ಹಿಂದಿನ ಸಂಚಿಕೆಯಿಂದ….
ಚಿತ್ರಕನು ಚಕಿತನಾಗಿ ಆಕೆಯ ಕಡೆ ನೋಡಿದನು.
ರಟ್ಟಾ- ‘ಆಸಮುದ್ರ ಆರ್ಯಭೂಮಿಯ ಏಕಚ್ಛತ್ರ ಅಧೀಶ್ವರರಾದ ಸ್ಕಂದಗುಪ್ತರ ದೂತರನ್ನು ಅಜ್ಞಾತ ಕುಲ ಶೀಲರೆಂದು ಹೇಳಿದರೆ ಸ್ಕಂದಗುಪ್ತರಿಗೆ ಅವಮಾನ ಮಾಡಿದಂತಾಗುವುದಿಲ್ಲವೆ? ಇದೆಲ್ಲ ವ್ಯರ್ಥಾಲಾಪವಲ್ಲವೆ? ತಾವು ಕಳ್ಳರೂ ಕೆಟ್ಟ ಸ್ವಭಾವದವರೂ ಆಗಿದ್ದೀರೆಂದುಕೊಳ್ಳೋಣ. ಆದರೆ ಆ ವಿಷಯವನ್ನು ಈಗ ಏಕೆ ಹೇಳುತ್ತಿದ್ದೀರಿ? ಕಳ್ಳನಾದವನು ತನಗೇ ವಿರುದ್ಧವಾಗಿ ಬೇರೆಯವರಿಗೆ ಎಚ್ಚರಿಕೆ ವಹಿಸುವಂತೆ ಹೇಳುತ್ತಾನೇನು?’
ಹೀಗೆಂದು ಹೇಳಿದವಳೇ ಜೋರಾಗಿ ನಗಲಾರಂಭಿಸಿದಳು. ರಟ್ಟಾಳಿಗೆ ತನ್ನ ನಿಜವಾದ ಸಂಗತಿಯನ್ನು ತಿಳಿಸಿ ಅವಳ ಮುಖಭಾವದ ಬದಲಾವಣೆಗಳನ್ನು ಪರೀಕ್ಷಿಸಿ ನೋಡಬೇಕೆಂದು ಚಿತ್ರಕನಿಗೆ ಅನ್ನಿಸಿತು. ಆಗ ಈ ನಗುವೆಲ್ಲ ಬೆಂಕಿಯಲ್ಲಿ ಬಿದ್ದ ಹೂವಿನಂತೆ ಒಣಗಿ ಕರಕಾಗುವುದಲ್ಲವೆ? ಸಂಪೂರ್ಣ ವಿಶ್ವಾಸ ತುಂಬಿರುವ ಕಣ್ಣುಗಳಲ್ಲಿ ಭಯದ ಗಾಬರಿ ಹೊರಹೊಮ್ಮುವುದಲ್ಲವೆ? ಆದರೂ ಚಿತ್ರಕನ ಮನದಾಳದ ಅನಿಸಿಕೆ ಮೌಖಿಕವಾಗಿ ವಾಕ್ಯರೂಪದಲ್ಲಿ ಹೊರಹೊಮ್ಮಲೇ ಇಲ್ಲ. ಬದಲಾಗಿ ಅವನ ತುಟಿಯ ಮೇಲೆ ಬಲವಂತದ ನಗುವೊಂದು ಕಾಣಿಸಿತು.
ರಟ್ಟಾ- ‘ಆ ವಿಷಯ ಹಾಗಿರಲಿ- ಆರ್ಯ ಚಿತ್ರಕ, ತಾವು ಅನೇಕ ದೇಶಗಳನ್ನು ನೋಡಿದ್ದೀರಿ. ಅನೇಕ ಯುದ್ಧಗಳನ್ನು ಮಾಡಿದ್ದೀರಿ. ಹೌದು ತಾನೆ!’
ಚಿತ್ರಕ- (ಎಚ್ಚರಿಕೆಯಿಂದ) ಹೌದು. ಈ ದೂತ ಕಾರ್ಯ ನಮ್ಮ ಜೀವನದಲ್ಲಿ ಇದೇ ಮೊದಲು.
ರಟ್ಟಾ- ತಾವು ಕಥೆ ಹೇಳಿರಿ. ನಮಗೆ ಕಥೆ ಕೇಳಬೇಕೆಂದು ಬಹಳ ಆಸೆಯಾಗಿದೆ.
ಚಿತ್ರಕ- ‘ಯಾವ ಕಥೆ ಹೇಳಲಿ?’
ರಟ್ಟಾ- ‘ತಮಗೆ ಇಷ್ಟವಾದ ಯಾವುದಾದರೂ ಕಥೆ, ಯುದ್ಧದ ಕಥೆ. ದೇಶವಿದೇಶದ ಕಥೆ. ಪಾಟಲಿಪುತ್ರ ಒಂದು ಸುಂದರವಾದ ನಗರವಲ್ಲವೆ?’
ಚಿತ್ರಕ- ‘ಹೌದು, ಬಹಳ ಸುಂದರವಾದ ನಗರ. ಅಷ್ಟು ಸುಂದರವಾದ ನಗರ ಆರ್ಯಾವರ್ತದಲ್ಲಿ ಬೇರೆ ಇಲ್ಲ.’
ರಟ್ಟಾ- ‘ಕಪೋತಕೂಟಕ್ಕಿಂತ ಸುಂದರವಾಗಿದೆಯೇ?’
ಚಿತ್ರಕನಿಗೆ ನಗು ಬಂತು. ರಟ್ಟಾಳ ಈ ಬಾಲಿಕಾ- ಸಹಜ ಸರಳತೆಯು ಅವನಿಗೆ ಹಿತವೆನಿಸಿತು. ಅವನು ಅವಳನ್ನು ದಿಟ್ಟಿಸಿ ನೋಡಿ ಚಿತ್ರಕ- ‘ಕಪೋತ ಕೂಟವೂ ಸುಂದರವಾದ ನಗರವೇ. ಆದರೆ ಕಪೋತಕೂಟ ಚಿಕ್ಕದು. ಪಾಟಲಿಪುತ್ರ ದೊಡ್ಡದು. ನವಿಲಿಗೂ ಪಾರಿವಾಳಕ್ಕೂ ಎಲ್ಲಿಯ ಹೋಲಿಕೆ!’ ಎಂದನು.
ರಟ್ಟಾ- ‘ಮತ್ತೆ ಸ್ಕಂದಗುಪ್ತರು? ಅವರು ಎಂಥವರು?’
ಚಿತ್ರಕ- ‘ನಾನು ಸಾಮಾನ್ಯ ದೂತ. ಅವರ ಬಳಿಗೆ ನಾನು ಎಂದೂ ಹೋದವನಲ್ಲ. ದೂರದಿಂದ ನೋಡಿದ್ದೇನೆ. ಅವರು ಬಹಳ ಸುಂದರ ಪುರುಷ. ಅವರು ಭಾವುಕರೆಂದೂ ಅದೃಷ್ಟವಾದಿಗಳೆಂದೂ ಕೇಳಿದ್ದೇನೆ.’
‘ಅವರಿಗೆ ಎಷ್ಟು ಜನ ರಾಣಿಯರು?’ ಎಂದು ರಟ್ಟಾ ನಾರೀ ಸಹಜಪ್ರಶ್ನೆ ಕೇಳಿದಳು.
ಚಿತ್ರಕ- ‘ಅವರು ಬ್ರಹ್ಮಾಚಾರಿ. ಮದುವೆಯಾಗಿಲ್ಲ.’
‘ಆಶ್ಚರ್ಯ!’ ರಟ್ಟಾ ಕಣ್ಣುಗಳನ್ನು ಅರಳಿಸಿ ಉದ್ಗಾರ ತೆಗೆದಳು.
ಚಿತ್ರಕನು ತನ್ನ ವಿಷಯವನ್ನು ಮನಸ್ಸಿಗೆ ತಂದುಕೊAಡು ‘ಆಶ್ಚರ್ಯವೇ ಸರಿ, ಆದರೆ ಇಂಥವೇ ಆಶ್ಚರ್ಯಕರ ಘಟನೆಗಳು ಈ ಜಗತ್ತಿನಲ್ಲಿ ಬೇಕಾದಷ್ಟು ನಡೆಯುತ್ತಲೇ ಇರುತ್ತವೆ. ನನ್ನ ಹೋರಾಟದ ಜೀವನದಲ್ಲಿ ಲೆಕ್ಕವಿಲ್ಲದಷ್ಟು ನೋಡಿದ್ದೇನೆ’ ಎಂದನು.
ಹಾಗಾದರೆ ಆ ಕಥೆಯನ್ನೇ ವಿವರವಾಗಿ ಹೇಳಿರಿ. ನಾನು ಕೇಳುತ್ತೇನೆ.’
ಆಕೆಯ ಒತ್ತಾಯವನ್ನು ನೋಡಿ ಚಿತ್ರಕನಿಗೆ ನಗುಬಂತು. ಅವನಿಗೆ ಅರಿವಿಲ್ಲವಿದೆಯೇ ಅವನ ಮನಸ್ಸಿನಲ್ಲಿದ್ದ ಕಹಿ ಭಾವನೆಯು ದೂರವಾಗಿದ್ದಿತು. ಮನಸ್ಸಿನಲ್ಲಿ ಅನೇಕ ವಿರುದ್ಧ ಭಾವನೆಗಳು ಒಂದೆಡೆ ಸೇರಿದಾಗ, ಮನುಷ್ಯನು ಹೃದಯಭಾರವನ್ನು ಹಗುರ ಮಾಡಿಕೊಳ್ಳಲು ಬಯಸುತ್ತಾನೆ. ಆಗ ತನ್ನ ಆತ್ಮಕಥೆಯನ್ನು ಹೇಳಿಕೊಳ್ಳುವ ಸದವಕಾಶ ದೊರೆತರೆ ಬಹಳ ಸಂತೋಷ
ಪಡುತ್ತಾನೆ. ಚಿತ್ರಕ ನಿಧಾನವಾಗಿ ತನ್ನ ಜೀವನದ ಅನೇಕ ಕಥೆಗಳನ್ನು ಹೇಳುತ್ತ ಹೋದನು. ತನ್ನ ವ್ಯಕ್ತಿಗತ ಪರಿಚಯವನ್ನು ಮಾತ್ರ ಮರೆಮಾಚಿ ಉಳಿದ ಸತ್ಯಕಥೆಗಳನ್ನೆಲ್ಲಾ ಹೇಳಿದನು. ಯುದ್ಧದ ವಿಚಿತ್ರ ಅನುಭವಗಳು, ನಾನಾ ದೇಶದ ನಾನಾ ಮನುಷ್ಯರ ಅದ್ಭುತ ಆಚಾರ ವ್ಯವಹಾರ, ಅವರ ವೇಷಭೂಷ, ಮಾತುಕತೆ.
ಇತ್ತ ಎರಡು ಕುದುರೆಗಳೂ ಮುಂದೆ ಸಾಗುತ್ತಿದ್ದವು. ದಾರಿಯು ಅಂಕು ಡೊಂಕಾಗಿ ಸಾಗಿತ್ತು. ಬೆಟ್ಟದ ತಪ್ಪಲಿನಲ್ಲಿ ಮರಗಳ ನೆರಳಿನಲ್ಲಿಯೂ, ಬೆಟ್ಟದ ಮೇಲಿನ ಸಮತಟ್ಟಾದ ಭೂಮಿಯಲ್ಲಿ ಸುಡುವ ಬಿಸಿಲಿನಲ್ಲಿಯೂ, ಕೆಲವೊಮ್ಮೆ ಗಿರಿ ನಿರ್ಝರಿಗಳ ನೀರಿನಿಂದ ತೊಯ್ದು ದಾರಿ ಬಹು ದೂರ ಮುಂದೆ ಸಾಗಿತ್ತು. ಆದರೆ ಯಾರಿಗೂ ಈ ಕಡೆ ಗಮನವಿಲ್ಲ. ರಟ್ಟಾ ತನ್ಮಯಳಾಗಿ ಕಥೆ ಕೇಳುತ್ತಿದ್ದಾಳೆ.
ಕಥೆ ಹೇಳುವವರ ಹಾಗೂ ಕೇಳುವವರ ನಡುವೆ ಬರುಬರುತ್ತಾ, ಏಕಾಭಿಪ್ರಾಯ ಮೂಡಿತು. ಇಬ್ಬರ ಮನಸ್ಸೂ ಒಂದಾಯಿತು. ಚಿತ್ರಕನು ಕಥೆ ಹೇಳುತ್ತ ಹೇಳುತ್ತ ಜಾಗೃತನಾಗಿ ‘ಇದೇನಾಶ್ಚರ್ಯ! ನಾನು ನನಗೆ ಅರಿವಿಲ್ಲದೆಯೇ ನನ್ನ ಬಾಳಿನ ಕಥೆಯನ್ನೆಲ್ಲಾ ಹೇಳಿ ಬಿಟ್ಟೆನಲ್ಲಾ!’ ಎಂದು ಒಮ್ಮೊಮ್ಮೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದನು. ಆದರೆ ರಟ್ಟಾ ಮಾತ್ರ ಈ ರೀತಿಯ ಯಾವ ವಿಚಾರವನ್ನೂ ಮನಸ್ಸಿಗೆ ತಂದುಕೊಳ್ಳದೆ ತನ್ಮಯಳಾಗಿ ಕಥೆ ಕೇಳುವುದರಲ್ಲಿ ಮಗ್ನಳಾಗಿದ್ದಳು. ಬಹಳ ಹೊತ್ತು ಬಹಳಷ್ಟು ಕಥೆಗಳನ್ನು ಹೇಳಿದ ಬಳಿಕ ಚಿತ್ರಕನು ಗಾಬರಿಗೊಂಡು ಎಚ್ಚತ್ತವನ ಹಾಗೆ ‘ಇನ್ನು ಸಾಕು. ನನ್ನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಿಬಿಟ್ಟೆ’ ಎಂದು ಹೇಳಿದನು.
ರಟ್ಟಾ- ‘ಇನ್ನೂ ಯಾವುದಾದರೂ… ಹೇಳಿರಿ.’
ಚಿತ್ರಕ ನಕ್ಕು, ಪರಿಹಾಸ್ಯ ಮಾಡುತ್ತ ‘ರಾಜಕುಮಾರಿಗೆ ಹಸಿವು ಬಾಯಾರಿಕೆ ಏನೂ ಇಲ್ಲವೆಂದು ಕಾಣುತ್ತದೆ. ಹೊತ್ತು ಎಷ್ಟಾಗಿದೆ ಎಂಬುದರ ಬಗ್ಗೆ ಗಮನವೇ ಇದ್ದಂತಿಲ್ಲ’ ಎಂದು ಹೇಳಿದನು.
ರಟ್ಟಾ- ‘ಅಬ್ಬಬ್ಬಾ! ಇಷ್ಟೊಂದು ಕಥೆ ಹೇಳಿ ಹೇಳಿ ತಮಗೆ ಖಂಡಿತವಾಗಿಯೂ ಹಸಿವು ಹೆಚ್ಚಾಗಿರಬಹುದು.’
ಚಿತ್ರಕ- ‘ಹೌದು. ಅದೇನೊ ನಿಜ. ತಮಗೆ?’
ರಟ್ಟಾ- (ನಾಚಿಕೆಯಿಂದ ನಗುತ್ತ) ‘ನಮಗೂ ಕೂಡ. ಇದುವರೆಗೂ ಗೊತ್ತಾಗಲೇ ಇಲ್ಲ’ ಆದರೆ ಏನು ಮಾಡುವುದು? ನಾವು ಜೊತೆಯಲ್ಲಿ ಏನೂ ತಿನ್ನುವ ಪದಾರ್ಥ ತರಲೇ ಇಲ್ಲವಲ್ಲಾ!
ರಟ್ಟಾ- ‘ಚಿಂತಿಸಬೇಡಿ, ಅದಕ್ಕೂ ವ್ಯವಸ್ಥೆಯಾಗುತ್ತದೆ. ಅಲ್ಲಿ ನೋಡಿ’- ಎಂದು ಹೇಳಿ ಚಿತ್ರಕನು ಪಕ್ಕದ ದಿಕ್ಕಿಗೆ ಬೆರಳು ಸೂಡಿ ತೋರಿಸಿದನು.
ಸಮೀಪದ ಎರಡು ಬೆಟ್ಟಗಳ ನಡುವೆ ತಪ್ಪಲಿನಲ್ಲಿ ಒಂದು ಕಿರಿದಾದ ದಾರಿ ಮೇಲಕ್ಕೆ ಹೋಗಿತ್ತು. ಎಡಭಾಗದ ಬೆಟ್ಟದಲ್ಲಿ ಸ್ವಲ್ಪ ಮೇಲುಗಡೆ ಬಂಡೆಯಲ್ಲಿ ಸಾಲುಸಾಲಾದ ಕೆಲವು ಚೌಕಾಕಾರದ ಕೆಲವು ರಂಧ್ರಗಳು ಕಾಣಿಸುತ್ತಿವೆ. ಚಿತ್ರಕ ಕೈ ನೀಡಿ ತೋರಿಸಿದ ಕಡೆಗೆ ತಿರುಗಿ ರಟ್ಟಾ ನೋಡುತ್ತಾಳೆ. ಒಂದು ದೇವಾಲಯ; ಬಹುಶಃ ಬುದ್ಧನ ಸಂಘವಿರಬೇಕು. ಅಲ್ಲಿ ಮನುಷ್ಯರು ವಾಸಿಸುತ್ತಾರೆಂಬುದಕ್ಕೆ ಸಾಕ್ಷಿಯಾಗಿ ಒಂದು ಕಿಟಕಿಯಿಂದ ಜೋತು ಬಿದ್ದ ಹಳದಿ ಬಣ್ಣದ ಉದ್ದವಾದ ವಸ್ತçವೊಂದು ಗಾಳಿಯಲ್ಲಿ ಹಾರಾಡುತ್ತಿದೆ.
ಚಿತ್ರಕ- ಬಟ್ಟೆ ಇದೆ ಎಂದಾದರೆ ಅಲ್ಲಿ ಜನರು ಇದ್ದೇ ಇರುತ್ತಾರೆ. ಜನ ಇದ್ದ ಮೇಲೆ ಖಾದ್ಯ ಪದಾರ್ಥ ಇದ್ದೇ ಇರುತ್ತದೆ. ಇನ್ನು ಹೆಚ್ಚು ತಡ ಮಾಡದೆ ಅಲ್ಲಿಗೆ ಹೋಗುವುದೇ ಒಳ್ಳೆಯದು. ರಟ್ಟಾ ನಕ್ಕು ಸಮ್ಮತಿ ಸೂಚಿಸಿದಳು. ಆದರೆ ಕುದುರೆ ಮೇಲೆ ಕುಳಿತು ಅಲ್ಲಿಗೆ ಹೋಗುವುದು ಕಷ್ಟ. ಆದ್ದರಿಂದ ಅವರು ಕುದುರೆಗಳನ್ನು ಅಲ್ಲಿಯೇ ಮೇಯಲು ಬಿಟ್ಟು ಕಾಲುನಡಿಗೆಯಲ್ಲಿಯೇ ಬೆಟ್ಟವನ್ನೇರಿದರು.
ಜಾಗ ಎತ್ತರದಲ್ಲಿದ್ದರೂ ಕಡಿದಾಗಿರಲಿಲ್ಲ. ಅಲ್ಲದೆ ಅಲ್ಲಿ ಒಂದು ಕಾಲು ದಾರಿ ಇತ್ತು. ಅಸಮತಟ್ಟಾದ ಬಂಡೆಗಳನ್ನು ಏರುತ್ತ ಇಳಿಯುತ್ತ ಕಡೆಗೆ ಗಮ್ಯಸ್ಥಾನವನ್ನು ತಲುಪಿದರು- ಚಿತ್ರಕ ಮುಂದೆ, ರಟ್ಟಾ ಹಿಂದೆ.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)