ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 11

ಹಿಂದಿನ ಸಂಚಿಕೆಯಿಂದ ಮುಂದುವರೆದಿದೇ…

ನಾರುಬಟ್ಟೆ ಧರಿಸಿದರೂ ಸುಂದರ ಯುವತಿಯು ಮತ್ತಷ್ಟು ಅಂದವಾಗಿ ಕಾಣುತ್ತಾಳೆ ಎಂದು ಕವಿ ಕಾಳಿದಾಸ ಹೇಳುತ್ತಾನೆ. ಇರಬಹುದು. ನಾವು ಎಂದೂ ಅದನ್ನು ಪರೀಕ್ಷಿಸಿ ನೋಡಿಲ್ಲ. ಆದರೆ ಯೋಧರ ವೇಷ ಧರಿಸಿದ ರೂಪಸಿಯ ರೂಪ ಅಧಿಕವಾಗುತ್ತದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಚೆನ್ನಾಗಿ ಕಾಣಬಹುದು. ಆದರೆ ಹೆಚ್ಚು ಸುಂದರವಾಗಿ ಕಾಣುವುದಿಲ್ಲ. ಆದರೆ ನನ್ನದೊಂದು ಮಾತು. ಕುಮಾರಿ ರಟ್ಟಾಳ ಹಾಗೆ ತರುಣಿಯೂ ಸುಂದರಿಯೂ ಆದವಳು, ಹದಿನೆಂಟು ವರ್ಷ ವಯಸ್ಸಿನವಳು, ತನ್ನ ತಲೆಗೂದಲನ್ನು ಕುಂದಪುಷ್ಪದ ಮೊಗ್ಗುಗಳಿಂದ ಅಲಂಕರಿಸಿ ಕೊಳ್ಳಲಿ, ಲೋಧ್ರರೇಣುಗಳಿಂದ ಲೇಪನ ಮಾಡಿಕೊಂಡು ತನ್ನ ಮುಖ ಥಳಥಳ ಹೊಳೆಯುವಂತೆ ಮಾಡಿಕೊಳ್ಳಲಿ ಮುಡಿಯಲ್ಲಿ ಕುರವಕವನ್ನು ಮುಡಿದಿರಲಿ, ಕಿವಿಗೆ ಶಿರೀಶಪುಷ್ಪವನ್ನು ಸಿಕ್ಕಿಸಿಕೊಳ್ಳಲಿ, ಹೃದಯ ಸ್ಪಂದನದ ತಾಳಕ್ಕೆ ಯೂಥಿಕಾ- ಕಂಚುಕವು ನಾಟ್ಯವಾಡುತ್ತಿರಲಿ, ನಡುವಿಗೆ ಬಿಗಿದಿರುವ ಕರ್ಣಿಕಾಪುಷ್ಪದ ಕಾಂಚೀದಾಮವು ಮೈಮರೆಯುವಂತೆ ಮಾಡಲಿ, ಹೀಗಿರುವಲ್ಲಿ ಲೋಭಿ ಪುರುಷರ ಮಾತಿರಲಿ ಅನಸೂಯೆಯರಾದ ಸಖಿಯರೂ ಕೂಡ ಮತ್ತೆ ಮತ್ತೆ ಅವಳ ರೂಪವನ್ನು ನೋಡಿ ಬೆರಗಾಗುತ್ತಾರೆ.

ಅದೇ ರೀತಿ ಪುಷ್ಪಾಭರಣ ಭೂಷಿತಳಾದ ರಟ್ಟಾಳನ್ನು ಗೆಳತಿ ಸುಗೋಪಾ ಬೆರಗುಗಣ್ಣುಗಳಿಂದ ನೋಡುತ್ತಿದ್ದಾಳೆ. ಇಬ್ಬರೂ ಗೆಳತಿಯರಲ್ಲಿ ಸಲಿಗೆ ಹೆಚ್ಚು. ಇಬ್ಬರೂ ಬಾಲ್ಯದಿಂದಲೂ ಆಟದ ಗೆಳತಿಯರು. ತಾರುಣ್ಯದಲ್ಲಿ ಅದೇ ಸ್ನೇಹವು ಮತ್ತಷ್ಟು ಗಾಢವಾಗಿ ಬೆಳೆದಿದೆ. ಸುಗೋಪಾಳಿಗೂ ಗಂಡ ಸಂಸಾರ ಎಲ್ಲವೂ ಇದ್ದರೂ, ಅವಳ ಜೀವನ ರಟ್ಟಾಳನ್ನು ಕೇಂದ್ರವನ್ನಾಗಿಟ್ಟುಕೊಂಡು ಸುತ್ತುತ್ತಿದೆ ಅದೇ ರೀತಿ ವಿಶಾಲ ರಾಜ್ಯದ ಅಂತಃಪುರದಲ್ಲಿ ಏಕಾಂಗಿಯಾಗಿರುವ ಕುಮಾರಿ ರಟ್ಟಾ ತನ್ನ ಬಾಲ್ಯ ಸ್ನೇಹಿತೆಯನ್ನು ತನ್ನ ಆತ್ಮೀಯಗಳನ್ನಾಗಿ ಮಾಡಿಕೊಂಡಿದ್ದಾಳೆ.

ಆದರೂ ರಾಜ ಕನ್ಯೆಯ ಜೊತೆ ಪ್ರಪಾಪಾಲಿಕೆಯ ಒಡನಾಟ ವಿಸ್ಮಯಕರ ವಾಗಿ ಕಾಣಬಹುದು. ಇದರಲ್ಲಿ ಆಶ್ಚರ್ಯ ಪಡುವಂಥದೇನಿದೆ? ರಾಜ ರಾಜರಲ್ಲಿ ಪ್ರೀತಿ ಹುಟ್ಟುತ್ತದೆಯೆ? ರಾಜಕುಮಾರಿಯ ಜೊತೆ ರಾಜಕುಮಾರಿಯ ಒಲವು ಸಾಧ್ಯವೇ? ಆದರೂ ಆಗಬಹುದು. ಆದರೆ ಅದು ಅಪರೂಪ. ವಯಸ್ಸಿನಲ್ಲಿ ತಾರತಮ್ಯವಿದ್ದಲ್ಲಿ ಸಲಿಗೆ ಉಂಟಾಗುತ್ತದೆ. ಗಿರಿನಿರ್ಝರದ ನೀರು ಶಿಖರದ ಮೇಲಿಂದ ಹಳ್ಳದ ಕಡೆಗೆ ಹರಿಯುತ್ತದೆ. ಹೊಗೆಯು ಕೆಳಗಿನಿಂದ ಮೇಲಕ್ಕೆ ಆಕಾಶದ ಕಡೆಗೆ ಏರುತ್ತದೆ. ಇದು ವಾಸ್ತವಿಕವಾದುದು. ಅದೂ ಅಲ್ಲದೆ ರಟ್ಟಾಳ ಧಮನಿಯ ಹೂಣ ರಕ್ತವು ಶ್ರೇಷ್ಠಕುಲದ ಭೇದ ಭಾವ ಮಾಡುವುದಿಲ್ಲ. ಹೂಣರು ಬರ್ಬರರೇ ಇರಬಹುದು. ಅವರು ಜಾತಿಕುಲಗಳ ಉಪಾಸಕರಲ್ಲ. ಅವರು ಶಕ್ತಿಯ ಉಪಾಸಕರು.

ರಟ್ಟಾ ಒಂದು ಹಿಡಿಯಷ್ಟು ಮಲ್ಲಿಗೆ ಹೂವನ್ನು ರತ್ನ ಕಂಬಳಿಯ ಮೇಲಿಂದ ತೆಗೆದುಕೊಂಡು ಆಘ್ರಾಣಿಸಿ, ಚಂದ್ರನ ಕಡೆಗೆ ನೋಡಿ ‘ವಸಂತ ಋತು ಇನ್ನೇನು ಮುಗಿಯುತ್ತ ಬಂದಿತು. ಈ ಸಲ ಹೂವೂ ಕೂಡ ಕಡಿಮೆಯೇ, ಸುಗೋಪಾ, ಈಗ ನೀನು ಏನು ಮಾಡುವೆ!’ ಎಂದು ಕೇಳಿದಳು.

ರಟ್ಟಾಳ ಎಡ ಕಿವಿಯಿಂದ ಶಿರೀಶಪುಷ್ಪದ ಝಮುಕಿಯು ಕಳಚಿ ಬಿದ್ದು ಹೋಗಿತ್ತು. ಸುಗೋಪಾ ಮತ್ತೆ ಅದನ್ನು ಕಿವಿಗೆ ತೊಡಿಸಿದಳು. ರಟ್ಟಾಳ ಕೋಮಲವಾದ ಹಣೆಯ ಮೇಲೆ ಒಂದೆರಡು ಗುಂಗುರು ಕೂದಲು ಹಾರಾಡುತ್ತಿತ್ತು. ಅದನ್ನು ಹಿಂದಕ್ಕೆ ಸರಿಸಿ ‘ಹೂಗಳು ಕಡಿಮೆಯಾಗಿ ಇಲ್ಲವಾದರೆ ಆಗ ನಾನು ಶ್ರೀಗಂಧದಿಂದ ನಿನ್ನನ್ನು ಸಿಂಗರಿಸುವೆ. ತಲೆಗೂದಲಿಗೆ ಸ್ನಾನದ ಎಣ್ಣೆಯನ್ನು ಬಳಿದು ಕರ್ಪೂರ ಸುವಾಸಿನವಾದ ನೀರಿನಿಂದ ನಿನಗೆ ಸ್ನಾನ ಮಾಡಿಸುತ್ತೇನೆ. ನಿನ್ನ ಹಣೆಗೆ ಚಂದನದ ತಿಲಕ ಇಡುತ್ತೇನೆ. ಎದೆಯ ಮೇಲೆ ಚಂದನದ ಪತ್ರಲೇಖೆಯ ಚಿತ್ರವನ್ನೂ ಬಿಡಿಸುತ್ತೇನೆ. ಒದ್ದೆಯಾದ ಲಾಮಂಚದ ಬೇರಿನಿಂದ ಮಾಡಿದ ಬೀಸಣಿಗೆಯಿಂದ ನಿನಗೆ ಗಾಳಿ ಹಾಕುತ್ತೇನೆ. ಆಗಲೂ ನಿನ್ನ ದೇಹದ ತಾಪ ಶಮನವಾಗುವುದಿಲ್ಲವೆ?’ ಎಂದು ನಗುತ್ತ ಹೇಳಿದಳು.

ನಗುವಿನ ಗೂಢಾರ್ಥ ರಟ್ಟಾಳಿಗೆ ಅರ್ಥವಾಯಿತು. ಒಂದು ಹಿಡಿ ಹೂವನ್ನು ಸುಗೋಪಾಳ ಮೇಲೆ ಚೆಲ್ಲಿ ‘ನಿನ್ನ ಬೀಸಣಿಗೆಯ ಗಾಳಿಯಿಂದ ನನ್ನ ದೇಹದ ತಾಪ ಹೇಗೆ ತಾನೆ ಶಮನವಾದೀತು?’ ಎಂದು ಹೇಳಿದಳು.

ಅದಕ್ಕೆ ಸುಗೋಪಾ ‘ಯಾವನ ಬೀಸಣಿಗೆಯ ಗಾಳಿಯಿಂದ ನಿನ್ನ ಅಂಗ ಶೀತಲವಾಗುತ್ತಿತ್ತೋ ಅಂಥವನು ಬಂದಿದ್ದನಲ್ಲವೆ! ಆಗ ನೀನು ಅವನನ್ನು ಹಾಸ್ಯ ಮಾಡಿ ಓಡಿಸಿ ಬಿಟ್ಟಿಯಲ್ಲ!’ ಎಂದು ವ್ಯಂಗ್ಯವಾಡಿದಳು.

ರಟ್ಟಾ ಕ್ಷಣ ಕಾಲ ಸುಮ್ಮನಿದ್ದು, ಆ ಮೇಲೆ ನಕ್ಕು ‘ಸುಗೋಪಾ, ನಿಜ ಹೇಳು ನೋಡೋಣ, ಗುರ್ಜರ ರಾಜಕುಮಾರನ ಕೊರಳಿಗೆ ನಾನು ವರಣ ಮಾಲೆಯನ್ನು ಹಾಕಿದ್ದರೆ ನಿನಗೆ ಸಂತೋಷವಾಗುತ್ತಿತ್ತೆ?’ ಎಂದು ಕೇಳಿದಳು.

ಈ ಹಿಂದೆ ನಡೆದ ಕೆಲವು ಸಂಗತಿಗಳನ್ನು ಈ ಸಂದರ್ಭದಲ್ಲಿ ಹೇಳಬೇಕಾಗುತ್ತದೆ.

ಇತ್ತೀಚೆಗೆ ರಟ್ಟ ಧರ್ಮಾದಿತ್ಯನು ಐಹಿಕ ವಿಷಯಗಳ ಕಡೆಗೆ ಆಸಕ್ತಿ ತೋರುತ್ತಿಲ್ಲ. ರಾಜಕಾರ್ಯದಲ್ಲಿಯೂ ಹೆಚ್ಚಿಗೆ ಕೈಹಾಕುತ್ತಿಲ್ಲ. ಆದರೆ ಕೆಲವು ತಿಂಗಳುಗಳ ಹಿಂದೆ ಒಬ್ಬನೇ ಕುಳಿತು ಧರ್ಮಜಿಜ್ಞಾಸೆಯಲ್ಲಿ ತೊಡಗಿರುವಾಗ, ಇದ್ದಕ್ಕಿದ್ದ ಹಾಗೆ ವಯಸ್ಸಿಗೆ ಬಂದ ಮಗಳ ನೆನಪು ಬಂದು ಉದ್ವೇಗಕ್ಕೆ ಒಳಗಾದನು.

ಇಪ್ಪತ್ತೈದು ವರ್ಷಗಳ ಹಿಂದೆ ರಟ್ಟ ಈ ರಾಜ್ಯವನ್ನು ಗೆದ್ದಾಗ ಅವನ ಜೊತೆಗೆ ಒಬ್ಬ ಸರಕಾರಿ ಯೋಧನಿದ್ದನು. ಅವನ ಹೆಸರು ತುಷ್‍ಫಾನ್. ತುಷ್‍ಫಾನನು ತನ್ನ ಶೌರ್ಯ ಸಾಹಸಗಳಿಂದ ರಟ್ಟನಿಗೆ ಬಹುವಾಗಿ ಸಹಾಯಮಾಡಿದ್ದನು. ಇವನು ಹಿಂದಿನ ರಾಜನನ್ನು ಹಿಡಿದು ಅವನ ಶಿರಚ್ಛೇದನ ಮಾಡಿದ್ದನು. ರಾಜ್ಯ ತನ್ನ ಕೈವಶವಾದ ಮೇಲೆ ಸಂತೋಷಗೊಂಡ ರಟ್ಟನು ರಾಜ್ಯದ ಸೀಮಾಂತ ಪ್ರದೇಶದಲ್ಲಿರುವ ಚಷ್ಟನ ಎಂಬ ಹೆಸರಿನ ಗಿರಿದುರ್ಗವನ್ನು ತುಷ್‍ಫಾನನಿಗೆ ಕಾಣಿಕೆಯಾಗಿ ಕೊಟ್ಟಿದ್ದನು. ಪದಗೌರವದ ದೃಷ್ಟಿಯಿಂದ ರಾಜನ ನಂತರದ ಸ್ಥಾನ ತುಷ್‍ಫಾನನದಾಗಿತ್ತು

ಇದಾದ ಮೇಲೆ ಅನೇಕ ವರ್ಷಗಳು ಕಳೆದವು. ತುಷ್‍ಫಾನ ತೀರಿಕೊಂಡನು. ಅವನ ಮಗ ‘ಕಿರಾತ’ ಈಗ ಚಷ್ಟನ ದುರ್ಗದ ಅಧಿಪತಿ. ಕಿರಾತ ಸುಲಕ್ಷಣ ಯುವಕ. ಆದರೂ ಕುಟಿಲ ಬುದ್ಧಿ ಹಾಗೂ ನಿಷ್ಠುರತೆಯಿಂದ ಅವನು ಕುಖ್ಯಾತನಾಗಿದ್ದಾನೆ. ಹೂಣ ರಕ್ತ ಅವನ ದೇಹದ ತುಂಬ ಹರಿಯುತ್ತಿದೆ ಎಂದು ಜನರು ಹೇಳುತ್ತಾರೆ.

ಇದೇ ಕಿರಾತನು ಒಂದು ಸಲ ನವಯೌವನ ಸಂಪನ್ನೆಯೂ ತೇಜಸ್ವಿನಿಯೂ ಆದ ರಟ್ಟಾಳನ್ನು ನೋಡಿ ಮೋಹಿತನಾದ. ಬೇರೆ ಯಾರಾದರೂ ಆಗಿದ್ದರೆ ತನ್ನ ದಾಷ್ಟ್ರ್ಯಕ್ಕೆ ಹೆದರಿ ಓಡಿ ಹೋಗುತ್ತಿದ್ದನು. ಆದರೆ ಕಿರಾತನ ತನ್ನ ದುರ್ಗವನ್ನು ಬಿಟ್ಟು ಕಪೋತಕೂಟಕ್ಕೆ ಒಂದು ಅಲ್ಲಿಯೇ ನೆಲಸಿದನು. ರಾಜಸಭೆಯಲ್ಲಿ ನಿತ್ಯವೂ ಅಡ್ಡಾಡುತ್ತಿರುವಾಗ ಕುಮಾರಿಯನ್ನು ಹತ್ತಿರದಿಂದ ನೋಡುತ್ತಿದ್ದನು. ಕಿರಾತನು ಮೃದು ಮಧುರ ಮಾತುಗಳಿಗೆ ಹೆಸರಾಗಿದ್ದಂತೆ ಬೇಟೆಯೇ ಮೊದಲಾದ ಪುರುಷರಿಗೆ ಯೋಗ್ಯವಾದ ಕ್ರೀಡೆಗಳಲ್ಲಿಯೂ ನಿಪುಣನಾಗಿದ್ದನು ಬೇಟೆಗೆ ಹೋಗುವ ಸಮಯದಲ್ಲಿ ಕಿರಾತನು ರಟ್ಟಾಳ ಜೊತೆ ಜೊತೆ ಇರುತ್ತಿದ್ದನು.

ರಟ್ಟಾಳಿಗೆ ಅವನ ಮನೋಗತವನ್ನು ಅರಿಯಲು ಬಹಳ ಕಾಲ ಬೇಕಾಗ ಲಿಲ್ಲ. ಹೂಣ ಕನ್ಯೆಯು ಬಹಳ ದಿನಗಳಿಂದಲೂ ಅಂತಃಪುರದ ನಾಲ್ಕು ಗೋಡೆಗಳಿಂದ ಹೊರಬಂದು ಮುಕ್ತ ವಾತಾವರಣದಲ್ಲಿ ವಿಹರಿಸುವುದು ಅವಳಿಗೆ ಅಭ್ಯಾಸವಾಗಿತ್ತು. ಅವಳು ಎಲ್ಲರಲ್ಲಿಯೂ ಮುಚ್ಚು ಮರೆ ಮಾಡದೆ ನಿರ್ದಾಕ್ಷಿಣ್ಯವಾಗಿ ವ್ಯವಹರಿಸುತ್ತಿದ್ದಳು. ಬೇಟೆಯಾಡುವಾಗ ಅವಳು ಕಿರಾತನ ಗುರಿತಪ್ಪದ ಕೈಚಳಕವನ್ನು ಕಂಡು ಮನಸಾರೆ ಹೊಗಳುತ್ತಿದ್ದಳು. ಉದ್ಯಾನದಲ್ಲಿ ಅವನ ಸರಸ ಚಾಟೂಕ್ತಿಗಳನ್ನು ಕೇಳಿ ತಾನೂ ವಿನೋದರಾಗಿ ಮಾತನಾಡುತ್ತಿದ್ದಳು. ಆದರೆ ಅವಳ ಪ್ರಶಂಸಾದೃಷ್ಟಿಯು ಮೋಹಮುಕ್ತವಾಗಿರುತ್ತಿತ್ತು. ಅವನೊಡನೆ ನಗುವಾಗ ಅವಳ ತುಟಿಗಳು ರಕ್ತರಂಜಿತವಾಗುತ್ತಿದ್ದರೂ ಅನುರಕ್ತರಂಜಿತವಾಗುತ್ತಿರಲಿಲ್ಲ. ಆದರೆ ಕಿರಾತನ ಲೆಕ್ಕಾಚಾರವೇ ಬೇರೆ. ರಟ್ಟಾ ತನ್ನನ್ನು ಮನಸ್ಸಿನಲ್ಲಿ ಮೆಚ್ಚಿಕೊಡಿದ್ದಾಳೆಂದೇ ಭಾವಿಸಿದ್ದನು. ಅವಳಲ್ಲಿಟ್ಟಿದ್ದ ಪ್ರೀತಿಯು ಮತ್ತಷ್ಟು ಗಾಢವಾಗುತ್ತ ಹೋಯಿತು.

ಮುಂದುವರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *