ಹಿಂದಿನ ಸಂಚಿಕೆಯಿಂದ….
ಇತ್ತ ಲಕ್ಷ್ಮಣ ಕಂಚುಕಿಯು ಹಿಂದಿನ ದಿನ ರಾತ್ರಿ ಕೆಟ್ಟ ಯೋಚನೆಗಳಲ್ಲಿ ಮುಳುಗಿ ನಿದ್ದೆ ಹೋಗಿರಲಿಲ್ಲ. ಆದರೆ ಈ ದಿನ ಬೆಳಗ್ಗೆ ಚಿತ್ರಕ, ಪಲಾಯನ ಮಾಡುವ ಯಾವುದೇ ಪ್ರಯತ್ನ ಮಾಡದೆ, ತಾನಾಗಿಯೇ ಅರಮನೆಗೆ ಹಿಂದಿರುಗಿ ಬಂದಿರುವುದನ್ನು ಕಂಡು ಬಹಳ ಸಂತೋಷವಾಯಿತು. ಚತುರಾನನ ಕಂಚುಕಿಗೆ ಅನ್ನಿಸಿತು. ಅವನು ಈಗ ಇಮ್ಮಡಿ ಗೌರವದಿಂದ ಚಿತ್ರಕನ ಸೇವೆ ಶುಶ್ರೂಷೆಯಲ್ಲಿ ತೊಡಗಿದನು.
ಮಧ್ಯಾಹ್ನ ಊಟಮಾಡಿ ವಿಶ್ರಾಂತಿಗೆಂದು ಹಾಸಿಗೆಯ ಮೇಲೆ ಉರುಳಿಕೊಂಡಾಗ ಕಂಚುಕಿ ‘ಈ ದಿನ ತಾವು ಏಕೋ ಮೊದಲಿನಂತೆ ಹರ್ಷಚಿತ್ತರಾಗಿದ್ದಂತಿಲ್ಲ. ಚಿಂತೆಗೆ ಕಾರಣವಾದ ಯಾವುದಾದರೂ ಘಟನೆ ನಡೆಯಿತೇನು?’ ಎಂದು ಚಿತ್ರಕನನ್ನು ಪ್ರಶ್ನಿಸಿದನು.
ಚಿತ್ರಕ- ಹುಟ್ಟುಸಾವುಗಳು ಎಷ್ಟೊಂದು ಅನಿರೀಕ್ಷಿತವೆಂದು ಆಲೋಚಿಸುತ್ತಿದ್ದೆ. ಪೃಥಾ ಇಪ್ಪತೈದು ವರ್ಷ ಕತ್ತಲೆಯ ಕೂಪದಲ್ಲಿ ಸೆರೆಯಾಳಾಗಿ ಇದ್ದರೂ ಸಾಯಲಿಲ್ಲ. ಅದರಿಂದ ಬಿಡುಗಡೆ ಹೊಂದಿದಳು. ಸೇವೆ ಶುಶ್ರೂಷೆಗಳ ಅವಕಾಶ ಲಭ್ಯವಾಯಿತು. ಹೀಗಿದ್ದೂ ಈಗ ಆಕೆ ಸಾಯಬೇಕೆ! ವಿಚಿತ್ರವಲ್ಲವೆ?
ಕಂಚುಕಿ- ‘ನಿಜವಾಗಿಯೂ ಇದು ವಿಚಿತ್ರವೇ! ಮನುಷ್ಯನ ಭಾಗ್ಯದಲ್ಲಿ ಯಾವ ಯಾವಾಗ ಏನೇನು ಎಂದು ಬರೆದಿರುತ್ತದೆಯೋ ಯಾರಿಗೆ ತಾನೇ ಹೇಳಲು ಸಾಧ್ಯ? ಈ ದಿನ ರಾಜನಾಗಿದ್ದವನು, ನಾಳೆ ಅವನೇ ಭಿಕ್ಷುಕನಾಗಬಹುದು. ಈ ನನ್ನ ಐವತ್ತು ವರ್ಷ ವಯಸ್ಸಿನಲ್ಲಿ ಇಂಥವನ್ನು ಎಷ್ಟು ನೋಡಿದ್ದೇನೆಯೋ!’ ಎಂದು ಹೇಳಿ ನಿಟ್ಟುಸಿರು ಬಿಟ್ಟನು.
ಚಿತ್ರಕನು ಕಂಚುಕಿಯನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿ ‘ಮಹಾಶಯರೆ, ತಾವು ಎಷ್ಟು ಕಾಲದಿಂದ ಈ ಕೆಲಸ ಮಾಡುತ್ತಿದ್ದೀರಿ?’ ಎಂದು ಕೇಳಿದನು.
‘ಕಂಚುಕಿಯ ಕಾರ್ಯವನ್ನೇ? ಅದು ಪ್ರಾಯಃ ಇಪ್ಪತ್ತು ವರ್ಷಗಳಿಂದ ಎಂದು ಕಾಣುತ್ತದೆ. ನನಗಿಂತ ಮೊದಲು ನಮ್ಮ ತಂದೆಯವರು ಕಂಚುಕಿಯಾಗಿದ್ದರು -’ ಲಕ್ಷ್ಮಣನ ಧ್ವನಿ ಕ್ಷೀಣಿಸಿತು. ‘ಪರಕೀಯರ ದಾಳಿಯಾದಾಗ ಅವರ ಹತ್ಯೆಯಾಯಿತು. ಅನಂತರ ನೂತನ ರಾಜವಂಶವು ಸ್ಥಾಪಿತವಾಗಿ ಕೆಲ ವರ್ಷಗಳು ಕಳೆದವು. ಬರುಬರುತ್ತ ಈಗಿನ ಮಹಾರಾಜರು ಆರ್ಯಧರ್ಮದಲ್ಲಿ ಒಲವು ತೋರಿದರು. ಅವತ್ತಿನಿಂದಲೂ ನಾನು ಇದ್ದೇನೆ.’
‘ಹಿಂದಿದ್ದ ರಾಜರು ಏನಾದರು?’
‘ಈಗಿರುವ ಮಹಾರಾಜರು ಅವರನ್ನು ವಧೆ ಮಾಡಿದರೆಂದು ಕೇಳಿದ್ದೇನೆ.’
‘ಮತ್ತೆ, ರಾಣಿಯವರು?’
‘ಅವರು ವಿಷ ಸೇವಿಸಿ ದೇಹತ್ಯಾಗ ಮಾಡಿದರು. ಆಕೆಯನ್ನು ಮುಟ್ಟಲು ಯಾರಿಂದಲೂ ಸಾಧ್ಯವಾಗಲಿಲ್ಲ’
ಉದ್ವೇಗವನ್ನು ತಡೆದು ಹಂಗಿಸುವ ಧ್ವನಿಯಲ್ಲಿ ‘ರಾಜಕುಮಾರನೂ ಕೂಡ ನಿಶ್ಚಯವಾಗಿ ಸತ್ತಿರಬೇಕಲ್ಲವೆ?’ ಎಂದು ಕೇಳಿದನು.
‘ಬಹುಶಃ ಸತ್ತಿರಬೇಕು. ಆದರೆ ಅವನ ಮೃತದೇಹ ಮಾತ್ರ ಎಲ್ಲಿಯೂ ಪತ್ತೆಯಾಗಲಿಲ್ಲ’.
ಚಿತ್ರಕನು ಹೆಚ್ಚು ಪ್ರಶ್ನಿಸಲು ಹೋಗಲಿಲ್ಲ. ಆಲಸ್ಯದ ಕಾರಣ ಅವನಿಗೆ ಆಕಳಿಕೆ ಬರುತ್ತಿತ್ತು. ಒಂದೆರಡು ಬಾರಿ ಆಕಳಿಸಿ ಕಣ್ಣು ಮುಚ್ಚಿದನು. ದಿನವೆಲ್ಲ ನೀರಸವಾಗಿ ಕಳೆಯಿತು.
ಸಂಜೆಗೆ ಮೊದಲು ಚಿತ್ರಕನು ಹೆಗಲ ಮೇಲೆ ಉತ್ತರೀಯವನ್ನು ಹೊದೆದು ಭವನದಿಂದ ಹೊರಬಿದ್ದನು. ಕಂಚುಕಿ ಈ ದಿನ ಅವನ ಜೊತೆ ಹೋಗುವ ಪ್ರಯತ್ನ ಮಾಡಲಿಲ್ಲ. ಆದರೆ ‘ಅರಮನೆಯಿಂದ ಹೊರಗೆ ಓಡಾಡಿಕೊಂಡು ಬರುವ ಬಯಕೆಯೆ?’ ಎಂದು ಸುಮ್ಮನೆ ಕೇಳಿದನು.
ಚಿತ್ರಕ- ಇಲ್ಲ ಇಲ್ಲಿಯೇ ಸ್ವಲ್ಪ ಅಡ್ಡಾಡಿ ಬರುತ್ತೇನೆ. ಸೂರ್ಯಾಸ್ತವಾಗಿದ್ದಿತು. ಪ್ರಾಸಾದದ ಮೇಲಿನ ಗುಮ್ಮಟದ ಗೂಡುಗಳಲ್ಲಿ ಪಾರಿವಾಳಗಳು ಕಲಹ-ಕೂಜನ ಮಾಡುತ್ತ ರಾತ್ರಿಯ ವಿಶ್ರಾಂತಿಗಾಗಿ ಜಾಗ ಹುಡುಕುತ್ತಿದ್ದವು. ಬರುಬರುತ್ತ ಎಲ್ಲೆಲ್ಲು ಬೆಳಕು ಚೆಲ್ಲುತ್ತ ಚಂದ್ರೋದಯವಾಯಿತು.
ಅರಮನೆಯ ಪರಿಸರದಲ್ಲಿ ಜನಸಂಚಾರವಿಲ್ಲ. ಯಾವಾಗಲೋ ಒಮ್ಮೊಮ್ಮೆ ನಾಲ್ಕಾರು ಮಂದಿ ದಾಸ- ದಾಸಿಯರು ಒಂದು ಭವನದಿಂದ ಮತ್ತೊಂದು ಭವನಕ್ಕೆ ‘ಹೋಗಿ ಬಂದು’ ಮಾಡುತ್ತಿದ್ದರು. ಚಿತ್ರಕನು ಆರಾಮಾಗಿ ಅಲ್ಲಿ ಇಲ್ಲಿ ಅಡ್ಡಾಡುತ್ತ, ಕೊನೆಗೆ ಶಿಥಿಲವಾಗಿದ್ದ ಮೆಟ್ಟಿಲುಗಳನ್ನು ಏರಿ ಕೋಟೆಯ ಗೋಡೆಯ ಮೇಲೆ ಹೋಗಿ ನಿಂತನು.
ಬೆಳುದಿಂಗಳು ತನ್ನ ಬೆಳ್ಳಿಯ ಬೆಳಕನ್ನು ಕೋಟೆಯ ಮೇಲೆಲ್ಲಾ ಚೆಲ್ಲಿತ್ತು. ಆ ಕೋಟೆಯ ಗೋಡೆಯ ಮೇಲೆ ಅಶಾಂತ ಚಿತ್ತನಾದ ಚಿತ್ರಕನು ಅಡ್ಡಾಡುತ್ತ ಇದ್ದವನು ಏಕೋ ಏನೋ ಇದ್ದಕ್ಕಿದ್ದಂತೆ ನಿಂತು ಬಿಟ್ಟನು.
ಹತ್ತಿರದಲ್ಲಿಯೇ ಪ್ರಾಕಾರದ ಗೋಡೆಯ ಮೇಲೆ ಒಬ್ಬ ಹೆಂಗಸು ಕುಳಿತಿದ್ದಾಳೆ. ತಿಂಗಳ ಬೆಳಕಿನಲ್ಲಿ ಬಿಳಿಯ ಸೀರೆಯುಟ್ಟು ಮಹಾಶ್ವೇತೆಯಂತೆ ಕುಳಿತಿದ್ದಾಳೆ. ಅವಳು ರಟ್ಟಾ ಯಶೋಧರಾ ಎಂದು ಗುರುತಿಸಲು ತಡವಾಗಲಿಲ್ಲ.
ರಟ್ಟಾ ಅನ್ಯಮನಸ್ಕಳಾಗಿ ಚಂದ್ರನ ಕಡೆ ನೋಡುತ್ತಿದ್ದಾಳೆ. ಪ್ರಾಸಾದದ ಉಪ್ಪರಿಗೆಯ ಮೇಲೆ ಹೋಗದೆ ಯಾವ ಬಾಹ್ಯ ಆಕರ್ಷಣೆಗೆ ಒಳಗಾಗಿ ಒಬ್ಬಳೇ ಇಲ್ಲಿಗೆ ಬಂದು ಕುಳಿತಿದ್ದಾಳೆಂಬುದು ಅವಳಿಗೇ ಗೊತ್ತು. ಅಥವಾ ಗೊತ್ತಿಲ್ಲದೇ ಇರಬಹುದು. ಚಂದ್ರನನ್ನೇ ನೋಡುತ್ತ ತನ್ನ ಮನಸ್ಸಿನಲ್ಲಿ ಏನು ಯೋಚಿಸುತ್ತಿದ್ದಾಳೆ ಎಂಬುದು ಅವಳ ಜಾಗೃತ ಮನಸ್ಸಿಗೂ ತಿಳಿಯದೋ ಏನೋ!
ಚಿತ್ರಕನು ಸ್ತಬ್ಧನಾಗಿ ಒಂದು ಗಳಿಗೆ ಹಾಗೆಯೇ ನಿಂತನು. ಅವನ ಹಣೆಯಲ್ಲಿ ತಿಲಕವು ಪ್ರಜ್ವಲಿಸಿತ್ತು. ಕಾಯಿಸಿದ ಸೂಜಿಯ ಹಾಗೆ ಜ್ವಲಿಸುತ್ತಿರುವ ಅಸೂಯೆಯು ಅವನ ಹೃದಯವನ್ನು ಚುಚ್ಚಿ ನೋಯಿಸಿತು ‘ಈಕೆಯೇ ರಾಜ ನಂದಿನಿಯಾದ ರಟ್ಟಾ- ಈ ವಿಸ್ತಾರವಾದ ರಾಜ್ಯದ ಅಧೀಶ್ವರೀ! ಮತ್ತು ನಾನು-? ಒಬ್ಬ ಭಾಗ್ಯನ್ನರಸುತ್ತಿರುವ ಖಡ್ಗಜೀವಿ ಸೈನಿಕ-’
ತುಟಿ ಕಚ್ಚಿ ಚಿತ್ರಕನು ನಿಃಶಬ್ದವಾಗಿ ಹಿಂದಿರುಗಬೇಕೆನ್ನುವಷ್ಟರಲ್ಲಿ, ಹಿಂದಿನಿಂದ ಮೃದು ಮಧುರ ಧ್ವನಿಯಲ್ಲಿ ‘ಆರ್ಯಚಿತ್ರಕ ವರ್ಮಾ!’ ಎಂದು ಆಹ್ವಾನ ಬಂದಿತು.
ಚಿತ್ರಕನು ಹಿಂದಿರುಗಿದನು. ರಾಜಕುಮಾರಿಯ ಹತ್ತಿರಕ್ಕೆ ಹೋಗಿ ಕೈಮುಗಿದು ಅಭಿವಾದನ ಮಾಡಿದನು. ಗಂಭೀರ ಧ್ವನಿಯಲ್ಲಿ ‘ದೇವ ದುಹಿತೆಯವರು ಇಲ್ಲಿ ಇರುವುದು ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಈ ಕಡೆ ಬರುತ್ತಿರಲಿಲ್ಲ’ ಎಂದು ಹೇಳಿದನು.
ರಟ್ಟಾ ಸ್ವಲ್ಪ ನಕ್ಕು ‘ಏನೂ ಹಾನಿಯಿಲ್ಲ. ಒಳ್ಳೆಯದೇ ಆಯಿತು. ಅಂತಃಪುರದಲ್ಲಿ ಒಬ್ಬಳೇ ಕುಳಿತೂ ಕುಳಿತೂ ಬೇಸರವಾಯಿತು. ಅದಕ್ಕೆಂದೇ ಇಲ್ಲಿಗೆ ಬಂದು ಕುಳಿತಿದ್ದೇನೆ. ಬನ್ನಿ, ತಾವೂ ಕುಳಿತುಕೊಳ್ಳಿರಿ’ ಎಂದಳು.
ಚಿತ್ರಕನು ಕುಳಿತುಕೊಳ್ಳಲಿಲ್ಲ. ಗೋಡೆಯ ಮೇಲೆ ಕುಳಿತುಕೊಂಡರೆ ರಾಜಕುಮಾರಿಗೆ ಸರಿಸಮಾನವಾಗಿ ಆಸನದಲ್ಲಿ ಕುಳಿತಂತಾಗುತ್ತದೆ. ನೆಲದ ಮೇಲೆ ಕುಳಿತುಕೊಂಡರೆ ಹೆಚ್ಚು ದೀನತೆಯನ್ನು ಪ್ರದರ್ಶಿಸಿದಂತಾಗುತ್ತದೆ. ಆದ್ದರಿಂದ ಅವನ ಗೋಡೆಯ ಮೇಲೆ ಕೈಯೂರಿ ನಿಂತುಕೊಂಡು ‘ತಮ್ಮ ಸುಗೋಪಾ ಈ ದಿನ ಬಂದಿರಲಿಲ್ಲವೆಂದು ಕಾಣುತ್ತದೆ’ ಎಂದು ಹೇಳಿದನು.
‘ಸುಗೋಪಾ ನಮ್ಮನ್ನು ನೋಡದೆ ಇರಲಾರಳು. ಬೆಳಗ್ಗೆ ಆಕೆ ಬಂದು ಸ್ವಲ್ಪಹೊತ್ತು ಇದ್ದು ಹೋದಳು. ತಮ್ಮ ವಿಷಯವಾಗಿ ಎಷ್ಟೊಂದು ಹೇಳಿದಳು. ಇಡೀ ರಾತ್ರಿ ಎಚ್ಚರವಿದ್ದು ತಾವು ಆಕೆಗೆ ಸಹಾಯ ಮಾಡಿದ್ದಲ್ಲದೆ, ಆಕೆಯ ಜೊತೆಗೇ ಇದ್ದಿರಂತೆ! ಈ ರೀತಿ ಯಾರೂ ಮಾಡಿರಲಿಲ್ಲವಂತೆ!’
‘ಸುಗೋಪಾ ಇನ್ನೇನೂ ಹೇಳಲಿಲ್ಲವೆ?’
ರಟ್ಟಾ ಆಶ್ಚರ್ಯದಿಂದ ‘ಇನ್ನೇನು ಹೇಳುತ್ತಾಳೆ?’ ಎಂದು ಕಣ್ಣು ತಿರುಗಿಸಿದಳು.
‘ಇಲ್ಲ. ಏನೂ ಇಲ್ಲ-’ ವಿಷಯಾಂತರ ಮಾಡುವುದಕ್ಕಾಗಿ ಚಿತ್ರಕನು ಚಂದ್ರನ ಕಡೆ ತಿರುಗಿ ‘ಈ ದಿನ ಹುಣ್ಣಿಮೆ ಇರಬಹುದಲ್ಲವೆ?’ ಎಂದು ಕೇಳಿದನು.
‘ಹೌದು’ ರಟ್ಟಾ ಕೂಡ ಸ್ವಲ್ಪ ಹೊತ್ತು ಚಂದ್ರನನ್ನು ನೋಡಿ ‘ಆರ್ಯಾವರ್ತದ ಆ ಕಡೆಗಳಲ್ಲಿ ಈ ದಿನಗಳಲ್ಲಿ ಉತ್ಸವಗಳು ನಡೆಯುತ್ತವೆ. ವಸಂತ ಋತುವಿನ ಪೂಜೆ ನಡೆಯುತ್ತದೆ ಎಂದು ಕೇಳಿದ್ದೇನೆ. ಆದರೆ ಇಲ್ಲಿ ಅಂಥ ಯಾವುದೂ ಇಲ್ಲ’ ಎಂದು ಹೇಳಿದಳು.
‘ಏಕೆ ಹೀಗೆ?’
‘ಸರಿಯಾಗಿ ಗೊತ್ತಿಲ್ಲ. ಹಿಂದೆ ಇಲ್ಲಿಯೂ ನಡೆಯುತ್ತಿದ್ದಿತೋ ಏನೋ!
ಈಗ ಹೂಣರು ಅಧಿಕಾರಕ್ಕೆ ಬಂದ ಮೇಲೆ ಅವೆಲ್ಲಾ ನಿಂತು ಹೋಗಿವೆ. ಹೂಣರಲ್ಲಿ ವಸಂತೋತ್ಸವ ನಡೆಸುವ ಪದ್ಧತಿ ಇಲ್ಲ. ಆದರೆ ಬುದ್ಧ ಪೂರ್ಣಿಮೆಯ ದಿನ ಉತ್ಸವ ನಡೆಸುವ ಸಂಪ್ರದಾಯವನ್ನು ಮಹಾರಾಜರು ಜಾರಿಗೆ ತಂದಿದ್ದಾರೆ.’
ಈ ಎಲ್ಲ ಮಾತುಕತೆಯ ನಡುವೆ ಚಿತ್ರಕನು ರಟ್ಟಾ ಕುಳಿತಿರುವ ಜಾಗವನ್ನು ಸೂಕ್ಷ್ಮವಾಗಿ ಗಮನಿಸಿದನು. ರಟ್ಟಾ ಕೋಟೆಯ ಗೋಡೆಯ ಮೇಲೆ ಯಾವ ಜಾಗದಲ್ಲಿ ಕುಳಿತಿದ್ದಾಳೆಂದರೆ, ಆಕೆಯನ್ನು ಯಾರಾದರೂ ಸ್ವಲ್ಪ ತಳ್ಳಿದರೂ ಸಾಕು, ಅಥವಾ ಆಕೆಯೇ ಸಮತೋಲ ತಪ್ಪಿ ವಾಲಿದರೂ ಸಾಕು ಆಕೆಯು ಇಪ್ಪತ್ತು ಮಾರಿನಷ್ಟು ದೂರ ಕೆಳಗೆ ಬೀಳುವುದು ಖಂಡಿತ. ಕೆಳಗೆ ಬಿದ್ದರಂತೂ ಸಾವು ನಿಶ್ಚಿತ. ಅವನ ಎದೆಯಲ್ಲಿ ದ್ವೇಷದ ಉದ್ವೇಗ ತೀವ್ರಗೊಳ್ಳುತ್ತಿತ್ತು. ಮೂರನೆಯ ವ್ಯಕ್ತಿ ಅಲ್ಲಿ ಯಾರೂ ಇಲ್ಲ. ರಟ್ಟಾ ಇಲ್ಲಿ ಕೆಳಗೆ ಬಿದ್ದು ಸತ್ತರೆ ಯಾರಿಗೂ ಅನುಮಾನ ಬರುವುದಿಲ್ಲ. ಬರ್ಬರ ಹೂಣನು ಚಿತ್ರಕನ ಸರ್ವಸ್ವವನ್ನೂ ಅಪಹರಿಸಿದ್ದಾನೆ…. ಈ ಯುವತಿಯು ಅವನ ಮಗಳು…
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)