ಹಿಂದಿನ ಸಂಚಿಕೆಯಿಂದ….
ಸ್ಕಂದಗುಪ್ತ- ನಿನ್ನ ಅವಸ್ಥೆಯನ್ನು ನೋಡಿದರೆ ನನಗೆ ‘ಅಯ್ಯೋ’ ಎನಿಸುತ್ತದೆ. ಮತ್ತೆ ಮತ್ತೆ ಕಾಳಿದಾಸನ ಮಾತುಗಳನ್ನು ಉದಾಹರಿಸುತ್ತಿರುವೆ. ನೀನು ಯುದ್ಧವನ್ನು ನೋಡಬೇಕೆಂದು ಆಸೆಪಟ್ಟೆ. ಆದ ಕಾರಣ ನಿನ್ನನ್ನು ಜೊತೆಯಲ್ಲಿ ಕರೆದುಕೊಂಡು ಬಂದೆ. ಹೀಗೆಂದು ತಿಳಿದಿದ್ದರೆ ನಿನ್ನ ಹೆಂಡತಿಯನ್ನೂ ಜೊತೆಯಲ್ಲಿ ಕರೆದುಕೊಂಡು ಬರಬಹುದಾಗಿತ್ತು.
ಪಿಪ್ಪಲೀ ಮಿಶ್ರ- ‘ಬೇಡ ವಯಸ್ಯ. ಇದೇ ಒಳ್ಳೆಯದು. ನನಗೆ ಸ್ವಲ್ಪ ನೋವಾದರೂ ಪರವಾಗಿಲ್ಲ. ಆಕೆ ಏನಾದರೂ ಬಂದಿದ್ದರೆ ಇಲ್ಲಿಯ ಸೈನ್ಯ, ಆನೆ ಕುದುರೆ ಇವುಗಳನ್ನೆಲ್ಲಾ ನೋಡಿ, ಹೆದರಿ, ಪ್ರಾಣವನ್ನೇ ಬಿಡುತ್ತಿದ್ದಳು.’ ಈ ರೀತಿ ಹೇಳಿ ಅವನು ನಿಟ್ಟುಸಿರು ಬಿಟ್ಟನು. ಆ ನಿಟ್ಟುಸಿರು ಅವನ ಮೂಲಾಧಾರದಲ್ಲಿ ಹುಟ್ಟಿ ಷಟ್‌ಚಕ್ರವನ್ನು ಭೇದಿಸಿ ಹೊರಬಂದಿತೆಂದು ತೋರಿತು.
ಅಷ್ಟು ಹೊತ್ತಿಗೆ ಲಹರಿಯು ತಾಂಬೂಲ ಕರಂಕವನ್ನು ತಂದು ಪಿಪ್ಪಲಿ ಮಿಶ್ರನ ಮುಂದೆ ಇಟ್ಟು, ಮತ್ತೆ ಚಾಮರ ತೆಗೆದುಕೊಂಡು ಬೀಸಲು ಪ್ರಾರಂಭಿಸಿದಳು. ತಾಂಬೂಲವನ್ನು ನೋಡಿ ಬ್ರಾಹ್ಮಣನ ಮುಖ ಅರಳಿತು. ಅವನು ಅಡಕತ್ತರಿಯಿಂದ ಗೋಟಡಿಕೆಯನ್ನು ಕತ್ತರಿಸಿ ತಾನೇ ತಾಂಬೂಲವನ್ನು ತಯಾರಿಸಲು ತೊಡಗಿದನು.
ಸ್ಕಂದಗುಪ್ತನು ಆಗ ‘ಪಿಪುಲ, ಈ ಸಲ ಹೂಣರೊಡನೆ ಯುದ್ಧ ಮಾಡಲು ಹೊಸದೊಂದು ವಿಧಾನವನ್ನು ಕಂಡುಹಿಡಿದಿದ್ದೇನೆ’ ಎಂದನು.
ಪಿಪುಲನು ಸಂತೋಷ ಪಡುತ್ತ ‘ಒಳ್ಳೆಯದು. ಒಳ್ಳೆಯದು. ಈರುಳ್ಳಿ ಸೇವಿಸುವ ದುರ್ಗಂಧದ ಮುಂಗುಸಿಗಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷೆ ಕೊಡಬೇಕು. ಎಂಥ ವಿಧಾನವನ್ನು ಕಂಡು ಹಿಡಿದಿದ್ದೀಯೆ?’ ಎಂದು ಪ್ರಶ್ನಿಸಿದನು.
ಸ್ಕಂದಗುಪ್ತ- ನೋಡು. ಹೂಣರು ಕುದುರೆ ಬಿಟ್ಟು ಯುದ್ಧ ಮಾಡಲಾರರು. ಆದರೆ ಬೆಟ್ಟ ಗುಡ್ಡಗಳಲ್ಲಿ ಕುದುರೆ ಮೇಲೆ ಕುಳಿತು ಯುದ್ಧ ಮಾಡಿದರೆ ಸರಿ ಹೋಗುವುದಿಲ್ಲ. ಆದ್ದರಿಂದ ಒಂದು ತೀರ್ಮಾನಕ್ಕೆ ಬಂದಿದ್ದೇನೆ-
ಪಿಪ್ಪಲಿ ಮಿಶ್ರ- ಗೊತ್ತಾಯಿತು ಬಿಡು. ಆನೆಯ ಮೇಲೆ ಕುಳಿತು ಯುದ್ಧ ಮಾಡುತ್ತೀಯೆ.
ಸ್ಕಂದಗುಪ್ತ- ನೀನೊಬ್ಬ ಆನೆ ಗಾತ್ರದ ಮೂರ್ಖ. ನಾನು ಕಾಲಾಳುಗಳಿಂದ ಯುದ್ಧ ಮಾಡುತ್ತೇನೆ.
ಪಿಪ್ಪಲಿ- (ಅವಾಕ್ಕಾಗಿ) ಕಾಲಾಳುಗಳಿಂದಲೋ? ಹಾಗಾದರೆ ಇಷ್ಟೊಂದು ಹಿಂಡುಗಟ್ಟಲೆ ಆನೆಗಳನ್ನು ಏಕೆ ಕರೆತಂದೆ?
ಸ್ಕಂದಗುಪ್ತ- ಆನೆಗಳೂ ಕೆಲಸಕ್ಕೆ ಬರುತ್ತವೆ. ಆದರೆ ಮುಖ್ಯವಾಗಿ ಯುದ್ಧ ಮಾಡುವವರು ಕಾಲಾಳುಗಳು.
‘ಹಾಗಾದರೆ ಇದರಲ್ಲಿ ಹೊಸತನವೇನು ಬಂತು?’
‘ಇದರಲ್ಲಿ ಹೊಸತನವೆಂದರೆ ಕಾಲ್ದಳದವರ ಕೈಯಲ್ಲಿ ಹನ್ನೆರಡು ಮೊಳ ಉದ್ದದ ಬಿದಿರುಕೋಲುಗಳಿರುತ್ತವೆ.’
‘ಬಿದಿರುಕೋಲುಗಳಿಂದ ಹೂಣರನ್ನು ಸದೆ ಬಡಿಯುತ್ತೀಯಾ?’
ಸ್ಕಂದಗುಪ್ತನು (ನಕ್ಕು) ‘ಬರೀ ಬಿದಿರಿನ ಕೋಲುಗಳಲ್ಲ. ಅದರ ತುದಿಯಲ್ಲಿ ಭಲ್ಲೆಯ ಅಲಗುಗಳು ಇರುತ್ತದೆ. ಈಗ ಬಳಸುತ್ತಿರುವ ಭಲ್ಲೆಗಳು ಆರು ಮೊಳದವು. ಈಗಲಾದರೂ ಸ್ವಲ್ಪ ಅರ್ಥವಾಯಿತೆ?’ ಎಂದು ಕೇಳಿದನು.
ಪಿಪ್ಪಲಿ ಮಿಶ್ರ ಸ್ವಲ್ಪ ಹೊತ್ತು ಸುಮ್ಮನಿದ್ದು ಬಳಿಕ ತಲೆ ಅಲ್ಲಾಡಿಸುತ್ತ ‘ಯುದ್ಧ ವಿದ್ಯೆಯಲ್ಲಿ ನಮಗೆ ಅಷ್ಟು ಅನುಭವ ಸಾಲದು. ಆದರೆ ನೀನು ಹೊಸ ವಿಧಾನವನ್ನು ಕಂಡು ಹಿಡಿದಿದ್ದೀಯೆ ಎಂದರೆ ಅದರಲ್ಲಿ ಏನಾದರೂ ಅರ್ಥವಿದ್ದೇ ಇರುತ್ತದೆ’ ಎಂದನು.
ಸ್ಕಂದಗುಪ್ತ- ಯಾರಿಗಾದರೂ ಹೇಳಿ ಬಿಟ್ಟೀಯೆ. ಜೋಕೆ.
ಅದೇ ಸಮಯಕ್ಕೆ ಸರಿಯಾಗಿ ದ್ವಾರಪಾಲಕನು ಒಳಗೆ ಪ್ರವೇಶಿಸಿ, ‘ವಿಟಂಕ ರಾಜ್ಯದ ರಾಜಕನ್ಯೆಯು ಒಬ್ಬ ಅನುಚರನೊಂದಿಗೆ ಆಯುಷ್ಮಂತರ ದರ್ಶನ ಭಿಕ್ಷೆಗಾಗಿ ಬಂದಿದ್ದಾರೆ’ ಎಂದು ಸುದ್ದಿ ಮುಟ್ಟಿಸಿದನು.
ಸ್ಕಂದಗುಪ್ತನು ಆಶ್ಚರ್ಯದಿಂದ ಸ್ವಲ್ಪ ಹೊತ್ತು ಅವನನ್ನೇ ನೋಡುತ್ತಿದ್ದು ‘ವಿಟಂಕ ರಾಜ್ಯದ ರಾಜಕನ್ಯೆ! ಹೂಣ ದುಹಿತೆ! ಆಕೆಯನ್ನು ಕರೆದುಕೊಂಡು ಬಾ’ ಎಂದು ಆಜ್ಞಾಪಿಸಿದನು.
ದ್ವಾರಪಾಲಕನು ಹೊರಗೆ ಹೋದನು. ಲಹರಿಯು ಒಂದು ತೆಳುವಾದ ಮಲ್ಲುಬಟ್ಟೆಯ ಉತ್ತರೀಯವನ್ನು ರಾಜನ ಭುಜದ ಮೇಲೆ ಹೊದಿಸಿದಳು. ಪಿಪ್ಪಲ ಮಿಶ್ರನು ತಾಂಬೂಲದ ಕರಂಕವನ್ನು ತೆಗೆದುಕೊಂಡು ಒಂದು ಕಡೆ ಪಕ್ಕಕ್ಕೆ ಹೋಗಿ ಕುಳಿತನು. ಸ್ವಲ್ಪ ಹೊತ್ತಾದ ಮೇಲೆ ರಟ್ಟಾ ಬಂದು ಶಿಬಿರದ ಬಾಗಿಲ ಮುಂಭಾಗದಲ್ಲಿ ಬಂದು ನಿಂತಳು. ಹಿಂದಿನಿಂದ ಚಿತ್ರಕನು ಬಂದನು. ರಟ್ಟಾಳ ಎದೆ ಬಡಿತ ತೀವ್ರಗೊಂಡಿತು. ಕೊಠಡಿಯ ನಡುವೆ ಒಬ್ಬ ಪುರುಷಸಿಂಹ ಕುಳಿತಿರುವುದನ್ನು ಅವಳು ನೋಡಿದಳು. ಭಾರತವರ್ಷದ ಚಕ್ರವರ್ತಿ ಅಧೀಶ್ವರ ಸ್ಕಂದಗುಪ್ತ ಒಬ್ಬ ವಯಸ್ಕನಿರಬೇಕೆಂದು ಅವಳು ಊಹಿಸಿದ್ದಳು. ಆದರೆ ಸ್ಕಂದಗುಪ್ತರ ಗೌರವರ್ಣದ ದೇಹದಲ್ಲಿ ಮುಪ್ಪಿನ ಯಾವ ಲಕ್ಷಣವೂ ಕಾಣುತ್ತಿಲ್ಲ. ತೇಜಃಪುಂಜ ಮುಖಮಂಡಲದಿಂದ ಯೌವ್ವನದ ಲಾವಣ್ಯ ಚಿಮ್ಮುತ್ತಿದೆ. ಆತನ ಪ್ರಭಾವ ಎಷ್ಟು ಪ್ರಬಲವಾಗಿತ್ತೆಂದರೆ ಆ ಶಿಬಿರದ ಕೊಠಡಿಯಲ್ಲಿ ಬೇರೆ ಯಾರಾದರೂ ಇದ್ದಾರೆಯೇ ಎಂಬುದರ ಕಡೆ ಅವಳ ಗಮನ ಹರಿಯಲೇ ಇಲ್ಲ.
ಇತ್ತ ರಾಜನು ಅಪೂರ್ವ ಚೆಲುವೆಯಾದ ಒಬ್ಬ ಕನ್ಯಾಮಣಿ ತನ್ನ ಎದುರಿನಲ್ಲಿ ನಿಂತಿರುವುದನ್ನು ನೋಡಿದನು. ಒಂದು ಮಿಂಚಿನ ಬಳ್ಳಿಯು ಆಕಾಶದಿಂದ ಇಳಿದು ಬಂದು ಎದುರಿಗೆ ನಿಂತ ಹಾಗೆ ಅವನಿಗನ್ನಿಸಿತು. ಆತನು ವಿಸ್ಮಯಾವಹ ನೋಟದಿಂದ ಆಕೆಯನ್ನು ನೋಡಿದನು.
ರಟ್ಟಾ ತ್ವರಿತವಾಗಿ ರಾಜನ ಬಳಿಗೆ ಬಂದು, ಮಂಡಿಯೂರಿ ಕುಳಿತು, ಕೈಮುಗಿದು ‘ರಟ್ಟಾ ಯಶೋಧರೆಯ ಪ್ರಣತಿಯನ್ನು ಸ್ವೀಕರಿಸಬೇಕು ರಾಜಾಧಿರಾಜ!’ ಎಂದಳು. ಚಿತ್ರಕನೂ ಕೂಡ ರಟ್ಟಾಳ ಹಿಂದೆ ನಿಂತು ರಾಜನಿಗೆ ನಮಸ್ಕರಿಸಿದನು.
ಸ್ಕಂದಗುಪ್ತನು ಕೈಸನ್ನೆ ಮಾಡಿ ಇಬ್ಬರಿಗೂ ಕುಳಿತುಕೊಳ್ಳುವಂತೆ ಸೂಚಿಸಿ, ಧೀರ ಗಂಭೀರ ಸ್ವರದಲ್ಲಿ ‘ರಟ್ಟಾ ಯಶೋಧರಾ! ನೀವು ವಿಟಂಕ ರಾಜ್ಯದ ರಾಜಕನ್ಯೆ ಅಲ್ಲವೆ?’ ಎಂದು ಪ್ರಶ್ನಿಸಿದನು.
‘ಹೌದು ರಾಜಾಧಿರಾಜ’
‘ಹೂಣ ಕನ್ಯೆಯಲ್ಲವೆ?’
ರಟ್ಟಾಳಿಗೆ ಕೊಂಚ ಕಸಿವಿಸಿಯಾಯಿತು. ಅವಳು ‘ಹೌದು. ನಾನು ಹೂಣ ಕನ್ಯೆ. ಆದರೆ ಅದಕ್ಕಾಗಿ ನಾನು ಲಜ್ಜೆ ಪಡಬೇಕಾಗಿಲ್ಲ. ನಮ್ಮ ತಂದೆ ಒಬ್ಬ ಮಹಾನುಭಾವರು’ ಎಂದಳು.
ಸ್ಕಂದಗುಪ್ತನ ತುಟಿಗಳ ಮೇಲೆ ಮಂದಹಾಸ ಮಿನುಗಿತು. ಅವನು ನಿಮಗೆ ಲಜ್ಜೆ ಉಂಟುಮಾಡುವ ಸಲುವಾಗಿ ಈ ಪ್ರಶ್ನೆಯನ್ನು ಕೇಳಲಿಲ್ಲ. ನಿಮ್ಮನ್ನು ನೋಡಿದರೆ ಆರ್ಯಕನ್ಯೆಯ ಹಾಗೆ ಕಾಣಿಸಿದಿರಿ ಅದಕ್ಕಾಗಿ ಹೀಗೆ ಕೇಳಿದೆ’ ಎಂದನು.
ರಟ್ಟಾ- ನಮ್ಮ ತಾಯಿ ಆರ್ಯ ಪಂಗಡದವಳು.
ಸ್ಕಂದ – ಒಳ್ಳೆಯದು ಈಗ ಗೊತ್ತಾಯಿತು- ‘ರಾಜರು ನಿಮ್ಮನ್ನು ದೂತರನ್ನಾಗಿ ಏಕೆ ಕಳುಹಿಸಿದ್ದಾರೆ?’ ಎಂದು
‘ಇಲ್ಲ, ಮಹಾರಾಜ ನಾನೇ ಸ್ವಇಚ್ಛೆಯಿಂದ ಬಂದಿದ್ದೇನೆ.’
‘ನೀವು ಸಾಹಸಿಯೇ ಸರಿ. ಈ ವಿಶಾಲವಾದ ಸೈನ್ಯ ಸಮುದ್ರದಲ್ಲಿ ಯಾವುದೇ ಹೆಂಗಸು ಪ್ರವೇಶ ಮಾಡಲು ಸಾಧ್ಯವಿಲ್ಲ. ನೀವು ಎಲ್ಲಿಂದ ಬಂದಿರಿ?’
‘ಇಲ್ಲಿಯೇ ಸಮೀಪದಲ್ಲಿರುವ ಪಾಂಥಶಾಲೆಯಿಂದ’. ಪರ್ವತವನ್ನು ದಾಟಿ ಹೋದರೆ ಎರಡು ದಿನಗಳ ಪ್ರಯಾಣ.’
‘ಎರಡು ದಿನ! ರಾತ್ರಿ ಎಲ್ಲಿ ಕಳೆದಿರಿ?’
‘ಪರ್ವತದ ಗುಹೆಯಲ್ಲಿ.’
ಸ್ಕಂದಗುಪ್ತನು ಪ್ರಶ್ನಾರ್ಥಕವಾಗಿ ರಟ್ಟಾಳ ಕಡೆ ನೋಡಿದನು. ಆಕೆಯೂ ಕೂಡ ನಿರ್ಭೀಕಳಾಗಿ ಅಕಪಟ ನೇತ್ರಗಳಿಂದ ರಾಜನ ಕಡೆ ನೋಡಿದಳು.
ರಾಜನ ಕಣ್ಣುಗಳು ಒಂದು ಕ್ಷಣಕಾಲ ಚಿತ್ರಕನ ಕಡೆಗೆ ತಿರುಗಿ ಮತ್ತೆ ಇತ್ತ ತಿರುಗಿದವು. ‘ಒಳ್ಳೆಯದು. ನೀವು ಇನ್ನೂ ಕುಮಾರಿಯೋ ಅಥವಾ ವಿವಾಹಿತೆಯೋ?
‘ನಾನು ಕುಮಾರಿ. ಚಿತ್ರಕನ ಕಡೆ ಕೈತೋರಿಸುತ್ತ’ ಇವರು ಚಿತ್ರಕ ವರ್ಮಾ. ವಿಟಂಕ ರಾಜ್ಯದ ಒಬ್ಬ ಸೇನಾನಿ.’
ಚಿತ್ರಕ ಮತ್ತೊಮ್ಮೆ ಕೈಮುಗಿದು ನಮಸ್ಕರಿಸಿದನು. ಗುರುತಿನ ಉಂಗುರವನ್ನು ಅವನು ಮೊದಲೇ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದನು.
ಸ್ಕಂದಗುಪ್ತ- ‘ನೀವು ಏನಾದರೂ ಉದ್ದೇಶವಿಟ್ಟುಕೊಂಡೇ ನಮ್ಮ ಬಳಿಗೆ ಬಂದಿರಬೇಕು. ಆದರೆ ನೀವು ಪರ್ವತವನ್ನು ದಾಟಿ ಬಂದಿರುವುದರಿಂದ ಬಳಲಿದ್ದೀರಿ. ಈ ದಿನ ವಿಶ್ರಾಂತಿ ತೆಗೆದುಕೊಳ್ಳಿರಿ. ನಾಳೆ ನಿಮ್ಮ ಅಹವಾಲು ಕೇಳಿದರಾಯಿತು.’
ರಟ್ಟಾ- ದೇವ, ಗುರುತರವಾದ ರಾಜಕಾರ್ಯವಿರುವುದರಿಂದಲೇ ತಮ್ಮ ಬಳಿಗೆ ಬಂದಿದ್ದೇವೆ. ಮೊದಲು ನಮ್ಮ ಅಹವಾಲನ್ನು ತಮ್ಮಲ್ಲಿ ನಿವೇದನೆ ಮಾಡಿಕೊಳ್ಳಬೇಕು. ಅನಂತರ ವಿಶ್ರಾಂತಿಯ ಮಾತು.
ಸ್ಕಂದಗುಪ್ತ- ಒಳ್ಳೆಯದು. ಆದರೆ, ಅದಕ್ಕೂ ಮೊದಲು ಒಂದು ವಿಷಯ ತಿಳಿದುಕೊಳ್ಳಬೇಕಾಗಿದೆ. ವಿಟಂಕದ ರಾಜನ ಬಳಿಗೆ ಪತ್ರ ಸಮೇತ ಒಬ್ಬ ದೂತನನ್ನು ಕಳುಹಿಸಿದ್ದೆವು. ಆ ದೂತನು ರಾಜ್ಯವನ್ನು ತಲುಪಿದನೋ ಇಲ್ಲವೋ ತಿಳಿಯಲಿಲ್ಲ.
ಪಿಪ್ಪಲೀ ಮಿಶ್ರನು ಅಲ್ಲಿಯೇ ಸ್ವಲ್ಪ ದೂರದಲ್ಲಿ ಕುಳಿತು ಇವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದನು. ಅವನು, ಜನಾಂತಿಕವಾಗಿ, ‘ಶಶಿಶೇಖರ- ನನ್ನ ಹೆಂಡತಿಯ ಅಣ್ಣನ ಮಗ’ ಎಂದು ಹೇಳಿದನು.
ರಟ್ಟಾ ಒಂದು ಸಲ ಚಿತ್ರಕನ ಕಡೆ ನೋಡಿದಳು. ಆಗ ಚಿತ್ರಕನು ‘ದೂತನ ವಿಷಯ ತಿಳಿಯದು ಆಯುಷ್ಮನ್, ಆದರೆ ತಾವು ಕಳುಹಿಸಿಕೊಟ್ಟ ಪತ್ರ ತಲುಪಿದೆ’ ಎಂದನು
ಸ್ಕಂದಗುಪ್ತ- ಆದರೆ ಆ ಪತ್ರಕ್ಕೆ ಉತ್ತರ ಇನ್ನೂ ಏಕೆ ನನ್ನ ಕೈ ಸೇರಿಲ್ಲ?
ರಟ್ಟಾ-ಮಹಾರಾಜ, ನಮ್ಮ ಅಹವಾಲನ್ನು ಪೂರ್ಣವಾಗಿ ಕೇಳಿದ್ದೇ ಆದರೆ, ತಮಗೆ ಎಲ್ಲಾ ವಿಷಯವೂ ತಿಳಿಯುತ್ತದೆ.
ಸ್ಕಂದಗುಪ್ತನು ತಲೆ ಅಲುಗಾಡಿಸಿ ಸಮ್ಮತಿ ಸೂಚಿಸಿದನು. ರಟ್ಟಾ ಆಗ ಚಷ್ಟನ ದುರ್ಗದಲ್ಲಿ ನಡೆದ ಎಲ್ಲಾ ವಿವರಗಳನ್ನೂ ತಿಳಿಸಿದಳು. ಆದರೆ ಚಿತ್ರಕನು ‘ದೂತ’ನೆಂಬುವ ವಿಚಾರವನ್ನು ಮಾತ್ರ ಬಹಿರಂಗಪಡಿಸಲಿಲ್ಲ. ರಾಜನು ಬಹಳ ಆಸಕ್ತಿಯಿಂದ ಎಲ್ಲವನ್ನೂ ಆಲಿಸಿದನು. ವಿವರವೆಲ್ಲ ತಿಳಿದ ಮೇಲೆ ಕೊನೆಯಲ್ಲಿ ‘ಈ ಕಿರಾತನೆಂಬುವನು ಹೂಣನೇನು?’ ಎಂದು ಪ್ರಶ್ನಿಸಿದನು.
ರಟ್ಟಾ- ಹೌದು ಮಹಾರಾಜ, ನಮ್ಮ ಹಾಗೆಯೇ.
ಸ್ಕಂದಗುಪ್ತ- (ಪ್ರಶಂಸಿಸುತ್ತ) ನಿಮ್ಮ ಹಾಗೆ ಎಲ್ಲೋ ಕೆಲವರು ಮಾತ್ರ ಇರುತ್ತಾರೆ. ನಿಮ್ಮ ಹಾಗೆ ಪಿತೃಭಕ್ತಿ- ಕರ್ತವ್ಯನಿಷ್ಠೆ- ಸಾಹಸಪ್ರವೃತ್ತಿ ಬಹಳ ವಿರಳ- ಕಿರಾತನದೇನೂ ದೋಷವಿಲ್ಲ. ರೂಪ ಮತ್ತು ಗುಣ ನಿಮ್ಮಲ್ಲಿರುವುದರಿಂದ ಎಲ್ಲ ಪುರುಷರೂ ನಿಮ್ಮಿಂದ ಆಕರ್ಷಿತರಾಗಿದ್ದಾರೆ. ಎಂದು ಹೇಳಿ ಸ್ವಲ್ಪ ನಕ್ಕನು.
ರಟ್ಟಾ ನಾಚಿಕೆಯಿಂದ ತಲೆ ತಗ್ಗಿಸಿದಳು. ಆಗ ಸ್ಕಂದಗುಪ್ತನು ‘ನಾನು ನಿಮ್ಮ ತಂದೆಯನ್ನು ಕಾಪಾಡುತ್ತೇನೆ. ಇದರಲ್ಲಿ ನನ್ನದೂ ಒಂದು ಸ್ವಾರ್ಥವಿದೆ’ ಎಂದು ಹೇಳಿ, ಲಹರಿಯ ಕಡೆ ತಿರುಗಿ ‘ಲಹರಿ, ಗುಲಿಕವರ್ಮಾನನ್ನು ಕೂಗಿ, ಕರೆದುಕೊಂಡು ಬಾ’ ಎಂದನು.
ಲಹರಿಯು ಇಲ್ಲಿಯವರೆಗೂ ಆಸಕ್ತಿಯಿಂದ ಇವರ ಮಾತುಕತೆಯನ್ನು ಕೇಳುತ್ತ ಸ್ಕಂದಗುಪ್ತನ ಮುಖಭಾವವನ್ನು ನಿರೀಕ್ಷಿಸುತ್ತಿದ್ದಳು. ಆಕೆಯು ಚಾಮರವನ್ನು ಒಂದು ಕಡೆ ಇಟ್ಟು, ಬೇಗ ಹೊರಗೆ ಹೋದಳು.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)