ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 37

ಹಿಂದಿನ ಸಂಚಿಕೆಯಿಂದ….

ಚಂದ್ರೋದಯವಾಯಿತು. ಕೃಷ್ಣಪಕ್ಷದ ಚತುರ್ಥಿಯ ಚಂದ್ರನು ಪೂರ್ವಾಚಲದ ನೆತ್ತಿಯ ಮೇಲೆ ಕಾಣಿಸಿಕೊಂಡು ಬಲವಂತದ ನಗೆ ನಗುತ್ತಿದ್ದಾನೆ. ಪಾಂಥಶಾಲೆಯ ಅಂಗಳದಲ್ಲಿ ಯಾರೂ ಇಲ್ಲ. ಪಾರಸಿಕರು ತಮ್ಮ ಕೊಠಡಿಯ ಬಾಗಿಲು ಮುಚ್ಚಿಕೊಂಡಿದ್ದಾರೆ. ಅಂಗಳ ಚಂದ್ರನ ಮಂದ ಪ್ರಕಾಶದಿಂದ ಬೆಳಗಿದೆ.

Moonrise

ಚಿತ್ರಕ ರಟ್ಟಾಳ ಕೊಠಡಿಯ ಬಾಗಿಲು ಬಡಿದು ‘ದೇವಿ, ಏಳಿರಿ ಏಳಿರಿ. ಊಟಕ್ಕೆ ಬನ್ನಿರಿ’ ಎಂದು ಕರೆದನು.

ರಟ್ಟಾ ಬಾಗಿಲು ತೆರೆದು ಹೊರ ಬಂದು ನಗುತ್ತ ‘ನಿದ್ದೆ ಬಂದು ಮಲಗಿಬಿಟ್ಟಿದ್ದೆ’ ಎಂದಳು.

ಕೊಠಡಿಯ ಎದುರಿಗೆ ಊಟದ ವ್ಯವಸ್ಥೆ. ಎದುರು ಬದುರು ಎರಡು ಆಸನಗಳು. ನಡುವೆ ಬಟ್ಟಲು ಮತ್ತು ತಟ್ಟೆಗಳಲ್ಲಿ ಭಕ್ಷ್ಯ ಬೋಜ್ಯಗಳು. ಪಕ್ಕದಲ್ಲಿ ಎರಡು ದೀಪಗಳು ಇಬ್ಬರೂ ಊಟಕ್ಕೆ ಕುಳಿತರು. ಜಂಬುಕ ನಿಂತುಕೊಂಡೆ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದನು.

ಊಟದ ನಡುವೆಯೇ ನಾಲ್ಕಾರು ಮಾತುಕತೆ. ಜಂಬುಕನು ಮಧ್ಯೆ ಮಧ್ಯೆ ಮನರಂಜನೆಗಾಗಿ ಕೆಲವು ಉಪಕತೆಗಳನ್ನು ಹೇಳುತ್ತಿದ್ದನು. ರಾಜಕನ್ಯೆಯು ನಗುನಗುತ್ತ ಸಂತೋಷವಾಗಿ ಊಟ ಮಾಡಿದಳು. ಅವಳ ಕಣ್ಣುಗಳಲ್ಲಿ ಯಾವುದೇ ಉದ್ವೇಗ ಕಾಣದೆ ಪ್ರಶಾಂತತೆ ಕಾಣುತ್ತಿತ್ತು. ಚಿತ್ರಕನ ಹೃದಯದಲ್ಲಿ ಮಾತ್ರ ಏನೋ ಒಂದು ಬಗೆಯ ಕಳವಳ- ಸಾಗರದ ಅಲೆಗಳಲ್ಲಿ ಅವನ ಹೃದಯ ತೇಲುತ್ತ ಮುಳುಗುತ್ತ, ಏರುತ್ತ ಇಳಿಯುತ್ತ ಇದ್ದಿತು.

ರಟ್ಟಾ- ನಾಳೆ ನಮ್ಮ ತಂದೆಯವರನ್ನು ಕಾಣುತ್ತೇನೆಂಬ ಕಾರಣದಿಂದ ನನಗೆ ತುಂಬ ಸಂತೋಷವಾಗಿದೆ.

ಚಿತ್ರಕನ ಮನಸ್ಸಿನ ಮೇಲೆ ಮತ್ತೆ ಕಾರ್ಮೋಡ ಕವಿಯಿತು. ರಟ್ಟಾಳ ತಂದೆ… ಅವನ ಸಂಗಡ ಚಿತ್ರಕನಿಗೆ ಒಂದು ಗುರುತರ ಕಾರ್ಯವಿದೆ. ಆದರೆ ಅದರ ಚಿಂತೆ ಈಗಿಲ್ಲ…

ಚಿತ್ರಕ- ಒಂದು ವದಂತಿ ಬಂದಿದೆ. ಪರಮ ಭಟ್ಟಾರಕ ಸ್ಕಂದಗುಪ್ತರು ಚತುರಂಗ ಸೇನಾ ಸಮೇತರಾಗಿ ಈ ಕಡೆ ಬಂದಿದ್ದಾರಂತೆ.

ರಟ್ಟಾ- (ಆಶ್ಚರ್ಯದಿಂದ) ಏನು ಸ್ಕಂದಗುಪ್ತರೇ!

ಚಿತ್ರಕ- (ನಿರ್ಲಿಪ್ತನಾಗಿ) ಹೌದು. ಹೂಣರು ಮತ್ತೆ ಬಂದಿದ್ದಾರಲ್ಲವೆ? ಅವರನ್ನು ತಡೆಯುವುದಕ್ಕಾಗಿ ಸ್ವಯಂ ಮಹಾರಾಜರೇ ಬಂದಿದ್ದಾರೆ.

ರಟ್ಟಾ- (ಸ್ವಲ್ಪ ಹೊತ್ತು ತಲೆ ತಗ್ಗಿಸಿ, ನಂತರ ತಲೆ ಎತ್ತಿ) ಬಹುಶಃ ತಾವೂ ಕೂಡ ಪ್ರಭುಗಳ ಜೊತೆ ಸೇರಿಕೊಳ್ಳಬೇಕಾಗುತ್ತದೆಯೋ ಏನೋ?

ಚಿತ್ರಕ- ಅದು ಮುಂದಿನ ಮಾತು-ಮೊದಲು ತಮ್ಮನ್ನು ಚಷ್ಟನ ದುರ್ಗಕ್ಕೆ ತಲುಪಿಸಬೇಕು. ಆಮೇಲೆ ಬೇರೆ ಮಾತು.

ರಟ್ಟಾ ಚಿತ್ರಕನನ್ನು ಕಣ್ಣು ತುಂಬಾ ನೋಡಿ ಮೃದುವಾಗಿ ನಕ್ಕಳು.

ಊಟವಾದ ಮೇಲೆ ರಟ್ಟಾ ಜಂಬುಕನನ್ನು ಕುರಿತು ‘ನಿಮ್ಮ ಉಪಚಾರದಿಂದ ನಮಗೆ ಬಹಳ ತೃಪ್ತಿಯಾಗಿದೆ. ಭಕ್ಷ್ಯಭೋಜ್ಯಗಳು ಬಹಳ ರುಚಿಕರವಾಗಿದ್ದವು. ಅಲ್ಲಿ ನೋಡು. ಆರ್ಯ ಚಿತ್ರಕರು ಏನನ್ನೂ ಬಿಸಾಟಿಲ್ಲ.

ಜಂಬುಕ ಕೈಮುಗಿದು ವಿನಯದಿಂದ ಮುಗುಳು ನಗೆ ನಕ್ಕನು. ಚಿತ್ರಕ ಮೃದುವಾಗಿ ನಕ್ಕು ರಟ್ಟಾಳನ್ನು ಕುರಿತು ತಮಗೆ ಯಾವ ಪದಾರ್ಥ ಎಲ್ಲಕ್ಕಿಂತಲೂ ರುಚಿಕರವಾಗಿತ್ತು?’ ಎಂದು ಕೇಳಿದನು.
ರಟ್ಟಾ- ಶೂಲ್ಯ ಮಾಂಸ- ಈ ರೀತಿಯ ಸ್ವಾದಿಷ್ಟವಾದ ಅಡುಗೆಯನ್ನು ಅರಮನೆಯ ಬಾಣಸಿಗರೂ ಮಾಡುತ್ತಿರಲಿಲ್ಲ.

ಚಿತ್ರಕ ಒಳಗೊಳಗೇ ಮುಸಿ ಮುಸಿ ನಕ್ಕನು. ಅದನ್ನು ನೋಡಿ ರಟ್ಟಾಳಿಗೆ ಇಬ್ಬಂದಿಯಾಯಿತು. ‘ಶೂಲ್ಯಮಾಂಸವನ್ನು ಯಾರು ತಯಾರಿಸಿದರು? ಎಂದು ಅವಳು ಕೇಳಿದಳು.

ಜಂಬುಕ ಬೆರಳು ಮಾಡಿ ತೋರಿಸುತ್ತ ‘ಇವರು’ ಎಂದನು.

ಅವಾಕ್ಕಾದ ರಟ್ಟಾ ಸ್ವಲ್ಪ ಹೊತ್ತು ಅವನನ್ನು ನೋಡುತ್ತಿದ್ದು, ನಕ್ಕು, ಚಿತ್ರಕನನ್ನು ಕುರಿತು ‘ತಾವು ಸಕಲವಿದ್ಯಾ ಪಾರಂಗತರು. ಈ ವಿದ್ಯೆಯನ್ನು ಎಲ್ಲಿ ಕಲಿತಿರಿ?’ ಎಂದಳು.

‘ನಾನು ಬೇರೆ ವಿದ್ಯೆಗಳನ್ನು ಎಲ್ಲಿ ಕಲಿತೆನೋ, ಅಲ್ಲಿಯೇ ಇದನ್ನೂ ಕಲಿತೆ’

‘ಅದನ್ನು ಎಲ್ಲಿ ಕಲಿತಿರಿ?’

‘ಯುದ್ಧ ಭೂಮಿಯಲ್ಲಿ.’

ಚಿತ್ರಕನು ತನ್ನ ಮನಸ್ಸಿನಲ್ಲಿ ಸ್ಕಂದಗುಪ್ತನ ಶಿಬಿರವನ್ನು ಕಲ್ಪಿಸಿಕೊಂಡನು. ದಿಗಂತದ ಸಮೀಪದಲ್ಲಿ ಬೆಳಕಿನ ಪ್ರಭೆಯನ್ನು ಅವನು ನೋಡಿದ್ದನಲ್ಲವೆ? ಅಲ್ಲಿ ಅನೇಕ ಗಾವುದ ದೂರಕ್ಕೆ ಹಬ್ಬಿದ ಪ್ರದೇಶದಲ್ಲಿ ಮೇಣದ ಬಟ್ಟೆಯ ಗೂಡಾರದ ಸೇನಾ ಶಿಬಿರ. ಶಿಬಿರದ ಮಧ್ಯೆ ಮಧ್ಯೆ ಸೈನಿಕರು ಹೊತ್ತಿಸಿದ ಬೆಂಕಿ. ಕೆಲವರು ಜೋಳದ ಹಿಟ್ಟನ್ನು ಕಲೆಸಿ ಎರಡು ಕೈಗಳಲ್ಲಿಯೇ ತಟ್ಟುತ್ತ ದಪ್ಪ ದಪ್ಪ ರೊಟ್ಟಿಗಳನ್ನು ತಯಾರಿಸುತ್ತಿದ್ದಾರೆ. ಕೆಲವರು ಭಲ್ಲೆಗಳ ತುದಿಗೆ ಮಾಂಸವನ್ನು ಸಿಕ್ಕಿಸಿ ಬೆಂಕಿಯಲ್ಲಿ ಶೂಲ್ಯಮಾಂಸವನ್ನು ಬೇಯಿಸುತ್ತಿದ್ದಾರೆ. ಕೂಗಾಟ… ಹಾಡು… ವಾಗ್‌ಯುದ್ಧ… ನಿರ್ಭಯ ನಿರುದ್ವೇಗ ಜೀವನ ಯಾತ್ರೆ… ಹಿಂದಿಲ್ಲ, ಮುಂದಿಲ್ಲ… ಈಗಿರುವುದೆಲ್ಲ ಕೇವಲ ನಿರಂಕುಶ ವರ್ತಮಾನ ಮಾತ್ರ.

ಚಿತ್ರಕನು ಚಿಂತಾಮಗ್ನನಾಗಿರುವುದನ್ನು ಕಂಡ ರಟ್ಟಾ ಮೃದುವಾಗಿ ನಗುತ್ತ, ‘ಯುದ್ಧಭೂಮಿಯ ಕನಸು ಕಾಣುತ್ತಿದ್ದೀರೇನು?’ ಎಂದು ಪ್ರಶ್ನಿಸಿದಳು.

ಚಿತ್ರಕ- (ಚಕಿತನಾಗಿ) ಹೌದು. ತಾವೇನು ಅಂತರ್ಯಾಮಿಯೋ?

ರಟ್ಟಾ ನಕ್ಕಳು. ಅವಳ ನಗುವಿನಲ್ಲಿ ಏನೋ ರಹಸ್ಯ ಅಡಗಿತ್ತು.

ನಡುರಾತ್ರಿ ಚಂದ್ರ ಆಕಾಶದ ಮಧ್ಯೆ ಬಂದಿದ್ದ. ರಾಜಕುಮಾರಿ ರಟ್ಟಾ ತನ್ನ ಕೊಠಡಿಯಲ್ಲಿ ಹಾಸಿಗೆಯಲ್ಲಿ ಮಲಗಿ ನಿದ್ರಿಸುತ್ತಿದ್ದಳು. ಆಕೆಗೆ ಇದ್ದಕಿದ್ದ ಹಾಗೆ ಎಚ್ಚರವಾಯಿತು. ಕೊಠಡಿಯ ಮೂಲೆಯಲ್ಲಿ ದೀಪ ಉರಿಯುತ್ತಿತ್ತು. ಉರಿದೂ ಉರಿದೂ ಬತ್ತಿಯ ತುದಿಯಲ್ಲಿ ಕಾಡಿಗೆ ಕಟ್ಟಿತ್ತು. ಮಂದ ಪ್ರಕಾಶದಲ್ಲಿ ಕೊಠಡಿಯ ಪದಾರ್ಥಗಳು ಸ್ಫುಟವಾಗಿ ಕಾಣಿಸುತ್ತಿರಲಿಲ್ಲ. ರಟ್ಟಾ ಹಾಸಿಗೆ ಯಲ್ಲಿಯೇ ಸ್ವಲ್ಪ ಹೊತ್ತು ಕುಳಿತು ಕ್ಷೀಣವಾಗಿ ಉರಿಯುತ್ತಿದ್ದ ದೀಪವನ್ನು ನೋಡುತ್ತಿದ್ದಳು. ಅನಂತರ ಮೇಲೆದ್ದು ಬಾಗಿಲ ಬಳಿಗೆ ಹೋಗಿ ನಿಶ್ಯಬ್ಧವಾಗಿ ಬಾಗಿಲ ಅಗಳಿಯನ್ನು ಓಸರಿಸಿದಳು.

ಬಾಗಿಲನ್ನು ಸ್ವಲ್ಪ ತೆರೆದು ಹೊರಗೆ ನೋಡುತ್ತಾಳೆ- ಕೊಠಡಿಯು ಮುಂಭಾಗದಲ್ಲಿ ಬಾಗಿಲ ಕಡೆಗೆ ಬೆನ್ನು ಮಾಡಿ, ಒಂದು ಕಂಬಕ್ಕೆ ಒರಗಿ ಕಾಲು ಚಾಚಿ ಚಿತ್ರಕ ಕುಳಿತಿದ್ದಾನೆ. ಮಂಡಿಯ ಮೇಳೆ ಬಿಚ್ಚು ಗತ್ತಿಯನ್ನು ಇಟ್ಟುಕೊಂಡಿದ್ದಾನೆ. ಅವನ ಎತ್ತಿದ ಮುಖದ ಮೇಲೆ ಬೆಳುದಿಂಗಳ ಬೆಳಕು ಬಿದ್ದಿದೆ. ಕಣ್ಣುಗಳು ಮುಚ್ಚಿದ್ದರೂ ಕನಸು ಕಾಣುತ್ತಿರುವಂತಿದೆ.

ಬಹಳ ಹೊತ್ತು ನೋಡುತ್ತ ನಿಂತಿದ್ದ ರಟ್ಟಾ ಮತ್ತೆ ಬಾಗಿಲು ಮುಚ್ಚಿಕೊಂಡು ಒಳಗೆ ಹೋದಳು. ಹಾಸಿಗೆ ಮೇಲೆ ಮುಖ ಕೆಳಗು ಮಾಡಿ ಮಲಗಿದಳು. ಕಣ್ಣುಗಳಿಂದ ಕಣ್ಣೀರು ತೊಟ್ಟಿಕ್ಕಿ ದಿಂಬನ್ನು ತೋಯಿಸಿತು.

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *