ಹಿಂದಿನ ಸಂಚಿಕೆಯಿಂದ….
ಚಿತ್ರಕನು ಮರದ ತೋಪಿಗೆ ಬಂದಾಗ ಸೂರ್ಯಾಸ್ತವಾಗುತ್ತಿತ್ತು. ಗುಲಿಕನಿಗೆ ಎಲ್ಲ ವಿಷಯವನ್ನು ತಿಳಿಸಿದ ಕೂಡಲೆ, ಗುಲಿಕನು ಮೀಸೆಯ ಮೇಲೆ ಕೈಯಾಡಿಸುತ್ತ ‘ಹುಂ ಅಸಭ್ಯ ಬರ್ಬರನಿಗೆ ಯಾವುದೋ ದುರಭಿ ಸಂಧಿ ಇರಬೇಕು. ರಾತ್ರಿಯೆಲ್ಲ ಎಚ್ಚರಿರಬೇಕು. ಅವನು ಅನಿರೀಕ್ಷಿತವಾಗಿ ಆಕ್ರಮಣ ಮಾಡಬಹುದು’ ಎಂದನು.
ಕಿರಾತನಲ್ಲಿ ಯಾವುದೋ ದುರಾಲೋಚನೆ ಇದೆ ಎಂದು ಚಿತ್ರಕನಿಗೂ ಸಂದೇಹ ಇದ್ದೇ ಇತ್ತು. ಆದರೆ ಇರುಳಿನಲ್ಲಿ ಆಕ್ರಮಣ ಮಾಡಬಹುದೆಂದು ಅವನಿಗೆ ಅನ್ನಿಸುತ್ತಿಲ್ಲ. ಬೇರೆ ಏನೋ ಉದ್ದೇಶವಿಟ್ಟುಕೊಂಡು ಕಾಲಹರಣ ಮಾಡುತ್ತಿರಬಹುದು. ಆದರೆ ಆ ಉದ್ದೇಶವೇನಿರಬಹುದು? ಚಿತ್ರಕನ ಸೈನ್ಯ ವಾಪಸ್ಸು ಹೋಗದೆ ಇಲ್ಲಿಯೇ ಇದ್ದರೆ ಕಿರಾತನಿಗಾಗುವ ಅನುಕೂಲವೇನು? ಕಿರಾತನು ಧರ್ಮಾದಿತ್ಯನ ಹತ್ಯೆ ಮಾಡಿದ್ದಾನೆಯೆ? ಅಥವಾ ಹತ್ಯೆ ಮಾಡಬೇಕೆಂದಿದ್ದಾನೆಯೆ? ಇರಲಾರದು. ಬಯಕೆ ಇದ್ದರೂ ಹಾಗೆ ಮಾಡುವ ಸಾಹಸ ಮಾಡಲಾರ. ಹಾಗಾದರೆ ಏನು?
ಗುಲಿಕ- ‘ದಂಡೇನ ಗೋ- ಗಾರ್ಧಭೌ’- ಅವನು ಕೈಗೆ ಸಿಕ್ಕಲಿ ಲಾಠಿ ಔಷಧಿಯಿಂದ ಸರಿ ಮಾಡುತ್ತೇನೆ. ಅದಿರಲಿ ಈಗ ಮಾತ್ರ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಈಗ ಅದರ ಅಗತ್ಯತೆ ಇದೆ. ನಾನು ಹತ್ತು ಜನ ಸೈನಿಕರೊಂದಿಗೆ ಮಧ್ಯರಾತ್ರಿಯವರೆಗೂ ಪಹರೆ ಕಾಯುತ್ತೇನೆ. ಉಳಿದ ರಾತ್ರಿಯೆಲ್ಲ ನೀನು ಪಹರೆ ಇರು.
ಸಂಜೆಯಾದ ಮೇಲೆ ಮರದ ಕೆಳಗೆ ಕಂಬಳಿ ಹಾಸಿ ಚಿತ್ರಕ ಮಲಗಿದನು. ದೇಹ ಮತ್ತು ಮನಸ್ಸು ಬಳಲಿದ್ದರಿಂದ ಬಹುಬೇಗ ನಿದ್ದೆ ಹೋದನು.
ಮಧ್ಯರಾತ್ರಿಯಲ್ಲಿ ಗುಲಿಕ ಬಂದು ಅವನನ್ನು ಎಬ್ಬಿಸಿದನು. ಚಿತ್ರಕನು ಎದ್ದು ನಿಂತ ಮೇಲೆ ಗುಲಿಕ ಅದೇ ಕಂಬಳಿಯ ಮೇಲೆ ಮಲಗಿ, ಒಂದು ನಿಮಿಷದೊಳಗಾಗಿ ನಿದ್ದೆ ಹೋದನು. ಸ್ವಲ್ಪ ಹೊತ್ತಿನ ನಂತರ ಗೊರಕೆ ಹೊಡೆಯಲು ಮೊದಲು ಮಾಡಿದನು.
ಮರದ ತೋಪಿನಲ್ಲಿ ಗಾಢಾಂಧಕಾರ. ಸುತ್ತಲೂ ಸೈನಿಕರು ನೆಲದ ಮೇಲೆ ಮಲಗಿ ನಿದ್ದೆ ಹೋಗುತ್ತಿದ್ದರು. ಮರದ ನೆರಳಿನಿಂದ ಹೊರಗೆ ಬಂದು ಚಿತ್ರಕ ಮೈಯೆಲ್ಲ ಕಣ್ಣಾಗಿ ಮರದ ತೋಪಿನಲ್ಲಿ ಸುತ್ತಾಡಿದನು. ಭೂಮಿ ಸಮತಟ್ಟಾಗಿಲ್ಲ. ಅಲ್ಲಲ್ಲಿ ದೊಡ್ಡ ದೊಡ್ಡ ಬಂಡೆಗಳು ಮೇಲೆದ್ದಿದ್ದವು. ಅವು ಕತ್ತಲಿನಲ್ಲಿ ಕಾಣುತ್ತಿರಲಿಲ್ಲ. ಹತ್ತು ಜನ ಸೈನಿಕರು ಅಲ್ಲಲ್ಲಿ ನಿಂತು ಸದ್ದಿಲ್ಲದೆ ಪಹರೆ
ಕಾಯುತ್ತಿದ್ದರು. ತೋಪಿನ ಹಿಂಭಾಗದಲ್ಲಿ ಕುದುರೆಗಳು ತಮ್ಮ ಪಾಡಿಗೆ ತಾವು ನಿಂತಿದ್ದವು. ಚಿತ್ರಕ ಹೊರಭಾಗವನ್ನು ಗಮನವಿಟ್ಟು ನೋಡಿದರೂ ಏನೂ ಕಾಣಿಸುತ್ತಿಲ್ಲ. ಕತ್ತಲಿನಲ್ಲಿ ಎಲ್ಲವೂ ಒಂದೇ ರೀತಿ ಕಾಣಿಸುತ್ತಿದ್ದವು. ಆಕಾಶದ ಮಧ್ಯೆ ಕೋಟೆಯ ಬುರುಜುಗಳು ದಟ್ಡವಾದ ಅಂಧಕಾರದ ಹಾಗೆ ಗೋಚರಿಸುತ್ತಿದ್ದವು.
ಮೈಯೆಲ್ಲ ಕಣ್ಣಾಗಿ ಪಹರೆ ಕಾಯುತ್ತಿದ್ದರೂ ಯಾರಿಂದಲೂ ಏನೂ ಮಾಡಲಾಗುತ್ತಿಲ್ಲ. ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಚಿತ್ರಕ ನಿಧಾನವಾಗಿ ತೋಪಿನ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿದ್ದಾನೆ. ದುರ್ಗ ನಿಸ್ತಬ್ಧವಾಗಿದೆ. ಸ್ವಲ್ಪವೂ ಸದ್ದಿಲ್ಲ. ಚಿತ್ರಕನನ್ನು ಅಸಂಬದ್ಧ ಚಿಂತೆಗಳು ಕಾಡುತ್ತಿದ್ದವು. ರಟ್ಟಾ… ಸ್ಕಂದಗುಪ್ತ…ಕಿರಾತ…
ಬರುಬರುತ್ತ ಚಂದ್ರೋದಯವಾಯಿತು. ಪೂರ್ಣಚಂದ್ರನಲ್ಲ, ಕ್ಷಯ ಚಂದ್ರನ ಬೆಳಕು. ಆದರೂ ಸ್ವಲ್ಪವೇ ಬೆಳಕಿನಲ್ಲಿ ಸುತ್ತಲಿನ ವಸ್ತುಗಳು ಅಸ್ಪಷ್ಟವಾಗಿ ಕಾಣುತ್ತಿದ್ದವು.
ಪಹರೆ ಕಾಯುತ್ತಿದ್ದ ಹತ್ತು ಜನ ಸೈನಿಕರು ತೋಪಿನ ಮರಕ್ಕೆ ಒರಗಿಕೊಂಡೋ ಇಲ್ಲವೆ ಬಂಡೆಗಳಿಗೆ ಬೆನ್ನು ಕೊಟ್ಟೋ ನಿಂತಿದ್ದರು.. ಅವರ ಕಣ್ಣುಗಳು ಮುಚ್ಚಿದ್ದವು. ಇವುಗಳನ್ನೆಲ್ಲ ಚಿತ್ರಕ ಮೇಲ್ವಿಚಾರಣೆಯ ಸಂದರ್ಭದಲ್ಲಿ ಗಮನಿಸಿದ. ಅವನಿಗೆ ಆಶ್ಚರ್ಯವೇನೂ ಆಗಲಿಲ್ಲ. ನಿಂತುಕೊಂಡೇ ನಿದ್ರಿಸುವ ಅಭ್ಯಾಸ ಪ್ರತ್ಯೇಕ ಸೈನಿಕನಿಗೂ ಇರುವುದು ಚಿತ್ರಕನಿಗೆ ತಿಳಿದಿತ್ತು. ಸ್ವಲ್ಪ
ಶಬ್ದವಾದರೂ ಸಾಕು ಅವರು ಎಚ್ಚರಗೊಳ್ಳುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಅವನು ಅವರನ್ನು ಎಬ್ಬಿಸಲಿಲ್ಲ.
ಹತ್ತು ಮಾರು ದೂರದಲ್ಲಿ ತೋರಣ ದ್ವಾರ ಹಾಗೂ ಕೋಟೆಯು ಬೆಳದಿಂಗಳ ಮಂದ ಪ್ರಕಾಶದಲ್ಲಿ ಛಾಯಾಚಿತ್ರದಂತೆ ಕಾಣಿಸುತ್ತಿತ್ತು. ಅಕಾರಣವಾಗಿ ಚಿತ್ರಕ ಏಕೋ ಏನೋ ಆ ಕಡೆ ನೋಡಿದನು. ಚಿತ್ರಕನ ಮನಸ್ಸಿಗೆ ಒಂದು ಕ್ಷಣ ಒಂದು ಚಿಂತೆ ಕಾಡಿತು- ‘ಈ ದುರ್ಗವು ನ್ಯಾಯವಾಗಿ ಧರ್ಮವಾಗಿ ನನ್ನದು’.
ಅರ್ಧದೂರ ಹೋಗುತ್ತಲೆ ಚಿತ್ರಕ ಚಕಿತನಾಗಿ ನಿಂತು ಬಿಟ್ಟನು. ಆಮೇಲೆ ಬಹುಬೇಗ ಒಂದು ಬಂಡೆಯ ಹಿಂದೆ ಅವಿತುಕೊಂಡನು, ಅವನ ಕಣ್ಣಿನ ನೋಟ ಸ್ವಾಭಾವಿಕವಾಗಿ ಬಹಳ ಚುರುಕು. ಅವನು ನೋಡಿದ ದುರ್ಗದ ಬಾಗಿಲು ನಿಶ್ಶಬ್ದವಾಗಿ ತೆರೆಯಿತು. ಸ್ವಲ್ಪ ಭಾಗ ಮಾತ್ರ ತೆರೆದ ಮೇಲೆ ಒಬ್ಬ ಅಶ್ವಾರೋಹಿ ಹೊರಗೆ ಬಂದ.
ಚಿತ್ರಕ ಬಿಡುಗಣ್ಣು ಬಿಟ್ಟು ರೆಪ್ಪೆ ಹೊಡೆಯದೆ ನೋಡಿದನು. ಮತ್ತಾರೂ ಅಶ್ವಾರೋಹಿ ಹೊರಬರಲಿಲ್ಲ. ದುರ್ಗದ ಬಾಗಿಲು ಮತ್ತೆ ಮುಚ್ಚಿತು. ಮಂದವಾದ ಬೆಳಕಿನಲ್ಲಿ ಹೊರಬಂದ ಅಶ್ವಾರೋಹಿಯ ಮುಖ ಅಷ್ಟು ದೂರದಿಂದ ನೋಡಲಾಗಲಿಲ್ಲ. ಅಶ್ವಾರೋಹಿಯು ಎಡಗಡೆಗೆ ಕುದುರೆಯ ಮುಖವನ್ನು ತಿರುಗಿಸಿ, ಸದ್ದಿಲ್ಲದೆ ನೆರಳಿನ ಹಾಗೆ, ಕೋಟೆಗೋಡೆಯ ಪಕ್ಕದಿಂದ ಹೊರಟನು. ಅಶ್ವಾರೋಹಿಯ ಭಾವಭಂಗಿಯನ್ನು ನೋಡಿದರೆ ಅವನು ಯಾರಿಗೂ ಗೊತ್ತಾಗದ ಹಾಗೆ ಕದ್ದು ಮುಚ್ಚಿ ಹೋಗುತ್ತಿರುವಂತೆ ಭಾಸವಾಗುತ್ತಿತ್ತು. ಕುದುರೆಯ ಗೊರಸಿನಿಂದ ಸ್ವಲ್ಪವೂ ಶಬ್ದ ಹೊರಬರುತ್ತಿಲ್ಲ. ಚಿತ್ರಕ ಏಕಾಗ್ರದೃಷ್ಟಿಯಿಂದ
ಗಮನವಿಟ್ಟು ನೋಡಿದನು. ಕುದುರೆಯ ಗೊರಸುಗಳ ಮೇಲೆ ಬಟ್ಟೆಯ ಹಾಗೆ ಏನೋ ಕಟ್ಟಿರುವ ಹಾಗೆ ಕಾಣಿಸಿತು. ಆದ್ದರಿಂದಲೇ ಶಬ್ದವಾಗುತ್ತಿಲ್ಲ. ಈ ರಾತ್ರಿಯಲ್ಲಿ ಈ ಅಶ್ವಾರೋಹಿ ಎಲ್ಲಿಗೆ ಹೋಗುತ್ತಿರಬಹುದು-?
ಇದ್ದಕ್ಕಿದ್ದಂತೆ ಮಿಂಚಿನ ಹಾಗೆ ಚಿತ್ರಕನಿಗೆ ಏನೋ ಹೊಳೆಯಿತು. ಒಂದು ಕ್ಷಣದೊಳಗಾಗಿ ಕಿರಾತನ ಸಮಸ್ತ ಕುಟಿಲ ದುರಭಿಸಂಧಿ ಬೆಳಕಿಗೆ ಬಂದಿತು! ಅಶ್ವಾರೋಹಿಯು ಕಳ್ಳನ ಹಾಗೆ ಎಲ್ಲಿಗೆ ಹೋಗುತ್ತಿದ್ದಾನೆಂಬುದು ಚಿತ್ರಕನಿಗೆ ಗೊತ್ತಾಯಿತು.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)