ಹಿಂದಿನ ಸಂಚಿಕೆಯಿಂದ….
ರಟ್ಟ ಮತ್ತು ಕಿರಾತರ ವಿಷಯವಾಗಿ ನಗರದಲ್ಲಿ ಗುಸು ಗುಸು ಪ್ರಾರಂಭವಾಯಿತು. ಸಚಿವರೂ ಸಭಾಸದರೂ ಇದನ್ನು ಮೊದಲೇ ಗಮನಿಸಿದ್ದರು. ಕೊನೆಗೆ ರಾಜನ ಗಮನಕ್ಕೂ ಬಂದಿತು.
ಮೊದಮೊದಲು ರಾಜನಿಗೆ ವಿಸ್ಮಯವಾಯಿತು. ಆ ನಂತರ ಮಂತ್ರಿಗಳೊಡನೆ ಸಮಾಲೋಚಿಸಿದನು. ಉದ್ಧತ ಪ್ರಕೃತಿಯ ಕಿರಾತನ ಬಗೆಗೆ ಯಾರೂ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. ರಟ್ಟಾ ರಾಜ್ಯದ ಉತ್ತರಾಧಿಕಾರಿಯಾಗಿರುವುದರಿಂದ ಒಬ್ಬ ಸಾಮಾನ್ಯ ಸಾಮಂತರಾಜನ ಮಗನೊಂದಿಗೆ ವಿವಾಹ ಸಲ್ಲದು. ಧಕ್ಕೆ ಉಂಟಾಗುವುದು. ಆದ್ದರಿಂದ ತಮ್ಮ ಅಧಿಕಾರವನ್ನು ಸ್ಥಿರವಾಗಿ ಪ್ರತಿಷ್ಠಾಪಿಸಲು ಬೇರೆ ಯಾವುದಾದರೂ ರಾಜವಂಶದ ಜೊತೆಗೆ
ಸಂಬಂಧ ಬೆಳೆಸುವುದು ಒಳ್ಳೆಯದು. ಮಿತ್ರನಾದವನು ಸಂಬಂಧಿಯೂ ಆಗಿಬಿಟ್ಟರೆ ಆಪತ್ಕಾಲದಲ್ಲಿ ನೆರವಾಗುವುದರಲ್ಲಿ ಸಂದೇಹವಿಲ್ಲವೆಂದು ಮಂತ್ರಿಗಳು ಸಲಹೆ ನೀಡಿದರು.
ಮಂತ್ರಿಗಳ ಸಲಹೆ ರಾಜನಿಗೆ ಒಪ್ಪಿಗೆಯಾಯಿತು. ಮಹಾರಾಜನು ರಾಜಸಭೆಯಲ್ಲಿ ಕಿರಾತನ ಮನಸ್ಸಿಗೆ ಚುರುಕು ಮುಟ್ಟಿಸುವ..ಹಾಗೆ ಮೆಲುದನಿಯಲ್ಲಿ ‘ಅಯ್ಯಾ ಕುಮಾರ, ನಿನ್ನ ದುರ್ಗದ ಅಧಿಕಾರವನ್ನು ತ್ಯಜಿಸಿ, ದೀರ್ಘಕಾಲ ರಾಜಧಾನಿಯಲ್ಲಿ ವಿಲಾಸ ವ್ಯಸನಗಳಲ್ಲಿ ಕಾಲಕ್ಷೇಪ ಮಾಡುವುದು ಒಳ್ಳೆಯದಲ್ಲ’ ಎಂದು ಹೇಳಿದನು. ಕಿರಾತನು ರಾಜನ ಮುಖವನ್ನು ದುರುಗುಟ್ಟಿ ನೋಡುತ್ತ ನಿಂತು ಬಿಟ್ಟನು. ಆಮೇಲೆ ಒಂದು ಮಾತನ್ನು ಆಡದೆ ಸಭಾಭವನದಿಂದ ಹೊರ ನಡೆದನು. ಎಲ್ಲರೂ ನೋಡುತ್ತಿರುವಾಗಲೇ ಕುದುರೆ ಏರಿ ಕಪೋತಕೂಟವನ್ನು ತೊರೆದು, ಮತ್ತೆ ದುರ್ಗ ಸೇರಿದನು.
ಕಿರಾತನನ್ನು ಕಳುಹಿಸಿಕೊಟ್ಟ ನಂತರ ಮಹಾರಾಜನು ಪ್ರಾಪ್ತ ವಯಸ್ಕಳಾದ ಮಗಳ ವಿವಾಹದ ಬಗೆಗೆ ಚಿಂತಿಸತೊಡಗಿದನು. ಜೀವನ ಅನಿತ್ಯವಾದುದು. ತಾನು ಸಾಯುವ ಮೊದಲೇ ಮಗಳ ಮದುವೆಯಾಗದಿದ್ದರೆ, ಸಿಂಹಾಸನದ ಉತ್ತರಾಧಿಕಾರದ ವಿಷಯವಾಗಿ ಗೊಂದಲ ಉಂಟಾಗುವುದು ಖಂಡಿತ. ಆದ್ದರಿಂದ ಮಿತ್ರನಾದ ಗುರ್ಜರ ರಾಜನ ದ್ವಿತೀಯಪುತ್ರ ಕುಮಾರ ಭಟ್ಟಾರಕ ವಾರಣವರ್ಮಾ ಖ್ಯಾತಿವೆತ್ತ ವೀರ. ಅವನ ಹೆಸರಿಗೆ ನಿಮಂತ್ರಣ ಪತ್ರ ಕಳುಹಿಸತಕ್ಕದ್ದು. ಅವನು ಬಂದು ವಿಟಂಕ ರಾಜ್ಯದಲ್ಲಿ ಕೆಲಕಾಲ ಇರತಕ್ಕದ್ದು, ಆ ನಂತರ ರಾಜಕನ್ಯೆಯೊಡನೆ ಮುಖಾಮುಖಿಯಾಗಿ ಅವರಿಬ್ಬರಲ್ಲಿ ಅನುರಾಗ ಮೂಡಿದರೆ ಮುಂದಿನ ಕಾರ್ಯಕ್ಕೆ ನೆರವಾಗಬಹುದು ಎಂಬುದಾಗಿ ಮಂತ್ರಾಲೋಚನ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಯಿತು.
ಯಥೋಚಿತ ರೀತಿಯಲ್ಲಿ ನಿಮಂತ್ರಣ ಪತ್ರ ಕಳುಹಿಸಿಕೊಡಲಾಯಿತು. ಪತ್ರದಲ್ಲಿ ವಿವಾಹದ ವಿಷಯ ಉಲ್ಲೇಖಿಸಿರಲಿಲ್ಲ. ಆದರೆ ಗುರ್ಜರ ರಾಜನಿಗೆ ಪತ್ರದಲ್ಲಿ ಅಡಗಿರುವ ಅಭಿಪ್ರಾಯ ಅರ್ಥವಾಯಿತು. ರಾಜನೀತಿ ಕ್ಷೇತ್ರದಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ತಿಳಿಸಿ ಹೇಳುವ ರೀತಿ ಯಾವ ಕಾಲದಲ್ಲಿಯೂ ಇರಲಿಲ್ಲ.
ಅನತಿ ಕಾಲದಲ್ಲಿಯೇ ಗುರ್ಜರ ರಾಜಕುಮಾರ ವಾರಣವರ್ಮಾ ಮಹಾ ವೈಭವದೊಡನೆ ವಿಟಂಕ ರಾಜ್ಯಕ್ಕೆ ಬಂದು ಬಿಟ್ಟನು. ರಾಜ ಸಭೆಯಲ್ಲಿ ರಟ್ಟಾಳ ಜೊತೆಗೆ ಅವನ ಭೇಟಿಯಾಯಿತು. ಪ್ರಥಮ ದರ್ಶನದಲ್ಲಿಯೇ ರಟ್ಟಾ ಸ್ತಂಭಿತಳಾದಳು. ಕುಮಾರ ಭಟ್ಟಾರಕ ವಾರಣ ವರ್ಮನ ಮೂರ್ತಿಯೇ ವಿರೋಚಿತವಾಗಿತ್ತು. ಎತ್ತರಕ್ಕೆ ಸಮಾನವಾಗಿ ಸ್ಥೂಲದೇಹ. ಮುಂಭಾಗದಲ್ಲಿ ಹೊಟ್ಟೆ, ಹಿಂಭಾಗದಲ್ಲಿ ನಿತಂಬಗಳು ರಣಭೇರಿಯ ಹಾಗೆ ದುಂಡಾಗಿ ಮುಂಚಾಚಿದ್ದುವು. ಮುಖಮಂಡಲದಲ್ಲಿ ಭರ್ಜರಿ ಮೀಸೆ ಹಾಗೂ ಹುಬ್ಬಿನ ತುಂಬ ಕೂದಲು, ಅವನನ್ನು ನೋಡಿದರೆ ಗುರ್ಜರ ದೇಶದ ಪ್ರಸಿದ್ಧವಾದ ಆನೆಗಳ ವಿಷಯ ನೆನಪಿಗೆ ಬರುತ್ತಿತ್ತು. ರಟ್ಟಾ ಕ್ಷಣ ಕಾಲ ಅರಳಿದ ಕಣ್ಣುಗಳಿಂದ ಅವನನ್ನು ದಿಟ್ಟಿಸಿ ನೋಡಿ ಸಭಾ ಮಧ್ಯದಲ್ಲಿಯೇ ನಕ್ಕೂ ನಕ್ಕೂ ಸುಸ್ತಾಗಿ ಕತ್ತರಿಸಿದ ಬಳ್ಳಿಯ ಹಾಗೆ ನೆಲದ ಮೇಲೆ ಬಿದ್ದು ಹೊರಳಾಡಿದಳು.
ವಿವಾಹದ ವಿಷಯ ಅಲ್ಲಿಗೇ ಕೊನೆಯಾಯಿತು. ವಾರಣ ವರ್ಮಾ ಖಿನ್ನನಾಗಿ ಮರುದಿನವೇ ತನ್ನ ರಾಜ್ಯಕ್ಕೆ ಪ್ರಯಾಣ ಬೆಳೆಸಿದನು.
ಸುಗೋಪ ಸಖೀಸುಲಭ ಚಪಲತೆಯಿಂದ ರಟ್ಟಾಳಿಗೆ ಈ ಘಟನೆಯ ನೆನಪು ಮಾಡಿಕೊಟ್ಟು ಪರಿಹಾಸ ಮಾಡುತ್ತಿದ್ದಳು. ಆಗ ರಟ್ಟಾಳ ಪ್ರಶ್ನೆಗೆ ಉತ್ತರವಾಗಿ ಸುಗೋಪಾ ‘ನನ್ನ ವಿಷಯ ಬಿಡು. ಸಾಕ್ಷಾತ್ ಇಂದ್ರನ ಕೊರಳಿಗೆ ಮಾಲೆ ಹಾಕಿದರೂ ನಾನು ಸುಖಿಯಾಗಲಾರೆ. ನನ್ನ ವಿಷಯ ಚಿಂತಿಸುತ್ತ ಹೋದರೆ ಯಾವುದೂ ಆಗುವುದಿಲ್ಲ’ ಎಂದು ಹೇಳಿದಳು.
ರಟ್ಟಾ- ‘ಹಾಗಾದರೆ ಯಾರ ವಿಷಯ ನಡೆಯುತ್ತದೆ?’
ಸುಗೋಪಾ- ‘ನಿನ್ನ ವಿಷಯ. ಇದು ದೇವಭೋಗ್ಯವಾದ ಯೌವನ. ಹೂವು ಮತ್ತು ಚಂದನದಿಂದ ಸಿಂಗರಿಸಿ ನಾನೇ ಚೆನ್ನಾಗಿ ನೋಡುತ್ತೇನೆ. ಇನ್ನು ದೇವತೆಗಳಿಗೆ ಪ್ರಿಯವಾಗದೆ ಇರಲಾರೆಯ?’
ರಟ್ಟಾ- ‘ನನ್ನ ಯೌವನವನ್ನು ನಾನು ಚೆನ್ನಾಗಿ ಕಾಯ್ದುಕೊಳ್ಳುತ್ತೇನೆ. ಯಾರಿಗೂ ಭೋಗಿಸಲು ಕೊಡುವುದಿಲ್ಲ.’
ಸುಗೋಪಾ ನಕ್ಕು ಬಿಟ್ಟಳು.
ಸುಗೋಪಾ- ‘ಸಖಿ, ವಿಧಿ ಪ್ರೇರಿತ ಭೋಕ್ತøವು ಯಾವ ದಿನ ನಿನ್ನ ಕೈ ಹಿಡಿಯುವನೋ, ಆ ದಿನ ಆ ಯೌವನವನ್ನು ಬಚ್ಚಿಟ್ಟು ರಕ್ಷಿಸಿಕೊಳ್ಳಲಾರೆ. ತನುಮನ ಹಾಗೂ ಸರ್ವಸ್ವವನ್ನೂ ಅವನ ಪಾದಗಳಿಗೆ ಸಮರ್ಪಿಸಿಬಿಡುವೆ.’
ರಟ್ಟಾ- ‘ನೀನಾದರೊ ಆ ನಿನ್ನ ಮಾಲೆಕಾರನ ಪದತಲದಲ್ಲಿ ನಿನ್ನ ತನು-ಮನಗಳನ್ನು ಒಪ್ಪಿಸಿದೆ ಎಂದು ಎಲ್ಲರೂ ಅದೇ ಮಾಲೆಕಾರನನ್ನು ಬಯಸಬೇಕೆ?
ಸುಗೋಪಾ- ‘ಹೌದು, ಖಂಡಿತವಾಗಿಯೂ ಬಯಸಬೇಕು. ಇಲ್ಲದಿದ್ದರೆ ನಾರಿಯರ ಯೌವನ- ನಿಕುಂಜದಲ್ಲಿ ಹೂಗಳನ್ನು ಅರಳಿಸುವವರಾರು?’
ರಟ್ಟಾ ಬೇರೆ ಯಾವ ಮಾತೂ ಆಡದೆ ನಗುಮೊಗದಿಂದ ಆಕಾಶದ ಕಡೆಗೆ ನೋಡಿದಳು. ಭವಿತವ್ಯದ ಕನಸು ಕಾಣುತ್ತಿದ್ದಾಳೆ ಎಂಬಂತೆ ಕಣ್ಣು ಮಂಪರಾಗಿದೆ. ಸುಗೋಪ ಕ್ಷಣಕಾಲ ಸುಮ್ಮನಿದ್ದು, ನಿಟ್ಟುಸಿರು ಬಿಟ್ಟು ‘ಮಹಾರಾಜರು ಏನು ಮಾಡುತ್ತಿದ್ದಾರೆಂಬುದು ಅವರಿಗೇ ಗೊತ್ತು. ಇದ್ದಕ್ಕಿದ್ದಂತೆ ಯಾರಿಗೂ ಹೇಳದೆ ಚಷ್ಟನ ದುರ್ಗಕ್ಕೆ ಹೋಗಿ ಕುಳಿತಿದ್ದಾರೆ. ಈ ಕಡೆ
ವಸಂತ ಋತು ಮುಗಿಯುತ್ತಾ ಬಂದಿದೆ. ಏಕೆ ಹೋಗಿದ್ದಾರೆಂದು ನಿನಗೇನಾದರೂ ತಿಳಿದಿದೆಯೇ?’ ಎಂದು ಕೇಳಿದಳು.
ರಟ್ಟಾ- ‘ಚಷ್ಟನದ ದುರ್ಗಾಧಿಪನಾದ ಕಿರಾತ ಪತ್ರ ಬರೆದಿದ್ದ. ಕೆಲವು ಚೀನೀ ಶ್ರಮಣರು ಬುದ್ಧನ ವಿಹಾರಭೂಮಿಯ ದರ್ಶನ ಮಾಡುವ ಉದ್ದೇಶದಿಂದ ಬಂದಿದ್ದಾರೆ. ಅವರು ಪಾಟಲಿಪುತ್ರದ ಕಡೆಗೆ ಹೋಗುವವರಿದ್ದಾರೆ. ಮಾರ್ಗಮಧ್ಯೇ ಕೆಲವು ದಿನಗಳ ಮಟ್ಟಿಗೆ ಚಷ್ಟನ ದುರ್ಗದಲ್ಲಿ ವಿಶ್ರಮಿಸಿಕೊಳ್ಳಲಿದ್ದಾರೆ. ಅದನು ಕೇಳಿದ ಮಹಾರಾಜರು ಅರ್ಹಂತರ ಸಂದರ್ಶಕ್ಕಾಗಿ ಹೋಗಿದ್ದಾರೆ.’
ಸುಗೋಪಾ ತಲೆಯಾಡಿಸಿ ‘ನಾನು ನಂಬಲಾರೆ. ಕಿರಾತನಾದರೊ ಮಹಾಧೂರ್ತ. ಏನೋ ಕಪಟ ನಾಟಕವಾಡಿ ಮಹಾರಾಜರನ್ನು ತನ್ನ ದುರ್ಗಕ್ಕೆ ಕರೆಸಿಕೊಂಡಿದ್ದಾನೆ. ಏನೋ ದುರುದ್ದೇಶವಿದೆ ಎಂದು ನನಗೆ ಅನ್ನಿಸುತ್ತದೆ. ಅವರನ್ನು ಏಕಾಂತದಲ್ಲಿ ಭೇಟಿ ಮಾಡಿ ಚಾಟೂಕ್ತಿಗಳಿಂದ ಮರುಳು ಮಾಡಿ, ನಿನ್ನ ಪಾಣಿಗ್ರಹಣ ಮಾಡಲು ಸಂಚು ರೂಪಿಸಿರಬಹುದು ಎಂದಳು.
‘ನೀನು ಕಿರಾತನನ್ನು ನೋಡಿ ಬಲ್ಲೆಯಾ?’
‘ಹಾಗೇನೂ ಇಲ್ಲ. ಆದರೆ ಈ ವಯಸ್ಸಿಗೇ ಅವನು ಘೋರ ಅತ್ಯಾಚಾರಿ ಎಂದೂ, ಮಹಾ ದುಷ್ಟನೆಂದೂ ಕೇಳಿ ಬಲ್ಲೆ.
‘ಆದರೆ ಬೇಟೆಯಲ್ಲಿ ಅವನು ಎಂದೂ ಗುರಿ ತಪ್ಪಿದವನಲ್ಲ.’
‘ಅಷ್ಟರಿಂದಲೇ ಅವನು ಸಜ್ಜನನಾಗುವುದಿಲ್ಲ. ಗಿಡುಗವೇನು ಒಳ್ಳೆಯ ಪಕ್ಷಿಯೆ?
‘ಕಿರಾತ ಎಲ್ಲರನ್ನೂ ಮಾತಿನಲ್ಲಿ ಚಕಿತಗೊಳಿಸುತ್ತಾನೆ. ಅವನ ಮಾತು ಕೇಳುವುದಕ್ಕೆ ಬಹಳ ಹಿತಕರವಾಗಿರುತ್ತದೆ.’
‘ಹಿತವಾದ ಮಾತುಗಳನ್ನಾಡುವವನನ್ನು ನಂಬಬೇಕೆಂದೇನೂ ಇಲ್ಲವಲ್ಲ.’
‘ನಿನ್ನ ಮಾಲೆಕಾರನು ಯಾವಾಗಲೂ ನಿನ್ನನ್ನು ಬೈಯುತ್ತಲೇ ಇರುತ್ತಾನೆಂದುಕೊಂಡಿದ್ದೇನೆ.’
ಸುಗೋಪಾ ದೃಢವಾದ ಧ್ವನಿಯಲ್ಲಿ ‘ತಮಾಷೆಯಲ್ಲ’ ಕಿರಾತ ನಿನ್ನ ಕಾಲಿನ ಕಡೆಗೆ ನೋಡಲೂ ಯೋಗ್ಯನಲ್ಲ. ಆದರೂ ಅವನು ನಿನ್ನ ಕೈ ಹಿಡಿಯಲು ಬಲವಾದ ಆಸೆ ಇಟ್ಟುಕೊಂಡಿದ್ದಾನೆ. ಅವನು ನಿನಗಾಗಿ ಹುಚ್ಚನಾಗಿದ್ದಾನೆ ಎಂದೇ ನನ್ನ ಭಾವನೆ’ ಎಂದು ಹೇಳಿದಳು.
ರಟ್ಟಾ ಒಂದು ಸಲ ಸಣ್ಣದಾಗಿ ನಕ್ಕು ಗಂಭೀರಳಾಗಿ ‘ಅವನು ಕೇವಲ ನನಗಾಗಿಯೇ ಅಲ್ಲ, ಈ ವಿಟಂಕ ರಾಜ್ಯವನ್ನು ಪಡೆಯುವುದಕ್ಕಾಗಿಯೂ ಹುಚ್ಚನಾಗಿದ್ದಾನೆ. ಆ ವಿಷಯ ಹಾಗಿರಲಿ. ಈಗ ರಾತ್ರಿ ಸರಿ ಹೊತ್ತಾಗುತ್ತ ಬಂತು. ಇನ್ನು ನೀನು ಮನೆಗೆ ಹೊರಡು’ ಎಂದು ಹೇಳಿದಳು.
‘ಅದು ಇರಲಿ, ನೀನೂ ಕೂಡ ಬಹಳ ಬಳಲಿರುವೆ. ಇಂದು ಇಡೀ ದಿನ ಈ ಕಾಡು ಆ ಕಾಡು ಎಂದು ಬೇಟೆ, ಅದರ ಮೇಲೆ ಕಳ್ಳರ ಉಪಟಳ, ಜಲಸತ್ರದಿಂದ ಕಾಲುನಡಿಗೆಯಲ್ಲಿಯೇ ಬಂದಿದ್ದೀಯೆ. ಮನುಷ್ಯರು ಕುದುರೆಯನ್ನು ಕದಿಯುತ್ತಾರೆಂದು ನಾನು ನನ್ನ ಜೀವಮಾನದಲ್ಲಿ ಎಂದೂ ಕೇಳಿರಲಿಲ್ಲ. ಅದೂ ಎಂಥ ಸಾಹಸ! ರಾಜಕುಮಾರಿಯ ಕುದುರೆಯನ್ನು ಕದಿಯುವುದು! ಹಾಗೆ ನೋಡಿದರೆ ಆ ವ್ಯಕ್ತಿ ಒಳ್ಳೆಯವನಲ್ಲವೆಂದು ಕಾಣುತ್ತದೆ. ತಮಗಾದ
ಅಪಮಾನವನ್ನು ಜ್ಞಾಪಿಸಿಕೊಂಡ ಸುಗೋಪಾಳಿಗೆ ಕೋಪ ಹೆಚ್ಚಾಯಿತು. ‘ನೀಚ, ಪರದೇಶಿ- ಕಳ್ಳ! ಈಗ ಅವನು ನನ್ನ ಕೈಗೆ ಸಿಕ್ಕಬೇಕು…’
‘ಏನು ಮಾಡುತ್ತೀಯೆ?’
‘ಶೂಲಕ್ಕೆ ಹಾಕಿಸುತ್ತೇನೆ.’
‘ನಾನೂ ಹಾಗೇ ಮಾಡುತ್ತೇನೆ. ಈಗ ಹೊರಡು, ಕಳ್ಳನ ಮೇಲೆ ಕೋಪಗೊಂಡು ಪತಿದೇವನಿಗೆ ತೊಂದರೆ ಕೊಡಬೇಡ. ನಿನ್ನನ್ನೂ ಯಾರಾದರೂ ಕಳ್ಳರು ಕದ್ದೊಯ್ದಿರಬಹುದೆಂದು ಭಾವಿಸಿ ಅವನು ನಿನ್ನ ದಾರಿ ಕಾಯುತ್ತ ಕುಳಿತಿರಬಹುದು.
‘ಮಾಲೆಕಾರನಿಗೆ ಆ ಭಯವಿಲ್ಲ. ನನ್ನನ್ನು ಅಪಹರಿಸುವಂಥ ಕಳ್ಳ ಇನ್ನೂ ಹುಟ್ಟಿಲ್ಲವೆಂದು ಅವನಿಗೆ ಚೆನ್ನಾಗಿ ಗೊತ್ತು. ಅವನು ಈ ಸಮಯದಲ್ಲಿ ಯಾವುದಾದರೂ ಪಡಖಾನೆಯಲ್ಲಿ ಬಿದ್ದುಕೊಂಡು ಅಪ್ಸರೆಯನ್ನೋ ಕಿನ್ನರಿಯನ್ನೋ ಸ್ವಪ್ನದಲ್ಲಿ ನೋಡುತ್ತಿರಬಹುದು. ಬರುತ್ತೇನೆ. ಅವನನ್ನು ಹುಡುಕಿ ಮನೆಗೆ ಕರೆದುಕೊಂಡು ಹೋಗಬೇಕು.’
‘ಪ್ರತಿನಿತ್ಯವೂ ಹೀಗೆ ಎಂದು ಕಾಣುತ್ತೆ?’
‘ಹೌದು! ಸುಗೋಪಾ ಮೃದುವಾಗಿ ನಕ್ಕು ‘ನನ್ನ ಮಾಲೆಕಾರನು ಕೆಟ್ಟವನೇನಲ್ಲ. ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಆದರೆ ಮದಿರಾ- ಸುಂದರಿಯರ ಬಗೆಗೆ ಅವನಿಗೆ ಸ್ವಲ್ಪ ಪ್ರೀತಿ ಹೆಚ್ಚು. ಬರುತ್ತೇನೆ. ಸಪತ್ನೀಗೃಹದಿಂದ ನನ್ನ ಪತಿದೇವನನ್ನು ಎಬ್ಬಿಸಿ ಕರೆದುಕೊಂಡು ಮನೆ ಸೇರಬೇಕಾಗಿದೆ. ನಗುನಗುತ್ತ ಸುಗೋಪಾ ಬೀಳ್ಕೊಂಡಳು. ಆಗ ಮಧ್ಯರಾತ್ರಿಗಿಂತ ಹೆಚ್ಚೇನು ಆಗಿರಲಿಲ್ಲ.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)
ಚಿತ್ರ ಸಂಗ್ರಹಣೆ: ಮಂಜುಳಾ ಸುದೀಪ್