ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 43

ಸ್ಕಂದಾವಾರದಲ್ಲಿ (ಸೇನಾ ಶಿಬಿರದಲ್ಲಿ)

ಮಧ್ಯಾಹ್ನದ ಊಟವಾದ ಮೇಲೆ ಸ್ಕಂದಗುಪ್ತನು ಶಿಬಿರದ ಒಂದು ಕೊಠಡಿಯಲ್ಲಿ ಮಲಗಿ ವಿಶ್ರಮಿಸಿಕೊಳ್ಳುತ್ತಿದ್ದನು. ಇಬ್ಬರು ಸಂವಾಹಕ (ಮಾಲೀಸು ಮಾಡುವವರು) ಅವನ ಕಾಲುಗಳನ್ನು ಒತ್ತುತ್ತಿದ್ದರು. ಒಬ್ಬ ದಾಸಿ ಚಾಮರವನ್ನು
ಬೀಸುತ್ತ ಗಾಳಿ ಹಾಕುತ್ತಿದ್ದಳು. ಭುಕ್ತಾ ರಾಜವದಾಚರೇತ್! ಆಗಿನ ಕಾಲದಲ್ಲಿ ಮಧ್ಯಾಹ್ನದ ಭೋಜನಾ ನಂತರ ವಿಶ್ರಮಿಸಿಕೊಳ್ಳುವ ಪದ್ಧತಿ ಇದ್ದಿತು. ರಾಜನಿಂದ ಮೊದಲುಗೊಂಡು ಸಾಧಾರಣ ಪಾಮರರವರೆಗೆ ಎಲ್ಲರೂ ಮಧ್ಯಾಹ್ನದ ಹೊತ್ತಿನಲ್ಲಿ ಸ್ವಲ್ಪ ಹೊತ್ತಾದರೂ ರಾಜನಂತೆ ಈ ಪದ್ಧತಿಯನ್ನು ಆಚರಿಸುತ್ತಿದ್ದರು.

ಸ್ಕಂದಗುಪ್ತನ ಗುಡಾರದಲ್ಲಿ ಅನೇಕ ಕೊಠಡಿಗಳಿದ್ದವು. ಅವುಗಳಲ್ಲಿ ಒಂದು ಎಲ್ಲಕ್ಕಿಂತಲೂ ದೊಡ್ಡದು. ಇದನ್ನು ಮಂತ್ರಾಲೋಚನ ಗೃಹದ ಹಾಗೆ ಉಪಯೋಗಿಸಿಕೊಳ್ಳುತ್ತಿದ್ದರು. ಸೇನಾಪತಿ ಹಾಗೂ ಮಂತ್ರಿಗಳ ಜೊತೆಗೂಡಿ ಕುಳಿತು ರಾಜನು ಮಂತ್ರಾಲೋಚನೆ ಮಾಡುತ್ತಿದ್ದನು. ಸಿಂಹಾಸನಾದಿಗಳು ಯಾವುವೂ ಇಲ್ಲಿ ಇಲ್ಲ. ನೆಲದ ಮೇಲೆ ವಿಶಾಲವಾದ ಒಂದು ಮೆತ್ತನೆಯ ರತ್ನಗಂಬಳಿ. ಅದರ ಮೇಲೆ ರಾಜರಿಗಾಗಿ ಎತ್ತರವಾದ ದಿಂಬುಗಳಿರುವ ಹಾಸಿಗೆ. ಮಂತ್ರಾಲೋಚನೆಯ ಸಮಯದಲ್ಲಿ ಇದೇ ರಾಜರ ಆಸನ. ಮಧ್ಯಾಹ್ನದ ವಿಶ್ರಾಂತಿಯ ವೇಳೆ ಇದೇ ಅವರ ಪಲ್ಲಂಗ. (ಮಂಚ)

ವಿಶೇಷವಾದ ಜವಾಬ್ದಾರಿ ಹಾಗೂ ಕಾರ್ಯಗೌರವವಿರುವ ರಾಜರಿಗೆ ವಿಶ್ರಾಂತಿಗೆ ಸಮಯವೆಲ್ಲಿ ದೊರಕೀತು? ಸ್ಕಂದಗುಪ್ತನ ನಿದ್ರಾಮಂಪರಿಗೆ ಆಗಾಗ ಅಡ್ಡಿಯಾಗುತ್ತಲೇ ಇರುತ್ತಿತ್ತು. ಗೂಢಚಾರನೊಬ್ಬನು ನಿಶ್ಚಬ್ದವಾಗಿ ಒಳಹೊಕ್ಕು ರಾಜನ ಕಿವಿಯಲ್ಲಿ ಏನೋ ಹೇಳಿ ಸದ್ದಿಲ್ಲದೆ ಹೊರಟು ಹೋಗುತ್ತಿದ್ದನು. ಮತ್ತೆ ಸ್ವಲ್ಪ ಹೊತ್ತಿನ ನಂತರ ಇನ್ನೊಬ್ಬ ಗೂಢಚಾರ ಬರುತ್ತಿದ್ದನು.

ಈ ರೀತಿ ಅರ್ಧ ಮಂಪರಿನ ಅವಸ್ಥೆಯಲ್ಲಿ ಸ್ಕಂದಗುಪ್ತನ ಮೆದುಳು ಕೆಲಸ ಮಾಡುತ್ತಿತ್ತು. ಹೂಣರು ಉತ್ತರ ದಿಕ್ಕಿನಲ್ಲಿ ಐವತ್ತು ಹರಿದಾರಿ ದೂರದಲ್ಲಿ ಮೊಕ್ಕಾಂ ಮಾಡಿದ್ದಾರೆ… ಇನ್ನಾವ ದಿಕ್ಕಿಗೆ ಹೊರಡುವರೊ? ಒಂದು ನಮ್ಮ ಮೇಲೆ ಆಕ್ರಮಣ ಮಾಡಬಹುದು- ಬಹುಶಃ ಅವರು ಹಾಗೆ ಮಾಡಲಾರರು! ಎರಡು ನಮ್ಮನ್ನು ಬದಿಗಿರಿಸಿ ಆರ್ಯಾವರ್ತದ ಸಮತಟ್ಟಾದ ಮೈದಾನ ಕಡೆಗೆ ಇಳಿಯುವ ಪ್ರಯತ್ನ ಮಾಡಬಹುದು- ಹಾಗೆ ಮಾಡಲು ಅವಕಾಶ ಕೊಡುವುದಿಲ್ಲ. ಮೂರು- ನಮ್ಮನ್ನು ದಕ್ಷಿಣದಲ್ಲಿಯೇ ಉಳಿಸಿ ವಿಟಂಕ ರಾಜ್ಯದ ಅಧಿಕಾರ ಸಂಪಾದಿಸಿ ಅಲ್ಲಿಯೇ ನೆಲಸಬಹುದು… ವಿಟಂಕ ರಾಜ್ಯದ ರಾಜನೂ ಹೂಣನೇ… ಶತ್ರು ಎದುರಿಗಿದ್ದರೆ ಒಳ್ಳೆಯದು. ಆದರೆ ಶತ್ರುವು ಹಿಂದುಗಡೆ ಆಯಕಟ್ಟಿನ ಜಾಗವನ್ನು ಹಿಡಿದು ಕುಳಿತುಬಿಟ್ಟರೆ…

ಎರಡು ಮೂರು ಗಂಟೆಗಳು ಇದೇ ಚಿಂತೆ ಅವನನ್ನು ಕಾಡುತ್ತಿರಲು ನಿದ್ದೆಯ ಮಂಪರು ದೂರವಾಯಿತು. ರಾಜನು ಎದ್ದು ಕುಳಿತನು. ಸಂವಾಹಕರನ್ನು ಕೈ ಸನ್ನೆಯಿಂದ ಹೊರಗೆ ಹೋಗಲು ಹೇಳಿ, ವಿದೂಷಕನನ್ನು ಕೂಗಿ ಕರೆದನು.

ಕೊಠಡಿಯ ಒಂದು ಕತ್ತಲಿನ ಮೂಲೆಯಲ್ಲಿ ಸ್ಥೂಲಕಾಯದ ರಾಜ ವಯಸ್ಯ ಪಿಪ್ಪಲಿಮಿಶ್ರನು ಅಂಗಾಂಗಗಳನ್ನು ಮನಸೋ ಇಚ್ಛೆ ಚಾಚಿಕೊಂಡು ರಾಜನ ಹಾಗೆ ವಿಶ್ರಾಂತಿ ಪಡೆಯುತ್ತಿದ್ದನು. ಅವನು ಸ್ಕಂದನ ಕೂಗನ್ನು ಕೇಳಿ ಎಚ್ಚರಗೊಂಡು ದೀರ್ಘವಾಗಿ ಆಕಳಿಸಿದನು. ಅವನು ‘ವಯಸ್ಯ, ನಾನೇನು ನಿದ್ದೆ ಮಾಡುತ್ತಿರಲಿಲ್ಲ. ಕಣ್ಣು ಮುಚ್ಚಿಕೊಂಡು ನನ್ನ ಹೆಂಡತಿಯನ್ನೇ ನೆನೆಯುತ್ತಿದ್ದೆ’ ಎಂದನು.

ರಾಜನು ‘ಪಿಪುಲ, ಹೆಂಡತಿಗಾಗಿ ಅಷ್ಟೊಂದು ವಿರಹವೇದನೆಯನ್ನು ಅನುಭವಿಸುತ್ತಿದ್ದೆಯಾ?’ ಎಂದು ಪ್ರಶ್ನಿಸಿದನು.

‘ಸರಿಯಾದ ವಿರಹವೇನೂ ಅಲ್ಲ. ಆದರೆ ನಾಲ್ಕೂ ದಿಕ್ಕುಗಳು ನನಗೆ ಶೂನ್ಯವಾಗಿ ತೋರುತ್ತಿವೆ’ ಎಂದು ಹೇಳಿ ಆ ಬ್ರಾಹ್ಮಣನು ರಾಜನ ಸಮೀಪ ಬಂದು ಕುಳಿತನು.

ಚಾಮರ ಹಾಕುತ್ತಿದ್ದ ದಾಸಿಗೆ ರಾಜನು ‘ಲಹರಿ, ನಮ್ಮ ಸ್ನೇಹಿತನಿಗೆ ತಾಂಬೂಲ ತಂದು ಕೊಡು’ ಎಂದು ಹೇಳಿದನು.

ದಾಸಿಯು ಚಾಮರವನ್ನು ಕೆಳಗಿಟ್ಟು ಹೋದಳು. ಲಹರೀ ಎಂಬ ಹೆಸರಿನ ಈ ದಾಸಿಗೆ ಪ್ರಾಯ ಮೀರಿತ್ತು. ಆದರೆ ನೋಡಲು ಚೆನ್ನಾಗಿದ್ದಳು. ಸ್ಕಂದಗುಪ್ತನ ಯೌವನ ಕಾಲದಿಂದಲೂ ಆಕೆ ಅವನ ಸೇವೆಯಲ್ಲಿದ್ದಾಳೆ. ಯುದ್ಧಭೂಮಿ ಯಲ್ಲಿಯೂ ಅವನ ಜೊತೆ ಬಿಟ್ಟಿಲ್ಲ. ರಾಜನ ಪರಿವಾರದಲ್ಲಿ ಲಹರಿಯೊಬ್ಬಳನ್ನು ಬಿಟ್ಟರೆ ಬೇರೆ ಹೆಂಗಸರಿರಲಿಲ್ಲ. ಸ್ಕಂದಗುಪ್ತನು ತನ್ನ ಗೃಹಕೃತ್ಯದ ಸಮಸ್ತ ಭಾರವನ್ನೂ ಆಕೆಯ ಕೈಗೆ ಒಪ್ಪಿಸಿದ್ದನು. ಆಕೆಯೇ ಆತನ ಅಡಿಗೆಯವಳು. ಆಪ್ತಕಾರ್ಯದರ್ಶಿ, ತಾಂಬೂಲ ಕರಂಕವಾಹಿನಿ, ಅಂಗ ರಕ್ಷಕಳೂ ಆಗಿದ್ದಳು. ಯುದ್ಧದ ಶಿಬಿರದಲ್ಲಿ ನೆರಳಿನಂತೆ ಆಕೆ ಸದಾ ಆತನ ಜೊತೆಯಲ್ಲಿಯೇ ಇರುವಳು. ದೇವತೆಯಂತೆ ಆಕೆಯು ಆತನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಿದ್ದಳು. ಸ್ಕಂದಗುಪ್ತನು ಆಕೆಯನ್ನು ಸೋದರಿಯಂತೆ ಪ್ರೀತಿಸುತ್ತಿದ್ದನು. ಪಿಪ್ಪಲೀ ಮಿಶ್ರ ನಿಟ್ಟುಸಿರು ಬಿಟ್ಟು “ಕಾಳಿದಾಸನು ‘ಕಿಂ ಪುನರ್ದೂರ ಸಂಸ್ಥೇ’ ಎಂದು ಬರೆದಿದ್ದಾನೆ. ಮೇಘವನ್ನು ನೋಡಿದರೆ ಪರಸ್ಥಳದಲ್ಲಿರುವ ವ್ಯಕ್ತಿಗೆ ಬಹಳ ಕಷ್ಟವಾಗುತ್ತದೆ. ಆದರೆ ಮೇಘವನ್ನು ನೋಡದಿರುವ
ನಮಗೆ ಯಾವ ರೀತಿಯ ಕಷ್ಟವಾಗುತ್ತಿದೆ ಎಂದರೆ…” ಎಂದು ಹೇಳಲು ಪ್ರಾರಂಭಿಸಿದನು.

‘ನಿನಗೇನು ಅಂಥ ಕಷ್ಟ?’

‘ಇಲ್ಲಿ ಇಷ್ಟೊಂದು ಜನ ಸೈನ್ಯ ಸಾಮಂತರಿದ್ದಾರೆ. ಆದರೂ ಯಾರೂ ಇಲ್ಲವೆಂದೇ ನನ್ನ ಭಾವನೆ. ವಯಸ್ಯ, ವಯಸ್ಸು ಹೆಚ್ಚಾದಂತೆಲ್ಲ ಮನೆಯೊಡತಿಯು ಇಲ್ಲದಿರುವುದರಿಂದ ಹತ್ತು ದಿಕ್ಕುಗಳೂ ಬರಿದಾಗಿ ಕಾಣಿಸುತ್ತವೆ. ಆದರೆ ಈ ಎಲ್ಲ ಗೂಢವಾದ ವಿಚಾರ ನಿನಗೆ ತಿಳಿಯುವುದಿಲ್ಲ. ಗೃಹಿಣೀ ಎಂದರೇನು ಎಂಬುದು ನಿನಗೆ ಈ ಜನ್ಮದಲ್ಲಿ ತಿಳಿಯಲಾರದು’.

‘ಹಾಗಾದರೆ ಗೃಹಿಣೀ ಎಂದರೇನು?’

ಪಿಪ್ಪಲೀ ಮಿಶ್ರ- ‘ಗೃಹಿಣೀ ಸಚಿವಃ ಸಖೀ ಪ್ರಿಯಶಿಷ್ಯಾ ಲಲಿತೇ ಕಲಾವಿದೌ.’

ಮುಂದುವರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *