ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 30

ಹಿಂದಿನ ಸಂಚಿಕೆಯಿಂದ….

ಆ ರಾತ್ರಿ ಚಿತ್ರಕನು ಅರಮನೆಗೆ ಹಿಂದಿರುಗಿ ಹೋಗಲಿಲ್ಲ. ಅನುಮಾನಗೊಂಡ ಕಂಚುಕಿಯು ಗುಟ್ಟಾಗಿ ರಕ್ಷಕಭಟರನ್ನು ಕಳುಹಿಸಿದ್ದನು. ಅವರು ರಾತ್ರಿಯೆಲ್ಲಾ ಸುಗೋಪಾಳ ಕುಟೀರದ ಹೊರಗೆ ಕಾವಲು ಕಾಯುತ್ತಿದ್ದರು. ಮಧ್ಯರಾತ್ರಿಯ ಹೊತ್ತಿಗೆ ಪೃಥಾ ಪ್ರಜ್ಞಾಹೀನಳಾದಳು. ಚಿತ್ರಕನು ಆಕೆಯ ಹಾಸಿಗೆಯ ಬಳಿ ನಿಂತು, ಸುಗೋಪಾಳ ಹೆಗಲ ಮೇಲೆ ಕೈಯಿಟ್ಟು ‘ಸುಗೋಪಾ ನೀನು ನನ್ನ ಸೋದರಿ. ನಾವಿಬ್ಬರೂ ಒಬ್ಬ ತಾಯಿಯ ಹಾಲು ಕುಡಿದವರು’ ಎಂದು ಹೇಳಿದನು. ಸುಗೋಪಾ ಅಶ್ರುಪೂರಿತ ನಯನಳಾಗಿ ಚಿತ್ರಕನನ್ನು ನೋಡಿದಳು.

ಚಿತ್ರಕ- ಈ ದಿನ ನೀವು ಕೇಳಿದ ಈ ವಿಷಯವನ್ನು ಯಾರಿಗೂ ಹೇಳಬೇಡಿ ಹೇಳಿದರೆ ನನ್ನ ಜೀವನ ಸಂಶಯದ ಸುಳಿಯಲ್ಲಿ ಸಿಕ್ಕಿ ಬೀಳುತ್ತದೆ.

ಸುಗೋಪಾ- ಈಗ ನೀವು ಏನು ಮಾಡುವಿರಿ?

ಚಿತ್ರಕ- (ನಗುವ ಹಾಗೆ ನಟಿಸಿ ನಿರಾಶೆಯಿಂದ) ಎಲ್ಲಿಯಾದರೂ ಓಡಿ ಹೋಗೋಣ ಎನ್ನಿಸುತ್ತಿದೆ. ಆದರೆ ಈಗ- ಏನು ಮಾಡಬೇಕೆಂದು ತೋಚುತ್ತಿಲ್ಲ. ನೀವು ಈ ವಿಷಯವನ್ನು ಯಾರೊಡನೆಯೂ ಹೇಳಬೇಡಿ. ನಿಮ್ಮ ತಾಯಿ ತಪ್ಪು ಮಾಡುತ್ತಿರಬಹುದು. ರೋಗಿಗಳಲ್ಲಿ ಈ ರೀತಿಯ ಭ್ರಾಂತಿ ಅಸಂಭವವೇ ನಲ್ಲ-.

ಸುಗೋಪಾ- ಭ್ರಾಂತಿಯಲ್ಲ. ನೀವೇ ತಿಲಕ ವರ್ಮಾ ಎಂದು ನನ್ನ ಅಂತರಾತ್ಮ ಹೇಳುತ್ತಿದೆ.

‘ತಿಲಕ ವರ್ಮಾ! ಕೇಳಿದರೆ ಬಹಳ ವಿಚಿತ್ರ ವೆನಿಸುತ್ತದೆ. ‘ಆದರೆ ಇದು ಸತ್ಯವೇ (ನಿಜವೇ) ಆಗಿರಲಿ ಅಥವಾ ಮಿಥ್ಯೆಯೇ (ಸುಳ್ಳೇ) ಆಗಿರಲಿ, ನೀವು ಮಾತ್ರ ಈ ವಿಷಯವನ್ನು ಗುಟ್ಟಾಗಿಟ್ಟಿರಬೇಕು.’

‘ಹಾಗೆಯೇ ಆಗಲಿ, ಗುಟ್ಟಾಗಿಟ್ಟಿರುತ್ತೇನೆ’.

‘ಯಾರೊಡನೆಯೂ ಬಾಯಿ ಬಿಡಬಾರದು’

‘ಇಲ್ಲ.’

ಪೃಥೆಗೆ ಮತ್ತೆ ಪ್ರಜ್ಞೆ ಬರಲಿಲ್ಲ. ರಾತ್ರಿಯ ಕೊನೆ ಗಳಿಗೆಯಲ್ಲಿ ಆಕೆಯ ಪ್ರಾಣವಾಯು ಪಂಚಭೂತಗಳಲ್ಲಿ ಲೀನವಾಯಿತು.

ಪರಿಚ್ಛೇದ – 10

ಹೊಸ ಹಾದಿಯಲ್ಲಿ

ಯಾವುದೇ ಒಂದು ಸತ್ಯಾಂಶವು ವ್ಯಕ್ತಿಯ ಮುಂದೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದರೆ, ಆ ಸತ್ಯವು ಎಷ್ಟೇ ವಿಸ್ಮಯಕರವಾಗಿರಲಿ ಅಥವಾ ಊಹೆಗೆ ನಿಲುಕದಷ್ಟು ವಿಚಿತ್ರವಾಗಿಯೇ ಇರಲಿ, ಅದನ್ನು ನಂಬಲು ಹೆಚ್ಚು ಕಾಲ ಹಿಡಿಯುವುದಿಲ್ಲ. ಆದರೆ ಆ ಸತ್ಯವನ್ನು ಸುತ್ತಮುತ್ತಲಿನ ಪರಿಸರದಲ್ಲಿ ಸ್ಥಿರಪಡಿಸಿ ಇತರರಿಗೆ ನಂಬಿಕೆ ಬರುವ ಹಾಗೆ ಮನದಟ್ಟು ಮಾಡುವುದು ಒಂದೇ ಬಾರಿಗೆ ಸಾಧ್ಯವಿಲ್ಲದ
ಮಾತು.

ಪೃಥಾಳ ಬಾಯಿಂದ ಚಿತ್ರಕನು ತನ್ನ ಪರಿಚಯವನ್ನು ಕೇಳಿದಾಗ ಅವನ ಮನಸ್ಸಿಗೆ ಒಂದು ಕ್ಷಣವಾದರೂ ಸಂದೇಹವಾಗಲೀ ಅಪನಂಬಿಕೆಯಾಗಲೀ ಬರಲಿಲ್ಲ. ಅದಕ್ಕೆ ಬದಲಾಗಿ ಅವನ ಹಿಂದಿನ ಜೀವನದ ಎಲ್ಲಾ ಘಟನೆಗಳು, ಅವನ ದೇಹದ ಎಲ್ಲ ಭಾಗಗಳಲ್ಲಿ ಆಗಿರುವ ಕತ್ತಿ ಏಟಿನಿಂದಾದ ಗಾಯದ ಗುರುತುಗಳು. ಇವುಗಳಿಗೆ ಆಕೆಯ ಮಾತುಗಳಿಂದ ಪುಷ್ಟಿದೊರೆದಂತಾಯಿತು.
ದಿನನಿತ್ಯದ ಅಭ್ಯಾಸದಂತೆ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡ ಒಬ್ಬನ ಮುಖವು ಎಂದಿನAತಿರದೆ ಸಂಪೂರ್ಣ ಬದಲಾಗಿರುವುದನ್ನು ಕಂಡು ಆಶ್ಚರ್ಯಪಡುವ ಹಾಗೆ ಚಿತ್ರಕನೂ ಕೂಡ ಮೊದಲಲ್ಲಿ ತನ್ನ ಪೂರ್ವ ಕಥೆಯನ್ನು ಕೇಳಿ ಬೆಚ್ಚಿ ಬೆರಗಾದನು. ಆದರೆ ಹಾಗಾದುದು ಒಂದು ಕ್ಷಣ ಮಾತ್ರ. ಆದರೆ ಮರುಕ್ಷಣವೇ ಅವನು ದೃಢಮನಸ್ಸಿನಿಂದ ಅದನ್ನು ದಮನ ಮಾಡಿ, ಸಮಾಧಾನ ಮಾಡಿಕೊಂಡನು. ಅವನ ತಲೆಯಲ್ಲಿ ಸಾವಿರಾರು ಸಮಸ್ಯೆಗಳು ಕಾಣಿಸಿಕೊಂಡವು. ಆದರೆ ಪ್ರತ್ಯುತ್ಪನ್ನಮತಿಯೂ, ಯುದ್ಧಜೀವಿಯೂ ಆದ ಚಿತ್ರಕನು ಬಹಳ ಜಾಗರೂಕತೆಯಿಂದ ಅವುಗಳು ಪ್ರಬಲವಾಗುವುದಕ್ಕೆ ಮೊದಲೇ ನಿಗ್ರಹಿಸಿದನು. ಸಂಕಟಕಾಲದಲ್ಲಿ ಬುದ್ಧಿಭ್ರಂಶವಾದರೆ ಸರ್ವನಾಶವಲ್ಲವೆ!

ಹೀಗೆ ಹೊರಗೆ ಸಂಯಮ ತೋರ್ಪಡಿಸುತ್ತಿದ್ದರೂ ಒಳಗೊಳಗೇ ಒಂದು ವಿಚಿತ್ರವಾದ ಕ್ರಿಯೆ ಕೆಲಸ ಮಾಡುತ್ತಿತ್ತು. ಚಿತ್ರಕನು ಶೈಶವದಿಂದಲೂ ಒಂದು ವಿಚಿತ್ರವಾದ ವಾತಾವರಣದ ಮಧ್ಯೆ ಬೆಳೆದು ಬಂದನು. ಬದುಕಿ ಉಳಿಯುವುದಕ್ಕೋಸ್ಕರ ಅನೇಕ ಕಷ್ಟನಷ್ಟಗಳನ್ನು ಎದುರಿಸಬೇಕಾಯಿತು. ಇದರಿಂದ ಅವನಲ್ಲಿ ಒಂದು ವಿಶಿಷ್ಟವಾದ ವ್ಯಕ್ತಿತ್ವ ರೂಪುಗೊಂಡಿತು. ಇದರ ಫಲವಾಗಿ ಅವನಲ್ಲಿ ಕಠೋರತೆ, ಸ್ವಾರ್ಥಪರತೆ, ನೀತಿ ವಿಮುಖತೆ ಹಾಗೂ ಪರಿಸ್ಥಿತಿಯನ್ನು ತನಗೆ ಸರಿಹೊಂದುವಂತೆ ಮಾರ್ಪಡಿಸಿಕೊಳ್ಳುವುದು- ಇವೇ ಮುಂತಾದುವುಗಳು ವಿಕಾಸಗೊಂಡವು. ಇವುಗಳನ್ನು ನಾವು ಈ ಹಿಂದೆ ನೋಡಿದ್ದೇವೆ. ಈಗ ಪೃಥಾ ದೇವಿಯಿಂದ ತನ್ನ ಪರಿಚಯ ಕೇಳಿದಾಗಿನಿಂದ ಅವನ ಆಂತರ್ಯದಲ್ಲಿ ನಿಧಾನವಾಗಿ ಒಂದು ಪರಿವರ್ತನೆ ಕಂಡುಬರತೊಡಗಿತ್ತು. ಅವನ ರಕ್ತದ ಪ್ರಭಾವವೋ ಏನೋ ಇದು ಅವನಿಗೂ ಅರಿವಾಗುತ್ತಿಲ್ಲ. ಆತ್ಮಪರಿಚಯದ ಅಭಾವದಿಂದ ಇಷ್ಟು ದಿನ ಸುಪ್ತವಾಗಿದ್ದ ಅವನ ಸ್ವಭಾವಿಕ ಗುಣವು, ಸಂಪಾದಿಸಿದ ದುಷ್ಟಗುಣಗಳನ್ನು ಅಲಕ್ಷಿಸಿ, ನೂತನವಾಗಿ ರೂಪುಗೊಳ್ಳತೊಡಗಿತ್ತು.

ಪೃಥಾಳ ನಿಧನದ ಮರುದಿನ ಬೆಳಗ್ಗೆ ಚಿತ್ರಕನು ಅರಮನೆಗೆ ಬಂದಾಗ ಅವನು ದಣಿದಿರುವ ಹಾಗೆ ಕಾಣುತ್ತಿದ್ದ. ಸ್ವಲ್ಪ ಗಂಭೀರ ವದನನಾಗಿದ್ದ. ಅವನ ಅಂತರಾಳದಲ್ಲಿ ತೆಪ್ಪಗೆ ತಣ್ಣಗೆ ಮಲಗಿದ್ದ ಬುಭುಕ್ಷು ಸರ್ವವು ಎಚ್ಚರಗೊಂಡು ಹೆಡೆಬಿಚ್ಚಿರುವುದು ಯಾರಿಗೂ ಗೊತ್ತಾಗುತ್ತಿಲ್ಲ. ಸುತ್ತಲೂ ಬಿಸಿಲಿನಿಂದಾವೃತವಾದ ಅರಮನೆಯ ಪ್ರದೇಶ, ಸುಣ್ಣಬಣ್ಣಗಳಿಂದ ಕಂಗೊಳಿಸುತ್ತಿದ್ದ ಭವ್ಯಭವನಗಳು- ಇವುಗಳ ಮೇಲೆ ದೃಷ್ಟಿ ಹರಿಸಿದ ಚಿತ್ರಕನ ಮನಸ್ಸಿನಲ್ಲಿ, ‘ನನ್ನದು! ನನ್ನದು! ಇದೆಲ್ಲವೂ ನನ್ನದು!’ ಎಂಬ ಭಾವನೆ ಬೇರೂರಿತು.

ಆದರೆ, ಇದನ್ನು ಯಾರಿಗೂ ಹೇಳುವ ಹಾಗಿಲ್ಲ. ಹೇಳಿದರೆ ಜನ ನಗುತ್ತಾರೆ. ಹುಚ್ಚನೆಂದು ಅಪಹಾಸ್ಯ ಮಾಡುತ್ತಾರೆ. ಒಬ್ಬಳು ಸಾಕ್ಷಿಯಾಗಿದ್ದಳು. ಅವಳು ಸತ್ತಿದ್ದಾಳೆ. ಅವಳು ಬದುಕಿದ್ದರೂ ಅದರಿಂದ ಏನು ಪ್ರಯೋಜನವಾಗುತ್ತಿತ್ತು? ಆಕೆಯ ಮಾತನ್ನೂ ಯಾರೂ ನಂಬುತ್ತಿರಲಿಲ್ಲ. ಅಸಬಂದ್ಧ ಪ್ರಲಾಪವೆಂದು ಹೇಳಿ ಗೇಲಿ ಮಾಡುತ್ತಿದ್ದರು. ಅಥವಾ ನಂಬಿದ್ದರೂ ಅದರಿಂದ ಪರಿಸ್ಥಿತಿಯು ಮತ್ತಷ್ಟು ಹದಗೆಡುತ್ತಿತ್ತು. ಚಿತ್ರಕನು ಹೆಚ್ಚು ದಿನ ಬದುಕುತ್ತಿರಲಿಲ್ಲ. ಆದ್ದರಿಂದ ಇದೇ ಶ್ರೇಯಸ್ಕರವಾದುದು. ಸುಗೋಪಾ ಒಬ್ಬಳಿಗೆ ಗೊತ್ತಿದೆ. ಅದರಿಂದ ಅಪಾಯವೇನೂ ಇಲ್ಲ. ಸೋದರಿ ಸುಗೋಪಾ ಯಾರಿಗೂ ಹೇಳುವುದಿಲ್ಲವೆಂದು ಮಾತುಕೊಟ್ಟಿದ್ದಾಳೆ. ಕೆಲವು ದಿನ ಒಂಟಿಯಾಗಿ ಕುಳಿತು ಆಲೋಚನೆ ಮಾಡಲು ಅವಕಾಶ ಬೇಕಾಗಿದೆ. ಆಮೇಲೆ-

ಮುಂದುವರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *