ಹಿಂದಿನ ಸಂಚಿಕೆಯಿಂದ….
ಮರುದಿನ ಬೆಳಗ್ಗೆ ಸಚಿವ ಚತುರಾನನ ಭಟ್ಟನು ರಾಜಭವನದಲ್ಲಿ ಚಿತ್ರಕನನ್ನು ಭೇಟಿ ಮಾಡಲು ಬಂದನು. ಸ್ವಸ್ತಿ ವಾಚನದ ನಂತರ ಅವನು ‘ನಿನ್ನೆ ರಾತ್ರಿ ಅರಮನೆಯ ಪ್ರಾಕಾರದಲ್ಲಿಯೇ ತಮ್ಮ ಮೇಲೆ ಹಲ್ಲೆ ನಡೆಯಿತೆಂದು
ಕೇಳಿ ತುಂಬ ವಿಷಾದವಾಯಿತು. ತಮಗೆ ಮೇಲಿಂದ ಮೇಲೆ ತೊಂದರೆಗಳು ಉಂಟಾಗುತ್ತಿವೆ. ಇದರಿಂದ ತಮಗೆ ಬಹಳ ನೋವಾಗಿರಬಹುದು. ಸರಿರಾತ್ರಿಯಲ್ಲಿ ರಕ್ಷಣೆಯಿಲ್ಲದೆ ಹೊರಗೆ ಹೋದರೆ ಅಪಾಯ ತಪ್ಪಿದ್ದಲ್ಲ ಅರಮನೆಯಲ್ಲಿಯೂ ವಿಪತ್ತುಗಳು ಘಟಿಸುತ್ತಲೇ ಇರುತ್ತವೆ’ ಎಂದನು.
ಕಂಚುಕಿಯೂ ಅಲ್ಲೇ ಇದ್ದನು. ಅವನು ‘ಇದೇ ವಿಷಯವನ್ನು ನಾನೂ ಕೂಡ ಹೇಳಿದೆ. ಆದರೆ ದೂತ ಮಹಾಶಯರ ವಯಸ್ಸು ಇನ್ನೂ ಕಿರಿದು; ಮನಸ್ಸು ಚಂಚಲ’- ಎಂದು ಹೇಳಿ ಮುಖ ಮುಚ್ಚಿಕೊಂಡು ನಕ್ಕನು. ಚತುರಭಟ್ಟನು ‘ರಾತ್ರಿ ನಿದ್ದೆಗೆ ಅಡ್ಡಿ ಉಂಟಾಯಿತೇನು?’ ಎಂದು ಚಿತ್ರಕನನ್ನು ಕೇಳಿದನು.
ಚಿತ್ರಕನಿಗೆ ಪ್ರಶ್ನೆಯ ಒಳ ಮರ್ಮ ತಿಳಿದಿತ್ತು. ಚಿತ್ರಕನು ನಡು ರಾತ್ರಿಯಲ್ಲಿ ಒಬ್ಬನೇ ಹೊರಗೆ ಏಕೆ ಹೋಗಿದ್ದನೆಂಬುದು ಸಚಿವನಿಗೆ ಗೊತ್ತಾಗಬೇಕಿತ್ತು. ಇಂಥದೇ ಪ್ರಶ್ನೆ ಹೊರಬರುವುದೆಂದು ಚಿತ್ರಕನು ಲೆಕ್ಕ ಹಾಕಿದ್ದನು. ಅದಕ್ಕೆ ಉತ್ತರವನ್ನೂ ಸಿದ್ಧಪಡಿಸಿಕೊಂಡಿದ್ದನು. ಒಂದು ಕತೆಯನ್ನೂ ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡಿದ್ದನು. ಅದನ್ನೇ ಸಚಿವನಿಗೆ ತಿಳಿಸಿದನು.
ನಡುರಾತ್ರಿಯಲ್ಲಿ ಚಿತ್ರಕನ ನಿದ್ದೆಗೆ ಭಂಗ ಉಂಟಾಯಿತು. ನಿದ್ರಾಭಂಗವಾಗಿ ಕಣ್ಣುಬಿಟ್ಟಾಗ ಯಾವನೋ ಒಬ್ಬ ವ್ಯಕ್ತಿ ವಾತಾಯನದ ಮಾರ್ಗವಾಗಿ ಕೊಠಡಿಯೊಳಕ್ಕೆ ನುಗ್ಗುವ ಪ್ರಯತ್ನದಲ್ಲಿದ್ದದ್ದು ಕಾಣಿಸಿತು. ಕೂಡಲೆ ಚಿತ್ರಕನು ಕತ್ತಿ ಹಿಡಿದು ಆ ದುಷ್ಟನ ಕಡೆ ಮುನ್ನುಗಿದನು. ಕಳ್ಳನು ಇವನು ಎಚ್ಚೆತ್ತಿರುವುದನ್ನು ಕಂಡು ಪಲಾಯನ ಮಾಡಿದನು. ಚಿತ್ರಕನೂ ಕೂಡ ವಾತಾಯನದಿಂದ ಹೊರ ನೆಗೆದು ಅವನನ್ನು ಹಿಂಬಾಲಿಸಿದನು. ಸ್ವಲ್ಪ ದೂರ ಹೋದ ಮೇಲೆ ಕಳ್ಳನು ತಪ್ಪಿಸಿಕೊಂಡನು. ಅವನನ್ನು ಅಲ್ಲಿ ಇಲ್ಲಿ ಹುಡುಕುತ್ತ ತೋರಣ ದ್ವಾರದ ಬಳಿಗೆ ಹೋಗಿ ನಿಂತಿರುವಾಗ ಇದ್ದಕ್ಕಿದ್ದಂತೆ ಅವನು ಹಲ್ಲೆ ಮಾಡಿದನು – ಇತ್ಯಾದಿ.
ಕತೆ ನಂಬುವಂತದೇ ಆಗಿತ್ತು. ಚತುರ ಭಟ್ಟನು ಮನಸ್ಸಿಟ್ಟು ಕೇಳಿಸಿಕೊಂಡನು. ‘ಈ ಕಥೆ ಸ್ವಕಪೋಲಕಲ್ಪಿತವೇ ಆಗಿದ್ದರೂ ದೂತ ಮಹಾಶಯನ ಕಲ್ಪನಾ ಶಕ್ತಿ ಮೆಚ್ಚುವಂಥದೇ ಆಗಿದೆ’ ಎಂದು ಮನಸ್ಸಿನಲ್ಲಿಯೇ ಗುಣಾಕಾರ ಹಾಕಿದನು. ‘ಹೋಗಲಿ ಬಿಡಿ. ತಾವು ಹುಚ್ಚನು ಮಾಡಿದ ಹಲ್ಲೆಯಿಂದ ಸುರಕ್ಷಿತವಾಗಿ ಪಾರಾದಿರಲ್ಲ, ಅದೇ ಸಂತೋಷದ ವಿಷಯ. ತಾವು ಮಗಧದ ಗೌರವಾನ್ವಿತ ದೂತರು. ತಮಗೇನಾದರೂ ಅನಿಷ್ಟ ಸಂಭವಿಸಿದ್ದರೆ ನಮ್ಮ ಗತಿ ಏನಾಗುತ್ತಿತ್ತು! ಎಂದು ಚಿತ್ರಕನನ್ನು ಸಮಾಧಾನಪಡಿಸಿ, ಕಂಚುಕಿಯ ಕಡೆ ತಿರುಗಿ ‘ಲಕ್ಷ್ಮಣ, ಹಗಲು ರಾತ್ರಿ ಇವರ ರಕ್ಷಣೆಯ ಕಡೆ ಸ್ವಲ್ಪ ಹೆಚ್ಚು ಗಮನ ಕೊಡು. ಇವರು ಇನ್ನೂ ಕೆಲವು ದಿನ ಇಲ್ಲಿಯೇ ರಾಜರ ಅತಿಥೀಯ ಹಾಗೆ ಇರಬೇಕಾಗಿದೆ. ಅವರಿಗೇನಾದರೂ ಅನಿಷ್ಟ ಸಂಭವಿಸಿದರೆ ನೀನೇ ಹೊಣೆ ಹೊರಬೇಕಾಗುತ್ತದೆ. ನೆನಪಿನಲ್ಲಿ ಇಟ್ಟುಕೋ’ ಎಂದು ಎಚ್ಚರಿಸಿದನು.
ಚಿತ್ರಕನು ಉದ್ವಿಗ್ನನಾಗಿ ‘ಆದರೆ ನಾನು ಬೇಗ ಹೋಗಬೇಕಾಗಿದೆ. ಅತಿಥ್ಯ… ರಕ್ಷಣೆ… ಇವೆಲ್ಲ ಆಗಿಯೇ ಆಗುತ್ತದೆ. ಇನ್ನು ನಮ್ಮನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಿರಿ’ ಎಂದನು.
ಸಚಿವನು ದೃಢವಾಗಿ ‘ಇಷ್ಟು ಬೇಗ ಹೋಗುವುದು ಸಾಧ್ಯವಿಲ್ಲದ ಮಾತು. ಚಷ್ಟನ ದುರ್ಗದಲ್ಲಿರುವ ಮಹಾರಾಜರ ಬಳಿಗೆ ಮಗಧದ ಪತ್ರವನ್ನು ರವಾನೆ ಮಾಡಲಾಗಿದೆ. ಮಹಾರಾಜರು ತಮ್ಮನ್ನೂ ಭೇಟಿ ಮಾಡುವ ಸಂಭವವಿದೆ. ಅವರನ್ನು ಕಾಣದೆ ತಾವು ಹೋಗಲಾರಿರಿ’. ಮೇಲೆದ್ದು ಸಚಿವನು ನವುರಾದ ಧ್ವನಿಯಲ್ಲಿ ‘ತಾವು ಏಕೆ ಇಷ್ಟೊಂದು ಆತುರದಲ್ಲಿದ್ದೀರಿ. ರಾಜಕಾರ್ಯವು ಒಂದೆರಡು ದಿನಗಳಲ್ಲಿ ಆಗುವಂಥದಲ್ಲ. ಕೆಲವು ದಿನ ವಿಶ್ರಮಿಸಿಕೊಳ್ಳಿರಿ. ಆಮೇಲೆ ವಿಟಂಕ ರಾಜ್ಯದ ದೂತನು ಪತ್ರದ ಉತ್ತರದೊಂದಿಗೆ ಪಾಟಲಿಪುತ್ರಕ್ಕೆ ಪ್ರಯಾಣ ಬೆಳೆಸುವಾಗ ತಾವೂ ಕೂಡ ಆತನ ಜೊತೆಯಲ್ಲಿ ಹಿಂದಿರುಗಿದರಾಯಿತು. ಎಲ್ಲ ರೀತಿಯಿಂದಲೂ ಅದು ಸುಖಕರವೆನಿಸುತ್ತದೆ’ ಎಂದು ಸಾಂತ್ವನ ಹೇಳಿದನು.
ಸಚಿವ ಹೊರಟು ಹೋದನು. ಚಿತ್ರಕ ಹತಾಶನಾಗಿ ಕುಳಿತಿದ್ದನು. ಮುಖದ ತುಂಬ ಮೀಸೆ ಇರುವ ಶಶಿಶೇಖರನ ಚಿತ್ರವೇ ಚಿತ್ರಕನ ಒಳಗಣ್ಣಿಗೆ ಗೋಚರವಾಗುತ್ತಿತ್ತು.
ಹಗಲೆಲ್ಲ ನಿಷ್ಕ್ರಿಯವಾಗಿಯೇ ಕಳೆಯಿತು. ಕಂಚುಕಿ ಲಕ್ಷ್ಮಣನು ಇದುವರೆಗೂ ಮರೆಯಲ್ಲಿದ್ದುಕೊಂಡೇ ಚಿತ್ರಕನ ಚಲನವಲಗಳನ್ನು ಗಮನಿಸುತ್ತಿದ್ದನು. ಈಗ ಜಿಗಣೆಯ ಹಾಗೆ ಅಂಟಿಕೊಂಡುಬಿಟ್ಟನು. ಸ್ನಾನ, ಆಹಾರ, ನಿದ್ದೆ ಹೀಗೆ ಎಲ್ಲಾ ವೇಳೆಯಲ್ಲಿಯೂ ಅವನ ಸಂಗವನ್ನು ಬಿಟ್ಟಿರುತ್ತಿಲ್ಲ.
ಮಧ್ಯಾಹ್ನನ ಹೊತ್ತಿನಲ್ಲಿ ಇಬ್ಬರೂ ಪಗಡೆ ಆಟದಲ್ಲಿ ಕಾಲ ಕಳೆಯುತ್ತಿದ್ದರು. ಪಣವಿಲ್ಲದ ಆಟ, ಆದ್ದರಿಂದ ಚಿತ್ರಕನಿಗೆ ಅದರಲ್ಲಿ ಆಸಕ್ತಿ ಇಲ್ಲ ಹೀಗಿರುವಾಗ ಅಂತಃಪುರದಿಂದ ರಾಜಕುಮಾರಿಯ ಖಾಸಾ ದಾಸಿಯೊಬ್ಬಳು ಅಲ್ಲಿಗೆ ಬಂದಳು. ಅವಳು ಕೈ ಮುಗಿದು ನಿಂತಳು. ಕಂಚುಕಿಯು ವಿಸ್ಮಿತನಾಗಿ ‘ವಿಪಾಶಾ,
ಇದೇನು ನೀನು ಇಲ್ಲಿ? ಏನಾಗಬೇಕು?’ ಎಂದು ಕೇಳಿದನು.
ವಿಪಾಶಾ- ಆರ್ಯ, ದೇವದುಹಿತೆಯವರ ಅಪ್ಪಣೆ ಮೇರೆಗೆ ಇಲ್ಲಿಗೆ ಬಂದಿದ್ದೇನೆ.
ಕಂಚುಕಿಯು ಮೇಲೆದ್ದು ನಿಂತು ‘ದೇವದುಹಿತೆಯವರ ಅಪ್ಪಣೆ ಏನು?’ ಎಂದು ಕೇಳಿದನು.
ವಿಪಾಶಾ- ದೇವ ದುಹಿತೆಯವರು ಉಶೀರ- ಗೃಹದಲ್ಲಿದ್ದಾರೆ. ಜೊತೆಯಲ್ಲಿ ಸುಗೋಪಾ ಕೂಡ ಇದ್ದಾರೆ. ‘ಮಗಧದ ದೂತ ಮಹಾಶಯರೊಂದಿಗೆ ಸ್ವಲ್ಪ ಮಾತನಾಡಬೇಕಾಗಿದೆ’ ಎಂದು ರಾಜಕುಮಾರಿಯವರು ತಿಳಿಸಿದ್ದಾರೆ. ಅನುಮತಿ ನೀಡುವುದಾದರೆ ಅವರಿಗೆ ದಾರಿ ತೋರಿಸಿ ಕರೆದುಕೊಂಡು ಹೋಗುತ್ತೇನೆ.
ಕಂಚುಕಿಗೆ ಧರ್ಮಸಂಟಕ. ಯಾವನೋ ಒಬ್ಬ ರಾಜದೂತನನ್ನು ಅಂತಃಪುರದಲ್ಲಿ ಭೇಟಿಯಾಗುವುದೆಂದರೆ ರಾಜ ಕನ್ಯೆಯ ಅಂತಸ್ಥಿಗೆ ಶೋಭಿಸುವುದಿಲ್ಲ. ಸಂಪ್ರದಾಯಕ್ಕೂ ವಿರೋಧವಾಗುತ್ತದೆ. ಆದರೆ ರಾಜಕುಮಾರಿ ಒಬ್ಬ ಹೆಣ್ಣು ಮಗಳು, ಅದೂ ಹೂಣ ಕನ್ಯೆ, ಅಂತಃಪುರದ ಸಂಪ್ರದಾಯವನ್ನು ಆಕೆ ಎಂದೂ ಪಾಲಿಸಿಲ್ಲ. ಆಕೆಯ ಜೊತೆಗೆ ಆ ಸುಗೋಪಾ ಬೇರೆ. ಸುಗೋಪಾಳನ್ನು ಕಂಡರೆ ಕಂಚುಕಿಗೆ ಆಗುತ್ತಿರಲಿಲ್ಲ. ಸುಗೋಪಾಳ ಸಹವಾಸದಿಂದಲೇ ರಾಜಕನ್ಯೆಯ ಗೌರವಕ್ಕೆ ಕುಂದು ಬಂದಿದೆ. ಆದರೆ ಬೇರೆ ದಾರಿ ಇಲ್ಲ. ಇದರ ಮೇಲೆ ಅಂತಃಪುರದ ಸ್ಥಾನಮಾನ ಉಳಿಸಬೇಕಾಗಿದೆ. ಇಲ್ಲದೆ ಹೋದರೆ ಕಂಚುಕಿಯ ಕರ್ತವ್ಯಕ್ಕೆ ಚ್ಯುತಿ ಬರುತ್ತದೆ. ಇದರ ಜೊತೆಗೆ ಈಗ ದೂತ ಮಹಾಶಯನನ್ನು ಒಂಟಿಯಾಗಿ ಬಿಡುವಂತಿಲ್ಲ.
ಕಂಚುಕಿಯು ಕೂಡಲೆ ಒಂದು ನಿರ್ಧಾರಕ್ಕೆ ಬಂದು, ದಾಸಿಯನ್ನು ಕುರಿತು ‘ವಿಪಾಶಾ, ನೀನು ಮುಂದೆ ನಡೆ. ನಾನು ದೂತ ಮಹಾಶಯರನ್ನು ಕರೆದುಕೊಂಡು ಹಿಂದಿನಿಂದ ನಾನೇ ಬರುತ್ತೇನೆ’ ಎಂದನು.
ಕಂಚುಕಿಯು ಜೊತೆಗಿದ್ದರೆ ಅಂತಃಪುರದಲ್ಲಿ ಪುರುಷ ಪ್ರವೇಶದ ದೋಷ ಅಷ್ಟಾಗಿ ಇರುವುದಿಲ್ಲ. ಅದೂ ಅಲ್ಲದೆ ದೂತ ಮಹಾಶಯರೂ ಕಣ್ಣೆದುರಿಗೇ ಇದ್ದಂತಾಗುತ್ತದೆ.
ಅಂತಃಪುರದ ಪಶ್ಚಿಮಕ್ಕೆ ಉಶೀರ-ಗೃಹ ಸಾಲು ಸಾಲು ಅನೇಕ ಕೊಠಡಿಗಳು ಬಾಗಿಲು ಮತ್ತು ಕಿಟಕಿಗಳಿಗೆ ಲಾಮಂಚದ ಬೇರಿನಿಂದ ತಯಾರಿಸಿದ ಜಾಲರಿಗಳು. ಬೇಸಿಗೆಯ ಧಗೆ ಹೆಚ್ಚಾದಾಗ ಅರಮನೆಯ ಹೆಂಗಳೆಯರು ಈ ತಣ್ಣನೆಯ ಕೊಠಡಿಗಳಲ್ಲಿ ವಿಶ್ರಮಿಸುತ್ತಿದ್ದರು.
ಇಂಥ ಒಂದು ಕೋಣೆಯಲ್ಲಿ ಶುಭ್ರವಾದ ಅಮೃತಶಿಲೆಯ ಪೀಠದ ಮೇಲೆ ಕುಮಾರಿ ರಟ್ಟಾ ಆಸೀನಳಾಗಿದ್ದಾಳೆ. ಸುಗೋಪಾ ಅವಳ ಬಳಿ ನೆಲದ ಮೇಲೆ ತಾಲವೃಂತ (ತಾಳೆಗರಿಯ ಬೀಸಣಿಗೆ)ವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದಾಳೆ. ಚಿತ್ರಕನ ಜೊತೆಯಲ್ಲಿ ಕಂಚುಕಿ ಬಾಗಿಲ ಬಳಿಗೆ ಬರುತ್ತಿದ್ದ ಹಾಗೇ ಸುಗೋಪಾ ಆತುರಾತುರವಾಗಿ ಒಂದು ಗೌಡದೇಶದ ಮೃದುವಾದ ರತ್ನಗಂಬಳಿಯನ್ನು ಹಾಸಿದಳು.
ಮುಂದುವರೆಯುವುದು…
ಎನ್. ಶಿವರಾಮಯ್ಯ (ನೇನಂಶಿ)