ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 26

ಹಿಂದಿನ ಸಂಚಿಕೆಯಿಂದ…

ನಡುರಾತ್ರಿಯ ನಂತರ ಅರಮನೆಯ ದೀಪಗಳು ಆರಿಹೋಗಿದ್ದವು. ಶುಕ್ಲ ಚತುರ್ದಶಿಯ ಚಂದ್ರನು ಪಶ್ಚಿಮ ದಿಕ್ಕಿನ ಕಡೆಗೆ ಸಾಗುತ್ತಿದ್ದನು. ನಡುನಡುವೆ ಸಣ್ಣ ಪುಟ್ಟ ಮೋಡಗಳು ಚಂದ್ರನನ್ನು ಮರೆ ಮಾಡುತ್ತಿದ್ದವು.

ರಾಜಭವನ ಸುಪ್ತಾವಸ್ಥೆಯಲ್ಲಿತ್ತು. ಎಲ್ಲೆಲ್ಲೂ ನೀರವತೆ. ತನ್ನ ಶಯನಕಕ್ಷೆಯಲ್ಲಿ ಕಾಲುಚಾಚಿ ಮಲಗಿದ್ದ ಚಿತ್ರಕನು ನಿಧಾನವಾಗಿ ಎದ್ದು ಕುಳಿತನು. ಅವನು ನಿದ್ರಿಸಿರಲಿಲ್ಲ. ಕಣ್ಣುಮುಚ್ಚಿಕೊಂಡು ಸುಮ್ಮನೆ ಮಲಗಿದ್ದನು.

ಮನೆಯ ಒಂದು ಮೂಲೆಯಲ್ಲಿ ಇಟ್ಟಿದ್ದ ಬತ್ತಿಯ ದೀಪವು ಅಸ್ಪಷ್ಟವಾದ ಬೆಳಕು ಚೆಲ್ಲುತ್ತಿತ್ತು. ತೆರೆದ ವಾತಾಯನದ ಮೂಲಕ ತಂಗಾಳಿಯ ಜೊತೆಗೆ ಬೆಳುದಿಂಗಳ ಬೆಳಕು ಕೊಠಡಿಯ ಒಳಕ್ಕೂ ಪ್ರವೇಶಿಸಿತ್ತು. ಚಿತ್ರಕನು ಸದ್ದಿಲ್ಲದೆ ಮಂಚದಿಂದ ಇಳಿದು ವಾತಾಯನ (ಕಿಟಕಿ) ದ ಬಳಿಗೆ ಹೋಗಿ ನಿಂತುಕೊಂಡನು. ಜನ ಸಂಚಾರವಿಲ್ಲ. ಬೆಳುದಿಂಗಳ ಬೆಳಕಿನಲ್ಲಿ ಅರಮನೆಯು ನಿಶ್ಚಲವಾಗಿ ನಿಂತಿತ್ತು.

ಮೋಡವು ಚಂದ್ರ ಬಿಂಬವನ್ನು ಮುಚ್ಚಿತು. ಮಬ್ಬಾದ ಬೆಳಕು ಸುತ್ತಲೂ ಹರಡಿತು. ಚಿತ್ರಕನು ಕಿಟಕಿಯ ಕಡೆಯಿಂದ ಬಾಗಿಲ ಬಳಿಗೆ ಬಂದು ಹೊರಗೆ ಇಣುಕಿ ನೋಡಿದನು. ಬಾಗಿಲ ಹೊರಗೆ ಒಬ್ಬ ಸೇವಕನು ಕುಳಿತೇ ನಿದ್ದೆ ಮಾಡುತ್ತಿದ್ದನು. ಬೇರೆ ಯಾರೂ ಇಲ್ಲ. ಚಿತ್ರಕ ಮತ್ತೆ ಹಿಂದಿರುಗಿದನು. ಗೋಡೆಗೆ ಒರೆಯೊಳಗೆ ಸೇರಿಸಿಟ್ಟ ಅವನ ಕತ್ತಿ ತೂಗು ಹಾಕಿತ್ತು ಅವನು ಅದನ್ನು ತನ್ನ ಸೊಂಟಕ್ಕೆ ಬಿಗಿದುಕೊಂಡನು.

ನಂತರ ಬಹಳ ಎಚ್ಚರಿಕೆಯಿಂದ ಸದ್ದು ಮಾಡದೆ ವಾತಾಯನದಿಂದ ಹೊರಕ್ಕೆ ನೆಗೆದು ಪ್ರಾಕಾರದೊಳಕ್ಕೆ ಬಂದನು. ಸಮಾಧಾನದ ನಿಟ್ಟುಸಿರು ಬಿಟ್ಟು ಅವನು ಮನಸ್ಸಿನಲ್ಲಿ ‘ಒಂದು ಅಡ್ಡಿ ನಿವಾರಣೆಯಾಯಿತು. ಅರಮನೆಯ ಪ್ರಾಕಾರವೊಂದಿದೆ. ಅದನ್ನೂ ದಾಟಿ ಬಿಟ್ಟರೆ – ಮುಕ್ತಿ’ ಎಂದು ಲೆಕ್ಕ ಹಾಕಿದನು.

ಸಮೀಪದಲ್ಲಿದ್ದ ಲತಾ ಮಂಟಪದೊಳಗಿಂದ ತೀಕ್ಷ್ಣವಾದ ಎರಡು ಕಣ್ಣುಗಳು ಅವನನ್ನೇ ದೃಷ್ಟಿಸಿ ನೋಡುತ್ತಿದ್ದವು. ಈ ವಿಷಯ ಚಿತ್ರಕನಿಗೆ ತಿಳಿಯದು.

ಮೋಡಗಳು ಮತ್ತೆ ಚಂದ್ರನನ್ನು ಮರೆಮಾಡಿದವು. ಇದನ್ನು ಕಂಡ ಚಿತ್ರಕನು ಪ್ರಾಕಾರದ ಕಡೆಗೆ ಬೇಗ ಬೇಗ ಹೆಜ್ಜೆ ಹಾಕಿದನು. ಪ್ರಾಕಾರದ ಒಳಗಿನಿಂದ ಕೋಟೆಯ ಮೇಲಕ್ಕೆ ಹತ್ತಲು ಕಿರಿದಾದ ಮೆಟ್ಟಿಲು ಇರುವುದನ್ನು ಸಾಯಂಕಾಲ ಅವನು ಗಮನಿಸಿದ್ದನು.

ಕೋಟೆಯ ಮೇಲ್ಭಾಗಕ್ಕೆ ಹೋಗಿ, ಅಲ್ಲಿಂದ ಹೊರಭಾಗವನ್ನು ಇಣುಕಿ ನೋಡಿದನು. ಆ ಕೋಟೆ ಗೋಡೆಯು ಇಪ್ಪತ್ತೊಂದು ಅಡಿಗಳಷ್ಟು ಎತ್ತರವಾಗಿತ್ತು. ಅದು ನಯವಾದ ಕಲ್ಲಿನ ಗೋಡೆಯಾದ್ದರಿಂದ ಹತ್ತಲೂ ಇಳಿಯಲೂ ಆಗುತ್ತಿರಲಿಲ್ಲ. ಆದರೆ ಒಂದೇ ಒಂದು ಉಪಾಯವೆಂದರೆ ವಜ್ರಾಂಗ-ಬಲಿ ಪವನಪುತ್ರನ ನಾಮಸ್ಮರಣೆ ಮಾಡಿ ಒಂದೇ ನೆಗೆತಕ್ಕೆ ನೆಗೆಯುವುದು. ಆಗ ಒಂದು ವೇಳೆ ಪ್ರಾಣ ಉಳಿದರೂ, ಕೈಕಾಲುಗಳು ಊನವಾಗದೆ ಇರಲು ಸಾಧ್ಯವಿಲ್ಲ. ಮೂಳೆ ಮುರಿಯುವುದಂತೂ ಖಂಡಿತ. ಆಗ ಓಡಿ ಹೋಗುವ
ಪ್ರಯತ್ನ ಹಾಸ್ಯಾಸ್ಪದ ಪ್ರಹಸನವಾಗುತ್ತದೆ.

ಹಾಗಾದರೆ ಈಗ ಏನು ಮಾಡಬೇಕು? ಮತ್ತೆ ಮರು ಮಾತಾಡದೆ ಸುಮ್ಮನೆ ಹಿಂದಿರುಗಿ ಹೋಗಿ ಹಾಸಿಗೆಯಲ್ಲಿ ಮಲಗುವುದೆ? ಇಲ್ಲ. ಪುನಃ ಪ್ರಯತ್ನ ಮಾಡಿ ನೋಡೋಣ. ಹೊರಗೆ ಹೋಗುವ ಏಕಮಾತ್ರ ದಾರಿ ಎಂದರೆ ತೋರಣದ್ವಾರ. ಅಲ್ಲಿ ಕಾವಲಿನವನಿದ್ದಾನೆ. ಅವನ ಕಣ್ಣಿಗೆ ಮಣ್ಣೆರಚಿ ಹೊರ ಹೋಗುವುದು ಸಾಧ್ಯವಾಗದ ಮಾತು. ಅವನು ನಿದ್ರಿಸುತ್ತಿರಬಹುದು.

ಕೋಟೆಯ ಮೇಲೆಯೇ ಅವನು ತೋರಣ ದ್ವಾರದ ಕಡೆಗೆ ನಡೆದನು. ನಿಧಾನವಾಗಿ ನಡೆದು ಬರುವಾಗ ಯಾರೋ ಹಿಂದೆ ಬರುವಂತಿದೆ ಎಂದು ಅವನಿಗೆ ಭಾಸವಾಯಿತು. ಚಕಿತನಾಗಿ ಹಿಂದಿರುಗಿ ನೋಡಿದರೆ ಯಾರೂ ಕಾಣಿಸಲಿಲ್ಲ.

ತೋರಣ ಸ್ತಂಭದ ಬಳಿಗೆ ಬಂದು ಕೆಳಗೆ ದೃಷ್ಟಿ ಹಾಯಿಸಿದನು. ಪ್ರತೀಹಾರನು ಕಬ್ಬಿಣದ ಬಾಗಿಲಿಗೆ ಬೆನ್ನು ಮಾಡಿ, ಎರಡು ಕಾಲ್ಗಳನ್ನು ಚಾಚಿಕೊಂಡು ಕುಳಿತಿದ್ದಾನೆ. ಅವನ ಗದ್ದವು ಎದೆಯ ಮೇಲಿದೆ. ಭಲ್ಲೆಯು ಮಂಡಿಯ ಮೇಲಿದೆ. ಅವನು ನಿದ್ದೆ ಮಾಡುತ್ತಿರುವನೆಂಬುದರಲ್ಲಿ ಸಂದೇಹವೇ ಇಲ್ಲ.

ಅವನನ್ನು ನೋಡನೋಡುತ್ತಲೇ ಚಿತ್ರಕನ ನಾಸಾಪುಟವು ಕಂಪಿಸಿತು. (ಮೂಗಿನ ಹೊಳ್ಳೆಗಳು ಕಂಪಿಸಿದವು.) ಹಣೆಯ ಮೇಲಿನ ತಿಲಕವು ಬರುಬರುತ್ತ ರಕ್ತವರ್ಣಕ್ಕೆ ತಿರುಗಿತು. ದೇಹದ ಮಾಂಸಖಂಡಗಳನ್ನು ಕಠಿಣವನ್ನಾಗಿ ಮಾಡಿ ಸೆಟೆದು ನಿಂತು, ಕ್ಷಣಕಾಲ ಚಿಂತಿಸಿ, ಒರೆಯಿಂದ ಖಡ್ಗವನ್ನು ಹೊರಗೆ ತೆಗೆದನು. ‘ಇದೊಂದೇ ಈಗಿರುವ ಏಕಮಾತ್ರ ಉಪಾಯ. ತೋರಣದ್ವಾರದ
ಬಾಗಿಲಿನಲ್ಲಿ ಕಿರಿದಾದ ಒಂದು ಬಾಗಿಲು ಇದೆ. ಅದನ್ನು ತೆರೆದು ಹೊರಗೆ ಹೋಗುವುದು. ಪ್ರತೀಹಾರನನ್ನು ಎಚ್ಚರಗೊಳಿಸದೆ ಹೊರಗೆ ಹೊರಟು ಹೋದರೆ ಎಲ್ಲವೂ ಕ್ಷೇಮ. ಹಾಗಾಗದೆ ಅವನು ಎಚ್ಚರಗೊಂಡರೆ, ಆಗ-’ ಹೀಗೆ ಯೋಚಿಸಿದನು.

ಹತ್ತಿರದಲ್ಲಿಯೇ ಹಳೆಯದಾದ ಮೆಟ್ಟಿಲುಗಳು. ಚಿತ್ರಕ ಕೆಳಗೆ ಇಳಿದು ಬಂದ. ತೋರಣ ಸ್ತಂಭಕ್ಕೆ ಮೈಯನ್ನು ಉಜ್ಜಿಕೊಳ್ಳುತ್ತಾ (ಒರಗಿಕೊಂಡೇ) ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತ ಪ್ರತೀಹಾರನಿದ್ದ ಕಡೆಗೆ ಹೋದನು. ಅವನನ್ನು ನೋಡಿದರೆ, ಅದೇ ಹಿಂದಿನ ರಾತ್ರಿ ಇದ್ದ ಪ್ರತೀಹಾರನೇ ಅವನು.

ತುಟಿಗಳನ್ನು ಭದ್ರವಾಗಿ ಬಿಗಿದುಕೊಂಡು ಚಿತ್ರಕ ಇನ್ನೂ ಒಂದು ಹೆಜ್ಜೆ ಮುಂದಿಟ್ಟನು. ಆದರೆ ಇನ್ನು ಮುಂದೆ ಹೋಗಲಾಗಲಿಲ್ಲ. ಇದೇ ಸಮಯದಲ್ಲಿ ಹಿಂದುಗಡೆಯಿಂದ ಭಯಂಕರವಾದ ಗರ್ಜನೆಯೊಂದು ಕೇಳಿಸಿತು. ಜೊತೆ ಜೊತೆಗೇ ಕರಡಿಯಂಥ ಯಾವುದೋ ಒಂದು ಪ್ರಾಣಿಯು ಅವನ ಭುಜದ ಮೇಲೆ ಹಾರಿ ಎರಡು ವಜ್ರಬಾಹುಗಳಿಂದ ಅವನ ಕುತ್ತಿಗೆಯನ್ನು ಹಿಸುಕಲು ಪ್ರಾರಂಭಿಸಿತು.

ಊಹಿಸಲಾಗದ ಈ ಆಕ್ರಮಣದಿಂದ ಚಿತ್ರಕನು ಮುಖ ಕೆಳಗೆ ಮಾಡಿ ಬೋರಲಾಗಿ ಬಿದ್ದನು. ಹಲ್ಲೆ ಮಾಡಿದವನೂ ಅವನ ಮೇಲೆಯೇ ಬಿದ್ದನು. ಆದರೆ ಆ ಬಾಹು ಬಂಧನವನ್ನು ಮಾತ್ರ ಸಡಿಲಗೊಳಿಸಲಿಲ್ಲ. ಚಿತ್ರಕನು ಉಸಿರಾಡಲು ಕಷ್ಟಪಡಬೇಕಾಯಿತು. ಶತ್ರು ಬೆನ್ನ ಮೇಲೆ ಇದ್ದುದರಿಂದ ಅವನು/ಅದು ಯಾರೆಂದು ತಿಳಿಯಲಾಗಲಿಲ್ಲ. ಮಣ್ಣಿನ ಮೇಲೆ ಬಿದ್ದುಕೊಂಡೇ ಕಣ್ಣಿಗೆ ಕಾಣದ ಆತತಾಯಿಯೊಂದಿಗೆ ಹೇಗೋ ಹೆಣಗುತ್ತಿದ್ದನು. ಅವನ ಕೈಗಳಿಂದ ಕತ್ತಿ ಕಳಚಿ ಬಿದ್ದು ಹೋಗಿತ್ತು. ಎರಡು ಕೈಗಳಿಂದಲೂ ಪ್ರಾಣವನ್ನು ಪಣಕ್ಕಿಟ್ಟು ಪ್ರಯತ್ನ ಪಟ್ಟರೂ ಆ ಪಾಪಿಯ ನಾಗಪಾಶದಿಂದ ತನ್ನ ಕುತ್ತಿಗೆಯನ್ನು ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದನು.

ಅತ್ತ ಪ್ರತೀಹಾರನು ಗಾಬರಿಗೊಂಡು, ಎಚ್ಚರಾಗಿ ನೋಡುತ್ತಾನೆ. ತನ್ನ ಮುಂದೆಯೇ ಗಜಕಚ್ಛಪಗಳ (ಆನೆ ಆಮೆಗಳ) ಯುದ್ಧ ನಡೆಯುತ್ತಿದೆ. ಏನೆಂದು ತಿಳಿಯದೆ ಮೈಕೊಡವಿಕೊಂಡು ಎದ್ದು, ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ತುತ್ತೂರಿ (ಕಹಳೆ) ಯನ್ನು ಕೈಗೆತ್ತಿಕೊಂಡು ಗಟ್ಟಿಯಾಗಿ ಊದಿದನು. ಅದು ಸುತ್ತಮುತ್ತಲಿನವರನ್ನು ಎಚ್ಚರಗೊಳಿಸಿತು.

ಚಿತ್ರಕನದು ಶೋಚನೀಯ ಸ್ಥಿತಿಯಾಯಿತು. ಅವನಿಗೆ ಜ್ಞಾನ ತಪ್ಪುವ ಸ್ಥಿತಿ ಬಂದಿತ್ತು. ಕುತ್ತಿಗೆಯನ್ನು ಬಿಡಿಸಿಕೊಳ್ಳುವ ಪ್ರಯತ್ನವೆಲ್ಲ ವ್ಯರ್ಥವಾಗುತ್ತಿತ್ತು. ಕಣ್ಣುಕಾಣದೆಯೆ ಮಣ್ಣಿನ ಮೇಲೆ ಕೈಗಳನ್ನು ಅತ್ತಿತ್ತ ಆಡಿಸುತ್ತಿರುವಾಗ ಅವನ ಕತ್ತಿಯು ಕೈಗೆ ಸಿಕ್ಕಿತು. ಆವೇಶಗೊಂಡವನ ಹಾಗೆ ಆ ಕತ್ತಿಯನ್ನು ಹಿಡಿದು, ಹೇಗೋ ಪ್ರಯತ್ನಪಟ್ಟು ಮಂಡಿಯ ಮೇಲೆ ತನ್ನ ಶರೀರವನ್ನು ನಿಲ್ಲಿಸಿದನು. ನಂತರ ಕತ್ತಿಯ ತುದಿಯನ್ನು ಬೆನ್ನಿನ ಕಡೆಗೆ ತಿರುಗಿಸಿ ತನ್ನ ಶಕ್ತಿಯನ್ನೆಲ್ಲಾ ಬಿಟ್ಟು ಜೋರಾಗಿ ಅಮುಕಿದನು. ಕತ್ತಿಯು ಮೇಲಿದ್ದವನು. ಬಿಗಿಯಾಗಿ ಹಿಡಿದಿದ್ದ ಪಂಜ ಭೇದಿಸಿತು.

ಸ್ವಲ್ಪ ಹೊತ್ತು ಆ ಪಾಪಿಯು ಅದೇ ಸ್ಥಿತಿಯಲ್ಲಿದ್ದನು. ನಂತರ ಬಾಹು ಬಂಧನ ಸಡಿಲವಾಯಿತು. ಅವನು ಚಿತ್ರಕನ ಬೆನ್ನು ಮೇಲಿಂದ ಜಾರಿ ನೆಲದ ಮೇಲೆ ಉರುಳಿದನು.

ಕಷ್ಟುಪಟ್ಟು ಉಸಿರಾಡುತ್ತ, ಚಿತ್ರಕನು ನಿಧಾನವಾಗಿ ಮೇಲೆದ್ದು ನಿಂತನು. ಈ ಮಧ್ಯೆ ಕಹಳೆಯ ಧ್ವನಿ ಕೇಳಿ ಹತ್ತಾರು ಮಂದಿ ಅರಮನೆಯ ಸೇವಕರು ಓಡಿ ಬಂದು ದೊಣ್ಣೆ ಮೊದಲಾದವುಗಳಿಂದ ಚಿತ್ರಕನನ್ನು ಹೊಡೆಯುವು ದರಲ್ಲಿದ್ದರು. ಚಿತ್ರಕನು ಎದ್ದು ನಿಂತ ಮೇಲೆ ಅವನ ಮುಖವನ್ನು ನೋಡಿ ಅವರೆಲ್ಲ ದಂಗಾಗಿ ಆಯುಧಗಳನ್ನು ಕೆಳಗಿಳಿಸಿದರು.

ತೋರಣ ಪ್ರತೀಹಾರನು ಭಲ್ಲೆಯನ್ನು ಹಿಡಿದು ಹತ್ತಿರ ಬಂದು ಆಶ್ಚರ್ಯದಿಂದ ‘ಅರೇ ಇದೇನು! ಇವನು ರಾತ್ರಿ ಸಿಕ್ಕಿ ಬಿದ್ದ ಕಳ್ಳ…. ಇಲ್ಲ..ಇಲ್ಲ… ಮಗಧದ ದೂತ ಮಹಾಶಯರು! ಈ ನಡುರಾತ್ರಿಯಲ್ಲಿ ಏನು ಮಾಡುತ್ತಿದ್ದಾರೆ?… ಅವನಾರು?’ ಎಂದು ಪ್ರಶ್ನಿಸಿದರು.

ಚಿತ್ರಕನು ಒಂದು ಸಲ ದೀರ್ಘವಾಗಿ ಉಸಿರಾಡಿ ‘ಗೊತ್ತಿಲ್ಲ, ನನ್ನ ಮೇಲೆ ಹಿಂದಿನಿಂದ ಬಂದ ಇವನು ಇದ್ದಕ್ಕಿದ್ದಂತೆ ಹಲ್ಲೆ ಮಾಡಿದ್ದಾನೆ…’ ಎಂದನು.

ತಿವಿದ ಕತ್ತಿಯು ಇನ್ನೂ ದೇಹದಲ್ಲಿಯೇ ಇರುವ ಆ ಪಾಪಿಯು ಅಧೋಮುಖವಾಗಿ ಬಿದ್ದಿದ್ದನು. ಒಬ್ಬನು ಅದನ್ನು ಮೇಲು ಮುಖವಾಗಿ ತಿರುಗಿಸಿದನು. ಬೆಳುದಿಂಗಳ ಬೆಳಕಿನಲ್ಲಿ ಅವನ ಮುಖವನ್ನು ನೋಡಿದ ಎಲ್ಲರೂ ಅಲುಗಾಡದೆ ಆಶ್ಚರ್ಯಪಟ್ಟು, ಇವನು ‘ಗುಹ’ ನಲ್ಲವೆ ಎಂದರು.

ಗುಹ ಸತ್ತು ಹೋಗಿದ್ದನು. ಅವನ ದೇಹ ಶಿಥಿಲವಾಗಿ ಜಡವಾಗಿತ್ತು. ಪ್ರತೀಹಾರನು ವಿಸ್ಮಯಾನ್ವಿತ ಧ್ವನಿಯಲ್ಲಿ ‘ಇದೇನು ಆಶ್ಚರ್ಯ.. ಗುಹ.. ಗುಹನು ತಮ್ಮ ಮೇಲೆ ಹಲ್ಲೆ ಮಾಡಿದನೆ! ಅವನೊಬ್ಬ ಬಡಪಾಯಿ ಏನೂ ಅರಿಯದವನು. ನಿರೀಹ. ಅವನು ಎಂದೂ ಯಾರ ಮೇಲೂ ಕೈ ಮಾಡಿದವನಲ್ಲ. ಹೀಗಿರುವಾಗ ತಮ್ಮ ಮೇಲೆ ಹಲ್ಲೆ ಮಾಡಿದ್ದಾನೆಂದರೆ ನಂಬಲಿಕ್ಕೇ ಆಗುತ್ತಿಲ್ಲ ಏಕೆ ಹೀಗೆ ಮಾಡಿದ?’ ಎಂದನು.

ಚಿತ್ರಕ ಉತ್ತರ ಕೊಡಲಿಲ್ಲ. ಅವನು ಸತ್ತ ಗುಹನ ಮುಖವನ್ನೇ ದಿಟ್ಟಿಸಿ ನೋಡಿದನು. ಅವನ ಮುಖ ಶಾಂತವಾಗಿತ್ತು. ದೀರ್ಘಕಾಲದ ಜಾಗರಣೆಯ ನಂತರ ನಿದ್ರಿಸುತ್ತಿರುವ ಹಾಗಿತ್ತು. ಇದೇ ಮನುಷ್ಯ ಸ್ವಲ್ಪ ಹೊತ್ತಿಗೆ ಮೊದಲು
ಭಯಂಕರ ಕರಡಿಯ ಹಾಗೆ ಅವನ ಕಂಠನಾಳವನ್ನು ಹಿಸುಕಿ ಪ್ರಾಣ ತೆಗೆಯುವುದರಲ್ಲಿದ್ದನೆಂದು ನಂಬಲಿಕ್ಕೇ ಆಗಲಿಲ್ಲ. ಈ ಕುಬ್ಜ ಹಾಗೂ ವಿಕಾರವಾದ ದೇಹದಲ್ಲಿ ಇಷ್ಟೊಂದು ಶಕ್ತಿ ಇತ್ತೆಂದು ಊಹಿಸಲೂ ಸಾಧ್ಯವಿಲ್ಲ.

ಪ್ರತೀಹಾರನು ಚಿತ್ರಕನ ಕಡೆ ತಿರುಗಿ ‘ಗುಹನು ತಮ್ಮ ಮೇಲೆ ಈ ರೀತಿ ಮಾರಣಾಂತಿಕ ಹಲ್ಲೆ ಮಾಡಲು ಏನು ಕಾರಣ? ಅವನು ಹುಚ್ಚನೆಂಬುದೇನೋ ನಿಜ. ಆದರೆ ಯಾರ ಮೇಲೂ ಅಕಾರಣವಾಗಿ ಹಲ್ಲೆ ಮಾಡಿದವನಲ್ಲ’- ಎಂದು ಪ್ರಶ್ನಿಸಿದನು.

ಚಿತ್ರಕನು ‘ಅಕಾರಣವಲ್ಲ. ಅವನಿಗೆ ನನ್ನ ಮೇಲೆ ದ್ವೇಷವಿತ್ತೆಂದು ಕಾಣುತ್ತದೆ. ಪೃಥೆಯ ಬಿಡುಗಡೆ. ನಾನೇ ಅವನ ಗುಪ್ತಧನವನ್ನು ಕದ್ದೆನೆಂದು ಅವನು ಭಾವಿಸಿದ್ದನೋ ಏನೋ!’ ಎಂದನು.

ಗುಹನ ಬಳಿ ಮಂಡಿಯೂರಿ ಕುಳಿತು ಚಿತ್ರಕ ಮೆಲ್ಲಗೆ ಅವನ ಶರೀರದಿಂದ ಕತ್ತಿಯನ್ನು ಹೊರ ತೆಗೆದನು. ಮರಣಾನಂತರವಾದರೂ ಲುಪ್ತವಾಗಿದ್ದ ಅವನ ಸ್ಮರಣಶಕ್ತಿ ಮರುಕಳಿಸುವುದೋ ಏನೋ ಯಾರು ಬಲ್ಲರು!

ಮುಂದುವರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

Related post