ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 47

ಪರಿಚ್ಛೇದ – 16
ರಮಣಿಯ ಮನಸ್ಸು

ಸೈನ್ಯ ಶಿಬಿರ ಇನ್ನೂ ಎಚ್ಚರಗೊಂಡಿಲ್ಲ. ಪೂರ್ವ ದಿಕ್ಕಿನ ಪರ್ವತವು ರೇಖಾಕಾರವಾಗಿ ಕಾಣಿಸುತ್ತಿತ್ತು. ಚಿತ್ರಕ ಹಾಗೂ ಗುಲಿಕವರ್ಮ ನೂರುಜನ ಸಶಸ್ತ್ರ ಅಶ್ವಾರೋಹಿಗಳೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ನಾಲ್ಕು ದಿಕ್ಕುಗಳ ನಿಸ್ತಬ್ಧತೆಯ ನಡುವೆ ಕುದೆರೆಗಳ ಖುರಪುಟ ಧ್ವನಿ ಹಾಗೂ ಅಸ್ತ್ರಗಳ ಝಣತ್ಕಾರ ಕ್ಷೀಣವಾಗಿ ಕೇಳಿಸುತ್ತಿದೆ.

ಸ್ಕಂದಗುಪ್ತನು ಇಳಿದುಕೊಂಡಿದ್ದ ಈ ತಪ್ಪಲಿನ ಕಡೆಯಿಂದ ಹೊರ ಹೋಗುವ ಉತ್ತರ ದಿಕ್ಕಿನ ದಾರಿ. ಅದು ಎರಡು ಗಿರಿಶ್ರೇಣಿಗಳ ನಡುವೆ ಕಾಲುವೆ ಆಕಾರದ ಇಕ್ಕಾಟದ ಕಡಿದಾದ ದಾರಿ. ಎರಡು ಹರಿದಾರಿ. ದೂರದ ಈ ಇಕ್ಕಟ್ಟಾದ ದಾರಿಯುದ್ದಕ್ಕೂ ಎರಡು ಸಾವಿರ ಕಾವಲಿನವರು ದಾರಿಯ ರಕ್ಷಣೆ ಮಾಡುತ್ತಿದ್ದಾರೆ. ಹಿಂದಿನಿಂದ ಶತ್ರುಗಳು ಶಿಬಿರದ ಮೇಲೆ ಆಕ್ರಮಣ ಮಾಡಿಯಾರೆಂದು ಹಗಲು ರಾತ್ರಿ ಪಹರೆಯ ವ್ಯವಸ್ಥೆ ಮಾಡಲಾಗಿತ್ತು. ಗುಲಿಕವರ್ಮ ಹಾಗೂ ಚಿತ್ರಕ ಈ ಇಕ್ಕಟಾದ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದರು. ಪಹರೆಯವರಿಗೆ ಸುದ್ದಿ ತಿಳಿದಿತ್ತು. ಆದುದರಿಂದ ಅವರು ನಿಶ್ಶಬ್ಧವಾಗಿ ಅವರು ಮುಂದೆ ಹೋಗಲು ಅವಕಾಶ ಮಾಡಿಕೊಟ್ಟರು. ಬರುಬರುತ್ತಾ ಸೂರ್ಯೋದಯವಾಯಿತು. ಬಿಸಿಲು ಹೆಚ್ಚುತ್ತಾ ಬಂದಿತು. ಕೆಲವು ಕಡೆ ಕಡಿದಾಗಿ ಕೆಲವು ಕಡೆ ನೇರವಾಗಿ ದಾರಿ ಮುಂದೆ ಸಾಗುತ್ತಿತ್ತು. ಕೆಲವು ಕಡೆ ತಿರುವುಗಳಿಂದ ಕೂಡಿ ಮುಂದುವರಿದು ಬೇರೊಂದು ತಪ್ಪಲಿಗೆ ಈ ದಾರಿ ಹೋಗಿ ಸೇರುತ್ತಿತ್ತು, ಅಲ್ಲಲ್ಲಿ ಸ್ಕಂದಗುಪ್ತನ ಗುಪ್ತಚರರು ವೇಷ ಮರೆಸಿಕೊಂಡು ಇರುತ್ತಿದ್ದರು. ಅವರುಗಳಿಂದ ಸರಿಯಾದ ದಾರಿ ತಿಳಿದುಕೊಂಡು ಗುಲಿಕವರ್ಮಾ ಅವರ ದಳ ಮುಂದುವರೆಯಿತು.

ಗುಲಿಕವರ್ಮಾ ಹಾಗೂ ಚಿತ್ರಕರ ಕುದುರೆಗಳು ಮುಂದೆ ಮುಂದೆ ಹೋಗುತ್ತಿದ್ದರೆ, ಅವರ ಹಿಂದೆ ನೂರು ಅಶ್ವಾರೋಹಿ ಸೈನಿಕರು, ಗುಲಿಕವರ್ಮಾ ಸ್ವಭಾವತಃ ಬಹಳ ಮಾತನಾಡುವವನು ಒಂದು ರಾತ್ರಿಯ ಪರಿಚಯದಲ್ಲಿ ಚಿತ್ರಕನ ಬಗ್ಗೆ ಒಳ್ಳೆಯ ಭಾವನೆ ಬೆಳೆದಿತ್ತು. ಇಬ್ಬರೂ ಸಮಾನ ಅಧಿಕಾರಿಗಳು ಹಾಗೂ ಸಮವಯಸ್ಕರು ಯುದ್ಧಜೀವಿಗಳು. ಗುಲಿಕ ನಾನಾ ವಿಧವಾಗಿ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾ ಹೋಗುತ್ತಿದ್ದನು. ಯಾವ ರಾಜ್ಯದ ಸೈನಿಕರು ಹೇಗೆ ಯುದ್ಧ ಮಾಡುತ್ತಾರೆ. ಯಾವ ದೇಶದ ಯುವತಿಯ ಪ್ರಣಯ ರೀತಿಗಳು ಹೇಗಿರುತ್ತವೆ. ಹೀಗೆ ತನ್ನ ಅನುಭವದ ಹತ್ತಾರು ಕತೆಗಳನ್ನು ಹೇಳುತ್ತಾ ಧೋಮಕೇತುವಿನಂತಿದ್ದ ಮೀಸೆಯನ್ನು ಹುರಿ ಮಾಡುತ್ತ, ಗಟ್ಟಿಯಾಗಿ ಅಟ್ಟಹಾಸದ ನಗು ನಗುತ್ತ ಹೋಗುತ್ತಿದ್ದನು. ಗುಲಿಕನ ಮನಸ್ಸಿನಲ್ಲಿ ಯುದ್ಧ ಹಾಗೂ ಯುವತಿಯರನ್ನು ಬಿಟ್ಟರೆ ಬೇರೆ ಯಾವುದಕ್ಕೂ ಸ್ಥಾನವಿಲ್ಲ.

ಚಿತ್ರಕ ಗುಲಿಕನ ಕಥೆಯನ್ನು ಕೇಳುತ್ತಿದ್ದನು. ಅವನ ಜೊತೆಯಲ್ಲಿ ತಾನೂ ಧ್ವನಿಗೂಡಿಸಿ ನಗುತ್ತಿದ್ದನು. ಕೆಲವೊಮ್ಮೆ ತಾನೂ ಒಂದೆರಡು ಸರಸ ಕಥೆಗಳನ್ನು ಹೇಳುತ್ತಿದ್ದನು. ಆದರೆ ಅವನ ಹೃದಯಾಳದಲ್ಲಿ ಒಂದು ಭಾವನೆ ಜೇಡರ ಹುಳುವಿನಂತೆ ಬಲೆ ನೇಯುತ್ತಿತು. ರಟ್ಟಾ… ಅವಳು ಇನ್ನು ತನ್ನವಳಾಗುವುದಿಲ್ಲವೆಂದು ಮನಸ್ಸು ಹೇಳುತ್ತಿತು. ಮಿಂಚಿನ ಬಳ್ಳಿಯ ಹಾಗೆ ಇದ್ದಕ್ಕಿದ್ದಂತೆ ಅವನ ಮನಸ್ಸಿನೊಳಗೆ ಹೊಳೆದು ಅದೇ ರೀತಿ ಮಾಯಾವಾದಳು. ಅವನ ಒಳ ಜಗತ್ತನ್ನು ಮತ್ತೆ ಕತ್ತಲಲ್ಲಿ ಮುಳಗಿಸಿದಳು. ನಿನ್ನೆ ರಾತ್ರಿ ಅವಳು ಇದರಿಂದ ಒಳ್ಳೆಯದೆ ಆಗುವುದು ಎಂದು ಹೇಳಿದ್ದಳು. ಸ್ಕಂದಗುಪ್ತರು ರಟ್ಟಾಳಲ್ಲಿ ಅನುರಕ್ತರಾಗಿದ್ದಾರೆ. ಇದರಿಂದ ಒಳ್ಳೆಯದೆ ಆಗುವುದು ಯಾರಿಗೆ ಒಳ್ಳೆಯದಾಗುತ್ತದೆಯೋ?

ಆದರೆ ಇದರಲ್ಲಿ ರಟ್ಟಾಳದೇನೂ ದೋಷವಿಲ್ಲ. ನವ ಯೌವನದ ಸ್ವಭಾವಕ್ಕೆ ಅನುಗುಣವಾಗಿ ಅವಳು ಚಿತ್ರಕನ ಕಡೆಗೆ ಆಕರ್ಷಿತಳಾಗಿದ್ದಳು. ಎರಡು ದಿನಗಳ ಸತತ ಸಹಚರ್ಯವು ಪ್ರೀತಿಯನ್ನು ಹುಟ್ಟಿಸಿತ್ತು. ರಾತ್ರಿ ಗುಹೆಯ ಅಂಧಕಾರದಲ್ಲಿ ಭಯಗ್ರಸ್ತಳಾದ ಅವಳು ಅಡಿದ ಮಾತುಗಳು ನಡೆದುಕೊಂಡ ರೀತಿ ಇವುಗಳ ಬಗ್ಗೆ ಹೆಚ್ಚು ಮಹತ್ವ ನೀಡಬಾರದು. ಕ್ಷಣಿಕ ಆವೇಗ ವಿಹ್ವಲತೆಯನ್ನು ಸ್ಥಿರವಾದ ಮನೋಭಾವವೆಂದು ನಿರ್ಧಾರಕ್ಕೆ ಬರುವುದು ಅನ್ಯಾಯವೆನಿಸುವುದು. ರಮಣಿಯರ ಮನಸ್ಸು ಕೋಮಲ ಹಾಗೂ ತರಳವಾದುದು- ಸ್ವಲ್ಪ ಬಿಸಿ ತಾಕಿದರೂ ಬಾಡಿ ಹೋಗುತ್ತದೆ; ಕಮರಿಹೋಗುತ್ತದೆ.

ಇದೇ ಸಮಯಕ್ಕೆ ಸರಿಯಾಗಿ ಗುಲಿಕನ ಧ್ವನಿ ಕೇಳಿಸಿತು. ಗುಲಿಕ ಕೊನೆಯದಾಗಿ ಬಂದು ಮಾತು ಹೇಳಿದನು. ಗೆಳೆಯ ಚಿತ್ರಕವರ್ಮಾ, ನಾರಿಯಾದವಳು ಎಲ್ಲಿಯವರೆಗೆ ನಿನ್ನ ತೋಳಿನ ಮಧ್ಯೆ ಇರುವಳೊ ಅಲ್ಲಿಯವರೆಗೆ ಅವಳು ನಿನ್ನವಳು, ಬಾಹು ಬಂಧನದಿಂದ ಮುಕ್ತಳಾದ ಬಳಿಕ ಅವಳು ನಿನ್ನವಳಲ್ಲ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯ ಹೆಣ್ಣುಗಳನ್ನು ನೋಡಿದ್ದೇನೆ. ಎಲ್ಲರ ರೀತಿಯೂ ಒಂದೇ ಏನೂ ವ್ಯತ್ಯಾಸವಿಲ್ಲ’ ಎಂದು ಹೇಳಿದನು.

ಚಿತ್ರಕ- (ನಕ್ಕು) ನನ್ನದೂ ಕೂಡ ಅದೇ ಅನುಭವ.

ಗುಲಿಕ ಮತ್ತೆ ಹೊಸ ಕತೆ ಹೇಳಲು ಪ್ರಾರಂಭಸಿದನು.

ಇಲ್ಲ. ಚಿತ್ರಕನು ರಟ್ಟಾಳನ್ನು ತಪ್ಪಾಗಿ ಭಾವಿಸಿಲ್ಲ. ರಟ್ಟಾ ರಾಜಕನ್ಯೆ. ಸ್ಕಂದಗುಪ್ತರನ್ನು ನೋಡಿ ಅವರಲ್ಲಿ ಅನುರಕ್ತಳಾಗಿದ್ದರೆ ಇದರಲ್ಲಿ ಆಶ್ಚರ್ಯವೇನು? ಸ್ಕಂದಗುಪ್ತರಂಥ ಅನುರಾಗಕ್ಕೆ ಯೋಗ್ಯರಾದ ವ್ಯಕ್ತಿ ಆರ್ಯಾವರ್ತದಲ್ಲಿ ಬೇರೆ ಯಾರಿದ್ದಾರೆ…? ಇದರಿಂದ ಒಳ್ಳೆಯದೇ ಆಗುವುದು. ಮಣಿಕಾಂಚನ ಯೋಗ ಉಂಟಾಗುವುದು…

ನೀರು ತಗ್ಗಿಗೆ ಹರಿಯುತ್ತದೆ. ಬೆಂಕಿಯ ಕಿಡಿಗಳು ಮೇಲಕ್ಕೆ ಹಾರುತ್ತವೆ. ರಟ್ಟಾ ಬೆಂಕಿಯ ಕಿಡಿ. ಇಷ್ಟರೂಪ ಇಷ್ಟಗುಣ ಒಬ್ಬ ಸಾಧಾರಣ ವ್ಯಕ್ತಿಯ ಭೋಗಕ್ಕೆ ಸಾಧನವಾಗುವುದೆ?

ಆದರೆ!

ಚಿತ್ರಕನಿಗೆ ಏನು ಗತಿ? ಈ ಏಳು ದಿನಗಳ ಅವಧಿಯಲ್ಲಿ ಅವನ ಜೀವನ ಸಂಪೂರ್ಣವಾಗಿ ತಲೆಕೆಳಗಾಯಿತು. ಈಗ ಅವನು ಏಳು ದಿನಗಳ ಹಿಂದಿದ್ದ ಚಿತ್ರಕನಲ್ಲ. ಅವನು ರಾಜಪುತ್ರ. ಆದರೆ ತನ್ನದೆಂಬುವುದು ಏನೂ ಇಲ್ಲದ ಅಜ್ಞಾತ ರಾಜಪುತ್ರ. ಇಷ್ಟು ದಿನವೂ ತನ್ನನ್ನು ಸಾಮಾನ್ಯ ಸೈನಿಕನೆಂದು ತಿಳಿದುಕೊಂಡಿದ್ದ ಕಾರಣ ಅವನ ನಡೆವಳಿಕೆ ಬೇರೆ ರೀತಿಯದಾಗಿತ್ತು. ಆದರೆ ಇನ್ನು ಮುಂದೆಯೂ ಅವನು ಸಾಧಾರಣ ಸೈನಿಕನ ರೂಪದಲ್ಲಿಯೇ ಯುದ್ಧ ಮಾಡಬೇಕೆ? ಹಾಗಾದರೆ ಅವನ ಮುಂದಿನ ಗತಿಯೇನು? ಯಾವ ರೀತಿ ಅವನು ಜೀವನ ಕಳೆಯಬೇಕು? ಗೊತ್ತುಗುರಿ ಇಲ್ಲದ ನಿರಾಧಾರವಾದ ಜೀವನ….. ಆಶಾತೀತ ಆಕಾಂಕ್ಷೆಯ ವಸ್ತುವೊಂದು ಅನಾಹೂತವಾಗಿ ಅವನ ಹೃದಯದ ತೀರದಲ್ಲಿ ಬಂದು ನಿಂತಿತ್ತು. ಈಗ ಪ್ರಬಲವಾದ ಪ್ರವಾಹವೊಂದು ಬಂದು ಅದನ್ನು ಕೊಚ್ಚಿಕೊಂಡು ಹೋಗುತ್ತಿದೆ…

ಈಗ ಅವನು ಏನು ಮಾಡಬೇಕು? ಅವನ ಜೀವನದಲ್ಲಿ ಇನ್ನೂ ಏನಾದರೂ ಉಳಿದಿದೆಯೇ?

ಗುಲಿಕ ವರ್ಮನ ನಗು ಹಾಗೂ ಮೈನವಿರೇಳಿಸುವ ಅವನ ಕಂಠಧ್ವನಿ ಚಿತ್ರಕನ ಕಿವಿಗೆ ಬಿತ್ತು. ಗುಲಿಕ ವರ್ಮನು ‘ಮೂರು ವರ್ಷಗಳಾದ ಮೇಲೆ ಇದೇ ಶತ್ರುವನ್ನು ಮತ್ತೆ ಭೇಟಿಯಾಗುತ್ತಿದ್ದೇನೆ. ಗೆಳೆಯ, ಯೋಚಿಸಿ ನೋಡು, ಹಳೆಯ ಶತ್ರುವನ್ನು ಕತ್ತಿಯ ಮೊನೆಗೆ ಬಲಿ ಕೊಡಲು ಎದುರು ಬದರು ಭೇಟಿ ಯಾಗುವುದಕ್ಕೆ ಸರಿ ಸಮಾನವಾದ ಆನಂದ ಬೇರಾವುದಿದೆ?’ ಎಂದು
ಹೇಳುತ್ತಿದ್ದಾನೆ.

ಚಿತ್ರಕ – ಇಲ್ಲ. ಅಂಥ ಆನಂದ ಬೇರೆ ಇಲ್ಲ
.
ಗುಲಿಕ ವರ್ಮಾ – ಆದಿನ ಶತ್ರುವಿನ ರಕ್ತದಿಂದ ಕತ್ತಿಗೆ ತರ್ಪಣ ಕೊಟ್ಟಿದ್ದಾಯಿತು. ಆ ದಿನವನ್ನು ಜ್ಞಾಪಿಸಿಕೊಂಡರೆ ಸಾಕು ಈಗಲೂ ನನ್ನ ಹೃದಯ ಸಂತೋಷದಿAದ ಕುಣಿದಾಡುತ್ತದೆ. ಹೆಣ್ಣಿನ ಆಲಿಂಗನದಲ್ಲಿಯೂ ಇಂಥ ಆನಂದ ಸಿಗುವುದಿಲ್ಲ.

ಹಳೆಯ ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಚಿತ್ರಕನಿಗೆ ಮನದಟ್ಟಾಯಿತು. ಇದೊಂದು ಕೆಲಸ ಬಾಕಿ ಇದೆ. ತನ್ನ ತಂದೆಯ ಹತ್ಯೆ ಮಾಡಿದವನನ್ನು ವಧಿಸಿ, ಕ್ಷತ್ರಿಯರ ಕರ್ತವ್ಯ ಪಾಲನೆ ಮಾಡಬೇಕಾಗಿರುವುದು ಇಂದಿಗೂ ಹಾಗೆಯೇ ಉಳಿದಿದೆ. ನಿಯತಿಯ ಕುಟಿಲ ಮಾರ್ಗವೂ ಕೂಡ ಅವನನ್ನು ಅದೇ ದಿಕ್ಕಿಗೇ ಕರೆದೊಯ್ಯುತ್ತಿದೆ. ರಟ್ಟ ಧರ್ಮಾದಿತ್ಯನನ್ನು ಹತ್ಯೆ
ಮಾಡಿ ಅವನು ಪಿತೃ ಋಣ ತೀರಿಸಬೇಕಾಗಿದೆ.

ಆಮೇಲೆ? ಆ ಮೇಲೆ ಏನಾಗುವುದೆಂದು ಯೋಚಿಸಿ ಪ್ರಯೋಜನವಿಲ್ಲ. ಎಲ್ಲಾ ದಾರಿಯ ಕೊನೆಗೆ ಮೃತ್ಯುವೇ ತಾನೆ? ಚಿತ್ರಕ ಚಷ್ಟನ ದುರ್ಗದ ಕಡೆಗೆ ನಡೆಯಲಿ. ನಾವು ಸ್ಕಂದಗುಪ್ತನ ಶಿಬಿರದತ್ತ ಹಿಂದಿರುಗೋಣ.

ಮುಂದುವರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *