ಹಿಂದಿನ ಸಂಚಿಕೆಯಿಂದ….
ಇಬ್ಬರೂ ಕುಳಿತ ನಂತರ ರಟ್ಟಾ ಮುಖ ಮುಚ್ಚಿಕೊಂಡು ಸ್ವಲ್ಪ ನಕ್ಕಳು. ಕಂಚುಕಿಯನ್ನು ಚಿತ್ರಕನ ಜೊತೆಗೆ ಕಂಡು, ವಿಷಯವನ್ನು ಗ್ರಹಿಸಿ ಕೌತುಕ ಮಿಶ್ರಿತ ಧ್ವನಿಯಲ್ಲಿ ‘ಆರ್ಯ ಲಕ್ಶ್ಮಣ ಅವರು ಈ ಅಂತಃಪುರದ ಬಗ್ಗೆ
ತೋರುತ್ತಿರುವ ಇಷ್ಟೊಂದು ಮುಂಜಾಗರೂಕತೆ, ಸ್ನೇಹ- ಮಮತೆ – ಕಾಳಜಿಯನ್ನು ತಾಯಂದಿರೂ ಕೂಡ ತಮ್ಮ ಮಕ್ಕಳ ಬಗ್ಗೆ ತೋರುವರೋ ಇಲ್ಲವೋ ತಿಳಿಯದು’ ಎಂದು ಹೇಳಿದಳು.
ಲಕ್ಷ್ಮಣನು ಅಪ್ರತಿಭನಾದನು. ಚಿತ್ರಕನು ರಾಜಕುಮಾರಿಯ ಮಾತನ್ನು ಪುಷ್ಟೀಕರಿಸಿ ‘ಕಂಚುಕಿ ಮಹಾಶಯರು ನಮ್ಮ ಬಗ್ಗೆಯೂ ಕೂಡ ಬಹಳ ಸ್ನೇಹ ಶೀಲರು. ಕ್ಷಣ ಕಾಲವೂ ಕೂಡ ನನ್ನನ್ನು ಆಗಲಿ ಇರಲಾರರು. ನಾನು ಯಾವಾಗಲೂ ಅವರ ಕಣ್ಣ ಮುಂದೆಯೇ ಇರಬೇಕು’ ಎಂದು ವ್ಯಂಗ್ಯವಾಡಿದನು.
ವಿಡಂಬನೆಗೆ ಒಳಗಾದ ಕಂಚುಕಿ ಮುಖ ತಗ್ಗಿಸಿ ‘ಹಿ ಹ್ಹಿ ಹ್ಹೀ’ ಎಂದು ನಗುವ ನಾಟಕವಾಡಿದನು. ಅವನಿಗೆ ಉಭಯ ಸಂಕಟ. ಕರ್ತವ್ಯ ಮಾಡಿದರೆ ವಾಗ್ಬಾಣ, ಮಾಡದಿದ್ದರೆ ತಲೆ ದಂಡ ತೆರಬೇಕಾಗುತ್ತದೆ.
ಬಳಿಕ ಕುಮಾರಿ ರಟ್ಟಾ ಚಿತ್ರಕನನ್ನು ಕುರಿತು ‘ದೂತ ಮಹಾಶಯರೆ, ನಮ್ಮ ಸಖಿಯು ತಮ್ಮೊಡನೆ ಏನೋ ಸ್ವಲ್ಪ ಮಾತನಾಡಬೇಕಂತೆ. ಆದ್ದರಿಂದ ತಮಗೆ ಕಷ್ಟಕೊಡುತ್ತಿದ್ದೇವೆ’ ಎಂದು ಹೇಳಿ ‘ಸುಗೋಪಾ, ಈಗ ನೀನು ನಿನ್ನ
ಕಥೆಯನ್ನು ನೀನೇ ಹೇಳು’ ಎಂದು ಪ್ರೋತ್ಸಾಹಿಸಿದಳು. ಸುಗೋಪಾ ತೊಡೆಯ ಮೇಲೆ ಎರಡು ಕೈಗಳನ್ನೂ ಇಟ್ಟುಕೊಂಡು ನೆಲ ನೋಡುತ್ತ ಕುಳಿತಿದ್ದಳು. ಈಗ ನಿಧಾನವಾಗಿ ಮಾತನಾಡಲು ಉಪಕ್ರಮಿಸಿದಳು- ‘ಆರ್ಯ, ನಾನು ತಮಗೆ ಕೇಡೆಣಿಸಿದೆ. ಆದರೆ ತಾವು ನಮಗೆ ಒಳ್ಳೆಯದನ್ನೇ ಮಾಡಿದ್ದೀರಿ. ತಮ್ಮ ಅನುಗ್ರಹದಿಂದ ನಾವು ನಮ್ಮ ತಾಯಿಯನ್ನು ಮತ್ತೆ ನೋಡುವ ಹಾಗಾಯಿತು.’
ಈ ಎಲ್ಲಾ ಇಷ್ಟಾನಿಷ್ಟಗಳು ಆಕೆಯ ಮುಂದೆ ತೃಣಪ್ರಾಯವಾದುದೆಂದು ತಿಳಿಸುವ ಹಾಗೆ ಚಿತ್ರಕನು ತನ್ನ ಕೈಗಳನ್ನು ಅಲುಗಾಡಿಸಿ ‘ಹಾಗೆನ್ನ ಬೇಡಿ’ ಎಂದನು. ಆಗ ಸುಗೋಪಾ ‘ತಮ್ಮದು ಉದಾತ್ತವಾದ ಗುಣ. ಆದ್ದರಿಂದಲೇ ತಮ್ಮಲ್ಲಿ ಒಂದು ಅನುಗ್ರಹ ಭಿಕ್ಷೆ ಬೇಡುವ ಸಾಹಸ ಮಾಡುತ್ತಿದ್ದೇನೆ. ಭಾಗ್ಯಹೀನೆಯಾದ ನಮ್ಮ ತಾಯಿ ಸುಗೋಪಾಳ ಕಣ್ಣುಗಳು ದುಃಖದಿಂದ ತುಂಬಿ ಬಂದವು- ಕತ್ತಲೆಯ ಕೂಪದಿಂದ ಹೊರ ಬಂದ ಮೇಲೆ ಹಾಸಿಗೆ ಹಿಡಿದಿದ್ದಾಳೆ. ಆಕೆಯ ಅಂಗಾಂಗಳು ಬಹಳ ದುರ್ಬಲವಾಗಿವೆ. (ಆಕೆ ಬಹಳ ನಿಃಶಕ್ತಳಾಗಿದ್ದಾಳೆ). ಆಕೆಯ ಪ್ರಾಣ ಯಾವ ಗಳಿಗೆಯಲ್ಲಾದರೂ ಹೋಗಬಹುದು. ಆದರೂ ಆಕೆ ಒಳ್ಳೆಯ ಪ್ರಜ್ಞಾವಸ್ಥೆಯಲ್ಲಿದ್ದಾರೆ. ತಮ್ಮನ್ನು ಒಂದು ಬಾರಿ ಕಣ್ಣಾರೆ ಕಾಣಬೇಕೆಂದೂ, ತಾವು ಮಾಡಿದ ಉಪಕಾರಕ್ಕಾಗಿ ತಮಗೆ ಕೃತಜ್ಞತೆ ಅರ್ಪಿಸಬೇಕೆಂದೂ ಆಸೆ ಪಡುತ್ತಿದ್ದಾಳೆ ಎಂದು ಕೈ ಮುಗಿದು ಅಳುತ್ತಾ ಹೇಳಿದಳು.
ಚಿತ್ರಕ- ‘ಉಪಕಾರ’, ‘ಕೃತಜ್ಞತೆ’ ಇಂಥ ದೊಡ್ಡ ಮಾತುಗಳು ಇಲ್ಲೇಕೆ? ನಾನೇನು ಅಂಥ ಉಪಕಾರ ಮಾಡಿಲ್ಲ. ಅವೆಲ್ಲ ಬೇಡ, ಇರಲಿ. ನನ್ನನ್ನು ನೋಡುವುದರಿಂದ ಆಕೆಗೆ ಸಮಾಧಾನವಾಗುವುದಾದರೆ ನಾನೇಕೆ ಬೇಡವೆನ್ನಲಿ. ಖಂಡಿತ ಬರುತ್ತೇನೆ. ಅವರು ಎಲ್ಲಿದ್ದಾರೆ?’
ಸುಗೋಪಾ- ‘ನಮ್ಮ ಮನೆಯಲ್ಲಿ, ನಮ್ಮ ಕುಟೀರವು ಅರಮನೆಯಿಂದ ಹೊರಗೆ ಸ್ವಲ್ಪ ದೂರದಲ್ಲಿದೆ. ತಾವು ಅನುಗ್ರಹ ಮಾಡುವುದಾದರೆ ಈಗಲೇ ತಮ್ಮನ್ನು ಕರೆದುಕೊಂಡು ಹೋಗುತ್ತೇನೆ.
ಚಿತ್ರಕ ಎದ್ದು ನಿಂತು- ‘ನಡೆಯಿರಿ. ನಾನು ಸಿದ್ಧನಾಗಿದ್ದೇನೆ’.
ಕಂಚುಕಿ ಗಾಬರಿಗೊಂಡು ಮೇಲೆದ್ದು- ‘ಹೌದು- ಅರಮನೆಯಿಂದ ಹೊರಗೆ! ಆದ್ದರಿಂದಲೇ ನಾನು ನಿಮ್ಮ ಸಂಗಡ ಇಬ್ಬರು ರಕ್ಷಕಭಟರನ್ನು ಕಳುಹಿಸಿಕೊಡುತ್ತೇನೆ-’ ಎಂದನು.
ಚಿತ್ರಕ- ಅದರ ಅವಶ್ಯಕತೆ ಏನೂ ಇಲ್ಲ. ನಾನು ನನ್ನ ಆತ್ಮರಕ್ಷಣೆ ಮಾಡಿಕೊಳ್ಳಬಲ್ಲೆ.
ದಿಗಿಲುಗೊಂಡ ಕಂಚುಕಿ ‘ಅದು ಹೇಗಾದೀತು! ಆರ್ಯ ಚತುರಭಟ್ಟ ಮಂತ್ರಿಗಳು ತಮ್ಮ ರಕ್ಷಣೆಯ ಜವಾಬ್ದಾರಿಯನ್ನು ನನ್ನ ಮೇಲೆ ಹೊರಿಸಿದ್ದಾರೆ ಎಂದು ಹೇಳಿದನು.
ಚಿತ್ರಕನು ರಟ್ಟಾಳ ಕಡೆ ತಿರುಗಿ ನೋಡಿ, ಕನಿಕರದ ನಗೆ ನಕ್ಕು ‘ನಮ್ಮ ಮೇಲೆ ಕಂಚುಕಿ ಮಹಾಶಯರಿಗೆ ನಂಬಿಕೆ ಇಲ್ಲ. ಅವರು ಈಗಲೂ ನಮ್ಮನ್ನು ಕಳ್ಳನೆಂದೇ ಭಾವಿಸಿದ್ದಾರೆ. ಬಿಡುಗಡೆ ಹೊಂದಿದರೆ ಸಾಕು ನಾನು ಮತ್ತೆ ಕುದುರೆಯನ್ನು ಕದಿಯುತ್ತೇನೆಂದು ಅವರಿಗೆ ಸಂದೇಹ’ ಎಂದನು.
ರಟ್ಟಾ ಸ್ವಲ್ಪ ಮುಖ ಗಂಟಿಕ್ಕಿಕೊಂಡು ‘ಆರ್ಯ ಲಕ್ಷ್ಮಣ, ರಕ್ಷಣೆ ಬೇಕಾಗಿಲ್ಲ. ಸುಗೋಪಾ ದೂತ ಮಹಾಶಯರನ್ನು ಕರೆದುಕೊಂಡು ಹೋಗಿ, ಮತ್ತೆ ಸುರಕ್ಷಿತವಾಗಿ ಕರೆದುಕೊಂಡು ಬರುತ್ತಾಳೆ. ಅನುಮಾನ ಬೇಡ’ ಎಂದಳು.
ನುಂಗಲಾರದ ತುತ್ತು ನುಂಗಿ ಕಂಚುಕಿಯು ‘… ತಮ್ಮ ಅಭಿರುಚಿಯು ಹಾಗೆ ಇರುವುದಾದರೆ…’ ಎಂದನು.
‘ಇದೊಂದು ಒಳ್ಳೆಯ ಅವಕಾಶ’ ಎಂದು ಚಿತ್ರಕನಿಗೆ ಅನ್ನಿಸಿತು. ಅವನು ಮತ್ತೆ ರಾಜಕುಮಾರಿಯ ಕಡೆಗೆ ದೃಷ್ಟಿ ಹರಿಸಲಿಲ್ಲ- ಆಕೆಯ ಕಣ್ಣುಗಳಲ್ಲಿ ಅದಾವ ಸಮ್ಮೋಹನ ಶಕ್ತಿ ಇದೆಯೋ ಏನೋ, ಮತ್ತೆ ನೋಡಿದರೆ ಏನೇನು ಬದಲಾವಣೆಗಳಾಗುತ್ತವೆಯೋ! ಅವನು ಸುಗೋಪಾಳನ್ನು ಹಿಂಬಾಲಿಸುತ್ತ ಉಶೀರ ಗೃಹದಿಂದ ಹೊರಗೆ ಹೊರಟನು.
ಅರಮನೆಯ ತೋರಣದ್ವಾರದ ಮುಂಭಾಗದಿಂದ ಹೊರಟ ರಸ್ತೆಯು ದಕ್ಷಿಣಕ್ಕೆ ಸ್ವಲ್ಪ ದೂರ ಹೋದ ಮೇಲೆ ಇಳಿಜಾರಿನಲ್ಲಿ ಸಾಗುತ್ತದೆ. ಅಲ್ಲಿಂದ ಸ್ವಲ್ಪ ದೂರ ಹೋದ ಮೇಲೆ ಒಂದು ತಿರುವು ಸಿಗುತ್ತದೆ. ತಿರುವಿನಿಂದ ಮತ್ತೆ ಇಳಿಜಾರು ರಸ್ತೆ. ಈ ತಿರುವಿನ ಮೇಲ್ಭಾಗದಲ್ಲಿ ಸುಗೋಪಾಳ ಕುಟೀರ. ಇಲ್ಲಿಂದ ಮುಂದೆ ಅರಮನೆಯ ಅಧಿಕಾರಿಗಳ ಹಾಗೂ ನಾಗರಿಕರ ಗೃಹಗಳು ಆರಂಭವಾಗುತ್ತವೆ.
ಸುಗೋಪಾಳ ಕುಟೀರವು ಚಿಕ್ಕಿದಾಗಿದ್ದರೂ ಅಂದವಾಗಿತ್ತು. ಪರಿಸರ ಪರಿಶುದ್ಧ. ನಾಲ್ಕೂ ಕಡೆ ಹೂವಿನ ತೋಟ. ಸುಗೋಪಾಳ ಪತಿ ಹೂವಾಡಿಗ ಮನೆಯಲ್ಲಿಯೇ ಇದ್ದನು. ಸುಗೋಪಾ ಬಂದುದನ್ನು ನೋಡಿ ಅವನು ಹೂ- ಹಾರಗಳನ್ನು ತೆಗೆದುಕೊಂಡು ಹೊರಗೆ ಹೊರಟನು. ಪೇಟೆಯಲ್ಲಿ ಹೂಹಾರಗಳನ್ನು ಮಾರಿ ಬಂದ ಹಣವನ್ನು ತೆಗೆದುಕೊಂಡು ಯಾವುದಾದರೂ ಮದಿರಾಲಯಕ್ಕೆ ಹೋಗುವನು. ಅವನೊಬ್ಬ ಮೌನಿ. ಹೆಚ್ಚಿಗೆ ಮಾತನಾಡುವ ಸ್ವಭಾವದವನಲ್ಲ. ತನ್ನಷ್ಟಕ್ಕೆ ತಾನು ಹೂದೋಟದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಹೂ ಮಾಲೆ ಕಟ್ಟುತ್ತಾನೆ. ಮಾರಾಟ ಮಾಡುತ್ತಾನೆ. ಮದಿರಾ ಸೇವನೆ ಮಾಡುತ್ತಾನೆ. ಯಾರೊಂದಿಗೂ ಬೆರೆಯುವುದಿಲ್ಲ.
ಸುಗೋಪಾ ಚಿತ್ರಕನನ್ನು ತನ್ನ ತಾಯಿಯ ಹತ್ತಿರ ಕರೆದುಕೊಂಡು ಹೋದಳು. ಸ್ವಲ್ಪ ಮಂದ ಬೆಳಕಿನ ಕೊಠಡಿಯಲ್ಲಿ ಮಂಚದ ಮೇಲೆ ಮಲಗಿ ಪೃಥಾ ನಿದ್ರಿಸುತ್ತಿದ್ದಳು. ಸ್ನಾನ ಮಾಡಿಸಿದ ಶುಭ್ರ ಶರೀರ, ಬೆರಳುಗಳಲ್ಲಿ ಉಗುರು ತೆಗೆದು, ತಲೆಗೆ ಎಣ್ಣೆ ಹಚ್ಚಲಾಗಿತ್ತು. ಆದರೆ ಗಂಟುಗಂಟಾಗಿದ್ದ ಕೂದಲಿನ ತಾಮ್ರದ ಬಣ್ಣ ಹಾಗೆಯೇ ಇತ್ತು. ಮುಖ ಹಾಗೂ ದೇಹದ ಮೇಲಿನ ಚರ್ಮ, ಬಹುಕಾಲದ ಬೆಳಕಿನ ಅಭಾವದಿಂದ, ಹಸಿರುಬಣ್ಣಕ್ಕೆ ತಿರುಗಿತ್ತು.
ಎನ್. ಶಿವರಾಮಯ್ಯ (ನೇನಂಶಿ)