ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 33

ಹಿಂದಿನ ಸಂಚಿಕೆಯಿಂದ…

ಮರುದಿನ ಮಧ್ಯಾಹ್ನ ಚಷ್ಟನ ದುರ್ಗದಿಂದ ಸಂದೇಶ ವಾಹಕನು ಬಂದನು. ಮಹಾರಾಜ ರಟ್ಟ ಧರ್ಮಾದಿತ್ಯರು ಪತ್ರ ಕಳುಹಿಸಿದ್ದರು. ಪತ್ರವನ್ನು ಓದಿದ ಮಂತ್ರಿ ಚತುರಾನನ ಭಟ್ಟರು ಚಿಂತೆಗೊಳಗಾಗಿ ರಟ್ಟಾಳ ಬಳಿಗೆ
ಬಂದರು.
‘ಮಹಾರಾಜರ ಆರೋಗ್ಯ ಚೆನ್ನಾಗಿಲ್ಲ. ಅವರು ಇನ್ನೂ ಕೆಲವು ದಿನಗಳು ಚಷ್ಟನ ದುರ್ಗದಲ್ಲಿಯೇ ಇರುವರು, ಆದರೆ ತಮ್ಮ ಮಗಳನ್ನು ನೋಡಲೇಬೇಕೆಂದು ಅವರು ಚಡಪಡಿಸುತ್ತಿದ್ದಾರೆ. ‘ನಾನು ತಂದೆಯವರ ಬಳಿಗೆ ಹೋಗುತ್ತೇನೆ’ ಎಂದು ರಟ್ಟಾ ಹೇಳಿದಳು.
ಚತುರಾನನ ಭಟ್ಟ- ಹೋಗುವುದು ಸರಿಯೋ ಅಲ್ಲವೋ ಎಂಬುದು ತಿಳಿಯದಾಗಿದೆ.
‘ಏಕೆ ಹೀಗೆ ಸಂಶಯಪಡುತ್ತೀರಿ?’
ಸ್ವಲ್ಪ ಹಿಂದೆ ಮುಂದೆ ನೋಡಿ ಮಂತ್ರಿಗಳು ‘ಕಿರಾತ ಒಳ್ಳೆಯ ಮನುಷ್ಯನಲ್ಲ. ಅವನು ಚಷ್ಟನ ದುರ್ಗದ ಸರ್ವಾಧಿಕಾರಿ. ಅವನ ಮನಸ್ಸಿನಲ್ಲಿ ಬೇರೆ ಏನಾದರೂ ಕೆಟ್ಟ ಆಲೋಚನೆ ಇರಬಹುದು.’
ರಟ್ಟಾ- ‘ಇನ್ನೆಂಥ ದುರಾಲೋಚನೆ? ಕಿರಾತನು ನಮ್ಮ ತಂದೆಯವರನ್ನು ವಶದಲ್ಲಿಟ್ಟುಕೊಂಡು, ಈಗ ಕಪಟೋಪಾಯದಿಂದ ನಮ್ಮನ್ನೂ ಕೈವಶ ಮಾಡಿಕೊಳ್ಳಬೇಕೆಂದಿದ್ದಾನೆಂದು ತಾವು ಸಂಶಯಪಡುತ್ತೀರೇನು?’
‘ಯಾರು ಬಲ್ಲರು? ಎಚ್ಚರಿಕೆಯಿಂದ ಇದ್ದರೆ ಅಪಾಯದಿಂದ ಪಾರಾಗಬಹುದು.
‘ನಾನು ಇವುಗಳನ್ನೆಲ್ಲ ನಂಬುವುದಿಲ್ಲ. ಮಹಾರಾಜರಿಗೆ ಕಿರಾತನು ಈ ರೀತಿ ದ್ರೋಹ ಮಾಡುವನೆಂದು ನನಗೆ ಅನ್ನಿಸುವುದಿಲ್ಲ. ನಾನು ನಾಳೆ ಬೆಳಗ್ಗೆ ಚಷ್ಟನ ದುರ್ಗಕ್ಕೆ ಹೊರಡಬೇಕು. ಅದಕ್ಕೆ ಬೇಕಾದ ವ್ಯವಸ್ಥೆ ಮಾಡೋಣವಾಗಲಿ? ತಂದೆಯವರನ್ನು ನೋಡಬೇಕೆಂದು ನಾನೂ ಕಾತರಗೊಂಡಿದ್ದೇನೆ’ ಎಂದಳು.
‘ಒಳ್ಳೆಯದು- ಮಹಾರಾಜರು ಮಗಧದ ರಾಜದೂತನನ್ನೂ ಕೂಡ ಚಷ್ಟನ ದುರ್ಗಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.’
ರಟ್ಟಾಳ ಕಣ್ಣ ಮುಂದೆ ಯಾವುದೋ ಒಂದು ಅದೃಶ್ಯ ಪರದೆ ಇಳಿದ ಹಾಗಾಯಿತು. ಅವಳು ಕ್ಷಣಕಾಲ ಸುಮ್ಮನಿದ್ದು ‘ಒಳ್ಳೆಯದು. ಅವರೂ ನಮ್ಮ ಜೊತೆಗೆ ಬರಲಿ. ಅವರಿಗೆ ಸುದ್ದಿ ಮುಟ್ಟಿಸಿರಿ’ ಎಂದು ಹೇಳಿದಳು.
ಮಂತ್ರಿಗಳು ‘ಜೊತೆಯಲ್ಲಿ ಅಂಗರಕ್ಷಕರ ಒಂದು ಪಡೆಯೂ ಇರುತ್ತದೆ. ಚಷ್ಟನ ದುರ್ಗದ ದಾರಿ ಬಹಳ ದೂರದ್ದು ಹಾಗೂ ಕಷ್ಟಕರವಾದುದು. ತಲುಪಬೇಕಾದರೂ ಎರಡು ದಿನ ಹಿಡಿಯುತ್ತದೆ. ದಾರಿಯಲ್ಲಿ ಒಂದು ರಾತ್ರಿ ಪಾಂಥಶಾಲೆ(ಪ್ರಯಾಣಿಕರ ವಸತಿ ಗೃಹ)ಯಲ್ಲಿ ಕಳೆಯಬೇಕಾಗುತ್ತದೆ. ದೇವದುಹಿತೆ ಅವರಿಗೆ ಡೋಲಿಯ ವ್ಯವಸ್ಥೆ ಮಾಡಲೇ?’ ಎಂದರು.
‘ಬೇಡಿ. ನಾನು ಕುದುರೆಯ ಮೇಲೆ ಪ್ರಯಾಣಿಸುತ್ತೇನೆ’
‘ಆಳು ಕಾಳುಗಳು ಯಾರೂ ಬೇಡವೇ?’
‘ಬೇಕಾಗಿಲ್ಲ!
ಮಂತ್ರಿಗಳು ರಟ್ಟಾಳಿಂದ ಬೀಳ್ಕೊಂಡು ಚಿತ್ರಕನ ಬಳಿಗೆ ಹೋದರು. ಚಿತ್ರಕನು ವಿಷಯವನ್ನೆಲ್ಲಾ ಕೇಳಿ ಕ್ಷಣ ಕಾಲ ನೆಲ ನೋಡುತ್ತ ಕುಳಿತುಬಿಟ್ಟನು. ಅವನ ಎದೆಯಲ್ಲಿ ಇದುವರೆಗೂ ಸುಪ್ತವಾಗಿ ಉರಿಯುತ್ತಿದ್ದ ತುಷಾನಲ ಒಮ್ಮೆಗೇ ಉರಿಯ ನಾಲಗೆಯನ್ನು ಚಾಚಿ ಮೇಲೆದ್ದಿತು. ಆದರೆ ಅವನು ತನ್ನ ಮನಸ್ಸಿನ ಭಾವನೆಯನ್ನು ಕಾಣಗೊಡದೆ ವಿರಕ್ತ ಹಾಗೂ ನಿಸ್ಪೃಹ ಧ್ವನಿಯಲ್ಲಿ ‘ನಾನು ತಮ್ಮ ಅಧೀನದಲ್ಲಿರುವಾಗ ಏನು ತಾನೇ ಮಾಡುವುದು? ತಾವು ಹೇಳಿದಂತೆಯೇ ಆಗಲಿ’ ಎಂದು ಹೇಳಿದನು. ಮರುದಿನ ಬೆಳಗ್ಗೆ ಸೂರ್ಯೋದಯವಾಗುತ್ತಲೇ ರಟ್ಟಾ ಮತ್ತು ಚಿತ್ರಕ ಕುದುರೆಗಳನ್ನೇರಿ ಅರಮನೆಯಿಂದ ಹೊರಗೆ ಹೊರಟರು. ಒಬ್ಬ ಸೇನಾಪತಿ
ಐದು ಜನ ಸಶಸ್ತ್ರ ಅಶ್ವಾರೋಹಿಗಳೊಂದಿಗೆ ಜೊತೆಗೆ ಹೊರಟನು.

ಕಪೋತಕೂಟ ನಗರವು ಆಗಲೆ ಎಚ್ಚರಗೊಂಡಿತ್ತು. ಬೀದಿ ಬೀದಿಗಳಲ್ಲಿ ಮನೆ ಹಾಗೂ ಅಂಗಡಿಗಳ ಬಾಗಿಲುಗಳು ತೆರೆದಿದ್ದವು. ಹೆಂಗಳೆಯರು ಬೀದಿಗೆಗಳಲ್ಲಿ ನೀರು ತೆಗೆದುಕೊಂಡು ಹೋಗುತ್ತಿದ್ದರು. ಕೆಲವರು ಅಭಿಷೇಕಕ್ಕಾಗಿ ನೀರು ತುಂಬಿಕೊಂಡು ದೇವಾಲಯದ ಕಡೆಗೆ ಹೋಗುತ್ತಿದ್ದರು. ಬೀದಿಗಳಲ್ಲಿ ಮಕ್ಕಳು ಆಟವಾಡುತ್ತಿದ್ದರು. ಹೆಗಲ ಮೇಲೆ ಮಾರುವ ವಸ್ತುಗಳನ್ನು ಇಟ್ಟುಕೊಂಡು ಬೀದಿ ಬೀದಿಗಳಲ್ಲಿ ಸುತ್ತಾಡುತ್ತ ಮಾರುವವರು ‘ಪುರಿ ಬೇಕೇ ಪುರೀ’ ‘ಅರಳು ಬೇಕೇ ಅರಳೂ’ ಎಂದು ಕೂಗುತ್ತಿದ್ದರು.
ಪುರುಷ ವೇಷಧಾರಿಯಾದ ರಟ್ಟಾ ತನ್ನ ಕುದುರೆಯ ಖುರಪುಟ ಧ್ವನಿಯಿಂದ ಎಲ್ಲರನ್ನೂ ಚಕಿತಗೊಳಿಸಿ, ಅಂಗರಕ್ಷಕರೊಡನೆ ರಾಜ ಬೀದಿಯಲ್ಲಿ ಬರುತ್ತಿರಲು, ನಾಗರಿಕರು ಬೀದಿಯ ಇಕ್ಕೆಲಗಳಲ್ಲಿಯೂ ನಿಂತು ಕಣ್ಣು ತುಂಬ ನೋಡಿ ಆನಂದಿಸುತ್ತಿದ್ದರು.
ರಟ್ಟಾ ಪೇಟೆ ಬೀದಿಯ ಮುಖಾಂತರ ಹೋಗುತ್ತಿರುವಾಗ ಚೌಕದಲ್ಲಿ ಒಬ್ಬ ವಿಕೃತ ಮನುಷ್ಯನ ಸುತ್ತ ಜನ ಕಿಕ್ಕಿರಿದು ನಿಂತಿರುವುದನ್ನು ನೋಡಿದಳು. ಆ ವಿಕೃತ ಮನುಷ್ಯನ ಮೈತುಂಬ ಕೂದಲು, ಎಣ್ಣೆ ಕಾಣದ ಕೆದರಿದ ತಲೆ, ಸ್ಥೂಲ ಕಾಯ, ಮೈ ಮೇಲೆ ಬಟ್ಟೆ ಬರೆ ಇದ್ದ ಹಾಗೆ, ಗುಂಪಿನ ಮಧ್ಯೆ, ಕಾಣಲಿಲ್ಲ. ಅವನು ಎತ್ತರದ ದನಿಯಲ್ಲಿ ಏನೋ ಹೇಳುತ್ತಿದ್ದನು. ಅದನ್ನು ಕೇಳಿ ಜನರೆಲ್ಲ ನಕ್ಕು, ಮತ್ತೆ ಮತ್ತೆ ಕೆಣಕಿ ಗೇಲಿ ಮಾಡುತ್ತಿದ್ದರು. ರಟ್ಟಾ ಲಗಾಮು ಎಳೆದು ಕುದುರೆಯನ್ನು ನಿಲ್ಲಿಸಿ ಒಬ್ಬ ದಾರಿ ಹೋಕನನ್ನು ಮಾತನಾಡಿಸಿ ‘ಅವನು ಯಾರು? ಏನು ಹೇಳುತ್ತಿದ್ದಾನೆ?’ ಎಂದು ಕೇಳಿದಳು.

ದಾರಿಹೋಕನು ರಾಜಕುಮಾರಿಯು ತನ್ನನ್ನು ಮಾತನಾಡಿಸಿದಳಲ್ಲಾ ಎಂದು ಉಬ್ಬಿ ಹೋಗಿ ನಗುಮುಖದಿಂದ ‘ಅವನೊಬ್ಬ ಹುಚ್ಚ. ಅವನು ಯಾವುದೋ ದೇಶದ ರಾಜದೂತನೆಂದು ಹೇಳಿಕೊಳ್ಳುತ್ತಿದ್ದಾನೆ’ ಎಂದು ಉತ್ತರ ಕೊಟ್ಟನು. ಚಿತ್ರಕನು ಒಂದು ಬಾರಿ ಅತ್ತ ನೋಡಿ ಅವನು ಶಶಿಶೇಖರನೆಂದು ಗುರುತು ಹಿಡಿದನು. ಮತ್ತೆ ಆ ಕಡೆ ತಿರುಗಿ ನೋಡಲಿಲ್ಲ. ರಟ್ಟಾ ಮತ್ತೆ ಲಗಾಮನ್ನು ಸಡಿಲಿಸಲು ಕುದುರೆ ಮುಂದೆ ಹೊರಟಿತು. ಅವರು ನಗರದ ಉತ್ತರದ್ವಾರದ ಬಳಿ ತಲುಪಿದರು.

ಇಲ್ಲಿಯೇ ಶಶಿಶೇಖರನ ಕಥೆಯನ್ನು ಪೂರ್ಣಗೊಳಿಸೋಣ. ಅದೇ ದಿನ ಸಂಜೆ ನಗರದ ಕೊತ್ವಾಲನು ಮಂತ್ರಿ ಚತುರ ಭಟ್ಟರನ್ನು ಭೇಟಿ ಮಾಡಿ ‘ಒಬ್ಬ ವಿಕೃತ ಬುದ್ಧಿಯ ವಿದೇಶಿ ವ್ಯಕ್ತಿಯೊಬ್ಬನು ನಗರಕ್ಕೆ ಬಂದಿದ್ದಾನೆ. ಅವನು ಮಗಧದ ರಾಜದೂತನಂತೆ. ಯಾವನೋ ಒಬ್ಬ ದುರಾತ್ಮ ಅವನ ಸರ್ವಸ್ವವನ್ನೂ ಅಪಹರಿಸಿ, ಅವನನ್ನು ಬತ್ತಲೆಗೊಳಿಸಿ, ಮೃಗಯಾಕಾನನದಲ್ಲಿ ಬಿಟ್ಟು ಹೋದನಂತೆ- ಅವನು ಸೊಪ್ಪು ಸೆದೆಗಳಿಂದ ಮೈಮುಚ್ಚಿ ತನ್ನ ಮಾನ ಕಾಪಾಡಿಕೊಂಡನಂತೆ’ ಎಂದು ವಿವರಣೆ ನೀಡಿದನು.

ಮಂತ್ರಿಯು ಹುಬ್ಬುಗಂಟಿಕ್ಕಿಕೊಂಡು ಆಲಿಸಿ ‘ಅನಂತರ?’ ಎಂದು ಕೇಳಿದರು.

‘ನಗರ ರಕ್ಷಕರು ಅವನನ್ನು ನನ್ನ ಹತ್ತಿರ ಕರೆತಂದರು. ಅವನನ್ನು ಕಂಡರೆ ಹುಚ್ಚನಂತಿದ್ದ. ಒಮ್ಮೆ ಏನೋ ಹೇಳುತ್ತಾನೆ. ಮತ್ತೊಮ್ಮೆ ಇನ್ನೇನೋ ಹೇಳುತ್ತಾನೆ. ಮಗದೊಮ್ಮೆ ಕಣ್ಣೀರು ಹಾಕುತ್ತ ‘ಗೊಳೋ’ ಎಂದು ಅಳುತ್ತಾನೆ. ಏನು ಮಾಡಬೇಕೆಂದು ತೋಚದೆ ಅವನನ್ನು ಚಾವಡಿಕಟ್ಟೆಯಲ್ಲಿ ಕೂಡಿ ಹಾಕಿದ್ದೇನೆ.’

ಮಂತ್ರಿಗಳು- ಒಳ್ಳೆಯದನ್ನೇ ಮಾಡಿದೆ. ಈ ಹಾಳಾಗಿ ಹೋದೋನು ಒಂದು ದಿನ ಮುಂಚೆಯೇ ಬರಬಾರದಾಗಿತ್ತೆ! ಈಗ ಏನೂ ಮಾಡುವ ಹಾಗಿಲ್ಲ. ಈಗ ಕೆಲವು ದಿನ ಚಾವಡಿ ಕಟ್ಟೆಯಲ್ಲಿದ್ದು ಕಾಲ ಹಾಕಲಿ. ಆಮೇಲೆ ನೋಡೋಣ.

ಇನ್ನು ಮುಂದೆ ನಮ್ಮ ಈ ಕಥೆಗೂ ಶಶಿಶೇಖರನಿಗೂ ಏನೂ ಸಂಬಂಧವಿಲ್ಲ. ಈ ಕಥೆ ಮುಗಿಯುವುದಕ್ಕೆ ಮೊದಲೇ ಅವನಿಗೆ ಮುಕ್ತಿ ಸಿಕ್ಕಿತು. ಅವನು ಇನ್ನೆಂದೂ ತನ್ನ ದೇಶ ಬಿಟ್ಟು ಹೊರ ಹೋಗುವುದಿಲ್ಲವೆಂದು ಪ್ರತಿಜ್ಞೆ ಮಾಡಿ ತನ್ನ ಊರಿಗೆ ಹೊರಟು ಹೋದನಂತೆ. ಅವನ ಬಗ್ಗೆ ಇಷ್ಟು ಹೇಳಿದರೆ ಸಾಕು ಎಂದು ಕಾಣುತ್ತದೆ.

ಮುಂದುವರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *