–ಮದಿರಾ ಭವನ–
ಅರಮನೆಯಿಂದ ಹೊರಬಿದ್ದು ತೋರಣದ ಬಾಗಿಲ ಬಳಿ ಬಂದ ಸುಗೋಪಾ ನೋಡುತ್ತಾಳೆ ಬಾಗಿಲು ಮುಚ್ಚಿದೆ. ಅದು ದಿನ ನಿತ್ಯದ ವ್ಯಾಪಾರ ಇದರಿಂದ ಸುಗೋಪಾಳಿಗೆ ಏನೂ ತೊಂದರೆಯಿಲ್ಲ. ಅವಳು ಪ್ರತೀಹಾರಿಗೆ ಬಾಗಿಲು ತೆರೆಯುವಂತೆ ಹೇಳಿದಳು.
ಏಕೋ ಏನೋ ಪ್ರತೀಹಾರಿಗೆ ಸ್ವಲ್ಪ ತಮಾಷೆ ಮಾಡಬೇಕೆಂದು ಅನ್ನಿಸಿತು. ಅವನು ಎರಡು ಭಾಗವಾಗಿ ಕವಲೊಡೆದಿದ್ದ ಗಡ್ಡವನ್ನು ನೀವಿಕೊಳ್ಳುತ್ತ ಶೃಂಗಾರಚೇಷ್ಟೆ ಮಾಡಲು ಪ್ರಾರಂಭಿಸಿದನು. ಅದೇ ರೀತಿ ಸುಗೋಪಾ ಕೂಡ ಉತ್ತರ ಕೊಡುತ್ತಿದ್ದಳು. ಆಗಿನ ಕಾಲದಲ್ಲಿ ಶೃಂಗಾರ ರಸವು ಗೋರಕ್ತ, ಬ್ರಾಹ್ಮಣ ರಕ್ತದ ಹಾಗೆ ಅಪವಿತ್ರವೆಂದು ಪರಿಗಣಿಸಲಾಗುತ್ತಿರಲಿಲ್ಲ.

ತೋರಣದ ಬೃಹದ್ ಗಾತ್ರದ ಬಾಗಿಲಿನಲ್ಲಿ ಚತುಷ್ಕೋಣಾಕೃತಿಯ ಒಂದು
ಚಿಕ್ಕ ಬಾಗಿಲಿತ್ತು. ಅದು ಹೊರಗಿನಿಂದ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.
ಸುಗೋಪಾಳ ಗದರಿಕೆಯಿಂದ ಆ ಬಾಗಿಲನ್ನು ತೆರೆದ ಪ್ರತೀಹಾರಿಯು
‘ಅಮ್ಮ, ದೇವದುಹಿತೆಯ ಕುದುರೆಯು ಲಾಯಕ್ಕೆ ಹಿಂದಿರುಗಿ ಬಂದಿದೆ’
ಎಂದು ಹೇಳಿದನು.
‘ಅದು ಹೇಗೆ! ಮತ್ತೆ ಕಳ್ಳ’ ಎಂದು ವಿಸ್ಮಯದಿಂದ ಸುಗೋಪಾ ಕೇಳಿದಳು.
‘ಇಲ್ಲಾ ತಾಯಿ, ಕಳ್ಳ ಹಿಂದಿರುಗಿ ಬಂದಿಲ್ಲ’ ಎಂದು ತಲೆಯಾಡಿಸುತ್ತ
ಹೇಳಿದನು.
‘ನಿನಗೆ ಬರಬಾರದ್ದು ಬರ…. ದೇವದುಹಿತೆಗೆ ಸುದ್ದಿ ಕಳುಹಿಸಿದ್ದೀಯೇನು?’
‘ಯವನಿಯರ ಮೂಲಕ ದೇವದುಹಿತೆಗೆ ಸುದ್ದಿ ಹೋಗಿದೆ. ಇದುವರೆಗೆ ಆಕೆಗೆ ಸುದ್ದಿ ಮುಟ್ಟಿರಬಹುದು.’
ಸುಗೋಪಾ ಕ್ಷಣಕಾಲ ಚಿಂತಿಸಿ, ಮನಸ್ಸಿಗೆ ಸಮಾಧಾನವಾದ ಮೇಲೆ ಆ ಸಣ್ಣ ಬಾಗಿಲ ಮೂಲಕ ಹೊರ ಹೋಗಲು ಪ್ರಾರಂಭಿಸಿದಳು.
ಪ್ರತೀಹಾರಿಯು ಕುತೂಹಲದಿಂದ ‘ಈ ಸರಿ ರಾತ್ರಿಯಲ್ಲಿ ಕಳ್ಳನನ್ನು ಹುಡುಕುವುದಕ್ಕಾಗಿ
ಹೊರಟೆಯೇನು?’ ಎಂದು ಕೇಳಿದನು.
‘ಹೌದು’
ಪ್ರತೀ ಹಾರಿಯು ನಿಟ್ಟುಸಿರು ಬಿಟ್ಟು ‘ಕಳ್ಳ, ಒಳ್ಳೆಯ ಭಾಗ್ಯಶಾಲಿ. ಅವನು ಸಿಕ್ಕಿದರೆ ನಮ್ಮ ಬಳಿಗೆ ಕಳುಹಿಸಿಕೊಡು’ ಎಂದನು.
‘ಹಾಗೆಯೇ ಮಾಡುತ್ತೇನೆ. ಕಳ್ಳನ ಜೊತೆಯಲ್ಲಿ ರಾತ್ರಿ ಕಳೆದರೆ ನಿನ್ನ ಶೃಂಗಾರ ರಸ ಸ್ವಲ್ಪ ಕಡಿಮೆಯಾದರೂ ಆಗುತ್ತದೆ’ ಎಂದು ಹೇಳಿ ಬಾಗಿಲನ್ನು ದಾಟಿ ಹೊರ ಬಿದ್ದಳು.
ಪ್ರತೀಹಾರಿ ಅಷ್ಟಕ್ಕೇ ಬಿಡುವ ಆಸಾಮಿಯಲ್ಲ. ಅವನು ಅವಳಿಗೆ ಉತ್ತರ ಕೊಡಲು ಬಾಗಿಲಿಗೇ ಮುಖ ಚಾಚಿದನು. ಆದರೆ ಸುಗೋಪಾ ಅವನ ಮುಖದ ಮೇಲೆಯೇ ಬಾಗಿಲನ್ನು ನೂಕಿ, ಮುಚ್ಚಿ ಬಿಟ್ಟು ನಗುನಗುತ್ತ ನಗರದ ಕಡೆಗೆ ಹೊರಡಲು ಪ್ರಾರಂಭಿಸಿದಳು.
ಸುಗೋಪಾ ಮದಿರಾ ಗೃಹಗಳಲ್ಲಿ ತನ್ನ ಗಂಡನನನ್ನು ಹುಡುಕುತ್ತ ಅಡ್ಡಾಡುವಷ್ಟರಲ್ಲಿ, ಈ ಕಡೆ ನಾವು ಚಿತ್ರಕನ ಬಳಿಗೆ ಹೋಗೋಣ.
ಕಪೋತಕೂಟಕ್ಕೆ ಕಾಲಿಟ್ಟ ಚಿತ್ರಕನು ಕುತೂಹಲದಿಂದ ನಾಲ್ಕೂ ದಿಕ್ಕುಗಳನ್ನು ನೋಡುತ್ತ ನಡೆದಾಡಿದನು. ನಗರದ ಸೌಂದರ್ಯವನ್ನು ನೋಡಬೇಕೆಂಬ ಆಸೆಯೇನೂ ಅವನಲ್ಲಿರಲಿಲ್ಲ. ಅವನು ಹಿಂದಿನ ದಿನ ಹಾಗೂ ರಾತ್ರಿ ಏನೂ ತಿಂದಿರಲಿಲ್ಲ. ಮೊದಲು ಹೊಟ್ಟೆಗೆ ಏನಾದರೂ
ಹಾಕಿಕೊಳ್ಳಬೇಕೆಂದು ಹಾತೊರೆಯುತ್ತಿದ್ದನು. ಹೊಟ್ಟೆಗೆ ಬಟ್ಟೆ ಬಿಗಿದು ದೀರ್ಘಕಾಲದವರೆಗೆ ಹಸಿವನ್ನು ತಡೆಯಲು ಸಾಧ್ಯವಿಲ್ಲ. ಕಷ್ಟ ಅನುಭವಿಸಬಹುದು. ಆದರೆ ಹಸಿವಿನ ವಿಷಯ ಹಾಗಲ್ಲ. ಜೂಜಿನಲ್ಲಿ ಗೆದ್ದ ಮೇಲಂತೂ ಈಗ ಹಸಿವನ್ನು ತಡೆಯುವುದು ಅವನಿಂದ ಸಾಧ್ಯವಾಗುತ್ತಿಲ್ಲ.
ಪೇಟೆ ಬೀದಿಯಲ್ಲಿ ಹೋಗುತ್ತಿರುವಾಗ ಬಂದು ಮಿಠಾಯಿ ಅಂಗಡಿ ಕಣ್ಣಿಗೆ ಬಿದ್ದಿತು. ವಿವಿಧ ಬಗೆಯ ಭಕ್ಷ್ಯಬೋಜ್ಯಗಳು ಓರಣವಾಗಿ ಜೋಡಿಸಲಾಗಿತ್ತು. ಉಂಡೆ, ಕಡುಬು- ಹಾಲು ಯಾವುದಕ್ಕೂ ಕೊರತೆ ಇರಲಿಲ್ಲ. ಬೊಜ್ಜು ಹೊಟ್ಟೆಯ ಅಂಗಡಿಯವನು ಉದ್ದನೆಯ ಖರ್ಜೂರದ ಗರಿಯೊಂದನ್ನು ಬೀಸುತ್ತ ನೊಣಗಳನ್ನು ಓಡಿಸುತ್ತಿದ್ದನು.

ಅಂಗಡಿಯಲ್ಲಿ ಕುಳಿತು ಚಿತ್ರಕನು ಹೊಟ್ಟೆ ತುಂಬುವಷ್ಟು ಭಕ್ಷ್ಯಭೊಜ್ಯಗಳನ್ನು ತಿಂದು ತೇಗಿದನು. ಒಬ್ಬ ಹುಡುಗನು ಬೀದಿಯಲ್ಲಿ ನಿಂತು ಆಸೆಗಣ್ಣಿನಿಂದ ಸಿಹಿ ತಿಂಡಿಗಳನ್ನು ನೋಡುತ್ತಿದ್ದನು. ಚಿತ್ರಕನು ಅವನನ್ನು ಕರೆದು ಅವನಿಗೆ ಒಂದೆರಡು ಲಡ್ಡುಗಳನ್ನು ಕೊಟ್ಟನು. ಬಾಲಕನು ಸಂತೋಷದಿಂದ ಅದನ್ನು ತಿಂದು ಹೊರಟು ಹೋದ ಮೇಲೆ ಚಿತ್ರಕನು ನೀರು ಕುಡಿದು ಮೇಲೆದ್ದನು. ಶಶಿಶೇಖರನ ಚೀಲದಿಂದ ಒಂದು ಚಿಕ್ಕನಾಣ್ಯವನ್ನು ತೆಗೆದು ವ್ಯಾಪಾರಿಗೆ ಕೊಟ್ಟು, ನಿಧಾನವಾಗಿ ಹೆಜ್ಜೆ ಹಾಕುತ್ತ ಬೀದಿಗೆ ಹೋಗಿ ಅಲ್ಲಿ ಕ್ಷಣ ಕಾಲ ನಿಂತನು.
ಮನೆ ಬಾಗಿಲುಗಳಲ್ಲಿ ಒಂದೆರಡು ಹಣತೆಗಳು ಕಾಣ ಬಂದುವು. ಗೃಹಸ್ಥರ ಮನೆಯೊಳಗಿಂದ ಧೂಪ ಕಾಲಾಗರುವಿನ ಸುವಾಸನೆ ಬರುತ್ತಿತ್ತು. ದೀಪ ಹಿಡಿದಿರುವ ಹೆಂಗಸರು ತಮ್ಮ ಕುಲದೇವತೆಗೆ ಪೂಜೆ ಸಲ್ಲಿಸಿ ಕೈಮುಗಿಯುತ್ತಿದ್ದರು. ಕೆಲವು ದೇವಾಲಯಗಳಲ್ಲಿ ಆರತಿ ಬೆಳಗಿದ ಕುರುಹಾಗಿ ಶಂಖ ಗಂಟೆಗಳು ಮೊಳಗುತ್ತಿದ್ದುವು. ಸಂಧ್ಯಾ ಕಾಲದ ವೈರಾಗ್ಯ ಮುಹೂರ್ತದಲ್ಲಿ ನಗರವು ಕ್ಷಣಕಾಲ ವೈರಾಗ್ಯ ಮೂರ್ತಿಯಂತೆ ಕಂಗೊಳಿಸುತ್ತಿತ್ತು.
ಅಪರಿಚಿತವಾದ ನಗರದ ಬೀದಿ ಗಲ್ಲಿಗಳಲ್ಲಿ ಚಿತ್ರಕನು ಅನಾಯಾಸವಾಗಿ ಚಿತ್ರಕನು ಅಡ್ಡಾಡುತ್ತಿದ್ದನು. ಮಾಡಲು ಕೈಯಲ್ಲಿ ಕೆಲಸವಿಲ್ಲ. ಹೊಟ್ಟೆ ತುಂಬಿದೆ, ನಿರಾಳವಾದ ಮನಸ್ಸು. ರಾಜಪುರುಷರ ಕುದುರೆಯನ್ನು ಕಳವು ಮಾಡಿದ ವ್ಯಕ್ತಿಯನ್ನು ಮೂವರು ಮಾತ್ರ ನೋಡಿದ್ದರು. ಅವರು ಈ ಜನಾಕೀರ್ಣವಾದ ಊರಿನಲ್ಲಿ ಕಂಡು ಬರುವ ಸಾಧ್ಯತೆ ಕಡಿಮೆ. ಒಂದು ವೇಳೆ ನೋಡಿದರೂ ಈ ಹೊಸ ವೇಷದಲ್ಲಿ ಗುರುತಿಸಲಾರರು. ಆದ್ದರಿಂದ ಊರಿನೊಳಗೆಲ್ಲಾ ಸುತ್ತಾಡಿದರೂ ಬಾಧಕವೇನೂ ಇರಲಾರದು.
ಮುಂದುವರೆಯುವುದು…

ಎನ್. ಶಿವರಾಮಯ್ಯ (ನೇನಂಶಿ)
ಚಿತ್ರಸಂಗ್ರಹಣೆ : ಮಂಜುಳಾ ಸುದೀಪ್