ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 40

ಗಿರಿಲಂಘನ–

ರಟ್ಟಾ ಹಾಗೂ ಚಿತ್ರಕ ಕುದುರೆಯ ಮೇಲೆ ಕುಳಿತುಕೊಳ್ಳುತ್ತಿರುವಾಗ ಜಂಬುಕ ಪಾಂಥಶಾಲೆಯೊಳಗಿಂದ ಓಡಿ ಬಂದು, ಚಿತ್ರಕ ಜೀನಿಗೆ ಒಂದು ಬಟ್ಟೆಯ ಗಂಟನ್ನು ಕಟ್ಟಿದನು.

ಚಿತ್ರಕ- ‘ಏನಿದು?’

ಜಂಬುಕ- ಏನಿಲ್ಲ. ಸ್ವಲ್ಪ ಖಾದ್ಯ ಪದಾರ್ಥಗಳು. ಜೊತೆಗಿದ್ದರೆ ಒಳ್ಳೆಯದು’ ಸಮಯಕ್ಕೆ ಬೇಕಾಗಬಹುದು.

ಚಿತ್ರಕ- ಒಳ್ಳೆಯದು. ನೀನೂ ಕೂಡ ಇನ್ನು ತಡ ಮಾಡಬೇಡ.

ಜಂಬುಕ- ಇಲ್ಲ. ನನ್ನ ಬಳಿ ಕುದುರೆ ಇಲ್ಲ. ಕತ್ತೆಯ ಮೇಲೆ ಪ್ರಯಾಣ ಮಾಡಬೇಕಾಗುತ್ತದೆ. ಹೋಗಿ ಸೇರಲು ಸ್ವಲ್ಪ ತಡವಾಗುತ್ತದೆ.

ರಟ್ಟಾ ಜಂಬುಕನ ಕೈಗೆ ಒಂದು ಸ್ವರ್ಣ ದೀನಾರವನ್ನು ಇಟ್ಟು, ‘ಇದು ನಿನಗೆ ಬಕ್ಷೀಸು. ಭಿಕ್ಷÄಗಳ ವಿಷಯ ಮರೆಯಬೇಡ’ ಎಂದಳು.

ಜಂಬುಕನು ದೀನಾರವನ್ನು ಬಹಳ ಭಕ್ತಿಯಿಂದ ಹಣೆಗೆ ಒತ್ತಿಕೊಂಡು ‘ಅಪ್ಪಣೆ. ಭಿಕ್ಷುಗಳಿಗೆ ಗೋಧಿಯನ್ನು ತೆಗೆದುಕೊಂಡು ಹೋಗುತ್ತೇನೆ. ಜೊತೆಯಲ್ಲಿ ಆಳುಗಳಿರುತ್ತಾರೆ. ಅವರು ‘ಸಂಘ’ಕ್ಕೆ ಗೋಧಿ ತಲುಪಿಸಿ ವಾಪಸು ಬರುತ್ತಾರೆ. ನಾನು ಕಪೋತಕೂಟದ ಕಡೆಗೆ ಹೋಗುತ್ತೇನೆ’ ಎಂದನು.

ಅನಂತರ ಜಂಬುಕನ ಕರ್ತವ್ಯನಿಷ್ಠೆಯ ಬಗ್ಗೆ ವಿಶ್ವಾಸವಿಟ್ಟು, ನಿಶ್ಚಿಂತರಾಗಿ ಇಬ್ಬರೂ ಪಶ್ಚಿಮ ದಿಕ್ಕಿಗೆ ಕುದುರೆಯನ್ನು ತಿರುಗಿಸಿದರು. ಮುಂದೆಯೇ ಬೆಟ್ಟದ ತಪ್ಪಲು. ಅಲ್ಲಿಂದ ಮುಂದೆ ಬೆಟ್ಟ. ಆದರೆ ಅದು ಇಲ್ಲಿಗೆ ಕಾಣುವುದಿಲ್ಲ. ಆ ಬೆಟ್ಟವನ್ನು ಹತ್ತಿ ಇಳಿದು ಮುಂದೆ ಹೋದರೆ ಸ್ಕಂದಗುಪ್ತನ ಸೇನಾ ಶಿಬಿರ.

ರಟ್ಟಾ ವಾಯವ್ಯ ಮೂಲೆಯಿಂದ ನೈಋತ್ಯ ಮೂಲೆಯವರೆಗೂ ದೃಷ್ಟಿ ಹಾಯಿಸುತ್ತ ‘ಯಾವ ಜಾಗಕ್ಕೆ ಹೋಗಬೇಕು? ದಿಕ್ಕು ಗೊತ್ತಾಗುವುದು ಹೇಗೆ?’ ಎಂದು ಪ್ರಶ್ನಿಸಿದಳು.

ಚಿತ್ರಕ- ರಣಹದ್ದುಗಳು ಹಾರಾಡುತ್ತಿದ್ದ ಜಾಗಕ್ಕೆ ನಾವು ಹೋಗಬೇಕು. ಅದನ್ನೇ ಗುರಿಯಾಗಿಟ್ಟುಕೊಂಡು ನಾವು ಪ್ರಯಾಣ ಮಾಡಿದರೆ ಸೇನಾ ಶಿಬಿರ ತಲುಪಬಹುದು.

ರಟ್ಟಾ- ಇದೆಲ್ಲಾ ನಿಮಗೆ ಹೇಗೆ ಗೊತ್ತು?

ಚಿತ್ರಕ- (ನಕ್ಕು) ಇಂಥವುಗಳನ್ನೆಲ್ಲಾ ಬಹಳ ನೋಡಿದ್ದೇನೆ. ಯುದ್ಧಕ್ಕೆ ಮುಂಚೆ ಸೇನಾ ಶಿಬಿರದ ಮೇಲೆ ರಣ ಹದ್ದುಗಳು ಹಾರಾಡುತ್ತವೆ. ಯುದ್ಧ ನಡೆಯುತ್ತದೆಂದು ಅವುಗಳಿಗೂ ಗೊತ್ತಾಗುತ್ತದೆಯೋ ಏನೋ! ನಡೆಯಿರಿ. ತಡ ಮಾಡಬಾರದು. ಕುದುರೆಗಳನ್ನು ಸ್ಪಲ್ಪ ವೇಗವಾಗಿ ನಡೆಸಬೇಕು.

ಎರಡು ಕುದುರೆಗಳೂ ನದಿಯ ಎಡಭಾಗದ ತೀರದಲ್ಲಿಯೇ ವೇಗವಾಗಿ ನಡೆದವು. ರಟ್ಟಾ ಒಂದು ಪಾಂಥಶಾಲೆಯ ಕಡೆ ತಿರುಗಿ ನೋಡಿದಳು. ಅವಳ ಕಣ್ಣುಗಳು ಒದ್ದೆಯಾದವು. ಚಿರಪರಿಚಿತವಾದ ಮನೆಯನ್ನು ಬಿಟ್ಟು ಎಲ್ಲಿಗೋ ಅಜ್ಞಾತ ಸ್ಥಳಕ್ಕೆ ಗೊತ್ತುಗುರಿ ಇಲ್ಲದ ದಾರಿಯಲ್ಲಿ ಹೋಗುತ್ತಿರುವ ಹಾಗೆ ಅವಳಿಗೆ ಭಾಸವಾಯಿತು.

ನಡುಹಗಲಿನ ಸೂರ್ಯ ಆಕಾಶದ ಮಧ್ಯಭಾಗಕ್ಕೆ ಬಂದಿದ್ದನು. ಅವರಿಬ್ಬರೂ ಒಂದು ಶಿಂಶಪಾ (ಅಶೋಕವೃಕ್ಷ) ವೃಕ್ಷದ ಬಳಿಗೆ ಬಂದು ಅದರ ನೆರಳಿನಲ್ಲಿ ಕುದುರೆಯನ್ನು ನಿಲ್ಲಿಸಿದರು. ನದಿಯು ಇಲ್ಲಿ ಸ್ವಲ್ಪ ದಿಕ್ಕು ಬದಲಾಯಿಸಿಕೊಂಡು ನೈಋತ್ಯದ ಕಡೆಗೆ ಹರಿಯುತ್ತದೆ. ಅದರ ಆಚೆ ಕಡೆ ಕಲ್ಲುಗುಡ್ಡದ ಎತ್ತರವಾದ ಪ್ರದೇಶ ಆರಂಭವಾಗುತ್ತದೆ. ಇದು ತಪ್ಪಲಿನ ಪಶ್ಚಿಮದ ಭಾಗ.

ಚಿತ್ರಕ ನಾಲ್ಕು ದಿಕ್ಕಿಗೂ ನೋಡಿ ‘ಇಲ್ಲಿ ನದಿ ದಾಟಬೇಕಾಗಿದೆ’ ಎಂದನು.

ರಟ್ಟಾ- ನದಿ ಬಹಳ ಆಳವಾಗಿದೆಯೋ ಏನೋ! ಚಿತ್ರಕನು ತಿಳಿಯಾಗಿ ಹರಿಯುತ್ತಿರುವ ನದಿಯ ನೀರಿನ ಒಳಭಾಗವನ್ನು ದೃಷ್ಟಿಸಿ ನೋಡಿ ‘ಇಲ್ಲ ನದಿ ಆಳವಿಲ್ಲವೆಂದು ತೋರುತ್ತದೆ. ತಳಭಾಗಕಲ್ಲು ನಿಧಾನವಾಗಿ ನೀರಿನ ಹರಿವು. ಇರಲಿ. ಇದರ ಪರೀಕ್ಷೆ ಆಮೇಲೆ ಮಾಡೋಣ. ಈಗ ಏನಾದರೂ ಸ್ವಲ್ಪ ತಿಂದು, ವಿಶ್ರಮಿಸಿಕೊಳ್ಳೋಣ’ ಎಂದನು.

ರಟ್ಟಾ ಕೂಡ ಇದೇ ವಿಷಯವನ್ನು ಪ್ರಸ್ತಾಪಿಸಬೇಕೆಂದಿದ್ದಳು. ಅವಳು ಕುದುರೆಯಿಂದ ಇಳಿದು ಹುಲ್ಲುಹಾಸಿನ ಮೇಲೆ ಕುಳಿತಳು. ಚಿತ್ರಕ ಲಗಾಮು ಹಿಡಿದು ಕುದುರೆಗಳನ್ನು ನೀರಿನ ಬಳಿಗೆ ಕರೆದೊಯ್ದು ನೀರು ಕುಡಿಸಿದನು. ಆಮೇಲೆ ಅವುಗಳನ್ನು ಸ್ವೇಚ್ಛೆಯಾಗಿ ಓಡಾಡಲು ಬಿಟ್ಟು, ತಿಂಡಿಯ ಗಂಟನ್ನು ಹಿಡಿದುಕೊಂಡು ರಟ್ಟಾಳ ಹತ್ತಿರ ಬಂದನು.

ಗಂಟು ಬಿಚ್ಚಿ ನೋಡಿದಾಗ, ಜಂಬುಕ ತುಂಬ ತಿಂಡಿಯ ಪದಾರ್ಥಗಳನ್ನು ಕೊಟ್ಟಿರುವುದು ಕಾಣಬಂದಿತು- ಜೋಳದ ಹುರಿಟ್ಟು; ಹೋಳಿಗೆ, ಅಕ್ಕಿಯ ರೊಟ್ಟಿ, ಹತ್ತಾರು ಸಿಹಿಗೆಣಸು; ಒಂದು ಪುಟ್ಟ ಸಂಚಿಯಲ್ಲಿ ಕಡಲೆ ಹಾಗೂ ಸ್ವಲ್ಪ ಬೆಲ್ಲ. ಚಿತ್ರಕ ನಗುತ್ತ ‘ಜಂಬುಕ ಒಳ್ಳೆಯ ಸೂಕ್ಷ್ಮಮತಿಯಾದ ವ್ಯಕ್ತಿ. ಎರಡು ದಿನ ತಿಂದರೂ ಮುಗಿಯದಷ್ಟು ತಿಂಡಿ ಕೊಟ್ಟಿದ್ದಾನೆ ಎಂದನು.

ಗಂಟನ್ನು ಮಧ್ಯಭಾಗದಲ್ಲಿಟ್ಟುಕೊಂಡು ಇಬ್ಬರೂ ಆನಂದವಾಗಿ ತಿನ್ನುತ್ತಾ ಹೋದರು. ಚಿತ್ರಕ ಒಮ್ಮೆ ರಟ್ಟಾಳನ್ನು ಓರೆಗಣ್ಣಿನಿಂದ ನೋಡಿ ‘ತಿಂಡಿ ನಿನಗೆ ಹೇಗನಿಸಿತು?’ ಎಂದು ಕೇಳಿದನು.

ರಟ್ಟಾ (ಅರ್ಧಕಣ್ಣುಮುಚ್ಚಿಕೊಂಡು) ಬಹಳ ರುಚಿಕರವಾಗಿತ್ತು.

ಚಿತ್ರಕ ಕತ್ತಿಯಿಂದ ಗೆಣಸನ್ನು ಕತ್ತರಿಸುತ್ತಾ ‘ಹಸಿವಿಗೆ ಬೇಕಾಗಿರುವುದು ಅಮೃತವಲ್ಲ. ಹೊಟ್ಟೆ ಚುರುಗುಟ್ಟುತ್ತಿದ್ದರೆ ಹುಣಿಸೆಹಣ್ಣು ಕೂಡ ಸ್ವಾದಿಷ್ಟವಾಗಿರುತ್ತದೆ’ ಎಂದನು.

ತಿಂಡಿ ತಿಂದಾದ ಮೇಲೆ ಚಿತ್ರಕನು ಮತ್ತೆ ಗಂಟು ಕಟ್ಟಿ ಒಂದು ಕಡೆ ಇಟ್ಟನು. ಇಬ್ಬರೂ ನದಿಗೆ ಹೋಗಿ ಬೊಗಸೆಯಲ್ಲಿ ತುಂಬಿಕೊಂಡು ನೀರು ಕುಡಿದು ಬಂದರು. ಮರದ ನೆರಳಿನಲ್ಲಿ ಮೃಗಚರ್ಮದ ಹಾಗಿರುವ ಒತ್ತಾದ ಹುಲ್ಲಿನ ಹಾಸಿಗೆಯ ಮೇಲೆ ರಟ್ಟಾ ಅರ್ಧಮರ್ಧ ಮಲಗಿಕೊಂಡಳು.

ಚಿತ್ರಕ- ತಮಗೆ ಆಯಾಸವಾಗುತ್ತಿದೆಯೆ?

ರಟ್ಟಾ- ಇಲ್ಲ. ನಾನು ಸಿದ್ಧಳಿದ್ದೇನೆ. ಎಂದು ಹೇಳಿ ಮೇಲೆ ಏಳಲು ಉಪಕ್ರಮಿಸಿದಳು.

ಚಿತ್ರಕ- ಇಲ್ಲ ಇಲ್ಲ. ಆತುರವೇನೂ ಇಲ್ಲ. ಕುದುರೆಗಳು ಸ್ವಲ್ಪ ವಿಶ್ರಮಿಸಿಕೊಳ್ಳಲಿ.

ಕುದುರೆಗಳೆರಡೂ ಮೇಯುತ್ತಾ ಮೇಯುತ್ತಾ ನದೀ ತೀರದಿಂದ ಸ್ವಲ್ಪ ದೂರ ಹೋಗಿದ್ದವು. ಚಿತ್ರಕನು ಅವುಗಳನ್ನು ನೋಡಿ, ತನಗೂ ಸ್ವಲ್ಪ ದೇಹಾಲಸ್ಯ ಕಾಣಿಸಿಕೊಳ್ಳಲು ಹಸುರು ಹುಲ್ಲಿನ ಮೇಲೆ ಮೈಚಾಚಿದನು.

ಸ್ವಲ್ಪ ಹೊತ್ತು ಇಬ್ಬರೂ ಮೌನ. ಅನಂತರ ರಟ್ಟಾ ತನ್ನಲ್ಲಿಯೇ ಮಾತನಾಡಿಕೊಳ್ಳಲು ಪ್ರಾರಂಭಿಸಿದಳು. -’ಜಗತ್ತಿನಲ್ಲಿ ಯುದ್ಧ, ಸ್ವಾರ್ಥಪರತೆ, ಮೋಸ ವಂಚನೆಗಳು ಇರದಿದ್ದರೆ!’

ಚಿತ್ರಕ ಕಣ್ಣುಮುಚ್ಚಿಕೊಂಡು ಒಳಗೊಳಗೇ ನಗುತ್ತಿದ್ದನು.

ರಟ್ಟಾ- ಏಕೆ ಈ ಹಿಂಸೆ? ಏಕೆ ಇಷ್ಟು ದುರಾಸೆ? ಇಷ್ಟೊಂದು ಜಗ್ಗಾಟ ಎಳೆದಾಟ? ಆರ್ಯ ಚಿತ್ರಕ, ತಾವು ಹೇಳಬಲ್ಲಿರಾ?

ಚಿತ್ರಕ ಎದ್ದು ಕುಳಿತನು. ಸ್ವಲ್ಪ ಹೊತ್ತು ತಲೆ ತಗ್ಗಿಸಿ ಯೋಚಿಸಿ ‘ಇಲ್ಲ. ಇದು ಮನುಷ್ಯನ ಸ್ವಭಾವ. ಅವನು ಬಯಸಿದುದನ್ನು ಪಡೆಯಲು ಬೇರೆ ದಾರಿ ಕಾಣದೆ ಯುದ್ಧ ಮಾಡುತ್ತಾನೆ, ಹಿಂಸೆಗೆ ತೊಡಗುತ್ತಾನೆ’ ಎಂದನು. ‘ಆದರೆ ಅವನಿಗೆ ಇವುಗಳನ್ನು ಬೇರೆ ಉಪಾಯವೇ ಇಲ್ಲವೆ?’

ಚಿತ್ರಕ ನಿಧಾನವಾಗಿ ತಲೆ ಅಲ್ಲಾಡಿಸಿದನು. ‘ಗೊತ್ತಿಲ್ಲ. ಇರಬಹುದು’ ಎಂದನು.

ನದಿಯ ಕಡೆಗೆ ನೋಡಿ ಚಿತ್ರಕ ಅವಾಕ್ಕಾದನು! ರಟ್ಟಾ ಕೂಡ ಚಿತ್ರಕನು ನೋಡುತ್ತಿದ್ದ ಕಡೆಗೆ ತಾನೂ ಕಣ್ಣು ಹೊರಳಿಸಿ ನೋಡಿದಳು. ನದಿಯ ಆಚೆಯ ದಡದಿಂದ ಸುಮಾರು ಮೂವತ್ತು ಮಾರು ದೂರದಲ್ಲಿ ಒಂದು ಕೊಂಬಿರುವ ಜಿಂಕೆ (ಸಾರಂಗ) ಮದ ಹಾಗೂ ಗರ್ವದಿಂದ ನಿಧಾನವಾಗಿ ಹೆಜ್ಜೆ ಇಡುತ್ತ ನದಿಯ ಕಡೆಗೆ ಬರುತ್ತಿದೆ. ನದಿಯ ತೀರಕ್ಕೆ ಒಂದು ನೀರು ಕುಡಿಯಿತು. ಆಮೇಲೆ ಅದು ನದಿಯನ್ನು ದಾಟಿ ಈ ಕಡೆಗೆ ಬಂದಿತು. ನದಿಯ ನೀರು ಅದರ ಹೊಟ್ಟೆಯನ್ನು ಸ್ಪರ್ಶಮಾಡಿರಲಿಲ್ಲ. ಅದು ಮರದ ಕೆಳಗೆ ನೆರಳಿನಲ್ಲಿ ಕುಳಿತಿದ್ದ ಮನುಷ್ಯರನ್ನು ಗಮನಿಸಲಿಲ್ಲ; ಅದರ ಊಹೆಯನ್ನೂ ಮಾಡಿರಲಿಲ್ಲ. ದಡಕ್ಕೆ ಬಂದ ಮೇಲೆ ಏಕಾಏಕಿ ಅವರನ್ನು ನೋಡಿದ ಕೂಡಲೆ, ನಿಮಿಷಾರ್ಧದಲ್ಲಿ ಚಂಗನೆ ಎಗರಿ ವಿದ್ಯುದ್ವೇಗದಲ್ಲಿ ಪಲಾಯನ ಮಾಡಿತು.

ಚಿತ್ರಕನು ಸಮಾಧಾನದಿಂದ ಚಪ್ಪಾಳೆ, ಕೇಕೆ ಹಾಕಿದನು. ತಿಂಡಿಯ ಗಂಟನ್ನು ಎತ್ತಿಕೊಂಡು ಮೇಲೆದ್ದು ‘ನಡೆಯಿರಿ. ಇನ್ನು ಪ್ರಯಾಣ ಬೆಳೆಸೋಣ. ನದಿಯ ಆಳದ ಬಗೆಗೆ ಸಮಾಧಾನಕರವಾದ ಉತ್ತರ ಸಿಕ್ಕಿತು’ ಎಂದನು.

ಮುಂದುವರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *