ಹಿಂದಿನ ಸಂಚಿಕೆಯಿಂದ…
ಪೃಥಾ ಹಾಸಿಗೆಯಲ್ಲಿ ಅಲುಗಾಡದೆ ಮಲಗಿದ್ದಳು. ಗುಳಿ ಬಿದ್ದ ಕಣ್ಣುಗಳು. ಊರ್ಧ್ವದೃಷ್ಟಿ. ಚಿತ್ರಕನು ಸದ್ದು ಮಾಡದೆ ಆಕೆಯ ಹಾಸಿಗೆಯ ಬಳಿಗೆ ಬಂದು ನಿಂತುಕೊಂಡನು. ಪೃಥೆಯ ದೃಷ್ಟಿ ಅವನ ಕಡೆ ಹೊರಳಿತು. ಬಹಳ ಹೊತ್ತು ಅವನನ್ನೇ ದಿಟ್ಟಿಸಿ ನೋಡಿ ಕ್ಷೀಣ ಧ್ವನಿಯಲ್ಲಿ ‘ನೀನೇ ಏನು ಅವನು?’ ಎಂದು ಕೇಳಿದನು.
ಸುಗೋಪಾ ಹಾಸಿಗೆಯ ಪಕ್ಕದಲ್ಲಿ ಮಂಡಿಯೂರಿ ಕುಳಿದು ಆಕೆಯ ಕೆನ್ನೆಯ ಮೇಲೆ ಕೈಯಿಟ್ಟು ಮೃದು ಮಧುರ ಧ್ವನಿಯಲ್ಲಿ ‘ಹೌದಮ್ಮಾ, ಇವರೇ ಅವನು’ ಎಂದು ಹೇಳಿದಳು.
ಇನ್ನೂ ಸ್ವಲ್ಪ ಹೊತ್ತು ಚಿತ್ರಕನನ್ನು ನೋಡಿದ ಬಳಿಕ ಪೃಥೆಯು ‘ನೀವು ಹೂಣರಲ್ಲ- ಆರ್ಯರು…ಅಲ್ಲವೆ!’ ಎಂದಳು.
ಚಿತ್ರಕನು ನಗುತ್ತ ‘ಹೌದು. ನಾನು ಆರ್ಯ. ನಿಮ್ಮನ್ನು ಬಂದಿಯನ್ನಾಗಿಸಿ ಇಟ್ಟಿದ್ದ ಹೂಣನು ಈಗ ಸತ್ತಿದ್ದಾನೆ’ ಎಂದು ಹೇಳಿ ಸಂಕ್ಷೇಪವಾಗಿ ಗುಹನ ಮರಣದ ವಿವರಣೆ ನೀಡಿದನು.
ಅದನ್ನು ಕೇಳಿದ ಪೃಥಾ ‘ಈಗ ಅವನೇಕೆ ಬರುತ್ತಾನೆ. ನನ್ನ ಬಾಳೇ ಕೊನೆಗೊಳ್ಳುತ್ತಿದೆ’ ಎಂದಳು.
ಚಿತ್ರಕ ಆಕೆಯ ಹಾಸಿಗೆಯ ಬಳಿ ಕುಳಿತು ಸಾಂತ್ವನ ಹೇಳುವ ದನಿಯಲ್ಲಿ ‘ಹೀಗೀಕೆ ಅಂದುಕೊಳ್ಳುತ್ತೀರಿ. ನೀವು ಇನ್ನೆರಡು ದಿನಗಳಲ್ಲಿ
ಸುಧಾರಿಸಿಕೊಳ್ಳುತ್ತೀರಿ. ಗುಣಮುಖರಾಗುತ್ತೀರಿ. ನಿಮ್ಮ ಮಗಳಿದ್ದಾರೆ. ಆಕೆಯನ್ನು ನೋಡಿಕೊಂಡು ಸುಖವಾಗಿರಿ. ಹಿಂದೆ ನಡೆದುದೆಲ್ಲವನ್ನು ನೆನೆದು ಕೊರಗಬೇಡಿ. ಅದನ್ನೆಲ್ಲ ಮರೆತು ಸುಖವಾಗಿರಿ’ ಎಂದು ಹೇಳಿದನು.
ಪೃಥೆಯ ಮುಖದಲ್ಲಿ ಆಸೆಯಾಗಲೀ ಆನಂದವಾಗಲೀ ಲವಲೇಶವೂ ಕಂಡು ಬರಲಿಲ್ಲ. ಅವಳು ಬಹಳ ಹೊತ್ತು ಸುಮ್ಮನಿದ್ದು ‘ನಮ್ಮ ಕತೆ ಇರಲಿ. ನಿಮ್ಮ ಕತೆ ಹೇಳಿರಿ. ನೀವು ನಮ್ಮನ್ನು ಕಾಪಾಡಿದ್ದೀರಿ. ನಿಮ್ಮ ಕತೆಯನ್ನು ಕೇಳಲು ಮನಸ್ಸಾಗುತ್ತಿದೆ. ನಿಮ್ಮನ್ನು ನೋಡಿದರೆ ನೀವು ಅಪರಿಚಿತರೆಂದು ನನ್ನ ಮನಸ್ಸು ಹೇಳುತ್ತಿಲ್ಲ. ನಿಮ್ಮನ್ನು ಎಲ್ಲಿಯೋ ನೋಡಿದ್ದ ಹಾಗಿದೆ’ ಎಂದಳು.
ಚಿತ್ರಕನು ಸ್ವಲ್ಪ ನಕ್ಕು ‘ನನ್ನನ್ನು ಕತ್ತಲೆಯಲ್ಲಿ ನೋಡಿದ್ದೀರಿ. ಆ ರಾತ್ರಿ ಕತ್ತಲೆಕೋಣೆಯಲ್ಲಿ ನೋಡಿದ್ದಿರಲ್ಲ- ಅದು ಈಗ ನೆನಪಿಗೆ ಬರುತ್ತಿರಬಹುದು’ ಎಂದನು.
‘ಅದೇ ಇರಬಹುದು. ನಿಮ್ಮ ಹೆಸರೇನು?’
‘ಚಿತ್ರಕವರ್ಮಾ’
ಪೃಥಾ ನೀರವವಾಗಿ ಅವನ ಶರೀರದ ಮೇಲೆ ಆಗಿರುವ ಗಾಯದ ಗುರುತುಗಳ ಮೇಳೆ ಕಣ್ಣಾಡಿಸಿದಳು.
‘ತಂದೆ ತಾಯಿ ಜೀವಂತವಿದ್ದಾರೇನು?’
ತಾಯಿ ತಂದೆ! ಚಿತ್ರಕ ಒಳಗೊಳಗೇ ನಕ್ಕನು. ಅವರು ಇರುವುದೆಲ್ಲಿ ಬಂತು! ‘ಇಲ್ಲ, ಅವರು ಜೀವಂತವಾಗಿಲ್ಲ’ ಎಂದನು.
‘ನಿಮ್ಮದು ಇನ್ನೂ ಚಿಕ್ಕ ವಯಸ್ಸು ಎಂದು ಕಾಣುತ್ತದೆ-’
‘ತೀರಾ ಚಿಕ್ಕವನೇನಲ್ಲ. ಇಪ್ಪತೈದು ಇಪ್ಪತ್ತಾರು ವರ್ಷವಿರಬಹುದು.’
ಪೃಥಾ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಏನನ್ನೋ ಜ್ಞಾಪಿಸಿಕೊಂಡು, ಕೊನೆಗೆ ಮೆಲ್ಲಗೆ ‘ನಮ್ಮ ತಿಲಕನೂ ಬದುಕಿದ್ದರೆ ನಿನ್ನಷ್ಟೇ ವಯಸ್ಸಿನವನಾಗಿರುತ್ತಿದ್ದ’ ಎಂದು ಹೇಳಿದಳು.
‘ತಿಲಕ’ ಎಂದರೆ ಯಾರು?’
‘ಕುಮಾರ ತಿಲಕ ವರ್ಮಾ. ನಾನು ಅವನ ದಾದಿ ಆಗಿದ್ದೆ ಅವನೂ ಹಾಗೂ ಈ ಸುಗೋಪಾ ಒಂದೇ ದಿನ ಹುಟ್ಟಿದವರು. ನಾನು ನನ್ನ ಎದೆ ಹಾಲನ್ನು ಇಬ್ಬರಿಗೂ ಹಂಚಿ ಉಣಿಸಿದ್ದೇನೆ’. ಸುಗೋಪಾ ಮೆಲ್ಲಗೆ ತಗ್ಗಿದ ದನಿಯಲ್ಲಿ ‘ಅಮ್ಮಾ, ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಳ್ಳಬೇಡ’ ಎಂದಳು.
ಪೃಥಾ ಕಣ್ಣು ಮುಚ್ಚಿಕೊಂಡು ‘ಆ ಕತೆಯನ್ನು ಮರೆಯಲು ಸಾಧ್ಯವಿಲ್ಲ. ಆ ಮುದ್ದಿನ ಮಗು ಬೆಣ್ಣೆಯ ಮುದ್ದೆಯಂತಿತ್ತು. ಅಂಥ ಹಸುಗೂಸನ್ನು ಹೂಣರು ನಮ್ಮ ಮಡಿಲಿಂದ ಕಸಿದುಕೊಂಡು ಹೋದರು- ಆಮೇಲೆ- ಆಮೇಲೆ…’ ಎಂದು ಮಮ್ಮಲ ಮರುಗಿದಳು.
ಅಕಾಲ ವೃದ್ಧಳಾದ ಪೃಥೆಯ ಬಿಳಿಚಿಕೊಂಡಿದ್ದ ಕೆನ್ನೆಯ ಮೇಲೆ ಕಣ್ಣೀರು ಹನಿ ಹನಿಯಾಗಿ ಎದುರಿತು. ಸುಗೋಪಾ ವಿಷಣ್ಣವದನಳಾಗಿ ಚಿತ್ರಕನನ್ನು ನೋಡಿದಳು. ಅವನೂ ಆಕೆಯನ್ನು ನೋಡಿದನು.
ಚಿತ್ರಕನು ‘ಕ್ಷತ್ರಿಯ ಶಿಶುವೊಂದು ಕತ್ತಿಯ ಏಟಿಗೆ ಗುರಿಯಾಗಿ ಪ್ರಾಣ ಬಿಟ್ಟರೆ ಅದರಲ್ಲಿ ದುಃಖಪಡುವಂಥದು ಏನಿದೆ? ಬೆಲೆಗೆ ಕೊಂಡ ಗುಲಾಮರ ಹಾಗೆ ಬದುಕುವುದಕ್ಕಿಂತ ಅದೇ ಒಳ್ಳೆಯದಲ್ಲವೆ?’ ಎಂದು ಹೇಳಿದನು.
ಪೃಥಾ ನಿಸ್ತೇಜ ಧ್ವನಿಯಲ್ಲಿ ‘ರಾಜರ ಹಸುಗೂಸು’ ಕ್ರೀತದಾಸ’ ನಾಗದಿದ್ದುದು ಒಳ್ಳೆಯದೇ ಆಯಿತು. ಆದರೆ ಅರಮನೆಯ ಜೋಯಿಸರು ‘ಈ ಮಗು ರಾಜತಿಲಕವನ್ನು ಇಟ್ಟುಕೊಂಡೇ ಹುಟ್ಟಿದೆ ಇದು ಚಕ್ರವರ್ತಿಯಾಗುತ್ತದೆ’ ಎಂದು ಭವಿಷ್ಯ ನುಡಿದಿದ್ದರು. ಅಯ್ಯೋ, ಅದು ಆಗಲಿಲ್ಲವಲ್ಲ. ಅರಮನೆ ಜೋತಿಷಿಯವರ ಮಾತು ಸುಳ್ಳಾಯಿತಲ್ಲಾ!-’ ಎಂದು ಕೊರಗಿದಳು.
ಚಿತ್ರಕ ಮಂದಹಾಸ ಬೀರುತ್ತ ‘ರಾಜ ಜೋತಿಷಿಯವರ ಮಾತು ಸುಳ್ಳಾಯಿತೆಂದು ಇಟ್ಟುಕೊಳ್ಳೋಣ. ಆದರೆ ‘ರಾಜ ತಿಲಕ’ವನ್ನು ಇಟ್ಟುಕೊಂಡೇ ಮಗು ಹುಟ್ಟಿದೆ ಎಂದು ಹೇಳಿದರಲ್ಲಾ, ಅದರ ಅರ್ಥವೇನು?’ ಎಂದು ಕೇಳಿದನು.
ಪೃಥಾ ನಿಧಾನವಾಗಿ ‘ನಾನು ಮಗುವಿನ ಕಣ್ಣುಗಳನ್ನು ನೋಡುತ್ತಿದ್ದೆನಲ್ಲ! ಆ ಮಗುವಿನ ಹುಬ್ಬುಗಳ ನಡುವೆ ಹಣೆಯಲ್ಲಿ ಒಂದು ಮಚ್ಚೆ ಇತ್ತು. ಅದು ಹುಟ್ಟಿನಿಂದಲೇ ಬಂದದ್ದು. ಅದು ಬೇರೆ ಸಮಯಗಳಲ್ಲಿ ಅಷ್ಟಾಗಿ ಕಾಣುತ್ತಿರಲಿಲ್ಲ. ಅಳುವಾಗಲೋ ಇಲ್ಲ, ಮಗು ಕೋಪ ಮಾಡಿಕೊಂಡಾಗಲೋ ಆ ಮಚ್ಚೆ ರಕ್ತ ವರ್ಣಕ್ಕೆ ತಿರುಗುತ್ತಿತ್ತು. ಅದನ್ನು ನೋಡಿದರೆ ರಕ್ತ ಚಂದನದ ತಿಲಕದಂತೆ ಕಾಣುತ್ತಿತ್ತು. ಆದ್ದರಿಂದಲೇ ಮಗುವಿಗೆ ತಿಲಕ ವರ್ಮಾ’ ಎಂದು ನಾಮಕರಣ ಮಾಡಿದ್ದು’ ಎಂದಳು.
ಜೋರಾಗಿ ಗಾಳಿ ಬೀಸಿದಾಗ ಬೂದಿ ಮುಚ್ಚಿದ ಕೆಂಡವು ಹೆಚ್ಚು ಪ್ರಕಾಶಮಾನವಾಗಿ ಪ್ರಜ್ವಲಿಸುವ ಹಾಗೆ, ಚಿತ್ರಕನ ಭ್ರೂ ಮಧ್ಯದಲ್ಲಿದ್ದ ಮಚ್ಚೆಯು ರಕ್ತ ತಿಲಕದಂತೆ ಪ್ರಜ್ವಲಿಸ ತೊಡಗಿತು. ಅವನು ಕಣ್ಣರಳಿಸಿ ನೋಡಿ ‘ಏನು ಹೇಳಿದಿರಿ?’ ಎಂದು ಅಚ್ಚರಿಗೊಂಡು ಕೇಳಿದನು.
ಪೃಥಾ ಕಣ್ಣಿಗೆ ಕಣ್ಣು ಬೆರಸಿದಳು. ಚಿತ್ರಕನ ಮುಖವು ಆಕೆಯ ಮುಖದ ಮೇಲೆ ಬಾಗಿತ್ತು. ಆ ಮುಖದಲ್ಲಿ ಹುಬ್ಬಗಳ ನಡುವೆ ಕೆಂಪು ಹವಳದ ಹಾಗೆ ತಿಲಕವು ಹೊಳೆಯುತ್ತಿತ್ತು. ಪೃಥೆಯ ಕಣ್ಣುಗಳು ಬರುಬರುತ್ತ ಅರಳಿದವು. ನಂತರ ಆಕೆ ಕೀರಲು ಧ್ವನಿಯಲ್ಲಿ ‘ತಿಲಕ! ನಮ್ಮ ತಿಲಕವರ್ಮಾ! ಮಗೂ! ಮಗೂ!’ ಎಂದು ಕಿರುಚಿದಳು.
ಪೃಥಾ ತನ್ನ ಅಸ್ಥಿಪಂಜರದಂಥ ಎರಡು ಕೈಗಳಿಂದ ಅವನನ್ನು ಬರ ಸೆಳೆದು ಅಪ್ಪಿಕೊಳ್ಳಬೇಕೆಂದಿದ್ದಳು. ಆದರೆ ಆವೇಶದ ಭರದಲ್ಲಿ ಆಕೆಯ ದೇಹದ ಎಲ್ಲ ಶಕ್ತಿಯೂ ಉಡುಗಿ ಹೋಗಿತ್ತು. ಅವಳ ಕೈಗಳು ಚಿತ್ರಕನ ಭುಜದಿಂದ ಜಾರಿ ಕೆಳಗೆ ಬಿದ್ದವು. ಅವಳು ಮೃತಳಾದವಳಂತೆ ಕಣ್ಣು ಮುಚ್ಚಿ ಹಾಸಿಗೆಯ ಮೇಲೆ ಕುಸಿದಳು.
ಸುಗೋಪಾ ಅಳುವುದಕ್ಕೆ ಪ್ರಾರಂಭಿಸಿದಳು. ಚಿತ್ರಕನು ಪೃಥೆಯ ಎದೆಯ ಮೇಲೆ ಕೈಯಿಟ್ಟು ಪರೀಕ್ಷಿಸಿದ. ಎದೆಯ ಬಡಿತ ಕ್ಷೀಣವಾಗಿತ್ತು. ಅವನು ಸುಗೋಪಾಳನ್ನು ಕುರಿತು ‘ಇನ್ನೂ ಜೀವಂತವಾಗಿದ್ದಾಳೆ. ಆದಷ್ಟು ಬೇಗ ವೈದ್ಯರನ್ನು ಕರೆಸಿದರೆ ಒಳಿತು’ ಎಂದನು.
ಸುಗೋಪಾ ಎದ್ದು ಹೊರಗಡೆಗೆ ಓಡಿದಳು. ರಾಜ ವೈದ್ಯರು ರಟ್ಟಾಳ ಆದೇಶದ ಮೇರೆಗೆ ಚಿಕಿತ್ಸೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ವೈದ್ಯರ ಮನೆಯೂ ಸಮೀಪವೇ ಇದ್ದಿತು. ಕೆಲವೇ ನಿಮಿಷಗಳಲ್ಲಿ ಸುಗೋಪಾ ವೈದ್ಯರನ್ನು ಕರೆದುಕೊಂಡು ಬಂದಳು.
ನಾಡೀಪರೀಕ್ಷೆಯ ನಂತರ ವೈದ್ಯರು ಮುಖ ಸಪ್ಪಗೆ ಮಾಡಿಕೊಂಡರು. ಆದರೂ ವೈದ್ಯೋಪಚಾರ ನಡೆಸಿದರು.
ಎನ್. ಶಿವರಾಮಯ್ಯ (ನೇನಂಶಿ)