ಹಿಂದಿನ ಸಂಚಿಕೆಯಿಂದ…
ಉಜ್ಜಯಿನಿ ಅಥವಾ ಪಾಟಲಿಪುತ್ರದ ಹಾಗೆ ವಿಶಾಲವಲ್ಲದಿದ್ದರೂ ಈ ಕಪೋತಕೂಟವು ಪರಿಶುದ್ಧವೂ ಸುಂದರವೂ ಆದ ನಗರವೆನ್ನಲೇಬೇಕು ಎಂದು ಚಿತ್ರಕನಿಗೆ ನಗರ ಪ್ರದಕ್ಷಿಣೆಯ ಸಮಯದಲ್ಲಿ ಅನ್ನಿಸಿತು. ಅವನು ತನ್ನ ಸೈನಿಕ ಜೀವನದ ಓಡಾಟದಲ್ಲಿ ಅನೇಕ ಸ್ಥಳಗಳನ್ನು ನೋಡಿದ್ದನು. ಆದರೆ ಚಿಕ್ಕದಾದ ಏರುತಗ್ಗುಗಳಿಂದ ಕೂಡಿದ ಕಲ್ಲಿನ ಈ ನಗರವು ಅವನ ಮೆಚ್ಚುಗೆಗೆ ಪಾತ್ರವಾಯಿತು.
ಆದರೆ ಈ ಜಾಗದಲ್ಲಿ ಬಹಳ ಕಾಲ ಇರಲು ಸಾಧ್ಯವಿಲ್ಲ. ಬಹಳ ದಿನವಿದ್ದರೆ ಬಂಧನಕ್ಕೊಳಗಾಗುವ ಭಯವಿದೆ. ಇದೇ ಊರಿನಲ್ಲಿ ಆ ಮೂವರೂ ಇದ್ದಾರೆ. ಅದೂ ಅಲ್ಲದೆ ಶಶಿಶೇಖರನೂ ಕಾಡಿನಿಂದ ಹೊರಬರದೇ ಇರಲಾರ ಎಂದು ಚಿತ್ರಕ ಕ್ಷಣಕಾಲ ಮನಸ್ಸಿನಲ್ಲಿ ಚಿಂತಿಸಿದನು.
ಅಷ್ಟರಲ್ಲಿ ರಾತ್ರಿಯಾಯಿತು. ಆಕಾಶದಲ್ಲಿ ಚಂದ್ರ ಹಾಗೂ ಭೂಮಿಯ ಮೇಲೆ ದೀಪಗಳ ಬೆಳಕು. ಅರಮನೆಯ ಮೇಲ್ಭಾಗದಲ್ಲಿ ಕಾಣುವ ದೀಪಮಾಲೆಯು ಮಣಿಮುಕುಟದ ಹಾಗೆ ಶೋಭಿಸುತ್ತಿದೆ. ಅಲ್ಲಿ ಇಲ್ಲಿ ಅಡ್ಡಾಡುತ್ತ ಚಿತ್ರಕನು ಒಂದು ಉದ್ಯಾನದ ಬಳಿಗೆ ಬಂದನು. ಅಲ್ಲಿ ನಾಲ್ಕಾರು ನಾಗರಿಕರು ನಿಂತು ಮಾತನಾಡುತ್ತಿದ್ದರು. ಚಿತ್ರಕನು ಅವರಲ್ಲಿ ಒಬ್ಬನನ್ನು ಮಾತನಾಡಿಸಿ
‘ಅಯ್ಯಾ, ಅದು ಏನು?’ ಎಂದು ಕೇಳಿದನು.
ನಾಗರಿಕ- ‘ಅದು ಅರಮನೆ’
ಅಚ್ಚರಿಯಿಂದ ಅದನ್ನು ನೋಡಿದ ಚಿತ್ರಕ ‘ಅಪೂರ್ವವಾದ ಪ್ರಾಸಾದ! ಮಗಧದ ಅರಮನೆಯೂ ಕೂಡ ಇಷ್ಟು ಸುರಕ್ಷಿತವಾಗಿಲ್ಲ. ರಾಜರು ಅರಮನೆಯಲ್ಲಿ ಇದ್ದಾರೆಯೇ?’ ಎಂದು ಕೇಳಿದನು.
ನಾಗರಿಕ- ಅವರ ಬಾಳಿನಲ್ಲಿ ಒಂದು ಅಘಟಿತ ಘಟನೆ ನಡೆದಿದೆ.
‘ಅಘಟಿತ ಘಟನೆ?’
‘ನೀನು ಕೇಳಿಲ್ಲವೇನು? ರಾಜಕುಮಾರಿಯ ಕುದುರೆಯನ್ನು ಒಬ್ಬ ನೀಚ ಕುಲದ ಕಳ್ಳ ಕದ್ದು ಪಲಾಯನ ಮಾಡಿದ್ದಾನೆ.’
‘ರಾಜಕುಮಾರಿಯ ಕುದುರೆ..?’ ತನಗೆ ಅರಿವಿಲ್ಲದೆಯೇ ಈ ಪ್ರಶ್ನೆ ಚಿತ್ರಕನ ಬಾಯಿಯಿಂದ ಹೊರ ಬಿದ್ದಿತು.
‘ಹೌದು. ರಾಜ ಕುಮಾರಿಯು ಬೇಟೆಗೆ ಹೋಗಿದ್ದಳು. ಜಲಸತ್ರದ ಬಳಿ ಈ ಘಟನೆ ನಡೆಯಿತು. ತಾವೇನು ಬೇರೆ ದೇಶದವರೊ?’ ಎಂದು ಹೇಳಿ ಆ ನಾಗರಿಕನು ಅಚ್ಚರಿಯ ದೃಷ್ಟಿಯಿಂದ ಚಿತ್ರಕನ ಮೈಮೇಲಿದ್ದ ಬೆಲೆ ಬಾಳುವ ಬಟ್ಟೆಗಳ ಕಡೆ ನೋಡಿದನು.
‘ಹೌದು, ನಾನು ಮಗಧದ ನಿವಾಸಿ. ಒಂದು ಕಾರ್ಯನಿಮಿತ್ತ ಇಲ್ಲಿಗೆ ಬಂದಿದ್ದೇನೆ.’
ಚಿತ್ರಕನು ಅಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಮಾತಿನ ಭರದಲ್ಲಿ ಆಕಸ್ಮಿಕವಾಗಿ ಬುದ್ಧಿ ಭ್ರಷ್ಟವಾಗುವ ಸ್ವಭಾವ ಚಿತ್ರಕನದಲ್ಲ. ಆದರೆ ಈಗ ಮಾತನಾಡಿದ ಮೇಲೆ, ಸ್ವಲ್ಪ ತಲೆ ಬಿಸಿ ಮಾಡಿಕೊಂಡು ಅವನ ಚಿತ್ತ ಅತ್ತ ಇತ್ತ ಸುಳಿದಾಡಿತು. ತಾನಾಡಿದ ಮಾತು ಊರೊಳಗೆಲ್ಲ ಪ್ರಚಾರವಾಗುವುದರಲ್ಲಿ ಸಂದೇಹವಿಲ್ಲ. ಆ ಅಶ್ವಾರೋಹಿಯು ರಾಜಕುಮಾರಿಯೆಂದು ಯಾರಿಗೆ ಗೊತ್ತಿತ್ತು! ರಾಜಕನ್ಯೆಯು ಪುರುಷವೇಷದಲ್ಲಿ ಕುದುರೆಯ ಮೇಲೆ ಕುಳಿತು ಬೇಟೆಗೆ ಹೊರಡುವುದು! ಆಶ್ಚರ್ಯವಾಗಿದೆ!
ಚಿತ್ರಕನು ರಾಜಕನ್ಯೆಯ ಮುಖದ ಚಹರೆಯನ್ನು ಎಷ್ಟೇ ಜ್ಞಾಪಿಸಿಕೊಂಡರೂ ಸ್ಪಷ್ಟವಾಗಿ ಮೂಡಲಿಲ್ಲ. ಕಿಶೋರಾವಸ್ಥೆಯ ವ್ಯಕ್ತಿ ಎಂಬುದಷ್ಟೇ ಸ್ಮರಣೆಗೆ ಬಂತು.
ಒಬ್ಬ ಹೆಂಗಸಿನ ಸಂಪತ್ತನ್ನು ಅವನು ಅಪಹರಿಸಿದ್ದನು. ಈ ಭಾವನೆ ಮನಸ್ಸಿಗೆ ಬಂದ ಕೂಡಲೆ ತನ್ನ ಕೃತ್ಯಕ್ಕಾಗಿ ಅವನಿಗೆ ನಾಚಿಕೆಯಾಯಿತು. ಅವನು ತನ್ನ ಭಾಗ್ಯಾನ್ವೇಷಿಯಾದ ಯೋಧ. ಪರದ್ರವ್ಯವನ್ನು ತಿಲಮಾತ್ರವೂ ಬಯಸುವವನಲ್ಲ. ಈ ಭೂಮಿಯಾಗಲೀ ಅದರಲ್ಲಿರುವ ವಸ್ತುಗಳಾಗಲೀ ವೀರಭೋಗ್ಯವೆಂದೂ ಅವನಿಗೆ ಗೊತ್ತು. ಆದರೂ ಹೆಂಗಸರಿಗೆ ಸಂಬಂಧಿಸಿದಂತೆ ಅವನ ವಿಚಾರವೇ ಬೇರೆ. ಅವನ ಜೀವಿತ ಕಾಲದಲ್ಲಿ ಎಂದೂ ಹೆಂಗಸಿಗೆ
ಸೇರಿದ ಯಾವ ವಸ್ತುವನ್ನೂ ಬಲಾತ್ಕಾರವಾಗಿ ಅಪಹರಿಸಿದವನಲ್ಲ. ಅವರೇ ಸ್ವೇಚ್ಛೆಯಿಂದ ಕೊಟ್ಟಿದ್ದನ್ನು ನಗು ಮುಖದಿಂದ ಸ್ವೀಕರಿಸುತ್ತಿದ್ದನೇ ಹೊರತು ಬೇರೆ ಇಲ್ಲ.
ಪುರುಷವೇಷದ ರೂಪ ಹಾಗೂ ಶ್ರೀಮಂತಿಕೆ ಅವನಲ್ಲಿ ಈಷ್ರ್ಯೆಯನ್ನುಂಟು ಮಾಡಿರಬಹುದು. ಜಲಸತ್ರದ ಒಡತಿಯ ಜೊತೆ ಆ ಯುವಕನ ಸಲುಗೆಯು ಅವನ ಪುರುಷತ್ವಕ್ಕೆ ಆಘಾತ ಮಾಡಿರಬಹುದು. ಸುಗೋಪಾಳ ಜೊತೆ ತಾನು ನಡೆದುಕೊಂಡ ಬಗೆಯನ್ನು ಜ್ಞಾಪಿಸಿಕೊಂಡಾಗ ಅವನಿಗೆ ಕಸಿವಿಸಿಯಾಯಿತು. ತನ್ನ ನಡವಳಿಕೆಯಲ್ಲಿ ವಿನೋದವೂ ಬೆರೆತಿತ್ತು. ಆದರೆ ಆ ವಿನೋದವು ಮೇರೆ ಮೀರಿ ಹೇಗೆ ಪ್ರತೀಕಾರದ ರೂಪವನ್ನು ಪಡೆಯಿತು ಎಂಬುದು ಅವನಿಗೆ ತಿಳಿಯಲಿಲ್ಲ. ಹಸಿವಿನಿಂದ ಕಂಗೆಟ್ಟವನು ಆವೇಶಕ್ಕೆ ಒಳಗಾಗಿ ಮಾಡಿ ಅಕಾರ್ಯಕ್ಕೆ ಹೊಟ್ಟೆ ತುಂಬಿದ ಮೇಲೆ ಅದಕ್ಕೆ ಕಾರಣ ಹುಡುಕಲು ಹೊರಟರೆ ಅದು ಸಿಗುವುದಿಲ್ಲ.
ಆಕಾಶದ ಕಡೆಗೆ ನೋಡಿ ಚಿತ್ರಕನು ನಕ್ಕನು. ಜೀವನವನ್ನು ಅವನು ಬಗೆ ಬಗೆಯಾದ ರೂಪಗಳಲ್ಲಿ ಕಂಡಿದ್ದನು. ಅದಕ್ಕಾಗಿ ಪಶ್ಚಾತ್ತಾಪ ಪಡುವುದಾಗಲೀ ಶೋಕಿಸವುದಾಗಲೀ ನಿರರ್ಥಕವೆಂದು ಬಗೆದನು. ನಿಯತಿಯ ಗತಿಯು ಶೋಕಿಸುವುದರಿಂದ ಲೇಶಮಾತ್ರವೂ ಬದಲಾಗುವುದಿಲ್ಲ. ಹಣೆಯ ಬರಹವೇ ಬಲಿಷ್ಠವಾದದು. ‘ಭಾಗ್ಯದೇವಿಯು ತನ್ನ ಸುತ್ತ ಭವಿತವ್ಯದ ಸೂಕ್ಷ್ಮ ಜಾಲವನ್ನು ಹೆಣೆಯಲು ಪ್ರಾರಂಭಿಸಿದ್ದಾಳೆ. ಈ ಬಲೆಯಲ್ಲಿ ಬಡಪಾಯಿ
ಮೀನಿನ ಹಾಗೆ ಸಿಕ್ಕಿ ನನ್ನನ್ನು ಯಾವ ಅದೃಷ್ಟ ದಡದ ಮೇಲೆ ಎಸೆದು ಬಿಡುವಳೊ ಯಾರೂ ಬಲ್ಲರು’ ಎಂದು ಚಿತ್ರಕನು ಮನಸ್ಸಿನಲ್ಲಿಯೇ ಯೋಚಿಸತೊಡಗಿದನು.
ಚಂದ್ರನ ಕಡೆ ಅವನ ದೃಷ್ಟಿ ಬಿದ್ದ ಮೇಲೆ ಅವನಿಗೆ ಚೈತನ್ಯ ಮರಳಿತು. ಗಗನ ಮಧ್ಯದಲ್ಲಿ ಚಂದ್ರ. ರಾತ್ರಿ ಸರಿ ಹೊತ್ತಾಗಿದೆ. ಚಕಿತನಾಗಿ ಅವನು ಸುತ್ತಲೂ ನೋಡಿದ. ಬೌದ್ಧ ಚೈತ್ಯದ ಹತ್ತಿರದಲ್ಲಿ ಎತ್ತರವಾದ ಭೂಮಿಯಲ್ಲಿ ಅವನು ಏಕಾಂಗಿಯಾಗಿ ನಿಂತಿದ್ದಾನೆ. ಈ ಪ್ರದೇಶದಲ್ಲಿ ಮನೆಗಳು ವಿರಳ. ಜನಸಂಚಾರವೂ ಕಡಿಮೆ. ದೂರಕ್ಕೆ ದೃಷ್ಟಿ ಹರಿಸಿ ನೋಡುತ್ತಾನೆ. ಒಂದು ಜಾಗದಲ್ಲಿ ಬೆಳಕು ಜಗಮಗಿಸುತ್ತಿದೆ. ಅನೇಕ ನಾಗರೀಕರು ಒಂದೆಡೆ ಸೇರಿ ಮಾತನಾಡಿಕೊಳ್ಳುತ್ತಿರುವ ಶಬ್ದ ಕಿವಿಗೆ ಬಿತ್ತು.
ಚಿತ್ರಕನಿಗೆ ಸ್ವಲ್ಪ ಹೊತ್ತಿನಿಂದಲೂ ಬಾಯಾರಿಕೆ ಆಗುತ್ತಿತ್ತು. ಆ ಬೆಳಕಿನೆಡೆಗೆ ದೃಷ್ಟಿ ಹರಿಯುತ್ತಲೇ ಅವನ ಬಾಯಾರಿಕೆ ಮತ್ತಷ್ಟು ಹೆಚ್ಚಾಯಿತು. ನಗರದಲ್ಲಿ ಪಾನಗೃಹವಿರುತ್ತದೆ ಎನ್ನುವ ವಿಷಯ ಅವನ ಗಮನಕ್ಕೆ ಈವರೆಗೂ ಬಂದೇ ಇರಲಿಲ್ಲ. ಅದೂ ಅಲ್ಲದೆ ರಾತ್ರಿ ತಂಗುವುದಕ್ಕೆ ಒಂದು ಜಾಗ ಹುಡುಕ ಬೇಕಾಗಿದೆ. ಅವನು ದೀಪದ ಬೆಳಕಿಗೆ ಮಾರುಹೋಗುವ ಪತಂಗದ ಹಾಗೆ ಬೇಗ ಬೇಗ ಆ ಕಡೆಗೆ ಹೆಜ್ಜೆ ಹಾಕಿದನು.
ರಜನಿಯ ಆನಂದ ಧಾರೆ ಆಗ ಕ್ಷೀಣವಾಗಿ ಅಂತಃಸ್ರೋತವಾಗಿ ಹರಿಯಲು ಪ್ರಾರಂಭಿಸಿತು. ಹೂವಿನ ಅಂಗಡಿಗಳಲ್ಲಿ ಹೂಗಳ ಸರಕು ಪ್ರಾಯಃ ಇಲ್ಲವಾಗಿತ್ತು. ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಹೆಂಗಳೆಯರ ಕಣ್ಣುಗಳಲ್ಲಿ ನಿದ್ದೆಯ ಲಕ್ಷಣ ಕಂಡು ಬರುತ್ತಿತ್ತು. ರಾಜ ಬೀದಿಗಳಲ್ಲಿ ಜನರ ಓಡಾಟ, ದಟ್ಟಣೆ ಕ್ಷೀಣವಾಗಿತ್ತು. ಯೌವನಾವಸ್ಥೆಯಲ್ಲಿರುವ ಗಂಡು ಹೆಣ್ಣುಗಳ ಸಮ್ಮಿಲನಕ್ಕೆ ವಾತಾವರಣ ಹದವಾಗಿತ್ತು.
ಹೂವಿನ ರಸದಿಂದ ಆಕರ್ಷಿತವಾದ ದುಂಬಿಗಳು ಹೂವಿನ ಬಳಿಗೆ ಹೋಗುವಂತೆ ಚಿತ್ರಕನೂ ಕೂಡ ಅದೇ ರೀತಿ ಬಾಯಾರಿಕೆಯಿಂದ ಪ್ರೇರಿತನಾಗಿ ಒಂದು ಮದಿರಾ ಗೃಹದ ಮುಂದೆ ಹೋಗಿ ನಿಂತನು. ಮದಿರಾ ಗೃಹದ ಒಳಗೆ ಒಂದು ಎತ್ತರವಾದ ಜಗಲಿಯ ಮೇಲೆ ಕುಳಿತ ಬೋಳು ತಲೆಯ ಮದಿರಾ ವ್ಯಾಪಾರಿ (ಶೌಂಡಿಕ)ಯು ರಾಶಿ ಹಾಕಿದ್ದ ಬೆಳ್ಳಿ ನಾಣ್ಯಗಳನ್ನು ಎಣಿಸುತ್ತಿದ್ದನು. ಚಿತ್ರಕನು ಒಳಹೊಕ್ಕು ಅವನ ಮುಂದೆ ನಿಂತು ಒಂದು ಬಂಗಾರದ ದೀನಾರವನ್ನು ತಿರಸ್ಕಾರದಿಂದ ಅವನ ಮುಂದೆ ಎಸೆದು ‘ಪಾನೀಯ ಕೊಡು’ ಎಂದನು.
ಚಕಿತಗೊಂಡ ಶೌಂಡಿಕನು ಕೈ ಮುಗಿದು ‘ಬರಬೇಕು ಮಹಾಭಾಗ!
ಯಾವ ಪಾನೀಯವನ್ನು ನೀಡಿ ಮಹಾಶಯರಿಗೆ ತೃಪ್ತಿ ನೀಡಲಿ? ಆಸವ-ಸುರೆ-ವಾರುಣಿ-ಮದಿರೆ-ತಮಗೆ ಯಾವ ಪಾನೀಯ ಬೇಕು, ಅಪ್ಪಣೆಯಾಗಬೇಕು.
‘ಉತ್ತಮವಾದ ಮದಿರೆಯನ್ನು ಕೊಡು.’
‘ಅಪ್ಪಣೆಯಾದಂತೆ’
‘ಮಧುಶ್ರೀ’ ಶೌಂಡಿಕನು ತನ್ನ ದಾಸಿಯನ್ನು ಕೂಗಿ ಕರೆದನು. ಕಾಲಂದಿಗೆಯ ಗೆಜ್ಜೆಯನ್ನು ಘಲಿರೆನಿಸುತ್ತ ನಿದ್ದೆಯ ಮಂಪರಿನಲ್ಲಿದ್ದ ಒಬ್ಬ ದಾಸಿ ಬಂದು ನಿಂತಳು. ಶೌಂಡಿಕನು ಅವಳನ್ನು ಕುರಿತು ‘ಆರ್ಯನನ್ನು ಸುಸಜ್ಜಿತ ಕೊಠಡಿಗೆ ಕರೆದುಕೊಂಡು ಹೋಗು. ಉತ್ತಮವಾದ ಮದಿರೆಯನ್ನು ಕೊಟ್ಟು ಆತನ ಸೇವೆ ಮಾಡು’ ಎಂದು ಹೇಳಿದನು.
ದಾಸಿಯು ಚಿತ್ರಕನನ್ನು ಒಂದು ಸಣ್ಣ ಕೊಠಡಿಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿದಳು. ಕೊಠಡಿ ಸುಂದರವಾಗಿತ್ತು. ಸುಸಜ್ಜಿತವಾಗಿತ್ತು. ನೆಲದ ಮೇಲೆ ಶುಭ್ರವಾದ ರತ್ನಗಂಬಳಿ ಹಾಸಿತ್ತು. ಅದರ ಮೇಲೆ ಮೆತ್ತೆಗಳು, ತಾಂಬೂಲಕರಂಕ ಮುಂತಾದುವು ಇಡಲ್ಪಟ್ಟಿದ್ದವು. ನಾಲ್ಕು ಮೂಲೆಗಳಲ್ಲಿಯೂ ದೀಪದ ಕಂಬಗಳಲ್ಲಿ ಬತ್ತಿ ಉರಿಯುತ್ತಿದ್ದವು. ಶ್ರೀಗಂಧದ ವಾಸನೆಯನ್ನು ಬೀರುವ ಅಗರಬತ್ತಿಯ ಧೂಮದ ರೇಖೆಗಳು ಮೇಲೇಳುತ್ತಿದ್ದವು. ಗೋಡೆಯ ಮೇಲೆ ಸಮುದ್ರ ಮಥನದ ಚಿತ್ರ. ಸುರಾಭಾಂಡಕ್ಕಾಗಿ ಸುರಾಸುರದ ಮಧ್ಯೆ ಘೋರ ಸಂಘರ್ಷ ಚಿತ್ರಿತವಾಗಿತ್ತು.
ಚಿತ್ರಕ ಕುಳಿತು ಅತ್ತಿತ್ತ ನೋಡುತ್ತಿರುವಷ್ಟರಲ್ಲಿಯೇ ದಾಸಿಯು ಸದ್ದಿಲ್ಲದೆ ಬಹುಬೇಗ ಮದಿರೆ ತುಂಬಿದ ಹೂಜಿ, ಬಟ್ಟಲು ಹಾಗೂ ಚಿತ್ರ ಬಿಡಿಸಿದ ತಟ್ಟೆಯಲ್ಲಿ ಮತ್ಸ್ಯಾಂಡವನ್ನು ತಂದು ಅವನ ಮುಂದಿರಿಸಿದಳು. ಅನಂತರ ಇನ್ನೂ ಏನಾದರೂ ಆದೇಶ ನೀಡುವನೋ ಎಂಬ ನಿರೀಕ್ಷೆಯಿಂದ ಬಾಗಿಲ ಪಕ್ಕದಲ್ಲಿ ನಿಂತುಕೊಂಡಳು. ಚಿತ್ರಕನು ಒಂದು ಬಟ್ಟಲು ಮದಿರೆಯನ್ನು ಒಂದೇ ಉಸಿರಿಗೆ ಕುಡಿದು ತೃಪ್ತಿಯ ಸಂಕೇತವಾಗಿ ನಿಟ್ಟುಸಿರು ಬಿಟ್ಟು ‘ಸೇವಕಿಯೇ, ನೀನು ಇನ್ನು ಹೊರಡು. ನನಗೆ ಇನ್ನೇನು ಬೇಕಿಲ್ಲ’ ಎಂದು ಹೇಳಿದನು.
ಮಧುಶ್ರೀ (ಸೇವಕಿಯ ಹೆಸರು)ಯು ವಿನಯದಿಂದ ಬಾಗಿಲನ್ನು ಮೆಲ್ಲಗೆ ಮುಚ್ಚಿ ಹೊರಟುಹೋದಳು. ಏಕಾಂಗಿಯಾದ ಚಿತ್ರಕನು ಮತ್ಸ್ಯಾಂಡದ ಜೊತೆಗೆ ಮತ್ತೆ ಒಂದೆರಡು ಬಟ್ಟಲು ಮದಿರೆಯನ್ನು ಕುಡಿದನು. ಬರು ಬರುತ್ತ ಅವನ ಕಣ್ಣಿಗೆ ಜೋಂಪು ಹತ್ತಿತು. ತಲೆ ತುಂಬ ಸ್ವಪ್ನಸುಂದರಿಯರ ಕಾಲುಗೆಜ್ಜೆ ಸಪ್ಪಳ ಕೇಳಿಸತೊಡಗಿತು. ಅವನು ಹಾಗೆಯೇ ಮೆತ್ತೆಯ ಮೇಲೆ ಒರಗಿ ಕಾಲುಗಳನ್ನು ಚಾಚಿದನು.
ಮುಂದುವರೆಯುವುದು…
ಎನ್. ಶಿವರಾಮಯ್ಯ (ನೇನಂಶಿ)
ಚಿತ್ರ ಸಂಗ್ರಹಣೆ : ಮಂಜುಳಾ ಸುದೀಪ್