ಹಿಂದಿನ ಸಂಚಿಕೆಯಿಂದ…..
ಗುಲಿಕ ವರ್ಮಾ ಒಬ್ಬ ಕನಿಷ್ಠ ಸೇನಾ ನಾಯಕ ಹಾಗೂ ಸ್ಕಂದಗುಪ್ತನ ಪಾರ್ಶ್ವಚರ. ಒಳ್ಳೆಯ ಬಲಶಾಲಿ, ವಿಶಾಲವಾದ ವಕ್ಷಸ್ಥಳ ಬಲಿಷ್ಠವಾದ ಭುಜಗಳು. ಧೂಮಕೇತುವಿನಂಥ ಮೀಸೆ. ಅವನು ಬಂದು ನಮಸ್ಕರಿಸಿ ನಿಂತ ಮೇಲೆ
ಸ್ಕಂದಗುಪ್ತನು ‘ಗುಲಿಕ, ಚಷ್ಟನ ದುರ್ಗ ಎಲ್ಲಿದೆ? ಗೊತ್ತಿದೆಯೇ?’ ಎಂದು ಕೇಳಿದನು.
ಗುಲಿಕ ವರ್ಮಾ- ಗೊತ್ತು ಆಯುಷ್ಮನ್. ಅದು ವಿಟಂಕ ರಾಜ್ಯದ ಉತ್ತರ ಸೀಮಾಂತದಲ್ಲಿದೆ. ಇಲ್ಲಿಂದ ಸುಮಾರು ಇಪ್ಪತ್ತು ಹರಿದಾರಿ ದೂರದಲ್ಲಿ, ಈಶಾನ್ಯ ದಿಕ್ಕಿನಲ್ಲಿದೆ.
ಸ್ಕಂದಗುಪ್ತ- ಕೇಳು. ಚಷ್ಟನ ದುರ್ಗದ ದುರ್ಗಾಧಿಪ ಕಿರಾತನು ವಿಟಂಕದ ರಾಜನನ್ನು ಮೋಸದಿಂದ ತನ್ನ ರಾಜ್ಯಕ್ಕೆ ಕರೆಸಿಕೊಂಡು ಬಂಧನದಲ್ಲಿಟ್ಟಿದ್ದಾನೆ. ನೀನು ಒಂದು ನೂರು ಜನ ಅಶ್ವಾರೋಹಿ ಸೈನಿಕರನ್ನು ಕರೆದುಕೊಂಡು
ನಾಳೆ ಮುಂಜಾನೆ ಪ್ರಯಾಣ ಹೊರಡು. ವಿಟಂಕ ರಾಜ್ಯದ ಈ ಸೇನಾನಿ ಚಿತ್ರಕ ವರ್ಮಾ ನಿನ್ನ ಜೊತೆ ಬರುತ್ತಾರೆ. ನೀನು ದುರ್ಗಾಧಿಪನಾದ ಕಿರಾತನಿಗೆ ‘ಈ ಕೂಡಲೇ ವಿಟಂಕ ರಾಜನನ್ನು ನಿನ್ನ ವಶಕ್ಕೆ ಒಪ್ಪಿಸುವಂತೆ’ ನಾನು ಹೇಳಿದ ಹಾಗೆ ತಿಳಿಸು. ಅನಂತರ ರಾಜನನ್ನು ಕರೆದುಕೊಂಡು ನೀನು ತಡಮಾಡದೆ ಹಿಂದಿರುಗಿ ಬರುವುದು.
ಗುಲಿಕ- ತಮ್ಮ ಅಪ್ಪಣೆಯಂತೆ. ಒಂದು ವೇಳೆ ಕಿರಾತನು ರಾಜನನ್ನು ಒಪ್ಪಿಸಲು ಸಮ್ಮತಿಸದಿದ್ದರೆ?
ಸ್ಕಂದಗುಪ್ತ- ಅವನಿಗೆ ಹೇಳು- ಆಜ್ಞೆಯನ್ನು ಪಾಲಿಸದಿದ್ದರೆ ಸಾವಿರ ಯುದ್ಧದ ಆನೆಗಳನ್ನು ತೆಗೆದುಕೊಂಡು ನಾನೇ ಸ್ವತಃ ಬಂದು, ಅವನ ದುರ್ಗವನ್ನು ಧೂಳೀಪಟ ಮಾಡುತ್ತೇನೆ. ‘ಅಪ್ಪಣೆ ಪ್ರಭು. ಒಂದು ವೇಳೆ ಅವನು ಅದಕ್ಕೂ ಹೆದರದಿದ್ದರೆ?’
‘ಆಗ ನನ್ನ ಬಳಿಗೆ ದೂತರನ್ನು ಕಳುಹಿಸು… ಈ ಚಿತ್ರಕ ವರ್ಮಾನನ್ನು ನಿನ್ನ ಶಿಬಿರಕ್ಕೆ ಕರೆದುಕೊಂಡು ಹೋಗು. ಉಚಿತವಾದ ರೀತಿಯಲ್ಲಿ ಅತಿಥಿ ಸತ್ಕಾರ ಮಾಡು’.
ಚಿತ್ರಕನಿಗೆ ಸ್ವಲ್ಪ ಬೇಸರವಾಯಿತು. ಆದರೆ ಚಕ್ರವರ್ತಿಯ ಆಜ್ಞೆ- ಮೀರುವಂತಿಲ್ಲ. ಅವನು ರಟ್ಟಾಳ ಕಡೆ ಒಂದು ಸಲ ಹಿಂದಿನಿಂದ ನೋಡಿ, ಗುಲಿಕ ವರ್ಮನ ಜೊತೆಯಲ್ಲಿ ಹೊರಟು ಹೋದನು. ಚಿತ್ರಕ ಹೊರಟುಹೋದುದನ್ನು ನೋಡಿ ರಟ್ಟಾಳ ಮನಸ್ಸಿಗೆ ಸ್ವಲ್ಪ ಸಂಶಯ ಉಂಟಾಯಿತು. ಆದರೆ ಅದನ್ನು ತೋರಗೊಡದೆ ಸ್ವಲ್ಪ ನಗುವ ಪ್ರಯತ್ನ ಮಾಡಿ ‘ಮತ್ತೆ ನಾನು? ನಾನು ಚಷ್ಟನ ದುರ್ಗಕ್ಕೆ ಹೋಗುವ ಹಾಗಿಲ್ಲವೆ?’ ಎಂದು ಹೇಳಿದಳು.
ಸ್ಕಂದಗುಪ್ತನು ತಲೆ ಅಲ್ಲಾಡಿಸಿ ‘ಇಲ್ಲ. ನೀವು ನಮ್ಮ ಶಿಬಿರದಲ್ಲಿಯೇ ಇರುತ್ತೀರಿ. ನೀವು ರಾಜಕನ್ಯೆ ಅನೇಕ ಕಷ್ಟಗಳನ್ನು ಎದುರಿಸಿ ನಮ್ಮ ಬಳಿಗೆ ಬಂದಿದ್ದೀರಿ. ಮತ್ತೆ ನಿಮ್ಮನ್ನು ಕಷ್ಟಕ್ಕೆ ಈಡು ಮಾಡುವುದು ನನಗೆ ಇಷ್ಟವಿಲ್ಲ’ ಎಂದನು.
ರಟ್ಟಾ- ದೇವ, ತಮಗೆ ನನ್ನ ಮೇಲೆ ಅಪಾರ ಕರುಣೆ, ಆದರೆ-
ಸ್ಕಂದಗುಪ್ತ- ರಟ್ಟಾ ಯಶೋಧರಾ, ಭಯಪಡಬೇಡಿ. ನೀವು ನಿಮ್ಮ ತಂದೆಯ ಮನೆಯಲ್ಲಿ ಎಷ್ಟು ಸುರಕ್ಷಿತವಾಗಿರಬಲ್ಲಿರೋ ಅದಕ್ಕಿಂತ ಹೆಚ್ಚು ಸುರಕ್ಷಿತವಾಗಿ ನಮ್ಮ ಶಿಬಿರದಲ್ಲಿ ಇರುತ್ತೀರಿ. ಲಹರಿ, ರಾಜಕನ್ಯೆಯನ್ನು ಕೆರದುಕೊಂಡು ಹೋಗು. ಇವರು
ಪ್ರಯಾಣದಿಂದ ಬಳಲಿದ್ದಾರೆ. ನಿನ್ನ ಮೇಲೆ ಈ ಗೌರವಾನ್ವಿತ ಅತಿಥಿಯ ಸೇವೆಯ ಭಾರವನ್ನು ಹೋರಿಸಿದ್ದೇನೆ.’ ಇದಾದನಂತರ ರಟ್ಟಾಳ ಬಾಯಿಂದ ತೊಂದರೆಯ ಯಾವ ಮಾತೂ ಹೊರ ಬರಲಿಲ್ಲ. ಲಹರಿಯು ಆಕೆಯ ಬಳಿ ಬಂದು ಪ್ರೀತಿಯಿಂದ ‘ಬನ್ನಿರಿ,
ಕುಮಾರ ಭಟ್ಟಾರಿಕಾ’ ಎಂದು ಕರೆದಳು.
ಲಹರಿಯು ರಟ್ಟಾಳನ್ನು ಕರೆದುಕೊಂಡು ಹೋದ ಮೇಲೆ, ಪಿಪ್ಪಲೀಮಿಶ್ರನು ಅಂಬೆಗಾಲಿಟ್ಟುಕೊಂಡು ರಾಜನ ಬಳಿ ಬಂದು ಕುಳಿತು, ಆತನ ಕಿವಿಯಲ್ಲಿ ‘ವಯಸ್ಯ ಹೇಗೆ ಕಾಣಿಸಿದಳು?’ ಎಂದನು.
ಸ್ಕಂದಗುಪ್ತ ಮೃದುವಾಗಿ ನಕ್ಕು ‘ಅಪೂರ್ವ’ ಎಂದನು. ಪಿಪ್ಪಲಿ ಮಿಶ್ರ ಹಾಗಾದರೆ ಇನ್ನು ತಡ ಮಾಡುವುದು ಬೇಡ. ನೀನು ಗೃಹಸ್ಥ ಧರ್ಮವನ್ನು ಸ್ವೀಕರಿಸಬೇಕೆಂದಿದ್ದರೆ, ಇದೆ ಸುಸಮಯ. ‘ಗೃಹಿಣೀ ಸಚಿವಃ ಸಖೀ’ ಇಂಥವಳನ್ನು ಮತ್ತೆ ನೀನು ಪಡೆಯಲಾರೆ. ಸ್ಕಂದಗುಪ್ತನು ಮುಗುಳು ನಗೆ ನಗುತ್ತ ಮೌನವಾಗಿದ್ದನು.
ಮುಂದುವರೆಯುವುದು…..
ಎನ್. ಶಿವರಾಮಯ್ಯ (ನೇನಂಶಿ)