ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 15

ಹಿಂದಿನ ಸಂಚಿಕೆಯಿಂದ…

ಮದಿರಾಪಾನದಿಂದ ಉಂಟಾದ ಅಮಲಿನಿಂದ ಅವನ ಚಿಂತೆಗಳೆಲ್ಲವೂ ಆವಿಯಾಗಿ ಹೋದವು. ಯಾವುದೋ ನವಚೈತನ್ಯ ಅವನಲ್ಲಿ ತುಂಬಿದಂತಾಗಿ ಅವನ ಮನಸ್ಸು ಉಯ್ಯಾಲೆಯಾಡುತ್ತಿತ್ತು. ಅವನು ತನ್ನ ಬೆರಳುಗಳ ಕಡೆ ದೃಷ್ಟಿ ಹಾಯಿಸಿದನು. ಉಂಗುರ ಕಣ್ಣಿಗೆ ಬಿತ್ತು. ಆ ಉಂಗುರವನ್ನು ತನ್ನ ಕಣ್ಣುಗಳ ಹತ್ತಿರ ಹಿಡಿದುಕೊಂಡು ಪರೀಕ್ಷಿಸಿ ನೋಡಿದನು. ಆಗ ಕಾಡಿನ ಮಧ್ಯೆ ಶಶಿಶೇಖರನ ಜೊತೆ ನಡೆದ ಮಾತುಕತೆ ನೆನಪಿಗೆ ಬಂದಿತು.

ಮನಸ್ಸಿನಲ್ಲಿಯೇ ಮೃದುವಾಗಿ ನಗುನಗುತ್ತ ಅವನು ಎದ್ದು ಕುಳಿತನು. ಸೊಂಟದಿಂದ ಹಣದ ಥೈಲಿಯನ್ನು ಕೈಗೆ ತೆಗೆದುಕೊಂಡು ಅದರ ಬಾಯಿಯನ್ನು ಅಗಲ ಮಾಡಿ ಅದರೊಳಗಿನ ಪದಾರ್ಥಗಳನ್ನು ಒಂದೊಂದಾಗಿ ಹೊರ ತೆಗೆದು ನೋಡುತ್ತ ಹೋದನು. ಸ್ವರ್ಣಪ್ರಸೂ ಚೀಲದ ಸಮಸ್ತ ಸಂಪತ್ತನ್ನು ಇಲ್ಲಿಯವರೆಗೂ ಹೊರ ತೆಗೆದು ಪರೀಕ್ಷಿಸಿ ನೋಡುವುದಕ್ಕೆ ಅವಕಾಶವಾಗಿರಲಿಲ್ಲ.

ಹಣೆಗೆ ಇಟ್ಟುಕೊಳ್ಳುವ ಚಂದನವನ್ನು ನೋಡಿ ಅವನಿಗೆ ನಗುವನ್ನುತಡೆಯಲಾಗಲಿಲ್ಲ. ಬಾಚಣಿಗೆಯನ್ನು ಎತ್ತಿ ಹಿಡಿದು ಗಟ್ಟಿಯಾಗಿ ನಗಲು ಪ್ರಾರಂಭಿಸಿದನು. ಏಲಕ್ಕಿ ಹಾಗೂ ಲವಂಗವನ್ನು ಬಾಯಿಗೆ ಹಾಕಿಕೊಂಡು ಅಗಿದನು. ಕೊನೆಗೆ ಅರಗಿನ ಮುದ್ರೆ ಒತ್ತಿದ ಸುರಳಿ ಸುತ್ತಿದ ಪತ್ರವನ್ನು ತೆರೆದು ಗಂಭೀರವಾಗಿ ಓದಲು ಪ್ರಾರಂಭಿಸಿದನು. ಮಗಧ ಬರೆಹ. ವಿಟಂಕ
ರಾಜನ ಬಳಿಗೆ ಕಳುಹಿಸಿಕೊಟ್ಟದ್ದು. ಓದುತ್ತ ಓದುತ್ತ ಚಿತ್ರಕನು ಅದರಲ್ಲಿಯೇ ಮಗ್ನನಾದನು.

ಇದೇ ವೇಳೆಯಲ್ಲಿ ಬಾಗಿಲನ್ನು ಸ್ವಲ್ಪ ಓಸರಿಸಿ ಯಾರೋ ಒಳಗೆ ಇಣುಕಿ ನೋಡಿದರು. ಕಾಡಿಗೆ ಹಚ್ಚಿದ ಒಂದು ಕಣ್ಣು ಹಾಗೂ ಮುಖದ ಸ್ವಲ್ಪ ಭಾಗ ಮಾತ್ರ ಕಾಣಿಸಿತು. ಚಿತ್ರಕನನ್ನು ನೋಡಿದ ಕಾಡಿಗೆ ಹಚ್ಚಿದ ಕಣ್ಣು ಕ್ರಮೇಣ ಅರಳಿತು. ಆ ನಂತರ ನಿಧಾನವಾಗಿ ಬಾಗಿಲು ಮುಚ್ಚಿತು. ಚಿತ್ರಕ ಪತ್ರವನ್ನು ಓದುವುದರಲ್ಲಿ ಮಗ್ನನಾಗಿದ್ದನು. ಅವನು ಯಾವುದನ್ನೂ ಕಾಣನು. ಕಂಡಿದ್ದರೂ ಅವನು ಗುರುತಿಸುತ್ತಿರಲಿಲ್ಲ.

ಇಣುಕಿ ನೋಡಿದವಳು ಸುಗೋಪ ಇರಬಹುದು. ತನ್ನ ಗಂಡನನ್ನು ಹುಡುಕುತ್ತ ಅನೇಕ ಮದಿರಾಗೃಹಗಳಲ್ಲಿ ಹುಡುಕಿ, ಕೊನೆಗೆ ಇಲ್ಲಿಗೆ ಬಂದಿದ್ದಳು. ಅವಳನ್ನು ನೋಡಿದ ಕೂಡಲೆ ಮದಿರಾಗೃಹದ ಶೌಂಡಿಕನು ‘ಪ್ರಪಾ ಪಾಲಿಕೆ, ನಿನ್ನ ಪತಿ ದೇವರು ಈ ದಿನ ಇಲ್ಲಿ ಇಲ್ಲ’ ಎಂದು ಹೇಳಿದನು.

ಸುಗೋಪಾ- ‘ನಿನ್ನ ಮಾತಿನಲ್ಲಿ ನಂಬಿಕೆ ಇಲ್ಲ’ ನಾನೇ ಹುಡುಕಿ ನೋಡುತ್ತೇನೆ.’
‘ಒಳ್ಳೆಯದು, ಹಾಗೆಯೇ ಮಾಡು, ನೋಡು’.

ಆಗ ಈ ಕೊಠಡಿ ಆ ಕೊಠಡಿಯಲ್ಲಿ ಹುಡುಕುತ್ತ ಹುಡುಕುತ್ತ ಬಂದು ಕೊಠಡಿಯಲ್ಲಿ ಇಣುಕಿ ನೋಡಿದ ಕೂಡಲೆ ಆಕೆಯ ಕಣ್ಣುಗಳನ್ನು ಅವಳು ನಂಬದಾದಳು. ವೇಷಭೂಷಣ ಮಾತ್ರ ಬೇರೆ. ಆದರೆ ಅದೇ ದುರಾಚಾರಿ ಅಶ್ವಚೋರನೇ ಹೌದು. ಅನುಮಾನವಿಲ್ಲ.

ಸ್ವಲ್ಪ ಹೊತ್ತು ಸುಗೋಪಾ ಬಾಗಿಲ ಹೊರಗೆ ನಿಂತಿದ್ದು, ನಂತರ ಸದ್ದು ಮಾಡದೆ ಹೆಜ್ಜೆ ಹಾಕುತ್ತ ಶೌಂಡಿಕನ ಹತ್ತಿರ ಹೋದಳು. ‘ಮಂಡೂಕ, ನಗರ ಪಾಲನಿಗೆ ಸುದ್ದಿ ಮುಟ್ಟಿಸು’ ಎಂದು ಪಿಸುಮಾತಿನಲ್ಲಿ ಹೇಳಿದಳು.

ಗಾಬರಿಗೊಂಡ ಮಂಡೂಕನು ‘ಏನು ಸಮಾಚಾರ? ಏನು ನಡೆಯಿತು?’ಎಂದು ಕೇಳಿದನು.
‘ಕಳ್ಳ, ಈ ದಿನ ಕುಮಾರಿಯ ಕುದುರೆಯನ್ನು ಕದ್ದ ಕಳ್ಳ ಈ ಕೊಠಡಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದಾನೆ.

ಮಂಡೂಕನ ಮುಖದ ಮೇಲೆ ಭಯದ ಛಾಯೆ ಮೂಡಿತು. ದುಷ್ಯಂತ ಮಾಡಿದ ಅಪರಾಧಿಗೆ ಮದಿರಾಗೃಹದಲ್ಲಿ ಆಶ್ರಯ ನೀಡಿದ ಕಾರಣಕ್ಕಾಗಿ ಶೌಂಡಿಕನಿಗೆ ಕಠಿಣ ಶಿಕ್ಷೆ ವಿಧಿಸಬಹುದು. ‘ಸರ್ವನಾಶವಾಯಿತು. ನನಗೆ ಏನೂ ಗೊತ್ತಿಲ್ಲ’ ಎಂದು ಹೇಳಿದನು.

‘ಅದಕ್ಕೇ ನಾನು ಹೇಳುವುದು. ನಿನಗೆ ಪ್ರಾಣ ಉಳಿಸಿಕೊಳ್ಳಬೇಕೆಂಬ ಆಸೆ ಇದ್ದರೆ ಬೇಗ ಹೋಗಿ ನಗರಪಾಲನನ್ನು ಕರೆದುಕೊಂಡು ಬಾ’

‘ಈ ಸರಿ ರಾತ್ರಿಯಲ್ಲಿ ನಗರ ಪಾಲನು ಎಲ್ಲಿರುತ್ತಾನೆ. ಅವನು ಮನೆ ಬಾಗಿಲು ಹಾಕಿಕೊಂಡು ನಿದ್ದೆ ಮಾಡುತ್ತಿರುತ್ತಾನೆ. ಅವನ ಬಂಗಾರದ ನಿದ್ದೆಯನ್ನು ಕೆಡಿಸಿ ನಾನು ನನ್ನ ಕಾಲುಗಳನ್ನು ಹಗ್ಗದಿಂದ ಬಿಗಿಸಿಕೊಳ್ಳಲೇ?’

ಸುಗೋಪಾ ಒಂದು ಗಳಿಗೆ ಚಿಂತಿಸಿದಳು

‘ಹಾಗಾದರೆ ಒಂದು ಕೆಲಸ ಮಾಡು. ಒಂದಿಬ್ಬರು ರಾತ್ರಿ ಪಹರೆಯಲ್ಲಿರುವ ನಗರ ರಕ್ಷಕರನ್ನು ಕರೆದುಕೊಂಡು ಬಾ. ಅವರು ಈ ರಾತ್ರಿ ಕಳ್ಳನನ್ನು ಬಂಧಿಸಿ ಇಟ್ಟಿರಲಿ. ನಾಳೆ ಬೆಳಗ್ಗೆ ಮಹಾಪ್ರತೀಹಾರನ ಕೈಗೆ ಒಪ್ಪಿಸೋಣ.’

‘ಅದು ಸರಿಯಾದ ಮಾತು’ ಎಂದು ಹೇಳಿ ಗಾಬರಿಗೊಂಡ ಮಂಡೂಕನು ಹೊರ ಹೊರಟನು.

ಇನ್ನೂ ಹೆಚ್ಚು ದೂರ ಹೋಗಿರಲಿಲ್ಲ. ರಾತ್ರಿ ಪಹರೆಯ ನಗರ ರಕ್ಷಕರು ಬೀದಿ ಬೀದಿಗಳಲ್ಲಿ ಪಹರೆ ಮಾಡುತ್ತ ಇದ್ದರು. ಒಂದು ಬೀಡಾ ಅಂಗಡಿಯ ಮುಂಭಾಗದಲ್ಲಿ ನಿಂತು ಇಬ್ಬರು ಪಹರೆಯವರು ರಾತ್ರಿಯ ಉಪಾಹಾರಕ್ಕಾಗಿ ಆಹಾರವನ್ನು ಕೊಳ್ಳುತ್ತಿದ್ದರು. ಮಂಡೂಕನಿಂದ ವಿಷಯ ತಿಳಿದ ಅವರು ಅವನ ಜೊತೆಯಲ್ಲಿ ಹೊರಟರು.

ಸುಗೋಪಾ ಒಂದೆರಡು ಮಾತುಗಳಲ್ಲಿಯೇ ವಿಷಯ ಮನದಟ್ಟು ಮಾಡಿಕೊಟ್ಟಳು. ನಾಲ್ಕು ಜನರೂ ಚಿತ್ರಕನು ಉಳಿದುಕೊಂಡಿದ್ದ, ಕೊಠಡಿಯ ಬಾಗಿಲನ್ನು ತೆರೆದು ಒಳಗೆ ಹೋದರು. ಚಿತ್ರಕನು ಪತ್ರವನ್ನು ಓದಿ ಮುಗಿಸಿ, ಚೀಲವನ್ನು ಸೊಂಟಕ್ಕೆ ಬಿಗಿದುಕೊಂಡು, ಬಟ್ಟಲಿಗೆ ಮದಿರೆಯನ್ನು ಸುರಿದುಕೊಂಡು ಕುಡಿಯುತ್ತಿದ್ದನು. ಆಯುಧ ಪಾಣಿಗಳಾದ ಇಬ್ಬರು ಸಿಪಾಯಿಗಳನ್ನು ತನ್ನ ಮುಂಭಾಗದಲ್ಲಿ ಕಂಡು ‘ನಿಮಗೆ ಏನು ಬೇಕು?’ ಎಂದು ಕೇಳಿದನು.

ಹಿಂದೆ ನಿಂತಿದ್ದ ಸುಗೋಪಾ ಮುಂದೆ ಬಂದು ‘ನಮಗೆ ನೀನು ಬೇಕು’ ಎಂದಳು.

ಚಿತ್ರಕನು ಬೇಗ ಎದ್ದು ನಿಂತನು. ಆದರೆ ಅವನು ಒರೆಯಿಂದ ಕತ್ತಿ ಹೊರ ತೆಗೆಯುವುದಕ್ಕೆ ಮೊದಲೇ ರಕ್ಷಕಭಟರು ಅವನ ಕುತ್ತಿಗೆಯ ಮೇಲೆ ಬಿದ್ದು ಅವನನ್ನು ಬಂಧಿಸಿದರು.

ಸುಗೋಪಾ ಚಿತ್ರಕನ ಮುಂದೆ ನಿಂತು ‘ಏ ಕುದುರೆ ಕಳ್ಳ, ನಿನಗೆ ನನ್ನ ಗುರುತು ಸಿಕ್ಕಿತೇನು?’ ಎಂದು ಕೇಳಿದಳು.

ಚಿತ್ರಕನು ಅವಳ ಕಡೆಗೆ ದಿಟ್ಟಿಸಿ ನೋಡಿದನು. ಅದೃಷ್ಟದ ಬಲೆ ಅವನನ್ನು ಬಳಸಿಕೊಂಡು ಬರುತ್ತಿರುವ ಹಾಗೆ ಕಾಣಿಸಿತು. ಅವನು ತುಟಿ ಬಿಗಿ ಹಿಡಿದು ‘ಪ್ರಪಾಪಾಲಿಕೆ!’ ಎಂದನು.

ಸುಗೋಪಾ ಭಟರ ಕಡೆಗೆ ತಿರುಗಿ ‘ಇವನನ್ನು ಸರಿಯಾಗಿ ನೋಡಿಕೊಳ್ಳಿ ಇವನು ಭಾರಿ ಕಳ್ಳ. ಸ್ವಲ್ಪ ಅವಕಾಶ ಸಿಕ್ಕರೂ ಸಾಕು, ತಪ್ಪಿಸಿಕೊಂಡು ಬಿಡುತ್ತಾನೆ’ ಎಂದು ಎಚ್ಚರಿಸಿದಳು.

ಅವರಲ್ಲಿ ಒಬ್ಬ ಭಟನು ‘ಇವನನ್ನು ಎಲ್ಲಿ ಸುರಕ್ಷಿತವಾಗಿಡುವುದು? ಈ ರಾತ್ರಿ ಸಮಯದಲ್ಲಿ ಕಾರಾಗಾರವು ಮುಚ್ಚಿರುತ್ತದೆ’ ಎಂದನು.

ಸುಗೋಪಾಳಿಗೆ ಒಂದು ಉಪಾಯ ಹೊಳೆಯಿತು.

‘ಇವನನ್ನು ಅರಮನೆಯ ಹೆಬ್ಬಾಗಿಲ ಬಳಿ ಇರುವ ಕಾವಲುಗಾರರ ಬಳಿಗೆ ಕರೆದುಕೊಂಡು ಹೋಗಿರಿ. ಅವರಿಗೆ ನನ್ನ ಹೆಸರು ಕೇಳಿರಿ. ಅವರು ರಾತ್ರಿಯೆಲ್ಲ ಈ ಕಳ್ಳನನ್ನು ನೋಡಿಕೊಳ್ಳುವರು’ ಎಂದು ಹೇಳಿದಳು.

ಸುಗೋಪಾ ನಗರದಲ್ಲಿ ಎಲ್ಲರಿಗೂ ಸುಪರಿಚಿತಳಾಗದ್ದಳು. ಜಲಸತ್ರದ ಒಡತಿಯಾಗಿದ್ದರೇನು, ಅವಳು ರಾಜಕುಮಾರಿಯ ಗೆಳತಿ. ಭಟರು ಮರುಮಾತನಾಡದೆ ಕಳ್ಳನನ್ನು ಬಂಧಿಸಿ ಅರಮನೆಯ ಕಡೆಗೆ ಕರೆದುಕೊಂಡು ಹೊರಟರು.

ಅದೃಷ್ಟವಶಾತ್ ಚಿತ್ರಕನಿಂದ ಭಟರು ಚೀಲವನ್ನು ಕಸಿದುಕೊಂಡಿರಲಿಲ್ಲ. ಅವನ ಸಾಧುಸ್ವಭಾವ ಇದಕ್ಕೆ ಕಾರಣವಿರಬಹುದು. ಅಥವಾ ರಾಜಕುಮಾರಿಯ ಕುದುರೆ ಕದ್ದವನ ಮೇಲೆ, ಮೇರೆ ಮೀರಿ ವರ್ತಿಸಿದರೆ ನಾಳೆ ತಮಗೆ ತೊಂದರೆಯಾಗಬಹುದು ಎಂಬ ಕಾರಣವಿರಬಹುದು. ಹೇಗೋ ಒಟ್ಟಿನಲ್ಲಿ ಅವರು ಅವನ ಸೊಂಟದಲ್ಲಿರುವ ಚೀಲಕ್ಕೆ ಕೈ ಹಾಕಲಿಲ್ಲ.

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *