ಉಪಸಂಹಾರ
ದುರ್ಗದಿಂದ ಸುಮಾರು ಎರಡು ಹರಿದಾರಿ ಉತ್ತರಕ್ಕೆ ಪ್ರಯಾಣ ಮಾಡಿದ ಅಶ್ವಾರೋಹಿಯು ಕುದುರೆಯನ್ನು ನಿಲ್ಲಿಸಿದನು. ಬೆಟ್ಟದ ತಪ್ಪಲು ಇಲ್ಲಿ ಇಕ್ಕಟ್ಟಾಗಿದೆ. ಸುತ್ತಲೂ ಮೇಲೆ ಕೆಳಗೆ ಬಂಡೆ ಕಲ್ಲುಗಳು ಹರಡಿವೆ. ಎಚ್ಚರಿಕೆಯಿಂದ (ಜಾಗರೂಕತೆಯಿಂದ) ಕುದುರೆಯನ್ನು ಓಡಿಸಬೇಕಾಗುತ್ತದೆ. ದಾರಿಯು ವಿಘ್ನ ಪರಂಪರೆಯಿಂದ ಕೂಡಿರುವುದರಿಂದ ಅಶ್ವಾರೋಹಿಯು ಚಂದ್ರೋದಯವಾದ ಮೇಲೆ ಪ್ರಯಾಣ ಹೊರಟಿದ್ದಾನೆ. ಅದೂ ಅಲ್ಲದೆ ಬೆಳದಿಂಗಳಿದ್ದರೂ ವೇಗವಾಗಿ ಕುದುರೆಯನ್ನು ಓಡಿಸುವುದು ಸಾಧ್ಯವಿಲ್ಲ. ಶಬ್ದ ನಿವಾರಣೆಗಾಗಿ ಕುದುರೆಯ ಕಾಲುಗಳಿಗೆ ಬಟ್ಟೆ ಬಿಗಿಯಲಾಗಿದೆ. ಹೀಗಿರುವಾಗ ಕುದುರೆಯು ವೇಗವಾಗಿ ಹೋಗಲು ಹೇಗೆ ಸಾಧ್ಯ!
ಅಶ್ವಾರೋಹಿಯು ಹಿಂದಿರುಗಿ ತೀಕ್ಷ್ಣ ದೃಷ್ಟಿಯಿಂದ ದೂರದವರೆಗೂ ನೋಡಿದನು. ಕಲ್ಲುಗುಂಡುಗಳು ಸುತ್ತಲೂ ಕರಿಯ ನೆರಳಿನ ಹಾಗೆ ಕಾಣುತ್ತಿದ್ದವು. ಎಲ್ಲಾ ಸ್ಥಿರವಾಗಿವೆ. ಚಲನೆ ಇಲ್ಲ. ಅಶ್ವಾರೋಹಿಯು ಕುದುರೆಯಿಂದ ಕೆಳಗಿಳಿದನು. ಕುದುರೆಯ ಗೊರಸುಗಳಿಗೆ ಕಟ್ಟಿರುವ ಬಟ್ಟೆಯನ್ನು ಬಿಚ್ಚಿ ಕುದುರೆಯನ್ನು ವೇಗವಾಗಿ ಓಡಿಸಬೇಕೆಂದಿದ್ದಾನೆ. ಶಬ್ದವಾದರೂ ಕೇಳಿಸಿಕೊಳ್ಳಲು ಯಾರೂ ಇಲ್ಲ.
ಮೂರು ಕಾಲುಗಳ ಬಟ್ಟೆ ಬಿಚ್ಚಿ ಅಶ್ವಾರೋಹಿಯು ನಾಲ್ಕನೆಯ ಕಾಲಿಗೆ ಕೈ ಹಾಕುತ್ತಿದ್ದ ಹಾಗೆಯೇ, ಕುದುರೆಯು ಭಯದಿಂದ ಬೆಚ್ಚಿ ಸ್ವಲ್ಪ ದೂರ ಸರಿಯಿತು. ಅಶ್ವಾರೋಹಿಯು ದಿಗ್ಭ್ರಮೆಗೊಂಡು ಎದ್ದು ಹಿಂದಿರುಗಿ ನೋಡಿದನು. ಅಷ್ಟರಲ್ಲಿ ಅವನ ಎದೆಗೆ ಸರಿಯಾಗಿ ಕತ್ತಿಯ ತುದಿಯನ್ನು ಹಿಡಿದು ಚಿತ್ರ ನಿಂತಿದ್ದಾನೆ. ಅವನು ‘ಮರುಸಿಂಹ, ನೀನು ಅಶುಭ ಗಳಿಗೆಯಲ್ಲಿ ಪ್ರಯಾಣ ಹೊರಟಿದ್ದೀಯೆ. ನನ್ನ ಜೊತೆಯಲ್ಲಿ ಹಿಂದಿರುಗಿ ಬಾ’ ಎಂದು ಗರ್ಜಿಸಿದನು.
ಮರುಸಿಂಹನ ಎದೆಯ ಮೇಲೆ ಕಬ್ಬಿಣದ ಕವಚವಿತ್ತು. ಅವನು ಒಂದೇ ನೆಗೆತಕ್ಕೆ ಹಿಂದಕ್ಕೆ ನೆಗೆದು ತನ್ನ ಸೊಂಟದಿಂದ ಕತ್ತಿ ಎಳೆದುಕೊಂಡನು. ಚಿತ್ರಕನ ಕತ್ತಿ ಅವನ ಎದೆಯನ್ನು ಭೇದಿಸಲಿಲ್ಲ. ಅವನನ್ನು ಸ್ವಲ್ಪ ದೂರಕ್ಕೆ ತಳ್ಳಿತು ಅಷ್ಟೆ!
ಆಗ ಇಬ್ಬರ ನಡುವೆ ಚಂದ್ರನ ಮಬ್ಬಾದ ಬೆಳಕಿನಲ್ಲಿ ಕತ್ತಿಯುದ್ಧ ನಡೆಯಿತು. ಹೋರಾಟದ ಕೊನೆಯಲ್ಲಿ ಚಿತ್ರಕನು ಮರುಸಿಂಹನ ಎದೆಯ ಮೇಲೆ ಕುಳಿತು ಅವನ ಎರಡು ಕೈಗಳನ್ನೂ ಅವನ ಪೇಟದ ಬಟ್ಟೆಯಿಂದಲೇ ಕಟ್ಟಿ ಹಾಕಿದನು. ಆಮೇಲೆ ಅವನನ್ನು ನಿಲ್ಲಿಸಿ, ಪೇಟದ ಬಟ್ಟೆಯನ್ನು ಅವನ ಸೊಂಟಕ್ಕೆ ಬಿಗಿದನು. ಪೇಟದ ಬಟ್ಟೆಯನ್ನು ಎಡಗೈಯಲ್ಲಿ, ಕತ್ತಿಯನ್ನು ಬಲಗೈಯಲ್ಲಿ ಹಿಡಿದು ‘ಇನ್ನು ನಡೆ. ಕಾಲುನಡಿಗೆಯಲ್ಲಿಯೇ ಹಿಂದಿರುಗಬೇಕು. ನೀನು ಮುಂದೆ ನಡೆ, ನಾನು ಹಿಂದೆ ಇರುತ್ತೇನೆ. ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡ-’ ಎಂದನು.
ಮರುಸಿಂಹ ಇಲ್ಲಿಯವರೆಗೂ ಒಂದು ಮಾತೂ ಆಡಿರಲಿಲ್ಲ. ಆಗಲೂ ಮಾತನಾಡಲಿಲ್ಲ. ಅವರು ಮರಗಳ ತೋಪಿಗೆ ಬರುವ ಹೊತ್ತಿಗೆ ಬೆಳಕು ಹರಿಯುತ್ತಿತ್ತು. ಆದರೂ ರಾತ್ರಿಯ ಕತ್ತಲು ಇನ್ನೂ ಸಂಪೂರ್ಣವಾಗಿ ತೊಲಗಿರಲಿಲ್ಲ. ಚಿತ್ರಕನು ಗುಟ್ಟಾಗಿ ಕಣ್ಮರೆಯಾಗಿರುವ ವಿಷಯ ಈ ನಡುವೆ ಎಲ್ಲರ ಗಮನಕ್ಕೂ ಬಂದಿತ್ತು. ಶಿಬಿರದಲ್ಲಿ ಕಳವಳ ಉಂಟಾಗಿತ್ತು. ಎಲ್ಲರೂ ಎದ್ದು ಕುಳಿತಿದ್ದರು. ಚಿತ್ರಕ ಸೆರೆಯಾಳಿನ ಜೊತೆಯಲ್ಲಿ ಹಿಂದಿರುಗಿ ಬರುತ್ತಲೇ ಗುಲಿಕ ಚಿತ್ರಕನ ಬಳಿಗೆ ಓಡಿ ಬಂದು ‘ಏನಿದು? ಎಲ್ಲಿಗೆ ಹೋಗಿದ್ದೆ?
ಇವನಾರು?’ ಎಂದು ಹೇಳಿದನು.
ಚಿತ್ರಕ- ಇವರು ಚಷ್ಟನ ದುರ್ಗದ ದುರ್ಗಪಾಲ- ಮರುಸಿಂಹ ಮೊದಲು ಇವನನ್ನು ಮರಕ್ಕೆ ಕಟ್ಟಿ ಹಾಕು. ಆಮೇಲೆ ಎಲ್ಲವನ್ನೂ ಹೇಳುತ್ತೇನೆ.
ಮರುಸಿಂಹನನ್ನು ಮರಕ್ಕೆ ಕಟ್ಟಿ ಹಾಕಿ, ಇಬ್ಬರು ಸೈನಿಕರು ಬಿಚ್ಚುಗತ್ತಿ ಹಿಡಿದು ಅವನ ಮುಂದೆ ನಿಂತರು. ಆಗ ನಿಶ್ಚಿಂತನಾಗಿ, ಗುಲಿಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ರಾತ್ರಿ ನಡೆದ ಎಲ್ಲ ಘಟನೆಗಳನ್ನು ವಿವರವಾಗಿ ಹೇಳಿದನು.
ಗುಲಿಕ- ನಿನ್ನ ಊಹೆಯೇ ನಿಜವಾಯಿತು. ಆದರೆ ಕೇವಲ ಊಹೆಯ ಮೇಲೆಯೇ ನಿರ್ಭರರಾದರೆ ಏನೂ ಪ್ರಯೋಜನವಾಗಲಾರದು. ಈ ಹೂಣನ ಬಾಯಿಂದಲೇ ಎಲ್ಲಾ ವಿಷಯ ತಿಳಿಯಬೇಕು.
ಚಿತ್ರಕ- ಇವನ ಬಾಯಿಂದ ವಿಷಯ ತಿಳಿದುಕೊಂಡರಾಯಿತು.
ಗುಲಿಕ- ಒಂದು ವೇಳೆ ಇವರು ಸಹಜವಾದ ರೀತಿಯಲ್ಲಿ ಹೇಳದಿದ್ದರೆ ಬೇರೆ ಮಾರ್ಗ ಹಿಡಿಯೋಣ.
ಆಗ ಸೂರ್ಯೋದಯವಾಯಿತು. ಚಿತ್ರಕ ಮತ್ತು ಗುಲಿಕ ಮರುಸಿಂಹನ ಹತ್ತಿರಕ್ಕೆ ಹೋಗಿ ಪ್ರಶ್ನೆ ಕೇಳಲು ಮೊದಲು ಮಾಡಿದರು. ಮರುಸಿಂಹ ಬಾಯಿ ಬಿಡಲಿಲ್ಲ. ಒಂದು ಪ್ರಶ್ನೆಗೂ ಉತ್ತರ ಕೊಡಲಿಲ್ಲ. ಹೊತ್ತು ಏರುತ್ತಾ ಹೋಯಿತು. ಬಾಯಿ ಮಾತಿಗೆ ಜಗ್ಗದಿರುವುದನ್ನು ಕಂಡು ಗುಲಿಕನು ಲಾಠಿ ಔಷಧಿಯ ಪ್ರಯೋಗಮಾಡಿದನು. ಆದರೆ ಮರುಸಿಂಹ ಬಾಯಿ ಬಿಚ್ಚಲಿಲ್ಲ. ದೈಹಿಕ ಶಿಕ್ಷೆ ಹೆಚ್ಚುತ್ತಾ ಹೋಯಿತು. ಪ್ರಾಣ ತೆಗೆಯುವುದೊಂದನ್ನು ಬಿಟ್ಟು ಏನೆಲ್ಲ ಚಿತ್ರ ಹಿಂಸೆ ನೀಡಬಹುದೋ ಅದೆಲ್ಲ ಮಾಡಿ ಯಾಯಿತು.
ಮಧ್ಯಾಹ್ನವಾಯಿತು. ಆದರೂ ಮರುಸಿಂಹ ಬಾಯಿ ಬಿಡದಿದ್ದಾಗ ಗುಲಿಕನು ಗರ್ಜಿಸುತ್ತ ‘ಈ ಹತಬುದ್ಧಿ ಹೂಣನು ಪ್ರಶ್ನೆಗೆ ಉತ್ತರ ಕೊಡುವ ಹಾಗೆ ಕಾಣುತ್ತಿಲ್ಲ. ಆದ್ದರಿಂದ ಇವನನ್ನು ಪ್ರಾಣಸಹಿತ ಉಳಿಸಿ ಪ್ರಯೋಜನವಿಲ್ಲ. ಇವನನ್ನು ಕುದುರೆಯಿಂದ ಸೀಳಿಸಿ ಎಸೆಯುವುದೇ ಸರಿಯಾದ ಶಿಕ್ಷೆ. ಆಗ ಒಬ್ಬ ಹೂಣನಾದರೂ ಕಡಿಮೆಯಾಗುತ್ತಾನೆ’ ಎಂದನು.
ಕುದುರೆಯಿಂದ ಸೀಳಿಸಿ ಎಸೆಯುವ ಪ್ರಕ್ರಿಯೆ ಬಹಳ ಸುಲಭ. ಯಾವ ವ್ಯಕ್ತಿಯನ್ನು ಸೀಳಿಸಿ ಎಸೆಯಬೇಕೋ ಅವನ ಎರಡು ಕಾಲುಗಳಿಗೂ ಬೇರೆ ಬೇರೆ ಹಗ್ಗ ಬಿಗಿದು, ಹಗ್ಗಗಳ ಕೊನೆಗಳನ್ನು ಎರಡು ಕುದುರೆಗಳಿಗೆ ಕಟ್ಟಿ, ಅನಂತರ ಎರಡು ಕುದುರೆಗಳನ್ನೂ ಒಂದೇ ಸಲಕ್ಕೆ ಬೇರೆ ಬೇರೆ ದಿಕ್ಕುಗಳಿಗೆ ವೇಗವಾಗಿ ಓಡಿಸಿದರೆ ಮುಗಿಯಿತು.
ಮರುಸಿಂಹನನ್ನು ನೆಲದ ಮೇಲೆ ಮಲಗಿಸಿ, ಅವನ ಮೊಳಕಾಲಿಗೆ ಹಗ್ಗ ಬಿಗಿಯುತ್ತಿದ್ದ ಹಾಗೆಯೇ ಅವನು ಮೊದಲನೆಯ ಸಲ ಮಾತನಾಡಿದನು.
‘ಪ್ರಶ್ನೆಗೆ ಉತ್ತರ ಕೊಡುತ್ತೇನೆ’ ಎಂದನು.
ಇಬ್ಬರು ಸೈನಿಕರು ಅವನನ್ನು ಮೇಲೆತ್ತಿ ನಿಲ್ಲಿಸಿದರು. ಆ ನಂತರ ಪ್ರಶ್ನೋತ್ತರ ಪ್ರಾರಂಭವಾಯಿತು.
ಪ್ರಶ್ನೆ- ಹಿಂದಿನ ದಿನದ ರಾತ್ರಿ ಗುಟ್ಟಾಗಿ ಎಲ್ಲಿಗೆ ಹೊರಟಿದ್ದೆ?
ಉತ್ತರ- ಹೂಣ ಶಿಬಿರಕ್ಕೆ
ಪ್ರಶ್ನೆ- ಹೂಣ ಶಿಬಿರ ಎಷ್ಟು ದೂರದಲ್ಲಿದೆ?
ಉತ್ತರ- ಇಲ್ಲಿಂದ ಮೂವತ್ತು ಹರಿದಾರಿ ದೂರದಲ್ಲಿ ವಾಯವ್ಯಮೂಲೆಯಲ್ಲಿ.
ಪ್ರಶ್ನೆ- ದಾರಿ ಇದೆಯೇ?
ಉತ್ತರ- ಕಳ್ಳದಾರಿ ಇದೆ.
ಪ್ರಶ್ನೆ- ನೀನು ಹೂಣರಿಗೆ ದಾರಿ ತೋರಿಸಿ ಅವರನ್ನು ಕರೆ ತರುವುದಕ್ಕಾಗಿ ಹೊರಟಿದ್ದೆಯೇನು?
ಉತ್ತರ- ಹೌದು.
ಪ್ರಶ್ನೆ- ಯಾರು ನಿನ್ನನ್ನು ಕಳುಹಿಸಿದವರು?
ಉತ್ತರ- ದುರ್ಗಾಧಿಪ
ಪ್ರಶ್ನೆ- ನೀನು ಸ್ವ ಇಚ್ಛೆಯಿಂದ ಹೋಗುತ್ತಿರಲಿಲ್ಲವೆಂಬುದಕ್ಕೆ ಸಾಕ್ಷಿ ಏನು?
ಉತ್ತರ- ದುರ್ಗಾಧಿಪರ ಪತ್ರವಿದೆ.
ಪ್ರಶ್ನೆ- ಎಲ್ಲಿದೆ ಪತ್ರ?
ಉತ್ತರ- ನನ್ನ ಕತ್ತಿಯ ಒರೆಯ ಒಳಗೆ ಇದೆ.
ಮರುಸಿಂಹನ ಸೊಂಟದಲ್ಲಿ ಇನ್ನೂ ಖಾಲಿ ಒರೆಯು ತೂಗಾಡುತ್ತಿತ್ತು. ಆ ಒರೆಯನ್ನು ಒಡೆದು ಅದರ ಒಳಗಿದ್ದ ಪತ್ರ ಹೊರ ತೆಗೆಯಲಾಯಿತು. ಅತಿ ಚಿಕ್ಕದಾದ ಪತ್ರ. ಅದರ ಮೇಲೆ ತೀರಾ ಸಣ್ಣ ಅಕ್ಷರದಲ್ಲಿ ಬರೆದ ಬರೆಹ. ಪತ್ರ ಓದಿದ ಮೇಲೆ ಮರುಸಿಂಹನನ್ನು ಮತ್ತೆ ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಗುಲಿಕನು ತನ್ನ ಸೈನಿಕರನ್ನು ಕರೆದು ‘ಇವನಿಗೆ ಹೊಟ್ಟೆಗೆ ತಿನ್ನಲು ಏನಾದರೂ ಕೊಡಿ. ಆದರೆ ಕಟ್ಟು ಬಿಚ್ಚಬೇಡ. ಇವನನ್ನು ಆಮೇಲೆ ವಿಚಾರಿಸಿಕೊಳ್ಳುತ್ತೇನೆ’ ಎಂದನು.
ಆಮೇಲೆ ಚಿತ್ರಕ ಹಾಗೂ ಗುಲಿಕ ಬೇರೆ ಕಡೆ ಏಕಾಂತ ಸ್ಥಳಕ್ಕೆ ಹೋಗಿ ಬಹಳ ಹೊತ್ತು ಪರಾಮರ್ಶೆ ಮಾಡಿದರು. ಸಮಾಲೋಚನೆಯ ಫಲವಾಗಿ ಇಬ್ಬರು ಅಶ್ವಾರೋಹಿಗಳನ್ನು ಸ್ಕಂದಗುಪ್ತನ ಶಿಬಿರಕ್ಕೆ ಕಳುಹಿಸಿಕೊಡಲಾಯಿತು. ಗುರುತರವಾದ ರಾಜಕಾರ್ಯವಿರುವುದರಿಂದ ತಡಮಾಡದೆ ಸಮ್ರಾಟರೇ ಖುದ್ದಾಗಿ ಬರುವ ಕೃಪೆ ಮಾಡಬೇಕೆಂದು ಪ್ರಾರ್ಥಿಸಲಾಯಿತು.
ಅನಂತರ ಸಮಾಲೋಚನೆಯಂತೆ ಮಧ್ಯಾಹ್ನದ ಹೊತ್ತಿಗೆ ಚಿತ್ರಕನೊಬ್ಬನೇ ದುರ್ಗದ ತೋರಣದ ಮುಂಭಾಗಕ್ಕೆ ಹೋಗಿ ನಿಂತನು. ‘ದುರ್ಗದ ಒಡೆಯನನ್ನು ನೋಡಬೇಕಾಗಿದೆ’ ಎಂದು ದ್ವಾರಪಾಲಕರಿಗೆ ತಿಳಿಸಿದನು. ಅವರು ತಡ ಮಾಡದೆ ಒಪ್ಪಿಗೆ ಸೂಚಿಸಿದರು. ಬಾಗಿಲು ತೆರೆಯಿತು. ಚಿತ್ರಕ ಒಳಗಡೆಗೆ ಹೋದನು.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)