ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 36

ಹಿಂದಿನ ಸಂಚಿಕೆಯಿಂದ….

ರಟ್ಟಾ ಮತ್ತು ಚಿತ್ರಕ ಇವರುಗಳಿಗೆ ಕೊಡ ಮಾಡಿದ ಕೊಠಡಿಗಳು ಇತರೆ ಕೊಠಡಿಗಳಂತೆಯೇ ಆದರೂ ಇವರ ಕೊಠಡಿಯ ನೆಲಕ್ಕೆ ಒಂಟೆ ಕೂದಲಿನ ಕಂಬಳಿ ಹಾಸಿ ಅದರ ಮೇಲೆ ಮೆತ್ತನೆಯ ಹಾಸಿಗೆಗಳನ್ನು ಹಾಸಿದ್ದರು. ಮೂಲೆಯಲ್ಲಿ ಹಿತ್ತಾಳೆಯ ದೀಪದ ಕಂಬದಲ್ಲಿ ಎಣ್ಣೆ ಬತ್ತಿ ಉರಿಯುತ್ತಿತ್ತು. ರಾಜಕುಮಾರಿಯ ಅಂತಸ್ಥಿಗೆ ಇದು ತಕ್ಕುದಲ್ಲವಾದರೂ, ರಟ್ಟಾ ಇದನ್ನು ನೋಡಿ ಸಂಪ್ರೀತಳಾಗಳು.

ಅತಿಥಿಗಳಿಬ್ಬರೂ ಹಾಲುಕೀರು, ಅಮ್ಲಸೀಧು ಕಡಿದು ಹಸಿವು ಬಾಯಾರಿಕೆಗಳನ್ನು ಹೋಗಲಾಡಿಸಿಕೊಂಡರು. ರಾತ್ರಿ ಊಟವೊಂದು ಬಾಕಿ ಇತ್ತು.

ಇದಾದ ನಂತರ ಚಿತ್ರಕ ಮೇಲೆದ್ದು ರಟ್ಟಾಳಿಗೆ ‘ತಾವು ಸ್ವಲ್ಪ ಹೊತ್ತು ವಿಶ್ರಮಿಸಿರಿ’ ಎಂದು ಹೇಳಿ ಕೊಠಡಿಯ ಬಾಗಿಲು ಮುಚ್ಚಿ, ಹೊರಬಂದನು.

ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿದ್ದವು. ಕತ್ತಲು ಕವಿದಿತ್ತು. ಇನ್ನೂ ಚಂದ್ರ ಹುಟ್ಟಿರಲಿಲ್ಲ. ಪಾಂಥಶಾಲೆಯ ಅಂಗಳದಲ್ಲಿ ಅಲ್ಲಲ್ಲಿ ಬೆಂಕಿ ಉರಿಯುತ್ತಿತ್ತು. ಒಂದು ಕಡೆ ಪಾರಸೀಕರು ಬೆಂಕಿಯ ಉರಿಯಲ್ಲಿ ಸಲಾಕಿಗೆ ಮಾಂಸ ಸಿಕ್ಕಿಸಿ ಬೇಯಿಸುತ್ತಿದ್ದರು. ಸುಟ್ಟ ಮಾಂಸ ಹಾಗೂ ಮಸಾಲೆಯ ಸುವಾಸನೆ ಘ್ರಾಣೇಂದ್ರಿಯಕ್ಕೆ ಹಿತವನ್ನುಂಟುಮಾಡುತ್ತಿತ್ತು.

ಚಿತ್ರಕ- ಹಿಂದುಗಳು ತಯಾರಿಸಿದ ಈರುಳ್ಳಿ ತಿನ್ನುವ ಈ ಮ್ಲೇಚ್ಛರು ಅಡುಗೆಯಲ್ಲಿಯೂ ನಿಸ್ಸೀಮರು. ಜಂಬುಕ, ನಮ್ಮ ರಾತ್ರಿ ಊಟಕ್ಕೆ ಏನು ಏರ್ಪಾಟು ಮಾಡಿದ್ದೀಯೆ?

ಜಂಬುಕನು ಖಾದ್ಯಗಳು ಒಂದು ದೊಡ್ಡ ಪಟ್ಟಿಯನ್ನೇ ಮುಂದಿಟ್ಟನು.
ಮೊದಲು ಮಿಷ್ಟಾನ್ನ: ಜೇನುತುಪ್ಪ ಹಾಕಿ ಮಾಡಿದ ರವೆಉಂಡೆ, ಲಾಡು ಹಾಗೂ ಕೀರು. ಮತ್ತೆ ತರಕಾರಿ, ತುಪ್ಪದ ಅನ್ನ, ಬೇಳೆಯ ತೊವ್ವೆ, ನವಿಲುಮೊಟ್ಟೆ, ರೊಟ್ಟಿ ಹಾಗೂ ಬೇಯಿಸಿದ ಹಾಗೂ ಸುಟ್ಟ ಮಾಂಸ, ಜೊತೆಗೆ ಮೊಸರು.

ಚಿತ್ರಕ- (ಸಂತುಷ್ಟಗೊಂಡು) ಒಳ್ಳೆಯದು, ದೇವದುಹಿತೆಗೆ ತೊಂದರೆಯೇನೂ ಆಗುವುದಿಲ್ಲ. ಜಂಬುಕ, ಇಲ್ಲಿ ಕೇಳು. ಶೂಲ್ಯಮಾಂಸವನ್ನು ನಾನು ತಯಾರಿಸುತ್ತೇನೆ.

ಜಂಬುಕನಿಗೆ ದಿಕ್ಕು ತೋಚದ ಹಾಗಾಯಿತು ಆದರೂ ಕೂಡಲೆ ಒಪ್ಪಿಕೊಂಡು ‘ತಮ್ಮ ಇಷ್ಟದಂತೆಯೇ ಆಗಲಿ’ ಎಂದನು.

ಚಿತ್ರಕನು ತಮ್ಮ ಕೊಠಡಿಯ ಮುಂಭಾಗದ ಅಂಗಳದಲ್ಲಿ ಒಂದು ಜಾಗವನ್ನು ತೋರಿಸಿ, ಒಲೆ ಹೊತ್ತಿಸಿಕೊಡುವಂತೆ ಸೂಚಿಸಿದನು.

ಜಂಬುಕನ ನಿರ್ದೇಶಾನುಸಾರ ಒಬ್ಬ ಸೇವಕನು ಒಲೆ ಹೊತ್ತಿಸಲು ಬೇಕಾದ ಏರ್ಪಾಟು ಮಾಡಿದನು. ಈ ಮಧ್ಯೆ ಆ ಕಡೆ ಈ ಕಡೆ ಅಡ್ಡಾಡುತ್ತಿರುವಾಗ ಚಿತ್ರಕನ ದೃಷ್ಟಿ ಒಂದು ಏಣಿಯ ಮೇಲೆ ಬಿದ್ದಿತು. ಸಾಲು ಕೊಠಡಿಗಳು ಕೊನೆಗೊಳ್ಳುವ ಜಾಗದಲ್ಲಿ ಒಂದು ಕಡೆ ಗೋಡೆಗೆ ಒರಗಿಸಿದ ಬಿದಿರಿನ ಏಣಿಯೊಂದಿತ್ತು. ಮಾಳಿಗೆ ಮೇಲಕ್ಕೆ ಹತ್ತಿ ಹೋಗಲು ಆ ಏಣಿಯನ್ನು ಬಳಸುತ್ತಿದ್ದರು. ಚಿತ್ರಕನು ಗೊಂದಲಕ್ಕೀಡಾದನು. ಮೇಲಕ್ಕೇರಲು ಏಣಿ ಏಕೆ? ಮೇಲೆ ಯಾರಾದರೂ ಬಚ್ಚಿಟ್ಟುಕೊಂಡಿದ್ದಾರೆಯೋ ಏನೋ! ಚಿತ್ರಕನು ಜಂಬುಕನಿಗೆ ಏಣಿ ತೋರಿಸಿ ‘ಮಾಳಿಗೆ ಮೇಲೆ ಏನಿದೆ?’ ಎಂದು ಕೇಳಿದನು.

ಜಂಬುಕ- ಒಣಗಿದ ಉರುವಲು ಸೌದೆ ಇದೆ. ಇನ್ನೇನೂ ಇಲ್ಲ.

ಚಿತ್ರಕನ ಸಂದೇಹ ನಿವಾರಣೆಯಾಗಲಿಲ್ಲ. ತನ್ನ ಕಣ್ಣಿಂದಲೇ ನೋಡಿ ಅನುಮಾನ ಪರಿಹರಿಸಿಕೊಳ್ಳಲು ಏಣಿ ಹತ್ತಿ ಮೇಲೆ ಹೋದನು. ‘ನೀನೂ ಬಾ’ ಎಂದು ಜಂಬುಕನನ್ನು ಕರೆದನು.

ನಿಜವಾಗಿಯೂ ಉರುವಲು ಕಟ್ಟಿಗೆ ಬಿಟ್ಟರೆ, ಅಲ್ಲಿ ಬೇರೆ ಏನೂ ಇರಲಿಲ್ಲ. ನಕ್ಷತ್ರಗಳ ಬೆಳಕಿನಲ್ಲಿ ತ್ರಿಭುಜಾಕಾರದ ಮಾಳಿಗೆಯ ಮೇಲೆಲ್ಲಾ ಓಡಾಡಿ ತನ್ನ ಅನುಮಾನ ಬಗೆಹರಿಸಿಕೊಂಡನು. ಮಾಳಿಗೆ ಮೇಲೆ ತಂಗಾಳಿ ಬೀಸಲು ಪ್ರಾರಂಭಿಸಿತು. ಸುತ್ತಲೂ ನೀರವತೆ. ಅಂಧಕಾರ, ಗಿರಿನದಿಗಳ ಹೃದಯದಲ್ಲಿ ನಕ್ಷತ್ರಗಳ ಪ್ರತಿಬಿಂಬ ಕಾಣಿಸುತ್ತಿತ್ತು.

ಚಿತ್ರಕ ಮಾಳಿಗೆಯಿಂದ ಇಳಿಯಬೇಕೆನ್ನುವಷ್ಟರಲ್ಲಿ ಕತ್ತಲ ಒಡಲಾಳದಿಂದ ಜೋರಾದ ಶಬ್ದ ಕೇಳಿ ಬಂತು. ನರಿಗಳ ಗುಂಪು ಹತ್ತಿರದಲ್ಲಿಯೇ ಎಲ್ಲಿಯೋ ಕುಳಿತು ಊಳಿಡುತ್ತಿದೆ. ಆ ಕೂಗು ಬರು ಬರುತ್ತ ಕಡಿಮೆಯಾಯಿತು. ಆಗ ಚಿತ್ರಕ ನಕ್ಕು ‘ಇಲ್ಲಿ
ಜಂಬುಕ (ನರಿ)ಗಳಿಗೇನೂ ಬರವಿಲ್ಲವೆಂದು ಕಾಣುತ್ತದೆ’ ಎಂದನು.

ಜಂಬುಕನೂ ನಕ್ಕು ‘ಭೂಮಿಯಲ್ಲಿ ಜಂಬುಕಗಳಿಗೇನೂ ಬರವಿಲ್ಲ ಆದರೆ ‘ಜಯಕಂಬು’ಗಳು ಹೆಚ್ಚಿಗೆ ಇರಲಾರರು. ಅಲ್ಲವೇ ಸ್ವಾಮಿ?’ ಎಂದನು.

ಚಿತ್ರಕ- ಅದೇನೋ ನಿಜವೇ. ನೀನು ಉತ್ತಮವಾದ ಪಾಂಥಪಾಲ.

ಅದೇ ಸಮಯದಲ್ಲಿ ಪಶ್ಚಿಮ ದಿಗಂತದ ಕಡೆ ಚಿತ್ರಕ ದೃಷ್ಟಿ ಹರಿಯಿತು. ಬಹುದೂರದಲ್ಲಿ ದಿಕ್ತಟದ ಸಮೀಪದಲ್ಲಿರುವ ಬೆಟ್ಟದಲ್ಲಿ ಬೆಂಕಿ ಬಿದ್ದಿರುವ ಹಾಗೆ ಗೋಚರಿಸಿತು. ಬೆಂಕಿ ಕಾಣಿಸುತ್ತಿಲ್ಲ. ಆದರೆ ಅದರಿಂದ ಹೊರಬಿದ್ದ ಪ್ರಭೆ ದಿಗಂತವನ್ನು ಕೆಂಪಾಗಿಸಿತ್ತು.

ಆ ಕಡೆ ಕೈ ತೋರಿಸಿ ಚಿತ್ರಕನು ‘ಅದೇನು? ಬೆಟ್ಟದ ಮೇಲಿನ ಕಾಡಿನಲ್ಲಿ ಬೆಂಕಿ ಬಿದ್ದಿದೆಯೇ’ ಎಂದು ಜಂಬುಕನನ್ನು ಪ್ರಶ್ನಿಸಿದನು.

ಜಂಬುಕ- ಹಾಗೆಂದು ನನಗೆ ತೋರುವುದಿಲ್ಲ. ಕೆಲವು ದಿನಗಳಿಂದ ನೋಡುತ್ತಿದ್ದೇನೆ. ಆ ಬೆಂಕಿಯ ಬೆಳಕು ಒಂದೇ ಜಾಗದಲ್ಲಿ ಕಾಣುತ್ತಿದೆ. ಕಾಳ್ಗಿಚ್ಚಾಗಿದ್ದರೆ ಎಡಕ್ಕೂ ಬಲಕ್ಕೂ ಹಬ್ಬಬೇಕಾಗಿತ್ತು’. ‘ಹಾಗಾದರೆ ಅದು ಏನು? ಆ ದಿಕ್ಕಿನಲ್ಲಿ ಯಾವುದಾದರೂ ನಗರವಿದೆಯೆ? ನಗರ ಇದ್ದರೂ ರಾತ್ರಿ ಇಷ್ಟೊಂದು ಬೆಳಕು ಬರಲು ಹೇಗೆ ಸಾಧ್ಯ? ಈಗ
ದೀಪಾವಳಿಯ ಸಮಯವೂ ಅಲ್ಲ!’

‘ಆ ಕಡೆ ಯಾವ ನಗರವೂ ಇಲ್ಲ. ಆದರೆ…’

‘ಆದರೆ?’

‘ಪಾಂಥಶಾಲೆಗೆ ಅನೇಕರು ಬರುತ್ತಾರೆ; ಹೋಗುತ್ತಾರೆ. ಏನೇನೋ ಹೇಳುತ್ತಾರೆ. ಹೂಣರು ಮತ್ತೆ ಬಂದಿದ್ದಾರಂತೆ. ಈ ಮಾತು ನಿಜವಾದರೆ ಮತ್ತೆ ದೇಶದಲ್ಲೆಲ್ಲ ಹಾಹಾಕಾರ ಉಂಟಾಗುವುದು ಖಚಿತ.’ ಎಂದು ಹೇಳಿ ಜಂಬುಕ ನಿಡುಸುಯ್ದನು.

ಚಿತ್ರಕ- ಹೂಣರು ಈ ಪ್ರದೇಶದಲ್ಲಿ ಶಿಬಿರ ಸ್ಥಾಪಿಸಿದ್ದಾರೆಂದು ನಿನ್ನ ಭಾವನೆಯೆ?

ಜಂಬುಕ- ಇಲ್ಲ, ಇಲ್ಲ ಹಾಗೇನೂ ಇಲ್ಲ. ಹೂಣರು ಇಷ್ಟು ಹತ್ತಿರ ಬಂದಿದ್ದರೆ ಊಟಿ, ದರೋಡೆ, ಅತ್ಯಾಚಾರ ಮಾಡದೆ ಇರುತ್ತಿರಲಿಲ್ಲ. ಅವರು ಈ ಕಡೆ ಕಾಣಿಸುತ್ತಿಲ್ಲ.

ಚಿತ್ರಕ- ಹಾಗಾದರೆ, ಅದು ಏನಿರಬಹುದು?

ಜಂಬುಕ- ಸಮ್ರಾಟ್ ಸ್ಕಂದಗುಪ್ತರು ಹೂಣರ ದಾಳಿಯನ್ನು ತಡೆಯುವುದಕ್ಕಾಗಿ ಇತ್ತ ಕಡೆ ಬಂದಿದ್ದಾರೆಂದು ಅವರಿವರು ಹೇಳುವುದನ್ನು ಕೇಳಿದ್ದೇನೆ.

ಚಿತ್ರಕ- (ವಿಸ್ಮಿತವಾಗಿ) ಏನು ಸ್ವಯಂ ಸ್ಕಂದಗುಪ್ತರೇ?

ಜಂಬುಕ – ಹಾಗೆಂದು ಕೇಳಿದ್ದೇನೆ. ಸುಳ್ಳೋ ನಿಜವೋ ತಿಳಿಯದು.

ಏಕೆ, ನಿಮಗಿದು ಗೊತ್ತಿಲ್ಲವೆ?

ಚಿತ್ರಕನಿಗೆ ದಿಕ್ಕು ತೋಚದ ಹಾಗಾಯಿತು.

ಸ್ವಲ್ಪ ಸುಧಾರಿಸಿಕೊಂಡು ‘ಇಲ್ಲ ಇಲ್ಲ. ನನಗೇನೂ ಗೊತ್ತಿಲ್ಲ. ನಾನು ಪಾಟಲಿಪುತ್ರ ಬಿಟ್ಟು ಬಹಳ ದಿನಗಳಾದುವು’ ಎಂದನು.

ಚಿತ್ರಕ ಮತ್ತು ಜಂಬುಕ ಮಾಳಿಗೆಯಿಂದ ಕೆಳಗೆ ಇಳಿದು ಬಂದರು.

ಈ ಮಧ್ಯೆ ಪಾಂಥಶಾಲೆಯ ಸೇವಕನೊಬ್ಬನು ಒಲೆ ಹೊತ್ತಿಸಿ ಶೂಲ್ಯ ಮಾಂಸ ಬೇಯಿಸಲು ಬೇಕಾದ ಉಪಕರಣಳನ್ನು ಸಿದ್ಧಪಡಿಸಿದ್ದನು. ಇದನ್ನೆಲ್ಲ ನೋಡಿದ ಚಿತ್ರಕನು ಮೊದಲು ರಟ್ಟಾ ಇದ್ದ ಕೊಠಡಿಯ ಬಾಗಿಲ ಬಳಿ ಹೋಗಿ ನಿಂತನು. ಬಾಗಿಲಿಗೆ ಕಿವಿ ಇಟ್ಟು ಕೇಳಿಸಿಕೊಂಡನು. ಏನೂ ಕೇಳಿಸಲಿಲ್ಲ. ಆಗ ಅವನು ಬಾಗಿಲನ್ನು ಸ್ವಲ್ಪ ತೆಗೆದು ಒಳಗೆ ನೋಡಿದನು. ದೀಪದ ಬೆಳಕಿನಲ್ಲಿ ಆಕೆ ಹಾಸಿಗೆಯ ಮೇಲೆ ಮಲಗಿ ನಿದ್ರಿಸುತ್ತಿದ್ದಳು. ಒಂದು ಕೈ ಕಣ್ಣುಗಳ ಮೇಲೆ ಇತ್ತು. ಗಾಢ ನಿದ್ರೆಯಲ್ಲಿರುವಂತೆ ತೋರಿತು. ಏಕಾಂತದಲ್ಲಿರುವ ಆಕೆಯನ್ನು ನೋಡಿದ ಕೂಡಲೆ ಚಿತ್ರಕನಲ್ಲಿ ಒಂದು ರೀತಿಯ ಅಪೂರ್ವ ಚಾಂಚಲ್ಯ ಉಂಟಾಯಿತು. ಕಸ್ತೂರಿಯ ಸುವಾಸನೆಯಂತೆ ಮಾದಕ-ಮಧುರ- ಶೃಂಗಾರ ಭಾವನೆಗಳು ಚಿತ್ರಕನ ಹೃದಯದಲ್ಲಿ ತುಂಬಿ ಬಂದವು, ಅವನು ‘ಮಲಗು, ರಾಜಕುಮಾರಿ, ಮಲಗಿ ಚೆನ್ನಾಗಿ ನಿದ್ರಿಸು’ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತ, ಶಬ್ದ ಮಾಡದೆ ಬಾಗಿಲು ಮುಚ್ಚಿ ಹೊರಬಂದನು.

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *