ಹಿಂದಿನ ಸಂಚಿಕೆಯಿಂದ……
ಬೆಳಗ್ಗೆ ಸ್ಕಂದಗುಪ್ತನು ಹೊರಗಿನ ಕೊಠಡಿಯೊಳಕ್ಕೆ ಬಂದು ಕುಳಿತನು. ಆಗ ಪಿಪ್ಪಲಿ ಮಿಶ್ರ ಬಂದು ಅವನಿಗೆ ಸ್ವಸ್ತಿವಾಚನ ಮಾಡಿ ‘ವಯಸ್ಯ ನಿನ್ನೆ ರಾತ್ರಿ ದೊಡ್ಡ ಆಪತ್ತಿಗೆ ಒಳಗಾಗಿದ್ದೆ’ ಎಂದನು. ಸ್ಕಂದಗುಪ್ತನು ಬೇರೆ ಏನನ್ನೋ ಯೋಚಿಸುತ್ತಿದ್ದನು. ‘ವಿಪತ್ತೇ’ ಎಂದು ಕೇಳಿದನು.
ಪಿಪ್ಪಲಿ – ಶತ್ರುಗಳು ನಾವಿರುವ ಜಾಗವನ್ನು ಪತ್ತೆ ಹಚ್ಚಿದ್ದಾರೆ. ವಯಸ್ಯ, ಇನ್ನು ಈ ಜಾಗ ಸುರಕ್ಷಿತವಲ್ಲ.
ಸ್ಕಂದ ತನ್ನ ಸ್ನೇಹಿತನನ್ನು ಚೆನ್ನಾಗಿ ಬಲ್ಲ. ಆದ್ದರಿಂದ ಉದ್ವೇಗಕ್ಕೆ ಒಳಗಾಗಲಿಲ್ಲ. ‘ನಿನ್ನೆ ರಾತ್ರಿ ಏನು ನಡೆಯಿತು’ ಎಂದು ಕೇಳಿದನು.
ಪಿಪ್ಪಲಿ – ನಿನ್ನೆ ಬಹಳ ಚೆನ್ನಾಗಿ ಸುಖವಾಗಿ ನಿದ್ದೆ ಮಾಡುತ್ತಿದ್ದೆ. ಮಧ್ಯರಾತ್ರಿಯಲ್ಲಿ ಏಕಾಏಕಿ ನಿದ್ದೆಗೆ ಅಡ್ಡಿಯುಂಟಾಯಿತು. ಬೆನ್ನು ಹುರಿಯ ಕೆಳಭಾಗದಲ್ಲಿ ಏನೋ ಹರಿದಾಡಿದ ಹಾಗಾಯಿತು. ಕುಂಡಲಿನಿಯು ಜಾಗೃತವಾಗಿರಬಹುದೆಂದು ತುಂಬ ಸಂತೋಷವಾಯಿತು. ಜಪತಪಧ್ಯಾನಧಾರಣಾ ಹೆಚ್ಚು ಮಾಡಿಲ್ಲದಿರಬಹುದು. ಗೋತ್ರದ ಫಲ ಎಲ್ಲಿ ಹೋಗುತ್ತದೆ? ಆಮೇಲೆ ಕುಂಡಲಿನಿಯು ನಮಗೆ ಕಚ್ಚಿದ ಹಾಗಾಯಿತು. ಬಹಳ ಉರಿಒಡೆತ ಹೆಚ್ಚಾಯಿತು. ಕೂಡಲೇ ಮೇಲೆದ್ದು ಎಲ್ಲ ಕಡೆ ಹುಡುಕಾಡಿದೆ. ಏನು ಹೇಳಲಿ. ವಯಸ್ಯ, ಕುಂಡಲಿನಿಯಲ್ಲ – ಬಹಳ ಕೆಟ್ಟ ಕಟ್ಟಿರುವೆ. ಆಗಿನಿಂದಲೂ ನಿದ್ದೆ ಮಾಡಲಾಗಲಿಲ್ಲ.
ಸ್ಕಂದ ಸ್ವಲ್ಪ ಬೇಸರದಿಂದ ‘ನಿನ್ನೆ ನಾನೂ ಕೂಡ ನಿದ್ದೆ ಮಾಡಲಾಗಲಿಲ್ಲ.’ ಎಂದನು.
ಪಿಪ್ಪಲಿ – ಓಹೋ! ನಿನಗೂ ಕಟ್ಟಿರುವೆಯ ಕಾಟವೆ?
ಸ್ಕಂದನು ‘ಇಲ್ಲ’ವೆಂದು ಉತ್ತರಿಸಿದನು. ಮನಸ್ಸಿನಲ್ಲಿ ‘ಪ್ರಾಯಶಃ’ ಎಂದನು.
ಇದೇ ವೇಳೆಗೆ ಮಹಾಬಲಾಧಿಕೃತ ಹಾಗೂ ಕೆಲವರು ಸೇನಾಪತಿಗಳು ಬಂದು ರಾಜನ ದರ್ಶನ ಮಾಡಿದರು. ಆಗ ಯುದ್ಧಕ್ಕೆ ಸಂಬಂಧಿಸಿದ ಹಾಗೆ ಮಂತ್ರಾಲೋಚನೆ ನಡೆಯಿತು. ಶತ್ರುಪಕ್ಷದವರ ವಿಷಯವಾಗಿ ಸಂಗ್ರಹಿಸಿದ ಮಾಹಿತಿಯ ಬಗ್ಗೆ ಚರ್ಚೆ ನಡೆಯಿತು. ಶತ್ರುವಿನ ಅಂತಿಮ ನಿರ್ಣಯವೇನೆಂದು ತಿಳಿಯುವವರೆಗೂ ನಾವಾಗಿಯೇ ಆಕ್ರಮಣ ಮಾಡಬಾರದು. ಅವರಾಗಿಯೇ ಆಕ್ರಮಣ ಮಾಡಿದರೆ ಅದಕ್ಕೆ ಪ್ರತಿಯಾಗಿ ನಾವು ಪ್ರತಿರೋಧ ಒಡ್ಡೋಣ. ಪ್ರಸ್ತುತ ನಮ್ಮ ಸೇನೆ ಬೀಡು ಬಿಟ್ಟಿರುವ ಈ ತಪ್ಪಲಿನ ಪ್ರದೇಶದಲ್ಲಿಯೇ ಇರುವುದು. ಸ್ಥಾನ ಪರಿವರ್ತನೆ ಮಾಡಬೇಕಾಗಿಲ್ಲ. ಇಲ್ಲಿಂದಲೇ ಶತ್ರುವಿನ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಎಂದು ತೀರ್ಮಾನಿಸಲಾಯಿತು.
ಮಂತ್ರಾಲೋಚನೆ ಮುಗಿಯುವ ಹೊತ್ತಿಗೆ ಮಧ್ಯಾಹ್ನವಾಯಿತು. ಭೋಜನಾದಿಗಳನ್ನು ಮುಗಿಸಿ ಸ್ಕಂದನು ವಿಶ್ರಾಂತಿ ಪಡೆಯುತ್ತಿದ್ದನು. ಲಹರಿ ಈ ದಿನ ರಟ್ಟಾಳ ಸೇವೆಗಾಗಿ ನಿಯುಕ್ತಳಾಗಿದ್ದಳು. ಆದ್ದರಿಂದ ಬೇರೊಬ್ಬ ಸೇವಕನು ಸ್ಕಂದನಿಗೆ ಗಾಳಿ ಹಾಕುತ್ತಿದ್ದನು. ಸ್ಕಂದಗುಪ್ತನು ವಿಶ್ರಮಿಸಿಕೊಂಡು ಮೇಲೆ ಏಳುತ್ತಿದ್ದ ಹಾಗೆಯೇ ಲಹರಿ ಬಂದು ‘ಕುಮಾರ ಭಟ್ಟಾರಿಕಾ ರಟ್ಟಾ ಯಶೋಧರಾ ಬಂದಿದ್ದಾರೆ’ ಎಂದಳು.
ರಟ್ಟಾ ಬಂದು ರಾಜನ ಮುಂದೆ ನಿಂತಳು. ಮೈತುಂಬ ಬಂಗಾರದ ಒಡವೆಗಳು ಥಳಥಳ ಹೊಳೆಯುತ್ತಿದ್ದವು. ಜಪಾ ಕುಸುಮದಂತೆ ಕೆಂಪಾದ ಚೀನಾಂಬರವನ್ನು ಉಟ್ಟಿದ್ದಳು. ಬೈತಲೆಯ ತುದಿಯಲ್ಲಿ ಮುಕ್ತಾಫಲಗಳ ಆಭರಣ. ಲಹರಿಯು ಅಚ್ಚುಕಟ್ಟಾಗಿ ಜಡೆ ಹೆಣಿದಿದ್ದಳು. ರಾಜನು ಮುಗ್ಧನಾಗಿ ಕಾಮದೇವನನ್ನು ಗೆಲ್ಲುವ ಸುಂದರ ಮೂರ್ತಿಯನ್ನು ಕಣ್ಣುಮಿಟಿಕಸದೆ ನೋಡಿದನು. ಕ್ಷಣಕಾಲ ತನ್ನ ಅಂತರಂಗದ ಕಡೆಗೆ ದೃಷ್ಟಿ ಹರಿಯಿತು. ಜೀವನ ಭಂಗುರ ಸುಖ ಚಂಚಲ. ಜೀವನವೆಲ್ಲ ಯಾವ ವ್ಯಕ್ತಿಗಾಗಿ
ಹುಡುಕಾಟ ನಡೆಸಿದರೂ ದೊರೆಯಲಿಲ್ಲವೋ, ಅಂಥ ವ್ಯಕ್ತಿ ಎದುರಿಗೇ ಬಂದು ನಿಂತಿರುವಾಗ ಇನ್ನು ತಡಮಾಡಬೇಡ ಎಂದು ಮನಸ್ಸು ಹೇಳಿತು.
ರಟ್ಟಾ ರಾಜನಿಗೆ ನಮಸ್ಕರಿಸಿ ಗದ್ಗದ ಸ್ವರದಲ್ಲಿ ‘ದೇವ ಈ ಎಲ್ಲ ಉಡುಗೊರೆಗಳನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದ ಹೇಳೋಣವೆಂದರೆ ಮಾತೇ ಹೊರಡುತ್ತಿಲ್ಲ. ತಾವೇನು ಜಾದೂಗಾರರೇ? ಹೆಂಗಸರೆ ಇಲ್ಲದ ಈ ಸೇನಾ ಶಿಬಿರದಲ್ಲಿ ಇಷ್ಟೊಂದು ಅಪೂರ್ವವಾದ ನೂತನ ವಸ್ತ್ರಾಲಂಕಾರಗಳು ಎಲ್ಲಿಂದ ಬಂದವು?’ ಎಂದು ಆಶ್ಚರ್ಯ ವ್ಯಕ್ತಪಡಿಸಿದಳು.
ಸ್ಕಂದಗುಪ್ತ (ಮುಗುಳು ನಗುತ್ತ)- ಸುಚರಿತೆ, ಸತತವಾದ ಪುರುಷಪ್ರಯತ್ನದಿಂದ ಅಪ್ರಾಪ್ಯ ವಸ್ತುವನ್ನೂ ಕೂಡ ಪಡೆಯಬಹುದು.
ರಟ್ಟಾ – (ವಿನಯದಿಂದ) ಇರಬಹುದು. ನಾನು ಹೆಂಗಸು ಪುರುಷ ಪ್ರಯತ್ನವನ್ನು ನಾನೇನು ಬಲ್ಲೆ. ತಮ್ಮ ಸರ್ವವಿಜಯಿಯಾದ ಪುರುಷ ಪ್ರಯತ್ನ ಬಹುಕಾಲ ಅಕ್ಷಯವಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ಉಡುಗೊರೆ ನೀಡಿದ್ದಕ್ಕಾಗಿ ನನ್ನ ಹಾರ್ದಿಕ ಧನ್ಯವಾದಗಳನ್ನು ತಾವು ದಯೆಯಿಟ್ಟು ಸ್ವೀಕರಿಸೋಣವಾಗಲಿ.
ಸ್ಕಂದಗುಪ್ತ – ನನಗೇಕೆ ಧನ್ಯವಾದ. ನಾವು ಕೊಟ್ಟ ಉಡುಗೊರೆಗಳನ್ನು ನೀವು ಸೀಕರಿಸಿ, ಧರಿಸಿ, ಅಂದವಾಗಿ ಕಾಣುತ್ತಿರುವುದರಿಂದ ನಿಮಗಿಂತ ಹೆಚ್ಚಾಗಿ ನಾವು ಆ ಆನಂದಭಾಗ್ಯವನ್ನು ಪಡೆಯುತ್ತಿದ್ದೇವೆ.
ಸ್ಕಂದಗುಪ್ತನ ಪ್ರಶಂಸೆಗೆ ಪಾತ್ರಳಾದ ರಟ್ಟಾ ನಾಚಿಕೆಯಿಂದ ತಲೆಬಾಗಿಸಿದಳು.
ಆಗ ಸ್ಕಂದಗುಪ್ತ ‘ಸದಾ ಯುದ್ಧದ ಚಿಂತೆಯಲ್ಲಿಯೇ ಮಗ್ನನಾಗಿ ಹೋಗಿದ್ದೇನೆ. ನಿಮ್ಮ ಮನಸ್ಸಂತೋಷಕ್ಕಾಗಿ ಯಾವುದೇ ಪ್ರಯತ್ನಮಾಡಲಾಗಲಿಲ್ಲ. ಈ ಸೈನ್ಯ ಶಿಬಿರದಲ್ಲಿ ಒಂಟಿಯಾಗಿದ್ದುಕೊಂಡು ನಿಮಗೆ ನಿಶ್ಚಯವಾಗಿಯೂ ಬೇಸರವಾಗಿರಬಹುದು. ಬನ್ನಿ ಪಗಡೆಯನ್ನಾದರೂ ಆಡೋಣ. ಆಡುತ್ತೀರೇನು?’ ಎಂದು ಕೇಳಿದನು.
ರಟ್ಟಾ – (ನಗುತ್ತಾ ತಲೆಯೆತ್ತಿ) ಆಡುತ್ತೇನೆ ಮಹಾರಾಜ.
ಸ್ಕಂದಗುಪ್ತನ ಸೂಚನೆಯ ಮೇರೆಗೆ ಲಹರಿ ಪಗಡೆ ಆಟಕ್ಕೆ ಬೇಕಾದ ಪಗಡೆಕಾಯಿ, ದಾಳ, ಹಾಸು ಮುಂತಾದವುಗಳನ್ನು ತಂದು ಎದುರಿಗೆ ಹಾಸಿದಳು.
ರಟ್ಟಾ ಹಾಗೂ ಸ್ಕಂದಗುಪ್ತರು ಹಾಸಿನ ಎದುರು ಬದುರು ಕುಳಿತರು. ರಾಜನು ದಾಳಗಳನ್ನು ಎರಡು ಕೈಗಳಿಂದ ಉಜ್ಜುತ್ತ ಉಜ್ಜುತ್ತ, ಮೃದುವಾಗಿ ನಕ್ಕು ‘ಯಾವ ಪಣ ಇಡುತ್ತೀರಿ’ ಎಂದು ಕೇಳಿದನು.
ರಟ್ಟಾ- (ದೀನಳಾಗಿ) ತಮ್ಮ ಸಮ್ಮುಖದಲ್ಲಿ ಪಣ ಇಡುವಂಥ ವಸ್ತು ನನ್ನಲ್ಲಿ ಯಾವುದೂ ಇಲ್ಲವಲ್ಲ, ಮಹಾರಾಜ.
ಸ್ಕಂದಗುಪ್ತ -(ಪ್ರೀತಿಯ ದನಿಯಲ್ಲಿ) ಒಳ್ಳೆಯದು. ಇಲ್ಲಿ ಪಣವು ಊಹ್ಯವಾಗಿರಲಿ. ಗೆದ್ದಮೇಲೆ ಕೇಳಿ ಪಡೆದರಾಯಿತು.
ರಟ್ಟಾ- ಆದರೆ ಆರ್ಯ, ಗೆದ್ದ ಮೇಲೆ ತಾವು ಕೇಳುವ ವಸ್ತು ನನ್ನಲ್ಲಿ ಇಲ್ಲದೆ ಹೋದರೆ ಏನು ಮಾಡುವುದು? ಕೇಳಿದ ಪಣವನ್ನು ಕೊಡದಿದ್ದಲ್ಲಿ ನನಗೆ ಕಳಂಕ ಬರುತ್ತದೆ.
ಸ್ಕಂದಗುಪ್ತ- ಸಾಧ್ಯಾತೀತವಾದ ಪಣವನ್ನೇನೂ ಕೇಳುವುದಿಲ್ಲ. ಚಿಂತಿಸಬೇಡಿ.
‘ಒಳ್ಳೆಯದು ಮಹಾರಾಜ. ತಾವು ಏನು ಪಣ ಇಡುತ್ತೀರಿ.’
‘ನಿಮಗೆ ಯಾವ ಪಣ ಬೇಕು?’
‘ಒಂದುವೇಳೆ ನಾನು ‘ದಂಡ-ಮುಕುಟ-ಛತ್ರ-ಸಿಂಹಾಸನ’ ಕೇಳಿದರೆ ತಾವು ಪಣ ಒಡ್ಡುತ್ತೀರೇನು?’
ಅನುರಾಗ ತುಂಬಿದ ಕಣ್ಣುಗಳಿಂದ ರಟ್ಟಾಳನ್ನು ಒಮ್ಮೆ ನೋಡಿ, ಸ್ಕಂದಗುಪ್ತನು ‘ನೀವು ನಿಜವಾಗಿಯೂ ಈ ಪಣವನ್ನು ಬಯಸುತ್ತೀರಾ?’ ಎಂದು ಕೇಳಿದನು.
ಕ್ಷಣಕಾಲ ನೀರವವಾಗಿದ್ದು ರಟ್ಟಾ ಧೀರಸ್ವರದಲ್ಲಿ ‘ತಮ್ಮ ಪಣವೂ ಈಗ ಊಹ್ಯವಾಗಿಯೇ ಇರಲಿ. ಒಂದು ವೇಳೆ ‘ಗೆದ್ದರೆ ಕೇಳಿ ಪಡೆದರಾಯಿತು’ ಎಂದು ಹೇಳಿದಳು.
‘ಒಳ್ಳೆಯದು’ ಎಂದು ಹೇಳಿ ಸ್ಕಂದಗುಪ್ತನು ನಿರಾಳವಾಗಿ ಉಸಿರಾಡಿದನು. ಆನಂತರ ಪಗಡೆ ಆಟ ಆರಂಭವಾಯಿತು. ಮಹಾರಾಜನು ನವಯುವಕನಂತೆ ಉತ್ಸಾಹ ಹಾಗೂ ಸ್ಫೂರ್ತಿಯಿಂದ ನಾನಾಪ್ರಕಾರವಾಗಿ ಸರಸ ಸಂಭಾಷಣೆ ಮಾಡುತ್ತ ಆಡಲು ಮೊದಲು ಮಾಡಿದನು. ರಟ್ಟಾ ಕೂಡ ನಗುನಗುತ್ತ ಸರಸ ಸಲ್ಲಾಪದೊಂದಿಗೆ ಆನಂದವಾಗಿ ಆಡುತ್ತ ಹೋದಳು. ಇಬ್ಬರೂ ಆಟದಲ್ಲಿ ಮುಳುಗಿಹೋದರು. ಇಲ್ಲಿಯವರೆಗೂ ಲಹರಿ ಹಾಗೂ ಪಿಪ್ಪಲೀಮಿಶ್ರ ಅದೇ ಕೊಠಡಿಯಲ್ಲಿಯೇ ಹಾಜರಿದ್ದರು. ಪಿಪ್ಪಲಿಯು ಸ್ವಲ್ಪ ದೂರದಲ್ಲಿ ಕುಳಿತು ಆಟ ನೋಡುತ್ತಿದ್ದನು. ಆಟ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ತಲೆ ಎತ್ತಿನೋಡುತ್ತಾನೆ. ಲಹರಿ ಅವನಿಗೆ ಕಣ್ಣು ಸನ್ನೆ ಮಾಡಿದಳು. ಪಿಪ್ಪಲಿಯು ಅದನ್ನು ಅರ್ಥ ಮಾಡಿಕೊಂಡನು. ಆನಂತರ ಲಹರಿಯು ಬಹುಬೇಗ ಕೊಠಡಿಯಿಂದ ಹೊರಗೆ ಹೋದಳು. ಆಗ ಪಿಪ್ಪಲಿಯೂ ಕೂಡ ಸದ್ದಿಲ್ಲದೆ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಆಚೆಗೆ ಹೊರಟುಹೋದನು. ಕೊಠಡಿಯಲ್ಲಿ ರಟ್ಟಾ ಹಾಗೂ ಸ್ಕಂದಗುಪ್ತರಲ್ಲದೆ ಬೇರೆ ಯಾರೂ ಇರಲಿಲ್ಲ. ಅವರಿಬ್ಬರೂ ಆಟದಲ್ಲಿ ಎಷ್ಟು ಮಗ್ನರಾಗಿದ್ದರೆಂದರೆ ಲಹರಿ ಹಾಗೂ ಪಿಪ್ಪಲಿ ಅಲ್ಲಿಂದ ಹೊರಗೆ ಹೋದುದು ಅವರಿಗೆ ಗೊತ್ತಾಗಲೇಇಲ್ಲ.
ಸುಮಾರು ಮೂರು ಘಳಿಗೆ ಬಹಳ ಉತ್ಸಾಹದಿಂದ ಆಟ ಆಡಿದ ಮೇಲೆ ಆಟ ಮುಕ್ತಾಯವಾಯಿತು. ಪರಮಭಟ್ಟಾರಕ ಶ್ರೀಮನ್ಮಹಾರಾಜ ಸ್ಕಂದಗುಪ್ತರು ಸೋತು ಹೋದರು.
ರಟ್ಟಾ ಚಪ್ಪಾಳೆ ತಟ್ಟುತ್ತ ಮೇಲೆದ್ದಳು.
ಸ್ಕಂದಗುಪ್ತ – ರಟ್ಟಾ ಯಶೋಧರಾ, ನಾನು ಸೋಲನ್ನು ಒಪ್ಪಿಕೊಂಡಿದ್ದೇನೆ. ಈಗ ನೀವು ಪಣವನ್ನು ಕೇಳಿ ಪಡೆಯಬಹುದು. ದಂಡ-ಮುಕುಟ ಛತ್ರ ಸಿಂಹಾಸನ ಸಮಸ್ತವನ್ನೂ ನೀವು ಪಡೆಯಬಹುದು.
ರಟ್ಟಾ- ಇಲ್ಲ ಮಹಾರಾಜ, ಅಷ್ಟೊಂದು ದುರ್ಬುದ್ಧಿ ನನಗಿಲ್ಲ. ನನಗೆ ಬೇಕಾದ ಒಂದು ಸಣ್ಣ ಪಣವನ್ನು ಸಮಯ ಬಂದಾಗ ಯಾಚಿಸಿ ಪಡೆಯುತ್ತೇನೆ.
ಸ್ಕಂದಗುಪ್ತನು ಸ್ವಲ್ಪ ಹೊತ್ತು ರಟ್ಟಾಳನ್ನೇ ನೋಡುತ್ತಾ ಇದ್ದು, ನಿಧಾನವಾಗಿ ‘ದೇವಿ, ನನ್ನ ಭಾವನೆ ಬೇರೆಯೇ ಅಗಿತ್ತು. ಪಗಡೆ ಆಟದಲ್ಲಿ ನಿನ್ನನ್ನು ಸೋಲಿಸಿ ನಿನ್ನಿಂದ ಅಮೂಲ್ಯವಸ್ತುವನ್ನು ಪಡೆಯಬೇಕೆಂಬ ಮಹಾದಾಸೆ ಇತ್ತು. ಆದರೆ ಅದು ಕೈಗೂಡಲಿಲ್ಲ. ಈಗ ನಿನ್ನಲ್ಲಿ ದೈನ್ಯದಿಂದ ಭಿಕ್ಷೆ ಬೇಡದೆ ಬೇರೆ ದಾರಿಯೇ ಇಲ್ಲ. ದೇವಿ, ನೀವು ಭಿಕ್ಷೆ ನೀಡುತ್ತೀರಾ’ ಎಂದು ಕೇಳಿದನು.
ಸ್ಕಂದಗುಪ್ತನು ಇದೇ ಥರದ ಮಾತನಾಡುತ್ತಾನೆಂದು ರಟ್ಟಾ ಮೊದಲೇ ಊಹಿಸಿದ್ದಳು. ಆದರೂ ಅವಳ ಎದೆ ಡವ-ಡವ ಬಡಿದುಕೊಳ್ಳಲು ಪ್ರಾರಂಭಿಸಿತು. ಅವಳು ಬಹಳ ಮೆಲುದನಿಯಲ್ಲಿ ‘ಆರ್ಯ ಆಜ್ಞೆ ಮಾಡೋಣವಾಗಲಿ’ ಎಂದಳು.
ಸ್ಕಂದಗುಪ್ತ- ನನಗೆ ಈಗ ಐವತ್ತು ವರ್ಷ ವಯಸ್ಸು. ಆದರೆ ನಾನು ವಿವಾಹವಾಗಿಲ್ಲ. ವಿವಾಹವಾಗಬೇಕೆಂದು ನನಗೆ ಎಂದೂ ಅನ್ನಿಸಲೇ ಇಲ್ಲ. ಹೀಗೆಯೇ ಒಂಟಿಯಾಗಿಯೇ ಜೀವನ ಕಳೆಯಬೇಕೆಂದು ಭಾವಿಸಿದ್ದೆ. ಆದರೆ ನಿಮ್ಮನ್ನು ನೋಡಿ, ನಿಮ್ಮ ಪರಿಚಯವಾದ ಮೇಲೆ ನಿಮ್ಮನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕೆಂದು ಮನಸ್ಸಾಗಿದೆ. ಸ್ಕಂದನು ಇಷ್ಟು ಹೇಳಿ ಮೌನ ತಾಳಿದನು. ರಟ್ಟಾ ಕೂಡ ಬಹಳ ಹೊತ್ತು ತಲೆ ತಗ್ಗಿಸಿಕೊಂಡು ಮಾತಿಲ್ಲದೆ ಕುಳಿತಿದ್ದಳು. ಅನಂತರ ಬಹಳ ಕಷ್ಟದಿಂದ ಒಂದೊಂದೇ ಮಾತನ್ನು ಕೂಡಿಸಿಕೊಂಡು ‘ದೇವ, ನಾನು ಅಂಥ ಸೌಭಾಗ್ಯಕ್ಕೆ ಅರ್ಹಳಲ್ಲ. ನನ್ನನ್ನು ಕ್ಷಮಿಸೋಣವಾಗಲಿ’ ಎಂದಳು.
ಸ್ಕಂದಗುಪ್ತನು ತನ್ನ ಕಣ್ಣುಗಳಲ್ಲಿ ವ್ಯಥೆ ಹಾಗೂ ವಿಸ್ಮಯವನ್ನು ಸೂಸುತ್ತ ‘ನೀವು ನನ್ನನ್ನು ಅಸ್ವೀಕಾರ ಮಾಡುತ್ತಿದ್ದೀರೇನು?’ ಎಂದು ಕೇಳಿದನು. ಕಂಬನಿ ತುಂಬಿದ ಕಣ್ಣುಗಳನ್ನು ರಟ್ಟಾ ಮೇಲೆತ್ತಿ ‘ಮಹಾರಾಜ, ತಾವು ಅಸೀಮ ಶಕ್ತಿಧರರು. ಸಮುದ್ರಮೇಖಲಾವಲಯಿತ ಆರ್ಯಭೂಮಿಯ ಅಧೀಶ್ವರರು. ತಾವು ಈ ತುಚ್ಛ ನಾರೀದೇಹವನ್ನು ಪಡೆದು ಸಂತುಷ್ಟರಾಗು ವಿರೇನು?’ ಎಂದಳು.
ತೀಕ್ಷ್ಣವಾದ ಕಣ್ಣುಗಳಿಂದ ರಟ್ಟಾಳ ಮುಖವನ್ನು ನಿರೀಕ್ಷಿಸಿ ಸ್ಕಂದಗುಪ್ತನು ‘ಇಲ್ಲ. ನಿಮ್ಮ ದೇಹ- ಮನಸ್ಸು ಎರಡನ್ನೂ ಕೂಡ ನಾನು ಬಯಸುತ್ತೇನೆ. ಒಂದು ವೇಳೆ ಹೃದಯವನ್ನು ಪಡೆಯದಿದ್ದರೆ ದೇಹದಿಂದೇನು ಪ್ರಯೋಜನ? ಈ ವಯಸ್ಸಿನಲ್ಲಿ ಪ್ರಾಣವಿಲ್ಲದ ನಾರೀ ದೇಹವನ್ನು ಹೊತ್ತು ಅಡ್ಡಾಡಲಾರೆ’ ಎಂದನು.
ರಟ್ಟಾ ಕಣ್ಣೀರು ಸುರಿಸುತ್ತ ಕೈಜೋಡಿಸಿ, ‘ರಾಜಾಧಿರಾಜ, ಹಾಗಾದರೆ ನನ್ನನ್ನು ಕ್ಷಮಿಸೋಣವಾಗಲಿ. ಹೃದಯವನ್ನು ಕೊಡುವ ಅಧಕಾರ ನನಗಿಲ್ಲ’ ಎಂದಳು. ಕ್ಷಣಕಾಲ ಮೌನವಾಗಿದ್ದು ಸ್ಕಂದಗುಪ್ತನು ‘ಬೇರೆಯವರಿಗೆ ಹೃದಯವನ್ನು ಅರ್ಪಿಸಿದ್ದೀಯೇನು?’ ಎಂದನು. ರಟ್ಟಾ ತಲೆ ತಗ್ಗಿಸಿದಳು. ಹೂವಿನೊಳಗೆ ಸಂಚಿತವಾಗಿದ್ದ ಹಿಮ ಬಿಂದುಗಳ ಹಾಗೆ ನಾಲ್ಕಾರು ಹನಿಗಳು ಅವಳ ಕಣ್ಗಳಿಂದ ತೊಟ್ಟಿಕ್ಕಿ ಅವಳ ವಕ್ಷ ಸ್ಥಳದ ಮೇಲೆ ಬಿದ್ದವು. ಬಹಳ ಹೊತ್ತು ಇಬ್ಬರೂ ಮೌನವಾಗಿದ್ದರು. ಸ್ಕಂದಗುಪ್ತನು ಒಂದು ಕೈಯನ್ನು ನೆಲದ ಮೇಲೆ ಊರಿಕೊಂಡು ಪಗಡೆ ಕಾಯಿಗಳ ಕಡೆ ನೋಡುತ್ತ ಇದ್ದನು. ಅವನ ಮುಖದಲ್ಲಿ ಮನಸ್ಸಿನ ಒಳತೋಟಿ ಕಂಡು ಬರುತ್ತಿತ್ತು. ಕೊನೆಗೆ ದೀರ್ಘವಾದ ನಿಟ್ಟುಸಿರು ಹೊರ ಬಂದಿತು. ತುಟಿಗಳ ಮೇಲೆ ಮೃದು ಹಾಸ್ಯ ಕಾಣಿಸಿತು. ಆತನು ‘ಸ್ವಲ್ಪ ಹೊತ್ತಿಗೆ ಮುಂಚೆ ‘ಪುರುಷ ಪ್ರಯತ್ನದಿಂದ ಅಪ್ರಾಪ್ಯ ವಸ್ತುವನ್ನು ಕೂಡ ಪಡೆಯಬಹುದು’ ಎಂದು ನಾನು ಹೇಳಿದ್ದೆ. ನಾನು ಹೇಳಿದುದು ತಪ್ಪು ಎಂದು ಈಗ ಅನ್ನಿಸುತ್ತಿದೆ. ಅದೃಷ್ಟವೇ ಬಲತರವಾದುದು. ಆದರೆ ನೀನೇ ಧನ್ಯಳು. ನಿನ್ನ ಪ್ರೇಮವೂ
ಧನ್ಯವೇ’ ನಿಮ್ಮ ಪ್ರೇಮವನ್ನು ನಾನು ಪಡೆಯಲಿಲ್ಲ. ಈ ನೋವು ಸತ್ತರೂ ಹೋಗುವುದಿಲ್ಲ’ ಎಂದನು.
ರಟ್ಟಾ ಕಂಗೆಟ್ಟು ಕುಳಿತಿದ್ದಳು. ಏನೊಂದೂ ಮಾತಾಡಲಿಲ್ಲ. ಸ್ಕಂದನು ಮತ್ತೆ ‘ನೀವು ಯಾರಿಗೆ ನಿಮ್ಮ ಹೃದಯವನ್ನು ಅರ್ಪಿಸಿದ್ದೀರೋ ಅವರು ಯಾರೇ ಆಗಿರಲಿ, ಅವರು ನನಗಿಂತ ಭಾಗ್ಯಶಾಲಿ. ನೀನು ಬುದ್ಧಿಮತಿ. ನಿಮಗೆ ಯಾವ ಆಸೆಯನ್ನೂ ತೋರಿಸುವುದಿಲ್ಲ. ಬಲಾತ್ಕಾರವಾಗಿ ನಿಮ್ಮನ್ನು ವರಿಸುವ ಪ್ರಯತ್ನವನ್ನೂ ಮಾಡುವುದಿಲ್ಲ. ಬಹಳ ಕಾಲದಿಂದ ಬಲದ ವಿಷಯವಾಗಿ ಚರ್ಚೆಮಾಡಿ ನೋಡಿದ್ದೇನೆ. ಬಲದ ಮೂಲಕ ಹೃದಯವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ನೀವು ಅಳಬೇಡಿ. ನಾನು ಎಂದೂ ಮತ್ತೊಬ್ಬರ ಸ್ವತ್ತನ್ನು ಅಪಹರಿಸಿಲ್ಲ. ಈಗಲೂ ಆ ರೀತಿ ಮಾಡುವುದಿಲ್ಲ. ನಿಮ್ಮ ಹತ್ತಿರ ನನ್ನದೊಂದು ಪ್ರಾರ್ಥನೆ- ನನ್ನನ್ನು ಮರೆಯಬೇಡಿರಿ. ನಾನು ಈ ಲೋಕದಲ್ಲಿ ಜೀವಂತವಾಗಿರುವವರೆಗೂ ನನ್ನನ್ನು ಸ್ಮರಿಸುತ್ತಿರಿ’ ಎಂದನು.
ರಟ್ಟಾ ಸ್ಕಂದಗುಪ್ತನ ಪಾದಸ್ಪರ್ಶಮಾಡಿ ಕಣ್ಣೀರು ಹರಿಸುತ್ತ ‘ದೇವ, ನಾನು ಬದುಕಿರುವವರೆಗೂ ನನ್ನ ಹೃದಯ ಮಂದಿರದಲ್ಲಿ ತಮ್ಮ ಮೂರ್ತಿಯನ್ನು ದೇವತೆಯಂತೆ ಪೂಜಿಸುತ್ತಿರುತ್ತೇನೆ’ ಎಂದು ಹೇಳಿದಳು.
ಸ್ಕಂದನು ರಟ್ಟಾಳ ತಲೆಯ ಮೇಲೆ ಕೈಯಿಟ್ಟು ‘ಸುಖೀಭವ’ ಎಂದು ಆಶೀರ್ವದಿಸಿದನು. ಸ್ಕಂದಗುಪ್ತನ ಶಿಬಿರದಲ್ಲಿ ಈ ದೃಶ್ಯದ ಅಭಿನಯ ನಡೆಯುತ್ತಿದ್ದಾಗ, ಅದೇ ಸಮಯಕ್ಕೆ ಸರಿಯಾಗಿ ಚಿತ್ರಕ ಹಾಗೂ ಗುಲಿಕವರ್ಮಾ ತಮ್ಮ ಸೈನ್ಯ ಬಲದೊಂದಿಗೆ ಚಷ್ಟನ ದುರ್ಗವನ್ನು ತಲುಪಿದರು. ಆಗ ಸಂಜೆಯಾಗಿತ್ತು.
ಮುಂದುವರೆಯುವುದು…..
ಎನ್. ಶಿವರಾಮಯ್ಯ (ನೇನಂಶಿ)