ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 50

ಕಳೆದ ಸಂಚಿಕೆಯಿಂದ…

ಒಬ್ಬರನ್ನೊಬ್ಬರು ನೋಡಿದರೂ ಅವರಿಗೆ ಸಂತೋಷವೇನೂ ಆಗಲಿಲ್ಲ. ಕಿರಾತನ ಆಕೃತಿ ಹೂಣರಂತಿರಲಿಲ್ಲ. ಅವನು ದೀರ್ಘಕಾಯನೂ ಸುದರ್ಶನನೂ ಆಗಿದ್ದನು. ಆದರೆ ಅವನ ಕಣ್ಣುಗಳು ಚಿಕ್ಕವು, ಹಾಗೆಯೇ ಕ್ರೂರವಾಗಿದ್ದವು.

‘ನೀನೆ ಏನು ಕಿರಾತನೆಂಬುವನು! ರಟ್ಟಾಳನ್ನು ಆಸೆ ಗಣ್ಣಿನಿಂದ ನೋಡಿದವನು!’ ಎಂದು ಚಿತ್ರಕನು ಮನಸ್ಸಿನಲ್ಲಿ ಅಂದುಕೊಂಡನು.

ಕಿರಾತ- ಯಾರು ನೀನು? ಎಲ್ಲಿಂದ ಬಂದಿರುವೆ?

ಚಿತ್ರಕ- ಮೊದಲೇ ಹೇಳಿದಂತೆ ನಾನು ಸಮ್ರಾಟ್ ಸ್ಕಂದಗುಪ್ತರ ದೂತ. ಅವರ ಶಿಬಿರದಿಂದ ಬರುತ್ತಿದ್ದೇನೆ.

ಕಿರಾತ- (ಸಿಟ್ಟಿನಿಂದ) ಸ್ಕಂದಗುಪ್ತ! ಸ್ಕಂದಗುಪ್ತನಿಗೆ ನನ್ನಿಂದೇನಾಗಬೇಕು?

ಚಿತ್ರಕ- ಸಮ್ರಾಟ್ ಸ್ಕಂದಗುಪ್ತರಿಗೆ ನಿನ್ನಿಂದೇನಾಗಬೇಕು ಎಂಬುದು ಅವರ ಸುದ್ದಿಯಿಂದ ಗೊತ್ತಾಗುತ್ತದೆ. (ಸ್ವಲ್ಪ ಹೊತ್ತು ತಡೆದು) ಶಿಷ್ಟ ಸಮಾಜದಲ್ಲಿ ಮಾನವೀಯ ವ್ಯಕ್ತಿಗಳ ಜೊತೆಗೆ ವಿನಯದ ಭಾಷೆ ಬಳಸುವ ರೀತಿ ಇದೆ.

ಕಿರಾತ ಬೆಂಕಿಯ ಹಾಗೆ ಉರಿದು ಬಿದ್ದ. ಅವನು ‘ನೀನು ಉದ್ಧಟ. ನಮ್ಮ ದುರ್ಗಕ್ಕೆ ಬಂದು ನಮ್ಮ ಜೊತೆ ಉದ್ಧಟತನ ತೋರಿಸಿದರೆ ನಾನು ನಿನ್ನ ಕಿವಿ ಮೂಗು ಕತ್ತರಿಸಿ ಕೋಟೆಯಿಂದ ಹೊರದಬ್ಬಿಸುತ್ತೇನೆ ಎಂದನು.

ಚಿತ್ರಕನ ಹಣೆಯ ಮೇಲಿನ ತಿಲಕ ಚಿಹ್ನೆ ಬರು ಬರುತ್ತ ರಕ್ತವರ್ಣಕ್ಕೆ ತಿರುಗಿತು. ಆದರೆ ಅವನು ದೃಢವಾದ ಧ್ವನಿಯಲ್ಲಿ ‘ಸಮ್ರಾಟ್ ಸ್ಕಂದಗುಪ್ತರ ದೂತನನ್ನು ಅವಮಾನಗೊಳಿಸಿದರೆ ಸಮ್ರಾಟರ ಸಾವಿರ ಸಂಖ್ಯೆಯ ರಣ ಹಸ್ತಿಗಳು (ಯುದ್ಧದ ಆನೆಗಳು) ಬಂದು ನಿನ್ನನ್ನು ಹಾಗೂ ನಿನ್ನ ದುರ್ಗವನ್ನು ಕಾಲಿನಿಂದ ತುಳಿದು ಹೊಸಕಿ ಹಾಕುತ್ತವೆ. ನಿನಗೆ ತಿಳಿದಿರಲಿ. ನಾನು ಏಕಾಕಿಯಲ್ಲ. ಹೊರಗೆ ನೂರು ಜನ ಅಶ್ವಾರೋಹಿ ಸೈನಿಕರು ನನಗಾಗಿ ಕಾಯುತ್ತಿದ್ದಾರೆ’ ಎಂದು ಎಚ್ಚರಿಸಿದನು.

ಕಿರಾತನು ಕೆಂಡಾಮಂಡಲವಾಗಿ ಮೇಲೆ ಬೀಳುವನೆಂದು ಅನ್ನಿಸಿತ್ತು. ಆದರೆ ಅವನು ತುಟಿ ಕಚ್ಚಿಕೊಂಡು, ಬಹಳ ಕಷ್ಟದಿಂದ ಕೋಪವನ್ನು ಹತೋಟಿಗೆ ತಂದು, ಸಾಧ್ಯವಾದಷ್ಟು ಶಾಂತವಾಗಿ ‘ನೀನು ಸ್ಕಂದಗುಪ್ತನ ದೂತನೆಂಬುದಕ್ಕೆ ಪ್ರಮಾಣವೇನು ಏನಾದರೂ ಸಾಕ್ಷ್ಯಾಧಾರಗಳು ಇವೆಯೇ?’ ಎಂದು ಕೇಳಿದನು.

ಚಿತ್ರಕ ಮೌನವಾಗಿ ಗುರುತಿನ ಮುದ್ರೆಯುಂಗುರವನ್ನು ಹೊರ ತೆಗೆದು ಅವನಿಗೆ ಕೊಟ್ಟನು. ತಲೆ ತಗ್ಗಿಸಿಕೊಂಡು ಸ್ವಲ್ಪ ಹೊತ್ತು ಉಂಗುರವನ್ನು ಪರೀಕ್ಷಿಸಿ, ತಲೆ ಎತ್ತಿದನು. ಆಗ ಅವನ ಮುಖ ನೋಡಿ ಚಿತ್ರಕ ಅವಾಕ್ಕಾದನು. ಅವನ ಮುಖದಲ್ಲಿ ಕೋಪಾಗ್ನಿ ಕಾಣಿಸುತ್ತಿಲ್ಲ. ಅದಕ್ಕೆ ಬದಲಾಗಿ ಅವನ ತುಟಿಗಳ ಮೇಲೆ ವಿನೋದದ ನಗೆ ಲಾಸ್ಯವಾಡುತ್ತಿತ್ತು. ಕಿರಾತ ಮೃದು ಮಧುರ ಧ್ವನಿಯಲ್ಲಿ ‘ದೂತ ಮಹಾಶಯರೆ, ತಮಗೆ ಸ್ವಾಗತ. ನಮ್ಮ ಒರಟು ವ್ಯವಹಾರದಿಂದ ಬೇಸರಪಟ್ಟುಕೊಳ್ಳಬೇಡಿರಿ. ಯುದ್ಧದ ಸಮಯದಲ್ಲಿ ಯಾರಾದರೂ ಹೊಸಬರು ದುರ್ಗಪ್ರವೇಶಿಸಿದರೆ, ಅಂಥವರನ್ನು ಪರೀಕ್ಷಿಸಬೇಕಾಗುತ್ತದೆ. ತಾವು ನನ್ನ ಬೆದರಿಕೆಗೆ ಮಣಿದು ಹೆದರಿದ್ದರೆ, ಉಂಗುರವಿದ್ದರೂ ಕೂಡ, ತಾವು ದೂತರಲ್ಲ, ಶತ್ರುಗಳ ಗುಪ್ತಚರರೆಂದು ತಿಳಿಯುತ್ತಿದ್ದೆ. ಅದಿರಲಿ ತಮ್ಮ ವ್ಯವಹಾರದಿಂದ ನನಗೆ ಸಂದೇಹ ನಿವಾರಣೆಯಾಯಿತು. ಬನ್ನಿ, ಕುಳಿತುಕೊಳ್ಳಿರಿ’ ಎಂದನು.

ಚಿತ್ರಕ ಕಿರಾತನ ಮಾತಿಗೆ ಮರುಳಾಗಲಿಲ್ಲ. ಕಿರಾತನು ನನಗೆ ಭಯ ತೋರಿಸಲು ಹೋಗಿ ವಿಫಲನಾದ ಬಳಿಕ, ಈಗ ಬೇರೆ ಮಾರ್ಗ ಹಿಡಿದ್ದಾನೆಂದು ಚಿತ್ರಕನಿಗೆ ಭಾಸವಾಯಿತು. ಆದ್ದರಿಂದ ಅವನು ಮತ್ತಷ್ಟು ಎಚ್ಚರಿಕೆ ವಹಿಸಿದನು. ಕಿರಾತ ಕೋಪಿಷ್ಠ ಹಾಗೂ ಕ್ರೂರಿಯಷ್ಟೇ ಅಲ್ಲ ಕಪಟತೆಯಲ್ಲಿಯೂ ನಿಸ್ಸೀಮ. ಇಬ್ಬರೂ ಆಸೀನರಾದ ಮೇಲೆ ಕಿರಾತನು ‘ಸಮ್ರಾಟರು ಯಾವ ಸುದ್ದಿ ಕಳುಹಿಸಿದ್ದಾರೆ? ಬರೆಹ, ಪತ್ರ ಏನಾದರೂ ಇದೆಯೇ?’ ಎಂದು ಕೇಳಿದನು.

ಚಿತ್ರಕ- (ತಿರಸ್ಕಾರದಿಂದ) ಇಲ್ಲ ಸಮ್ರಾಟರು ಸಾಮಾನ್ಯ ದುರ್ಗಾಧಿಪನಿಗೆ ಪತ್ರ ಬರೆಯುವುದಿಲ್ಲ. ಮೌಖಿಕ ಸುದ್ದಿ ಅಷ್ಟೆ. ಕಿರಾತನು ಈ ಅವಮಾನವನ್ನು ವಿಧಿಯಿಲ್ಲದೆ ನುಂಗಿಕೊಂಡನು.

ಚಿತ್ರಕ ‘ವಿಟಂಕದ ರಾಜ ರಟ್ಟು ಧರ್ಮಾದಿತ್ಯರು ಚಷ್ಟನ ದುರ್ಗದಲ್ಲಿದ್ದಾರೆಂದು ಸಮ್ರಾಟರಿಗೆ ಸುದ್ದಿ ಬಂದಿದೆ-’

ಕಿರಾತ- (ಚಕಿತನಾಗಿ) ಈ ಸುದ್ದಿ ಎಲ್ಲಿಂದ ಬಂದಿತು?

ಚಿತ್ರಕ- ಕುಮಾರ ಭಟ್ಟಾರಿಕಾ ರಟ್ಟಾ ಯಶೋಧರಾ ಅವರಿಂದ ಕಿರಾತನಿಗೆ ಸ್ವಲ್ಪ ಕಸಿವಿಸಿಯಾಯಿತು. ಅವನು ಸ್ವಲ್ಪ ಹೊತ್ತು ಸುಮ್ಮನಿದ್ದು. ‘ಸರಿ ಆಮೇಲೆ, ಹೇಳಿರಿ’ ಎಂದನು.

ಚಿತ್ರಕ- ತಾವು ಬಲಾತ್ಕಾರವಾಗಿ ಧರ್ಮಾದಿತ್ಯರನ್ನು ದುರ್ಗದಲ್ಲಿ ಸೆರೆಯಲ್ಲಿಟ್ಟಿದ್ದೀರೆಂದು ಸಮ್ರಾಟರಿಗೆ ಗೊತ್ತಾಗಿದೆ.

ಕಿರಾತ- (ಆಶ್ಚರ್ಯ ಸೂಚಿಸುತ್ತ) ನಾನು ಸೆರೆಯಲ್ಲಿಟ್ಟಿದೇನೆಯೇ! ಎಂಥ ಮಾತು! ಧರ್ಮಾದಿತ್ಯರು ನಮ್ಮ ರಾಜರು, ನಮ್ಮ ಪ್ರಭುಗಳು
ಚಿತ್ರಕ- (ನೀರಸ ಧ್ವನಿಯಲ್ಲಿ) ಕುಮಾರ ಭಟ್ಟಾರಿಕಾ ರಟ್ಟಾ ಯಶೋಧರಾ ಅವರಿಗೂ ಕೂಡ ತಾವು ಕಪಟ- ಪತ್ರ ಕಳುಹಿಸಿಕೊಟ್ಟು, ಅವರನ್ನು ದುರ್ಗಕ್ಕೆ ಕರೆಸಿಕೊಳ್ಳುವ ಪ್ರಯತ್ನ ಮಾಡಿದ್ದೀರಿ-

ಕಿರಾತ- (ನಿಟ್ಟುಸಿರು ಬಿಟ್ಟು) ಎಲ್ಲರೂ ನಮ್ಮನ್ನು ತಪ್ಪು ತಿಳಿದಿದ್ದಾರೆ. ಇದು ದುರ್ದೈವವಲ್ಲದೆ ಬೇರೇನು? ಧರ್ಮಾದಿತ್ಯರು ತಾವೇ ಸ್ವತಃ ತಮ್ಮ ಮಗಳನ್ನು ನೋಡಬೇಕೆಂದು ಉತ್ಸುಕರಾಗಿದ್ದಾರೆ

ಚಿತ್ರಕ- ಅದೇನೆ ಇರಲಿ. ಸಮ್ರಾಟ್ ಸ್ಕಂದಗುಪ್ತರು ‘ಕೂಡಲೆ ವಿಟಂಕ ರಾಜರನ್ನು ನಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದ್ದಾರೆ. ಸಮ್ರಾಟರು ಅವರನ್ನು ಕಣ್ಣಾರೆ ನೋಡಬೇಕಂತೆ.

ಕಿರಾತ- ಆದರೆ ವಿಟಂಕ ರಾಜರು ನಮ್ಮ ಅಧೀನರಲ್ಲ. ನಾವು ಅವರ ಅಧೀನರು. ಸಮ್ರಾಟರನ್ನು ಕಾಣುವುದು ಬಿಡುವುದು ಅವರ ಇಚ್ಛೆ.
ಚಿತ್ರಕ- ಹಾಗಾದರೆ ವಿಟಂಕರಾಜರಿಗೇ ಸಮ್ರಾಟರ ಆದೇಶ ತಿಳಿಸುತ್ತೇನೆ. ಅವರು ಎಲ್ಲಿದ್ದಾರೆ.

ಕಿರಾತ- ಅವರು ಈ ಭವನದಲ್ಲಿಯೇ ಇದ್ದಾರೆ. ಆದರೆ ದುಃಖದ ವಿಷಯವೆಂದರೆ ಅವರು ಬಹಳ ಅಸ್ವಸ್ಥರಾಗಿದ್ದಾರೆ. ಅವರನ್ನು ತಾವು ಭೇಟಿ ಮಾಡಲಾರಿರಿ.

ಇಬ್ಬರೂ ಸ್ವಲ್ಪ ಹೊತ್ತು ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ದುರುಗುಟ್ಟಿ ನೋಡಿದರು. ಆದರೆ ಕಿರಾತನ ನೋಟ ವಿಚಲಿತವಾಗಲಿಲ್ಲ. ಕೊನೆಗೆ ಚಿತ್ರಕನು ‘ಹಾಗಾದರೆ ತಾವು ಸಮ್ರಾಟರ ಆಜ್ಞೆಯನ್ನು ಪಾಲಿಸಲು ಸಮ್ಮತಿಸುತ್ತಿಲ್ಲ ಎಂದು ತಿಳಿದುಕೊಳ್ಳಲೇ?’ ಎಂದನು.

ಕಿರಾತ- (ಬೇಸರದ ಧ್ವನಿಯಲ್ಲಿ) ದೂತ ಮಹಾಶಯರೆ, ತಾವು ನಮ್ಮನ್ನು ತಪ್ಪಾಗಿ ತಿಳಿದಿದ್ದೀರಿ. ನಾವು ಅಸಹಾಯಕರು. ಧರ್ಮಾದಿತ್ಯರು ನಮ್ಮ ರಾಜರು. ನಮಗೆ ತಂದೆ ಸಮಾನರು. ಅವರ ಜೀವಕ್ಕೆ ಸಂಚಕಾರ ಒಡ್ಡಿ ನಾನು ಅವರ
ಭೇಟಿ ಮಾಡಿಸಲಾರೆ. ವೈದ್ಯರು ‘ಅವರು ಯಾವುದೇ ಉದ್ವೇಗಕ್ಕೆ ಒಳಗಾದರೆ ಅವರ ಪ್ರಾಣಕ್ಕೇ ಅಪಾಯ’ ಎಂದು ನಮ್ಮನ್ನು ಎಚ್ಚರಿಸಿದ್ದಾರೆ.

ಚಿತ್ರಕ- (ಕ್ಷಣಕಾಲ ಚಿಂತಿಸಿ) ಮಹಾರಾಜರ ಜೊತೆಯಲ್ಲಿ ಅವರ ಆಪ್ತ ಸಚಿವರೂ ಬಂದಿದ್ದರು. ಅವರ ಹೆಸರು ಹರ್ಷ ಎಂದು ಅವರೆಲ್ಲಿದ್ದಾರೆ?

ಸ್ಕಂದಗುಪ್ತನ ದೂತನ ಕಡೆಯಿಂದ ಈ ರೀತಿಯ ಪ್ರಶ್ನೆ ಬರುತ್ತದೆ ಎಂದು ಕಿರಾತನು ಊಹಿಸಿಯೂ ಇರಲಿಲ್ಲ. ಇದನ್ನು ಕೇಳಿ ಗಾಬರಿಗೊಂಡನು. ಅನಂತರ ಅವನು ಆತುರಾತುರವಾಗಿ ‘ಹರ್ಷ ಬಂದಿದ್ದೇನೋ ನಿಜ. ಆದರೆ ಅವರು ನಿನ್ನೆ ಕಪೋತಕೂಟಕ್ಕೆ ವಾಪಸು ಹೋದರು’ ಎಂದರು.

‘ಮತ್ತೆ ನಕುಲ? ಹಾಗೂ ಅವರ ಸಂಗಡಿಗರು?’

‘ರಾಜಕನ್ಯೆ ರಟ್ಟಾ ಯಶೋಧರಾ ಬಂದಿಲ್ಲವೆಂದು ನೋಡಿ ಅವರೂ ಕೂಡ ಹಿಂದಿರುಗಿದರು.’

ಕಿರಾತನು ಸುಳ್ಳು ಹೇಳುತ್ತಿರುವುದು. ಚಿತ್ರಕನಿಗೆ ಗೊತ್ತಾಯಿತು. ಹರ್ಷ ಹಾಗೂ ನಕುಲ ಮತ್ತು ಅವನ ಸಂಗಡಿಗರು ದುರ್ಗದಲ್ಲಿಯೇ ಯಾವುದೋ ಗುಪ್ತಸ್ಥಳದಲ್ಲಿ ಸೆರೆಯಾಳಾಗಿದ್ದಾರೆಂದೂ ಅವನಿಗೆ ಅನ್ನಿಸಿತು. ಅವನು ನಿಟ್ಟುಸಿರು ಬಿಟ್ಟು ಮೇಲೆದ್ದನು. ‘ದುರ್ಗಾಧಿಪ ಮಹಾಶಯರೆ, ನಮ್ಮ ದೌತ್ಯ ಕಾರ್ಯ ಮುಗಿಯಿತು. ಸಮ್ರಾಟರಿಗೆ ಎಲ್ಲ ವಿಷಯಗಳನ್ನು ವಿಶದವಾಗಿ ತಿಳಿಸುತ್ತೇನೆ. ಆಮೇಲೆ ಅವರ ನಿರ್ಣಯಕ್ಕೆ ಬಿಟ್ಟದು. ‘ಅವರ ಆಜ್ಞೆಯನ್ನು ಮೀರಿದರೆ ಅವರು ಸ್ವತಃ ಬಂದು ಸಾವಿರ ಆನೆಗಳ ಮೂಲಕ ದುರ್ಗವನ್ನು ನೆಲಸಮ ಮಾಡುವರು’ ಎಂದು ತಮಗೆ ತಿಳಿಸಲು ಹೇಳಿದ್ದರು. ಆ ವಿಷಯವನ್ನು ತಮಗೆ ತಿಳಿಸುವುದು ಉಚಿತವೆಂದು ಭಾವಿಸಿ ತಮಗೆ ಹೇಳಿದ್ದೇನೆ’ ಎಂದು ಎಚ್ಚರಿಸಿದನು.

ಚಿತ್ರಕನು ಬಾಗಿಲ ಕಡೆಗೆ ಮುಖ ಮಾಡಿ ಹೊರಡಲನುವಾದನು.

‘ದೂತ ಮಹಾಶಯರೆ!’ ಎಂದು ಕಿರಾತ ಚಿತ್ರಕನನ್ನು ಕೂಗಿದನು.

ಚಿತ್ರಕನ ಬಳಿಗೆ ಕಿರಾತನೇ ಬಂದು ನಿಂತನು. ಅವನ ಧ್ವನಿ ಮರ್ಮಾಹತವಾಗಿತ್ತು. ಆದರೆ ಮುಖಭಾವದಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ.

‘ತಮಗೆ ನನ್ನ ಮಾತಿನಲ್ಲಿ ನಂಬಿಕೆ ಬರುತ್ತಿಲ್ಲ. ಆದರೆ ಸ್ವಲ್ಪ ವಿಚಾರ ಮಾಡಿ ನೋಡಿರಿ. ಮಹಾಪರಾಕ್ರಮಶಾಲಿಗಳಾದ ಸಮ್ರಾಟರ ಕೋಪಕ್ಕೆ ಪಾತ್ರನಾಗುವುದರಿಂದ ನನಗಾಗುವ ಪ್ರಯೋಜನವಾದರೂ ಏನು? ನಿಜವಾಗಿಯೂ ನಿರುಪಾಯನಾಗಿ ನಾನು-’ ಎಂದು ಕಿರಾತ ಹೇಳಲು ಹೋದನು.

ಚಿತ್ರಕ- ಆ ವಿಷಯ ಸಮ್ರಾಟರ ವಿವೇಚನೆಗೆ ಬಿಟ್ಟಿದ್ದು.

ಕಿರಾತ- ದೂತ ಮಹಾಶಯರೆ, ತಮ್ಮಲ್ಲಿ ನನ್ನದೊಂದು ಪ್ರಾರ್ಥನೆ ತಾವು ಕೆಲವು ದಿನ ಕಾಯಬೇಕು. ಈಗಲೆ ಹಿಂದಿರುಗಿ ಹೋಗಬೇಡಿ. ಈ ಮಧ್ಯೆ ಧರ್ಮಾದಿತ್ಯರ ಆರೋಗ್ಯ ಸುಧಾರಿಸಿದರೆ, ತಾವು ಅವರನ್ನು ಭೇಟಿ ಮಾಡಿ ಮುಂದಿನ ಕಾರ್ಯವನ್ನು ನಿರ್ಧರಿಸಬಹುದು. ನಮ್ಮ ಜವಾಬ್ದಾರಿಯೂ ಸ್ವಲ್ಪ ಕಡಿಮೆಯಾಗುತ್ತದೆ.

ಮತ್ತೆ ಇದಾವ ಹೊಸ ಕುಟಿಲೋಪಾಯ? ಚಿತ್ರಕ್ಷಣಕಾಲ ಚಿಂತಿಸಿ ‘ನಾನು ನಾಳೆ ಸಂಜೆಯವರೆಗೂ ಕಾಯುತ್ತೇನೆ. ಅದಕ್ಕಿಂತ ಹೆಚ್ಚು ಸಮಯ ಕೊಡಲಾರೆ’ ಎಂದನು.

ಕಿರಾತ ಬೇಸರ ಮಾಡಿಕೊಂಡು ‘ಏನು ನಾಳೆ ಸಂಜೆಯವರೆಗೆ ಮಾತ್ರವೇ! ಒಳ್ಳೆಯದು ತಮ್ಮ ಇಷ್ಟದಂತೆಯೇ ಆಗಲಿ ತಾವೆಲ್ಲರೂ ದುರ್ಗದ ಒಳಗೇ ತಂಗಿದ್ದರೆ ಚೆನ್ನಾಗಿತ್ತು. ನನಗೂ ಸಂತೋಷವಾಗುತ್ತಿತ್ತು. ಆದರೆ ದುರ್ಗದ ಒಳಗೆ ಜಾಗ ಸಾಲದು ಮರುಸಿಂಹ, ದೂತ ಶ್ರೇಷ್ಠರನ್ನು ದುರ್ಗದ ಹೊರಗಡೆಗೆ ಕರೆದುಕೊಂಡು ಹೋಗು’ ಎಂದು ಹೇಳಿದನು.

ಮರುಸಿಂಹ ಕ್ರೂರ ದೃಷ್ಟಿಯಿಂದ ಚಿತ್ರಕನ ಕಡೆ ನೋಡಿದನು. ಆನಂತರ ಒಂದು ಮಾತನ್ನೂ ಖರ್ಚು ಮಾಡದೆ ಹೊರಗಡೆಗೆ ಹೋಗಲು ಮೊದಲು ಮಾಡಿದನು. ಚಿತ್ರಕ ಅವನನ್ನು ಹಿಂಬಾಲಿಸಿದನು. ಭವನದ ಹೊಸ್ತಿಲವರೆಗೂ ಬಂದ ಚಿತ್ರಕನು ಒಂದು ಬಾರಿ ಹಿಂದಿರುಗಿ ನೋಡಿದನು. ಕಿರಾತನು ಬಾಗಿಲ ಬಳಿ ನಿಂತಿದ್ದನು. ಅವನ ಮುಖ ಶಾಂತವಾಗಿರದೆ ಕ್ರೌರ್ಯ ಹೊರಹೊಮ್ಮುತ್ತಿತ್ತು. ನಾಲ್ಕು ಕಣ್ಣುಗಳು ಪರಸ್ಪರ ಸಂಧಿಸಿದ ಮೇಲೆ ಕಿರಾತನು ಮತ್ತೆ ಕೊಠಡಿಯ ಒಳಕ್ಕೆ ಹೋದನು.

ಮುಂದುವರೆಯುವುದು….

Related post

Leave a Reply

Your email address will not be published. Required fields are marked *