ಕಳೆದ ಸಂಚಿಕೆಯಿಂದ….
ಪಶ್ಚಿಮ ದಿಗ್ವಲಯವನ್ನು ಆರಕ್ತಸಿಕ್ತವನ್ನಾಗಿಸುತ್ತ ಸೂರ್ಯ ಅಸ್ತಂಗತನಾದನು. ನಾಲ್ಕು ದಿಕ್ಕಿಗೂ ಪರ್ವತ. ಉದ್ದವಾಗಿ ಮಲಗಿರುವ ಅಷ್ಟು ಎತ್ತರವಲ್ಲದ ಪರ್ವತಶ್ರೇಣಿ. ನಡು ನಡುವೆ ದೊಡ್ಡ ದೊಡ್ಡ ಬಂಡೆಗಳು ಎದ್ದು ನಿಂತಿವೆ. ಪರ್ವತದಲ್ಲಿ ಎಲ್ಲಿ ನೋಡಿದರೂ ಮುಳ್ಳು ಕಾರೆಗಿಡಗಳು, ಕಾಡ ಎಲಚಿಮರಗಳೇ ಕಾಣಿಸುತ್ತಿದ್ದವು. ಇಂಥ ಪರಿಸರದ ನಡುವೆ ಚಿತ್ರಕ ಹಾಗೂ ರಟ್ಟಾ ಕುದುರೆಯನ್ನೇರಿ ನಿಂತಿದ್ದಾರೆ.
ರಟ್ಟಾ ಮೌನವಾಗಿ ಚಿತ್ರಕನ ಕಡೆ ನೋಡಿದಳು. ಅವಳ ಮುಖದಲ್ಲಿ ಒಂದು ವಿಚಿತ್ರವಾದ ನಗು ಕಾಣಿಸಿತು. ಅವರು ಪರ್ವತವನ್ನು ದಾಟಲು ಕೆಲವೊಮ್ಮೆ ಸರಿದಾರಿಯಲ್ಲಿ, ಕೆಲವೊಮ್ಮೆ ದಾರಿ ತಪ್ಪಿ, ಅಲ್ಲಿ ಇಲ್ಲಿ ಹತ್ತಿ ಇಳಿದು ಸುತ್ತಾಡಿ ಕೊನೆಗೆ ಬೆಟ್ಟದ ಮಧ್ಯೆ ಸಿಕ್ಕಿ ಹಾಕಿಕೊಂಡು ಪರಿತಪಿಸುತ್ತಿದ್ದಾರೆ. ರಾತ್ರಿ ಸನ್ನಿಹಿತವಾಗುತ್ತಿದೆ. ಹೋಗಬೇಕಾದ ಜಾಗ ಇನ್ನೂ ದೂರದಲ್ಲಿದೆ. ಅದೂ ಎಲ್ಲಿದೆ ಎಂಬುದೇ ತಿಳಿಯದಾಗಿದೆ.
ಇದೇ ಸಮಯದಲ್ಲಿ ಎಲ್ಲೋ ದೂರದಿಂದ ಬಂದ ನಗಾರಿ ಹಾಗೂ ಡಿಂಡಿಮದ ಶಬ್ದವು ಅವರ ಕಿವಿಗೆ ತಾಕಿತು. ಅದೂ ಅಸ್ಪಷ್ಟವಾಗಿ. ಚಿತ್ರಕ ಕಿವಿಗೊಟ್ಟು ಗಮನವಿಟ್ಟು ಕೇಳಿಸಿಕೊಂಡನು. ನಂತರ ಚಿತ್ರಕ ರಟ್ಟಾಳ ಕಡೆಗೆ ತಿರುಗಿ ‘ಸೇನಾ ಶಿಬಿರದಲ್ಲಿ ಸಂಧ್ಯಾಕಾಲದ ಭೇರಿ ಬಾರಿಸಲಾಗುತ್ತಿದೆ. ಕೇಳಿದೆಯಾ?’ ಎಂದು ಹೇಳಿದನು.
ರಟ್ಟಾ- ಹೌದು. ಇಲ್ಲಿಂದ ಎಷ್ಟು ದೂರವಿರಬಹುದು?
ಚಿತ್ರಕ- (ಕ್ಷಣ ಕಾಲ ಯೋಚಿಸಿ) ನೇರವಾಗಿ ಆಕಾಶ ಮಾರ್ಗದಲ್ಲಿ ಕಡಿಮೆ ಎಂದರೂ ಒಂದು ಯೋಜನ ದೂರ. ಈ ದಿನವೇ
ಸ್ಕಂಧಾವಾರ (ಸೇನಾ ಶಿಬಿರ) ತಲುಪುವುದು ಸಾಧ್ಯವಿಲ್ಲದ ಮಾತು.
‘ಹಾಗಾದರೆ-?’
ಚಿತ್ರಕ ಸುತ್ತಲೂ ನೋಡಿದ.
‘ಇಲ್ಲಿಯೇ ರಾತ್ರಿ ಕಳೆಯಬೇಕು. ಇಲ್ಲಿ ನೀರಿದೆ’.
ಸ್ವಲ್ಪ ದೂರದಲ್ಲಿ ಪರ್ವತದ ಶರೀರವು ಗೋಡೆಯ ಹಾಗೆ ಮೇಲೆದ್ದಿದೆ. ಅದರ ಒಡಲೊಳಗಿಂದ ಒಂದು ಸಣ್ಣ ಧಾರೆಯಾಗಿ ನೀರು ಹರಿದು ಬರುತ್ತಿದೆ.
‘ಬನ್ನಿ. ಬೆಳಕು ಇರುವಾಗಲೇ ರಾತ್ರಿ ತಂಗುವುದಕ್ಕಾಗಿ ಒಂದು ಆಶ್ರಯವನ್ನು ಹುಡುಕಿಕೊಳ್ಳಬೇಕಾಗಿದೆ’ ಎಂದು ಹೇಳಿ ಚಿತ್ರಕನು ಕುದುರೆಯನ್ನು ಓಡಿಸಿದನು.
ಬೆಟ್ಟದಿಂದಿಳಿದ ಸಣ್ಣ ಹೊಳೆ ಒಂದು ಜಾಗದಲ್ಲಿ ಹೊಂಡವಾಗಿ ನಿಂತಿತ್ತು. ಅದರ ಸುತ್ತಲೂ ಸಮೃದ್ಧವಾಗಿ ಹುಲ್ಲು ಬೆಳೆದಿತ್ತು. ಅವರು ತಮ್ಮ ಕುದುರೆಗಳನ್ನು ಅಲ್ಲಿ ಬಿಟ್ಟು, ಕಾಲು ನಡಿಗೆಯಲ್ಲಿ ಆ ಪರ್ವತದ ಬುಡದಲ್ಲಿ ಅಲ್ಲಿ ಇಲ್ಲಿ ಹುಡುಕಲಾರಂಭಿಸಿದರು. ಸ್ವಲ್ಪ ದೂರ ಹೋದ ಮೇಲೆ ಒಂದು ಗುಹೆ ಕಾಣಸಿತು. ಅದು ಗುಹೆಯೇನಲ್ಲ. ಎರಡು ದೊಡ್ಡ ದೊಡ್ಡ ಬಂಡೆಗಳು ಪರಸ್ಪರ ಬಾಗಿಕೊಂಡು, ಅದರ ಮಧ್ಯಭಾಗ ಗುಹೆಯ ಆಕಾರ ಪಡೆದುಕೊಂಡಿತ್ತು. ಎತ್ತರವಾದ ಪರ್ವತದ ಮುಂದೆ ಈ ಪೊಟರೆಯು ಬಹಳ ಚಿಕ್ಕದಾಗಿ ಕಂಡರೂ ಇಬ್ಬರೂ ವ್ಯಕ್ತಿ ಸ್ವಚ್ಛಂದವಾಗಿ ರಾತ್ರಿಯನ್ನು ಕಳೆಯಬಹುದಾಗಿತ್ತು. ಆ ಪೊಟರೆಯ ಬಾಯಿ ಕಿರಿದಾಗಿ ಕಂಡರೂ ಒಳಗೆ ವಿಶಾಲವಾಗಿತ್ತು.
ಗುಹೆಯ ಒಳಗೆ ಹೋದ ರಟ್ಟಾ ಸಂತೋಷದಿಂದ ‘ನಮಗೆ ಒಂದು ಸುಂದರವಾದ ಮನೆಯೇ ದೊರೆತಂತಾಯಿತು’ ಎಂದು ಕುಣಿದಾಡಿದಳು.
ಚಿತ್ರಕ- (ನಕ್ಕು) ‘ಹೌದು, ಸುಂದರವಾದ ಮನೆಯೇ ಸರಿ! ಆದಿಮಾನವರು ಇಂಥದೇ ಮನೆಗಳಲ್ಲಿ ವಾಸಿಸುತ್ತಿದ್ದರೆಂದು ಕಾಣುತ್ತದೆ. ಇರಲಿ. ಆಕಾಶದ ಕೆಳಗೆ ರಾತ್ರಿ ಕಳೆಯುವುದಕ್ಕಿಂತ ಇದು ಮೇಲಿಲ್ಲವೆ? ಸ್ವಲ್ಪ ಕಾಯುತ್ತಿರಿ. ಬರುತ್ತೇನೆ’ ಎಂದು ಹೇಳಿ, ಬೇಗ ಬೇಗ ನಡೆದು ಹೋಗಿ ಕುದುರೆಯ ಮೇಲೆ ಹಾಕಿದ್ದ ಎರಡೂ ಕಂಬಳಿಗಳನ್ನು ತಂದು, ರಟ್ಟಾಳ ಕಾಲ ಬಳಿ ಹಾಕಿ ‘ತಾವು ಮನೆಯನ್ನು ಅಣಿಗೊಳಿಸಿ, ನಾನು ಬೇರೆ ಕೆಲಸ ಮಾಡುತ್ತೇನೆ’ ಎಂದನು.
ಹಗಲಿನ ಬೆಳಕು ಬಹುಬೇಗ ಕಡಿಮೆಯಾಯಿತು. ಚಿತ್ರಕ ಆತುರ ಆತುರವಾಗಿ ಕಾಡಿನ ಮಧ್ಯದಿಂದ ಒಣಗಿದ ಸಣ್ಣಪುಟ್ಟ ಪುಳ್ಳೆಗಳನ್ನು ಆಯ್ದುಕೊಂಡು ಒಂದು ಗುಹೆಯ ಒಳಗೆ ರಾಶಿ ಹಾಕಿದ. ದೊಡ್ಡ ರಾಶಿ ಆದ ಮೇಲೆ ಅವನು ಒಂದು ಕಲ್ಲಿನ ಮೇಲೆ ಕತ್ತಿಯನ್ನು ಹಲವಾರು ಸಲ ಬಡಿದು ಬೆಂಕಿ ಬರುವಹಾಗೆ ಮಾಡಿ ಸೌದೆ ಹೊತ್ತಿಸಿದನು. ಛಟ ಛಟ ಎಂದು ಶಬ್ದ ಮಾಡುತ್ತ ಪುಳ್ಳೆಗಳ ರಾಶಿ ಉರಿಯತೊಡಗಿತು.
ರಟ್ಟಾ ಸಂತೋಷದಿಂದ ಚಪ್ಪಾಳೆ ತಟ್ಟಿ ‘ನಮಗಿನ್ನೇನು ಕೊರತೆ? ಸಾಕ್ಷಾತ್ ಅಗ್ನಿದೇವನೇ ಪ್ರತ್ಯಕ್ಷನಾದನಲ್ಲ!’ ಎಂದು ಹೇಳುತ್ತಿರುವಾಗ ಅವಳ ಮುಖ ಲಜ್ಜೆಯಿಂದ ಕೆಂಪಾಯಿತು.
ಬೆಂಕಿಯ ಆ ಕಡೆ ಈ ಕಡೆ ಕಂಬಳಿಗಳನ್ನು ಹಾಸಿ ಚಿತ್ರಕ ‘ತಾವು ಕುಳಿತುಕೊಳ್ಳಿ, ನಾನು ಕುದುರೆಗಳಿಗೆ ಒಂದು ವ್ಯವಸ್ಥೆ ಮಾಡಿ ಬರುತ್ತೇನೆ’ ಎಂದನು.
ಚಿತ್ರಕ ಹೊರಗೆ ಹೋದನು. ಹೊರಗೆ ಹಗಲಿನ ಬೆಳಕು ಸಂಪೂರ್ಣವಾಗಿ ಇಲ್ಲವಾಗಿತ್ತು.
ರಟ್ಟಾ ಪ್ರೋಜ್ವಲವಾಗಿ ಉರಿಯುತ್ತಿರುವ ಅಗ್ನಿಯ ಕಡೆ ನೋಡುತ್ತಿದ್ದಳು. ‘ಜೀವನ ಎಷ್ಟು ಅದ್ಭುತ? ಎಷ್ಟು ಭಯಂಕರ! ಎಷ್ಟು ಸುಂದರ! ಇಷ್ಟು ದಿನ ನಾವು ಕೇವಲ ಬದುಕಿದ್ದೆವು ಅಷ್ಟೆ. ಇಂದು ಪ್ರಪ್ರಥಮವಾಗಿ ಜೀವನದ ರುಚಿಯನ್ನು ಆಸ್ವಾದಿಸುತ್ತಿದ್ದೇವೆ’ ಎಂದು ಮನಸ್ಸಿಗೆ ಅನ್ನಿಸುತ್ತಿತ್ತು.
ಚಿತ್ರಕ ಹೊರಗಿನಿಂದ ಒಳಗೆ ಬರುವಷ್ಟರಲ್ಲಿ ರಟ್ಟಾ ತಲೆಯ ಮೇಲಿನ ಪೇಟ ತೆಗೆದಿರುವುದು ಕಾಣಿಸಿತು. ಅಗ್ನಿಶಿಖೆಯ ಚಂಚಲ ಪ್ರಕಾಶದಲ್ಲಿ ವೇಷ ಮರೆಸಿಕೊಂಡಿರುವ ಸುಂದರ ಸುಕುಮಾರ ಮುಖವನ್ನು ನೋಡಿ, ಚಿತ್ರಕನ ಚಿತ್ತವು ಕ್ಷಣಕಾಲ ಬೆಂಕಿಯ ಕಿಡಿಗಳ ಹಾಗೆ ಅತ್ತಿತ್ತ ಹಾರಾಡಿತು. ಆದರೆ ಕೂಡಲೇ ಸಂಯಮ ತಂದುಕೊAಡು ಸಹಜಭಾವದಿಂದ ‘ಕುದುರೆಗಳ ಲಗಾಮು
ತೆಗೆದು ಸ್ವೇಚ್ಛೆಯಾಗಿ ಓಡಾಡುವಂತೆ ಮಾಡಿದ್ದೇನೆ. ಈ ಜಾಗದಲ್ಲಿ ಎಲ್ಲಿಯಾದರೂ ಕಾಡುಮೃಗಗಳು ಇದ್ದರೆ- ಇರಲಾರದೆಂದು ನನ್ನ ನಂಬಿಕೆ ಓಡಿ ಹೋಗಿ ಆತ್ಮರಕ್ಷಣೆ ಮಾಡಿಕೊಳ್ಳಬಹುದು.
ಕಾಡುಮೃಗಗಳು! ಈ ಪರ್ವತದ ದಟ್ಟ ವಾದ ಕಾಡಿನಲ್ಲಿ ಕಾಡುಮೃಗಗಳು ಇರುತ್ತವೆ ಎಂಬ ವಿಷಯ ರಟ್ಟಾಳ ಮನಸ್ಸಿಗೆ ಬಂದೇ ಇರಲಿಲ್ಲ.
ಚಿತ್ರಕ ರಟ್ಟಾಳ ಮುಂದೆ ತಿಂಡಿಯ ಗಂಟನ್ನು ಇಟ್ಟು ‘ಇನ್ನು ಊಟ’ ಎಂದನು.
ಇಬ್ಬರೂ ಒಂದು ಕಂಬಳಿಯ ಮೇಲೆ ಕುಳಿತು ಆಹಾರ ಸೇವಿಸಲು ಪ್ರಾರಂಭಿಸಿದರು. ಉಳಿದಿದ್ದ ಹೋಳಿಗೆಗಳನ್ನು ಚಿತ್ರಕ ರಟ್ಟಾಳಿಗೆ ಕೊಟ್ಟು ತಾನು ಒಣ ಕಡಲೆಯನ್ನು ತಿನ್ನಲು ಮೊದಲು ಮಾಡಿದನು. ರಟ್ಟಾ ಅದನ್ನು ಗಮನಿಸಿ ಅವನ ಕಡೆ ತಿರುಗಿ ಮೃದುವಾಗಿ ನಕ್ಕಳು. ಏನೂ ಹೇಳಲಿಲ್ಲ. ತಾನೂ ಒಂದು ನಾಲ್ಕಾರು ಕಡಲೆಯನ್ನು ಬಾಯಲ್ಲಿ ಹಾಕಿಕೊಂಡಳು.
ಹೀಗೆಯೇ ಸ್ವಲ್ಪ ಹೊತ್ತು ಕಳೆದ ಮೇಲೆ ಚಿತ್ರಕ ‘ತಮಗೆ ಒದಗಿದ ಈ ದುರವಸ್ಥೆಯನ್ನು ಕಂಡು ನನಗೆ ನಾಚಿಕೆಯಾಗುತ್ತದೆ’ ಎಂದನು.
ರಟ್ಟಾ- ತಾವೇಕೆ ನಾಚಿಕೆಪಟ್ಟುಕೊಳ್ಳಬೇಕು? ನಾನೇ ಸ್ವೇಚ್ಛೆಯಿಂದ ಇದನ್ನು ಆಯ್ಕೆ ಮಾಡಿಕೊಂಡಿದ್ದೇನೆ.
ಚಿತ್ರಕ- ಆದರೆ ಇದರ ಪ್ರಸ್ತಾಪ ಮಾಡಿದ್ದು ನಾನು ತಾನೇ!
ರಟ್ಟಾ- ತಾವೇನೂ ಕೆಟ್ಟ ಪ್ರಸ್ತಾಪ ಮಾಡಲಿಲ್ಲವಲ್ಲಾ! ಈ ಪರ್ವತ
ಇಷ್ಟೊಂದು ದುರ್ಗಮವಾದುದೆಂದು ತಮಗೆಲ್ಲಿ ತಿಳಿದಿತ್ತು?
ಚಿತ್ರಕ ಬೆಂಕಿಗೆ ಒಂದು ಕಟ್ಟಿಗೆಯ ತುಂಡನ್ನು ಹಾಕಿ ‘ಅದು ನಿಜ. ಆದರೂ ತಾವು ನನ್ನಲ್ಲಿ ಏನಾದರೂ ಕೆಟ್ಟಯೋಚನೆ ಇರಬಹುದೆಂದು ಸಂದೇಹ ಪಟ್ಟಿರಬಹುದೆಂದು ನನಗೆ ಭಯ’ ಎಂದನು.
ರಟ್ಟಾ- ಆರ್ಯ ಚಿತ್ರಕ, ನನ್ನ ಅಂತಃಕರಣ ಅಷ್ಟು ಕೆಳಮಟ್ಟದ್ದೆಂದು ತಾವು ಭಾವಿಸಬಾರದು.
ಚಿತ್ರಕ- (ದೀನಸ್ವರದಲ್ಲಿ) ಕ್ಷಮಿಸಬೇಕು ರಾಜಕುಮಾರಿ. ತಮ್ಮ ತೊಂದರೆಗೆ ನಾನು ಕಾರಣನಾದೆನಲ್ಲಾ ಎಂದು ನನಗೆ ನೋವಾಗಿದೆ.
ರಟ್ಟಾ- (ಅಷ್ಟೇ ತೀಕ್ಷವಾಗಿ) ನನ್ನ ಈ ಕಷ್ಟಗಳಿಗೆ ತಾವು ಕಾರಣರಲ್ಲ. ಇನ್ನು ಕಷ್ಟದ ಮಾತು. ಹೆಂಗಸಿಗೆ ಯಾವುದರಿಂದ ತೊಂದರೆಯಾಗುತ್ತದೆ ಎಂಬುದು ತಮಗೆ ಹೇಗೆ ಗೊತ್ತಾಗಬೇಕು?
ಚಿತ್ರಕನ ಎದೆ ಡವಡವ ಎಂದು ಬಡಿದುಕೊಳ್ಳಲು ಪ್ರಾರಂಭಿಸಿತು. ಅವನು ಮತ್ತೇನೂ ಹೇಳಲಿಲ್ಲ. ಹೆಂಗಸಿಗೆ ಯಾವುದರಿಂದ ಕ್ಲೇಶವಾಗುತ್ತದೆ. ಯಾವುದರಿಂದ ಸುಖ ದೊರೆಯುತ್ತದೆ, ಆ ವಿಷಯ ಕಲ್ಲೆದೆಯ ಯುದ್ಧ ಜೀವಿಗೆ ಹೇಗೆ ಗೊತ್ತಾಗಬೇಕು! ಹೆಂಗಸಿನ ಚಾರಿತ್ರ್ಯ ಹಾಗೂ ಗಂಡಸಿನ ಭಾಗ್ಯವನ್ನು ದೇವತೆಗಳೂ ತಿಳಿಯಲಾರರು. ಇನ್ನು ಸಾಧಾರಣ ಮನುಷ್ಯನಿಗೆ ಹೇಗೆ ಸಾಧ್ಯ? ಆದರೂ ರಟ್ಟಾ ಯಶೋಧರಾ ಎಂಬ ಈ ಯುವತಿಯ ಚಾರಿತ್ರ್ಯ ಎಷ್ಟೇ ರಹಸ್ಯಮಯವಾಗಿರಲಿ. ಅದು ಅನನ್ಯವೂ, ಅನಿಂದ್ಯವೂ
ಹಾಗೂ ಅನವದ್ಯವೂ ಆದುದೆಂಬ ವಿಷಯದಲ್ಲಿ ಚಿತ್ರಕನಿಗೆ ಕಿಂಚಿತ್ತೂ ಸಂಶಯವಿರಲಿಲ್ಲ.
ತಿಂಡಿ ತಿಂದ ಮೇಲೆ ಇಬ್ಬರೂ ಗುಹೆಯಿಂದ ಹೊರಗೆ ಹೋಗಿ ಜಲಧಾರೆ ಯಲ್ಲಿ ನೀರು ಕುಡಿದರು. ಚಿತ್ರಕನು ಒಂದು ಉರಿಯುತ್ತಿರುವ ಕೊಳ್ಳಿಯನ್ನು ಕೈಯಲ್ಲಿ ಹಿಡಿದು ಬೆಳಕು ಮಾಡಿದನು. ಅಷ್ಟು ಹೊತ್ತಿಗೆ ಹೊರಗೆ ಗಾಢಾಂಧಕಾರ ವ್ಯಾಪಿಸಿತ್ತು. ಆಕಡೆ ಈಕಡೆ ಕೆಲವು ಮಿಣುಕು ಹುಳುಗಳು ನೀಲಿ ಬಣ್ಣದ ಕಣ್ಣ ಬೆಂಕಿಯನ್ನು ಉರಿಸುತ್ತ ಯಾವುದೋ ಅಲಕ್ಷ್ಯ ವಸ್ತುವನ್ನು ಹುಡುಕುತ್ತಾ ಹಾರಾಡುತ್ತಿದ್ದವು.
ಗುಹೆಗೆ ವಾಪಸು ಬಂದು ಚಿತ್ರಕನು. ಉಳಿದಿದ್ದ ಸೌದೆಯೆಲ್ಲವನ್ನು ಬೆಂಕಿಗೆ ಹಾಕಿ ‘ಇನ್ನು ಮಲಗೋಣ’ ಎಂದನು.
ಬಂದು ಪಕ್ಕದಲ್ಲಿ ರಟ್ಟಾ ಮಲಗಿದಳು. ಇನ್ನೊಂದು ಪಕ್ಕದಲ್ಲಿ ಚಿತ್ರಕ.ಮಧ್ಯದಲ್ಲಿ ಅಗ್ನಿದೇವತೆಯು ಜಾಗ್ರತವಾಗಿದ್ದಿತು. ಮಲಗಿ ಚಿತ್ರಕ ಕಣ್ಣುಗಳನ್ನು ಮುಚ್ಚಿದನು. ಇಂದಿನ ಈ ಅಪರೂಪ ಪರಿಸ್ಥಿತಿ, ರಟ್ಟಾಳ ಜೊತೆಯಲ್ಲಿ ಈ ಗುಹೆಯಲ್ಲಿ ಒಂದು ಮಾರು ದೂರದ ಅಂತರದಲ್ಲಿ ಮಲಗುವಿಕೆ, ಚಿತ್ರಕನ ಸ್ನಾಯುಗಳಲ್ಲಿ ಒಂದು ರೀತಿಯ ಆಂದೋಳನ ಉಂಟಾಯಿತೆಂಬುದರಲ್ಲಿ
ಸಂದೇಹವಿಲ್ಲ. ಆದರೆ ಈ ವಿಚಾರವು ಕ್ಷಣಾರ್ಧದಲ್ಲಿ ಬಿಸಿಲುಗುದುರೆಯ ಹಾಗೆ ತೋರಿ ಮಾಯವಾಯಿತು. ಎರಡು ದಿನ ಕುದುರೆ ಸವಾರಿಯ ಆಯಾಸ, ಒಂದು ರಾತ್ರಿ ನಿದ್ದೆಗೆಟ್ಟುದರ ಆಯಾಸ ಇವೆಲ್ಲವೂ ಕಬ್ಬಿಣದಷ್ಟು ಗಟ್ಟಿಯಾದ ಚಿತ್ರಕನ ಶರೀರಕ್ಕೆ ಅತಿಯಾದ ಬಳಲಿಕೆ ಉಂಟಾಗಿತ್ತು. ಅವನು ಬಹುಬೇಗ ನಿದ್ರಾವಶನಾದನು.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)