ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 25

ಹಿಂದಿನ ಸಂಚಿಕೆಯಿಂದ…

ಅತ್ತ ಚಿತ್ರಕ ಬಹಳ ಹೊತ್ತು ಹಗಲು ನಿದ್ದೆ ಮಾಡಿ ಎಚ್ಚರಗೊಂಡನು. ಶರೀರದಲ್ಲಿ ಲವಲವಿಕೆ ಕಾಣುತ್ತಿತ್ತು. ಹಿಂದಿನ ಅನೇಕ ದಿನಗಳ ನಾನಾ ಕ್ಲೇಶಗಳಿಂದುಟಾದ ಗ್ಲಾನಿ ಇನ್ನಿಲ್ಲವಾಗಿತ್ತು. ಅವನ ಮನಸ್ಸೂ ಕೂಡ ಶರೀರದಂತೆ ಪ್ರಫುಲ್ಲವಾಗಬೇಕಾಗಿತ್ತು. ಆದರೆ ಅವನ ಮನಸ್ಸು ಪ್ರಫುಲ್ಲವಾಗುವುದಕ್ಕೆ ಬದಲಾಗಿ ಉದ್ವಿಗ್ನವಾಗುತ್ತಿರುವಂತೆ ಅವನಿಗೆ ಭಾಸವಾಯಿತು.

ಅರಮನೆಯ ಗೌರವಾದರಗಳಿಗೆ, ರಾಜೋಪಚಾರಗಳಿಗೆ ಅವನು ಅಭ್ಯಸ್ಥನಾಗಿರಲಿಲ್ಲ. ಆದರೂ ಕಂಚುಕಿ ಲಕ್ಷ್ಮಣನು ಸ್ವಲ್ಪ ಹೆಚ್ಚಾಗಿಯೇ ಅವನನ್ನು ಉಪಚರಿಸುತ್ತಿದ್ದನು. ಅವನು ಪ್ರತಿ ಗಳಿಗೆಗೊಮ್ಮೆಯಾದರೂ ಬಂದು ಅವನ ಯೋಗ ಕ್ಷೇಮದ ಬಗ್ಗೆ ತಿಳಿದುಕೊಳ್ಳುತ್ತಿದ್ದನು. ಇದರ ಮೇಲೆ ಅವನ ಕೆಲವು ಪರಿಚಾರಕರು ಸದಾ ಕಾಲವೂ ಚಿತ್ರಕನ ಸುತ್ತ ಮುತ್ತ ಇರುತ್ತಿದ್ದರು. ಗಾಳಿ ಹಾಕುವವನೊಬ್ಬ, ತಣ್ಣಗಿರುವ ಮಜ್ಜಿಗೆಯನ್ನೋ ಪಾನಕವನ್ನೋ ಹಣ್ಣಿನ ರಸವನ್ನೋ ತಂದು ಕೊಡುವವನೊಬ್ಬ, ತಾಂಬೂಲವನ್ನು ಕೊಡುವವನೊಬ್ಬ ಹೀಗೆ ಒಬ್ಬರಲ್ಲ ಒಬ್ಬರು ಸೇವೆಗೆ ಸಿದ್ಧರಾಗಿರುತ್ತಿದ್ದರು. ಕ್ಷಣಕಾಲವೂ ಅವನನ್ನು ಒಬ್ಬಂಟಿಗನನ್ನಾಗಿ ಬಿಡುತ್ತಿರಲಿಲ್ಲ. ಈ ಆಡಂಬರದ ರಾಜೋಪಚಾರದ ಅಂತರಾಳದಲ್ಲಿ ಯಾವುದೋ ಕಣ್ಣಿಗೆ ಕಾಣದ ಬಲೆಯು ಅವನನ್ನು ಸುತ್ತುವರಿದಿದೆ ಎಂದು ಅವನಿಗೆ ಅನುಮಾನ ಬರುತ್ತಿತ್ತು. ಅವನು ಮನಸ್ಸಿನಲ್ಲಿಯೇ ಅಧೈರ್ಯಪಡುತ್ತಿದ್ದನು. ಒತ್ತಾಯಕ್ಕೆ ಕಟ್ಟುಬಿದ್ದು ರಾಜಕುಮಾರಿ ರಟ್ಟಾಳ ನಿಮಂತ್ರಣವನ್ನು ಒಪ್ಪಿಕೊಳ್ಳದಿದ್ದರೆ ಚೆನ್ನಾಗಿತ್ತು ಎಂದು ಅವನಿಗೆ ಆಗಾಗ
ಅನ್ನಿಸುತ್ತಿತ್ತು.

ಸಂಧ್ಯಾಕಾಲಕ್ಕೆ ಸ್ವಲ್ಪ ಮುಂಚೆ ಮನಸ್ಸಿನಲ್ಲಿ ಏನೋ ನಿರ್ಧಾರ ಮಾಡಿಕೊಂಡು ಚಿತ್ರಕ ಮೇಲೆದ್ದನು. ಉತ್ತರೀಯವನ್ನು ಹೆಗಲಮೇಲೆ ಹಾಕಿಕೊಳ್ಳುತ್ತಿದ್ದಂತೆ ಒಬ್ಬ ನೌಕರನು ಹತ್ತಿರ ಬಂದು ಕೈಜೋಡಿಸಿ ನಿಂತು ‘ಆರ್ಯ, ಏನಾಗಬೇಕು ಅಪ್ಪಣೆಯಾಗಬೇಕು’ ಎಂದು ಬಿನ್ನವಿಸಿಕೊಂಡನು.

ಚಿತ್ರಕ- ‘ವಾಯುಸೇವನೆಗೆ ಹೊರಗಡೆ ಸ್ವಲ್ಪ ಅಡ್ಡಾಡಿಕೊಂಡು ಬರಬೇಕೆಂಬ ಇಚ್ಛೆಯಾಗಿದೆ.’

ಸೇವಕನು ಎರಡು ಹೆಜ್ಜೆ ಹಿಂದಕ್ಕೆ ಇಟ್ಟು ಕಣ್ಮರೆಯಾದನು.

ಚಿತ್ರಕನು ರಾಜಭವನದಿಂದ ಹೊರಗೆ ಕಾಲಿಡುತ್ತಲೇ ಎಲ್ಲಿಂದಲೋ ಕಂಚುಕಿಯು ಬಂದು ನಗುಮುಖದಿಂದ ಅವನ ಜೊತೆ ಸೇರಿಕೊಂಡನು. ‘ಸಂಧ್ಯಾಕಾಲದಲ್ಲಿ ವಾಯುಸೇವನೆಯ ಇಚ್ಛೆಯೇ? ಆಗಬಹುದು. ಒಳ್ಳೆಯದು. ಬನ್ನಿರಿ. ತಮಗೆ ಅರಮನೆಯನ್ನು ತೋರಿಸುತ್ತೇನೆ’ ಎಂದು ಹೇಳಿ ಲಕ್ಷ್ಮಣ ಕಂಚುಕಿಯು ಅವನ ಜೊತೆ ಜೊತೆಗೇ ಹೊರಟನು.

ಇಬ್ಬರೂ ಅರಮನೆಯ ಪ್ರಾಕಾರದಲ್ಲಿ ಅಲ್ಲಿ ಇಲ್ಲಿ ಅಡ್ಡಾಡುತ್ತಿದ್ದರು. ‘ಅರಮನೆಯಿಂದ ಹೊರಹೋಗುವ ಪ್ರಯತ್ನ ವ್ಯರ್ಥ. ಅರಮನೆಯ ಪ್ರಾಕಾರದಿಂದ ಹೊರಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದರೆ ಕಂಚುಕಿಯು ಅಡ್ಡಿಪಡಿಸಲಾರ. ಆದರೆ ಅವನೂ ನನ್ನ ಜೊತೆಗೇ’ ಬರುತ್ತಾನೆ. ಆದ್ದರಿಂದ ಹೊರಗೆ ಹೋಗುವ ವಿಷಯವನ್ನು ಎತ್ತದಿರುವುದೇ ಒಳಿತು’ ಎಂಬುದಾಗಿ ಚಿತ್ರಕನು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿದನು.

ವಿಸ್ತೃತ ಪ್ರಾಕಾರದಲ್ಲಿ ಅಲ್ಲಲ್ಲಿ ವೃಕ್ಷ- ವಾಟಿಕೆಗಳು; ಲತಾ ಮಂಟಪಗಳು, ಜನ ಸಂಚಾರ ಕಡಿಮೆ. ಇರುವವರಲ್ಲಿ ಹೆಚ್ಚಾಗಿ ಶಸ್ತ್ರಸಜ್ಜಿತ ಕಾವಲುಗಾರರು, ಇಲ್ಲವೆ ರಕ್ಷಕ ಭಟರು. ನಾಲ್ಕಾರು ಜನ ಉದ್ಯಾನ ಪಾಲಕರು. ಎಲ್ಲರೂ ಅವರವರ ಕಾರ್ಯದಲ್ಲಿ ನಿರತರಾಗಿದ್ದಾರೆ.

‘ಕಂಚುಕಿಯಿಂದ ತಪ್ಪಿಸಿಕೊಂಡರೂ ಬೇರೆ ಯಾರೋ ತನ್ನ ಚಲನವಲನಗಳನ್ನು ಮರೆಯಲ್ಲಿದ್ದು ಗಮನಿಸುತ್ತಿದ್ದಾರೆ’ ಎಂಬ ವಿಷಯ ಅಲ್ಲಿ ಇಲ್ಲಿ ಅಡ್ಡಾಡುತ್ತಿರುವಾಗ ಚಿತ್ರಕನ ಅನುಭವಕ್ಕೆ ಬಂದಿತು. ಅವನು ಚಕಿತನಾಗಿ ಕುತ್ತಿಗೆಯನ್ನು ಹಿಂದಕ್ಕೆ ತಿರುಗಿಸಿ ನೋಡಿದನು. ಆದರೆ ಸಂಜೆಯ ಮಬ್ಬುಗತ್ತಲೆಯಲ್ಲಿ ಸ್ಪಷ್ಟವಾಗಿ ಏನೂ ಕಾಣಿಸಲಿಲ್ಲ.

ಅದಾದ ಸ್ವಲ್ಪ ಹೊತ್ತಿನಲ್ಲಿ ಒಂದು ವೃಕ್ಷವಾಟಿಕೆಯ ಹತ್ತಿರ ಯಾರಿಗೂ ಕಾಣದೆ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ವ್ಯಕ್ತಿಯು ಪ್ರತ್ಯಕ್ಷವಾಗಿ ಎದುರೆದುರೇ ಕಣ್ಣಿಗೆ ಬಿದ್ದನು. ಒಂದು ಮರದ ಹಿಂಭಾಗದಲ್ಲಿ ಭಯಂಕರವಾದ ಎರಡು ಕಣ್ಣುಗಳು ಚಿತ್ರಕನ ಕಡೆಗೇ ನೋಡುತ್ತಿದ್ದವು. ಹಿಂಸಾವಿಕೃತ ಮುಖದಲ್ಲಿ ಜ್ವಲಿಸುತ್ತಿರುವ ಎರಡು ಕಣ್ಣುಗಳು! ಚಕಿತನಾದ ಚಿತ್ರಕನು ‘ಯಾರದು?’ ಎಂದು ಗಟ್ಟಿಯಾಗಿ ಕೂಗಿದನು. ಅಷ್ಟರಲ್ಲಿ ಆ ಮೂರ್ತಿಯು ಕತ್ತಲಲ್ಲಿ ಲೀನವಾಯಿತು.

ಕಂಚುಕಿ- ‘ಅವನೋ? ಅವನು ಗುಹ. ನೀವು ಈ ಜಾಗಕ್ಕೆ ಹೊಸಬರಲ್ಲವೆ! ಅದಕ್ಕೇ ಅವನು ಕುತೂಹಲದಿಂದ ನೋಡುತ್ತಿರಬೇಕು.

ಚಿತ್ರಕನಿಗೆ ಕಳೆದ ರಾತ್ರಿಯ ಕಥೆಯೆಲ್ಲಾ ನೆನಪಿಗೆ ಬಂದಿತು; ಹೌದು ಅವನೇ ಸರಿ. ಆದರೆ ಕಳೆದ ರಾತ್ರಿ ಅವನ ಕಣ್ಣುಗಳಲ್ಲಿ ಇಷ್ಟೊಂದು ತೀವ್ರತೆ ಇರಲಿಲ್ಲ. ಚಿತ್ರಕನು ಪ್ರಶ್ನೆ ಮಾಡಿದ ಮೇಲೆ ಕಂಚುಕಿಯು ಗುಹನ ವೃತ್ತಾಂತವನ್ನು ತಿಳಿಸಿದನು. ಆಗ ಚಿತ್ರಕನು ಕತ್ತಲೆ ಕೋಣೆಯಲ್ಲಿ ಪೃಥಾ ಹೇಳಿದ ಕಥೆಯನ್ನೂ ಕಂಚುಕಿಯು ಹೇಳಿದ ಕಥೆಯನ್ನು ಸೇರಿಸಿಕೊಂಡು ಊಹಿಸಿದನು. ಗುಹನೇ ಪೃಥೆಯನ್ನು ಅಪಹರಿಸಿ ಯಾರಿಗೂ ಕಾಣದ ಕತ್ತಲೆ ಕೋಣೆಯಲ್ಲಿ ಗುಪ್ತವಾಗಿ ಇರಿಸಿದ್ದನು. ಅಪಹರಿಸಿ ಯಾರಿಗೂ ಕಾಣದ ಕತ್ತಲೆ ಕೋಣೆಯಲ್ಲಿ ಗುಪ್ತವಾಗಿ ಇರಿಸಿದ್ದನು. ಯುದ್ಧ ಮುಗಿದ ಮೇಲೆ ಮತ್ತೆ ಬಂದು ಆಕೆಯ ಮೇಲೆ ಅತ್ಯಾಚಾರ ಮಾಡುವ ಆಸೆ ಇಟ್ಟುಕೊಂಡಿದ್ದನು. ಆದರೆ ಅವನ ತಲೆಗೆ ಏಟು ಬಿದ್ದು ಸ್ಮರಣ ಶಕ್ತಿ ಕಳೆದುಕೊಂಡನು. ಆದರೂ ಸಂಪೂರ್ಣವಾಗಿ ಅವನು ಆಕೆಯನ್ನು ಮರೆಯಲಿಲ್ಲ. ಅರ್ಧಂಬರ್ಧ ನೆನಪಿನಿಂದಲೇ ಅವನು ಗುಟ್ಟಾಗಿ ಪೃಥೆಗೆ ಊಟ ತಿಂಡಿಗಳನ್ನು ಕೊಟ್ಟು ಬರುತ್ತಿದ್ದನು. ಇಪ್ಪತೈದು ವರ್ಷಗಳಿಂದಲೂ ಅವನು ಈ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದನು. ಆಹಾ! ಮೆದುಳಿನ ಕ್ರಿಯೆ ಎಂಥದು! ಹುಟ್ಟಿನಿಂದ ಬಂದ ಸಂಸ್ಕಾರವೆಂಥದ್ದು!

ಸಂಜೆಯ ಬೆಳಕು ಬರುಬರುತ್ತ ಮಾಯವಾಯಿತು. ಎಲ್ಲೆಲ್ಲಿಯೂ ಬೆಳುದಿಂಗಳು ಪಸರಿಸಿತು. ಅರಮನೆಯ ಪ್ರತಿಯೊಂದು ಭವನದೊಳಗೂ ದೀಪಮಾಲೆ ಬೆಳಗಿತು.

ಪ್ರದೋಷದ ಈ ಪರ್ವಕಾಲದಲ್ಲಿ ಸುತ್ತಲೂ ನೋಡಿದ ಚಿತ್ರಕನ ಮನಸ್ಸಿನಲ್ಲಿ ‘ಈ ಬಂಧುಗಳಿಲ್ಲದ ಅರಮನೆಯಲ್ಲಿ ನಾನೊಬ್ಬ ಏಕಾಂಗಿ ಹಾಗೂ ಅಸಹಾಯಕ. ನಿನ್ನೆ ಕತ್ತಲೆಯ ಕೂಪದಲ್ಲಿದ್ದಾಗಿನ ನನ್ನ ಸ್ಥಿತಿಗೂ, ದೀಪಮಾಲೆಗಳಿಂದ ಬೆಳಗುತ್ತಿರುವ ಅರಮನೆಯ ಪ್ರಾಂಗಣದಲ್ಲಿರುವ ನನ್ನ ಇಂದಿನ ಸ್ಥಿತಿಗೂ ಏನೂ ವ್ಯತ್ಯಾಸವಿಲ್ಲ’ ಎಂಬ ಭಾವನೆ ಉಂಟಾಯಿತು.

ಕೂಡಲೇ ಅವನ ಮನಸ್ಸು ಒಂದು ರೀತಿಯ ಸಹಿಸಲಾಗದ ಅಧೀರತೆಯಿಂದ ಚಡಪಡಿಸಿತು. ಅವನು ನೀರಿನಿಂದ ಹೊರ ತೆಗೆದ ಮೀನಿನಂತಾಗಿದ್ದನು. ಆದರೆ ಈ ಎಲ್ಲ ಭಾವನೆಗಳನ್ನೂ ಮನಸ್ಸಿನಲ್ಲಿಯೇ ಅದುಮಿಟ್ಟುಕೊಂಡು ಕಂಚುಕಿಯು ಜೊತೆಯಲ್ಲಿ ತನ್ನ ನಿವಾಸ ಸ್ಥಾನಕ್ಕೆ ಹಿಂದಿರುಗಿದನು.

ಮುಂದುವರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *