸಿ, ಇತರೆ ಸಚಿವರುಗಳನ್ನು ಕರೆಯಿಸಿಕೊಂಡು ಮಂತ್ರಾಲೋಚನೆಗೆ ಕುಳಿತನು. ಗಿಡಗ ಪಕ್ಷಿಯ ಜತೆ ಗುಬ್ಬಚ್ಚಿಯು ಹೋರಾಟಕ್ಕಿಳಿಯುವುದು ತರವಲ್ಲ. ಇದರಿಂದ ಗುಬ್ಬಚ್ಚಿಗೇ ತೊಂದರೆ. ಆದರೆ ರಾಜನೀತಿಯ ವಿಚಾರದಲ್ಲಿ ಬಾಹುಬಲವೇ ಸರ್ವಸ್ವವಲ್ಲ; ಕೂಟ ನೀತಿಯೆಂಬುದೊಂದಿದೆ. ಸ್ಕಂದಗುಪ್ತನು ಹೊಸದಾಗಿ ಹೂಣರ ದಾಳಿಯನ್ನು ತಡೆಯುವ ಸಲುವಾಗಿ ಗಾಂಧಾರಕ್ಕೆ ಬರುವವನಿದ್ದಾನೆ.
ಭೀಕರ ಹೋರಾಟ ನಡೆದೇ ನಡೆಯುವುದು. ದೀರ್ಘಕಾಲದವರೆಗೂ ಯುದ್ಧ ಮುಂದುವರಿಯುತ್ತದೆ. ಕೊನೆಗೆ ಫಲಾಫಲ ಏನಾಗುತ್ತದೆ ಎಂಬುದು ಹೇಳಲು ಬರುವುದಿಲ್ಲ. ಆದ್ದರಿಂದ, ಈ ಕೂಡಲೆ ಮಗಧದ ಪ್ರಭುತ್ವವನ್ನು ಒಪ್ಪಿಕೊಳ್ಳದೆ ಏನಾದರೂ ಸಬೂಬು ಹೇಳಿ ಕಾಲಹರಣ ಮಾಡಿದರೆ ಕೊನೆಗೆ ನಮಗೆ ಒಳ್ಳೆಯದಾಗಬಹುದು. ಒಂದು ಕಡೆ ಹೂಣರು, ಮತ್ತೊಂದು ಕಡೆ ಸ್ಕಂದಗುಪ್ತ;ಹೀಗಿರುವಾಗ ಸಾಧ್ಯವಾದ ಮಟ್ಟಿಗೆ ತಟಸ್ಥ ನೀತಿಯೇ ಸರಿಯಾದ ಉಪಾಯ.

ಸಚಿವ ಪರಿಷತ್ತು ಈ ಕೆಳಗಿನ ನಿರ್ಣಯಗಳನ್ನು ಸರ್ವಾನುಮತದಿಂದ ಅನುಮೋದಿಸಿತು- ಪತ್ರಕ್ಕೆ ಉತ್ತರ ಕೊಡಲು ಆದಷ್ಟೂ ತಡಮಾಡಬೇಕು. ಮಹಾರಾಜರು ಕಪೋತಕೂಟಕ್ಕೆ ಬರುವವರೆಗೂ ಪತ್ರಕ್ಕೆ ಉತ್ತರ ಕೊಡಲು ಸಾಧ್ಯವಾಗುವುದಿಲ್ಲವೆಂದು ರಾಜದೂತನಿಗೆ ತಿಳಿಸುವುದು. ಈ ನಡುವೆ ರಟ್ಟ ಮಹಾರಾಜರಿಗೆ ಎಲ್ಲ ವಿಷಯಗಳನ್ನು ತಿಳಿಸುತ್ತ ಸುದ್ದಿಮುಟ್ಟಿಸುವುದು ಅವಶ್ಯಕ. ಅವರು ಈಗ ಚಷ್ಟನ ದುರ್ಗದಲ್ಲಿಯೇ ಇರಲಿ. ರಾಜಧಾನಿಗೆ ಹಿಂದಿರುಗುವ ಪ್ರಮೇಯವಿಲ್ಲ. ಆತುರವಿಲ್ಲ. ಆದರೆ ಇಷ್ಟು ಗುರುತರವಾದ ವಿಷಯವನ್ನು
ಅವರ ಗಮನಕ್ಕೆ ತರುವುದು ಪ್ರಪ್ರಥಮ ಕರ್ತವ್ಯ.

ಹೀಗೆ ತೀರ್ಮಾನಕ್ಕೆ ಬಂದು ತ್ವರಿತ ಗತಿಯಲ್ಲಿ ಹೋಗುವ ಅಶ್ವಾರೋಹಿ ಸಂದೇಶ ವಾಹಕನನ್ನು ಚಷ್ಟನ ದುರ್ಗಕ್ಕೆ ಕಳುಹಿಸಿಕೊಡಲಾಯಿತು.

ಮಂತ್ರಣಾ ಗೃಹದಲ್ಲಿ ಇಷ್ಟೆಲ್ಲಾ ರಾಜಕಾರ್ಯಗಳು ನಡೆಯುತ್ತಿದ್ದಾಗ ಕುಮಾರಿ ರಟ್ಟಾ ತನ್ನ ಭವನದಲ್ಲಿಯೇ ಇದ್ದಳು. ಈ ದಿನ ನಾನಾ ಕಾರಣಗಳಿಂದ ಅವಳ ಮನಸ್ಸು ಅಲ್ಲೋಲ ಕಲ್ಲೋಲವಾಗಿತ್ತು. ಮೊಟ್ಟ ಮೊದಲು ಕನಸು ಕಾಣುತ್ತ ಎಚ್ಚರಗೊಂಡದ್ದು… ಕಳ್ಳನ ಜೀವನದಲ್ಲಿ ನಡೆದ ಅದ್ಭುತ ಪರಿಸಮಾಪ್ತಿ… ಮಗಧದ ದೂತ… ಮಗಧ… ವಿಶ್ವ ಪ್ರಸಿದ್ಧ ಪಾಟಲಿ ಪುತ್ರನಗರ… ದಿಗ್ವಿಜಯೀ ವೀರ ಸ್ಕಂದಗುಪ್ತ… ದೂತ ತನ್ನ ಹೆಸರು ಏನೆಂದು ಹೇಳಿದ? ಚಿತ್ರಕವರ್ಮಾ ! ಚಿತ್ರಕ… ಚಿರತೆ… ಚಿರತೆಗೂ ಅವನಿಗೂ ಏನೋ ಸಾದೃಶ್ಯ…
ಕಣ್ಣಿನ ದೃಷ್ಟಿ… ನಿರ್ಭೀಕ ಸ್ವಭಾವ…

ಕಟ್ಟ ಕಡೆಗೆ ಸುಗೋಪಾಳ ತಾಯಿಯ ಉದ್ಧಾರ ! …. ಸುಗೋಪಾಳ ತಾಯಿ ಪ್ರಾಕ್ತನ (ಹಿಂದಿನ) ರಾಜಪುತ್ರನ ದಾದಿಯಾಗಿದ್ದಳು. ಇದೆಲ್ಲ ಕುಮಾರಿ ರಟ್ಟಾ ತಿಳಿದಿದ್ದಳು. ಪಾಪ ಆಕೆಗೆ ಇಷ್ಟೆಲ್ಲಾ ದುರ್ಗತಿ ಬಂದಿತ್ತು! ಯಾರಿಗೂ ತಿಳಿಯದೆ ಆಕೆ ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಸೆರೆಯಲ್ಲಿ ಇದ್ದಳಲ್ಲ! ಅವಳು ಹೇಗೆ ಬದುಕಿದ್ದಳು! ಯಾರು ಅವಳಿಗೆ ಊಟ ಕೊಡುತ್ತಿದ್ದರು? ಪೃಥೆಯ ದುರದೃಷ್ಟದ ಕತೆಯನ್ನು ನೆನೆದು ರಟ್ಟಾ ದೀರ್ಘವಾಗಿ ನಿಟ್ಟುಸಿರುಬಿಟ್ಟಳು. ‘ಓಹ್! ಇಪ್ಪತ್ತೈದು ವರ್ಷಗಳ ಹಿಂದೆ ಹೂಣರು ಏನೇನು ಅತ್ಯಾಚಾರ ಮಾಡಲಿಲ್ಲ! ರಟ್ಟಾ ಹೂಣನ ಮಗಳೇ ಹೌದು, ಆದರೂ… ಸುಗೋಪಾ ತನ್ನ ತಾಯಿಯನ್ನು ಕತ್ತಲೆಯ ಕೂಪದಿಂದ ಹೊರ ತಂದು ಅಳುತ್ತ ಅಳುತ್ತ ಮನೆಗೆ ಕರೆದೊಯ್ದಳು. ಸುಗೋಪಾ ಬಹಳವಾಗಿ ಅತ್ತಿದ್ದನ್ನು ಜ್ಞಾಪಿಸಿಕೊಂಡ ರಟ್ಟಾಳ ಕಣ್ಣುಗಳು ಅಶ್ರುಪೂರಿತವಾದವು. ಸುಗೋಪಾಳ ಮನೆಗೆ ಹೋಗಿ ಅವಳನ್ನು ನೋಡಿಕೊಂಡು ಬರಬೇಕೆಂಬ ಮನಸ್ಸಾಯಿತು. ಸುಗೋಪಾಳ ಮನೆಗೆ ಎಷ್ಟೋ ಸಲ ಹೋಗಿ ಬಂದಿದ್ದಳು. ಬೇಕೆಂದಾಗ ಹೋಗಿ ಬರುತ್ತಿದ್ದಳು. ಆದರೆ ಈ ದಿನ ಏಕೋ ಅವಳ ಮನಸ್ಸು ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿತ್ತು. ನೆಚ್ಚಿನ ಗೆಳತಿ ಸುಗೋಪಾ ಮೃತಪ್ರಾಯಳಾದ ತನ್ನ ತಾಯಿಯನ್ನು ಪಡೆದು ಉದ್ವೇಗದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿರುತ್ತಾಳೆ. ಇಂಥ ಸ್ಥಿತಿಯಲ್ಲಿ ರಟ್ಟಾ ಆಕೆಯ ಬಳಿಗೆ ಹೋದರೆ ಆಕೆಗೆ ಮತ್ತಷ್ಟು ನೋವಾಗುವ, ಇನ್ನೂ ಹೆಚ್ಚು ಉದ್ವೇಗಕ್ಕೆ ಒಳಗಾಗುವ ಅಪಾಯವಿದೆ.

ಮಧ್ಯಾಹ್ನದ ನಂತರ ರಟ್ಟಾ ಜ್ಯೋತಿಷ್ಕರನ್ನು ಕರೆ ತರುವಂತೆ ಹೇಳಿ ಕಳುಹಿಸಿದಳು. ಅವರು ಬಂದ ಮೇಲೆ, ಸ್ವಪ್ನ ವಿಚಾರವನ್ನು ಕೇಳಿ ಲೆಕ್ಕಾಚಾರ ಹಾಕಿದರು. ಗುಣಿಸಿ ಭಾಗಿಸಿ ದಿಕ್ ನಿರ್ಣಯ ಮಾಡಿಕೊಂಡು, ಲಗ್ನವನ್ನು ನಿಶ್ಚಯಿಸಿ ಫಲಿತಾಂಶವನ್ನು ತಿಳಿಸಿದರು. ಅವರು ‘ಕಲ್ಯಾಣಿ, ನಿನ್ನ ಜೀವನದಲ್ಲಿ ಒಂದು ಪರ್ವಕಾಲ ಬಂದಿದೆ. ಶಂಕೆ ಬೇಡ. ಒಬ್ಬ ದಿಗ್ಗಜ ಸದೃಶ ಮಹಾ ತೇಜಸ್ವಿ ಪುರುಷನೊಂದಿಗೆ ನಿನಗೆ ಪರಿಚಯವಾಗುತ್ತದೆ. ಆ ಪುರುಷಸಿಂಹನು
ನಿನ್ನ ಬಗೆಗೆ, ಪ್ರಸನ್ನನಾಗುತ್ತಾನೆ. ನಿನ್ನ ವಿವಾಹದ ಕಾಲವೂ ಸನ್ನಿಹಿತವಾಗಿದೆ. ಶುಭಮಸ್ತು’ ಎಂದು ಕೈಯೆತ್ತಿ ಆಶೀರ್ವದಿಸಿದರು. ಆಚಾರ್ಯರ ಹಾವಭಾವಗಳನ್ನು ನೋಡಿದರೆ ‘ಅವರು ಮನಸ್ಸು ಬಿಚ್ಚಿ ಬಹಿರಂಗವಾಗಿ ಎಲ್ಲವನ್ನೂ ಹೇಳುತ್ತಿಲ್ಲ. ಇನ್ನೂ ಏನನ್ನೋ ಮುಚ್ಚಿಡುತ್ತಿದ್ದಾರೆ’ ಎಂಬ ಭಾವನೆ ರಟ್ಟಾಳಲ್ಲಿ ಮೂಡಿತು.

ಜ್ಯೋತಿಷ್ಕರು ಹೊರಟು ಹೋದ ಮೇಲೆ ರಟ್ಟಾ ಬಹಳ ಹೊತ್ತಿನವರೆಗೂ ಕೆನ್ನೆಯ ಮೇಲೆ ಕೈಗಳನ್ನಿಟ್ಟುಕೊಂಡು ಯೋಚಿಸಿದಳು. ಕೊನೆಗೆ ನಿಟ್ಟುಸಿರು ಬಿಟ್ಟು ‘ನಿಯತಿಯ ವಿಧಾನ ಅಖಂಡನೀಯವಾಗಿರುವಾಗ ಚಿಂತಿಸಿ ಫಲವೇನು?’ ಎಂದು ಕೊಂಡಳು.

ಸಂಜೆಯಾಗುತ್ತ ಬಂತು.

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *